ಕಲಾಂ ಎಂಬ ಅದ್ಭುತ..
ಇಂದು ಸಂಪದ ತೆರೆಯುತ್ತಿದ್ದಂತೆ ಅಬ್ದುಲ್ ಕಲಾಂ ದೈವಾಧೀನರಾದ ಸುದ್ದಿ ಕಣ್ಣಿಗೆ ಬಿದ್ದು ಮನಸಿಗೆ ಪಿಚ್ಚೆನಿಸಿತು. ಕೆಲವೆ ದಿನಗಳ ಹಿಂದೆಯಷ್ಟೆ ಯಾರೊ ಮಂತ್ರಿಯೊಬ್ಬರು ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ನಮಿಸಿದ್ದನ್ನು ಲೇವಡಿ ಮಾಡಿದ ಎನ್ ಡಿ ಟಿವಿ ಸುದ್ದಿಯನ್ನು ಓದಿದ್ದೆ. ಅದರ ಬೆನ್ನಲ್ಲೆ ಅದು ನಿಜವಾದ ಸುದ್ದಿಯಾಗಿ ಪರಿವರ್ತಿತವಾಗಿದ್ದು ಕಂಡು ಖೇದವೂ ಆಯ್ತು. ವಿಜ್ಞಾನಿಯಾಗಿ ಮಾತ್ರವಲ್ಲದೆ ನೆಚ್ಚಿನ ರಾಷ್ಟ್ರಪತಿಯಾಗಿ, ಪ್ರಭಾವಿ ಚಿಂತನಶೀಲ ಹಾಗು ಪ್ರಗತಿಪರ ಬರಹಗಾರರಾಗಿ, ಎಲ್ಲಕ್ಕು ಮೀರಿ ಭಾರತೀಯ ಯುವ ಜನಾಂಗದ ಆದರ್ಶ ಮಾದರಿಯಾಗಿ ಭೂಮಿಕೆ ನಿಭಾಯಿಸಿದ ಕಲಾಂರ ದೇಶ ಪರವಾದ ಕಾಳಜಿ, ಇಳಿ ವಯಸಿನಲ್ಲು ಕುಗ್ಗದ ಅದಮ್ಯ ಉತ್ಸಾಹ, ಏನಾದರೂ ಸರಿ ಸಾಧಿಸಬಲ್ಲೆನೆಂಬ ಆತ್ಮವಿಶ್ವಾಸ ಎಲ್ಲರಿಗು ಮಾರ್ಗದರ್ಶಿ. ಹಿಂದುಳಿದ ದೇಶವೆಂಬ ಹಣೆಪಟ್ಟಿಗೆ ಹಿಂಜರಿಯದೆ ಅದನ್ನು ಮುಂಚೂಣಿಯಲ್ಲಿರಿಸಲು ಬೇಕಾದ ನೈತಿಕ ಸ್ಥೈರ್ಯ, ಆತ್ಮ ಬಲವನ್ನು ತುಂಬಿದ ಮಹಾನ್ ಚೇತನ ಈ ಭಾರತ ರತ್ನ. ಅಂಥಾ ಅದ್ಭುತ ಕಲೆಗೊಂದು ಸಲಾಂ 'ಕಲಾಂಗೆ ಸಲಾಂ' - ಅವರ ಆತ್ಮಕ್ಕೆ ಚಿರ ಶಾಂತಿಯನ್ನು ಕೋರುತ್ತ..
ಕಲಾಂಗೆ ಸಲಾಂ
__________________
ಅಬ್ದುಲ್ ಕಲಾಂ
ಅದ್ಭುತ ಕಲಾ
ಕಲಾಪ ಜನ ಪರ
ವಿಜ್ಞಾನಿ ಪ್ರಗತಿ ಪರ ||
ಕನಸಿನ ತರ
ಕಟ್ಟುತ ದುಸ್ತರ
ಸಾಗಿಸಿ ಗಗನಾಂತರ
ವ್ಯೋಮಕೀಗ ಸಹಚರ ||
ಕಟ್ಟಲೆ ಕರೆ
ಪುಸ್ತಕ ಮಸ್ತಕ ಬರೆ
ಬರೆದಿಟ್ಟ ಸರಕಿಗೆ ಬೆಲೆ
ಬರೆದದ್ದೆಲ್ಲ ನಿಜವಾಗಲೆ ||
ಬ್ರಹ್ಮಚರ್ಯವೆಲ್ಲಿ
ರಾಷ್ಟ್ರಪತಿ ಪಟ್ಟದಲ್ಲಿ
ನಾಡಾಗಿ ಸಂಸಾರ ಮನೆ
ಹತ್ತಿರ ಜನ ಸಾಮಾನ್ಯನೆ ||
ಎಲ್ಲಿ ಅವಸಾನ ?
ಪಂಚಭೂತದೆ ಲೀನ
ಸಾವಿನಲ್ಲು ಹರಿದು ಹಂಚಿ
ಮರಳಿಸುತೆಲ್ಲ ಋಣದ ಸಂಚಿ ||
ಚಿತ್ರ ಕೃಪೆ: ವಿಕಿಪೀಡಿಯ
Comments
ಉ: ಕಲಾಂ ಎಂಬ ಅದ್ಭುತ..
ನಾಗೇಶ ಮೈಸೂರುರವರಿಗೆ ವಂದನೆಗಳು
ಕಲಾಂಗೆ ಸಲಾಮ್ ಕವನ ನಿಜಕ್ಕೂ ಅವರಿಗೆ ತಾವು ಅರ್ಪಿಸಿದ ಭಾವಪೂರ್ಣ ಶ್ರದ್ಧಾಂಜಲಿ ಸಕಾಲಿಕ ಬರಹ.
In reply to ಉ: ಕಲಾಂ ಎಂಬ ಅದ್ಭುತ.. by H A Patil
ಉ: ಕಲಾಂ ಎಂಬ ಅದ್ಭುತ..
ಪಾಟೀಲರೆ ನಮಸ್ಕಾರ ಮತ್ತು ಧನ್ಯವಾದಗಳು. ಕಲಾಂರ ಕುರಿತ ನಿಮ್ಮ ಬರಹದಂತೆ ಮಾಹಿತಿ ಪೂರ್ಣ ಹಾಗು ಧೀರ್ಘ ಲೇಖನವಲ್ಲದಿದ್ದರು ಆ ಗಳಿಗೆಯ ಅನಿಸಿಕೆಗೊಂದು ದನಿ ಕೊಡಲು 'ಸಂತೆಗೆ ನೇಯ್ದ ಮೂರು ಮೊಳ' ನನ್ನೀ ಬರಹ. ಅವರ ಮೇಲ್ಪಂಕ್ತಿಯನ್ನನುಕರಿಸುವ ಭರವದೆಯೊಡನೆ ಆ ಅದಮ್ಯ ಚೇತನಕ್ಕೆ ಭಾವಪೂರ್ಣ ಶ್ರದ್ದಾಂಜಲಿ ಹೇಳುವುದಷ್ಟೆ ನಾವು ತೋರಬಹುದಾದ ಕೃತಜ್ಞತೆ.
ಉ: ಕಲಾಂ ಎಂಬ ಅದ್ಭುತ..
ಹೃದಯತುಂಬಿದ ದುಃಖಭರಿತ ವಿದಾಯ ಭಾರತರತ್ನ ಅಬ್ದುಲ್ ಕಲಾಮರಿಗೆ.
ಮಕ್ಕಳನ್ನು ಕಂಡರೆ ತುಂಬು ಪ್ರೀತಿಯಿಂದ, ಅವರೊಂದಿಗೆ ಮಕ್ಕಳಂತೆಯೇ ಬೆರೆತು ರಾಷ್ಟ್ರಪ್ರೇಮದ ಜ್ಯೋತಿ ಬೆಳಗುತ್ತಿದ್ದ ಅವರು ನೈಜ ಭಾರತೀಯರು. ಅವರಿಗೆ ಕೋಟಿ ಕೋಟಿ ಸಲಾಮ್.
In reply to ಉ: ಕಲಾಂ ಎಂಬ ಅದ್ಭುತ.. by kavinagaraj
ಉ: ಕಲಾಂ ಎಂಬ ಅದ್ಭುತ..
ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ಕಲಾಂರರದು ಒಂದು ವಿಶಿಷ್ಠ ಹಾಗು ಅದ್ಭುತ ವ್ಯಕ್ತಿತ್ವ ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾವುದೆ ಜಾತಿ ಮತ ಕುಲಗಳ ಭೇಧವಿಲ್ಲದೆ ಎಲ್ಲರಿಂದಲು ಸೈ ಅನಿಸಿಕೊಂಡು ಅಜಾತಶತ್ರುವಿನ ಬಾಳುವೆ ನಡೆಸಿದ ಈ ಚೇತನ ನೀಡಿದ ಪ್ರೇರೇಪಣೆಯಿಂದ ಇನ್ನು ಅದೆಷ್ಟೊ ಕಲಾಂಗಳ ಸೃಷ್ಟಿಯಾಗಲಿದೆ. ಅವೆಲ್ಲವು ಅವರು ಹೊತ್ತಿಸಿದ ದೀಪದ ಬೆಳಕಿನಲ್ಲಿ ಮುನ್ನಡೆದು ದೇಶದ ಮತ್ತಷ್ಟು ಪ್ರಗತಿ, ಅಭಿವೃದ್ಧಿಗೆ ಕಾಣಿಕೆ ನೀಡುವ ಹಾಗೆ ಹುರಿದುಂಬಿಸಿ, ಅದರ ಮೂಲ ಬೀಜ ಬಿತ್ತನೆಯ ಕಾರ್ಯ ನಿರಂತರವಿರುವಂತೆ ಮಾಡಲು ಯತ್ನಿಸಿದ ಹೆಗ್ಗಳಿಕೆಯೂ ಅವರದೆ. ಅಂತಹ ಬಿತ್ತನೆಯ ಗಳಿಗೆಯೊಂದರಲ್ಲಿ ವಿಧಿವಶರಾಗಬೇಕಾಗಿ ಬಂದದ್ದು ವಿಪರ್ಯಾಸವಾದರು ಅದರಲ್ಲು ಒಂದು ಸಂದೇಶ ಸಾರಿಯೆ ಹೋಗಿದ್ದಾರೆ - ಕಡೆಯ ಉಸಿರಿನ ತನಕ ಕರ್ತವ್ಯ ನಿರತರಾಗಿರುವ ಮೂಲಕ.
ಉ: ಕಲಾಂ ಎಂಬ ಅದ್ಭುತ..
ಪ್ರಿಯ ನಾಗೇಶ ಜಿ, ತುಂಬ ಆಪ್ತ ಸಕಾಲಿಕ ಸಾಲುಗಳು. ದೊಡ್ಡ ಜೀವವೊಂದು ನಮ್ಮನ್ನಗಲಿದ್ದು , ಇನ್ನೂ ನಂಬಲಾಗುತ್ತಿಲ್ಲ. ಮಹಾ ಚೇತನಕ್ಕೆ ಶೃದ್ಧಾಂಜಲಿ ಸಾಲುಗಳು ಕೊರಳ ಮಾಲೆಯಂತಿವೆ. ಧನ್ಯವಾದಗಳು ಸರ್,
In reply to ಉ: ಕಲಾಂ ಎಂಬ ಅದ್ಭುತ.. by lpitnal
ಉ: ಕಲಾಂ ಎಂಬ ಅದ್ಭುತ..
ಇಟ್ನಾಳರೆ ನಮಸ್ಕಾರ ಮತ್ತು ಧನ್ಯವಾದಗಳು.. ಕೆಲವರ ಕುರಿತು ಮಾತ್ರವೆ ಸ್ವಪ್ರೇರಣೆಯಿಂದ ಏನನ್ನಾದರು ಬರೆದು ನಮನ ಸಲ್ಲಿಸಬೇಕೆಂಬ ಬಲವಾದ ಅಂತಃಪ್ರೇರಣೆಯುಂಟಾಗುತ್ತದೆ. ಅಂತಹ ಅಪರೂಪದ ಚೇತನಗಳಲ್ಲಿ ಕಲಾಂ ಕೂಡ ಒಬ್ಬರು. ಅವರ ಬಗ್ಗೆ ಬರೆಯುವಾಗ ಯಾವುದೆ ವಿಶೇಷ ಪ್ರಯತ್ನವಿರದೆಯೂ ಪದಗಳು ಸ್ಪುರಿಸುತ್ತವೆ - ಅವರ ವ್ಯಕ್ತಿತ್ವ, ಸಾಧನೆಗಳ ಗಹನತೆಯಿಂದಾಗಿ.