ಕುಂಭಕರ್ಣನ ಡೈರಿಯಿಂದ

ಕುಂಭಕರ್ಣನ ಡೈರಿಯಿಂದ

ಬರಹ

ಲೋ ಪಚ್ಚು ನೀನು ಮೂಲತಃ ಯಾವ ಊರಿನವನೋ ??ಬೆಳಿಗ್ಗೆ ಎದ್ದವನೇ ಪ್ರಶಾಂತನಿಗೆ ಕೇಳಿದೆ . ಯಾಕೋ ಏನಾಯ್ತು ?? ಎಂದ. ಏನಿಲ್ಲ ಗುರುವಾರ ರಾತ್ರಿ ನಿದ್ರೆಯಲ್ಲಿ ನೀನು ಕೂಚಿಪುಡಿ ಮಾಡ್ತಾ ಇದ್ದೆ ಆಗ ನೀನು ಆಂಧ್ರದವ ಎಂದುಕೊಂಡೆ . ಮೊನ್ನೆರಾತ್ರಿ ಕಥಕ್ಕಳಿಯಲ್ಲಿ ನಿನ್ನ talent ನೋಡಿ ನೀನು ಪಕ್ಕಾ ಮಲ್ಲು ಅಂದು ಡಿಸೈಡ್ ಮಾಡಿದೆ .ಆದರೆ ನಿನ್ನೆ ನೀನು ಮಾಡಿದ ಯಕ್ಷಗಾನ ನೋಡಿ full confuse ಆದೆ . ಏನ್ Performance ಲೇ ಅದು . ಗಣಪತಿ ಪೂಜೆ ಮುಗಿದು ಇನ್ನೇನು ಕೋಡಂಗಿ ಪ್ರವೇಶ ಮಾಡಬೇಕೆನ್ನುವಾಗ ನಿಲ್ಲಿಸಿಬಿಟ್ಟೆ . ಅದನ್ನು ನೋಡಿ ನೀನು ಕನ್ನಡಮ್ಮನ ಕಣ್ಮಣಿ ಎಂದು conclude ಮಾಡಿದ್ದೇನೆ ಸರೀನಾ?? ಏನೇ ಹೇಳು ನಿನ್ನದು ಬಹುಮುಖ ಪ್ರತಿಭೆ ಕಣೋ ಎಂದೆನು. ಏನ್ ಮಾಡ್ಲೋ ?? ಅಪ್ಪನದು Job Transfer ಆಗುತ್ತಾ ಇರುತ್ತೆ ಅದಕ್ಕೆ ಹೀಗೆ ಆಗ್ತಾ ಇದೆ ಎಂದ . ಸ್ವಲ್ಪ ದಿನದ ನಂತರ "ಲೋ ಪಚ್ಚು ನಿಮ್ಮಪ್ಪಂಗೆ ಇಂಗ್ಲೆಂಡ್ Transfer ಆಯ್ತಾ ?? ಎಂದು ಕೇಳಿದೆ . "ಯಾಕೋ ???" ಎಂದ . ಏನಿಲ್ಲ ನಿನ್ನೆ ರಾತ್ರಿ ನೀನು Brake Dance ಮಾಡ್ತಾ ಇದ್ದೆ ಅದಕ್ಕೆ Doubt ಬಂತು ಎಂದೆನು .

ನಿದ್ದೆ !!!!! ಅದರ ಸವಿಯನ್ನು ನಾನು ವರ್ಣಿಸಬೇಕೆ?? ತುರಿಕೆ ಮತ್ತು ನಿದ್ದೆ ಮಾಡಿದಷ್ಟು ಹೆಚ್ಚಾಗುವುದಲ್ಲದೆ ಇನ್ನೂ ಸ್ವಲ್ಪ ಮಾಡಿದರೆ ಹಾಯಾಗಿರುತ್ತದೆ ಎಂದೆನಿಸುತ್ತದೆ . ಎಲ್ಲಾ ದೇವರ ಅನುಗ್ರಹವಿದ್ದವನೊಡನೆ ನಿದ್ರಾದೇವಿ ಮುನಿಸಿಕೊಂಡರೆ ಅವನಿಗೆ ಜೀವನದಲ್ಲಿ ಸುಖ ಶಾಂತಿ ಉಂಟೆ ?? ಅದಕ್ಕೆ ಭಾರೀ ಕಷ್ಟಜೀವಿಯನ್ನು "ನಿದ್ದೆ ಬಿಟ್ಟು ಕೆಲಸ ಮಾಡುತ್ತಾನೆ " ಅನ್ನುತ್ತಾರೆ . "ನಿದ್ರಾಭಂಗಂ ಮಹಾಪಾಪಂ " ಎಂಬ ಮಾತು ಜೀವನದಲ್ಲಿ ನಿದ್ರೆಯ ಪ್ರಾಮುಖ್ಯತೆಯನ್ನು ತೋರಿಸುತ್ತದೆ .ಚಳಿಗಾಲದಲ್ಲಿ ಮೆತ್ತನೆಯ ಹಾಸಿಗೆ ಮತ್ತು ತಲೆದಿಂಬು ,ದಪ್ಪನೆಯ ಹೊದಿಕೆ ಇದ್ದು ಫ್ಯಾನನ್ನು 2 ರಲ್ಲಿಟ್ಟು ಬೋರಲು ಮಲಗಿ ಮುಸುಕು ಹಾಕಿಕೊಂಡರೆ !!!!!! ಏನು ಸುಖ !!! ಅದರಲ್ಲೂ ಮರುದಿನ ಪರೀಕ್ಷೆ ಇದ್ದು , ತಯಾರಿ ಶೂನ್ಯವಾಗಿದ್ದು ಅನಿವಾರ್ಯವಾಗಿ ಓದಲೇ ಬೇಕೆಂಬ ಹಠ ತೊಟ್ಟು ಕೂತಿರಬೇಕಾದರೆ ಕರೆದವರಂತೆ ಬಂದು ಕಣ್ಣ ಮಂಟಪವನ್ನು ಅಲಂಕರಿಸುವ "ಮಂಪರು ನಿದ್ದೆ " !!! ಅದರ ಸವಿಯನ್ನು ವರ್ಣಿಸಲು ಶಬ್ದ ಭಂಡಾರ ಸಾಲದು . ನಿಮಗಿದರ ಅನುಭವವಿಲ್ಲದಿದ್ದರೆ ಯಾವುದಾದರೂ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ ಹುಡುಗನನ್ನು ಕೇಳಿ .

ಇನ್ನು ನನ್ನ ಇನ್ನೊಬ್ಬ roommate ಗುನ್ನು ಅಲಿಯಾಸ್ Garbage ಗಿರೀಶ . ಪರಮ ದೈವಭಕ್ತ . ರಾತ್ರಿಬೆಳಗಾಗುವುದರೊಳಗೆ ಅಷ್ಟ ದಿಕ್ಪಾಲಕರಿಗೆ ಹಾಸಿಗೆ ಮೇಲಿನಿಂದಲೇ ಸಾಷ್ಟಾಂಗ ನಮಸ್ಕಾರ ಹಾಕಿ ಪ್ರಾತಃ ಕಾಲದಲ್ಲಿ ಸೂರ್ಯನಮಸ್ಕಾರಕ್ಕೆ ತಯಾರು. ನಿದ್ದೆಗಣ್ಣಲ್ಲೂ ಬಾಬಾ ರಾಮದೇವರ ಎಲ್ಲಾ ಆಸನಗಳನ್ನೂ ಹೇಳಿಕೊಟ್ಟವಂತೆ ಮಾಡಿ ಮುಗಿಸುವವ . ಅದೂ ಸ್ವಾತಿ ಮಳೆಹನಿಗೋಸ್ಕರ ತೆರೆದುಕೊಂಡಿರುವ ಚಿಪ್ಪಿನಂತೆ ಬಾಯ್ತೆರೆದು ಎದ್ದೋಡಿ ರಾಗದಲ್ಲಿ 3D Sound effect ನಲ್ಲಿ "ಗೊರ್ರ್........ ಸ್ಸ್ಸ್ಸ್ ಸ್ಸ್ಸ ...... ಎಂಬ ಸಿಂಹ ಘರ್ಜನೆಯೊಂದಿಗೆ .(ಎಂಥ ಕಿವುಡನಾದರೂ ಎದ್ದೊಡಬೇಕು ). ಒಂದು ದಿನ ಗುನ್ನು ಮತ್ತು ಪಚ್ಚು ಭರತನಾಟ್ಯದ ಜುಗಲ್ ಬಂಧಿ ಮಾಡುತ್ತಿದ್ದರು . ಮರುದಿನ ಗುನ್ನು ನ ಬಳಿ " ಅಲ್ವೋ ಪಚ್ಚುವಿನದ್ದು ನಿತ್ಯದ ಕಥೆ ಇದ್ದದ್ದೇ ....ನಿನ್ನೆ ನಿನಗೇನಾಯ್ತೋ ??" ಎಂದು ಕೇಳಿದೆ . ಎನಿಲ್ವೋ... ನಿನ್ನೆ ಆಪ್ತಮಿತ್ರ ಸಿನೆಮಾ ನೋಡಿದ್ನಲ್ವಾ ಅದ್ರಲ್ಲಿ ಆ ನಾಗವಲ್ಲಿ ಭರತನಾಟ್ಯ ಹಿಡಿಸ್ತು . ಅದಕ್ಕೆ ಹೀಗೆ ಆಗಿರಬಹುದು ಅಂದ . ಮರುದಿನ ರಾತ್ರಿ ಇವನು Football ನೋಡುತ್ತಿದ್ದದ್ದನ್ನು ಕಂಡು ರಾತ್ರಿ ಏನು ಕಾದಿದೆಯೋ ಎಂದು ಕಂಗಾಲಾದೆ. ಒಮ್ಮೆ ಶುಭ ಕಾರ್ಯನಿಮಿತ್ತ ಗುನ್ನುವಿನ ಮನೆಗೆ ಹೋದಾಗ ಎಲ್ಲರೂ ಸೇರಿ ಒಗಟು ಬಿಡಿಸುವ ಆಟ ಆಡುತ್ತಿದ್ದೆವು . ಆಗ 8 ವರ್ಷದ ಗುನ್ನುವಿನ ತಮ್ಮ " ರಾತ್ರಿ ಉಂಟು ಬೆಳಿಗ್ಗೆ ಇಲ್ಲ " ಎಂದು ಕೇಳಿದ . ನಾವೋ ಚಂದ್ರ -ನಕ್ಷತ್ರ -ಬಾವಲಿ-ಗೂಬೆ ಏನು ಹೇಳಿದರೂ ಇಲ್ಲ ಅನ್ನುತ್ತಿದ್ದಾನೆ . ಆಮೇಲೆ ಸರಿ ನೀನೆ ಹೇಳಪ್ಪ ... ಎಂದಾಗ "ಗಿರೀಶಣ್ಣನ ಲುಂಗಿ " ಎನ್ನುವುದೇ ?? ಇವನ ವಿಷಯ ಇಷ್ಟೇ ಅಲ್ಲ . ನಡುರಾತ್ರಿ ಬುದ್ಧನಂತೆ ಎದ್ದು ಕುಳಿತು 360* ಕತ್ತು ತಿರುಗಿಸಿ " ಬಾ ಮಚ್ಚಾ .... ಹೋಗೋಣಾ .... " ಎನ್ನುತ್ತಾನೆ . ಎಲ್ಲಿ ?? ಏನು?? ಎತ್ತ ?? ಗೊತ್ತಿಲ್ಲ... ನೀವೇನಾದರೂ ಆಗಲ್ಲ - ಹೋಗಲ್ಲ ಅಂದ್ರೆ ಇವನು ಪಾಗಲ್ಲಾಗಿ ಬಿಡ್ತಾನೆ . "ಇಲ್ಲ ಮಚ್ಚಾ .. ರಿಕ್ಷಾದವನು ಬರಲ್ವಂತೆ .. ನಾಳೆ Local train ನಲ್ಲಿ ಹೋಗೋಣ . ಅಂದ್ರೆ ಸುಮ್ಮನೆ ಮಲಗುತ್ತಾನೆ .

"ಸಮಾನ ಗುಣದವರು ಮಿತ್ರರಾಗುತ್ತಾರೆ " ಎಂಬ ಮಾತಿನಂತೆ ನನ್ನ Roommates ನಂತೆ ನಾನೂ ಕೂಡ ನಿದ್ರೆಯಲ್ಲಿ "ಪ್ರಚೋದನಕಾರಿ " ಭಾಷಣ ಮಾಡುತ್ತೇನೆ . ನನ್ನದು ಕೇವಲ ಶ್ರವ್ಯ ಮಾಧ್ಯಮ ಪಚ್ಚುವಿನಂತೆ ದೃಶ್ಯ ಮಾಧ್ಯಮವಲ್ಲ . "ಆಚಾರವಿಲ್ಲದ ನಾಲಿಗೆ ರಾತ್ರಿ ಮುಚ್ಕೊಂಡು ಮಲಗೋ ನಾಲಿಗೆ " ಎಂದು ಎಷ್ಟು ಹೇಳಿದರೂ ಅದು ಕೇಳುವುದಿಲ್ಲ . ಸಣ್ಣ ಪ್ರಾಯದಿಂದಲೇ ನಾನು ನಿದ್ರೆಯಲ್ಲಿ ಮಾತಾಡುತ್ತಿದ್ದೆ ಅದಕ್ಕೆ ಕಾರಣವೂ ಇದೆ . ಕೇಳಿ ....

ಅಣ್ಣನೊಡನೆ ಆಟ ಆಡುವಾಗ ಆಟದ ಮಧ್ಯೆ ವಾಗ್ಯುದ್ಧ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೈ-ಕೈ ಮಿಲಾಯಿಸುತ್ತಿದ್ದ ನಾವು ಹೇಗೋ ಅಮ್ಮನನ್ನು ಒಲಿಸಿಕೊಂಡು ಈ ವಿಷಯ ಅಪ್ಪನ ಬಳಿ ತಲುಪದಂತೆ ನೋಡಿಕೊಳ್ಳುತ್ತಿದ್ದೆವು. ಬೆಳಿಗ್ಗೆ ಅಪ್ಪನಿಂದ ತಪ್ಪಿಸಿಕೊಂಡರೂ ರಾತ್ರಿ ಕನಸಿನಲ್ಲಿ ಅಪ್ಪನ ಪಂಚಾಯ್ತಿ ಕಟ್ಟೆ ಶುರು " ಸುಮಂಥಾ ..... ಇಲ್ಲಿ ಬಾ !!!!! ಅಪ್ಪನ ಆವಾಜ್ ಗೆ ನಿದ್ದೆಯಲ್ಲೇ ಬಾಯೊಣಗುತ್ತಿತ್ತು . ಆದರೂ ಆ ಗಾಢ ನಿದ್ದೆಯಲ್ಲೂ ನನ್ನ 7th sense 6th sense ಗೆ ಹೇಳುತ್ತಿತ್ತು. " ನೋಡು ಸುಮಂತಾ ನೀನು ಮಲಗಿದ್ದೀಯಾ, ಇದು ಬರೀ ಕನಸು..... , ಬಾಯಿ ಬಿಟ್ಟು ಬಕ್ರಾ ಅನ್ನಿಸ್ಕೊಬೇಡ ತೆಪ್ಪಗೆ ಮಲಗು ಎಂದು " ಇದರ ಹಿಂದೆಯೇ " ಸುಮಂಥಾ ......ಬಂದ್ಯೋ ಹೇಗೆ ??? ಕಣ್ಣು ಕೆಂಪು ಮಾಡಿ ಅಪ್ಪನ ತಾರಕ ಸ್ವರ. ಅಂಥಾ ಸಮಯದಲ್ಲಿ ಮನಸ್ಸು ಅಪ್ಪನ ಪೆಟ್ಟಿನಿಂದ ಬದುಕಲು ಬೇರೆ ಎಲ್ಲ Sense ನ್ನು ಬದಿಗೊತ್ತುತ್ತಿತ್ತು ಹಾಗೂ ಅಪ್ರಯತ್ನವಾಗಿ ನಾನು " ಬಂದೇ....." ಎಂದು ಕೂಗಿ ಎದ್ದು ಕೂತರೆ ನೋಡುವುದೇನು ?? ಅಕ್ಕ - ಅಣ್ಣ ಇಬ್ಬರೂ ಒಳ್ಳೆ ದೊಂಬರಾಟ ನೋಡುತ್ತಿರುವಂತೆ ನನ್ನನ್ನೇ ಗುರಾಯಿಸುತ್ತಿದ್ದಾರೆ ಮುಸಿ ಮುಸಿ ನಗುತ್ತಿದ್ದಾರೆ. ಆದರೆ ಆ ಅವಮಾನದಲ್ಲೂ ನನಗೆ ಅಪ್ಪನ ಪೆಟ್ಟಿನಿಂದ ತಪ್ಪಿಸಿಕೊಂಡ ಸಂಭ್ರಮ . ಅಷ್ಟೆ ಅಲ್ಲ ರಾತ್ರಿ ರಾಮಾಯಣದಿಂದ ರಾಜಕೀಯದ ವರೆಗೆ ಎಲ್ಲ ಕಾನೂನು ಮಾತಾಡುವ ನಾನು ಕೊನೆಯಲ್ಲಿ " ಮಚ್ಚಾ ನಾನೇನು ನಿದ್ದೆಯಲ್ಲಿ ಮಾತಾಡ್ತಾ ಇದ್ದೀನಿ ಅಂದುಕೊಂಡ್ಯಾ ?? " ಎಂದು ಕೇಳುತ್ತೀನಂತೆ. ತಾನು ನಿದ್ದೆಯಲ್ಲಿದ್ದೀನ ?? ಅಥವಾ ಇವನು ನಿದ್ದೆಯಲ್ಲಿದ್ದಾನಾ ?? ಎಂದು ಅವನಿಗೇ confusion ಆಗಬೇಕು .

ಇನ್ನು ಕನಸುಗಳು . ಎಂತೆಂಥಾ ಕನಸು ಬೀಳುವುದಿಲ್ಲ ?? ಅಜ್ಜಿಗೆ ಕನಸಿನಲ್ಲಿ ಕೃಷ್ಣ ಬಂದರೆ ಮೊಮ್ಮಗನಿಗೆ ಬರೀ ಗೋಪಿಕಾ ಸ್ತ್ರೀಯರು ಬರುತ್ತಾರೆ . ಗಂಗಾವತಿಯ ಪ್ರಾಣೇಶ್ ಅವರು ಹೇಳುವಂತೆ ಸಿಂಡಿಕೇಟ್ ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡವನಿಗೆ ಕನಸಿನಲ್ಲಿ ಬರೀ ನಾಯಿಯೇ ಬರುತ್ತದಂತೆ ( ನಾಯಿ - ಸಿಂಡಿಕೇಟ್ ಬ್ಯಾಂಕಿನ ಲೋಗೋ ) . ಸಮುದ್ರದ ಮಧ್ಯೆ ಸಿಕ್ಕಿಬಿದ್ದಿರುವಂತೆ ಕನಸು ಕಾಣುವ ನಮ್ಮ ಅಮ್ಮನ ಕನಸಿನ ಕೊನೆಯಲ್ಲಿ ಅಪ್ಪ ಸ್ಕೂಟರ್ ತೆಗೆದುಕೊಂಡು ಬಂದು ಅಮ್ಮನನ್ನು ಕರೆದುಕೊಂಡು ಹೋಗುತ್ತಾರಂತೆ !!!!! ಇನ್ನು ಎಷ್ಟು ಸುಂದರ ಹುಡುಗಿಯರ ಕನಸಿನಲ್ಲಿ ಬಂದು ನಾನು ಅವರ ನಿದ್ದೆಗೆಡಿಸಿದ್ದೇನೋ ನಾನರಿಯೆ . :)

ಕನಸ ಮಾರುತಿಹೆ ಬನ್ನಿ ಕನಸುಗಳ ಜಾತ್ರೆಗೆ
ಬಸಿದುಕೊಳ್ಳಿರಿ ಕನಸನು ನಿಮ್ಮ ನಿದ್ದೆಯ ಪಾತ್ರೆಗೆ
ಇದರಲ್ಲಿಹುದು ದೊಡ್ಡ ಕನಸುಗಳ ಗಂಟು
ಎಲ್ಲ ಬಗೆಯ ಜನರಿಗೂ ಕನಸು ಇದರಲ್ಲುಂಟು

ವಿದ್ಯಾರ್ಥಿಗೆ ಕಾಲೇಜಿನಲ್ಲಿ ಸೀಟು
ರಾಜಕಾರಣಿಗೆ ಜನಗಳ ಓಟು||
ಪ್ರೇಮಿಗೆ ಪ್ರೇಯಸಿಯೊಡನೆ ಪಾರ್ಕು
ಇಂಜಿನಿಯರಿಂಗ್ ವಿದ್ಯಾರ್ಥಿಗೆ 35 ಮಾರ್ಕು ||

ಕಷ್ಟಜೀವಿಗೆ ಹೊಸ ಮನೆಯ ಕಟ್ಟುವುದು
ತೆಂಡೂಲ್ಕರ್ ಗೆ ಚೆಂಡು ಹೊರಗಟ್ಟುವುದು ||
ಸೊಳ್ಳೆ ಗೆ ಜನರನ್ನು ಕಚ್ಚುವುದು
ಷೋಡಷಿಗೆ ಲಿಪ್ ಸ್ಟಿಕ್ಕು ಹಚ್ಚುವುದು ||

ಕುಡುಕನಿಗೆ ಸಂಜೆ ಬಿಟ್ಟಿ ಬೀರಿನದು
TATA ಗೆ NANO ಕಾರಿನದು .
ಮುದುಕನಿಗೆ ಕೃತಕ ಹಲ್ಲಿನದು
ನನಗೋ ಹೊಸ ಆರ್ಟಿಕಲ್ಲಿನದು . :)

ಕನಸ ಮಾರುತಿಹೆ ಬನ್ನಿ ಕನಸುಗಳ ಜಾತ್ರೆಗೆ
ಬಸಿದುಕೊಳ್ಳಿರಿ ಕನಸನು ನಿಮ್ಮ ನಿದ್ದೆಯ ಪಾತ್ರೆಗೆ

ನಮ್ಮ ಜೀವನದ ಸುಮಾರು 1/3 ಭಾಗವನ್ನು ನಾವು ಮಲಗುವುದರಲ್ಲೇ ಹಾಗೂ ಮಲಗಿ ಕನಸು ಕಾಣುವುದರಲ್ಲಿ ಕಳೆಯುತ್ತೇವೆ. ಬರೆಯಲಿಕ್ಕೆ ಇನ್ನೂ ತುಂಬಾ ಇದ್ದರೂ ಈಗ ನಿದ್ದೆ ಎಳೆಯುತ್ತಿದೆ . ಆಆ..... ಆಕಳಿಕೆ . ನಿಮಗೆಲ್ಲರಿಗೂ ಸಕಲ ಆಯಾಸ ಪರಿಹಾರಕಿ ನಿದ್ರಾದೇವಿ ಒಲಿಯಲಿ ಹಾಗೂ ನಿಮ್ಮ ಎಲ್ಲ ಕನಸುಗಳು ನನಸಾಗಲಿ ಎಂದು ಹಾರೈಸುತ್ತಾ ಕುಂಭಕರ್ಣನ ಡೈರಿಯನ್ನು ಮುಚ್ಚುತ್ತಿದ್ದೇನೆ . ಏನು ?? ನಾನು ಈ ಲೇಖನ ನಿದ್ದೆಯಲ್ಲಿ ಬರೆದದ್ದು ಅಂದುಕೊಂಡ್ರಾ ??? !!! ಇಲ್ಲ ಸ್ವಾ.. ಮೀ .... ಎ .. ಚ್ಚ .. ರ ...ವಿ ... ದ್ದೀ ... ನಿ .... ಅಮ್ಮಾ ......ಆಆ .......
==================ವಿಕಟಕವಿ ==================