ಕನ್ನಡಮ್ಮನ ಭೂಲೋಕ ಭೇಟಿ - ಭಾಗ ಒಂದು
ಗೆಳೆಯರೇ,
ಪೂರ್ಣ ನಾಟಕವನ್ನು ಒಟ್ಟಿಗೇ ಪ್ರಕಟಿಸಿದಲ್ಲಿ ಬಹಳ ಲಂಬಿತವಾಗಬಹುದು ಎನ್ನುವ ಕಾರಣದಿಂದ ಮೂರು ಭಾಗಗಳಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.ಯಾರನ್ನೂ ಆಡಿಕೊಳ್ಳುವುದು ಇದರ ಉದ್ದೇಶವಲ್ಲ.ಕನ್ನಡನಾಡಿನಲ್ಲೇ ಕನ್ನಡಕ್ಕೆ ಒದಗಿರುವ ಸ್ಥಿತಿಯ ನೈಜ ಚಿತ್ರಣ ಮಾತ್ರ ಇದರ ಉದ್ದೇಶ.
********
ನವೆಂಬರ್ ತಿಂಗಳು ಹತ್ತಿರವಾದಂತೆ ಕನ್ನಡಮ್ಮನ ಕುತೂಹಲವೂ ಹೆಚ್ಚಾಗುತ್ತಿದೆ. ಅದೂ ಈ ಬಾರಿ ಸುವರ್ಣ ರಾಜ್ಯೋತ್ಸವ ಬೇರೆ. "ಒಮ್ಮೆ ನನ್ನ ಮನೆಯನ್ನು ಈ ಸಮಯದಲ್ಲಿ ನೋಡಿಕೊಂಡು ಬರುವೆ" ಅಂತ ನಿರ್ಧರಿಸಿ ಕನ್ನಡಮ್ಮ ಭೂಮಿಗೆ ಇಳಿಯುತ್ತಾಳೆ. ಸಮಯದ ಅಭಾವದಿಂದ ಬರೀ ಬೆಂಗಳೂರಿಗೆ ಮಾತ್ರ ತನ್ನ ಭೇಟಿಯನ್ನು ಸೀಮಿತಗೊಳಿಸುತ್ತಾಳೆ. ಹೀಗೆ ಬೆಂಗಳೂರಿಗೆ ಬಂದ ಕನ್ನಡಮ್ಮನ ಅನುಭವಗಳೇನು ಅಂತ ತಿಳಿಯಲು ಅವಳನ್ನೇ ಹಿಂಬಾಲಿಸೋಣ ಬನ್ನಿ.
ಸ್ಥಳ 1: ಯಾವುದೋ ಒಂದು ಬಸ್ ನಿಲ್ದಾಣ:
-------------------------------------------------------------------------------------
(ಕನ್ನಡಮ್ಮ "ಕನ್ನಡ ವಿಶ್ವವಿದ್ಯಾಲಯ"ಕ್ಕೆ ಭೇಟಿ ಕೊಡಬೇಕು, ಅಲ್ಲಿನ ಚಟುವಟಿಕೆಗಳನ್ನು ನೋಡಿ ಆನಂದಿಸಬೇಕು ಅಂತ ನಿರ್ಧರಿಸಿ ಬೆಂಗಳೂರಿಗೆ ಬರುತ್ತಾಳೆ. ಆದರೆ ಆಕೆಗೆ ಅದರ ವಿಳಾಸವಾಗಲೀ, ಹೋಗುವ ದಾರಿಯಾಗಲೀ ಗೊತ್ತಿಲ್ಲ. ಹಾಗಾಗಿ ಅಲ್ಲಿಯೇ ಇದ್ದ ಒಂದು ಬಸ್ ನಿಲ್ದಾಣದಲ್ಲಿ ಯಾರನ್ನಾದರೂ ಕೇಳೋಣ ಅಂತ ಬರುತ್ತಾಳೆ. ಆ ನಿಲ್ದಾಣದಲ್ಲಿ ಸುಮಾರು ನಾಲ್ಕೈದು ಜನ ಇಪ್ಪತ್ತೈದರಿಂದ-ಮುವ್ವತ್ತು ವರ್ಷ ವಯಸ್ಸಿನ ತರುಣ-ತರುಣಿಯರು ನಿಂತಿದ್ದಾರೆ. ಅವರ ವೇಷಭೂಷಣಗಳಿಂದ ಅವರು ಯಾವುದೋ ಪ್ರತಿಷ್ಠಿತ ಸಂಸ್ಥೆಯ ಉದ್ಯೋಗಿಗಳು ಅಂತ ಅನ್ನಿಸುತ್ತದೆ)
ಕನ್ನಡಮ್ಮ (ಅಮ್ಮ); ಏನಪ್ಪಾ, ಸ್ವಲ್ಪ ಕನ್ನಡ ವಿಶ್ವವಿದ್ಯಾಲಯಕ್ಕೆ ಹೋಗೋ ದಾರಿ ಹೇಳುತ್ತೀರಾ?
ಒಬ್ಬ ತರುಣ: ವಾಟ್? ವಾಟ್ ಡು ಯು ವಾಂಟ್? ಐ ಕಾಂಟ್ ಅಂಡರ್‌ಸ್ಟ್ಯಾಂಡ್ ಕನ್ನಡ.
ಎರಡನೇ ತರುಣ: ಅರೇ ಯಾರ್! ಯೇ ಕ್ಯಾ ಹೋ ರಹಾ ಹೈ ಬ್ಯಾಂಗಲೋರ್ ಮೆ..ಸುಬಹ್ ಸುಬಹ್ ಲೋಗ್ ಆಕೆ ಕನ್ನಡಾಮೆ ಸವಾಲ್ ಪೂಛ್‌ತೇ ಹೈ..
ಅಮ್ಮ: ಏನಪ್ಪ, ನಿಮಗೆ ಯಾರಿಗೂ ಕನ್ನಡ ಬರೋದಿಲ್ವೇ?
ಇನ್ನೊಬ್ಬಳು ಯುವತಿ: ಆಂಟೀ, ನಾನು ಕನ್ನಡದವಳೇ. ಬಟ್ ಯು ನೋ, ಬ್ಯಾಂಗ್‌ಲೋರಲ್ಲಿ ಈಗ ಕನ್ನಡ ಮಾತಾಡೋದು ಔಟ್‌ಡೇಟೆಡ್....ನೋಬಡಿ ಯೂಸಸ್ ಕನ್ನಡ.
ಅಮ್ಮ: ಅಲ್ಲಮ್ಮ, ಅದೇನು ಹೇಳ್ತೀಯೋ ಗೊತ್ತಾಗುತ್ತಿಲ್ಲ. ನೀನೂ ಕನ್ನಡದವಳೇ ಅಂದೆ. ಸ್ವಲ್ಪ ಕನ್ನಡದಲ್ಲಿ ಮಾತಾಡಬಾರದೇನಮ್ಮ...
ಅದೇ ಯುವತಿ: ಅಯ್ಯೋ ಆಂಟೀ, ಹೌ ಕೆನ್ ಐ (ಒಂದು ರೀತಿಯ ಅಸಹಾಯಕತೆ ವ್ಯಕ್ತಪಡಿಸುತ್ತಾ)....ನಂಗೆ ಅಷ್ಟು ಕನ್ನಡ ಬರೋದಿಲ್ಲ...ಸಾರಿ..
ಮತ್ತೊಬ್ಬ ಯುವಕ: (ಆ ಯುವತಿಗೆ) ಏ ಬಿಡೇ ನೀನೊಳ್ಳೆ, ವೈ ಆರ್ ಯು ವೇಸ್ಟಿಂಗ್ ಟೈಂ ಇನ್ ದಿಸ್...(ಅಮ್ಮನ ಕಡೆ ತಿರುಗಿ) ನೋಡಿ ಆಂಟೀ, ಪ್ಲೀಸ್ ನಮ್ ಟೈಮ್ ವೇಸ್ಟ್ ಮಾಡ್‌ಬೇಡಿ..ಓಕೆ..ಯು ಸೀ, ಅಲ್ಲಿ ಒಬ್ಬರು ಹೋಗುತ್ತಿದ್ದಾರಲ್ಲ, ದೊಡ್ಡವರು..ಪ್ಲೀಸ್ ಆಸ್ಕ್ ಹಿಮ್..ಐ ಮೀನ್ ಅವರನ್ನು ಕೇಳಿ..ಹಿ ಶುಡ್ ಬಿ ನೋಯಿಂಗ್ ಕನ್ನಡ...
ಅಮ್ಮ: ಆದರೆ ನೀವಿಬ್ಬರೂ ಕನ್ನಡದವರಾಗಿ ಕನ್ನಡದಲ್ಲಿ ಮಾತಾಡೋಕೆ ಬರೋಲ್ಲ ಅಂತ ಹೇಳಿಕೊಳ್ಳುತ್ತೀರಲ್ಲ, ಇದು ತಪ್ಪಲ್ವಾ?
ಅದೇ ಯುವಕ: ಏನು ಮಾತು ಆಂಟಿ ಇದು? ನಿಮ್ದು ಓಲ್ಡ್ ಮೆಂಟಾಲಿಟಿ..ಈಗಿನ ಗ್ಲೋಬಲ್ ಎಕಾನಮಿಯಲ್ಲಿ ಇದು ತುಂಬಾ ರೀಜನಲ್ ಆಗುತ್ತೆ...
ಅಮ್ಮ: (ಅವನು ಹೇಳಿದ್ದು ಗೊತ್ತಾಗದಿದ್ದರೂ, ಅವನ ಮುಖಭಾವದಿಂದಲೇ ಅವನ ಭಾವನೆ ತಿಳಿದು) ತುಂಬಾ ಧನ್ಯವಾದಾಪ್ಪ..ಬಹಳ ಸಂತೋಷ ಆಯಿತು..
(ಕನ್ನಡಮ್ಮ ಕೂಡಲೇ ದೂರದಲ್ಲಿ ಹೋಗುತ್ತಿದ್ದ ವ್ಯಕ್ತಿಯ ಬಳಿ ಹೋಗಿ ಅವರಿಂದ ದಾರಿ ತಿಳಿದು, ಕನ್ನಡ ವಿಶ್ವವಿದ್ಯಾಲಯ ತಲುಪುತ್ತಾಳೆ)
...... ಸಶೇಷ.........