ಕರುನಾಡಿನ ಶ್ರೇಷ್ಠ ಸಾಹಿತಿ ಗೊ ರು ಚನ್ನಬಸಪ್ಪ (ಭಾಗ 2)

ಕರುನಾಡಿನ ಶ್ರೇಷ್ಠ ಸಾಹಿತಿ ಗೊ ರು ಚನ್ನಬಸಪ್ಪ (ಭಾಗ 2)

ಗಾಂಧಿ ಚಿಂತಕರು ಚನ್ನಬಸಪ್ಪನವರು: ಅಂದು ಗಾಂಧೀಜಿ ಕೊಟ್ಟ ಗ್ರಾಮೋದ್ಧಾರದ ಕರೆಯಲ್ಲಿ ಗ್ರಾಮ ಭಾರತದಲ್ಲಿ ನೈತಿಕ ಬಲ ಮತ್ತು ಆತ್ಮವಿಶ್ವಾಸವನ್ನು ಹುಟ್ಟಿಸುವ ಒಂದು ಆಶಯವಿತ್ತು. ಸ್ವಾತಂತ್ರ್ಯಾನಂತರ ಗ್ರಾಮೀಣಾಭಿವೃದ್ಧಿಯ ಕೆಲಸಗಳೇನೋ ಆಗುತ್ತಿವೆ. ಆದರೆ ಗ್ರಾಮೀಣರ ನೈತಿಕ ಬಲ ಮತ್ತು ಆತ್ಮವಿಶ್ವಾಸಗಳು ನೆಲಕಚ್ಚಿ ಹೋಗಿವೆ. ಇದು ನಿಜಕ್ಕೂ ಒಂದು ನಿರಾಸೆಯ ಬೆಳವಣಿಗೆ. ನಮ್ಮ ಪ್ರಜಾಪ್ರಭುತ್ವದ ನೆಲಗಟ್ಟೇ ಹಳ್ಳಿಗಳು. ಆದರೆ ಆ ನೆಲಗಟ್ಟನ್ನು ಭದ್ರಪಡಿಸುವ ಪ್ರಾಮಾಣಿಕ ಪ್ರಯತ್ನ ಸ್ವಾತಂತ್ರ್ಯಾನಂತರ ಅಧಿಕಾರಕ್ಕೆ ಬಂದ ರಾಜಕೀಯ ವ್ಯವಸ್ಥೆಗಳಿಂದ ನಡೆಯಲಿಲ್ಲವೆಂದೇ ಅನಿಸುತ್ತದೆ. ನಮ್ಮ ಹಳ್ಳಿಗಳ ಕ್ರಿಯಾಶೀಲ ಬದುಕನ್ನು ಹಾಳುಮಾಡಿರುವ, ಅಲ್ಲಿನ ಜನರ ಪರಂಪರೆಯ ಜೀವನ ಸಂಸ್ಕೃತಿಯನ್ನು ವಿಕೃತಗೊಳಿಸಿರುವ ಒಂದು ದೊಡ್ಡ ಅನಿಷ್ಟವೆಂದರೆ ಅಲ್ಲಿ ಪ್ರವೇಶಿಸುವ ಅಪಕ್ವ ರಾಜಕೀಯ. ಈ ಕಳವಳಕಾರಿ ಬೆಳವಣಿಗೆಯ ಬಗೆಗೆ ಪ್ರಜ್ಞಾವಂತರೆಲ್ಲ ಗಂಭೀರವಾಗಿ ಆಲೋಚಿಸಬೇಕು.” ಎನ್ನುತ್ತಾರೆ ಗೊ. ರು. ಚನ್ನಬಸಪ್ಪನವರು.

ಅಂತೆಯೇ ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿಯ ಉನ್ನತಿಗಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಗೊ ರು ಚ ಕೆಲಸ ಮಾಡುತ್ತಿದ್ದಾರೆ. ಗಾಂಧೀಜಿ ಕಂಡ ಕನಸು ಈಡೇರಿಸುವ ದಿಸೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಗ್ರಾಮೀಣಾಭಿವೃದ್ಧಿಗಾಗಿ ಈ ಇಳಿವಯಸ್ಸಿನಲ್ಲಿಯೂ ದುಡಿಯುತ್ತಿದ್ದಾರೆ. ಬಸವಾದಿ ಪ್ರಮಥರ ಚಿಂತನೆ : ಬಸವಣ್ಣನವರು ಸೇರಿದಂತೆ ವಿಶ್ವ ದಾರ್ಶನಿಕರು ಕೇವಲ ಇಂದು ಭಾಷಣದ ವಸ್ತುಗಳಾಗಿದ್ದಾರೆ ಹೊರತು ಆಚರಣೆಯಲಿಲ್ಲ. ಮೌಲ್ಯಧಾರಿತ ಆಲೋಚನೆಗಳು ಮಾಯವಾಗಿ ಸಮಾಜ ತಪ್ಪು ದಾರಿಗೆ ಹೋಗುತ್ತಿದೆ ಎನ್ನುವ ಆತಂಕ ಗೊ ರು ಚ ರವರಿಗೆ ಎಲ್ಲೂ ಒಂದು ಕಡೆ ಕಾಡುತ್ತಿದೆ. ಇದಕ್ಕೆ ತಾರ್ತಿಕ ಅಂತ್ಯ ಹಾಡಲು ಗೊ ರು ಚನ್ನಬಸಪ್ಪ ಶರಣರು ನವ ಸಮಾಜ ನಿರ್ಮಾಣದ ಬೆಳವಣಿಗೆಗಾಗಿ ಸದಾ ಬಸವಾದಿ ಪ್ರಮಥರ ತತ್ವ  ಚಿಂತನೆ ಮಾಡುತ್ತಿದ್ದಾರೆ.  ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಸಾಮಾನ್ಯರಿಗೆ ಶರಣರ ಚಿಂತನೆಗಳನ್ನು ಉಣಬಡಿಸುವ ಕೆಲಸ ಮಾಡುತ್ತಿದ್ದಾರೆ. ದತ್ತಿನಿಧಿ ಕಾರ್ಯಕ್ರಮಗಳ ಮೂಲಕ ಶರಣರ ಸಂದೇಶಗಳನ್ನು ದೇಶ ವಿದೇಶಗಳಲ್ಲಿ ಬಿತ್ತುತ್ತಿದ್ದಾರೆ.

ಹೀಗೆ ಗೊ ರು ಚನ್ನಬಸಪ್ಪ ಶರಣರು ವಿಚಾರ ಕ್ರಾಂತಿಗೆ ಮುನ್ನುಡಿ ಬರೆಯುತ್ತಿದ್ದಾರೆ.ಗೊಡ್ಡು ಸಂಪ್ರದಾಯಗಳ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದಾರೆ, ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ಸಮರ ಸಾರಿದ್ದಾರೆ. ಅಸ್ಪೃಶ್ಯತೆಯಂಥ ಸಾಮಾಜಿಕ ಪಿಡುಗಿನ ವಿರುದ್ಧ  ಸದಾ ದ್ವನಿ ಎತ್ತುತ್ತಿದ್ದಾರೆ. ಜನರಲ್ಲಿ ವೈಜ್ಞಾನಿಕ  - ವೈಚಾರಿಕ  ತಿಳುವಳಿಕೆಗಳ ಬಗ್ಗೆ ಅರಿವು ಮೂಡಿಸಲು ಸತತವಾಗಿ ಶ್ರಮಿಸುತ್ತಿದ್ದಾರೆ. ನಿರ್ಲಿಕ್ಷಿತ ಸಮುದಾಯಕ್ಕೆ ಆಸರೆಯಾಗಿ ದುಡಿಯುವ ಕೆಲಸ ಮಾಡುತ್ತಿದ್ದಾರೆ. ವಚನ ಚಳವಳಿ ಆಶಯಗಳನ್ನು ಹೊತ್ತು  ಜನಸಾಮಾನ್ಯರನ್ನು  ಗೊಡ್ಡು ಸಂಪ್ರದಾಯದ ಕುರಿತು ಎಚ್ಚರಿಸಿ,ಮೌಲ್ಯಯುತ ಆಚರಣೆಗಳನ್ನು ಆಚರಿಸುವಂತೆ ತಿಳಿಸುತ್ತಿದ್ದಾರೆ. ಇನ್ನು ಬಸವ ತತ್ವ ಅನುಷ್ಠಾನಕ್ಕಾಗಿ ತಮ್ಮ ಇಡೀ ಜೀವನ ಮುಡಿಪಾಗಿಟ್ಟಿದ್ದಾರೆ. ಸಮಾಜದಲ್ಲಿ ದ್ವೇಷದ ವಿಷಯ ಬೀಜ ಬಿತ್ತುವ ಕೆಲಸ ಖಂಡಿತಾ ಬೇಡ, ಪ್ರೀತಿ - ಸ್ನೇಹ, ಸೌಹಾರ್ದತೆ -  ಶಾಂತಿಯ ವೈಜ್ಞಾನಿಕ ವಿಚಾರಗಳು ಬಿತ್ತುವ ಕೆಲಸ ಆಗಬೇಕೆಂದು ಕರೆಯನ್ನು ನೀಡುತ್ತಿದ್ದಾರೆ. ಮತ್ತು ಈ ನಿಟ್ಟಿನಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಲದೆ

ಬಹುಮುಖ್ಯವಾಗಿ ಜನರಲ್ಲಿ ಕಾಡುತ್ತಿರುವ ಸಮಸ್ಯೆಗಳಲ್ಲಿ ಒಂದಾಗಿರುವ, ಸಮುದಾಯದಲ್ಲಿ ಸೌಹಾರ್ದ ಮೂಡಿಸುವ ವಾತಾವರಣ ನಿರ್ಮಾಣವಾಗಬೇಕಾದ ಅಗತ್ಯವಿದೆ. ಬಹುಸಂಸ್ಕೃತಿಯನ್ನು ಜನರು ಒಪ್ಪಿಕೊಳ್ಳುವಂತಹ ಕೆಲಸವಾಗಬೇಕು. ಅದುವೇ ನಿಜವಾದಂತಹ ಪ್ರಜಾಪ್ರಭುತ್ವದ ಲಕ್ಷಣ ಎಂದು ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ನವರು ಯಾವಾಗಲೂ ಹೇಳುತ್ತಿರುತ್ತಾರೆ. ಅಂತೆಯೇ  ಈ ನಿಟ್ಟಿನಲ್ಲಿ ಬಸವಾದಿ ಶರಣರ ಸಂದೇಶಗಳನ್ನು ಸರ್ವರೂ ಅಳವಡಿಸಿಕೊಂಡು ಸಾಗಬೇಕು, ಸಾಗಿದಾಗ ಮಾತ್ರ ಸರ್ವರ ಜೀವನ ಸುಂದರಮಯವಾಗುತ್ತದೆ ಎನ್ನುತ್ತಾರೆ ಗೊ ರು ಚ.

ಜಾನಪದ ಸಾಹಿತ್ಯ ಸೇವೆಯಲ್ಲಿ ಗೊ ರು ಚ : ಗೊ.ರು ಚನ್ನಬಸಪ್ಪನವರ ಇನಿದಾದ ದನಿಯಲ್ಲಿ ಜನಪದ ಸಾಹಿತ್ಯ ಸುಧೆಯನ್ನು ಸವಿಯುವುದೇ ಸೊಗಸು. ಚನ್ನಬಸಪ್ಪ ಶರಣರು ಹಿರಿಯ ಜಾನಪದ ತಜ್ಞರು ಹೌದು, ಮಾಜಿ ಕರ್ನಾಟಕ ಜಾನಪದ ಅಕಾಡೆಮಿಯ ಕ್ರಿಯಾಶೀಲ ಅಧ್ಯಕ್ಷರಾಗಿ ಕನ್ನಡ ಜಾನಪದ ಕ್ಷೇತ್ರಕ್ಕೆ ಗುರುತರವಾದ ಸೇವೆ ಸಲ್ಲಿಸಿದ್ದಾರೆ. ಭಾರತದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸುವಲ್ಲಿ ಅವರ ಪಾತ್ರ ದೊಡ್ಡದು.ಮೈದುನ ರಾಮಣ್ಣ, ಗ್ರಾಮಗೀತೆಗಳು, ಬಾಗೂರು ನಾಗಮ್ಮ ಮತ್ತು ಇತರ ಹಾಡುಗಳು ಸೇರಿದಂತೆ ಅನೇಕ ಕೃತಿಗಳು ನಾಡಿಗೆ ನೀಡಿದ ವಿದ್ವತ್ತಿಗೆ ಸಾಕ್ಷಿಯಾಗಿದ್ದಾರೆ. 1977ರಲ್ಲಿ ಅವರು ಸಂಪಾದಿಸಿದ `ಕರ್ನಾಟಕ ಜನಪದ ಕಲೆಗಳು’ ಇಂದಿಗೂ ಮಾದರಿ ಕೃತಿಯಾಗಿದೆ.ಅವರ ಇತ್ತೀಚಿನ ‘ಆಲೋಚನೆ’ ಎನ್ನುವ ಕೃತಿಯ ತನಕ ಅವರ ಜಾನಪದ ಅಧ್ಯಯನದ ಬೇರೆ ಬೇರೆ ನೆಲೆಯ ಆಲೋಚನ ವಿನ್ಯಾಸಗಳು ಜಾನಪದ ಅಧ್ಯಯನಕಾರರಿಗೆ ಉಪಯುಕ್ತವಾಗಿವೆ.

ಗೊ ರು ಚ ರವರ ಪ್ರಮುಖ ಕೃತಿಗಳು ಹಾಗೂ ಕಸಾಪ ಸಂಘಟನೆ :  ಮಹಾದೇವಿ,ಸದಾಶಿವ ಶಿವಾಚಾರ್ಯ,ಕರ್ನಾಟಕ ಪ್ರಗತಿಪಥ,ಚೆಲುವಾಂಬಿಕೆ,ಕುನಾಲ,ಸಾಕ್ಷಿ ಕಲ್ಲು,ಬೆಳ್ಳಕ್ಕಿ ಹಿಂಡು ಬೆದರ್ಯಾವೊ,ಬಾಗೂರು ನಾಗಮ್ಮ,ಗ್ರಾಮ ಗೀತೆಗಳು,ವಿಭೂತಿ, ಕರ್ನಾಟಕ ಜನಪದಕಲೆಗಳು ಗೊ.ರು. ಚನ್ನಬಸಪ್ಪನವರ ಪ್ರಮುಖ ಬರಹಗಳಾಗಿವೆ.

ಹಾಗೆಯೇ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ 1975-77ರಲ್ಲಿ ಜಾನಪದ ವಿಭಾಗದ ಸಂಚಾಲಕರಾಗಿದ್ದರು. 1987-88ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ ಸಂಪಾದಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇನ್ನು 1989-92ರಲ್ಲಿ ಪರಿಷತ್ ಗೌರವ ಕಾರ್ಯದರ್ಶಿಯಾಗಿ ಮೂರು ಸಮ್ಮೇಳನಗಳ ನಿರ್ವಹಣೆ ಮಾಡಿ ಎಲ್ಲರಿಂದಲೂ ಸೈ ಎನಿಸಿಕೊಂಡವರು. 1990ರಲ್ಲಿ ಪರಿಷತ್‌ನಲ್ಲಿ ಪ್ರಥಮ ಬಾರಿಗೆ ಬಂಡಾಯ ಸಾಹಿತ್ಯ ಸಮಾವೇಶ ಆಯೋಜಿಸಿ ಜನಸಾಮಾನ್ಯರ ಪ್ರೀತಿಗೆ ಪಾತ್ರರಾಗಿದರು. ಮತ್ತೆ  1992-95ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಮೂರು ಸಮ್ಮೇಳನಗಳನ್ನು ನಡೆಸಿ, ‘ಒಬ್ಬ ಕನ್ನಡಿಗ ಒಂದು ರೂಪಾಯಿ’ ಎಂಬ ಘೋಷಣೆಯೊಂದಿಗೆ ದೇಣಿಗೆ ಸಂಗ್ರಹಿಸುವ ಮೂಲಕ ಪರಿಷತ್ ಅನ್ನು ಆರ್ಥಿಕವಾಗಿ ಸ್ವಾವಲಂಬನೆ ಮಾಡುವಲ್ಲಿ ನಿರಂತರವಾಗಿ ಶ್ರಮಿಸಿದ್ದಾರೆ.

ಗೊ ರು ಚ ರವರ ಕನ್ನಡದ ಕಳಕಳಿ: ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಮಾತೃಭಾಷೆಯಲ್ಲೇ ಇರಬೇಕು. ಇದನ್ನು ಜಗತ್ತಿನ ಎಲ್ಲ ಶಿಕ್ಷಣ ತಜ್ಞರು ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ಸರ್ಕಾರ ಶಿಕ್ಷಣ ನೀತಿಯನ್ನು ರೂಪಿಸಲು ದಿಟ್ಟ ಕ್ರಮ ಕೈಗೊಳ್ಳಬೇಕು ಎಂಬುದು ಇವರ ವಾದವಾಗಿದೆ. ಒಂದು ಬಾರಿ ಕಡ್ಡಾಯವಾದರೆ ಜನರೂ ಅದಕ್ಕೆ ಖಂಡಿತವಾಗಿಯೂ ಒಪ್ಪಿಕೊಂಡು ಅಪ್ಪಿಕೊಂಡುಬಿಡುತ್ತಾರೆ’ ಎನ್ನುವುದು ಗೊ.ರು. ಚನ್ನಬಸಪ್ಪನವರ ಅಂತರಾಳದ ಮಾತುಗಳಾಗಿವೆ. ‘ಕನ್ನಡಕ್ಕೆ ಈಗಿನ ತೊಂದರೆ ಎಂದರೆ ಇಂಗ್ಲಿಷ್. ಪೋಷಕರಿಗೆ ನಮ್ಮ ಮಕ್ಕಳ ಭವಿಷ್ಯ ಭದ್ರವಾಗಬೇಕೆಂಬ ಉದ್ದೇಶದಿಂದ ಜಗತ್ತಿನಲ್ಲಿ ಹೆಚ್ಚು ವ್ಯಾವಹಾರಿಕ ಭಾಷೆಯಾಗಿರುವ ಇಂಗ್ಲಿಷ್‌ಗೆ ಪ್ರಾಮುಖ್ಯ ನೀಡುತ್ತಿದ್ದಾರೆ. ನಾವು ಇಂಗ್ಲಿಷ್ ಕಲಿಯುವುದನ್ನು ಬೇಡ ಎನ್ನುವ ಅಗತ್ಯವಿಲ್ಲ. ಆದರೆ ಕನ್ನಡ ಭಾಷೆ ಮೊದಲಾಗಬೇಕು. ಬೇರೆ ಭಾಷೆಯಲ್ಲಿ ನೀಡುವಂತ ತರಬೇತಿಗಳು ಸಹ  ಕನ್ನಡದಲ್ಲಿಯೂ ದೊರೆಯುವಂತೆ ಮಾಡಬೇಕು. ಈ ತನ್ಮೂಲಕ 

ಇಂತಹ ತರಬೇತಿ ಪ್ರಾಥಮಿಕ ಶಿಕ್ಷಣದಲ್ಲೇ ಸಿಗುತ್ತದೆ ಎಂಬ ಭರವಸೆ ಪೋಷಕರಲ್ಲಿ ಬಂದು ಅದು ಮನದಟ್ಟಾದರೆ ಯಾರೂ ವಿರೋಧ ಮಾಡುವುದಿಲ್ಲ’ ಎನ್ನುತ್ತಾರೆ. ಹಾಗೆಯೇ ಜನರಲ್ಲಿ ಭಾಷೆ ಬಗ್ಗೆ ಅಭಿಮಾನ ಉಂಟು ಮಾಡಬೇಕಾದ ಕೆಲಸವನ್ನು ಸರ್ಕಾರ ಮಾತ್ರ ಮಾಡಿದರೆ ಸಾಲದು. ಶಿಕ್ಷಣ ಸಂಸ್ಥೆಗಳು, ಸಾಹಿತ್ಯ ಪರಿಷತ್ತು ಹಾಗೂ ಸಾಂಸ್ಕೃತಿಕ ಸಂಸ್ಥೆಗಳು ಭಾಷೆಯನ್ನು ಉತ್ತೇಜಿಸುವಂತಹ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು. ಪೋಷಕರೊಂದಿಗೆ ಹೆಚ್ಚು ನಿಕಟ ಸಂಪರ್ಕ ಹೊಂದಿರುವ ಶಿಕ್ಷಕರು, ಭಾಷೆ ಕಲಿಯುವ ಬಗ್ಗೆ ಅರಿವು ಮೂಡಿಸಬೇಕು. ಸಾಮಾನ್ಯ ಜನರೊಂದಿಗೆ ಸಂಪರ್ಕ ಹೊಂದುವ ಮೂಲಕ ಸಾಹಿತಿಗಳೂ ಕನ್ನಡ ಭಾಷೆ ಬೆಳವಣಿಗೆಗೆ ಸಹಕರಿಸಬೇಕು. ಇದಕ್ಕೆಲ್ಲ ಸರ್ಕಾರ ಉತ್ತೇಜನ ನೀಡಬೇಕು. ಅದಕ್ಕೆ ಅಗತ್ಯವಾದ ನೀತಿಗಳನ್ನು ರೂಪಿಸಿ ಅವುಗಳನ್ನು ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು ಎಂಬುದು ಗೊ ರು ಚ ರವರ ಆಶಯವಾಗಿದೆ.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ : ಕರುನಾಡಿನ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ಗೊ ರು ಚನ್ನಬಸಪ್ಪನವರು ಮಂಡ್ಯದಲ್ಲಿ ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಈ ಮೂಲಕ ಒಬ್ಬ ಶ್ರೇಷ್ಠ ಕನ್ನಡ ಸಾಹಿತಿಗೆ ಸಲ್ಲಬೇಕಾದಂತ ಗೌರವ ಸಿಕ್ಕಿದಂತಾಗಿದೆ.

ಗೌರವದ ನುಡಿ:  ಶರಣರ ತತ್ವ ಸಿದ್ಧಾಂತಗಳಾದ ಕಾಯಕ, ದಾಸೋಹ,ಶಿಕ್ಷಣ,ಸಮಾನತೆ, ಮಾನವೀಯತೆ ಎಂಬ ನಿಸ್ವಾರ್ಥ ಸೇವೆಗಳು ಜನಸಾಮಾನ್ಯರಿಗೆ ಪಸರಿಸುತ್ತಾ, ಸಂಘಟನೆ, ಹೋರಾಟಗಳು ಕೈಗೊಳುತ್ತಾ, ಶೈಕ್ಷಣಿಕ,ಸಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ವಿಭಾಗ ಸೇರಿದಂತೆ ವಿವಿಧ ಜನಪರ,ಸಾಹಿತ್ಯ, ಜಾನಪದ ಪರ ಸೇವಾ ಕೈಂಕರ್ಯಗಳು ಕೈಗೊಂಡು ಗೊ ರು ಚನ್ನಬಸಪ್ಪ  ಸದ್ದುಗದ್ದಲವಿಲ್ಲದ ಸಾಧನಾ ಶಿಖರದಲ್ಲಿ ಕಂಗೊಳಿಸುತ್ತಿದ್ದಾರೆ. 

ಚಿತ್ರದಲ್ಲಿ ಗೊರುಚ ಜೊತೆ ಲೇಖಕರು  

ಲೇಖಕರು - ಸಂಗಮೇಶ ಎನ್ ಜವಾದಿ, ಬೀದರ