ಕಥೆ: ಪರಿಭ್ರಮಣ..(62)

ಕಥೆ: ಪರಿಭ್ರಮಣ..(62)

( ಪರಿಭ್ರಮಣ..61ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...

ಈ ಬಾರಿ ಮೊದಲಿನ ಹಾಗೆ ಹತ್ತತ್ತೆಜ್ಜೆಗೆ ಗುಪ್ಪೆ ಮಾಡಿ ಹಲವಾರು ಕಡೆ ಗುಡ್ಡೆ ಹಾಕುವ ಬದಲು, ಬರಿ ಆರಂಭದ, ಮಧ್ಯದ ಮತ್ತು ತುದಿಯ ಮೂರು ಕಡೆ ಮಾತ್ರ ಗುಡ್ಡೆ ಹಾಕಲು ನಿರ್ಧರಿಸಿ ಗಾಳಿಗೆ ಹಾರಲಾಗದಂತೆ ಅಡ್ಡವಿರುವ ಎಡೆ ಯಾವುದಾದರು ಇದೆಯೆ ಎಂದು ನೋಡಿದವನಿಗೆ, ಮೊದಲ ಎಡೆಗಂತು ಹೆಬ್ಬಾಗಿಲಿನ ಪಕ್ಕದ ಎತ್ತರದ ಗೋಡೆಯ ಬದಿಯೆ ಸೂಕ್ತ ಎನಿಸಿತು. 'ಅಲ್ಲಿ ಎಷ್ಟೆ ಗಾಳಿ ಬೀಸಿದರು ಆ ಗೋಡೆಯ ತಡೆಯೆದುರು ಕುಗ್ಗಿ ಮಣಿಯಲೇಬೇಕು... ಆಗ ಅದರಡಿಯ ಗುಡ್ಡೆಯೂ ಅಷ್ಟಿಷ್ಟು ಅಲ್ಲಲ್ಲೆ ಹಾರಾಡಿದರು ಮತ್ತೆ ಹೆಕ್ಕಿದ ಹಾದಿಗೆ ಬೀಳಲು ಆಗದು... ಬೀಸುತ್ತಿರುವ ಗಾಳಿಯೂ, ಗೋಡೆಯ ಕಡೆಗೆ ಬೀಸುತ್ತಿರುವುದರಿಂದ ಅವು ಮತ್ತೆ ಮತ್ತೆ ಗೋಡೆಗೆ ಬಡಿದುಕೊಂಡು, ಅಲ್ಲೆ ಬೀಳಬೇಕೆ ಹೊರತು ಕಳೆದ ಬಾರಿಯಂತೆ ಚೆದುರಿ ಚೆಲ್ಲಾಪಿಲ್ಲಿಯಾಗಲಿಕ್ಕೆ ಸಾಧ್ಯವಿಲ್ಲ. ಇಲ್ಲಿ ಒಂದೆ ಒಂದು ತೊಡಕೆಂದರೆ ಕಸವನ್ನು ಸುಮಾರು ದೂರ ಗುಡಿಸಬೇಕು. ಕಳೆದ ಸಲದ ಹಾಗೆ ಹತ್ತತ್ತೆಜ್ಜೆಗೆ ಗುಡಿಸಿ ಒಟ್ಟಾಗಿಸಿದರೆ ಸಾಕಾಗುವುದಿಲ್ಲ.. ಈ ಬಾರಿ ಮೂರೆ ಗುಡ್ಡೆಯಾದ ಕಾರಣ ಕನಿಷ್ಠ ಮೂರನೆ ಒಂದು ಭಾಗದಷ್ಟಾದರು ಗುಡಿಸಿ ತಳ್ಳಬೇಕಾಗುತ್ತದೆ. ಇಲ್ಲ..ಇಲ್ಲ.. ಮಧ್ಯದ ಗುಡ್ಡೆಯನ್ನು ಎರಡೂ ಕಡೆಯಿಂದ ಪೇರಿಸಬಹುದಾದ ಕಾರಣ ಮೂರನೆ ಒಂದು ಭಾಗದ ಬದಲು ನಾಲ್ಕನೆ ಒಂದು ಭಾಗ ಮಾತ್ರ ಗುಡಿಸುವ ಹಾಗೆ ಮಾಡಿಕೊಳ್ಳಬಹುದು. ಮೊದಲ ನಾಕಾಣೆ ಭಾಗವನ್ನು ಗೇಟಿನ ಗೋಡೆಯತ್ತ ತಳ್ಳಿದರೆ, ಕೊನೆಯ ನಾಕಾಣೆ ಭಾಗ ಆ ಕಡೆಯ ವಿರುದ್ಧ ತುದಿಗೆ ತಳ್ಳಬಹುದು. ಮಧ್ಯಕ್ಕೆ ಎರಡೂಕಡೆಯಿಂದ ನಾಕಾಣೆ, ನಾಕಾಣೆ ಭಾಗ ಗುಡ್ಡೆ ಹಾಕಿದರೆ ಮೊತ್ತದಲ್ಲಿ ಎಲ್ಲವೂ ಕಾಲು ಭಾಗಕ್ಕಿಂತ ಹೆಚ್ಚು ಚಲಿಸುವ ಅಗತ್ಯವಿರುವುದಿಲ್ಲ...' ಎಂದುಕೊಂಡವನೆ ಹೆಬ್ಬಾಗಿಲಿನಿಂದ ಕಾಲು ಭಾಗದ ದೂರಕ್ಕೆ ಬಂದು, ಅದೇ ಕಡೆಗೆ ಗುಡಿಸತೊಡಗಿದ - ಹೆಬ್ಬಾಗಿಲಿನತ್ತಲೆ ಎಲ್ಲವನ್ನು ಒಗ್ಗೂಡಿಸುತ್ತ. ಮೊದಮೊದಲೇನೊ ಅದು ಸುಲಭವಾದಂತೆ ಕಂಡರು, ಹೋಗುತ್ತ ಹೋಗುತ್ತ ಗುಡಿಸಿ ಸಂಗ್ರಹಿಸಿದ ಗುಡ್ಡೆಯ ಗಾತ್ರ ಹೆಚ್ಚಾಗುತ್ತ ಹೋಗಿ, ಆ ಒಟ್ಟುಗೂಡಿಸಿದ ಮೊತ್ತವನ್ನು ಚದುರದಂತೆ ಮುಂದೆ ತಳ್ಳುವುದೆ ಹರ ಸಾಹಸವಾಗತೊಡಗಿತು. ಅದೆ ಹೊತ್ತಲ್ಲಿ ಜೋರಾಗಿ ಬೀಸತೊಡಗಿದ ಗಾಳಿಯು ಜತೆಗೆ ಸೇರಿಕೊಂಡು, ಒಗ್ಗೂಡಿಸಿದ್ದ ಗುಪ್ಪೆಯನ್ನೆಲ್ಲ ಮತ್ತೆ ಮತ್ತೆ ಚದುರಿಸತೊಡಗಿದಾಗ, ಇದ್ದ ಬದ್ದ ಉತ್ಸಾಹವೆಲ್ಲ ಅಲ್ಲೆ ಹೂತು ಹೋದಂತಾಗಿ ಹತಾಶೆಯಲ್ಲಿ ಕುಸಿದು ಬಿದ್ದವನಂತಾದ ಶ್ರೀನಾಥ. ಇದ್ದಕ್ಕಿದ್ದಂತೆ ಅದುವರೆವಿಗು ಇರದಿದ್ದ ನಿಶ್ಯಕ್ತಿಯೆಲ್ಲ ಒಂದೆ ಏಟಿಗೆ ಬಂದು ವ್ಯಾಪಿಸಿಕೊಂಡಂತೆ ಅನಿಸಿ, ಇನ್ನು ಒಂದು ಹೆಜ್ಜೆಯನ್ನು ಮುಂದಿಡಲಾರೆನೆನ್ನುವ ಅಸಹಾಯಕತೆಯಾಗಿ ಆವರಿಸಿಕೊಂಡಂತೆ ಭಾಸವಾಗತೊಡಗಿತು. ಆರಂಭವೆ ಹೀಗಾದರೆ, ಇದನ್ನು ಅಷ್ಟುದ್ದಕ್ಕು ಹೇಗೆ ನಿಭಾಯಿಸುವುದು ಎಂದರಿವಾಗದೆ, ದಿಗ್ಭ್ರಾಂತನಂತೆ ಮಾಡಲೇನೂ ತೋಚದೆ ಅರೆಗಳಿಗೆ ಹಾಗೆಯೆ ನಿಂತುಬಿಟ್ಟಿದ್ದ ಕಲ್ಲು ಶಿಲೆಯ ಹಾಗೆ. ಅದೆಷ್ಟು ಹೊತ್ತು ಹಾಗೆಯೆ ನಿಂತಿರುತ್ತಿದ್ದನೊ ಅದೇ ಸ್ಥಿತಿಯಲ್ಲಿ - ಆ ಬಾಲಭಿಕ್ಷು ಬಂದು ಎದುರುಗಡೆ ನಿಂತು ಏನೊ ಹೇಳುತ್ತಿರುವ ಅರಿವಾಗದಿದ್ದಿದ್ದರೆ... ಅವನು ಎದುರು ನಿಂತಿದ್ದರ ಅರಿವಾದರೂ, ಅವನೇನು ಹೇಳುತ್ತಿರುವನೊ ಗೊತ್ತೆ ಆಗದಷ್ಟು ಅನ್ಯಮನಸ್ಕತೆ ಆವರಿಸಿಕೊಂಡ ಬಗೆಗೆ, ಬರಿ ಆ ಬಾಲಕನ ತುಟಿಯಲುಗುವುದು ಮಾತ್ರ ಕಾಣಿಸುತ್ತಿದೆಯಲ್ಲಾ ಎನಿಸಿ, ದಿಗ್ಗನೆ ಯಾವುದೊ ಭ್ರಮಾಲೋಕದಿಂದ ಎಚ್ಚರಗೊಂಡವನಂತೆ ಅವನ ಮಾತುಗಳನ್ನು ಗಮನದಿಂದ ಆಲಿಸಲು ಯತ್ನಿಸಿದ ಶ್ರೀನಾಥ. ಅದುವರೆಗೂ ಅದೇನು ಹೇಳಿದ್ದನೊ ಆ ಬಾಲಭಿಕ್ಷು; ಶ್ರೀನಾಥನ ಕಿವಿಗೆ ಆ ಕಡೆಯ ಒಂದೆರಡು ಮಾತುಗಳು ಮಾತ್ರ ಕೇಳಿಸಿದವು....' ಡೊಂಟ್ ಕಲೆಕ್ಟ್...ಡೊಂಟ್ ಅಕ್ಯುಮುಲೇಟು..ಜಸ್ಟ್ ಲೆಟ್ ಇಟ್ ಗೋ...ಗುಪ್ಪೆ ಮಾಡಬೇಡ..ಗುಡ್ಡೆ ಹಾಕಬೇಡ..ಸುಮ್ಮನೆ ಹೋಗಲಿಕ್ಕೆ ಬಿಟ್ಟುಬಿಡು...'

ಅವು ತುಂಬಾ ಸರಳ ಪದಗಳಾದರೂ ಏನೊ ಗಹನವಾದ ಮಹತ್ತರ ಗೂಢಾರ್ಥದಿಂದ ತುಂಬಿಕೊಂಡಿರುವಂತೆ ಕಂಡು ಬಂದಿತ್ತು ಶ್ರೀನಾಥನಿಗೆ. ಅದೆ ಭಾವವನ್ನು ಮುಖದಲ್ಲಿ ಪ್ರಕಟಿಸುತ್ತ, ತುಟಿಯುಬ್ಬಿಸಿ ತನಗದು ಅರ್ಥವಾಗಲಿಲ್ಲವೆಂಬುದನ್ನು ಸೂಚಿಸಿದ ಶ್ರೀನಾಥ. ಶ್ರೀನಾಥನ ಮುಖವನ್ನೆ ದಿಟ್ಟಿಸಿದ ಆ ಬಾಲಭಿಕ್ಷು, ಇದ್ದಕ್ಕಿದ್ದಂತೆ ಅನಿರೀಕ್ಷಿತವಾಗಿ ಅವನ ಕೈಯಿಂದ ಪೊರಕೆಯನ್ನು ಕಸಿದುಕೊಂಡವನೆ, ಮುಂದಿನ ಹಾದಿಯ ಎರಡು ಬದಿಗಳಲ್ಲು ಆ ರಸ್ತೆಗೆ ಸಮಾನಾಂತರವಾಗಿ ಗುಡಿಸುತ್ತ ಅರ್ಧ ಎಡದತ್ತ,  ಮಿಕ್ಕರ್ಧ ಬಲದತ್ತ ಪೊರಕೆಯಿಂದಲೆ ಬಲವಾಗಿ ಎಸೆದಂತೆ ಗುಡಿಸಿ ತಳ್ಳತೊಡಗಿದ. ಅವನು ಅದನ್ನು ತೊಯ್ಯುತ್ತಿದ್ದ ಲಾಘವ ಹೇಗಿತ್ತೆಂದರೆ ದಾರಿಯ ಎಡಬದಿಯಲ್ಲಿದ ಕಸವನ್ನು ತಳ್ಳುತ್ತಲೆ ಎಡದ ಅಂಚಿಗೆ ತಂದು, ಆ ಕೊನೆಯ ಹಂತದಲ್ಲಿ ತುಸು ಬಲ ಪ್ರಯೋಗಿಸಿ ಅದನ್ನೆತ್ತಿ ಒಗೆಯುವ ಹಾಗೆ ಎಡದಲ್ಲಿದ್ದ ಪೊದೆ, ಗಿಡ, ಮರಗಳತ್ತ ಹಾರಿಸುತ್ತಿದ್ದ. ಹಾಗೆ ಹಾರಿಸಿದಾಗ ಅದೇ ದಿಕ್ಕಿನಲ್ಲಿ ಬೀಸುತ್ತಿದ್ದ ಗಾಳಿಯೂ ಜತೆಗೆ ಸೇರಿಕೊಂಡು ಅವೆಲ್ಲ ಅದೆ ಪೊದೆಗಳಡಿಯೊ, ಗಿಡ ಮರದಡಿಯೊ ಗೊಬ್ಬರ ಹಾಕಿದ ಹಾಗೆ ಹೋಗಿ ಕೂರುತ್ತಿದ್ದವು - ಮತ್ತೆ ಹಿಂಬರಲಾಗದಂತೆ ಆ ಪೊದೆ, ಗಿಡ, ಮರಗಳೆ ತಡೆಯಾಗುತ್ತ... ಹೀಗಾಗಿ ಅಲ್ಲಿ ಗುಪ್ಪೆ ಹಾಕುವ ಪ್ರಮೇಯವೆ ಇರಲಿಲ್ಲ, ಗುಡ್ಡೆ ಮಾಡುವ ಅಗತ್ಯವೂ ಇರಲಿಲ್ಲ ! ಅದನ್ನೆ ಸರಳೀಕರಿಸಿ, ಅಲ್ಲಲ್ಲಿ ಸಿಕ್ಕಿದ್ದನ್ನು ಅಲ್ಲಲ್ಲೆ ನಿಭಾಯಿಸಿ, ವಿಲೇವಾರಿ ಮಾಡುವ ಚಾಣಾಕ್ಷತೆ ಮಾತ್ರ ಇತ್ತು - ಅದೂ ಸುತ್ತಲ ಪ್ರಕೃತಿ, ಪರಿಸರವನ್ನೆ ಬೆಂಗಾವಲಾಗಿ, ಸಹಚರರನ್ನಾಗಿ ಬಳಸುತ್ತ. ಅದನ್ನು ನೋಡಿದಾಗಷ್ಟೆ ಶ್ರೀನಾಥನಿಗೆ ಅವನು ಹೇಳಿದ 'ಡೊಂಟ್ ಕಲೆಕ್ಟ್...ಡೊಂಟ್ ಅಕ್ಯುಮುಲೇಟು..ಜಸ್ಟ್ ಲೆಟ್ ಇಟ್ ಗೋ' ಎಂಬುದರ ಅರ್ಥವಾಗಿದ್ದು. ಆ ಬಾಲಭಿಕ್ಷು ಅದನ್ನು ಬರಿಯ ಕಸದ ಕುರಿತು ಮಾತ್ರ ಹೇಳಿದ್ದನೊ ಇಲ್ಲವೊ, ಶ್ರೀನಾಥನಿಗೆ ಮಾತ್ರ ಅದರ ಗಹನತೆ, ವ್ಯಾಪ್ತಿ ತೀರಾ ಆಳದ್ದು ಎನಿಸಿತು. ' ಜೀವನದ ಪ್ರತಿಯೊಂದನ್ನು ನಾವು ಒಟ್ಟಾಗಿ ಗುಪ್ಪೆಯಾಗಿಸುತ್ತ, ಗುಡ್ಡೆ ಹಾಕಿ ದೊಡ್ಡದು ಮಾಡಿಕೊಳ್ಳುತ್ತ ಕೊನೆಗೆ ಅದನ್ನು ನಾವೇ ನಿಭಾಯಿಸಲಾಗದ ಮಟ್ಟಕ್ಕೆ ಕೊಂಡೊಯ್ದುಬಿಡುತ್ತೇವೆ - ತೀರಾ ಸರಳವಾಗಿ, ಅವು ಬಂದ ಹೊತ್ತಲ್ಲೆ ಬಂದ ಹಾಗೆ ಸೂಕ್ತವಾಗಿ ಮತ್ತು ಸಹಜವಾಗಿ ವಿಲೇವಾರಿ ಮಾಡದೆ... ಅದನ್ನೆ ಸಾಂಕೇತಿಕವಾಗಿ ನುಡಿಯುತ್ತಿದೆಯೆ ಈ ವಿಧಾನ ? ಯಾವುದೆ ಹೊರೆಯನ್ನು ತಲೆಗ್ಹಚ್ಚಿಕೊಂಡು ಕೊರಗದೆ ಅಲ್ಲಲ್ಲೆ ಅದನ್ನು ಪಕ್ಕಕ್ಕೆ ಸರಿಸಿ, ಅದರ ಪಾಡಿಗದನ್ನು ಹಾರಬಿಟ್ಟು ಮುಂದಿನ ದಾರಿ ನೋಡುತ್ತ ಮುಂದುವರೆಯುವ ಸರಳ ತತ್ವವೆ ಇದರ ಸಂದೇಶವೆಂದು ಕಾಣುತ್ತದೆ...' ಹೀಗೆ ಯೋಚಿಸುತ್ತ ಇದ್ದ ಶ್ರೀನಾಥನ ವಿಚಾರಲಹರಿಗೆ ಭಂಗ ತರುವಂತೆ ಆ ಬಾಲಭಿಕ್ಷು ಮತ್ತೆ ಪೊರಕೆಯನ್ನು ಹಿಂದಿರುಗಿಸುವ ಸಲುವಾಗಿ ಕಾದು ನಿಂತಿದ್ದು ಕಾಣಿಸಿತು. ಅವನ ಕೈಯಿಂದ ಪೊರಕೆಯನ್ನು ಪಡೆದವನೆ ತಾನೂ ಅದೆ ರೀತಿಯಲ್ಲಿ ಎರಡು ಬದಿಗೂ ಕಸ ತಳ್ಳಲು ಯತ್ನಿಸಿದರೆ, ಅವನಿಗೇ ಅಚ್ಚರಿಯಾಗುವಂತೆ ಅಲ್ಲಿದ್ದ ಕಸವೆಲ್ಲ ಲೀಲಾಜಾಲವಾಗಿ ಎರಡು ಬದಿಗೂ ತಲುಪಿದ್ದು ಮಾತ್ರವಲ್ಲದೆ ಮತ್ತೆ ಹಿಂದಿರುಗದೆ ಅಲ್ಲಿ ಸ್ವಸ್ಥವಾಗಿ ಇಳಿದು, ಅಲ್ಲೆ ಜಾಗ ಹಿಡಿದು ಕೂತುಬಿಟ್ಟವು. ಇಷ್ಟು ಸರಳ ಕ್ರಿಯೆಗೆ ತಾನೇಕೆ ಅಷ್ಟೊಂದು ಒದ್ದಾಡಿದೆನೆಂದು ವಿಸ್ಮಯ ಪಡುತ್ತಲೆ, ಮತ್ತೆ ಪುಟಿದೆದ್ದ ಉತ್ಸಾಹದಲ್ಲಿ ಅಲ್ಲಿಂದ ಅದೇ ರೀತಿಯಲ್ಲಿ ಗುಡಿಸಿಕೊಂಡು ಮುಂದುವರೆಯತೊಡಗಿದ ಶ್ರೀನಾಥ. ಆಗ ಮತ್ತೆ ಭುಜದ ಮೇಲೆ ಕೈಯಿಟ್ಟು ತಡೆದ ಆ ಬಾಲಕ , ಏನೊ ಸರಿಯಿಲ್ಲವೆನ್ನುವ ಅರ್ಥದಲ್ಲಿ ತಲೆಯಾಡಿಸುತ್ತ, ದೇಗುಲವಿರುವ ದಿಕ್ಕಿನತ್ತ ಕೈ ತೋರಿಸಿ ಆ ತುದಿಯಿಂದ ಆರಂಭಿಸುವಂತೆ ಸನ್ನೆ ಮಾಡಿದ. ಅವನೇಕೆ ಹಾಗನ್ನುತ್ತಿದ್ದಾನೆಂದು ಮೊದಲರಿವಾಗದಿದ್ದರೂ, ಆಗ ತಟ್ಟನೆ ಬೀಸಿದ ಗಾಳಿಯಲೆಯ ದೆಸೆಯಿಂದ, ಏಕೆಂದೂ ಕೂಡಲೆ ಗೊತ್ತಾಗಿಹೋಗಿತ್ತು. 'ತಾನು ನಡುವಿಂದ ಆರಂಭಿಸಿದರೆ ಪ್ರಯೋಜನವಿಲ್ಲ... ಗಾಳಿಗೆ ಮತ್ತೆ ಹಾರಿಬಂದ ಕಸ ಹಿಂದಿನಿಂದ ಸೇರಿಕೊಳ್ಳುತ್ತದೆ. ಅದರ ಬದಲು ಗಾಳಿಗೆದುರಾದ ಹೆಬ್ಬಾಗಿಲಿನ ಕಡೆಯಿಂದ ಹೊರಡದೆ, ಗಾಳಿಯಲೆಯ ಜತೆಯಲ್ಲೆ ದೇಗುಲದ ಕಡೆಯಿಂದ ಹೊರಟರೆ ಗುಡಿಸಿ ಎತ್ತಿ ಹಾಕಿದಂತೆಲ್ಲ, ಮತ್ತೆ ಹೊಸತಾಗಿ ಹಿಂಬದಿಯಿಂದ ಹಾರಿ ಬರಲು ಸಾಧ್ಯವಾಗುವುದಿಲ್ಲ... ಮೊದಲ ಬಾರಿ ಆ ಬಾಲಭಿಕ್ಷು ಗುಡಿಸುವ ಹಾದಿಯ ಮತ್ತೊಂದು ತುದಿಗೆ ಹೊರಟನೆಂದು, ತಾನೂ ಎದುರು ತುದಿಯ ಹೆಬ್ಬಾಗಿಲಿನತ್ತ ನಡೆದಿದ್ದೆನಲ್ಲಾ - ಅವನು ಗಾಳಿಯು ಬೀಸುವ ದಿಕ್ಕಿಗನುಸಾರ ಹೊರಟಿರುವನೆಂಬ ಸತ್ಯ ಅರಿಯದೆ ? ಬದುಕಲ್ಲೂ ಹೀಗೆಯೆ ತಾನೆ - ಹಿಂದೆ, ಮುಂದೆ ಆಲೋಚಿಸದೆ, ಕಾರ್ಯಾಕಾರಣ ವಿವೇಚಿಸದೆ ಎಷ್ಟೊ ಬಾರಿ ಅಂಧಾನುಕರಣೆಗಿಳಿಯುವುದು ..?'  ತನಗೀಗ ಈ ಸರಳ, ಸೂಕ್ತ ದಾರಿ ತೋರಿದ ಆ ಬಾಲಭಿಕ್ಷುವು ಯಾವ ಗುರುವಿಗಿಂತಲೂ ಕಡಿಮೆಯಲ್ಲವೆಂಬ ಸತ್ಯದ ಅರಿವಾಗಿ, ತನ್ನೆಲ್ಲ ಕೃತಜ್ಞತೆಯ ಮೈದುಂಬಿದ ಕುರುಹಾಗಿ ಎರಡೂ ಕೈ ಜೋಡಿಸಿ 'ಅಮಿತಾಭ' ಎಂದ. ಆ ಬಾಲಭಿಕ್ಷುವು ತಾನೂ ಅದೆ ರೀತಿಯಲ್ಲಿ ಕೈ ಜೋಡಿಸಿ ನಮಿಸುತ್ತ 'ಅಮಿತಾಭ' ಎಂದವನೆ ಸರಸರನೆ ಹೆಬ್ಬಾಗಿಲಿನ ಕಡೆ ನಡೆದಿದ್ದ, ತನ್ನ ಕೆಲಸ ಮುಗಿದವನ ಹಾಗೆ. ಅವನತ್ತ ಹೋಗುತ್ತಿದ್ದಂತೆ ಇತ್ತ ತನ್ನ ಕೆಲಸ ಆರಂಭಿಸಿದ ಶ್ರೀನಾಥನಿಗೆ, ಎಲ್ಲವೂ ಸುಸೂತ್ರವಾಗಿ ನಡೆದರೆ ಆ ರಾತ್ರಿಯನ್ನು ನೆಮ್ಮದಿಯಿಂದ ಕುಟಿಯಲ್ಲೆ ಕಳೆಯಬಹುದೆಂಬ ಅನಿಸಿಕೆಯಿಂದ ಯಾವುದೊ ನಿರಾಳ ಭಾವವೂ ಮೂಡಿ, ಅದುವರೆಗಿನ ಆ ಕೆಲಸದಲ್ಲಿ ಉಂಟಾಗಿದ್ದ ಆಯಾಸವೆಲ್ಲ ಪರಿಹಾರವಾದಂತಾಗಿ ಸರಸರನೆ ಮಿಕ್ಕ ಭಾಗದತ್ತ ಗಮನ ಹರಿಸುತ್ತ ಅದರಲ್ಲೆ ಪೂರ್ತಿ ತಲ್ಲೀನನಾಗಿ ಹೋದ. ಆ ಗಳಿಗೆಯಲ್ಲೂ ಅವನ ಮನದಲ್ಲಿ, ಇಂದಿನ ರೀತಿಯಲ್ಲಿಯೆ ಮರುದಿನದ ಕೆಲಸದಲ್ಲಿ ಏನು ಸಂದೇಶವಿರಬಹುದೆನ್ನುವ ಕುತೂಹಲವೂ ಆಯಾಚಿತವಾಗಿ ಮೂಡಿಬಂದಿತ್ತು....

ಆರಂಭದ ಹೊತ್ತಲ್ಲಿ, ಅಂದೆಲ್ಲ ಅದೊಂದೇ ಕೆಲಸದಲ್ಲಿ ಕಳೆಯಬೇಕೇನೊ ಎಂದುಕೊಂಡಿದ್ದವನಿಗೆ ಅಚ್ಚರಿಯಾಗುವಂತೆ ತಡ ಮಧ್ಯಾಹ್ನದ ಸೂರ್ಯ ಇಳಿಯುವ ಮೊದಲೆ ವಹಿಸಿದ್ದ ಕೆಲಸ ಅಚ್ಚುಕಟ್ಟಾಗಿ ಮುಗಿದುಹೋಗಿತ್ತು. ಇನ್ನು ಅಂದು ಬೇರೇನು ಕೆಲಸವಿರದಿದ್ದರೂ, ರಾತ್ರಿಗೆ ಮಾತ್ರವಷ್ಟೆ 'ಕುಟಿ'ಗೆ ಹೋಗಬೇಕೆಂದು ಹೇಳಿದ್ದ ಕಾರಣ ಅಲ್ಲಿದ್ದ ಗ್ರಂಥಾಲಯವೊಂದರ ಒಳಗೆ ಹೋಗಿ ಅಲ್ಲಿರುವ ಹೊತ್ತಗೆ, ಸಂಗ್ರಹಗಳನ್ನೆಲ್ಲ ಒಮ್ಮೆ ಸುತ್ತು ಹಾಕಿ ನೋಡಿಕೊಂಡು ಬರೋಣವೆಂದುಕೊಂಡು ಹೊರಟ. ಆ ಗ್ರಂಥಾಲಯದಲ್ಲಿದ್ದ ಅಗಾಧ ಸಂಗ್ರಹವನ್ನು ನೋಡಿಯೆ ಎದೆ ಧಸಕ್ಕೆಂದು ಹೋಯ್ತು ಶ್ರೀನಾಥನಿಗೆ... ಅಷ್ಟೊಂದು ವೈಧ್ಯಮಯವಾಗಿ, ಹಳತು-ಹೊಸದೆಲ್ಲರ ಸಂಗಮವಾಗಿ, ತಾಳೆಗರಿಯಂತಹ ಸಂಗ್ರಹವೂ ಸೇರಿದಂತೆ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ದಾಖಲೆಗಳೆಲ್ಲವೂ ಅಲ್ಲಿ ಸಂಗ್ರಹಿತವಾಗಿದ್ದವು. ಶ್ರೀನಾಥ ಕೈಗೆ ಸಿಕ್ಕಿದ, ಇಂಗ್ಲೀಷಿನಲ್ಲಿದ್ದ ಒಂದೆರಡು ಪುಸ್ತಕಗಳನ್ನು ಕೈಗೆತ್ತಿಕೊಂಡು ತಿರುವಿಹಾಕತೊಡಗಿದಾಗ, ಥಾಯ್ಲ್ಯಾಂಡಿನಲ್ಲಿ ಬೌದ್ಧಧರ್ಮ ಹೇಗೆ ಹರಡಿಕೊಂಡಿತೆಂಬ ಕಥಾನಕವನ್ನು ಇತಿಹಾಸದ ರೂಪದಲ್ಲಿ ದಾಖಲಿಸಿರುವುದು ಕಣ್ಣಿಗೆ ಬಿದ್ದು, ಆ ಪುಸ್ತಕವನ್ನೆ ಹಿಡಿದುಕೊಂಡು ಆಸಕ್ತಿಯಿಂದ ಓದತೊಡಗಿದ. ಹಿಂದಿನ ಅನೇಕ ರಾಜಮನೆತನಗಳ ಯುದ್ಧ-ಕದನಗಳ ನಡುವೆಯೆ ಭಾರತ, ಶ್ರೀಲಂಕಾ, ಆಗ್ನೇಯೇಷ್ಯಾದಿ ಭಾಗಗಳಲ್ಲೆಲ್ಲ ನಡೆದ ಹೋರಾಟ, ಬೌದ್ಧನ ಅಪರೂಪದ ವಿಗ್ರಹಗಳು, ಅವನಿಗೆ ಸೇರಿದ್ದೆಂದು ಹೇಳಲಾಗುವ ವಸ್ತುಗಳು, ಗ್ರಂಥಗಳು, ದಾಖಲೆಗಳು - ಎಲ್ಲವೂ ಆ ಇತಿಹಾಸದೊಂದಿಗೆ ಹೊಂದಿಕೊಂಡಿರುವ ರೀತಿಯೆ ವಿಸ್ಮಯಕರವೆನಿಸಿ ಆ ಕೈಗೆತ್ತಿಕೊಂಡ ಪುಸ್ತಕವನ್ನು ಒಂದೆ ಓಘದಲ್ಲಿ ಓದಿ ಮುಗಿಸಿಬಿಟ್ಟ, ಶ್ರೀನಾಥ..! ಓದಿ ಮುಗಿಯುವ ಹೊತ್ತಿಗೆ ರಾತ್ರಿಯೂ ಆದ ಕಾರಣ, ಆ ಇತಿಹಾಸದ ತುಣುಕುಗಳನ್ನೆ ಮರು ಚಿತ್ರಿಸಿಕೊಳ್ಳುತ್ತ 'ಕುಟಿ'ಯಲ್ಲಿ ಮಲಗಿದ ಶ್ರೀನಾಥನಿಗೆ, ಕನಸಿನಲ್ಲೂ ಆ ಕಥಾನಕದ ಚಿತ್ರಗಳೆ ಮರುಕಳಿಸಿದಂತಾಗಿ, ಸ್ವತಃ ತಾನೆ ಇತಿಹಾಸಕ್ಕೆ ಹೊರಟು ಹೋದೆನೇನೊ ಎನ್ನುವ ಭ್ರಮೆಗೆ ಒಳಪಡಿಸಿಬಿಟ್ಟಿತ್ತು. ಮರುದಿನ ಎಂದಿನಂತೆ ಮಾಮೂಲಿ ಹೊತ್ತಿಗೆ ಎಚ್ಚರವಾದರೂ ಆ ಕನಸಿನ ಮಂಪರು ಮಾತ್ರ ಅಂತರ್ಸ್ಮೃತಿಯಿಂದ ಇನ್ನೂ ಪೂರ್ತಿಯಾಗಿ ಪಕ್ಕಕ್ಕೆ ಜರುಗಿರಲಿಲ್ಲ. ಹಿಂದಿನ ದಿನದ ಅನುಭವದ ಮೇಲೆ ಈ ಬಾರಿ ಮೊದಲಿಗಿಂತ ತುಸು ಎಚ್ಚರದಲ್ಲಿರಲು ನಿರ್ಧರಿಸಿದ ಶ್ರೀನಾಥ, ಆ ದಿನದ ಹೊಂಡಕ್ಕೆ ನೀರು ತುಂಬುವ ಕೆಲಸ ಆರಂಭಿಸುವ ಮೊದಲು ಒಮ್ಮೆ ಸುತ್ತೆಲ್ಲ ಸರಿಯಾಗಿ ಪರಿಶೀಲಿಸಿ, ಸರಿಯಾದ ಕಾರ್ಯಯೋಜನೆಯನ್ನು ರೂಪಿಸಿದ ನಂತರವಷ್ಟೆ ಕಾರ್ಯ ಪ್ರವೃತ್ತನಾಗಬೇಕೆಂದು ನಿರ್ಧರಿಸಿದ್ದ. ಎಂದಿನಂತೆ ಆ ದಿನದ ಆಹಾರ, ಪ್ರಾರ್ಥನೆ, ಸಭೆಗಳನ್ನು ಮುಗಿಸಿ ಒಂದು ಕ್ಷಣವನ್ನೂ ವಿಳಂಬಿಸದೆ ಹೊಳೆಯ ದಡದಲ್ಲಿರುವ ಹೂವಿನ ತೋಟದತ್ತ ಸರಸರನೆ ನಡೆದ ಶ್ರೀನಾಥ. ಆ ಹೂ-ತರಕಾರಿಗಳಿದ್ದ ತೋಟವೂ ಹೊಳೆಯ ದಡಕ್ಕೆ ತೀರಾ ದೂರವಿರದೆ ಅಂಟಿಕೊಂಡ ಹಾಗೆಯೆ ಇದ್ದರು, ಹೊಳೆಗೆ ಹೋಲಿಸಿದರೆ ಕೊಂಚ ಎತ್ತರದ ಸಮತಲದಲ್ಲಿದ್ದ ಕಾರಣ, ನೀರು ನೇರವಾಗಿ ಹರಿದು ಬರುವಂತೆ ಮಾಡಲು ಸಾಧ್ಯವಿರಲಿಲ್ಲ.... ಅದರಿಂದಾಗಿಯೆ ಹತ್ತಿರದಲ್ಲಿ ಬಾವಿಯ ರೀತಿಯ ಹೊಂಡವೊಂದನ್ನು ಮಾಡಿ, ಮೊದಲು ಅಲ್ಲಿ ನೀರು ಸಂಗ್ರಹಿಸಿ, ನಂತರ ಅಲ್ಲಿಂದ ಗಿಡಗಳಿಗೆಲ್ಲ ಹರಿಸುವ ವ್ಯವಸ್ಥೆ ಮಾಡಿದಂತಿತ್ತು. ಹೊಂಡದ ಪಕ್ಕದಲ್ಲಿ ಮರದ ಬಕೆಟ್ಟೊಂದನ್ನು ಇಡಲಾಗಿತ್ತು - ನದಿಯ ನೀರನ್ನು ಹೊತ್ತು ತರಲು ಸಾಧ್ಯವಾಗುವಂತೆ. ನಿನ್ನೆಯಂತೆ ಇಲ್ಲಿಯೂ ಕೆಲಸ ಸರಳವಾಗಿರುವಂತೆ ಕಂಡರು ಹಿಂದಿನ ದಿನದ ಅನುಭವ ಹಾಗೆ ಸಾರಾಸಗಟಾಗಿ ತೀರ್ಮಾನಿಸಲು ಅವಕಾಶ ಕೊಡದೆ 'ಯಾವುದಕ್ಕೂ ಒಮ್ಮೆ ಎಲ್ಲವನ್ನು ಕೂಲಂಕುಷವಾಗಿ ಪರಿಶೀಲಿಸು' ಎಂದು ಎಚ್ಚರಿಸಿತ್ತು. ಏನಾದರಾಗಲಿ ಒಮ್ಮೆ ಕೆಳಗಿಳಿದು ನೋಡಿ ನಂತರ ಮುಂದಿನ ಹೆಜ್ಜೆ ಹಾಕಲು ನಿರ್ಧರಿಸುತ್ತ, ಬಟ್ಟೆ ಒದ್ದೆಯಾಗದಿರುವ ಹೊಂಡದ ಮೊದಲ ಹಂತದೊಳಕ್ಕೆ ಇಳಿದು ಸುತ್ತಲೂ ಎಚ್ಚರಿಕೆಯಿಂದ ಗಮನಿಸತೊಡಗಿದ. 

ಅದೊಂದು ಸಹಜ ಹೊಂಡದ ಹಾಗಿದ್ದರು ಹತ್ತಿರದಿಂದ ನೋಡಿದರೆ, ಅದನ್ನು ಈ ಉದ್ದೇಶಕ್ಕಾಗಿಯೆ ನಿರ್ಮಿಸಿದ್ದೆಂದು ಸುಲಭದಲ್ಲಿ ಹೇಳುವ ಹಾಗೆ ಇತ್ತು.  ಅಡ್ಡಾದಿಡ್ಡಿ ಏರುಪೇರುಗಳಿಲ್ಲದೆ, ನೀಟಾಗಿ ಒಂದೆ ಸಮತಲದಲ್ಲಿರುವ ಸಹಜ ಹೊಂಡದಂತೆ ಸುತ್ತಲು ಕೆತ್ತಿದ್ದರಿಂದ, ಹೆಚ್ಚು ಕಡಿಮೆ ಪರಿಪೂರ್ಣ ವೃತ್ತದ ಹಾಗೆಯೆ ತೋರುತ್ತಿತ್ತು. ಆದರೆ ಆ ಅಗಲಕ್ಕೆ ಹೋಲಿಸಿದರೆ ಆಳ ಮಾತ್ರ ತುಸು ಹೆಚ್ಚೆ ಇರುವಂತೆ ಕಾಣುತ್ತಿತ್ತು. ತಿಳಿಯಾಗಿದ್ದ ನೀರಿನ ಮೂಲಕ ಸ್ಪಷ್ಟವಾಗಿ ಕಾಣುತ್ತಿದ್ದ ತಳದ ಅಂದಾಜಿನಿಂದ ಬಹುಶಃ ಒಟ್ಟು ಸೊಂಟದುದ್ದದಿಂದ ಎದೆಯುದ್ದದಷ್ಟು ಆಳವಿರಬಹುದೆಂದು ಲೆಕ್ಕ ಹಾಕಿತು ಶ್ರೀನಾಥನ ಮನಸು; ಪೂರ್ತಿ ನೀರು ತುಂಬಿದರೆ ಬಹುಶಃ ಸೊಂಟದ ಮಟ್ಟದ ತನಕ ಬರಬಹುದೇನೊ? ಅದರಿಂದ ಮೇಲಕ್ಕೆ ಹಂತದ ಆರಂಭವಾಗುತ್ತಿದ್ದ ಕಾರಣ, ಅಲ್ಲಿ ನೀರು ತುಂಬುವ ಪ್ರಮೇಯವಿದ್ದಂತೆ ಕಂಡಿರಲಿಲ್ಲ. ಜತೆಗೆ ಅಲ್ಲಿ ಮೂಡಿದ್ದ ನೀರಿನ ಮಿತಿಯ ಗುರುತಿನ ಗೆರೆಯನ್ನು ನೋಡಿದರೆ ಅವನ ತರ್ಕ ಸರಿಯಿದೆಯೆಂದು ಗೊತ್ತಾಗುತ್ತಿತ್ತು. ಅಷ್ಟಿದ್ದರೂ ಹೊಂಡದಲ್ಲಿ, ಕೇವಲ ಅರ್ಧದಡಿಯಷ್ಟು ಮಾತ್ರ ನೀರಿದ್ದಂತೆ ಕಾಣುತ್ತಿತ್ತು. ಅದೇನು ದಿನಾ ತುಂಬಿರುತ್ತಾರೊ ಅಥವಾ ಕೆಲವು ದಿನಕ್ಕೊಮ್ಮೆ ತುಂಬುತ್ತಾರೊ ಗೊತ್ತಿರದಿದ್ದರು, ಯಾಕಷ್ಟು ಕಡಿಮೆ ನೀರಿದೆಯೆಂಬ ತರ್ಕ ಮಾತ್ರ ಗೊತ್ತಾಗಿರಲಿಲ್ಲ. ಅದೇನೆ ತರ್ಕವಿದ್ದರೂ, ಅದರಿಂದ ತಾನು ತುಂಬಬೇಕಾದ ಮೊತ್ತ ಮಾತ್ರ ಹೆಚ್ಚುತ್ತದೆಯೆಂದು ಅರಿವಾಗಿ ತನ್ನಲ್ಲೆ ನಕ್ಕು ಮತ್ತೊಮ್ಮೆ ನೀರಿನತ್ತ ನೋಡಿದಾಗ, ಅದರ ಮಧ್ಯದಲ್ಲಿರುವ ಕಲ್ಲಿನಲ್ಲೊ-ಗಾರೆಯಲ್ಲೊ ಮಾಡಿದ್ದಂತಹ ಪುಟ್ಟ ಕಮಲಾಕೃತಿಯೊಂದು ಕಣ್ಣಿಗೆ ಬಿದ್ದಿತ್ತು. ಸಾಮಾನ್ಯವಾಗಿ ದೊಡ್ಡ ಗಾತ್ರದ ಕಮಲ ಮಾಡಿ, ಹೊರಗೆ ಎತ್ತರದಲ್ಲಿ ಕಾಣುವಂತೆ ಇಡುವುದು ವಾಡಿಕೆ..ಇಲ್ಲಿ ಸುಮ್ಮನೆ ಸಣ್ಣದೊಂದು ಆಕೃತಿಯಾಗಿ ಮಾಡಿಟ್ಟಿದ್ದಾರಲ್ಲಾ? ಅದೂ ನೀರು ತುಂಬಿದಾಗ ಕಾಣಿಸದಂತೆ ಮುಚ್ಚಿಕೊಂಡುಬಿಡುವುದಿಲ್ಲವೆ? ಎಂದಂದುಕೊಳ್ಳುತ್ತಲೆ ನೀರು ತುಂಬುವ ತೊಟ್ಟಿ ತೆಗೆದುಕೊಳ್ಳಲೆಂದು ಮೇಲೇಳ ಹೋದವನಿಗೆ ಎದುರುಗಡೆ ನೀರಿನ ಮೇಲ್ಭಾಗದಲ್ಲಿ ವೃತ್ತಾಕಾರದ, ಗೋಡೆಗಂಟಿಕೊಂಡಂತೆ ಏನೊ ದುಂಡನೆಯ ವಸ್ತುವಿರುವುದು ಕಣ್ಣಿಗೆ ಬಿದ್ದು, ಅದೇನೆಂದು ನೋಡಲು ಕುತೂಹಲದಿಂದ ನೀರಿನೊಳಗಿಳಿದು ಅದರತ್ತ ನಡೆದಿದ್ದ. ಅಲ್ಲಿ ಹತ್ತಿರದಿಂದ ನೋಡಿದರೆ ಅದೊಂದು ಒಳಗೆ ಪೂರ್ತಿ ಟೊಳ್ಳಾಗಿ ಖಾಲಿಯಾಗಿರುವ ಬೊಂಬೊದರ ಮುಂದಿನ ತುದಿಯೆಂದು ಅರಿವಾಗಿತ್ತು. ಮಿಕ್ಕ ಭಾಗವೆಲ್ಲ ಗೋಡೆಯೊಳಗೆ ಹೂತು ಹೋಗಿದ್ದರಿಂದ ಬರಿ ಬಾಯಿಯ ಭಾಗ ಮಾತ್ರ ಕಾಣುತ್ತಿತ್ತು. ಬಿರಡೆಯಂತಹ ಮುಚ್ಚಳವೊಂದನ್ನು ಅದರ ಬಾಯಿಗೆ ಹಾಕಿದ್ದ ಕಾರಣ ದೂರಕ್ಕೆ ಬೊಂಬೆಂದು ಗೊತ್ತಾಗುತ್ತಿರಲಿಲ್ಲ. ಅಲ್ಲೇಕೆ ಆ ರೀತಿಯ ಬೊಂಬಿನ ಪೈಪು ತೂರಿಸಿದ್ದಾರೆಂದು ಅರಿವಾಗದೆ ಒಮ್ಮೆ ಸುತ್ತಲು ಕಣ್ಣಾಡಿಸಿದರೆ, ಅದೇ ರೀತಿಯ ಮುಚ್ಚಳ ಹಾಕಿದ್ದ ಹಲವಾರು ಬೊಂಬಿನ ಪೈಪುಗಳು ಹೊಂಡದ ಪರಿಧಿಯ ಸುತ್ತ ತೂರಿಸಿರುವುದು ಕಂಡು ಬಂದಿತ್ತು. ಆದರೆ ಶ್ರೀನಾಥನಿಗೆ ಅಚ್ಚರಿಯಾಗಿದ್ದು ಅದರಿಂದಲ್ಲ. ಆ ಪೈಪುಗಳಾವುವು ಒಂದೆ ಎತ್ತರದಲ್ಲಿರಲಿಲ್ಲ... ಬದಲಿಗೆ ಎಲ್ಲವು ಬೇರೆ ಬೇರೆ ಎತ್ತರದಲ್ಲಿದ್ದವು. ಮೊದಲಿನೆರಡು ತಳದಿಂದ ಸುಮಾರು ಒಂದು ಅಡಿ ಎತ್ತರದಲ್ಲಿದ್ದರೆ ಮತ್ತೆರಡು ಸುಮಾರು ಎರಡಡಿ ಎತ್ತರದಲ್ಲಿ. ಅದೇ ರೀತಿ ಮಿಕ್ಕ ನಾಲ್ಕು ಬೇರೆಯದೆ ಆದ ಎತ್ತರದಲ್ಲಿ ಹರಡಿಕೊಂಡಿದ್ದವು. ಅಷ್ಟೆ ಅಲ್ಲದೆ ಅವ್ಯಾವುದು ಸರಳ ರೇಖೆಯ ಒಂದೆ ನೇರ ಗೆರೆಯಲ್ಲಿರದೆ, ಹೊಂಡದ ಪರಿಧಿಯ ಸುತ್ತ ದೂರದೂರಕ್ಕೆ ವ್ಯಾಪಿಸಿಕೊಂಡಿದ್ದವು. ಅವು ಹಾಗೇಕೆ ಇವೆಯೆಂದು ಕಂಡು ಹಿಡಿಯುವ ಉದ್ದೇಶದಿಂದ, ಒಂದು ಬೊಂಬಿನ ಪೈಪು ತೂರಿಸಿದ್ದ ಕಡೆಯ ನೆಲದ ಮೇಲೆ ಅಂದಾಜಿನ ಮೇಲೆ, ಅದು ತೂರಿರಬಹುದಾದ ದಿಕ್ಕಿನ ಅಂದಾಜು ಹಿಡಿದು, ಹಾಗೆ ನಡೆದುಬಂದಾಗ ಎದುರಾಗಿತ್ತು ಆ ಬೊಂಬಿನ ಮೂಲಕ ಹರಿದು ಬಂದ ನೀರು ಹನಿಸುತ್ತಿದ್ದ ಮೊದಲಿನ ಕೈ ತೋಟ... 

ಆ ಕೈ ತೋಟದ ದ್ವಾರದತ್ತ ನೋಡುತ್ತಲೆ ಆ ಬೊಂಬಿನ ಪೈಪಿನ ಉದ್ದೇಶ ಅರ್ಥವಾಗಿಹೋಗಿತ್ತು ಶ್ರೀನಾಥನಿಗೆ; ಯಾಕೆಂದರೆ ನೆಲದಡಿಯಲ್ಲೆ ಹರಿದುಕೊಂಡು ಬಂದಿದ್ದ ಬೊಂಬು-ಪೈಪಿನ ಮತ್ತೊಂದು ತುದಿ ಆ ದ್ವಾರದತ್ತಲೆ ತೆರೆದುಕೊಂಡಿತ್ತು. ಆ ರಚನೆಯನ್ನು ನೋಡಿದಾಗ ಅದರರ್ಥ ತಾನಾಗಿಯೆ ಮೂಡಿಬಂದಿತ್ತು ಶ್ರೀನಾಥನ ಮನದಲ್ಲಿ.... 'ಅಂದರೆ, ಹೊಂಡಕ್ಕೆ ನೀರು ತುಂಬಿಸಿದಾಗ, ಅದು ಈ ಬೊಂಬಿನ ಪೈಪಿರುವ ಎತ್ತರವನ್ನು ತಲುಪುತ್ತಿದ್ದ ಹಾಗೆಯೆ, ನೀರು ತಾನಾಗಿಯೆ ಕೈ ತೋಟಕ್ಕೆ ಹರಿಯುತ್ತದೆ ಈ ಬೊಂಪಿನ ಪೈಪಿನ ಮೂಲಕ...; ಅದನ್ನು ಮತ್ತೊಮ್ಮೆ ಮೊಗೆದು ಒಯ್ದು ತೋಟಕ್ಕೆ ನೀರುಣಿಸುವ ಅಗತ್ಯವಿಲ್ಲ. ಅಂದ ಮೇಲೆ ಮಿಕ್ಕ ಬೊಂಬಿನ ಕೊಳವೆಗಳೂ ಸಹ ಇದೇ ರೀತಿ ಸುತ್ತಲಿನ ಹಲವಾರು ಕೈ ತೋಟಗಳಿಗೊ ಅಥವಾ ಒಂದೆ ತೋಟದ ಮತ್ತೊಂದು ಭಾಗಕ್ಕೊ ಸಂಪರ್ಕಿಸಲ್ಪಡುತ್ತಿರಬೇಕು... ಅದಕ್ಕೆ ಅವುಗಳನ್ನು ಹೊಂಡದ ಸುತ್ತಲೂ ಅಳವಡಿಸಿ ನೀರು ಹರಿಸುವ ಸುಲಭೋಪಾಯ ಮಾಡಿಕೊಂಡಿದ್ದಾರೆ... ಪ್ರತಿಯೊಂದಕ್ಕು ಬೇರೆ ಎತ್ತರ ಕೊಟ್ಟಿರುವುದರಿಂದ, ಒಂದು ಬಾರಿಗೆ ಒಂದು ಕಡೆಗೆ ಮಾತ್ರ ನೀರು ಹಾಯಿಸುವಂತೆ ನಿಯಂತ್ರಿಸಬಹುದು. ಈಗ ಅವಕ್ಕೆ ಮುಚ್ಚುವ ಬಿರಡೆ ಹಾಕಿದ್ದು ಏಕೆಂದು ಗೊತ್ತಾಗುತ್ತಿದೆ. ಒಮ್ಮೆ ಕೆಳಗಿನ ಕೊಳವೆಯ ಮೂಲಕ ನೀರು ಹರಿದು ಆ ಭಾಗದ ಕೈ ತೋಟಕ್ಕೆ ನೀರು ಹನಿಸಿ ಆಯಿತೆಂದರೆ, ಆ ಕೊಳವೆಯನ್ನು ಮುಚ್ಚಿಬಿಟ್ಟರಾಯ್ತು. ನಂತರ ಅದರ ಮೇಲಿನ ಬಿರಡೆ ತೆಗೆದು ಮತ್ತೊಂದು ಕಡೆಗೆ ಹನಿಸಬಹುದು. ಹೀಗೆ ಯಾವ ಕೈ ತೋಟಕ್ಕೆ ಬೇಕೊ ಆ ಕಡೆಗೆ ನೀರು ಹರಿಯುವಂತೆ ನಿಯಂತ್ರಿಸಬಹುದು. ಅಂದಹಾಗೆ ತಾನು ನೀರು ತುಂಬುವ ಹೊತ್ತಲ್ಲಿ ಎಲ್ಲಾ ಬಿರಡೆಗಳು ಮುಚ್ಚಿಕೊಂಡಿರುವಂತೆ ನೋಡಿಕೊಳ್ಳಬೇಕು.. ಆಗ ಹೊಂಡ ಪೂರ್ತಿ ತುಂಬಿಯಾದ ಮೇಲೆ, ಮೇಲಿನಿಂದ ಒಂದೊಂದೆ ಬಿರಡೆ ತೆಗೆಯುತ್ತ ಹೋದಂತೆ ಆಯಾ ಭಾಗಕ್ಕೆ ನೀರು ಹರಿಯುತ್ತದೆ. ನೀರಿನ ಮಟ್ಟ ಬೊಂಬಿನ ಕೊಳವೆಗಿಂತ ಕೆಳಗಿಳಿಯುತ್ತಿದ್ದಂತೆ ಆ ಭಾಗಕ್ಕೆ ನೀರು ಹರಿಯುವುದು ನಿಂತುಹೋಗುತ್ತದೆ - ಅದರ ಎತ್ತರದ ಕಾರಣದಿಂದ. ಹೀಗೆ ಒಂದೊಂದೆ ಬಿರಡೆಯನ್ನು ನೀರು ಖಾಲಿಯಾದ ಅನುಕ್ರಮದಲ್ಲೆ ತೆಗೆಯುತ್ತ ಹೋದರೆ ಸಾಕು... ಈಗ ಅದರ ಬೇರೆ ಬೇರೆ ಎತ್ತರದ ಕಾರಣವೂ ಸ್ಪಷ್ಟವಾಗಿ ಗೊತ್ತಾಗುತ್ತಿದೆ.. ವಾಹ್..! ಎಂತಹ ಸರಳ ಆದರೆ ಅದ್ಭುತ ವಿನ್ಯಾಸ...! ಸದ್ಯ..ತಾನು ಮೊದಲೆ ಪರಿಶೀಲಿಸಿದ್ದು ಒಳಿತಾಯ್ತು... ಈಗ ಎಲ್ಲಾ ಬಿರಡೆ ಮುಚ್ಚಿದೆಯೆ ಎಂದು ಮೊದಲು ಪರಾಮರ್ಶಿಸಿ, ನಂತರ ತೊಟ್ಟಿಯಲ್ಲಿ ನೀರು ತಂದು ಹೊಂಡ ತುಂಬಿಸಿಬಿಡಬೇಕು. ಆಮೇಲೆ ಬೇರೇನು ಕೆಲಸವಿರುವುದಿಲ್ಲ .. ಹೊಂಡದ ಪಕ್ಕವೆ ಕೂತು ಒಂದೊಂದಾಗಿ ಬಿರಡೆ ತೆಗೆಯುತ್ತ ಹೋದರಾಯಿತು, ಬೇಕಿದ್ದರೆ ಕೈಲೊಂದು ಪುಸ್ತಕ ಹಿಡಿದು ಓದುತ್ತ.... ಅಲ್ಲಿಗೆ ಇವತ್ತಿನ ಕೆಲಸದ ಮುಖ್ಯ ರಹಸ್ಯವನ್ನು ಬಿಡಿಸಿಕೊಂಡಂತಾಯಿತು....! ಇನ್ನೇಕೆ ತಡ ?' ಎಂದುಕೊಂಡವನೆ ಮತ್ತೊಮ್ಮೆ ಬಿರಡೆಗಳನ್ನು ಸೋರಲಾಗದಂತೆ ಭದ್ರಪಡಿಸಿದೆಯೆಂದು ಖಚಿತಪಡಿಸಿಕೊಂಡವನೆ ಮರದ ತೊಟ್ಟಿಯನ್ನು ಕೈಯಲ್ಲಿ ಹಿಡಿದು ನದಿಯ ದಡದತ್ತ ಸಾಗಿದ. ಅಲ್ಲಿಂದ ಆರಂಭವಾಯಿತು ನದಿಯ ದಡದ ಪಾತ್ರದಿಂದ ತೊಟ್ಟಿಗೆ ನೀರು ತುಂಬಿಕೊಂಡು ಮತ್ತದನ್ನು ಹೊಂಡಕ್ಕೆ ತಂದು ಸುರಿಯುವ 'ನೀರು ತುಂಬುವ ಹಬ್ಬ...'

ಹಿಂದಿನ ದಿನಕ್ಕೆ ಹೋಲಿಸಿದರೆ ಈ ದಿನದ ಕೆಲಸ ದೈಹಿಕ ಶ್ರಮದ ದೃಷ್ಟಿಯಿಂದ ಅಷ್ಟು ಸುಲಭದ್ದೇನೂ ಆಗಿರಲಿಲ್ಲ. ಪ್ರತಿ ಬಾರಿಯೂ ನೀರು ತುಂಬಿಸಿಕೊಂಡು, ಅದರ ಭಾರ ಹೊತ್ತು ಹೊಂಡದ ಹತ್ತಿರ ಬಂದು ನೀರು ಸುರಿದು ಹೋಗಬೇಕಿತ್ತು. ಸುದೈವಕ್ಕೆ ಹೊತ್ತು ನಡೆಯಬೇಕಾದ ದೂರ ತೀರಾ ದೊಡ್ಡದಿರಲಿಲ್ಲವಾದರು ಚಿಕ್ಕದೊಂದು ತೊಟ್ಟಿಯಲ್ಲಿ ನೀರು ಹಿಡಿದು ಪದೇ ಪದೇ ಹಿಂದೆ ಮುಂದೆ ಓಡಾಡಿಕೊಂಡಿದ್ದರೆ ಬಲು ಬೇಗದಲ್ಲೆ ಆಯಾಸದಿಂದ ಕುಸಿಯುವಂತಾಗುವುದರಲ್ಲಿ ಸಂದೇಹವಿರಲಿಲ್ಲ. ಅದರಲ್ಲೂ ಆ ಹೊಂಡದ ಗಾತ್ರಕ್ಕೆ ಅಗತ್ಯವಾಗಿದ್ದ ಓಡಾಟ - ಅದೇನು ನೂರು ಬಾರಿಯೊ, ಇನ್ನೂರು ಬಾರಿಯೊ ಎಂಬ ಅಂದಾಜು ಕೂಡ ಇರಲಿಲ್ಲ. ದಿನಕ್ಕೊಂದೆ ಹೊತ್ತು ತಿಂದು ಅದರ ಶಕ್ತಿಯಲ್ಲೆ ಈ ಶ್ರಮವನ್ನು ನಿಭಾಯಿಸಬೇಕಾಗಿದ್ದು, ಆರಂಭದ ಉತ್ಸಾಹದಲ್ಲಿ ಮತ್ತೆ ಅದನ್ನು ಸುಲಭದಲ್ಲಿ ನಿಭಾಯಿಸಬಹುದೆಂದು ಅಂದಾಜು ಮಾಡಿ ಏಮಾರಿದ್ದ ಶ್ರೀನಾಥ.... ಅದರ ನಿಜವಾದ ಗಾತ್ರಕ್ಕೆ ಆ ಪುಟ್ಟ ತೊಟ್ಟಿಯಲ್ಲಿ  ನೀರು ತಂದು ಸುರಿಯುತ್ತಿದ್ದರೆ ಕನಿಷ್ಠ ಐನೂರು, ಆರುನೂರು ಬಾರಿಯಾದರು ಮೇಲೆ ಕೆಳಗೆ ಓಡಾಡಬೇಕಿತ್ತು ಅದು ಪೂರ್ತಿ ತುಂಬುವ ತನಕ..! ಆ ಅಂದಾಜು ಇರದಿದ್ದ ಕಾರಣ ಆರಂಭಶೂರತ್ವದಲ್ಲಿ ದಢದಢನೆ ಓಡಾಡಿ ಹಾಗೂ ಹೀಗು ಇಪ್ಪತ್ತು, ಇಪ್ಪತ್ತೈದು ಬಾರಿ ನೀರು ತುಂಬಿಸಿದ ಮೇಲೆ ತುಸು ವಿಶ್ರಮಿಸಿಕೊಳ್ಳಲೆಂದು ವಿರಾಮ ನೀಡಿ, ಹೊಂಡದತ್ತ ನೋಡಿದರೆ ನೀರಿನ ಮಟ್ಟ ಒಂದೆರಡು ಇಂಚಷ್ಟೆ ಮೇಲೇರಿದ್ದಂತೆ ಕಂಡಿತು... ಅದನ್ನು ನೋಡುತ್ತಿದ್ದಂತೆ, ನೀರಿನ ಮಟ್ಟದ ಏರಿಕೆ ಈ ಮಟ್ಟದಲ್ಲೆ ನಡೆದರೆ ಈ ದಿನಪೂರ್ತಿ ಮಾತ್ರವೇನು, ತಾನು ಇಡೀ ವಾರವೆಲ್ಲ ತುಂಬುತ್ತಿದ್ದರು ಅದನ್ನು ಭರ್ತಿ ಮಾಡಲು ಆಗದೆಂದು ಮನವರಿಕೆಯಾಗಿಹೋಗಿತ್ತು ಶ್ರೀನಾಥನಿಗೆ. ಸಾಲದ್ದಕ್ಕೆ ಬರಿಯ ಅಷ್ಟು ಬಾರಿಯ ಓಡಾಟಕ್ಕೆ ಅಳಿದುಳಿದ ಕಸುವೆಲ್ಲ ಕರಗಿಹೋಗಿ, ದೊಪ್ಪನೆ ಕೂತರೆ ಸಾಕಪ್ಪ ಎನ್ನುವಂತಾಗಿಹೋಗಿತ್ತು...! ಉತ್ತರ ಕುಮಾರನ ಪೌರುಷದಲ್ಲಿ ಈ ಬಾರಿ ಗೆದ್ದೆ ಗೆಲ್ಲುವೆನೆಂದು ಹೊರಟವನಿಗೆ ಮತ್ತೆ ಮುಖಭಂಗವಾಗುವಂತೆ ಆಗಿ ಮುಖವೆಲ್ಲ ನಾಚಿಕೆಯಿಂದ ಕೆಂಪಾಗಿಹೋಗಿತ್ತು. ಬರಿಯ ಗುಡಿಸುವ, ನೀರು ತುಂಬುವ, ಮನೆಯಲ್ಲಿ ಮಾಡುವ ಸಾಧಾರಣ ಕೆಲಸಗಳೆಂದು ಉಢಾಫೆ ಮಾಡಿಕೊಂಡು ಆರಂಭಿಸಿದ್ದವನಿಗೆ, ಆ ಸರಳ ಕೆಲಸಗಳೆ ಇಷ್ಟು ತೊಡಕು ನೀಡಿ ಎಡವಟ್ಟಾಗಿಸಿದ್ದು ಕಂಡು ಒಂದು ರೀತಿಯಲ್ಲಿ ಅವಮಾನವೂ ಆದಂತೆ ಆಗಿ ಕುಗ್ಗುವಂತೆ ಮಾಡಿಬಿಟ್ಟಿತ್ತು. ಆದರೆ ಕ್ಷಿಪ್ರದಲ್ಲಿಯೆ ಅದರ ಹಿಂದಿನಿಂದ ಮೂಡಿಬಂದ ಅಂತರ್ವಾಣಿಯೊಂದು ಇದರ ಹಿನ್ನಲೆಯಲೂ ಏನೊ ಕಲಿಯಬೇಕಾದ ಪಾಠವಿರಬಹುದೆಂಬ ಅರಿವು ಮೂಡಿಸಿ, ಇದನ್ನು ಹೇಗೆ ನಿಭಾಯಿಸುವುದೆಂದು ಚಿಂತಿಸತೊಡಗಿದ ಶ್ರೀನಾಥ.... ಆಗ ತಟ್ಟನೆ ನೆನಪಾಗಿತ್ತು - ಹಿಂದಿನ ದಿನ ಸಹಾಯ ಮಾಡಿದ್ದ ಬಾಲಭಿಕ್ಷುವಿನ ಕುರಿತು. ಬಹುಶಃ ಇದರ ಕುರಿತು ಅವನ ಸಹಾಯ ಪಡೆದರೆ ಹೇಗೆ ? ಅವನಿಲ್ಲೆ ಇರುವ ಕಾರಣ ಅವನಿಗೆ ಇದರ ಗುಟ್ಟು ಖಂಡಿತ ಗೊತ್ತಿರಲೇಬೇಕು. ಅಲ್ಲದೆ ಮಾಂಕ್. ಸಾಕೇತರು ನಿಗದಿತ ಅವಧಿಯೊಳಗೆ ಕೆಲಸ ಮುಗಿಸಬೇಕೆಂದು ಶರತ್ತು ವಿಧಿಸಿದ್ದರೇ ಹೊರತು, ಯಾರ ಸಹಾಯವನ್ನು ಪಡೆಯಬಾರದೆಂದೇನೂ ಹೇಳಿರಲಿಲ್ಲ... 

'ಈಗಾ ಬಾಲಭಿಕ್ಷುವು ನಿನ್ನೆ ಸಿಕ್ಕಿದ್ದ ಜಾಗದಲ್ಲೆ ಇರಬಹುದಲ್ಲವೆ ? ಒಮ್ಮೆ ಯಾಕೆ ಆತನನ್ನಲ್ಲಿ ಹುಡುಕಿ ನೋಡಬಾರದು..? 'ಎಂದುಕೊಂಡವನೆ ಸರಸರನೆ ಮೇಲೆದ್ದು ಹಿಂದಿನ ದಿನ ಭೇಟಿಯಾಗಿದ್ದ ಜಾಗದತ್ತ ಓಡಿದ್ದ ಶ್ರೀನಾಥ. ಪುಣ್ಯಕ್ಕೆ ದೇಗುಲದ ಎದುರಿನ ಜಗುಲಿಯೊಂದರ ಮೇಲೆ ಮುಖಕ್ಕೆ ಕೈಯನಡ್ಡವಾಗಿಟ್ಟುಕೊಂಡು ಮಲಗಿದ್ದ ಆ ಬಾಲಭಿಕ್ಷು - ಪೊರಕೆಯನ್ನೆ ಬಿಸಿಲಿಗಡ್ಡವಾಗಿರುವಂತೆ ನಿಲ್ಲಿಸಿಕೊಂಡು. ಶ್ರೀನಾಥ ಅವನ ಮುಂದೆ ಬಂದು ನಿಲ್ಲುತ್ತಿದ್ದಂತೆ ಅವನು ಬಂದ ಸದ್ದಿಗೇ ಎಚ್ಚರವಾದವನಂತೆ ನಿಧಾನವಾಗಿ ಕಣ್ತೆರೆದು, ಮೇಲೆದ್ದು ಕೂತವನೆ 'ಏನು ?' ಎಂಬಂತೆ ಕಣ್ಣಲ್ಲೆ ಕೇಳಿದ. ಅಷ್ಟೆ ಮೆಲುವಾದ ಆದರೆ ಸಂಕೋಚದ ದನಿಯಲ್ಲಿ ಶ್ರೀನಾಥ, 'ನೀಡ್ ಯುವರ್ ಹೆಲ್ಪ್.. ಕ್ಯಾನ್ ಯೂ ಕಮ್ ವಿತ್ ಮೀ ಫಾರ್ ಎ ಮೊಮೆಂಟ್..?' ಎಂದ. ಚಿಕ್ಕ ಹುಡುಗನಲ್ಲಿ ಸಹಾಯ ಕೇಳಬೇಕಲ್ಲ ಎನ್ನುವ ಆತ್ಮಾಭಿಮಾನದ ಪ್ರಶ್ನೆಯ ಜತೆಗೆ ಇಷ್ಟು ಸಣ್ಣಸಣ್ಣ ವಿಷಯಕ್ಕು ಸಹಾಯ ಬೇಡುತ್ತ ತಾನವನ ಕಣ್ಣಲ್ಲಿ ಚಿಕ್ಕವನಾಗುತ್ತಿರುವನೆಂಬ ಖೇದವೂ ಸೇರಿಕೊಂಡಿತ್ತು. ಮತ್ತೆ ದಾರಿ ತಪ್ಪುತ್ತಿದ್ದ ಮನವನ್ನು ಹಾದಿಗೆ ತರಲೆತ್ನಿಸಿದ ಚಿಂತನೆಯರಿವು, ಜ್ಞಾನದ ವಿಷಯಕ್ಕೆ ಬಂದರೆ ಹಿರಿಕಿರಿಯರೆನ್ನುವ ಬೇಧವಿಲ್ಲದೆ ಯಾರಾದರೂ ಸರಿ ಅವರಿಂದ ಕಲಿಯಲು ಸಿದ್ಧನಾಗಿರಬೇಕೆಂಬ ಸತ್ಯದ ಮನವರಿಕೆ ಮತ್ತು ಪೊಳ್ಳು ಅಹಮಿಕೆಯನ್ನು ಮುರಿಯುವ ವಿಧಿಯ ಹುನ್ನಾರವೆಂಬ ಎಚ್ಚರ ಮೂಡಿಸಿ ಮತ್ತೆ ವಿನೀತ ಭಾವದತ್ತ ದೂಡುವುದರಲ್ಲಿ ಫಲಕಾರಿಯಾಗಿದ್ದವು. ಶ್ರೀನಾಥನ ಜತೆಯಲ್ಲಿ ಬಂದ ಬಾಲಭಿಕ್ಷು ಹೊಂಡದತ್ತ ನೋಡುತ್ತಲೆ ಆತನ ಮೊಗದಲ್ಲೊಂದು ಕಿರುನಗೆ ಮೂಡಿಬಂದಿತ್ತು ; ಅಲ್ಲಿ ಅರ್ಧ ತುಂಬಿದ್ದ ಮರದ ತೊಟ್ಟಿ ನೋಡುತ್ತಿದ್ದಂತೆ ಅಲ್ಲೇನು ನಡೆದಿದೆಯೆಂದು ಅವನಿಗೆ ಅರಿವಾಗಿ ಹೋಗಿತ್ತು. ಅವನೇನು ಮಾತನಾಡದೆ, ಶ್ರೀನಾಥನಿಂದ ಯಾವ ವಿವರಣೆಯನ್ನೂ ಕೇಳದೆ ನೇರವಾಗಿ ಹೊಂಡಕ್ಕಿಳಿದವನೆ ಅದರ ಮಧ್ಯದಲ್ಲಿದ್ದ ಪುಟ್ಟ ಕಮಲದ ಆಕೃತಿಯನ್ನು ಕೈಯಿಂದ ತಿರುಗಿಸತೊಡಗಿದ. ಆಗಷ್ಟೆ ಶ್ರೀನಾಥನಿಗೆ ಅರಿವಾಗಿದ್ದು ಅದು ಬರಿಯ ಕಮಲ ಮಾತ್ರವಲ್ಲ, ಅದೊಂದು ಬಿರಡೆಯೆಂದು ! ಅದನ್ನು ತೆರೆಯುತ್ತಿದ್ದ ಹಾಗೆಯೆ ಭೂಮಿಯ ಒಡಲಿನಿಂದ ಚಿಮ್ಮುವ ಅಂತರ್ಗಂಗೆಯ ಹಾಗೆ ರಭಸದಿಂದ ಚಿಮ್ಮಿ ಮೇಲೆದ್ದು ಬರತೊಡಗಿತು ಧಾರಾಕಾರದ ಮೂರು ಬೆರಳಿನ ಗಾತ್ರದಷ್ಟು ದಪ್ಪದ ನೀರಿನ ಧಾರೆ. ಅದು ಕಾರಂಜಿಯಂತೆ ಚಿಮ್ಮಿ ಮೇಲೆ ಬರತೊಡಗಿದಂತೆ ಶ್ರೀನಾಥನ ಬುದ್ಧಿಗು ತಟ್ಟನೆ ಹೊಳೆದಿತ್ತು ಅದರ ಗುಟ್ಟು ಮತ್ತು ಅದೇಕೆ ಅಷ್ಟು ಆಳದಲ್ಲಿದೆ ಎಂದು... ಈ ಹೊಂಡದ ಮೇಲ್ಮಟ್ಟ ಹೊಳೆಗಿಂತ ಎತ್ತರದಲ್ಲಿರುವುದರಿಂದ ನೀರು ಹರಿದು ಬರುವುದಿಲ್ಲವೆನ್ನುವುದೇನೊ ನಿಜ.. ಆದರೆ ಹೊಂಡದ ಆಳವನ್ನು ಹೆಚ್ಚು ಮಾಡಿ ಅದು ನದಿಯ ಮಟ್ಟಕ್ಕೆ ಸಮನಾಗಿ ಅಥವಾ ಇನ್ನೂ ಕೆಳಕ್ಕೆ ಇರುವಂತೆ ಮಾಡಿದರೆ ಅಲ್ಲಿಗೆ ನೀರು ಹರಿಯುವಂತೆ ಮಾಡುವುದು ಸುಲಭವಲ್ಲವೆ? ಅದರಲ್ಲೂ ಒಂದು ಕೊಳವೆಯನ್ನೊ, ಪೈಪನ್ನೊ ಅಲ್ಲಿಂದ ಹೊಳೆಗೆ ಸಂಪರ್ಕವಾಗುವಂತೆ ಜೋಡಿಸಿಬಿಟ್ಟರೆ ಅಲ್ಲಿಂದ ರಭಸದಲ್ಲಿ ಹರಿದು ಬರುವ ನೀರು ಕಾರಂಜಿಯಂತೆ ಚಿಮ್ಮಿಕೊಂಡು ತಾನಾಗೆ ಹೊಂಡವನ್ನು ತುಂಬಬೇಕಲ್ಲವೆ ? ಈಗಾಗುತ್ತಿದ್ದುದು ಅದೆ ! ಅಂದರೆ ಬರಿ ಆ ಕಮಲದ ಬಿರಡೆ ತೆರೆದರೆ ಸಾಕು ಯಾರೂ ತೊಟ್ಟಿಯಲ್ಲಿ ನೀರು ತಂದು ಸುರಿವ ಅಗತ್ಯವೆ ಇಲ್ಲದೆ ನೀರು ತಂತಾನೆ ತುಂಬಿಕೊಳ್ಳುತ್ತದೆ ... ತಾನೆ ಪೆದ್ದುಪೆದ್ದಾಗಿ ಬೆಟ್ಟಕ್ಕೆ ಕಲ್ಲು ಹೊರುವ ಕೆಲಸ ಮಾಡಿದ್ದಾಯ್ತಷ್ಟೆ..!

ಆದರೆ ಆ ಅಚ್ಚರಿಗಳ ಸರಮಾಲೆ ಅಷ್ಟಕ್ಕೆ ನಿಂತಿರಲಿಲ್ಲ. ಹೊಂಡದಲ್ಲಿ ನೀರು ಪೂರ್ತಿ ತುಂಬಬೇಕಾದರೆ ಎಲ್ಲಾ ಬೊಂಬಿನ ಕೊಳವೆಗಳ ಬಿರಡೆಯನ್ನು ಮುಚ್ಚಿದರಷ್ಟೆ ಸಾಧ್ಯ, ಮತ್ತು ಆಮೇಲಷ್ಟೆ ಒಂದೊಂದೆ ಬಿರಡೆ ಬಿಚ್ಚುತ್ತ ಹೋಗಬೇಕೆಂದು ಶ್ರೀನಾಥನ ತಾರ್ಕಿಕ ಅನಿಸಿಕೆಯಾಗಿತ್ತು. ಆದರೆ ಆ ಬಾಲಭಿಕ್ಷು ಅದಕ್ಕೆ ವಿರುದ್ದವಾಗಿ, ಕಾರಾಂಜಿಯ ನೀರು ರಭಸದಿಂದ ಚಿಮ್ಮುವ ಹೊತ್ತಲ್ಲೆ ಕೆಳಗಿನ ಮಟ್ಟದಿಂದಲೆ ಎಲ್ಲಾ ಬಿರಡೆಗಳನ್ನು ತೆಗೆದುಬಿಡತೊಡಗಿದ್ದ. ಅವನನ್ನು ಕೂಡಲೆ ತಡೆಯಬೇಕೆನಿಸಿದರು, ಅದರಲ್ಲೇನೊ ಮತ್ತೊಂದು ನಿಗೂಢವಿರಬೇಕೆಂದು ಅವನು ಬಿರಡೆ ತೆಗೆಯುವವರೆಗೆ ಕಾದು, ನಂತರ ಕೇಳಿದ್ದ, 'ಕೆಳಗೆ ಬಿರಡೆ ತೆಗೆದರೆ ನೀರೆಲ್ಲ ಕೆಳ ಕೊಳವೆಯಲ್ಲೆ ಹರಿದು ಹೋಗುವುದಿಲ್ಲವೆ?' ಎಂದು. ಅದಕ್ಕವನು ನಕ್ಕು ತಲೆಯಾಡಿಸುತ್ತ, 'ಇಲ್ಲಾ ಇಲ್ಲಿ ಹಾಗಾಗುವುದಿಲ್ಲ... ನದಿಯ ನೀರಿನ ರಭಸ ಎಷ್ಟಿರುತ್ತದೆಂದರೆ, ಎಲ್ಲಾ ಬಿರಡೆ ತೆರೆದಿದ್ದರೂ ಕೂಡ ಅದಕ್ಕಿಂತ ವೇಗವಾಗಿ ಹೊಂಡಕ್ಕೆ ನೀರು ತುಂಬಿಕೊಳ್ಳುತ್ತದೆ.. ಒಳ ಹರಿವೆ ಹೊರ ಹರಿವೆಗಿಂತ ಹೆಚ್ಚಿರುವ ಕಾರಣ ಆ ಭೀತಿಗೆ ಕಾರಣವಿಲ್ಲ' ಎಂದಿದ್ದ. ಅದಾದ ಒಂದರೆಗಳಿಗೆಯ ನಂತರ ನೀರನ್ನು ಕೊಡವಿಕೊಂಡು ಅಲ್ಲೆ ಕಲ್ಲೊಂದರ ಮೇಲೆ ಕೂರುತ್ತ, 'ನಿನಗಿನ್ನೊಂದು ವಿಷಯ ಗೊತ್ತಿಲ್ಲವೆಂದು ಕಾಣುತ್ತದೆ...ಎಲ್ಲಾ ಬಿರಡೆಗಳು ಒಟ್ಟಾಗಿ ತೆರೆದಿಡಲು ಇನ್ನೊಂದು ಕಾರಣವೂ ಇದೆ. ಕೆಳಗಿನ ಕೊಳವೆಗಳು ಹೆಚ್ಚು ನೀರು ಬೇಕಾದ ಕೈ ತೋಟಕ್ಕೆ ಸಂಪರ್ಕಿಸಿಕೊಂಡಿವೆ. ಮೇಲಿನವು ಕಡಿಮೆ ನೀರು ಬೇಕಾದ ಕಡೆಗೆ ಕೊಂಡಿ ಹಾಕಿಕೊಂಡಿವೆ... ಈ ವಿಧಾನದಲ್ಲಿ ಕೆಳಗಿನವು ಹೆಚ್ಚು ನೀರು ಪಡೆಯುವ ಹಾಗೆ, ಮೇಲಿನವು ಕಡಿಮೆ ನೀರು ಪಡೆಯುವ ಹಾಗೆ ಅಗತ್ಯಕ್ಕೆ ತಕ್ಕಂತೆ ನೀರು ಒದಗಿಸುವ ಕೆಲಸವನ್ನು ಒಂದೆ ಏಟಿಗೆ ಮಾಡಿಬಿಡುತ್ತವೆ. ಅದೇ ಎಲ್ಲ ಬಿರಡೆ ಮುಚ್ಚಿ ಒಂದೊಂದಾಗಿ ತೆರೆಯುತ್ತ ಹೋದರೆ ವೇಳೆಯೂ ಹೆಚ್ಚು ಬೇಕು, ಜತೆಗೆ ಎಲ್ಲಕ್ಕು ನಿಗದಿಯಾದಷ್ಟೆ ನೀರು ಸಿಗುವುದೇ ಹೊರತು ಈ ರೀತಿ ಹೆಚ್ಚು ಕಡಿಮೆ ಪ್ರಮಾಣದಲ್ಲಿ , ಅದೂ ಸ್ವಯಂಚಾಲಿತ ರೀತಿಯಲ್ಲಿ ನೀರೂಡಿಸಲು ಸಾಧ್ಯವಾಗುವುದಿಲ್ಲ ' ಎಂದ. ಅದನ್ನು ಕೇಳುತ್ತಿದ್ದಂತೆ ಏನು ಹೇಳಬೇಕೆಂದೆ ಗೊತ್ತಾಗಲಿಲ್ಲ ಶ್ರೀನಾಥನಿಗೆ. ನೋಡನೋಡುತ್ತಿದ್ದಂತೆ ಅರ್ಧಗಂಟೆಗೂ ಕಡಿಮೆ ಅವಧಿಯಲ್ಲಿ ಇಡೀ ಹೊಂಡವೆ ತುಂಬಿಕೊಂಡಾಗ, ಉದ್ದದ್ದೊಂದು ಉಕ್ಕಿನ ಸರಳಿನ ತುದಿಗೆ ಅಂಟಿಕೊಂಡಂತೆ ಮೇಲೆದ್ದು ನಿಂತಿದ್ದ ಕಮಲಾಕಾರದ ಬಿರಡೆಯತ್ತ ನಡೆದವನೆ ಅದನ್ನು ಮತ್ತೆ ಅದರ ಮೂಲ ಗುಳಿಯೊಳಕ್ಕೆ ತಳ್ಳತೊಡಗಿದ - ಆ ಸರಳಿನ ಮೂಲಕ ಗುರುತಿಸಿಕೊಂಡ ಮೂಲ ಜಾಗದಲ್ಲಿ. ಯಾವಾಗ ಆ ಬಿರಡೆ ಸರಿಯಾಗಿ ಆಯಕಟ್ಟಿನಲ್ಲಿ ಕೂತಿತೊ, ಆಗ ಅದನ್ನು ಕಾಲಿನ ಬೆರಳುಗಳ ಸಹಾಯದಿಂದ ತಿರುಗಿಸುತ್ತ ಮತ್ತೆ ಗಟ್ಟಿ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸದಿದ್ದರು, ಗೊತ್ತಾಗುವಂತಿತ್ತು. ಆದರೆ ಶ್ರೀನಾಥನ ಮನ ಮಾತ್ರ ಅದರತ್ತ ಗಮನವೀಯದೆ, ಅದರ ಹಿನ್ನಲೆಯ ತಾತ್ವಿಕ ಮಹತ್ತರದ ಅಂತರ್ಗತತೆಯನ್ನು ಕೆದಕಿ ನೋಡುವ ಹುನ್ನಾರದಲ್ಲಿ ಮಗ್ನವಾಗಿತ್ತು. 

'ಏನಿದರರ್ಥ ? ನಾವಿ ಬದುಕಿನ ಜಂಜಡದಲ್ಲಿ ಎಲ್ಲೆಲ್ಲೊ ಹರವಿಕೊಂಡ ನೂರಾರು ಕೊಳವೆ ತೂತುಗಳನ್ನು ಮುಚ್ಚುವ ಬಿರಡೆ ಹಾಕುತ್ತಲೊ, ಬಾಗಿಲು ತೆರೆಸುವ ಬಿರಡೆ ಬಿಚ್ಚುತ್ತಲೊ ಕಾಲ ಕಳೆಯುತ್ತಿರುತ್ತೇವೆ, ಒಂದರ ನಂತರ ಒಂದರಂತೆ... ಒಂದು ತೂತಿಗೆ ತೇಪೆ ಹಾಕಿದರೆ ಇನ್ನೊಂದು ತೆರೆದುಕೊಳ್ಳುತ್ತದೆ, ಅದನ್ನು ಮುಚ್ಚಿದರೆ ಮಗದೊಂದು ಇಣುಕುತ್ತದೆ. ಆದರೆ ಇದೆಲ್ಲ, ಮಾಯೆಯ ಹೊದಿಕೆಯಲ್ಲಿ ಹೊರಗೆ ಕಾಣಿಸುವ ಬರಿಯ ನಡುವಿನ ಪದರಗಳು ಮಾತ್ರವೆ? ಈ ತರದ ನೂರಾರು ಬಿರಡೆಗಳನ್ನು ಮುಚ್ಚಿಸಿ ತೆಗೆಸಬಲ್ಲ ಯಾವುದೊ ಒಂದು 'ಕಮಲದ ಬಿರಡೆ' ಅಲ್ಲೆಲ್ಲೊ ಇದ್ದರೂ ನಮ್ಮ ನೇರ ದೃಷ್ಟಿಗೆ ಸಿಗದೆ ಆಟವಾಡಿಸುತ್ತಿದೆಯೆ? ಅದು ಯಾವುದು-ಎಲ್ಲಿದೆಯೆಂದು ಗೊತ್ತಾದರೆ ಈ ಬಾಲಭಿಕ್ಷು ಮಾಡಿದಂತೆ ಅದೊಂದನ್ನು ಬಿಚ್ಚಿ-ಮುಚ್ಚಿದರೆ ಸಾಕು, ಮಿಕ್ಕೆಲ್ಲ ತೂತುಗಳ ಜವಾಬ್ದಾರಿಯನ್ನು ಅದೊಂದೆ ನಿಭಾಯಿಸುತ್ತದೆಯೆ - ಅದೂ ಸ್ವಯಂಚಾಲಿತವಾಗಿ? ತಾನು ಮಾಡಹೊರಟಿದ್ದ ಪ್ರಯತ್ನ ಅದೊಂದು ರೀತಿ, ಹೊರಗೆ ಕಾಣುವ ನೂರೆಂಟು ಗುಣಲಕ್ಷಣಗಳಿಗೆ ಒಂದೊಂದಾಗಿ ಮದ್ದು ನೀಡುತ್ತ - ಒಂದೊಂದಾಗಿ ನಿವಾರಿಸಿಕೊಳ್ಳುತ್ತ, ನಂತರ ಅದರ ಮುಂದಿನ ಲಕ್ಷಣವನ್ನು ನಿವಾರಿಸಲು ಯತ್ನಿಸುವಂತೆ ಕಾಣುವುದಿಲ್ಲವೆ ? ಅದೇ ಸಮಯದಲ್ಲಿ ಈ ಬಾಲಭಿಕ್ಷುವಿನ ವಿಧಾನ, ಅದೇ ಗುಣಲಕ್ಷಣಗಳಿಗೆ ಮೂಲ ಕಾರಣವನ್ನು ಹುಡುಕಿ ಕೇವಲ ಅದೊಂದಕ್ಕೆ ಮದ್ದಿತ್ತು, ಆ ಮುಖೇನ ಇಡೀ ಗುಣಲಕ್ಷಣಗಳ ಕಂತೆಯನ್ನು ಒಂದೇ ಏಟಿನಲ್ಲಿ ನಿವಾರಿಸಿದಂತೆ ಪರಿಣಾಮವನ್ನು ಉಂಟು ಮಾಡುತ್ತಿದೆಯಲ್ಲವೆ ? ಅದರಲ್ಲೂ ಗುಣಲಕ್ಷಣಗಳ ತೀವ್ರತೆಯನುಸಾರ, ಬೇರೆ ಬೇರೆ ಪ್ರಮಾಣದಲ್ಲಿ ಏಕಕಾಲದಲ್ಲಿ ಮದ್ದು ನೀಡುತ್ತ ಒಂದೆ ಸೂತ್ರದಡಿ ಎಲ್ಲವನ್ನು ಪರಿಹರಿಸುತ್ತ... ಇದರರ್ಥ, ಬದುಕಿನಲ್ಲಿ ಹೆಣಗಾಡುವ ನೂರೆಂಟು ಜಂಜಾಟಗಳಿಂದ ಕಂಗೆಡದೆ ಅವುಗಳನ್ನೆಲ್ಲ ಗುಣಲಕ್ಷಣಗಳೆಂದು ಪರಿಗಣಿಸಿ, ಅದರ ಮೂಲ ಸೂತ್ರಧಾರಕ ಯಾರೆಂದು ಹುಡುಕಿ ಅದೊಂದನ್ನು ನಿಭಾಯಿಸಿದರೆ ಸಾಕು, ಅದೆ ಮಿಕ್ಕೆಲ್ಲವನ್ನು ನಮ್ಮರಿವಿಲ್ಲದಂತೆ ನಿವಾರಿಸಿಬಿಡುತ್ತದೆ ಎಂದರ್ಥವಲ್ಲವೆ? ಅದೇ ತರ್ಕದಲ್ಲಿ, ಒಂದು ಸರಿಯಾದ ಮೂಲಸೂತ್ರದ ಕಾರ್ಯ, ಮಿಕ್ಕೆಷ್ಟೊ ಕಾರ್ಯಗಳ ಮೇಲೆ ಏಕಕಾಲದಲ್ಲಿ ಪ್ರಭಾವ ಬೀರಿ 'ಸರಪಳಿ ಪ್ರಭಾವ' ಬೀರಲೂ ಸಾಧ್ಯವೆಂದಾಯ್ತಲ್ಲವೆ? ಅರ್ಥಾತ್ ಇಡಿ ಜಗತ್ತೆಲ್ಲ ನೂರೆಂಟು ಬಾಹ್ಯ ಲಕ್ಷಣಗಳ ಜತೆ ಹೊಡೆದಾಡುತ್ತ ಅಪಾರ ಸಮಯ, ಹಣ, ಸಂಪನ್ಮೂಲಗಳನ್ನು ವ್ಯಯಿಸಿಯೂ ಮೂಲಸಮಸ್ಯೆ ಬಗೆಹರಿಯದ ಕಾರಣ ಅದೇ ರೀತಿಯ ಪುಂಖಾನುಪುಂಖವಾಗಿ ಬರುತ್ತಲೇ ಇರುವ ತೊಡಕುಗಳ ಸುತ್ತಲೆ ಕಳೆದುಹೋಗಿರುವಾಗ, ಈ ರಹಸ್ಯ ಬಲ್ಲ ವ್ಯಕ್ತಿಯೊಬ್ಬ ಆ ನೂರೆಂಟಕ್ಕೆ ತಲೆ ಕೆಡಿಸಿಕೊಳ್ಳದೆ ಕೇವಲ ಅದರ ಮೂಲ ಕಾರಣ ಶೋಧಿಸಿ, ಅದಕ್ಕೆ ಮಾತ್ರ ಶೀಘ್ರ ಮತ್ತು ಅಲ್ಪ ವೆಚ್ಚದ ಪರಿಹಾರ ಕಂಡು ಹಿಡಿದು ಅದರಿಂದಲೆ ಮಿಕ್ಕೆಲ್ಲ ತೊಡಕನ್ನು ನುಂಗಿ ಆರಾಮವಾಗಿರುತ್ತಾನೆಂದಾಯ್ತಲ್ಲವೆ? ನೋಡುವುದಕ್ಕೆ ಸರಳವಾಗಿ ಕಂಡರೂ ಭಾರೀ ನಿಗೂಢವೆ ಅಡಗಿರುವಂತಿದೆಯಲ್ಲಾ ಇಲ್ಲಿ?'

ಅಂದು ರಾತ್ರಿಯೂ 'ಕುಟಿ' ಯಲ್ಲಿ ಎಂದಿಲ್ಲದ ನಿರಾಳದಲ್ಲಿ ನಿದ್ರಿಸಿದ್ದ ಶ್ರೀನಾಥ. ಆ ನಿದ್ರೆ ಅದೆಷ್ಟು ಗಾಢವಾಗಿತ್ತೆಂದರೆ, ಬೆಳಿಗ್ಗೆ ಮಾಮೂಲಿ ಹೊತ್ತಿಗೂ ಎಚ್ಚರವಾಗದಷ್ಟು....! ಹಾಗೂ ಎಚ್ಚರವಾದಾಗ, ತಡಬಡಾಯಿಸಿಕೊಂಡು ಎದ್ದು, ಸಮಯ ನೋಡಿ ತಡವಾಯಿತೆಂದು ಹೌಹಾರುತ್ತ ಸಿದ್ದನಾಗುವ ಹೊತ್ತಿಗಾಗಲೆ 'ಕುಟಿ'ಯ ಬಾಗಿಲಲ್ಲೆ ಕಾದು ನಿಂತಿದ್ದ ಮಾಂಕ್. ಸಾಕೇತ್ ಕಾಣಿಸಿದ್ದರು...!

ಅಷ್ಟು ಬೆಳಗಲ್ಲೆ ಬಂದು ಕಾದು ನಿಂತಿರುವ ಮಾಂಕ್. ಸಾಕೇತರನ್ನು ಕಂಡು ಆತುರಾತುರವಾಗಿ ಗಡಬಡಿಸಿಕೊಂಡು ಸರಸರನೆ ಬಾಗಿಲು ತೆರೆದು ಹೊರಬಂದ ಶ್ರೀನಾಥ. ತುಸು ತಡವಾಗೆಚ್ಚರವಾದುದಕ್ಕೆ ತೊಡಕೇನು ಇರದಿದ್ದರೂ, ಅವರು ಬಂದು ಕಾಯುವಂತೆ ಮಾಡಿದ್ದಕ್ಕೆ ಒಂದು ರೀತಿಯ ನಾಚಿಕೆಯಾಗಿತ್ತು. ಅವನ ಗಲಿಬಿಲಿಯನ್ನು ನಿವಾರಿಸಿ, ಸಾವರಿಸುವಂತೆ ಮಾಂಕ್ ಸಾಕೇತರೆ ಮೊದಲು ಮಾತನಾಡಿದರು:

''ಅಮಿತಾಭ...' ಕುನ್. ಶ್ರೀನಾಥ, ಒಳ್ಳೆಯ ಸೊಗಸಾದ ನಿದ್ದೆ ಮಾಡಿ ಎದ್ದು ಬಂದಂತಿದೆ, ಅದು ಆಶ್ರಮವಾಸದ ಕಡೆಯ ದಿನಗಳಲ್ಲಿ..?' 

'ಹೌದು ಮಾಸ್ಟರ... ನಿನ್ನೆ ರಾತ್ರಿ ಸೊಗಸಾದ ನಿದ್ರೆಯೆ... ನೀವು ಕೊಟ್ಟಿದ್ದ ಆ ಎರಡು ಕೆಲಸಗಳು ಮುಗಿದ ಮೇಲೆ ಆಗಿದ್ದ ದೈಹಿಕ ಶ್ರಮದಿಂದಲೊ, ಅಥವಾ ಇಲ್ಲಿಗೆ ಅರಸಿಕೊಂಡು ಬಂದಿದ್ದ ಮನಶ್ಯಾಂತಿಯ ದಾರಿಯನ್ನು ತೋರಿಸುವ ಸತ್ಯದ ಸ್ಥೂಲ ಪ್ರಕ್ಷೇಪವಾದ ಸಂತೃಪ್ತಿಗೊ ಗೊತ್ತಿಲ್ಲ... ಆದರೆ ನಿನ್ನೆಯದು ಮಾತ್ರ ಸೊಗದ ನಿದಿರೆಯೂ ಹೌದು, ಧೀರ್ಘಕಾಲದ್ದೂ ಹೌದು... '

ತಾವು ಬಂದಾಗೆಲ್ಲ ಕೂರುತಿದ್ದ ಅದೇ ಜಾಗದಲ್ಲಿ ಆಸೀನರಾದ ಮಾಂಕ್. ಸಾಕೇತ್, ಶ್ರೀನಾಥನನ್ನು ತನ್ನ ಮಾಮೂಲಿನ ಜಾಗದಲ್ಲಿ ಕೂರುವಂತೆ ಸೂಚಿಸುತ್ತ, 'ಆ ಎರಡು ದಿನದ ದೈಹಿಕ ಚರ್ಯೆಯ ಮರ್ಮ ಗೊತ್ತಾಯಿತಲ್ಲವೆ ಕುನ್. ಶ್ರೀನಾಥ?' ಎಂದು ಕೇಳಿದರು

' ಹೌದು ಮಾಸ್ಟರ.. ಸ್ಥೂಲವಾಗಿ ಅರಿವಾಯ್ತೆಂದೆ ಹೇಳಬಹುದೇನೊ... ಆದರೆ ನೀವು ಒಂದಷ್ಟು ಬೆಳಕು ಚೆಲ್ಲಿದರೆ ನನ್ನರಿವಿಗೆ ಮೀರಿದ್ದೇನಾದರೂ ಇದ್ದರೆ ಸಹಾಯಕವಾದೀತೇನೊ?' ತಾನು ಗ್ರಹಿಸಿಕೊಂಡ ಸಾರಕ್ಕೂ ಮೀರಿದ್ದೇನಾದರೂ ಇರಬಹುದೇನೊ ಎನ್ನುವ ಅನುಮಾನದಲ್ಲಿ ಕೇಳಿದ ಶ್ರೀನಾಥ.

' ಇಲ್ಲಾ ಕುನ್. ಶ್ರೀನಾಥ.. ನೀನು ಗ್ರಹಿಸಿದ ಸಾರ ಸರಿಯಾಗಿಯೆ ಇದೆ... ಆದರೆ ನೆನಪಿನಲಿಟ್ಟುಕೊ.. ಯಾವುದೇ ಸತ್ಯವೂ ಅಂತಿಮವಲ್ಲ. ಹೊಸತಿನ ಕೋನವೊಂದರ ಅವಿಷ್ಕಾರದೊಂದಿಗೆ ಸಾಕ್ಷಾತ್ಕಾರವಾಗುವ ಹೊಸ ವಿಷಯಗಳು ನಮಗೆ ಗೊತ್ತಿರುವ ಅದೇ ಸತ್ಯವನ್ನು ಸುಳ್ಳಾಗಿಸಿಬಿಡಬಹುದು, ಅಥವಾ ಅದೇ ಸತ್ಯವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದುಬಿಡಬಹುದು... ನೀನಾಗಲೆ ಗ್ರಹಿಸಿಕೊಂಡಂತೆ ಇವೆರಡು ಸಾಂಕೇತಿಕ ದೈಹಿಕ ಶ್ರಮಗಳೆಂಬುದು ಸತ್ಯ... ಆದರೆ ಇವೆರಡರಲ್ಲೂ ಇರುವ ಸಾಮ್ಯತೆಯ ಒಂದು ಸಾಮಾನ್ಯ ಸತ್ಯವನ್ನು ನೀನು ಗಮನಿಸಿದೆಯಾ?' ಎಂದು ಕೇಳಿದರೂ ಮಾಂಕ್. ಸಾಕೇತ್

' ಸಾಮ್ಯತೆಯ ಸಾಮಾನ್ಯ ಸತ್ಯವೆ...? ಗ್ರಹಿಕೆಗೆ ಬಂತೊ ಇಲ್ಲವೊ ಗೊತ್ತಾಗುತ್ತಿಲ್ಲ..ಅದನ್ನು ಕೊಂಚ ವಿವರಿಸಿ ಹೇಳುತ್ತೀರಾ ಮಾಸ್ಟರ..?' ಕುತೂಹಲದಲ್ಲಿ ಕೇಳಿದ ಶ್ರೀನಾಥ. 

' ಸಾಮಾನ್ಯ ನೋಟಕ್ಕೆ ತೀರಾ ಗಹನವಾದದ್ದೇನಲ್ಲವಾದರು ಇದೊಂದು ಸರಳ ಆದರೆ ಅಷ್ಟೆ ಬಲವಾದ ಮೂಲಸತ್ವದ ಗ್ರಹಿಕೆ ಕುನ್. ಶ್ರೀನಾಥ... ನೀನೆ ಗ್ರಹಿಸಿದಂತೆ ಪ್ರತಿಯೊಂದು ಸರಳ ಕಾರ್ಯವನ್ನು ಅದರ ಛಿಧ್ರತೆಯ ರೂಪದಲ್ಲಿ ನೋಡುವಾಗ ಮನದಲ್ಲಿ ಹುಟ್ಟುವ ಪರಿಹಾರಗಳು ಎಷ್ಟೆ ಅಮೋಘವಾಗಿದ್ದರು, ಎಲ್ಲಿಯತನಕ ಅವು ಸಮಗ್ರ ದೃಷ್ಟಿಕೋನದೊಂದಿಗೆ ಲೀಲಾಜಾಲವಾಗಿ ಮತ್ತು ಸರಳವಾಗಿ ಹೊಂದಿಕೊಳ್ಳುತ್ತ ಸಮಗ್ರತೆಯ ಒಟ್ಟು ರೂಪದಲ್ಲಿ ಪ್ರತಿಬಿಂಬವಾಗುವುದಿಲ್ಲವೊ, ಅಲ್ಲಿಯತನಕ ಅವು ಅದ್ಭುತವೆನಿಸುವ ಮಟ್ಟದಾಗಲಾರವು... ಛಿಧ್ರ ರೂಪದಲ್ಲಿ ಅವೆಷ್ಟೇ ದಕ್ಷತೆ, ಕಾರ್ಯಕ್ಷಮತೆಯನ್ನು ಹೊಂದಿದ್ದರು ಸಹ ಸಮಗ್ರ ಅಂತಿಮ ಫಲಿತಾಂಶದ ಸಮಷ್ಟಿಯ ದೃಷ್ಟಿಯಿಂದ ಅದೇ ಕ್ಷಮತೆ ಮತ್ತು ದಕ್ಷತೆಯನ್ನು ಒದಗಿಸಲಾರವು.. ನಿಜ ಹೇಳಬೇಕೆಂದರೆ ಆ ರೀತಿಯ ಛಿಧ್ರ ಖಂಡಗಳ ನಿಭಾಯಿಸುವಿಕೆಯಲ್ಲೆ ಇಡೀ ಜೀವನವೇ ಕಳೆದುಹೋಗುತ್ತದೆ, ಕೊನೆಯಿಲ್ಲದ ಅವಿರತ ಛಿಧ್ರಗಳಿಂದಾಗಿ...'

'ನಿಜ.. ಇದರ ಸ್ಥೂಲ ಅರಿವು ನನಗೂ ಆಯಿತು...'

' ಅದಕ್ಕೆಂದೆ ಯಾವುದೆ ಕಾರ್ಯಕ್ಕಿಳಿದರು ಮೊದಲು ಅದರ ಸಮಗ್ರತೆಯೊಡನೆ ಜೋಡಿಸಿ, ಹೊಂದಾಣಿಸಿಕೊಳ್ಳುವುದು ಬಲು ಮುಖ್ಯ..'  - ಇದನ್ನೆ ಅಲ್ಲವೆ ನಾವು ಕಾರ್ಖಾನೆಗಳಲ್ಲಿ, ಪ್ರಾಜೆಕ್ಟುಗಳಲ್ಲಿ ಸದಾ ಉಪದೇಶಿಸುವುದು - ಅವುಗಳದೆ ಆದ ಪರಿಭಾಷೆಯಲ್ಲಿ? ಎಂದುಕೊಂಡ ಶ್ರೀನಾಥ, ಹೌದೆನ್ನುವಂತೆ ತಲೆಯಾಡಿಸಿದ್ದ...

' ಆದರ ಜತೆಯಲ್ಲಿಯೆ ಅಂತರ್ಗತವಾದ ಮತ್ತೊಂದು ಸೂಕ್ಷ್ಮ ಸತ್ಯ - ಪ್ರಕೃತಿಯ ಜತೆಗಿನ ತಾಳಮೇಳ... ನಮ್ಮರಿವಿಲ್ಲದೆಯೆ ನಮ್ಮ ಸುತ್ತಲೆ ಇರುವ ಪ್ರಕೃತಿಯ ಶಕ್ತಿ ಸ್ವರೂಪಗಳು, ತಮ್ಮ ಪ್ರಶಾಂತ ರೂಪದಲ್ಲಿ ಕುಳಿತಿವೆಯೆಂಬ ಮಾತ್ರಕ್ಕೆ ಅವು ದುರ್ಬಲವೆಂದರ್ಥವಲ್ಲ.. ಅವುಗಳ ಅರಿವಿದ್ದರೆ ಅವನ್ನು ಪೂರಕವಾಗಿ ಬಳಸಿಕೊಂಡೆ ನೀನು ನಿನ್ನ ಕಾರ್ಯವನ್ನು ಸುಗಮಗೊಳಿಸಿಕೊಳ್ಳಬಹುದು....'

ಅದೆಷ್ಟು ಸತ್ಯವೆಂದು ಗಾಳಿಯ ಮತ್ತು ನೀರಿನ ಶಕ್ತಿ ನೋಡಿಯೆ ಅರಿವಾಗಿದ್ದ ಶ್ರೀನಾಥ ಹೌದೆನ್ನುವಂತೆ ಮತ್ತೆ ತಲೆಯಾಡಿಸಿದ್ದ.

' ಅಂತೆಯೆ ಈ ಶಕ್ತಿಗಳೆಲ್ಲ ಪ್ರಕೃತಿಯ ಸ್ವತ್ತು... ಅದನ್ನು ಹಿಡಿದಿಟ್ಟು ಗುಪ್ಪೆ ಹಾಕಿ ಗುಡ್ಡೆ ಮಾಡುವುದರಲ್ಲಿ ಏನೂ ಅರ್ಥವಿಲ್ಲ. ಬೇಕೆಂದಾಗ ಬಳಸಿಕೊಂಡ ಹಾಗೆ, ಕೆಲಸ ಮುಗಿದಂತೆಯೆ ಅದರ ಮೂಲಕ್ಕೆ ಮರಳಿಸಿಬಿಡಬೇಕು.. ಅದನ್ನು ಹಿಡಿದಿಡುವ ಪ್ರಯತ್ನ ಮಾಡದೆ ನಿಭಾಯಿಸಿ ಬಿಟ್ಟುಬಿಡುವ ನಿರ್ಮೋಹ ತೋರಬೇಕು..' 

ಆ ಮಾತು ಕೇಳುತ್ತಿದ್ದಂತೆ ಬಾಲಭಿಕ್ಷುವಿನ 'ಡೋಂಟ್ ಕಲೆಕ್ಟ್ ಅಂಡ್ ಅಕ್ಯುಮುಲೇಟ್..ಲೆಟ್ ಇಟ್ ಗೋ, ಲೆಟ್ ಇಟ್ ಗೋ..' ಎಂದ ಮಾತು ನೆನಪಾಗಿತ್ತು ಶ್ರೀನಾಥನಿಗೆ.

' ಇನ್ನೂ ಕೊನೆಯದಾಗಿ ನೀನಾಗಲೆ ಕಂಡುಕೊಂಡ 'ಮೂಲ ಸತ್ವದ' ಕುರಿತು ಮತ್ತೊಂದು ಮಾತು... ಯಾವಾಗ ನೀನು ಮೂಲಕಾರಣ ಶೋಧಿಸಿ ಅದರ ಪರಿಹಾರಕ್ಕೆ ದಾರಿ ಹುಡುಕುವೆಯೊ ಆಗ ಅದರ ಸುತ್ತಲಿದ್ದ ಸಂಕೀರ್ಣತೆಯ ಪೊರೆ ಕಳಚಿ , ಸರ್ವೆ ಸಾಧಾರಣ, ಸಾಮಾನ್ಯ ಕ್ರಿಯೆಯಾಗಿಬಿಡುತ್ತದೆ - ನೋಡುವವರ ಕಣ್ಣಲ್ಲಿ ಸಹ.. ಯಾವುದೆ ಸದ್ದು ಗದ್ದಲವಿಲ್ಲದ ಸರಳ ಮೌನದಲ್ಲಿ, ತೀರಾ ಕ್ಷುಲ್ಲಕ ಸಂಘಟನೆಯೆಂಬಂತೆ ಸರಿದುಹೋಗುತ್ತದೆ.. ಅದರಿಂದಲೆ ಅದು ಬೇರೆಯವರ ಗಮನ ಸೆಳೆಯುವುದಿಲ್ಲ ಸಹ...'

'ನಾವೇನು ಮಹತ್ತರವಾದದ್ದನ್ನು ಸಾಧಿಸಿದ್ದರೂ ಅದು ಹೊರ ಜಗತ್ತಿನ ಕಣ್ಣಲ್ಲಿ ಸಣ್ಣದೆನಿಸುವ ಸರಳ ಕಾರ್ಯವಾಗಿ ಕಾಣಿಸಿಕೊಳ್ಳುತ್ತದೆ... ಅರ್ಥಾತ್ ಅವಕ್ಕೆಲ್ಲ ಹೆಸರು, ಬಹುಮಾನ, ಪಾರಿತೋಷಕಗಳನ್ನು ನಿರೀಕ್ಷಿಸಬಾರದು ಈ ಲೌಕಿಕ ಜಗದಿಂದ ಎಂದಾಯ್ತು..' ಎಂದು ನಕ್ಕ ಶ್ರೀನಾಥ

' ಸರಿಯಾಗಿ ಗ್ರಹಿಸಿದೆ... ಜತೆಗೆ ಅದರ ಮೋಹವನ್ನು ಇಟ್ಟುಕೊಳ್ಳುವ ತಪ್ಪು ಮಾಡಬಾರದು ಎಂದರ್ಥ ಕೂಡ..' ಎಂದು ಮುಗುಳ್ನಕ್ಕರು ಮಾಂಕ್. ಸಾಕೇತ್. 

(ಇನ್ನೂ ಇದೆ)
__________