ಕರ್ನಾಟಕ ರಾಜ್ಯೋತ್ಸವ: ವೇದಿಕೆ ಏರುವ ಗಣ್ಯರಿಗೊಂದು ವಿನಂತಿ
ಕರ್ನಾಟಕ ರಾಜ್ಯೋತ್ಸವ ಅಂದ್ರೆ ಭಾಷೆಗಷ್ಟೇ ಸೀಮಿತಾನ?. ಕ್ಷಮಿಸಿ, ಹೀಗಂತ ಪ್ರಶ್ನಿಸಿದರೆ ಮರು ಮಾತಿಲ್ಲದೆ ಹೌದು ಅನ್ನೋ ಉತ್ತರ ಬರಬಹುದು. ಆದರೆ ಸ್ವಲ್ಪ ಆಲೋಚಿಸಿದರೆ, ಚಿಂತಿಸಿದರೆ ಖಂಡಿತವಾಗಿಯೂ ಇದರ ಜೊತೆ ಜೊತೆಗೇ ಇನ್ನೂ ಅನೇಕ ವಿಚಾರಗಳು ಸಹ ಒಳಗೊಂಡಿರುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಹೀಗೆಲ್ಲ ಇಲ್ಲಿ ಪ್ರಸ್ತಾಪಿಸಲು ಕಾರಣವಿಷ್ಟೆ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ರಾಜ್ಯೋತ್ಸವದ ಆಚರಣೆಯಲ್ಲಿ ತೀವ್ರತರವಾದ ಸಂಕುಚಿತ ಭಾವನೆ ಕಾಣಬಹುದಾಗಿದೆ. ಅದರಲ್ಲೂ ಈ ವರ್ಷದ ಅಂದರೆ 2016 ರ ನವೆಂಬರ್ ತಿಂಗಳಲ್ಲಿ ಕರ್ನಾಟಕ ರಾಜ್ಯೋತ್ಸವದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದೆ. ಆ ಸಂಧರ್ಭದಲ್ಲಿ ಅತಿಥಿ ಮಹನೀಯರ ಭಾಷಣ ಕೇಳುವಾಗ ಪೂರ್ವತಯಾರಿ ಇಲ್ಲದ ಅವರ ವರ್ತನೆ, ಪದಗಳಿಗಾಗಿ ಪರದಾಟ, ಸಂಬಂದವಿಲ್ಲದ ಪದಸಂಯೋಜನೆ, ವಿಚಾರವಿಲ್ಲದ ಮಾತುಗಳು, ನಾಚಿಕೆ ಇಲ್ಲದ ಹಾಸ್ಯ ಚಟಾಕಿಗಳು ಹಾಗೂ ಮುಖ್ಯವಾಗಿ ಸಮಾರಂಭದ ಸ್ಥಳದ ಬಗ್ಗೆ ಅರಿವಿಲ್ಲದೆ ಆಡುವ ಮಾತುಗಳು ಇವೆಲ್ಲ ನನಗೆ ಇನ್ನಿಲ್ಲದ ಸಂಕೋಚ, ಮುಜುಗರ ತಂದಿದ್ದಂತೂ ಸುಳ್ಳಲ್ಲ. ಆಶ್ಚರ್ಯದ ವಿಷಯ ಅಂದ್ರೆ ವೇದಿಕೆ ಏರಿದ ಗಣ್ಯರೆಲ್ಲ ಕನ್ನಡದ ಸಾಹಿತ್ಯದಲ್ಲಿ, ಸಿನಿಮಾರಂಗದಲ್ಲಿ ಅಥವಾ ಇನ್ಯಾವುದೇ ಕ್ಷೇತ್ರದಲ್ಲಿ ಹೆಸರು ಮಾಡಿದವರೇ ಆಗಿರುತ್ತಾರೆ. ಆದರೂ ಇಂಥವರಿಗೇಕೆ ಸಂದರ್ಭದ ಹಾಗೂ ರಾಜ್ಯೋತ್ಸವದ ಬಗ್ಗೆ ಮಾಹಿತಿಯ ಕೊರತೆಯೋ ಅಥವಾ ರಾಜ್ಯೋತ್ಸವದ ಆಳ ಅಗಲಗಳ ಅರಿವಿಲ್ಲವೋ ತಿಳಿಯದಾಗಿದೆ.
ಇಷ್ಟೆಲ್ಲ ಹೇಳಲು ಕಾರಣ ತೀರಾ ಇತ್ತೀಚಿಗೆ ಹೀಗೆಯೇ ಕನ್ನಡದ ಹೆಮ್ಮೆಯ ಮಗನಾಗಿ ಕರ್ನಾಟಕ ರಾಜ್ಯೋತ್ಸವ ಸಮಾರಂಭಕ್ಕೆ ಎದೆಯುಬ್ಬಿಸಿ ಹಾಜರಾಗಿದ್ದೆ. ಅಲ್ಲಿ ವೇದಿಕೆ ಏರಿದ ಗಣ್ಯರು ತಮ್ಮ ಭಾಷಣದಲ್ಲಿ ಕನ್ನಡ ಭಾಷೆ ಬಗ್ಗೆಯೇ ಅರ್ಧಂಬರ್ಧ ಜ್ಞಾನದಲ್ಲೇ ಮಾತಾಡಿದ್ದೋ ಮಾತಾಡಿದ್ದು. ‘ಕನ್ನಡ ಭಾಷೆ 2000 ವರ್ಷಗಳಷ್ಟು ಹಳೆಯದು. ಕರ್ನಾಟಕದಲ್ಲಿ ನೆಲೆಸಿರುವವರು ಎಲ್ಲರೂ ಕಡ್ಡಾಯವಾಗಿ ಕನ್ನಡದಲ್ಲೇ ಮಾತನಾಡಬೇಕು. ಇಲ್ಲಿನ ಅನ್ನ, ಗಾಳಿ, ನೀರು ಬಳಸುತ್ತಾರೆ. ಆದರೆ ಕನ್ನಡ ಇವರಿಗೆ ಬೇಕಾಗಿಲ್ಲ’ ಅಂತೆಲ್ಲಾ ಅಂದ್ರು. ಅದೆಲ್ಲಾ ಸತ್ಯಕ್ಕೆ ಹತ್ತಿರವಿದೆ. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಪರಭಾಷಿಕರ ಮನಃ ಪರಿವರ್ತನೆಗೆ ಏನು ಮಾಡಬೇಕು ಅಂತ ಒಂದು ಸ್ಪಷ್ಟ ಸಂದೇಶ ಅವರಿಂದ ನೀಡಲು ಸಾಧ್ಯವಿಲ್ಲದಷ್ಟು ನೀರಸ ಭಾಷಣವಾಗಿತ್ತು. ಅಷ್ಟೇ ಅಲ್ಲದೆ ಮುಂದುವರಿದು ಹೇಳ್ತಾರೆ, ಪರಭಾಷಿಕರಿಗೆ ಕನ್ನಡ ಕಲಿಯುವವರೆಗೂ ಅಥವಾ ಕಲಿಯದವರಿಗೂ ಕೆರ ತಗಂಡು ಜ್ವರ ಬರೋವರೆಗೂ ಹೊಡೀಬೇಕು ಅಂತಾರೆ. ಪಕ್ಕದ ರಾಜ್ಯದ ಭಾಷಿಕರ ಮೇಲೆ ನಿರಂತರ ವಾಗ್ದಾಳಿ ಮಾಡ್ತಾರೆ. ಇಲ್ಲಿ ನನ್ನ ಪ್ರಶ್ನೆ ಹೀಗೆಲ್ಲ ಅಬ್ಬರಿಸೋಕೆ ಕರ್ನಾಟಕ ರಾಜ್ಯೋತ್ಸವದ ವೇದಿಕೆ ಬೇಕಾ?. ಅಥವಾ ಕರ್ನಾಟಕ ರಾಜ್ಯೋತ್ಸವ ಆಚರಣೆ ಇಂಥ ಭಾಷಣಕ್ಕೆ ಸೀಮಿತಾನ ಅಂತ.
ದಯವಿಟ್ಟು ವೇದಿಕೆ ಏರುವ ಗಣ್ಯರೇ ನೀವುಗಳು ಮೊದಲು ರಾಜ್ಯೋತ್ಸವದ ಹಿನ್ನೆಲೆ ಮತ್ತು ಅದರ ಆಚರಣೆ ಬಗ್ಗೆ ಸರಿಯಾಗಿ ಅಧ್ಯಯನ ಮಾಡಿ ನಂತರ ವೇದಿಕೆ ಏರಿ. ಹಾಗೆಯೇ ನೀವು ಪದೇ ಪದೇ ಹೇಳುವ ಹಾಗೆ ಕನ್ನಡ ಭಾಷೆ ಇವತ್ತು ಅವನತಿಯತ್ತ ಸಾಗಿದೆ, ಕನ್ನಡ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಅಂತೆಲ್ಲಾ ಹೇಳಲು ನಿಮಗೆಷ್ಟು ಧೈರ್ಯ ಮತ್ತು ಹಾಗೆ ಹೇಳಲು ನಿಮಗೆ ನಾಚಿಕೆ ಆಗಲ್ವ?. ನಿಮಗ್ಯಾರು ಹೇಳಿದ್ದು ಅಳಿವಿನಂಚಿನಲ್ಲಿದೆ ಕನ್ನಡ ಅಂತ. ಮಹನೀಯರೇ ಗಮನಿಸಿ ಕನ್ನಡ ಅತ್ಯಂತ ಸಧೃಡ ಭಾಷೆ. ಇಲ್ಲಿಯವರೆಗೆ ಕನ್ನಡಕ್ಕೆ ಅಂತಹ ದುರ್ಗತಿ ಬಂದಿಲ್ಲ ಬರೋದೂ ಇಲ್ಲ. ನಮ್ಮ ಮನೆಯಲ್ಲಿ ನಾವೇ ಅನ್ನಕ್ಕಾಗಿ ಅಂಗಲಾಚಿದಂತೆ ನೀವೇ ಬೇಡಿಕೊಳ್ಳುತ್ತಿದ್ದೀರಲ್ಲ. ಸ್ವಲ್ಪ ಧನಾತ್ಮಕವಾಗಿ ಚಿಂತಿಸಿ ಹಾಗೆಯೇ ಮಾತನಾಡಿ. ನಿಮಗೆ ಯಾವಾಗಲೂ ಇದೇ ರೀತಿ ಮಾತನಾಡಿ ರೂಢಿಯಾಗಿದೆ. ಸಂದರ್ಭ ಸಿಕ್ಕಾಗೆಲ್ಲ ಕನ್ನಡ ಅವನತಿಯತ್ತ ಸಾಗಿದೆ, ಅಸ್ತಿತ್ವ ಕಳೆದುಕೊಳ್ಳುತ್ತಿದೆ ಅಂತ ಒದರೀ ಒದರೀ ಅದೇ ಅಭ್ಯಾಸವಾಗಿದೆ. ಅಸಹ್ಯ ಅನ್ಸಲ್ವಾ ಹೀಗೆ ಮಾತನಾಡಲು. ಮೊದಲು ನೀವುಗಳು ತೋರಿಕೆಯ ಕನ್ನಡಾಭಿಮಾನ ಬಿಟ್ಟು, ಅಂಧಾಭಿಮಾನ ಬಿಟ್ಟು, ಹೊಗಳುಭಟ್ಟರ ನಡುವೆ ನಿಂತು ಮಾತನಾಡುವ ಮೊದಲು ಕನ್ನಡದ ಶ್ರೇಷ್ಠತೆ ಹಾಗೂ ಅದರ ಇತಿಹಾಸ, ವ್ಯಾಕರಣ, ಕನ್ನಡದ ಉತ್ಕ್ರುಷ್ಟತೆಗೆ ಶ್ರಮಿಸಿದವರ ಬಗ್ಗೆ ಅರಿವು, ಕನ್ನಡ ನಾಡಿನ ಅಭಿವೃದ್ಧಿಗೆ ಕಾಣಿಕೆ ನೀಡಿದವರ ಬಗ್ಗೆ ಅರಿತು ಅಧ್ಯಯನ ಮಾಡಿ ಮಾತನಾಡಿ. ಇದೆಲ್ಲ ನಿಮಗೆ ಸಾಧ್ಯವಿಲ್ಲದಿದ್ದರೆ ದಯವಿಟ್ಟು ವೇದಿಕೆ ಮೇಲೆ ನಿಮ್ಮ ಉಪಸ್ಥಿತಿ ಬೇಡ. ನಿಮ್ಮ ಪೇಲವ ವಿಷಯ ಜ್ಞಾನವಿಲ್ಲದ ಮಾತುಗಳಿಂದ ವೇದಿಕೆ ಮುಂದಿನ ಕನ್ನಡದ ಜೀವಗಳ ತಲೆ ತಗ್ಗಿಸುವಂತೆ ಮಾಡಬೇಡಿ. ಹಾಗೆಯೇ ಆಕ್ರೋಶದ ಮಾತನಾಡುವ ಮೊದಲು ಸಮಾರಂಭ ನಡೆಯುವ ಸ್ಥಳದ ಬಗ್ಗೆ ಅರಿವಿರಲಿ. ಉದಾಹರಣೆಗೆ ನೀವು ಯಾವುದಾದರೂ ವಿದ್ಯಾಸಂಸ್ಥೆಗೆ ಆಹ್ವಾನಿಸಲ್ಪಟ್ಟಿದ್ದರೆ ನಿಮ್ಮ ಮಾತು ಅತ್ಯಂತ ಪ್ರಭಾವಿಯಾಗಿರಬೇಕೇ ವಿನಃ ಆಕ್ರೋಶದ, ಅಬ್ಬರದ ಮಾತಾಗಿರಬಾರದು. ಯಾಕೆಂದರೆ ಅಲ್ಲಿ ಇನ್ನೂ ಅರಳುತ್ತಿರುವ ಮನಸುಗಳಿರುತ್ತವೆ. ಮುಂದಿನ ದಿನಗಳಲ್ಲಿ ಕನ್ನಡ ನಾಡನ್ನು ಮುನ್ನಡೆಸುವ ಪ್ರತಿಭೆಗಳಿರುವ ಕಣಜ ಅದು. ಅವರಿಗೆ ಸ್ಫೂರ್ತಿ ಸಿಗುವ ಮಾತನಾಡಿ. ಅಲ್ಲಿ ಪರಭಾಷಿಕರು ಸಹ ಸಾಕಷ್ಟು ಸಂಖ್ಯೆಯಲ್ಲಿರುತ್ತಾರೆ. ಅವರು ನೀವಂದುಕೊಂಡಷ್ಟು ಕನ್ನಡ ಭಾಷಾ ದ್ವೇಷಿಗಳಾಗಿರುವುದಿಲ್ಲ. ಅವರ ಮುಂದೆ ಪರಭಾಷಿಕರನ್ನು ಕೆರದಲ್ಲಿ ಜ್ವರ ಬರುವ ಹಾಗೆ ಹೊಡೀರಿ ಅಂದ್ರೆ ಆ ಮನಸ್ಸುಗಳ ಸ್ವಾಭಿಮಾನಕ್ಕೆ ಏಟು ಕೊಟ್ಟಂತಾಗುತ್ತದೆ. ಕನ್ನಡ ದ್ವೇಷಿ ಆಗಲೂಬಹುದು. ಬದಲಾಗಿ ಅವರಿಗೆ ಕನ್ನಡ ಸಾಹಿತ್ಯದ, ಭಾಷೆಯ ವ್ಯಾಕರಣ ಶ್ರೇಷ್ಠತೆಯ ಬಗ್ಗೆ, ಸಾಧಕರ ಬಗ್ಗೆ, ಇತಿಹಾಸ ಪ್ರಸಿದ್ಧ ಸ್ಥಳಗಳ ಬಗ್ಗೆ ಹೇಳಿ ಅವರಿಗೆ ನಮ್ಮ ಭಾಷೆ ಬಗ್ಗೆ ಆಸಕ್ತಿ ಮೂಡಿಸಬೇಕು. ಅಲ್ಲಿನ ವಿದ್ಯಾರ್ಥಿಗಳಿಗೆ ಇಂದಿನ ದಿನಗಳಲ್ಲಿ ಕನ್ನಡದಲ್ಲಿರುವ ಹೊಸ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಬಹುದು. ಅಂತರ್ ಜಾಲದಲ್ಲಿ ಸಹ ಕನ್ನಡ ಬಳಸಬಹುದು ಎಂದು ತಿಳಿಸಬೇಕು. ಕನ್ನಡದಲ್ಲಿಯೇ ಸಂವಹನ ನಡೆಸಲು ಇರುವ mobile application ಗಳ ಬಗ್ಗೆ ತಿಳಿಸಬಹುದು. ಅಷ್ಟೇ ಏಕೆ ವಿದ್ಯಾರ್ಥಿಗಳಿಗೆ ಸಾಹಿತ್ಯ ರಚಿಸಲು ಪ್ರೇರೇಪಿಸುವ ಮಾತಾದರು ಹೇಳಬಹುದು.
ಕರ್ನಾಟಕ ರಾಜ್ಯೋತ್ಸವದ ದಿನದಂದು ಸಿಗುವ ವೇದಿಕೆಯಲ್ಲಿ ಸರ್ಕಾರದ ಕಿವಿ ಹಿಂಡುವ ಪ್ರಯತ್ನ ಮಾಡಬಹುದು. ರೈತರ ಬಗ್ಗೆ, ಕರ್ನಾಟಕದ ಬೆಳೆಗಳ, ಆಹಾರ ಕ್ರಮ, ಅಭಿವೃದ್ದಿ, ಸಂಸ್ಕೃತಿ ಇವೆಲ್ಲುದರ ಸರ್ವತೋಮುಖ ಚಿಂತನೆ ಬಗ್ಗೆ ಚರ್ಚಿಸಬಹುದು. ಏಕೀಕರಣದ ದಿನಗಳಲ್ಲಿ ಕರ್ನಾಟಕ ಹೇಗಿತ್ತು ಇಂದೇನಾಗಿದೆ. ಪ್ರಗತಿ ಯಾವ ಹಂತದಲ್ಲಿ ಸಾಗುತ್ತಿದೆ ಅನ್ನೋದರ ಪರಾಮರ್ಶನೆ ಮತ್ತು ದೂರದೃಷ್ಠಿಯಲ್ಲಿ ಮಾತನಾಡಬಹುದು. ದಯವಿಟ್ಟು ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ವೇದಿಕೆಯೇರುವ ಗಣ್ಯರೇ ತಮ್ಮ ಮಾತುಗಳು ಮೌಲ್ಯಯುತವಾಗಿರಲಿ. ನೀವೇ ಅಸಂಬದ್ಧವಾಗಿ ಮಾತನಾಡಿ ಕನ್ನಡದ ಕೊಲೆ ಮಾಡಬೇಡಿ.