ಕಲ್ಲು ನಾಗರಕ್ಕೆ ಹಾಲು; ದಿಟದ ನಾಗರಕ್ಕೆ ಹಾರೆ!

ಕಲ್ಲು ನಾಗರಕ್ಕೆ ಹಾಲು; ದಿಟದ ನಾಗರಕ್ಕೆ ಹಾರೆ!

ಬರಹ

ಹಾವು..!
ಬಹುಶ: ಇಷ್ಟು ಸಾಕು ನಾವು ಬೆಚ್ಚಿ ಬೀಳಲು. ಶಬ್ದ ಕೇಳಿದ ಕೂಡಲೇ ನಮ್ಮ ಪ್ರತಿಕ್ರಿಯೆ
‘ದೊಣ್ಣೆ ಹಿಡಿ..ಹ್ಯಾಟ್ರಿಕ್ ಹೊಡಿ ಮಗ’!

ಧಾರವಾಡದ ಹೊಸಯಲ್ಲಾಪುರದಲ್ಲಿ ಕಳೆದ ಶುಕ್ರವಾರ ಏಕಕಾಲಕ್ಕೆ ೫ ಬಾರಿ ಹ್ಯಾಟ್ರಿಕ್ ಜೊತೆಗೆ ಮೇಲೊಂದು..ಹೀಗೆ ಒಟ್ಟು ೧೬ ಹಾವುಗಳ ಕೊಲೆ ನಡೆಯಿತು. ನೂರಾರು ಜನರ ಸಮ್ಮುಖದಲ್ಲಿ ಈ ಹೇಯ ಕೃತ್ಯ ನಡೆದರೂ; ಒಬ್ಬರು ಕೂಡ ಅದು ವಿಷಕಾರಿ ಹಾವೇ? ಸಾದಾ ಬಡಪಾಯಿ ಕೆರೆ ಹಾವೆ? ತಿಳಿದುಕೊಳ್ಳುವ ಗೋಜಿಗೆ ಹೋಗಲಿಲ್ಲ.

ನೋಡಿ, ನಮಗೆ ಹೊಟ್ಟೆ ಹಸಿವಾದರೆ ಊಟ ಮಾಡುತ್ತೇವೆ. ನೀರಡಿಕೆಯಾದರೆ ನೀರು ಕುಡಿಯುತ್ತೇವೆ. ಇದಕ್ಕಾಗಿ ಯಾರ ಅಭಿಪ್ರಾಯವನ್ನೂ ನಾವು ಕೇಳ ಹೋಗುವುದಿಲ್ಲ. ಆದರೆ ಆರೋಗ್ಯ ಹದಗೆಟ್ಟ ಕ್ಷಣದಲ್ಲಿ ಬೇಗ ಗುಣಮುಖರಾಗಲು ತಜ್ಞರ ಅಭಿಪ್ರಾಯ ಅನಿವಾರ್ಯವಾಗುತ್ತದೆ. ನಾವೇ ಸ್ವಯಂ ಮದ್ದಿಗೆ ಕೈಹಾಕಿ, ಅಳಲೆಕಾಯಿ ಪಾಂಡಿತ್ಯ ಪ್ರದರ್ಶನಕ್ಕೆ ಮುಂದಾದರೆ? ಸ್ವರ್ಗ ಮೂರೇ ಗೇಣು!

ನಾವು ವಾಸಿಸುತ್ತಿರುವ ಭೂಮಿಯ ಆರೋಗ್ಯ ಮೊದಲಿನಂತಿಲ್ಲ. ತೀರ ಹದಗೆಟ್ಟಿದೆ. ತಜ್ಞರ ಅಭಿಮತ ಪಡೆದು ನಾವು ಮುಂದುವರೆಯುವುದು ವಾಸಿ ಎಂದು ನನ್ನ ಅನಿಸಿಕೆ. ಕಾರಣ ಪ್ರಪಂಚದ ಜೀವಿವೈವಿಧ್ಯದಲ್ಲಿ ಪ್ರತಿಯೊಂದು ಜೀವಿಗೂ ತನ್ನದೇ ಆದ ಕರ್ತವ್ಯಗಳಿವೆ. ಹಾಗೆಯೇ ಅವುಗಳಿಗೆ ಕೆಲ ಪ್ರಾಪಂಚಿಕ ಹಕ್ಕುಗಳೂ ಕೂಡ ಇವೆ.

ಇದು ನಮಗೆ ಅರ್ಥವಾಗುವುದು ಯಾವಾಗ? ‘ಅರ್ಥ’ದ ಹಿಂದೆ ಓಡುವುದನ್ನು ತುಸು ತಗ್ಗಿಸಿದಾಗ. ಮಾನವೀಯ ನೆಲೆಯಲ್ಲಿ ನಾವು ಬದುಕಲು ಪ್ರಯತ್ನಿಸಿದಾಗ.

ಹೊಸಯಲ್ಲಾಪುರ ಬಹುತೇಕ ಒಕ್ಕಲಿಗ ಮನೆತನಗಳೇ ವಾಸವಾಗಿರುವ ಬಡಾವಣೆ. ಇಲ್ಲಿನ ವಿಶೇಷ ಎಂದರೆ ತುಂಬಿ ಹರಿಯುವ ಗಬ್ಬು ನಾತದ ಗಟಾರಿನಲ್ಲಿ ಕುಡಿಯುವ ನೀರಿನ ಪೈಪ್ ಹಾಯ್ದು ಹೋಗಿದ್ದು, ಕೊಡಗಳನ್ನು ಕೊಚ್ಚೆಯಲ್ಲಿಳಿಸಿ ಕುಡಿಯುವ ನೀರು ತುಂಬುವುದು. ಚಿಕೂನ್ ಗುನ್ಯಾ ಕಳೆದ ವಾರ ಈ ಭಾಗದ ಜನರ ನೀರಿಳಿಸಿದೆ.

ಹೀಗೆ ನೀರು ತುಂಬುವ ಕಾಯಕದಲ್ಲಿ ಮಗ್ನರಾಗಿದ್ದಾಗ ಕೆಲ ಯುವಕರಿಗೆ ಹಾವೊಂದು ಮೆಂಚಿನ ವೇಗದಲ್ಲಿ ಸಂಚರಿಸಿ, ಗಟಾರಿನ ಯಾವುದೋ ಮೂಲೆಯಲ್ಲಿ ಮಾಯವಾದಂತೆ ಕಂಡಿದೆ. ಕೂಡಲೇ ಕಾರ್ಯಪ್ರವರ್ತರಾದ ಇವರಿಗೆ ಹಿರಿಯರ ಕುಮ್ಮಕ್ಕು ಬೇರೆ. ಕಾರಣ ಹಾವು ತಮ್ಮ ಮರಿ-ಮಕ್ಳನ್ನು ಕಚ್ಚಿದರೆ? ಹುಡುಗರು ಕಪ್ಪೆಯೊಂದನ್ನು ಹುಡುಕಿ ತಂದರು. ಕಾಲಿಗೆ ಸೆಣಬು ಕಟ್ಟಿ ಗಟಾರಿನಲ್ಲಿ ಈಜಾಡಲು ಬಿಟ್ಟರು. ಹಸಿದಿದ್ದ ಹಾವುಗಳು ಬಿಲದಿಂದ ಹೊರಬಂದು ಕಬಳಿಸಲು ಮುಂದಾಗುತ್ತಿದ್ದಂತೆ ಗಟಾರಿನ ಮೇಲೆ ನಿಂತಿದ್ದ ಯುವಕ ಕಪ್ಪೆಯನ್ನು ಹಿಂದಕ್ಕೆ ಎಳೆದು ಕೊಳ್ಳುತ್ತಿದ್ದ, ಮತ್ತೋರ್ವ ಹಾರೆ, ಬಡಿಗೆಗಳಿಂದ ತಲೆಗೆ ಜಜ್ಜುತ್ತಿದ್ದ.

ಪೆಟ್ತು ತಿಂದ ಹಾವು ಮೈ ಸುತ್ತಿ ಕೊಂಡು ಆವೇಷದಲ್ಲಿ ಗಟಾರಿನ ನೀರಿನಲ್ಲಿ ಬಾಲ ಬಡಿಯುತ್ತಿದ್ದರೆ ಸುತ್ತಲೂ ನೆರೆದಿದ್ದ ಜನ ಎಷ್ಟನೆ ಹಾವು ಎಂದು ಲೆಕ್ಕ ಹಾಕುತ್ತಿದ್ದರು. ಈ ಯುವಕರಿಗೆ ಪ್ರಶಂಸಿಸಿ, ಅಭಿನಂದಿಸಿ, ಹುರಿದುಂಬಿಸುತ್ತಿದ್ದರು. ಹಿರಿಯರೇ ಬೆನ್ನು ತಟ್ಟುತ್ತಿರಬೇಕಾದರೆ..ಹಿಂದು-ಮುಂದೆ ನೋಡದೆ ೧೬ ಕೆರೆ ಹಾವುಗಳನ್ನು ಬಲಿ ಕೆಡವಿದರು. ತಲೆ ಜಜ್ಜಿಕೊಂಡು, ಅಸು ನೀಗಿದ ಹಾವಿನ ದೇಹಗಳು ಭೀಭತ್ಸವಾಗಿದ್ದವು. ಕರುಣಾಜನಕ ದೃಷ್ಯ ಮನಮಿಡಿಯುತ್ತಿತ್ತು. ನಾಗರ ಚವತಿಯಂದು ಶೃದ್ಧಾ-ಭಕ್ತಿಗಳಿಂದ ಕಲ್ಲು ನಾಗರಕ್ಕೆ ಹಾಲೆರೆಯುವ ಆಸ್ತಿಕರು ಇವರೇನಾ? ಎಂದು ಹೇಸಿಗೆ ಹುಟ್ಟಿಸುತ್ತಿತ್ತು.

ತರಹೇವಾರಿ ಆಕಾರ, ಉದ್ದ, ಬಣ್ಣಗಳಲ್ಲಿದ್ದ ಈ ಹಾವುಗಳನ್ನು ಅಲ್ಲಿನ ಜನ ಸ್ಥಿತ ಪ್ರಜ್ಞರಾಗಿ ತುಸು ವಿವೇಚಿಸಿ, ಉಪಾಯ ಮಾಡಿದ್ದರೂ ಜೀವ ಸಹಿತ ಬದುಕಿಸಿ, ಕಾಡಿಗೆ ಅಟ್ಟಬಹುದಾಗಿತ್ತು. ಹಾವುಗಳನ್ನು ಹಿಡಿಯಬಲ್ಲ, ಜೀವ ಸಹಿತ ದೂರ ಸಾಗಿಸಿ ಬಿಟ್ಟು ಬರಬಲ್ಲ ‘ಪಡ್ ಮಾಸ್ತರ್’ ಮಗ ಹೊಸಯಲ್ಲಾಪುರದ ಕೂಟಿನಲ್ಲಿಯೇ ಇದ್ದಾನೆ. ಆದರೆ ಅವನಿಗೆ ಸುದ್ದಿ ತಿಳಿಸಿದರೆ ‘ಕೊಲ್ಲ ಬೇಡಿ’ ಎನ್ನಬಹುದು ಎಂಬ ಊಹೆಯಲ್ಲಿ ಎಲ್ಲರೂ ‘ಉರಗ ತಜ್ಞ’ ಎಂಬಂತೆ ಕಾರ್ಯ ಪ್ರವರ್ತರಾಗಿ ಅನಾಯಾಸವಾಗಿ ಅವುಗಳ ಪ್ರಾಣ ಹಿಂಗಿದರು.

ಈ ವಿಘ್ನ ಸಂತೋಷಿತನಕ್ಕೆ, ಉಪದ್ರವಕಾರಿ ಬುದ್ಧಿಗೆ "ಮಕ್ಕಳು ಮರಿ ಗೋಲಿ, ಚಿಣಿ ಕಟ್ಟಿಗೆ ಆಡುತ್ತ ಗಟರಿಗೆ ಹೆಕ್ಕಲು ಇಳಿಯುತ್ತವೆ" ಎಂಬುದನ್ನೇ ಆಸರೆ ಮಾಡಿಕೊಂಡು, ಕಪ್ಪೆಯನ್ನೂ ಕೂಡ ಬಂಧಿಸಿಟ್ಟು, ಅದರ ಜೀವಕ್ಕೂ ಎರವಾಗಿ ಪೌರುಷ ಮೆರೆದಿದ್ದು, ನನ್ನಲ್ಲಿ ಹೇವರಿಕೆ ಹುಟ್ಟಿಸಿದೆ. ಪ್ರಸಂಗಾವಧಾನ ಇಲ್ಲದ, ಹಿರೀಕತನದ ಚಪಲದಿಂದ ಮಾಡಿದ ಈ ಅತಿರೇಕದ ಪ್ರಯೋಗದಿಂದ ನಾವು ಮನುಷ್ಯರಾ? ಎಂದು ಮುಟ್ಟಿ ನೋಡಿಕೊಳ್ಳಬೇಕಾದ ಪ್ರಸಂಗವಿದು.

ಅಂತೂ ಕಪ್ಪೆಯ ಕಾಲಿಗೆ ಹಗ್ಗ ಕಟ್ಟಿ, ಗಟಾರಿನಲ್ಲಿ ಇಳಿ ಬಿಟ್ಟು ಹಾವನ್ನು ಕೆಣಕಬಲ್ಲ ಬುದ್ಧಿ ಇರುವ ಜನಕ್ಕೆ ಜೀವ ಸಹಿತ ಅವುಗಳನ್ನು ಬಂಧಿಸುವ ಜ್ಞಾನ ಇರಲಿಲ್ಲ ಎಂಬುದನ್ನು ನಾನು ನಂಬಲಾರೆ. ಅದು ನನ್ನ ಅವಿವೇಕತನದ ಪರಮಾವಧಿ ಎಂದೇ ನಾನು ಭಾವಿಸುತ್ತೇನೆ. ಈ ಪ್ರಯೋಗದ ಹಿಂದಿನ ಉದ್ದೇಶ ಮಾತ್ರ ಅವುಗಳನ್ನು ಕೊಲ್ಲುವುದಾಗಿತ್ತು ಎಂದು ನಾನು ಖಂಡಿತವಾಗಿಯೂ ಹೇಳಬಲ್ಲೆ, ಸಾಧಿಸಬಲ್ಲೆ. ಬದುಕಿಸುವ ಪ್ರಾಮಾಣಿಕ ಪ್ರಯತ್ನದ ಲವಲೇಷವೂ ಇಲ್ಲಿ ಕಾಣಿಸಲಿಲ್ಲ.

ಕಾರಣ ನಾವು ‘ಮನುಷ್ಯರು’..‘ಬುದ್ಧಿವಂತರು’, ‘ವಿವೇಕಿಗಳು’..ಹಾಗೆಯೇ "ತೇಲುವವರನು ಮುಳುಗಿಸಬಲ್ಲೆವು..ಮುಳುಗುವವರನು ತೇಲಿಸಬಲ್ಲೆವು" ಅಲ್ಲವೇ? "ತೇನ ವಿನಾ ತೃಣಮಪಿ ನ ಚಲತಿ" ಎನ್ನುತ್ತಾರೆ. ಆಸ್ತಿಕನಾಗಿ ನಾನು ಇದು ದೈವ ನಿರ್ಣಯ ಎನ್ನಲೇ?