ಕನ್ನಡ-ಕಸ್ತೂರಿ
ಭುವನೇಶ್ವರಿಯೇ ಎನ್ನಮ್ಮ ಕರುನಾಡ ಸಾಮ್ರಾಜ್ಞ
ಭರತಾಂಬೆಯ ಕುವರಿ, ಕನ್ನಡಭಾಷೆಯಾ ಒಡತಿ
ಬರೆಯಲು ಬಹುಚೆಂದ, ದುಂಡು ದುಂಡಾಗಿ
ಬೇರಾರಿಗೂ ಇಲ್ಲ ಈ ಅಂದಚೆಂದವು! ಶಿವಪ್ರಿಯ.
ಸಂಸ್ಕೃತವು ಇವರಮ್ಮ, ಸಂಸ್ಕೃತಿಯು ಇದೆಯಮ್ಮ
ಸನಾತನ ಧರ್ಮದ ನಲೆಯಿಹುದು ನೆಲದಲ್ಲಿ
ಸಾಹಿತ್ಯಲೋಕದಲಿ ಸಾಧಕರು ಬಹುಮಂದಿ
ಸಂಕ್ಷಿಪ್ತವಾಗಿ ಬರಯಲಿರುವೆ ಓದಿ ಹೇಳಿ!ಶಿವಪ್ರಿಯ
ಭಾಷೆಗುಂಟು ಎರಡುಸಾವಿರ ವರ್ಷಗಳ ಇತಿಹಾಸ
ಭಾಷೆಯಲಿಹುದು ಐವತ್ತು ಸುಂದರ ಅಕ್ಷರಗಳು
ಭಾವಕೆ ಷೋಡಶ ಸ್ವರಗಳು, ಹ್ರಸ್ವ, ಧೀರ್ಘಗಳ ಸಹಿತ
ಬೇಕಲ್ಲವೇ ಅನುಸ್ವಾರವು ವಿಸರ್ಗವೂ! ಶಿವಪ್ರಿಯ
ಮೂವತ್ನಾಲ್ಕು ವ್ಯಂಜನಗಳೂ ಸ್ವರಸೇರಿ ಬಲಿಷ್ಠವಾಗಿ
ಮೂಡಿತು ಕಾಗುಣಿತವು, ಮಾಡಿತಿದು ಬಹುಮೋಡಿ
ಮೂಡಲು ಭಾಷಾಪ್ರಭೆಯು, ಆಕರ್ಷಿಸಿತೆಲ್ಲೆರನೂ
ಮಾರ್ಧನಿಸಿತು ಇದರಾಧ್ವನಿ ದೇಶದಾದ್ಯಂತ!ಶಿವಪ್ರಿಯ
ಅರಿಯಲು ಸುಂದರವು ಸ್ವರ, ವ್ಯಂಜನದಾ ಸಂಧಿಗಳನು
ಆಗಮವು, ಆದೇಶದಲಿ, ಲೋಪವಿಲ್ಲದೆ, ವೃಧ್ಧಿಯು!
ಅನುನಾಸಿಕ, ಜತ್ವ, ಶ್ಚುತ್ವ, ಯಣ್, ಸವರ್ಣ, ಗುಣವು!
ಅಭ್ಯಯಿಸಲು ತಿಳಿವುದು ಇದರಾ ಗಮ್ಮತ್ತು!ಶಿವಪ್ರಿಯ
ಅದೇನು ಮೋಡಿಯಿರುವುದೂ ಆ ಸಮಾಸಗಳಲಿ
ಅಂಶಿ, ಗಮಕ, ಬಹುವ್ರೀಹಿ, ದ್ವಿಗು, ದ್ವಂದ್ವ, ಕ್ರಿಯೆಯಲಿ
ಅರಿಯಲು, ತತ್ಪುರುಷದಲಿ, ಕರ್ಮಧಾರೆಯಾಗಿ
ಅಭ್ಯಯಿಸೆ ತಿಳಿವುದಿದರಾ ಒಳಗುಟ್ಟು!ಶಿವಪ್ರಿಯ
ಅಲಂಕಾರಪ್ರಿಯೆ ಎನ್ನಮ್ಮ ಆಕೆಯ ತಾಯಿಯಂತೆಯೇ
ಅರಳಿದಳು ಕಾವ್ಯಪ್ರಪಂಚದಿ ಷಟ್ಪದಿಯ ರೂಪದೋಳು
ಆ ಶರ, ಕುಸುಮವು, ಭೋಗವಾಯ್ತೇ ಭಾಮಿನಿಯಲಿ,
ಆ ವಾರ್ಧಕದಿ, ಪರಿವರ್ತಿನವಾಗಿಹಳೋ! ಶಿವಪ್ರಿಯ
ಭಾಷ್ಯಕೆ ಮೆರುಗು ಬರುವುದು ಬಳಸುವ ಅಲಂಕಾರದಿ
ಭಾವಪ್ರಧಾನ್ಯತೆಯೇ ಮುಖ್ಯವು ಎಲ್ಲಾ ವೃತ್ತಗಳಲೂ
ಭಾಷೆಯೇ ಬೆಳಸಿತು ಬಹುಮಂದಿ ಭಾಷಾಸಾಧಕರನು
ಬೇರೆಲ್ಲುಂಟೇನು? ಇಂತಹ ಸುಜ್ಞಾನಪೀಠವು!ಶಿವಪ್ರಿಯ
ಆದಿಕವಿ ಪಂಪನಿಂದ ಆಧುನಿಕ ಕವಿಗಳಾದಿಯಾಗಿ
ಅನವರತ ದುಡಿಯಲು ಕನ್ನಡಾಂಬೆಯ ಮಡಿಲೋಳು
ಅರಳಿತು ಎಮ್ಮ ಭಾಷೆಯು ಚಂದನವನದಾಚೆಗೂ
ಅಡರಿಸಿತು ಲೋಕದಿ ಕಸ್ತೂರಿಯಾ ಕಂಪು ! ಶಿವಪ್ರಿಯ
ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಬಾಳ್ಗೆ! ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
-ಪದ್ಮ
ಚಿತ್ರ: ಇಂಟರ್ನೆಟ್ ಕೃಪೆ