ಕನ್ನಡ ಪತ್ರಿಕಾ ಲೋಕ (ಭಾಗ ೧೭೭) - ಸುಜಾತ ಸಂಚಿಕೆ

ಕನ್ನಡ ಪತ್ರಿಕಾ ಲೋಕ (ಭಾಗ ೧೭೭) - ಸುಜಾತ ಸಂಚಿಕೆ

ನೆರಿಯ ಹೆಬ್ಬಾರರ "ಸುಜಾತ ಸಂಚಿಕೆ"

ನೆರಿಯ ಹೆಬ್ಬಾರರು ಪ್ರಗತಿಪರ ರೈತರಿಗಾಗಿ ಪ್ರಕಟಿಸುತ್ತಿದ್ದ ಮಾಸಪತ್ರಿಕೆ "ಸುಜಾತ ಸಂಚಿಕೆ". 1994ರ ಅಕ್ಟೋಬರ್ ತಿಂಗಳಲ್ಲಿ ಆರಂಭವಾದ "ಸುಜಾತ’, ಎನ್ನುವ ಪತ್ರಿಕೆ ನಂತರ ಶೀರ್ಷಿಕೆಯ ತಾಂತ್ರಿಕ ಕಾರಣಗಳಿಂದ ‘ಸುಜಾತ ಸಂಚಿಕೆ' ಎನ್ನುವ ಶಿರೋನಾಮೆಯಲ್ಲಿ ಸುದೀರ್ಘ 25ಕ್ಕೂ ಅಧಿಕ ವರ್ಷಗಳ ಕಾಲ ನಿರಂತರವಾಗಿ ಪ್ರಕಟಗೊಂಡು ಆರ್ಥಿಕ ಸಮಸ್ಯೆ ಮತ್ತು ಕೊರೋನಾ ಲಾಕ್ ಡೌನ್ ನ ಕಾರಣದಿಂದ ಸ್ಥಗಿತಗೊಂಡ ಪತ್ರಿಕೆಯಾಗಿದೆ.

ಎನ್. ರಾಘವ ಹೆಬ್ಬಾರ್, ಬಿ.ಎಸ್.ಸಿ (ಅಗ್ರಿ) ಅವರು ಪ್ರಕಾಶಕರು ಮತ್ತು ಮುದ್ರಕರಾಗಿದ್ದರು. ಮಂಗಳೂರು ನಗರದಲ್ಲಿ ಇ. ಎನ್. ಟಿ. ಸರ್ಜನ್ ಆಗಿರುವ ಡಾ. ಜಿ. ಕೆ. ಹೆಬ್ಬಾರ್ ಸಂಪಾದಕರಾಗಿದ್ದರು. ಆರಂಭದಲ್ಲಿ ಸಹ ಸಂಪಾದಕರಾಗಿದ್ದ ರಾಧಾಕೃಷ್ಣ ಹೊಳ್ಳ ಅವರು ಬಳಿಕ ನಿರ್ವಾಹಕ ಸಂಪಾದಕರಾಗಿ ಸೇವೆ ಸಲ್ಲಿದ್ದರು. ಕೆ. ಪಿ. ಅಶ್ವಿನ್ ರಾವ್ ಪದವಿನಂಗಡಿ ಪತ್ರಿಕೆಯ ವ್ಯವಸ್ಥಾಪಕರಾಗಿದ್ದರು. ಗಣೇಶ್ ಎನ್. ಪ್ರಸರಣ ವ್ಯವಸ್ಥಾಪಕರಾಗಿದ್ದರು.

"ಸುಜಾತ ಸಂಚಿಕೆ"ಯನ್ನು ಸುಧೀರ್ಘ 22 ವರ್ಷಗಳ ಕಾಲ ನಿರಂತರವಾಗಿ ನಡೆಸಿಕೊಂಡು ಬಂದವರು ನೆರಿಯ ರಾಘವ ಹೆಬ್ಬಾರ್ ಅವರು. ಕೃಷಿಕ ಸಮುದಾಯಕ್ಕೆ ಕೃಷಿಯಲ್ಲಾಗುತ್ತಿರುವ ಹೊಸ ಹೊಸ ಸಂಶೋಧನೆಗಳು, ಬದಲಾವಣೆಗಳು ಹಾಗೂ ವೈಜ್ಞಾನಿಕ ಕೃಷಿಯ ಬಗ್ಗೆ ಮಾಹಿತಿಗಳನ್ನು ತಲುಪಿಸಬೇಕೆಂಬ ಹಂಬಲದಲ್ಲಿ ರಾಘವ ಹೆಬ್ಬಾರರು ಪತ್ರಿಕೆ ಆರಂಭಿಸಿದ್ದರು. ಇವರು 2016ರ ಡಿಸೆಂಬರ್13ರಂದು ನಿಧನರಾದರು. ರಾಘವ ಹೆಬ್ಬಾರರ ನಿಧನದ ನಂತರ ಪತ್ರಿಕೆಯ ಸಂಪಾದಕರಾಗಿದ್ದ, ಇವರ ಪುತ್ರರಾದ ಡಾ. ಜಿ. ಕೆ. ಹೆಬ್ಬಾರ್ (ಗೋಪಾಲ ಕೃಷ್ಣ ಹೆಬ್ಬಾರ್) ಪ್ರಕಾಶಕ ಹಾಗೂ ಮಾಲೀಕರಾಗಿ ಪತ್ರಿಕೆಯನ್ನು ಮುನ್ನಡೆಸಿದರು.

ಸುಜಾತ ಸಂಚಿಕೆಯು ಆರಂಭದಲ್ಲಿ ದಿಗಂತ ಮುದ್ರಣದಲ್ಲಿ, ನಡುವೆ ಮನೋರಮಾ ಅಫ್ ಸೆಟ್ಸ್ ನಲ್ಲಿ, ನಂತರ ಮತ್ತೆ ದಿಗಂತ ಮುದ್ರಣದಲ್ಲಿ ಮುದ್ರಣವಾಗುತ್ತಿತ್ತು. ಪತ್ರಿಕೆಯು ಪ್ರಾರಂಭದಲ್ಲಿ ಮಂಗಳೂರಿನ ಕದ್ರಿ-ಶಿವಭಾಗ್ ನಲ್ಲಿ ಕಚೇರಿಯನ್ನು ಹೊಂದಿದ್ದು ನಂತರ ಬಿಜೈ ಕಾಪಿಕಾಡ್ ನ ಸುಪ್ರಭಾತ ಕಟ್ಟಡದಲ್ಲಿ ಸುಜಾತ ಸಂಚಿಕೆ ಮಾಸಪತ್ರಿಕೆಯ ಕಚೇರಿಯಿತ್ತು. 24 ಪುಟಗಳ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ಆರಂಭದಲ್ಲಿ 2 ರೂಪಾಯಿ ಆಗಿದ್ದು (ವಾರ್ಷಿಕ ಚಂದಾ 24.00 ರೂ.), ನಂತರದ ದಿನಗಳಲ್ಲಿ ಪುಟಗಳು ಹೆಚ್ಚಾಗಿ ಬೆಲೆಯೂ 4, 5, 10, 15 ರೂ. ಹೀಗೆ ಹೆಚ್ಚಾಗುತ್ತಾ ಸಾಗಿ ಮುದ್ರಣ ಸ್ಥಗಿತಗೊಳ್ಳುವ ಸಮಯದಲ್ಲಿ ಬಿಡಿ ಪ್ರತಿ ಬೆಲೆ 50.೦೦ ರೂಪಾಯಿಯಿತ್ತು (ವಾರ್ಷಿಕ ಚಂದಾ 600 ರೂ.). ಪತ್ರಿಕೆ ಅತ್ಯುತ್ತಮ ದರ್ಜೆಯ ಕಾಗದದ ಸಹಿತ ಬಹುವರ್ಣಗಳಲ್ಲಿ ಮುದ್ರಣವಾಗಿ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿತ್ತು.

ಕೃಷಿರಂಗಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಲೇಖನಗಳೂ, ಸಂಶೋಧನಾ ಬರಹಗಳೂ ಸುಜಾತ ಸಂಚಿಕೆಯಲ್ಲಿ ಪ್ರಕಟವಾಗುತ್ತಿತ್ತು. ಸಂಪಾದಕೀಯ, ಸುದ್ಧಿ ಸ್ವಾರಸ್ಯ, ಪ್ರಯೋಗಗಳಿಗಾಗಿ, ಹೂತೋಟ, ಹೈನುಗಾರಿಕೆ, ನಿಮ್ಮ ಮನೆ - ನಿಮ್ಮ ಹಿತ್ತಲು, ಜನಜಾಗೃತಿ, ಮಾರುಕಟ್ಟೆ, ತಿಂಗಳ ಕೃಷಿ ಕೆಲಸ, ಓದುಗರ ಅಭಿಪ್ರಾಯಗಳು, ಪಾಕ ಸಲಹೆ, ನಮ್ಮ ಪರಂಪರೆ, ಸಸ್ಯ ಶ್ಯಾಮಲಾ ಇತ್ಯಾದಿ ಖಾಯಂ ಅಂಕಣಗಳೂ ಇರುತ್ತಿತ್ತು. ಕೃಷಿ ಸಂಬಂಧಿ ಸುದ್ಧಿಗಳೂ ಬರುತ್ತಿತ್ತು. ಪ್ರತಿಯೊಬ್ಬ ಕೃಷಿಕರೂ, ರೈತರೂ ಓದಿ ಸಂಗ್ರಹಿಸಿ ಇಡಬೇಕಾದ ಪತ್ರಿಕೆಯಾಗಿ ಮೂಡಿಬರುತ್ತಿತ್ತು.

ರಾಧಾಕೃಷ್ಣ ಹೊಳ್ಳ, ಅಡ್ಡೂರು ಕೃಷ್ಣ ರಾವ್, ಎಸ್. ಎಸ್. ಹಿರೇಮಠ, ಬಾಲಚಂದ್ರನ್ ವಿ. ಸಿ. ಮರ್ಧಾಳ, ರಾಜೇಶ್ವರಿ ಕೆ. ಆರ್., ಡಾ. ಮಮತಲಕ್ಷ್ಮಿ ಎನ್., ವಿ. ನರಸಿಂಹಮೂರ್ತಿ ಅಶೀಸರ ಶಿರಸಿ, ಪ್ರೊ. ವಿಜಯಕುಮಾರ ಗಿಡ್ನವರ ಧಾರವಾಡ, ಗಣೇಶ್ ಎನ್. ನರಿಕೊಂಬು, ರಾಜೀವ್ ಮಾಗಲ್ ಸಕಲೇಶಪುರ, ಎಸ್. ಎಸ್. ಅಡಿವೇರ ಈರಮ್ಮ ವಿ. ಗೌಡರ, ರೂಪಾ ಯು., ಧಾರವಾಡ, ಕವಿತಾ ಪಾಟೀಲ, ಬಿ. ಆರ್. ಪಾಟೀಲ, ಸುರೇಶ ಘಟನಟ್ಟಿ, ಡಾ. ಶಿವಪುತ್ರ ಕೋಟೂರ ಹೆಸರಘಟ್ಟ, ಗೋಪಾಲಕೃಷ್ಣ ಕೆ. ಎಲ್. ಶೃಂಗೇರಿ, ಎದುರ್ಕಳ ಸುಬ್ಬಣ್ಣ ಭಟ್ ನೆಲ್ಯಾಡಿ, ಡಾ. ಎಸ್. ಎಸ್. ಹಿರೇಮಠ, ಮಹಬೂಬ, ಮಹಮದ ತೌಫೀಕ ಹುಸೇನ ನಾಯಕ, ಶಶಿಕಾಂತ ಏವೂರ್, ಸಮಿಯುದ್ಧೀನ ಅರಭಾವಿ, ವಿ. ಕೆ. ಹರ್ಡೀಕರ್ ಹರಂದೂರು, ಲಕ್ಷ್ಮೀಶ್, ಡಾ. ಗೋವಿಂದ ಭಟ್ಟ ಯಲ್ಲಾಪುರ, ಕೆ. ವಿ. ಪ್ರಕಾಶ್ ಬೆಂಗಳೂರು, ಡಾ. ಡಿ. ಎಸ್. ಅಶ್ವಥ್ಥ ನಾರಾಯಣ ರಾಯಚೂರು, ಡಾ. ಜಿ. ಶರಶ್ಚಂದ್ರ ರಾನಡೆ, ಎಂ. ದಿನೇಶ್ ನಾಯಕ್ ವಿಟ್ಲ, ಡಾ. ಕೃತಿಕಾ ಪಿ. ಆರ್., ಡಾ. ಪಿ. ನಾಗರಾಜು, ಮಹೇಶ್ ಕುಮಾರ್, ಹೆಚ್. ವಿ. ದಿವ್ಯಾ ಸುತ್ತೂರು, ಅನಿಲ ದೇವ ದಶವಂತ, ರವಿ ಕಿರಣ್ ಧಾರವಾಡ, ಕು. ಕಾವ್ಯಶ್ರೀ ಎಂ. ಸಿ., ಡಾ. ಹನುಮಂತಪ್ಪ ಎಂ., ಜಯಪ್ರಕಾಶ್ ಎಸ್. ಎಂ., ಡಾ. ಸುಧೀರ್ ಕೆ. ಕಾಮತ್ ಬ್ರಹ್ಮಾವರ, ಅಶ್ವಿನ್, ಡಾ. ಎಸ್. ಯು. ಪಾಟೀಲ್ ಬ್ರಹ್ಮಾವರ, ಜಿ. ಎಂ‌. ಹೆಗಡೆ ಭೈರುಂಬೆ, ಡಾ. ಎಲ್. ಎ. ದೀಕ್ಷಿತ್, ರೋಹಿಣಿ ಶರ್ಮಾ ಸಾಗರ, ಡಾ. ಪ್ರಕಾಶಚಂದ್ರ ತ್ರಿಪಾಠಿ, ಜಿ. ಕರುಣಾಕರನ್ ಚೆಟ್ಟಳ್ಳಿ, ಗಣಪತಿ ಹೆಗಡೆ ಮೂಲೆತೋಟ ಸಿದ್ಧಾಪುರ, ಅಶೋಕ ಎಂ., ವೀರಣ್ಣ ಕೆ. ಎಚ್., ಜ್ಯೋತಿ ರಾಠೋಡ್ ನವಿಲೆ, ಸುಮಂಗಲಾ ಬಾದಾಮಿ, ಈರಮ್ಮ ಗೌಡರ, ಉಮಾ ಬಳ್ಳೊಳ್ಳಿ ಧಾರವಾಡ, ಗಣಪತಿ ಶಿರಳಗಿ ಸಾಗರ, ಕನಕಪ್ಪ ಮೆಳವಾಡಿ, ನಿರಂಜನ ವಾನಳ್ಳಿ, ಜೆ. ಪ.  ಪಂಪನಗೌಡ, ಸನತ್ ಕುಮಾರ್, ಅಮ್ರಿನ್ ತಾಜ್, ಸಂಗೀತ ಸಿ. ಜಿ. ಮಂಡ್ಯ ಮೊದಲಾದವರ ಕೃಷಿ ಸಂಬಂಧಿತವಾದ ಅಧ್ಯಯನ, ಸಂಶೋಧನ, ಅನುಭವಪೂರ್ಣ ಬರಹಗಳು "ಸುಜಾತ ಸಂಚಿಕೆ" ಯಲ್ಲಿ ಪ್ರಕಟವಾಗುತ್ತಿದ್ದುವು.

ಪತ್ರಿಕೆಯ ಮುದ್ರಣ ಕಾಗದದಲ್ಲಾಗುತ್ತಿದ್ದ ಅನಿಯಮಿತವಾದ ಹೆಚ್ಚಳದ ಕಾರಣದಿಂದ ಮೊದಲೇ ತೆವಳುತ್ತಾ ಸಾಗುತ್ತಿದ್ದ ಪತ್ರಿಕೆ ಅಕ್ಟೋಬರ್ 2019 ರ ಸಂಚಿಕೆಯೊಂದಿಗೆ ಸ್ಥಗಿತಗೊಂಡು, ನಂತರದ ದಿನಗಳಲ್ಲಿ ಕಂಡು ಬಂದ ಕೋವಿಡ್ ಲಾಕ್ ಡೌನ್ ಸಮಸ್ಯೆಯಿಂದ ಪತ್ರಿಕೆ ಶಾಶ್ವತವಾಗಿ ನಿಂತು ಹೋಯಿತು. ಸೀಮಿತ ಓದುಗ ವರ್ಗಕ್ಕೆ ಸಂಬಂಧ ಪಟ್ಟ ಕೃಷಿ ಪತ್ರಿಕೆಯೊಂದು ಬೆರಳೆಣಿಕೆಯಷ್ಟು ಸಿಬ್ಬಂದಿಯನ್ನು ಬಳಸಿಕೊಂಡು ೨೫ ಕ್ಕೂ ಹೆಚ್ಚು ವರ್ಷಗಳ ಕಾಲ ಪ್ರಕಟವಾದದ್ದು ಒಂದು ದಾಖಲೆಯೇ ಸರಿ. 

~ ಶ್ರೀರಾಮ ದಿವಾಣ