ಕ್ಷಮಿಸು ನಾ ರಾಧೆಯಲ್ಲ-೩

ಕ್ಷಮಿಸು ನಾ ರಾಧೆಯಲ್ಲ-೩

ಬರಹ

ಈಗ ನಾನು ಎಲ್ಲರಿಂದ ದೂರದಲ್ಲಿ ಬಹುದೂರದಲ್ಲಿದ್ದೇನೆ
ನನ್ನ ಭವಿಷ್ಯದ ಹೆದ್ದಾರಿಯನ್ನು ಹುಡುಕುತ್ತಿದ್ದೇನೆ
ಬಂದು ಎರೆಡು ದಿನಗಳಾಗಿದ್ದವು
ಕಿರಣ್ ಎರೆಡು ಸಲ್ ಫೋನ್ ಮಾಡಿದ್ದ. ಜೀವನದಲ್ಲಿ ಏನೋ ಕಳೆದುಕೊಂಡಿದ್ದೇನೆ ಅನ್ನಿಸುತ್ತಿದೆ ಎಂದು ಮರುಗಿದ್ದ
ಅಭಿಯ ಮೈಲ್ ಮಾತ್ರ ಬಂದಿತ್ತು. ಮನೆಯ ವಾರ್ತೆಗಳ ಬಗ್ಗೆ ಕೊರೆದಿದ್ದ. ತನ್ನ ಕೆಲಸ ಹಾಗು ಮನೆಯ ಮಧ್ಯೆ ಸಮಯವೇ ಇಲ್ಲದಂತಾಗಿದೆ ಎಂದಿದ್ದ.
ನನ್ನ ಕೆಲಸವೂ ಸಾಗುತ್ತಿತ್ತು
ಕಿರಣನ ಇಲ್ಲದಿರುವಿಕೆ ಮೊದಮೊದಲು ಕಾಡತೊಡಗಿತು .
ಅವನ ನೆನಪು ಹಿಂಸಿಸಿತು. ನಂತರ ಮೂರು ದಿನಕ್ಕೆ ಮರೆಯಲಾರಂಭಿಸಿದೆ.
ಚಿದು ಬಳಿಯಲ್ಲಿ ಇಲ್ಲದಿರುವುದು ಹೃದಯಕ್ಕೆ ನೋವುಂಟಾಗತೊಡಗಿತು
ಅವನ ಅಮ್ಮ ಎಂಬ ಮಾತು ತಂಟೆ, ಚೇಷ್ಟೇ ನೆನಪಾಗತೊಡಗಿದವು
ನಾಲ್ಕನೆಯದಿನಕ್ಕೆ
ಅಭಿ ಫೋನ್ ಮಾಡಿದ್ದ
"ಪ್ರಿಯಾ ನೀನಿಲ್ಲ ಅಂದ್ರೆ ಎಷ್ಟು ಬೇಜಾರಾಗುತ್ತೆ ಅಂತ ನಂಗೆ ಈಗ ಗೊತ್ತಾಗ್ತಿದೆ. ನಿನ್ನ ಇಂಪಾರ್ಟೆನ್ಸ್ ನಂಗೆ ಈಗ ತುಂಬಾ ಗೊತ್ತಾಗ್ತಿದೆ. ಯಾವಾಗ ಮೂರು ತಿಂಗಳು ಕಳೆಯುತ್ತೋ ಅನ್ನಿಸ್ತಿದೆ"
ಚಿದೂ ಫೋನ್‍ನಲ್ಲೆ ಅಳಲಾರಂಭಿಸಿದ. ನನಗೂ ಅಳು ಉಕ್ಕಿತು.
ಚಿದು ಹುಟ್ಟಿದ ದಿನದ ನೆನಪಾಯ್ತು.
ಬೆನ್ನ ಹಿಂದೆಯೇ ನನ್ನ ಅಭಿಯ ದಾಂಪತ್ಯ ಜೀವನದ ಸುಖೀ ಕ್ಷಣಗಳು ಅರಿವಿಗೆ ಬರಲಾರಂಭಿಸಿದವು.
ಕಿರಣ್ ಮತ್ತೆ ಮೈಲ್ ಮಾಡಿದ
"ಪ್ರಿಯಾ ಐ ಅಮ್ ಬಿಕಮಿಂಗ್ ಮ್ಯಾಡ್. ಯಾವಾಗ ನೋಡ್ತೀನೋ ಅಂತ ಅಗಿದೆ, ನಾನು ನಿಮ್ಮ ಹತ್ತಿರ ತುಂಬಾ ಅಂದ್ರೆ ತುಂಬಾ ಮಾತಾಡಬೇಕಿದೆ. ಅದೆಲ್ಲಾ ಹೇಳದೆ ಎಲ್ಲಿ ಸತ್ತು ಹೋಗ್ತೀನೊ ಅಂತನ್ನಿಸ್ತಿದೆ"ಅವಲತ್ತುಕೊಂಡ
ರಿಪ್ಲೈ ಮಾಡಲಿಲ್ಲ ಈ ಸಲ.
ಹೀಗೆ ಮೂರು ಸಲವಾದ ನಂತರ ಕಿರಣ್ ಮತ್ತೆ ಮೈಲ್ ಮಾಡಲಿಲ್ಲ. ಮಾಡಿದರೂ ಕೆಲಸದ ವಿಷಯಕ್ಕೆ ಮಾತ್ರ ಮಾಡಿದ್ದಷ್ಟೆ.
ಎರೆಡು ತಿಂಗಳು ಕಳೆಯಿತು.
ಮನಸ್ಸು ಸದೃಡವಾಗಿತ್ತು
ರಾಧೆ ಏಕೆ ಕೃಷ್ಣನ ಮಡದಿಯಾಗಲಿಲ್ಲ ಎಂಬ ಪ್ರಶ್ನೆ ನನ್ನನ್ನು ಆಗಾಗ ಕಾಡಿತ್ತು .ಆದರೆ ಅದಕ್ಕೆ ಉತ್ತರ ಇತ್ತೀಚಿಗೆ ಹೊಳೆಯಲಾರಂಭಿಸಿತು.
ನನಗೆ ಬೇಕಿದ್ದುದ್ದು ನನಗಾಗಿ ಬೇಡುವ ಜೀವ ನಾನಿಲ್ಲದೆ ಬದುಕೇಇಲ್ಲ ಎನ್ನುವ ಮನಸ್ಸು ಅದು ನನ್ನ ಅಭಿಯದೇ ಆಗಿತ್ತು.
ಸಂಸಾರದ ಜವಾಬ್ದಾರಿಯ ಕಾರಣದಿಂದ ಒಬ್ಬರಿಗೊಬ್ಬರು ಅಪರಿಚಿತರಂತೆ ಇದ್ದರೂ ಜೀವನದಲ್ಲಿ ಇಬ್ಬರಿಗೂ ಇಬ್ಬರೂ ಬೇಕಿದ್ದರು
ಆದರೆ ಅದು ನನಗೆ ಕಾಣದೇ ಹೋಯ್ತು. ಕಿರಣನ ಆಕರ್ಷಣೆ ಆ ಅಗತ್ಯವನ್ನು ಮರೆಮಾಚಿತ್ತು.
ಅಭಿಯ ಸಾಂಗತ್ಯದ ಕೊರತೆ ಕಾಡಿದಷ್ಟು ಕಿರಣ್‍ನ ನೆನಪು ಕಾಡಲಿಲ್ಲ.
ಪ್ರಾಜೆಕ್ಟ್ ಯಶಸ್ವಿಯಾಗಿ ಮುಗಿಯಿತು.
ನನ್ನ ಭವಿಷ್ಯದ ಹೆದ್ದಾರಿಯೂ ಸ್ಪಷ್ಟವಾಯ್ತು.
ಮೂರುತಿಂಗಳ ಸುಧೀರ್ಘ ಅವಧಿಯ ನಂತರ ನಾನು ಮನೆಗೆ ಹೋಗಿದ್ದಕ್ಕೆ ಮನೆಯಲ್ಲಿ ಸಂತಸ , ಸಂಭ್ರಮ, ಅಭಿಯಂತೂ "ಇನ್ನೊಮ್ಮೆ ಈ ತರಹ ದೂರ ಕಳಿಸಿದರೆ ಕೆಲಸವೇ ಬೇಡ . ನಂಗೆ ನೀನಿರದೆ ಇರಕಾಗಲ್ಲ. " ಎಂದು ಬೈದ.
ಚಿದೂವಂತೂ ನನ್ನ ಸೆರಗನು ಕಟ್ಟಿಕೊಂಡೆ ಓಡಾಡುತ್ತಿದ್ದ .
ಮೊದಲಬಾರಿಗೆ ನನ್ನ ಅವಶ್ಯಕತೆ, ಜವಾಬ್ದಾರಿ, ಸ್ಥಾನ ಅರ್ಥವಾಯ್ತು. ಇದನ್ನು ಬಿಟ್ಟು ಪ್ರೇಮವೆಂಬ ಮಾಯಾಜಿಂಕೆಯ ಹಿಂದೆ ಓಡುತ್ತಿದ್ದೆನಲ್ಲ ನಾನೆಂಥಾ ಫೂಲ್ ಛೆ.
ಆಫೀಸಿಗೆ ಬಂದೆ .
ಕಿರಣ್‍ನ್ ಕಣ್ಣಲ್ಲಿ ಕಾತುರ, ಸಂತೋಷ ಎಲ್ಲವೂ ಇದ್ದವು.
"ಪ್ರಿಯಾ ಕೊನೆಗೂ ಬಂದಿರಲ್ಲ . ನಿಮ್ಮ್ಮ ಹತ್ತಿರ ತುಂಬಾ ಮಾತಾಡಬೇಕಿದೆ"
ನಾನು ಈ ಸಲ ತಲೆ ಕಣ್ಣನ್ನೇ ದಿಟ್ಟಿಸುತ್ತಾ ನುಡಿದೆ
"ನಿಮ್ಮನ್ನ ಇಲ್ಲಿಂದ ಜಯನಗರ ಬ್ರಾಂಚ್‌ಗೆ ಹಾಕಿದಾರೆ ಅಲ್ಲಿ ನಿಮ್ಮ ಅವಶ್ಯಕತೆ ಇದೆ."
"ಹಾಕಿದ್ದಾರೊ ಅಥವಾ ಹಾಕಿಸಿದ್ದಾರೋ ಪ್ರಿಯಾ "
"ಪ್ಲೀಸ್ ಕಾಲ್ ಮಿ ಮೇಡಮ್. ನಾನು ನಿಮಗಿಂತ ಹತ್ತು ವರ್ಷ ದೊಡ್ಡವಳು . ಮತ್ತೆ ನಿಮಗಿಂತ ಸೀನಿಯರ್. ನೆನಪಿರಲಿ"
"ಮೇಡಮ್ ನನ್ನ ಮನಸಿನ ಮಾತು ?"
"ಕಿರಣ್ ಇದು ಆಫೀಸ್ ನಾನು ನಿಮ್ಮ ಹೆಡ್, ನೀವು ನನ್ನ ಸಬ್ ಆರ್ಡಿನೇಟ್. ಆ ವಿಷ್ಯವಾಗಿ ಏನೊ ಬೇಕಾದರೂ ಮಾತಾಡಲೂ ನಾನು ರೆಡಿ. ಅದಿಲ್ಲವಾದರೆ ನಾನು ನಿಮ್ಮ ಮನಸಿನ ಮಾತಿಗೆ ಸಿಗಲು ಸರಿಯಾದ ವ್ಯಕ್ತಿ ಅಲ್ಲ."
ಆತ ನಿರಾಸೆಯಿಂದ ನಡೆದ
ತಲೆ ತಗ್ಗಿಸಿಕೊಂಡು ಹೋಗುತ್ತಿದ್ದವನನ್ನೆ ನೋಡುತ್ತಾ ಮನಸ್ಸು ಹೇಳಿತು
"ಕ್ಷಮಿಸು ನಾ ರಾಧೆಯಲ್ಲ ಅಗುವುದೂ ಇಲ್ಲ"