ಕರ್ನಾಟಕ - ಮಹಾರಾಷ್ಟ್ರದ ಗಡಿ ವಿವಾದಕ್ಕೆ ಹೀಗೂ ಒಂದು ಪರಿಹಾರ…!
ಮೊದಲನೆದಾಗಿ, ಈಗ ಗಡಿ ಹೇಗಿದೆಯೋ ಹಾಗೆ ಉಳಿಸಿಕೊಂಡು ಇಷ್ಟ ಇದ್ದವರು ಇರಲಿ ಕಷ್ಟವಾದವರು ಹೋಗಲಿ. ಇದು ಎರಡೂ ಭಾಷಿಕರಿಗೆ ಸಮನಾಗಿ ಅನ್ವಯ ಎಂದು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವುದು. ಅದನ್ನು ಮೀರಿ ಪ್ರತಿಭಟನೆ ಅಥವಾ ಇನ್ಯಾವುದೇ ರೂಪದ ಸಮಸ್ಯೆ ಸೃಷ್ಟಿಸಿದಲ್ಲಿ ಗಂಭೀರ ರಾಜ ದ್ರೋಹ ಎಂದು ಪರಿಗಣಿಸಿ ಶಿಕ್ಷಿಸುವುದು.
ಎರಡನೆಯದಾಗಿ, ಈಗ ಕಾನೂನಾತ್ಮಕ ಹೋರಾಟದ ತೀರ್ಪಿಗೆ ಕಾಯುವುದು ಮತ್ತು ಒಪ್ಪಿಕೊಳ್ಳುವುದು. ಅಲ್ಲಿಯವರೆಗೆ ಎರಡೂ ರಾಜ್ಯಗಳು ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ ಸುಮ್ಮನಿರುವುದು. ಒಂದು ವೇಳೆ ಆ ಬಗ್ಗೆ ಮಾತನಾಡಿದರೆ ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿ ಮುಖ್ಯಮಂತ್ರಿಗಳು ಸೇರಿ ಎಲ್ಲರನ್ನೂ ಶಿಕ್ಷೆಗೆ ಗುರಿಪಡಿಸುವುದು.
ಮೂರನೆಯದಾಗಿ, ವಾಸ್ತವ ಏನೆಂದರೆ, ಭಾಷಾವಾರು ಪ್ರಾಂತ್ಯಗಳ ರಚನೆಯಲ್ಲಿ ಗಡಿ ಗುರುತಿಸುವಲ್ಲಿ ಎರಡೂ ಭಾಷಿಕರಿಗೆ ಒಂದಷ್ಟು ಗೊಂದಲ ಮತ್ತು ಅನ್ಯಾಯ ಆಗಿರುವುದು ನಿಜ. ಅದು ತುಂಬಾ ಕಷ್ಟದ ಕೆಲಸ ಆಗಿದ್ದುದರಿಂದ ಮತ್ತು ಆಗ ತಂತ್ರಜ್ಞಾನ ಇಷ್ಟು ಮುಂದುವರಿದಿಲ್ಲದ್ದರಿಂದ ಸ್ವಲ್ಪ ಸಮಸ್ಯೆ ಇದೆ. ಅದಕ್ಕಾಗಿ ಒಂದು ಮಿತಿಯಲ್ಲಿ ಕೊಡು ತೆಗೆದುಕೋ ತತ್ವದ ಅಡಿಯಲ್ಲಿ ಹೀಗೆ ಮಾಡಬಹುದು.
ಕರ್ನಾಟಕ ಮತ್ತು ಮಹಾರಾಷ್ಟ್ರದ ಈಗ ಇರುವ ಭೂ ಪ್ರದೇಶದ ವಿಸ್ತೀರ್ಣದಲ್ಲಿ ಯಾವುದೇ ಬದಲಾವಣೆ ಆಗದಂತೆ, ಯಾವ ರಾಜ್ಯದ ಒಂದು ಇಂಚು ಸಹ ವ್ಯತ್ಯಾಸ ಆಗದಂತೆ ಕರ್ನಾಟಕ ಗಡಿಯಲ್ಲಿ ಇರುವ ಹೆಚ್ಚು ಮರಾಠಿ ಭಾಷಿಕರ ಮತ್ತು ವಿವಾದಿತ ಒತ್ತಾಯದ ಪ್ರದೇಶವನ್ನು ಮಹಾರಾಷ್ಟ್ರಕ್ಕೂ, ಮಹಾರಾಷ್ಟ್ರದ ಗಡಿಯಲ್ಲಿರುವ ಹೆಚ್ಚು ಕನ್ನಡ ಭಾಷಿಕರ ಪ್ರದೇಶವನ್ನು ಕರ್ನಾಟಕಕ್ಕೂ ಸೇರಿಸುವುದು. ಆಗ ಇಬ್ಬರಿಗೂ ಖುಷಿ ಮತ್ತು ಲಾಭ. ವಿಸ್ತೀರ್ಣದಲ್ಲಿ ವ್ಯತ್ಯಾಸ ಇರುವುದಿಲ್ಲ. ಆಡಳಿತ ವ್ಯವಸ್ಥೆಯಲ್ಲಿ ಮಾತ್ರ ಬದಲಾವಣೆ. ತಾಯಿ ಭಾಷೆಗೆ ಸೇರಿದ ಸಂತೃಪ್ತಿ.
ಒಂದೇ ದೇಶದ ಎರಡು ರಾಜ್ಯಗಳ ಮಧ್ಯೆ ಇಷ್ಟು ಮಾತ್ರ ಹೊಂದಾಣಿಕೆ ಸಾಧ್ಯವಾಗಬಹುದಲ್ಲವೇ. ಎರಡೂ ಕಡೆ ಇರುವುದು ಭಾರತೀಯರು ಮತ್ತು ಮನುಷ್ಯರೇ ಅಲ್ಲವೇ. ಕೇವಲ ಭಾಷೆ ಮಾತ್ರ ಬೇರೆ. ಹಾಗೇ ಆದಲ್ಲಿ ಇಡೀ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯ. ಇದೇ ಸಮಯ ಮತ್ತು ಸಂಪನ್ಮೂಲಗಳನ್ನು ಇನ್ನಷ್ಟು ಅಭಿವೃದ್ಧಿಗೆ ಉಪಯೋಗಿಸಬಹುದಲ್ಲವೇ?
ಅಥವಾ ರಾಜಕಾರಣಿಗಳೇ ತಮ್ಮ ಪೌರುಷ ತೋರಲು ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಬೇಕಂತಲೇ ತಮ್ಮ ಹಿಂಬಾಲಕರಿಗೆ ಪ್ರಚೋದನೆ ನೀಡಿ ಹಣ ಒದಗಿಸಿ ಈ ವಿಷಯಗಳನ್ನು ತಾತ್ಕಾಲಿಕವಾಗಿ ಮುನ್ನಲೆಗೆ ತಂದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರಬಹುದೇ? ಪ್ರತಿವರ್ಷ ಒಂದೇ ವಿಷಯದ ಬಗ್ಗೆ ಮತ್ತೆ ಮತ್ತೆ ಪ್ರಸ್ತಾಪಿಸಿ ಗಲಭೆ ಉಂಟುಮಾಡಿ ಕಾನೂನು ಸುವ್ಯವಸ್ಥೆಗೆ ಭಂಗ ತರುವುದು ದೊಡ್ಡ ಅಪರಾಧವಲ್ಲವೇ?
ಒಂದೇ ದೇಶದ ಎರಡು ರಾಜ್ಯಗಳ ನಡುವೆ ಒಂದು ಗಡಿ ವಿವಾದ ಬಗೆಹರಿಸಲು ಸಾಧ್ಯವಾಗದ ದುರ್ಬಲ ಆಡಳಿತ ವ್ಯವಸ್ಥೆ ನಮ್ಮದಾಗಿದ್ದರೆ ಅಭಿವೃದ್ಧಿಯ ದೊಡ್ಡ ಕನಸು ಕಾಣುವುದು ಸಾಧ್ಯವಿಲ್ಲ. ಚುನಾವಣಾ ರಾಜಕೀಯ ಇಷ್ಟೊಂದು ಕೆಳಹಂತಕ್ಕೆ ಇಳಿಯುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ತಕ್ಷಣ ಕೇಂದ್ರ ಸರ್ಕಾರ ಈ ಬಗ್ಗೆ ಒಂದು ರಾಷ್ಟ್ರೀಯ ನೀತಿ ಪ್ರಕಟಿಸಿ ಅದನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವಂತಾಗಲಿ.
-ವಿವೇಕಾನಂದ ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಅಂತರ್ಜಾಲ ತಾಣ