ಕನ್ನಡಬ್ಲಾಗ್ಸ್ ಎಂಬ ಕನ್ನಡ ಬ್ಲಾಗಿಗರ ಸಮುದಾಯ

ಕನ್ನಡಬ್ಲಾಗ್ಸ್ ಎಂಬ ಕನ್ನಡ ಬ್ಲಾಗಿಗರ ಸಮುದಾಯ

ಬರಹ

ಕನ್ನಡಬ್ಲಾಗ್ಸ್ ಎಂಬ ಕನ್ನಡ ಬ್ಲಾಗಿಗರ ಸಮುದಾಯ
ಕನ್ನಡದ
ಹವ್ಯಾಸಿ ಮತ್ತು ಬರಹಗಾರರು ಅಂತರ್ಜಾಲದಲ್ಲಿ ಬ್ಲಾಗ್‌ಗಳನ್ನು ಬರೆಯುವುದರಲ್ಲಿ ಹಿಂದೆ
ಬಿದ್ದಿಲ್ಲ. ಆದರೆ ಆ ಬಗ್ಗೆ ನಿಖರ ಮಾಹಿತಿಗಳು ಸಿಗವು. ಸಂಪದ.ನೆಟ್.
ಕೆಂಡಸಂಪಿಗೆ.ಕಾಂ,ವಿಶ್ವಕನ್ನಡ.ಕಾಂ,ವೆಬ್‌ದುನಿಯ,ದಟ್ಸ್‌ಕನ್ನಡ,ಯಾಹೂಕನ್ನಡ ಹೀಗೆ
ಕೆಲವು ತಾಣಗಳಲ್ಲಿ ಚದುರಿ ಹೋಗಿರುವ ಬರಹಗಾರರನ್ನು ಒಂದೆಡೆ ಸೇರಿಸಿ,ಬ್ಲಾಗಿಗರ
ಸಮುದಾಯವಾಗಿಸುವ ಪ್ರಯತ್ನ ಈಗ ನಡೆದಿದೆ. ಮೇಫ್ಲವರ್ ಮೀಡಿಯಾ ಹೌಸ್ ಅವರ
ಕನ್ನಡಬ್ಲಾಗರ್ಸ್ ತಾಣ http://kannadablogs.ning.com/ ಉತ್ತಮ ಪ್ರತಿಕ್ರಿಯೆ
ಪಡೆದಿದ್ದು ಐನೂರಕ್ಕೂ ಮಿಕ್ಕಿ ಸದಸ್ಯರನ್ನು ನೋಂದಾಯಿಸಲು ಸಫಲವಾಗಿದೆ.ರಾಜ್ಯದ
ವಿವಿಧೆಡೆ ನಡೆಯುವ ಕಾರ್ಯಕ್ರಮಗಳ ವಿವರಗಳು ಕೂಡಾ ಇಲ್ಲಿ ಲಭ್ಯ.

---------------------------------------------------------
ಬಿ ಎಸ್ ಎನ್ ಎಲ್‌ನ ನೆಟ್‌ಪಿಸಿ
ಕಂಪ್ಯೂಟರ್
ಇಲ್ಲದೆಯೇ ಬ್ರಾಡ್‌ಬ್ಯಾಂಡ್ ಬಳಸಲು ಅನುವು ಮಾಡುವ ವ್ಯವಸ್ಥೆಯ ಬಗ್ಗೆ ಭಾರತ್ ಸಂಚಾರ್
ನಿಗಮ ಗಮನ ಹರಿಸಿದೆ.ನೊವಾಟಿಯಮ್ ಸೊಲ್ಯೂಶನ್ಸ್ ಎನ್ನುವ ಕಂಪೆನಿ ಸುಮಾರು ಒದಗಿಸುವ
ಮೋಡೆಮ್,ಕೀಲಿ ಮಣೆ,ಮೌಸ್ ಮತ್ತು ಇಂಟೆಲ್‌ನ ಆಟಮ್ ಎನ್ನುವ ಸಂಸ್ಕಾರಕ ಹೊಂದಿರುವ
ಕಿಟ್‌ಗೆ ಮೂರು ಸಾವಿರ ತೆರಬೇಕಾಗುತ್ತದೆ. ಟಿವಿಯಿದ್ದರೆ,ಅದನ್ನೇ ತೆರೆಯಾಗಿ
ಬಳಸಬಹುದು. ಟಿವಿ ಇಲ್ಲವಾದರೆ ಕಂಪ್ಯೂಟರ್ ಮಾನಿಟರ್ ಬೇಕು. ಈ ವ್ಯವಸ್ಥೆಯ ಮೂಲಕ
ಅಂತರ್ಜಾಲ ಜಾಲಾಡಬಹುದು.ಅಂತರ್ಜಾಲದಲ್ಲಿ ಲಭ್ಯವಿರುವ ಗೂಗಲ್ ಡಾಕ್ಯುಮೆಂಟ್ ಅಂತಹ
ಸೇವೆಯ ಮೂಲಕ ಪದಸಂಸ್ಕರಣ ಇತ್ಯಾದಿ ಕೆಲಸಗಳನ್ನೂ ಮಾಡಬಹುದು.ಸದ್ಯ ಈ ಸೇವೆ ಮಧುರೆಯಲ್ಲಿ
ಜಾರಿಗೆ ಬಂದಿದೆ.ಮಾಸಿಕ ಚಂದಾದಾರ ಇನ್ನೂರೆಪ್ಪತ್ತೈದು ರುಪಾಯಿಗಳ ಬ್ರಾಡ್‌ಬ್ಯಾಂಡ್
ಶುಲ್ಕವನ್ನೂ ಪಾವತಿಸಬೇಕಾಗುತ್ತದೆ.
-----------------------------------------------------------------------------
ಬರಲಿದೆ ಮಿದುಳಿನ ಡಿಎನ್‍ಎ ನಕ್ಷೆ!
ಮಾನವ
ಮಿದುಳನ್ನು ಎಡಭಾಗ,ಬಲಭಾಗ ಹೀಗೆ ವಿವಿಧ ಭಾಗಗಳಾಗಿ ಅಭ್ಯಾಸ ಮಾಡುವುದು ಸಾಮಾನ್ಯ.
ಮಿದುಳಿನ ಪ್ರತಿ ಜೀವಕೋಶದಲ್ಲಿರುವ ಡಿಎನ್‌ಎ ಯಾವ ಬಗೆಯದು ಎನ್ನುವ ನಕ್ಷೆ ತಯಾರಿಸುವ
ದೊಡ್ದ ಯೋಜನೆಯು ಅಮೆರಿಕಾದ ಸೀಟಲ್‌ನ ಅಲೆನ್ ಇನ್‌ಸ್ಟಿಟ್ಯೂಟ್ ಆಫ್ ಬ್ರೈನ್
ಸಯನ್ಸ್‌ನಲ್ಲಿ ಪ್ರಗತಿಯಲ್ಲಿದೆ. ಇದಕ್ಕಾಗಿ ರೊಬೋಟ್ ವ್ಯವಸ್ಥೆಯನ್ನೊಳಗೊಂಡ ದೊಡ್ಡ
ವ್ಯವಸ್ಥೆಯನ್ನಿಲ್ಲಿ ಅಳವಡಿಸಲಾಗಿದೆ. ಮನುಷ್ಯ ದೇಹದಿಂದ ತೆಗೆದ ಮಿದುಳನ್ನು
ಅಭ್ಯಸಿಸಲು,ಅದನ್ನು ಚಿಕ್ಕ ಚಿಕ್ಕ ಚೂರುಗಳಾಗಿಸಿ,ಹೋಳುಗಳನ್ನು ರೊಬೋಟ್ ಮೂಲಕ
ಮೈಕ್ರಾನ್ ಗಾತ್ರದ ಚಿಪ್ಸ್‌ಗಳಾಗಿಸಬೇಕು.ನಂತರ ಅವುಗಳನ್ನು ಸೂಕ್ಷ್ಮದರ್ಶಕದಡಿಯಲ್ಲಿ
ನೋಡಲು ಅನುವಾಗುವಂತೆ ಗಾಜಿನ ತುಂಡುಗಳ ನಡುವೆ ಇಡಬೇಕಾಗುತ್ತದೆ.ರಾಸಾಯಿನಿಕಗಳನ್ನು
ಹಾಕಿ,ಚಿತ್ರ ಹಿಡಿದು, ಇವುಗಳಲ್ಲಿರುವ ಡಿಎನ್‌ಎ ಯಾವುದು ಎನ್ನುವುದನ್ನು ಪತ್ತೆ
ಹಚ್ಚಬೇಕಾಗುತ್ತದೆ.ಹೀಗೆ ಪ್ರತಿ ಕೋಶದಲ್ಲಿರುವ ಡಿ ಎನ್ ಎ ಯಾವುದೆಂದು ತಿಳಿದರೆ, ಯಾವ
ಡಿಎನ್‌ಎ ಯಾವ ಕೆಲಸ ಮಾಡುತ್ತದೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ
ಲಭ್ಯವಾಗಬಹುದು.ಆದರೆ ಒಬ್ಬನ ಮಿದುಳು ಇನ್ನೊಬ್ಬನ ಮಿದುಳಿಗೆ ಹೋಲದಿರಬಹುದು. ಹಾಗಾಗಿ
ಒಂದು ಮಿದುಳಿನ ಡಿಎನ್‌ಎ ನಕ್ಷೆಯಿಂದ ಅಂತಿಮ ತೀರ್ಪು ನೀಡಲಸಾಧ್ಯ ಎನ್ನುವ ಅರಿವು
ಸಂಶೋಧಕರಿಗಿದೆ. ಅತ್ಯಾಧುನಿಕ ವ್ಯವಸ್ಥೆಗಳಿದ್ದರೂ, ಈ ಸಂಶೋಧನೆಯ ಫಲಿತಾಂಶಕ್ಕಾಗಿ
ಇನ್ನೂ ಮೂರು ವರ್ಷ ಕಾಯಬೇಕಾದೀತು.
-------------------------------------------------------------------------
ಭಗವದ್ಗೀತೆ ವ್ಯಾಖ್ಯಾನ ಉಚಿತ ಡೌನ್‌ಲೋಡ್‌ಗೆ ಲಭ್ಯ
ಮಹಾತ್ಮಾಗಾಂಧಿಯವರು
ವ್ಯಾಖ್ಯಾನಿಸಿದ ಭಗವದ್ಗೀತೆಯ ಆಡಿಯೋ ಮುದ್ರಿಕೆಯು ಮಾರ್ಚ್ ಮೂವತ್ತೊಂದರವರೆಗೆ
ಉಚಿತವಾಗಿ ಲಭ್ಯವಿದೆ. ಅಂತರ್ಜಾಲದ learnoutloud.com ತಾಣದಿಂದ ಇದರ ಕಡತ
ಇಳಿಸಿಕೊಳ್ಳಬಹುದು.ಪ್ರವಚನ ಇಂಗ್ಲಿಷ್ ಭಾಷೆಯದ್ದು. ಮೂರುಗಂಟೆಗೂ ಹೆಚ್ಚು ಹೊತ್ತಿನ
ಮುದ್ರಿಕೆ ಇಲ್ಲಿದೆ.
-------------------------------------------------------
"ಯಕ್ಷಪ್ರಶ್ನೆ"ಯಲ್ಲಿ ರಸಪ್ರಶ್ನೆ
ದೂರದರ್ಶನದ
ಚಂದನ ಚಾನೆಲ್ ಪ್ರಸಾರ ಮಾಡುವ ರಸಪ್ರಶ್ನೆ ಕಾರ್ಯಕ್ರಮ ಜನಪ್ರಿಯ
ಕಾರ್ಯಕ್ರಮಗಳಲ್ಲೊಂದು. ಅದೀಗ ಒಂದುಸಾವಿರದಿನ್ನೂರು ಕಂತುಗಳನ್ನು ಮುಗಿಸಿ
ಮುನ್ನಡೆಯುತ್ತಿದೆ. ಕಾರ್ಯಕ್ರಮ ನಿರ್ವಹಿಸುವ ಡಾ.ನಾ.ಸೋಮೇಶ್ವರ ಅವರಿಗೆ
ಕಾರ್ಯಕ್ರಮವನ್ನು ನೇರವಾಗಿ ನೋಡದವರಿಗೂ ಮತ್ತು ಆಸಕ್ತರಿಗೂ ಇದರ ಪ್ರಶ್ನೆಗಳನ್ನು
ಮುಟ್ಟಿಸಬೇಕೆನ್ನುವ ಬಯಕೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಕೇವಲ ಮೂರು
ಜನರಾದರೆ,ಇತರರೂ ಭಾಗವಹಿಸಲು ಅವಕಾಶ ಸಿಗಬೇಕೆಂಬ ಹಂಬಲವೂ ಇತ್ತು.ಅದಕ್ಕಾಗಿ ಅವರು
ಅಂತರ್ಜಾಲ ತಾಣ ಯಕ್ಷಪ್ರಶ್ನೆಯನ್ನು
http://chiyabgs.typepad.com/yakshaprashne/ ಆರಂಭಿಸಿದ್ದಾರೆ. ಇದರ ಮೂಲಕ
ನೋಂದಾಯಿಸಿಕೊಂಡರೆ ರಸಪ್ರಶ್ನೆಗಳು ರವಾನೆಯಾಗುತ್ತವೆ. ಸಂಪೂರ್ಣ ಸರಿಯುತ್ತರ ನೀಡಿದರೆ
ಪ್ರಮಾಣಪತ್ರವೂ ಸಿಗಲಿದೆಯಂತೆ.ಧರ್ಮರಾಯನಿಗೆ ಯಮಧರ್ಮ ಪ್ರಶ್ನೆಗಳನ್ನು ಕೇಳಿದುದೇ
ರಸಪ್ರಶ್ನೆಗಳ ಉಗಮವೆಂಬ ಅನಿಸಿಕೆಯೇ ಯಕ್ಷಪ್ರಶ್ನೆ ಎಂಬ ಹೆಸರಿನ ಆಯ್ಕೆಗೆ ಕಾರಣ.

 

Udayavani

Ashokworld