ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು

ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು

ಬರಹ

    ಅಮೆರಿಕಾದಲ್ಲಿ ಆರ್ಥಿಕ ಹಿಂಜರಿತ ಪ್ರವೃತ್ತಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಭಾರತದ ಐಟಿ ದಿಗ್ಗಜ ಕಂಪೆನಿಗಳೂ ಬಹು ಹುಶಾರಾಗಿ ಹೆಜ್ಜೆಗಳನ್ನಿಡುತ್ತಿವೆ. ಈಗ ಹಿಂದಿನ ವರ್ಷಗಳಂತೆ ಬೇಕಾಬಿಟ್ಟಿಯಾಗಿ ಹೊಸಬರನ್ನು ತೆಗೆದುಕೊಳ್ಳುವ ಪ್ರವೃತ್ತಿಗೆ ಕಡಿವಾಣ ಹಾಕಲಾಗಿದೆ. ಹೊಸ ನೇಮಕಾತಿಗಳ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ.ವಿಪ್ರೋದಂತಹ ಕಂಪೆನಿಗಳು ಮನೆಯಿಂದಲೇ ಕಚೇರಿ ಕೆಲಸ ಮಾಡಿಸಲು ನಿರ್ಧರಿಸಿವೆ. ಕಚೇರಿ ಜಾಗದಲ್ಲಿ ಉಳಿತಾಯ, ನೌಕರರ ಪ್ರಯಾಣ ವೆಚ್ಚದಲ್ಲಿ ಕಡಿತ, ಅವರ ಸಂಬಳ ಸಾರಿಗೆಯನ್ನು ಮರುನಿಗದಿಗೊಳಿಸುವ ಅವಕಾಶದ ಲಾಭ ಪಡೆಯಲು ಕಂಪೆನಿಯ ಯತ್ನ ಇದಾಗಿದೆ. ಮುಂದಿನ ಕೆಲವರ್ಷಗಳಲ್ಲಿ ಮೂರನೇ ಒಂದಂಶ ನೌಕರರನ್ನು ಇದೇ ರೀತಿ ಕೆಲಸ ಮಾಡಿಸುವುದು ವಿಪ್ರೋದ ಗುರಿಯಂತೆ. ಕಂಪೆನಿಯ ಸೇವೆ ಪಡೆಯುವ ಇತರ ಕಂಪೆನಿಗಳಿಗೆ ಇದರಿಂದ ಭದ್ರತೆ,ಗೌಪ್ಯತೆಗೆ ಭಂಗ ಬರದು ಎಂದು ಮನವರಿಕೆ ಮಾಡಿಕೊಡುವ ಯತ್ನದಲ್ಲಿ ಕಂಪೆನಿ ತೊಡಗಿದೆ.
    ವಿಮಾನ ಪ್ರಯಾಣದರಗಳು ಗಗನಚುಂಬಿಯಾಗಿರುವುದೂ ಕಂಪೆನಿಗಳ ಖರ್ಚನ್ನು ಹೆಚ್ಚಿಸಿವೆ. ಅನಗತ್ಯವಾದಾಗ ಪ್ರಯಾಣಿಸುವುದನ್ನು ತಪ್ಪಿಸಿ, ಮಾಹಿತಿ ತಂತ್ರಜ್ಞಾನದ ಕೊಡುಗೆಗಳಾದ ವಿಡಿಯೋ ಕಾನ್ಫರೆನ್ಸ್,ಅಂತರ್ಜಾಲ ದೂರವಾಣಿ ಇವುಗಳನ್ನು ಹೆಚ್ಚು ಹೆಚ್ಚು ಬಳಸುವುದು ಸತ್ಯಮ್, ವಿಪ್ರೋ,ಇನ್ಫೋಸಿಸ್ ಮತ್ತು ಟಿಸಿಎಸ್ ಕಂಪೆನಿಗಳಲ್ಲಿ ಕಂಡು ಬಂದಿದೆ.ಈ ಕಂಪೆನಿಗಳು ತಮ್ಮ ಕಚೇರಿಗಳಲ್ಲಿ ಅಲ್ಲಿಂದಲೇ ಸಂವಹನಕ್ಕೆ ಅನುವು ಮಾಡುವ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆಗಳನ್ನು ಅಳವಡಿಸಿಕೊಂಡು, ಸಾಧ್ಯವಾದಾಗಲೆಲ್ಲ ಪ್ರಯಾಣಿಸುವುದನ್ನು ತಪ್ಪಿಸಲು ಯತ್ನಿಸುತ್ತಿವೆ. ಇದರಿಂದ ಖರ್ಚು ಮಾತ್ರಾ ಕಡಿಮೆಯಾಗುವುದಲ್ಲದೆ,ಪರಿಸರಪ್ರಿಯ ಕಂಪೆನಿಗಳೆಂಬ ಹೆಗ್ಗಳಿಕೆಯೂ ಕಂಪೆನಿಗಳಿಗೆ ಲಭಿಸುತ್ತದೆ.
--------------------------------------------------------------------------------------------
ಮರೆಯದಿರಲು ಐಫೋನ್ ಮೂಲಕ ನೆರವು
    ನಿಮಗೆ ಮುಖ್ಯವಾದ ವಿಷಯಗಳನ್ನು ಮರೆಯದಿರಲು ಐಫೋನ್ ಮೂಲಕ ನೆರವು ನೀಡುವ ಸೇವೆಯೊಂದನ್ನು http://www.reqall.com ಆರಂಭಿಸಿದೆ. ಸೇವೆಯಿದೀಗ ಉಚಿತವಾಗಿ ಲಭಿಸುತ್ತಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ದರ ವಿಧಿಸುವ ಆಲೋಚನೆ ಕಂಪೆನಿಗಿದೆ. ಕಂಪೆನಿಯ ದೂರವಾಣಿಗೆ ಕರೆ ಮಾಡಿ, ನಿಮಗೆ ನೆನಪಿಡಬೇಕಾದ ವಿಷಯವನ್ನು ತಿಳಿಸಿದರೆ ಮುಗಿಯಿತು. ನೀವು ನಿಗದಿಪಡಿಸಿದ ಸಮಯದಲ್ಲಿ ನಿಮಗೆ ಮಿಂಚಂಚೆ, ಮೊಬೈಲ್, ಎಸೆಮ್ಮೆಸ್ ಇಂತಹ ವಿವಿಧ ಮಾಧ್ಯಮಗಳ ಮೂಲಕ ನೀವು ಮರೆಯಲು ಬಯಸದ ವಿಷಯವನ್ನು ಜ್ಞಾಪಕದಲ್ಲಿರಿಸಲು ಕಂಪೆನಿ ಸಹಾಯ ಮಾಡುತ್ತದೆ. ನೀವು ನೆನಪಿನಲ್ಲಿರಿಸಬೇಕಾದ ಮುಖಗಳನ್ನು,ವಿಷಯಗಳನ್ನು ಮತ್ತು ಸಮಯವನ್ನು ಮರೆಯದಿರಲು ಸಹಾಯ ಲಭಿಸಲಿದೆ. ಅಂಕೆ-ಸಂಖ್ಯೆಗಳು,ಪರೀಕ್ಷೆಯಲ್ಲಿ ಬೇಕಾದ ಯಾವುದೋ ಸೂತ್ರ ಇವನ್ನೆಲ್ಲಾ ವ್ಯವಸ್ಥಿತವಾಗಿ ನೆನಪಿನಲ್ಲಿಟ್ಟುಕೊಳ್ಳುವ ವಿಧಾನವನ್ನು ಸಂಶೋಧಿಸಿದ ಎಂಐಟಿಯ ಮೀಡಿಯ ಪ್ರಯೋಗಶಾಲೆಯಲ್ಲಿ ಸುನೀಲ್ ವೆಮೂರಿಯವರು ನಡೆಸಿದ ಸಂಶೋಧನೆಯನ್ನು ಆಧಾರಿಸಿ, ಈ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ. ಸುನೀಲ್ ಕೂಡಾ ಕಂಪೆನಿಯ ಸ್ಥಾಪಕರಲ್ಲಿ ಓಬ್ಬರಾಗಿದ್ದಾರೆ."ಮೆಮೊರಿ ಜಾಗರ್" ಎನ್ನುವ ಹೆಸರಿನ ವಿಧಾನದ ಹಕ್ಕುಸ್ವಾಮ್ಯಕ್ಕೂ ಪ್ರಯತ್ನಿಸಲಾಗುತ್ತಿದೆಯಂತೆ.
---------------------------------------------------------------------------------------
ದಶಮಾನೋತ್ಸವದ ಸಂಭ್ರಮದಲ್ಲಿ ಗೂಗಲ್: ಕ್ರೋಮ್ ಬ್ರೌಸರ್ ಕೊಡುಗೆ
    ಗೂಗಲ್ ಕಂಪೆನಿಯೀಗ ಹತ್ತನೇ ವರ್ಷಕ್ಕೆ ಕಾಲಿಟ್ಟಿದೆ. ಆ ಸಂಭ್ರಮಾಚರಣೆಯಲ್ಲಿಯೋ ಎಂಬಂತೆ ಕಂಪೆನಿಯು ಕ್ರೋಮ್ ಎನ್ನುವ ಅಂತರ್ಜಾಲವನ್ನು ಜಾಲಾಡುವ ಬ್ರೌಸರನ್ನು ಬಿಡುಗಡೆ ಮಾಡಿತು. ವಿಂಡೋಸ್ ಕಂಪೆನಿಯ ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರಿನ ಹೊಸ ಆವೃತ್ತಿಯ ಬೆನ್ನ ಹಿಂದೆಯೇ ಕ್ರೋಮ್ ಬಿಡುಗಡೆಯಾಯಿತು. ಇದು ಪರೀಕ್ಷಾರ್ಥ ನೀಡಿದ ತಂತ್ರಾಂಶವಾದರೂ ಜನರ ಗಮನ ಸೆಳೆದು,ಉತ್ತಮ ಪ್ರತಿಕ್ರಿಯೆ ಪಡೆಯುವಲ್ಲಿ ಯಶಸ್ವಿಯಾಯಿತು. ಇಂಟರ್ನೆಟ್ ಎಕ್ಸ್‌ಪ್ಲೋರರ್‌ಗೆ ಹೋಲಿಸಿದರೆ, ಹೆಚ್ಚು ಚುರುಕುತನ,ಅದಕ್ಕಿಂತ ಕಡಿಮೆ ಕಂಪ್ಯೂಟರ್ ಸಂಪನ್ಮೂಲಗಳಾದ ಸ್ಮರಣಶಕ್ತಿ ಮತ್ತು ಸಂಸ್ಕಾರಕಗಳ ಶಕ್ತಿಯನ್ನದು ಅಪೇಕ್ಷಿಸುತ್ತದೆ.ಟ್ಯಾಬ್ ಮೂಲಕ ಅಂತರ್ಜಾಲ ಪುಟಗಳನ್ನು ತೆರೆಯುವ ಸೌಲಭ್ಯ ಇದರಲ್ಲಿಯೂ ಇದೆ. ಟ್ಯಾಬನ್ನು ಪ್ರತ್ಯೇಕ ವಿಂಡೋ ಆಗಿ ಎಳೆದಿಡುವ ಸಾಮರ್ಥ್ಯ ಕ್ರೋಮ್‌ನಲ್ಲಿದೆ. ಅಂತಹ ಸೌಕರ್ಯ ಮೊಜಿಲಾದಂತಹ ಮುಕ್ತತಂತ್ರಾಂಶದಲ್ಲೂ ಇರಲಿಲ್ಲ. ಹಾಗೆಯೇ ಯಾವ ಕಾರಣಕ್ಕಾಗಿಯಾದರೂ ಒಂದು ಟ್ಯಾಬನ್ನು ಮುಚ್ಚುವ ಪ್ರಮೇಯ ಬಂದರೂ ಇಡೀ ಬ್ರೌಸರ್ ತಂತ್ರಾಂಶ ಮುಚ್ಚದೆ,ಹೆಚ್ಚು ಬಳಕೆದಾರ ಸ್ನೇಹೀ ಗುಣವನ್ನು ಕ್ರೋಮ್ ಹೊಂದಿದೆ. ಮಾಮೂಲಿ ಬ್ರೌಸರಿನ ಪುಟಕ್ಕಿಂತ ಬಹುಸರಳ ಬಾಹ್ಯಲಕ್ಷಣ ಕ್ರೋಮಿನ ವೈಶಿಷ್ಟ್ಯತೆಯಾಗಿದೆ.ಇತರರಿಗೆ ಜಾಡುಬಿಟ್ಟುಕೊಡದೆ ಅಂತರ್ಜಾಲ ತಾಣಗಳನ್ನು ನೋಡುವ ಮೂಲಕ ಖಾಸಗಿತನದ ರಕ್ಷಣೆ ಮಾಡಿಕೊಳುವ ಸೌಕರ್ಯವನ್ನಿದರಲ್ಲಿ ಕೊಡಲಾಗಿದೆ. ಹೊಸ ಟ್ಯಾಬ್ ಅಥವ ವಿಂಡೋ ತೆರೆದಾಗ,ಹಿಂದಿನ ಸಲ ತೆರೆದಿದ್ದ ಪುಟಗಳ ಕಿರುಚಿತ್ರ ಸ್ನಾಪ್‌ಶಾಟಿನೊಂದಿಗೇ ಪುಟ ತೆರೆದುಕೊಳ್ಳುತ್ತದೆ.ಬೇಕಾದ ಪುಟದ ಮೇಲೆ ಕ್ಲಿಕ್ಕಿಸುವ ಮೂಲಕ ಅಂತರ್ಜಾಲದ ವಿಳಾಸವನ್ನು ಟೈಪಿಸುವ ಕಷ್ಟವನ್ನು ಉಳಿಸುವಲ್ಲಿ ಬ್ರೌಸರ್ ನೆರವಾಗುತ್ತದೆ.ಮೊಜಿಲಾ ಫೈರ್‌ಫಾಕ್ಸ್,ಸಫಾರಿ ಮತ್ತು ಒಪೆರಾದಂತಹ ಇತರ ಜನಪ್ರಿಯ ಬ್ರೌಸರುಗಳಿಗೂ ಸ್ಪರ್ಧೆ ನೀಡುವ ಲಕ್ಷಣವನ್ನು ಗೂಗಲಿನ ಕ್ರೋಮ್ ಮೊದಲಲ್ಲೇ ತೋರಿಸಿದೆ.ಇದನ್ನು http://www.google.com/chrome ತಾಣದಿಂದ ಇಳಿಸಿಕೊಳ್ಳಬಹುದು.ಗೂಗಲ್ ತನ್ನ ಶೋಧ ಸೇವೆಗಾಗಿ ಪ್ರಸಿದ್ಧವಷ್ಟೇ.ಇಲ್ಲಿಯೂ ನಿಮಗೆ ಬೇಕಾದ ತಾಣದ ವಿಳಾಸದ ಕೆಲ ಅಕ್ಷರಗಳನ್ನು ಟೈಪಿಸಿದೊಡನೆ ವಿಳಾಸವನ್ನು ಶಿಫಾರಸು ಮಾಡುವ ಸವಲತ್ತು ಇದೆ.
    ಕ್ಯಾಲಿಫೋರ್ನಿಯಾದ ಗ್ಯಾರೇಜು ಒಂದರಲ್ಲಿ ಸ್ಥಾಪನೆಯಾದ ಗೂಗಲ್,ಇದೀಗ ಹದಿನೇಳು ಬಿಲಿಯನ್ ಡಾಲರುಗಳ ವಾರ್ಷಿಕ ವ್ಯವಹಾರ ಮಾಡಿ ಐದು ಬಿಲಿಯನ್ ಡಾಲರುಗಳ ಲಾಭ ಗಳಿಸುತ್ತಿದೆ.ಶೋಧ ಸೇವೆಯ ಮಾರುಕಟ್ಟೆಯಲ್ಲಿ ಶೇಕಡ ಎಪ್ಪತ್ತು ಗೂಗಲ್ ಪಾಲು,ಅದೇ ವೇಳೆ ಅಂತರ್ಜಾಲ ಪ್ರಪಂಚದ ಜಾಹೀರಾತಿನಲ್ಲೂ ಶೇಕಡಾ ನಲುವತ್ತರ ಸಿಂಹಪಾಲು ಗೂಗಲಿನದ್ದೇ!ಹತ್ತೊಂಭತ್ತು ಸಾವಿರ ಜನ ಉದ್ಯೋಗಿಗಳು ಗೂಗಲಿನಲ್ಲಿದ್ದಾರೆ.ಮುಂದಿನ ಹತ್ತು ವರ್ಷಗಳಲ್ಲಿ ಕಂಪ್ಯೂಟರ್ ಜಗತ್ತಿನಲ್ಲಿ ತನ್ನ ಬಿಗಿಹಿಡಿತವನ್ನು ಮತ್ತೂ ಸಾಧಿಸುವುದು ಗೂಗಲ್ ಕನಸು. ವಿಡಿಯೋ ತುಣುಕುಗಳನ್ನು ಮತ್ತು ಚಿತ್ರಗಳನ್ನು ಆಧರಿಸಿ ಶೋಧ ಕಾರ್ಯ ಕೈಗೊಳ್ಳುವುದು ಸಾಧ್ಯವಾಗಿಸುವುದು ಕಂಪೆನಿಯ ಮಹತ್ತ್ವಾಕಾಂಕ್ಷೆಯಾಗಿದೆ.
-----------------------------------------------------------------------------------
ಕೈಸನ್ನೆಗೆ ಪ್ರತಿಕ್ರಿಯಿಸುವ ಟಿವಿ
    ಕೈಸನ್ನೆಯಿಂದಲೇ ಧ್ವನಿ ಏರಿಸಬಲ್ಲ,ಚಾನೆಲ್ ಬದಲಿಸಬಲ್ಲ ಟಿವಿ ಸೆಟ್ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದೆ.ಇದರಲ್ಲಿ ಕ್ಯಾಮರಾ ಇದ್ದು, ಕ್ಯಾಮರಾಕಣ್ಣಿಗೆ ಸಿಕ್ಕುವ ಹಸ್ತ ಚಲನೆಯನ್ನು ಗ್ರಹಿಸುವ ತಂತ್ರಾಂಶವನ್ನು ಟಿವಿಯಲ್ಲಿ ಅಳವಡಿಸಲಾಗಿದೆ.ರಿಮೋಟ್ ಸಾಧನ ಈ ಟಿವಿಗೆ ಅಗತ್ಯವಿರದು.ತನ್ನ ಮುಂದೆ ಸಾಮಾನ್ಯವಾಗಿ ಕುಳಿತುಕೊಳ್ಳುವ ಟಿವಿಮಂಡೂಕ ಮಹಾಶಯನನ್ನು ಗುರುತಿಸಿ, ಆತನಿಗೆ ಇಷ್ಟವಾದ ಕಾರ್ಯಕ್ರಮ ತೋರಿಸುವ "ಬುದ್ಧಿಮತ್ತೆ"ಯನ್ನೂ ಟಿವಿ ಹೊಂದಿದೆ ಎಂದು ಅದನ್ನು ಅಭಿವೃದ್ಧಿ ಪಡಿಸಿದ ಬ್ರಿಟಿಷ್ ತಂಡದ ಮುಖ್ಯಸ್ಥ ಕಾಟೇನಿಲ್ ಹೇಳಿದ್ದಾರೆ.
 
*ಅಶೋಕ್‌ಕುಮಾರ್ ಎ
 

ಇ-ಲೋಕ-91 8/9/2008