ಕೀಟ-ರೋಗ ನಾಶಕ ಬಳಸುವ ಮುನ್ನ ತಿಳಿದಿರಲಿ.
ವೈದ್ಯರು ಕೆಲವು ಅಸ್ವಾಸ್ಥ್ಯಗಳಿಗೆ ಕೆಲವು ತರಕಾರಿ, ಹಣ್ಣು ಹಂಪಲುಗಳನ್ನು ತಿನ್ನಬೇಡಿ ಎನ್ನುತ್ತಾರೆ. ವಾಸ್ತವವಾಗಿ ಅವುಗಳಲ್ಲಿ ಆ ಅಸ್ವಾಸ್ತ್ಯಕ್ಕೆ ತೊಂದರೆ ಮಾಡುವ ಅಂಶ ಹೆಚ್ಚು ಇರಲಿಕ್ಕಿಲ್ಲ. ಆದರೆ ಅದನ್ನು ಬೆಳೆಯುವಾಗ ಬಳಸುವ ಬೆಳೆ ಸಂರಕ್ಷಕ ಔಷಧಿಗಳ ಉಳಿಕೆಯ ಪರಿಣಾಮದಿಂದ ಆವು ಹೆಚ್ಚು ತೊಂದರೆ ಉಂಟುಮಾಡುತ್ತವೆ ಎನ್ನಬಹುದು. ರೈತರು ಬೆಳೆ ಸಂರಕ್ಷಕಗಳನ್ನು ಬಳಕೆ ಮಾಡುವಾಗ ಅದರ ಉಳಿಕೆ ಅಂಶಗಳ ಬಗ್ಗೆ ತಿಳಿದಿದ್ದರೆ ರಾಸಾಯನಿಕ ಉಳಿಕೆ ಮುಕ್ತ ಉತ್ಪನ್ನ ಉತ್ಪಾದಿಸುವುದು ಕಷ್ಟವಿಲ್ಲ.
ನಮ್ಮದು ಪ್ರಪಂಚದಲ್ಲೇ ಅಧಿಕ ಪ್ರಮಾಣದಲ್ಲಿ ಹಣ್ಣು ಹಂಪಲು, ತರಕಾರಿ ಬೆಳೆಯುವ ದೇಶ. ಬೆಳೆ ಬೆಳೆಯುವಾಗ ಕೆಲವು ಕೀಟ ಹಾಗೂ ರೋಗಗಳನ್ನು ನಿರ್ವಹಣೆ ಮಾಡಲೇ ಬೇಕಾಗುತ್ತದೆ. ಮುಖ್ಯವಾಗಿ ಆಂತ್ರಾಕ್ನೋಸ್, ಬೂದಿ ರೋಗ (ಪೌಡ್ರೀಮಿಲ್ಡಿವ್), ಜಿಗಿ ಹುಳು (ಮಾಂಗೋ ಹೋಪರ್ಸ್) ಹಿಟ್ಟು ತಿಗಣೆ (ಮೀಲೀ ಬುಗ್) ಹೇನು (ಥ್ರಿಪ್ಸ್) ಚಿಗುರು ಕೊರಕ (ಶೂಟ್ ಬೋರರ್), ಕಾಂಡ ಕೊರಕ (ಸ್ಟೆಂ ಬೋರರ್) ವಾಟೆ ಕೊರಕ (ಸ್ಟೋನ್ ವೀವಿಲ್) ಹಣ್ಣು ನೊಣ (ಫ಼್ರುಟ್ ಫ್ಲೈ) ಶಲ್ಕ ಕೀಟ (ಸ್ಕೇಲ್ ಇನ್ಸೆಕ್ಟ್) ಕಾಯಿ ಕೊರಕ (ಫ್ರುಟ್ ಬೋರರ್) ಮುಂತಾದ ಕೀಟಗಳು, ಅಲ್ಲದೆ ರೋಗಾಣುಗಳು ಬರುವುದು ಸಾಮಾನ್ಯ. ಇವುಗಳನ್ನು ನಿವಾರಣೆ ಮಾಡದೇ ಇದ್ದಲ್ಲಿ, ಬೆಳೆ ಗಣನೀಯ ಪ್ರಮಾಣದಲ್ಲಿ ನಷ್ಟವಾಗುತ್ತದೆ. ಇದಕ್ಕಾಗಿ ಬೇರೆ ಬೇರೆ ಕೀಟನಾಶಕಗಳು ಹಾಗೂ ಶಿಲೀಂದ್ರ ನಾಶಕಗಳನ್ನು ಬಳಕೆ ಮಾಡಬೇಕಾಗುತ್ತದೆ. ಈ ಬೆಳೆ ಸಂರಕ್ಷಣಾ ರಾಸಾಯನಿಕಗಳನ್ನು ಬಳಕೆ ಮಾಡುವಾಗ ಅವುಗಳ ಉಳಿಕೆಗಳು ಫಸಲಿನಲ್ಲಿ ಉಳಿಯುವ ಸಾಧ್ಯತೆ ಇರುತ್ತದೆ. ಸಾರ್ವಜನಿಕ ಸ್ವಾಸ್ತ್ಯದ ದೃಷ್ಟಿಯಿಂದ ಕೀಟ ನಾಶಕ, ಶಿಲೀಂದ್ರನಾಶಕಗಳ ಉಳಿಕೆಗಳು ಸಹ್ಯ ಪ್ರಮಾಣದಲ್ಲಿರುವಂತೇ ಮಾಡಲು ಗರಿಷ್ಟ ಉಳಿಕೆ ಮಿತಿಯನ್ನು (Maximum Residue Limit) ನಿರ್ಧರಿಸಲಾಗಿದೆ. ಈ ಮಿತಿಯಲ್ಲಿರುವ ಹಣ್ಣನ್ನು, ತರಕಾರಿಯನ್ನು ತಿನ್ನುವುದರಿಂದ ಬಳಕೆದಾರರ ಆರೋಗ್ಯಕ್ಕೆ ತೊಂದರೆ ಇರುವುದಿಲ್ಲ. ಈ ನಿಯಮವನ್ನು ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಆಹಾರ ಕಲಬೆರಕೆ ನಿಯಂತ್ರಣ ಕಾಯಿದೆ ೧೯೫೪ (Prevention of Food Adulteration (PFA)1954, by Ministry of Health and Family Welfare) ರ ಅಡಿಯಲ್ಲಿ ಜ್ಯಾರಿಗೆ ತರಲಾಗಿದೆ. ಇದು ಮಿಲಿ ಗ್ರಾಂ, ಕಿಲೋ, ಅಥವಾ ಪಿಪಿಎಂ ನ ಅಳತೆಯಲ್ಲಿರುತ್ತದೆ. ಈ ಮಟ್ಟವನ್ನು ಪೂರೈಸಲು ಯಾವುದೇ ರಾಸಾಯನಿಕಗಳನ್ನು ಸಿಂಪರಣೆ ಮಾಡುವಾಗ ಪ್ರಥಮ ಕೊಯಿಲಿನ ಮುಂಚೆ ನಿರ್ಧರಿತ ದಿನಗಳ ಅಂತರವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಈ ದಿನಗಳ ಅಂತರವನ್ನು ಕೊಯಿಲಿಗೆ ಮುಂಚಿನ ಮಧ್ಯಂತರ (Pre Harvest Interval (PHI)) ಎನ್ನುತ್ತಾರೆ. ಈ ಕ್ರಮವನ್ನು ಅನುಸರಿಸಿದಾಗ ಹೊಲದಲ್ಲಿ ಕೃಷಿ ರಾಸಾಯನಿಕಗಳ ಕರಗದೇ ಉಳಿಯುವಿಕೆ ನಗಣ್ಯಗಾಗುತ್ತದೆ. ಪ್ರತೀಯೊಂದು ಕೀಟನಾಶಕ, ಶಿಲೀಂದ್ರ ನಾಶಕಗಳಿಗೆ ಅವುಗಳನ್ನು ತಯಾರಿಸಿದ ಮೂಲವಸ್ತುವಿನ ಮೇಲೆ ಅವುಗಳ ಕರಗುವ ಅವಧಿ ಭಿನ್ನವಾಗಿರುತ್ತದೆ.
ಸಾಮಾನ್ಯವಾಗಿ ಬಳಕೆಯಾಗುವ ಕೀಟನಾಶಕಗಳು- ರೋಗನಾಶಕಗಳು ಮತ್ತು ಅವುಗಳ ಬಳಕೆ ಪ್ರಮಾಣ ಗರಿಷ್ಟ ಉಳಿಕೆ ಮಿತಿ, ಮತ್ತು ಕೊಯಿಲಿಗೆ ಎಷ್ಟು ದಿನಗಳ ಮುಂಚೆ ಬಳಸಬೇಕು ಎಂಬುದರ ಬಗ್ಗೆ ಮಾಹಿತಿ ಹೀಗಿದೆ.
ಅಸೆಫೇಟ್ (Acephate) ೧.೦ಗ್ರಾಂ/ಲೀ ೦.೦೧ ಪಿಪಿಎಂ. ೩೦ ದಿನಗಳು
ಬೆನೊಮಿಲ್ (Benomyl) ೧.೦ ಗ್ರಾಂ/ಲೀ ೨.೦೦ ಪಿಪಿಎಂ ೩೦ ದಿನಗಳು
ಬಿಫೆನ್ಥ್ರ್ರಿನ್ (Bifenthrin) ೦.೫ ಮಿಲಿ/ಲೀ. ೦.೫೦ ಪಿಪಿಎಂ ೧೬ ದಿನಗಳು
ಕಾರ್ಬನ್ ಡೈಜಿಮ್ (Carbendazim) ೧.೦ ಗ್ರಾಂ/ಲೀ ೨.೦೦ ಪಿಪಿಎಂ. ೩೦ ದಿನಗಳು
ಸೈಪರ್ ಮೆಥ್ರಿನ್ (Cypermethrin ) ೧.೦ ಮಿಲಿ/ಲೀ ೦.೦೩ ಪಿಪಿಎಂ ೨೧ ದಿನಗಳು
ಡಿಫೆನೋಕೊನೆಝೋಲ್ (Difenoconazole) ೦.೫ ಮಿಲಿ /ಲೀ. ೦.೦೭ ಪಿಪಿಎಂ. ೨೮ ದಿನಗಳು
ಡೆಲ್ಟ್ರಾಮೆಥ್ರಿನ್ (Deltamethrin) ೧.೦ ಮಿಲಿ/ಲೀ ೦.೫೦ ಪಿಪಿಎಂ ೨೧ ದಿನಗಳು
ಡೈಮೆಥೊಯೇಟ್ (Dimethoate) ೨.೦ ಮಿಲಿ/ಲೀ ೧.೦೦ ಪಿಪಿಎಂ ೧೫ ದಿನಗಳು
ಫೆನ್ಥಿಯೋನ್ (Fenthion) ೨.೦ ಮಿಲಿ/ಲೀ ೨.೦೦ ಪಿಪಿಎಂ ೨೧ ದಿನಗಳು
ಫೆನ್ವೊಲೊರೇಟ್ (Fenvalerate) ೧.೦ ಮಿಲಿ/ಲೀ ೧.೦೦ ಪಿಪಿಎಂ ೩೦ ದಿನಗಳು
ಇಮಿಡಾ ಕ್ಲೋಫ್ರಿಡ್ (Imidacloprid) ೦.೪ ಮಿಲಿ/ಲೀ ೧.೦೦ ಪಿಪಿಎಂ ೬೦ ದಿನಗಳು
ಪ್ರೊಡಿಯೋನ್ (Iprodione) ೨.೦ ಗ್ರಾಂ/ಲೀ. ೧೦.೦ ಪಿಪಿಎಂ ೩ ದಿನಗಳು
ಲಾಂಬ್ಡಾ ಹಲೋಥ್ರಿನ್Lambda Cyhalothrin) ೦.೫ ಮಿಲಿ/ಲೀ ೦.೫೦ಪಿಪಿಎಂ. ೧೫ ದಿನಗಳು
ಪ್ರೋಕ್ಲೊರಾಜ್(Prochloraz) ೧.೦ ಗ್ರಾಂ/ಲೀ ೨.೦೦ ಪಿಪಿಎಂ ೬ ದಿನಗಳು
ಕ್ವಿನಾಲ್ ಫೋಸ್ (Quinalphos) ೨.೦ ಮಿಲಿ/ಲೀ ೦.೦೨ ಪಿಪಿಎಂ. ೨೦ ದಿನಗಳು
ಥಿಯೋಫೆನೇಟ್ ಮಿಥೇಲ್ (Thiophanate Methyl) ೧.೦ ಗ್ರಾಂ/ಲೀ. ೨.೦೦ ಪಿಪಿಎಂ ೩೦ ದಿನಗಳು
ಇವುಗಳು ಇದರ ತಾಂತ್ರಿಕ ಹೆಸರುಗಳಾಗಿದ್ದು ಮಾರುಕಟ್ಟೆಯಲ್ಲಿ ಇದಕ್ಕೆ ಬೇರೆ ಬೇರೆ ಹೆಸರುಗಳಿವೆ. ಆ ಹೆಸರಿನ ಕೆಳಗೆ ಅದರ ತಾಂತ್ರಿಕ ಹೆಸರನ್ನು ತಪ್ಪದೇ ಮುದ್ರಿಸಿರುತ್ತ್ತಾರೆ. ಉದಾರರಣೆ: Rogar (ಡೈಮೆಥೊಯೇಟ್) ಕರಾಟೆ (Lambda Cyhalothrin)
ಇವುಗಳಲ್ಲಿ ಕೆಲವು ಕೀಟನಾಶಕ ಮತ್ತು ಶಿಲೀಂದ್ರನಾಶಕಗಳ ಉಳಿಕೆಗಳನ್ನು ನೀರಿನಲ್ಲಿ ತೊಳೆಯುವುದರಿಂದ, ಸಾಮಾನ್ಯ ಉಪ್ಪಿನ ದ್ರಾವಣದಲ್ಲಿ ತೊಳೆಯುವುದರಿಂದ, ಸಾಮಾನ್ಯ ಸಾಬೂನು ಸೇರಿಸಿದ ನೀರಿನಲ್ಲಿ ತೊಳೆಯುವುದರಿಂದ, ಸಿಪ್ಪೆ ತೆಗೆಯುವುದರಿಂದ ಕಡಿಮೆ ಮಾಡಬಹುದು. ಕಾರ್ಬನ್ ಡೈಜಿಮ್ ಅನ್ನು ಈ ರೀತಿ ತೊಳೆದರೆ ೨೫-೩೦ % ಕಡಿಮೆಯಾಗುತ್ತದೆ. ಡಿಫೆನೋಕೊನೆಝೋಲ್ ೩೦-೫೦ % ವೂ, ಪ್ರೊಡಿಯೋನ್ ೭೫-೮೦ % ವೂ, ಪ್ರೋಕ್ಲೊರಾಜ್ ೭೫-೮೦ % ವೂ ಕಡಿಮೆಯಾಗುತ್ತದೆ.
ಕೀಟನಾಶಕ ಮತ್ತು ಶಿಲೀಂದ್ರ ನಾಶಕಗಳ ಉಳಿಕೆಯನ್ನು ಕಡಿಮೆ ಮಾಡಲು ಕೆಲವು ಕ್ರಮಗಳನ್ನು ಪಾಲಿಸಬೇಕು ಅವುಗಳೆಂದರೆ ಯಾವಾಗಲೂ ಶಿಫಾರಿತ ಕೀಟನಾಶಕ, ಶಿಲೀಂದ್ರ ನಾಶಕಗಳನ್ನು ಸಮಗ್ರ ಕೀಟ ನಿಯಂತ್ರಣ ಕ್ರಮದಂತೆ ಬಳಕೆ ಮಾಡಬೇಕು. ರಾಸಾಯನಿಕ ಮೂಲದವುಗಳನ್ನು ಸಸ್ಯ ಬೆಳವಣಿಗೆ ಸಮಯದಲ್ಲೂ, ಸಸ್ಯ ಜನ್ಯ ಔಷಧಿಗಳನ್ನು ಕಾಯಿಯಾದ ನಂತರವೂ ಬಳಕೆ ಮಾಡಬೇಕು. ಯಾವಾಗಲೂ ಕೊಯಿಲಿಗೆ ಹತ್ತಿರದ ಸಮಯದಲ್ಲಿ ಸಿಂಪರಣೆ ಮಾಡಬೇಡಿ. ಪರಿಸರಕ್ಕೆ ಹಾನಿ ಇಲ್ಲದ್ದನ್ನು ಆರಿಸಿ ಕಡಿಮೆ ಸಾಂದ್ರತೆಯಲ್ಲಿ ಬಳಸಿರಿ. ಸಿಂಪಡಿಸಲು ಸೂಕ್ತ ಸಾಧನಗಳನ್ನು, ಮತ್ತು ಸಿಂಪಡಿಸುವಾಗ ತೊಡಬೇಕಾದ ರಕ್ಷಕ ಉಡುಗೆ ಧರಿಸಲು ಮರೆಯಬೇಡಿ.
ಚಿತ್ರಗಳು ಮತ್ತು ಮಾಹಿತಿ: ರಾಧಾಕೃಷ್ಣ ಹೊಳ್ಳ