ಗಝಲ್ ದುನಿಯಾ...

ಗಝಲ್ ದುನಿಯಾ...

೧.

ಸಮಾಜದ ಓರೆಕೋರೆಗಳಿಗೆ ಬದ್ಧತೆಯ ನೆರಳಿರಲಿ ಸಖಿ

ನಮ್ರತೆಯ ಮನಸ್ಥಿತಿಗಳಿಗೆ ಸಿದ್ಧತೆಯ ಹೆಗಲಿರಲಿ ಸಖಿ

 

ಆಡುವ ಮಾತಿನಲಿ ಹುರುಳಿರದ ನಾಜೂಕಿನ ವರ್ತನೆ

ಓಡುವ ದಿನಗಳಲಿ ಪಾವಿತ್ರ್ಯತೆಯ ಸೆರಗಿರಲಿ ಸಖಿ

 

ನಗುವಿನ ಮುಖವಾಡದಲಿ ಯೋಜನೆಯ ಮಹತ್ವ ಅರಿಯದೇ

ಮಗುವಿನ ಮನಸ್ಸಂತೆ ಮುಗ್ದತೆಯ ಹರಿವಿರಲಿ ಸಖಿ

 

ಬದುಕಿನ ಕ್ಷಣಕ್ಷಣವು ಅಭಿನಯದ ನಿರಂತರ ಪಾಠ

ನಾಟಕದ ಪಾತ್ರಗಳಂತೆ ಕಲಿಕೆಯ ನೀತಿಯಿರಲಿ ಸಖಿ

 

ಸಹಾಯ ಯಾಚಿಸುವವರೆಡೆ ನಡೆಯು ಸಾಗಲಿ ಮುನ್ನುಗ್ಗದೆ

ಅಹವಾಲಿನ ಪತ್ರದಲಿ ಪ್ರೀತಿಯ ದೀಪವಿರಲಿ ಸಖಿ

-ದೀಪಾ ಪಾವಂಜೆ

***

೨.

ಹೋಗುವರು ಹೋಗಲಿ ನನಸ್ಸಿನಿಂದ ಗೆಳತಿ

ಇರುವವರು ಇರಲಿ ಕನಸ್ಸಿನಿಂದ ಗೆಳತಿ

 

ಬಟ್ಟಲ ಹಿಡಿದು ಬೇಡುವುದಿಲ್ಲ ನಾನು

ಕಚ್ಚುವರ ಬಿಡುತಿರುವೆ ಮನಸ್ಸಿನಿಂದ ಗೆಳತಿ

 

ಎಲ್ಲರೂ ಗುರುಗಳಾದರೆ ನಾವೆಲ್ಲ ಯಾರು

ಬಾಣವನು ಬಿಟ್ಟಿರುವೆ ಧನುಸ್ಸಿನಿಂದ ಗೆಳತಿ

 

ಕಾಲಕ್ಕೆ ತಕ್ಕಂತೆ ಇಂದು ಕುಣಿಯಬೇಕೆ

ಪ್ರೀತಿಯ ಕಟ್ಟಿದ್ದೂ ವಯಸ್ಸಿನಿಂದ ಗೆಳತಿ

 

ಏರುವವನ ಕಾಲನ್ನು ಕೆಳಗೆಳೆಯುತ್ತಾರೆ ಈಶಾ

ಹೊಟ್ಟೆ ಉರಿಯುವರಿದ್ದಾರೆ ಜಲಸ್ಸಿನಿಂದ ಗೆಳತಿ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ