ಕ್ಶಮಿಸು ನಾ ರಾಧೆಯಲ್ಲ-೨

ಕ್ಶಮಿಸು ನಾ ರಾಧೆಯಲ್ಲ-೨

ಬರಹ

ಅಂದು ಮತ್ತೆ ಕಿರಣ್ ಬಂದ ."ಪ್ರಿಯಾ" ಮೊತ್ತ ಮೊದಲ ಬಾರಿಗೆ ನನ್ನ ಹೆಸರನ್ನು ಕರೆದಾಗ ಮೈಯಲ್ಲಿ ಎನೋ ಅರಿಯದ ಪುಳಕ. ಅಭಿ ಮೊದಲ ರಾತ್ರಿ ಹತ್ತಿರ ಬಂದಾಗಲೂ ಹೀಗಾಗಿರಲಿಲ್ಲವೇನೋ "ಸಾರಿ ನಾನು ತುಂಬಾ ದಿನ ಹೀಗೆ ನಿರೀಕ್ಷೆ ಇಟ್ಟುಕೊಂಡು ಇರೋಕೆ ಆಗ್ತಾ ಇಲ್ಲ, ನಾನು ಹೇಳುತ್ತಿರೋದು ಮಾಡುತ್ತಿರೋದು ತಪ್ಪು ಅಂತ ನನಗೂ ಗೊತ್ತು . ಆದರೂ ಒಂದು ಮಾತನ್ನು ನಿಮ್ಮ ಹತ್ತಿರ ಕೇಳಲೇಬೇಕು ಅಂತ ನಿರ್ಧಾರ ಮಾಡಿದ್ದೇನೆ"
ನನಗೆ ಗೊತ್ತಿತ್ತು ಅವನು ಏನು ಕೇಳುತ್ತಾನೆಂದು ಆದರೆ ನಾನು ಅದಕ್ಕೆ ಮಾನಸಿಕವಾಗಿ ಸಿದ್ದಳಿರಲಿಲ್ಲ . ಹೇಗಾದರೂ ತಪ್ಪಿಸಿಕೊಳ್ಳಬೇಕಿತ್ತು. "ಕಿರಣ್ ನನಗೆ ಇವತ್ತು ಮನಸು ಸರಿ ಇಲ್ಲ . ಮಾತಿಗಿಂತ ಏಕಾಂತವೇ ಲೇಸಾಗಿದೆ . ಇಂದು ನಾನು ಯಾವ ಮಾತಿಗೂ ಬರೋದಿಲ್ಲ. ಲೀವ್ ಮಿ ಅಲೋನ್ ಪ್ಲೀಸ್"
ಕಿರಣ್ ಸಪ್ಪೆ ಮುಖ ಮಾಡಿಕೊಂಡು ಹೊರಟು ಹೋದ .
ಮನದಲ್ಲಿ ಏನೋ ನೋವು.ತನಗೂ ಅವನಿಗೂ ಯಾವರೀತಿಯಲ್ಲಿ ಸಮ?ವಯಸ್ಸಿನಲ್ಲಿ ಹುದ್ದೆಯಲ್ಲಿ ಎಲ್ಲಾ ರೀತಿಯಿಂದಲೂ ಆತ ಇನೂ ಚಿಗುರು ನಾನೋ ಬಲಿತ ಮರ.
ಚಿಗುರಿಗೆ ಮರ ಆಸರೆಯಾಗಬಲ್ಲುದೆ ಹೊರತು ಮರಕ್ಕೆ ಚಿಗುರು ಎಲ್ಲಿಯ ಆಸರೆ.ಆದರೇನು ಮನಸ್ಸು ಮರ್ಕಟ , ವಿವೇಕದ ಮಾತನ್ನು ಆಲಿಸಲು ಒಪ್ಪುತ್ತಿಲ್ಲ.
ವಿವೇಕ ಹಾಗು ಆಸೆಯ ಮಧ್ಯೆ ಯಾವತ್ತಿಗೂ ಆಸೆಗೆ ಜಯ ಹಾಗೆಯೇ ನನಗೂ ಆಗುತ್ತೇನೋ . ?
ಮುಂದೊಂದೆರೆಡು ದಿನ ಅವನನ್ನು ಭೇಟಿಯಾಗುವ ಅವಕಾಶ ತಪ್ಪಿಸಿಕೊಂಡೆ
ಆದರೂ ಅವನನ್ನು ನೋಡಬೇಕೆಂಬ ಆಸೆ ಬಲವಾಗಿಯೇ ಇತ್ತು.ಅದರಿಂದ ತಪ್ಪಿಸಿಕೊಳ್ಳಲಾಗಲಿಲ್ಲ
ರಾತ್ರಿಗಳಲ್ಲಿ ಅಭಿಯಿಂದ ದೂರ ಉಳಿಯಲಾರಂಭಿಸಿದೆ.
ಅಭಿಗೂ ಅಂತಹ ಅನುಮಾನ ಬರಲಿಲ್ಲ.
ಇಂತಹ ಇಕ್ಕಟ್ಟಿನ ಸಂಧರ್ಭದಲ್ಲೆ ಜರ್ಮನಿಯ ಪ್ರಾಜೆಕ್ಟ್ ಒಂದಕ್ಕೆ ನನ್ನ ಮೂರು ತಿಂಗಳ ಸಮಯ ಬೇಕಿತ್ತು.
ಇಂತಹದೊಂದು ಅವಕಾಶಕ್ಕೆ ನಾನು ಕಾಯುತ್ತಿದ್ದೆ. ನಾನು ನಿರ್ಧರಿಸಬೇಕಿತ್ತು. ಅದಕ್ಕೆ ಎಲ್ಲರಿಂಡ ದೂರವಾಗಿ ಇರುವುದು ಬಹು ಮುಖ್ಯವಾಗಿತ್ತು.
ಚಿದುವನ್ನು ನೋಡಿಕೊಳ್ಳಲು ತಾಯಿಯನ್ನು ಬರಹೇಳಿದೆ.
ಅಭಿ ಖುಶಿಯಾಗಿಯೇ ಕಳಿಸಲು ಒಪ್ಪಿದ.
ಬೇಸರವಾಗಿದ್ದು ಮಾತ್ರ ಕಿರಣ್‌ಗೆ
"ಪ್ರಿಯಾ ನಾನು ನನ್ನಮನಸಿನ ಮಾತು ಹೇಳೋಕೆ ನೀವು ಸಮಯವನ್ನೇ ಕೊಡಲಿಲ್ಲ ಈಗ ಮೂರು ತಿಂಗಳು ನೀವಿಲ್ಲದೆ ನಾನು ಹೇಗಿರಲಿ?"
ನಾನು ಮೌನವಾಗಿದ್ದೆ. ನನಗೆ ಗೊತ್ತು ನನ್ನ ಪ್ರತಿಯೊಂದು ಮಾತು ಬಹಳ ಎಚ್ಚರಿಕೆಯಿಂದ ಆಡಬೇಕಿದೆ. ನನ್ನ ಮಾತು ಅವನಲ್ಲಿ ಯಾವ ಆಸೆಯನ್ನೂ ಉಂಟು ಮಾಡಬಾರದು .
(ಮುಂದುವರೆಯುವುದು)