ಗಣಪನಿಗೆ ವಿದಾಯ ಹೇಳುವ ಮುನ್ನ…

ಗಣಪನಿಗೆ ವಿದಾಯ ಹೇಳುವ ಮುನ್ನ…

ಗಣೇಶ ಹಬ್ಬ ಮುಗಿದು ನಿನ್ನೆಗೆ ಐದು ದಿನಗಳಾದುವು. ಸಾರ್ವಜನಿಕ ಸ್ಥಳಗಳಲ್ಲಿ, ಮನೆಗಳಲ್ಲಿ ಇರಿಸಿದ ಗಣಪತಿ ಮೂರ್ತಿಗಳು ನಿಧಾನವಾಗಿ ಒಂದೊಂದಾಗಿ ವಿಸರ್ಜನೆಗೊಂಡು ನೀರನ್ನು ಸೇರುತ್ತಿವೆ. ನಿನ್ನೆ ದೂರದರ್ಶನದ ಯಾವುದೋ ಒಂದು ಕನ್ನಡ ವಾರ್ತಾ ಚಾನೆಲ್ ನಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಗಣೇಶ ವಿಸರ್ಜನೆಯ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದುವು. ಜೋರಾದ ಮಳೆಯ ನಡುವೆ ವಿಸರ್ಜನೆಯ ಅನಿವಾರ್ಯತೆ ಬೆಂಗಳೂರು ನಗರದ ಜನರನ್ನು ಈ ವರ್ಷ ಹೈರಾಣಾಗಿಸಿರುವುದು ಸುಳ್ಳಲ್ಲ. ತಮ್ಮ ಮನೆಗಳಿಂದ, ಸಾರ್ವಜನಿಕ ಪೆಂಡಾಲುಗಳಿಂದ ಗಣೇಶ ಮೂರ್ತಿಗಳು ಒಂದೊಂದಾಗಿ ಹೊರಬಂದು ಜಲಾಶಯಗಳಂತಹ ಪ್ರದೇಶಗಳಿಗೆ ಹೋಗಲಾರಂಭಿಸಿದೆ.

ನಾನು ದೂರದರ್ಶನದಲ್ಲಿ ನೋಡುವಾಗ ದೊಡ್ದದಾದ ಕೆರೆಯ ಮೇಲೆ ಕ್ರೇನ್ ಸಹಾಯದಿಂದ ಒಂದು ಪ್ಲಾಟ್ ಫಾರಂ ನಿರ್ಮಿಸಿ ಅದರಲ್ಲಿ ಗಣೇಶ ವಿಗ್ರಹಗಳನ್ನು ಸಾಗಿಸುತ್ತಿದ್ದರು. ಆ ಮೂರ್ತಿಗಳು ಗಾತ್ರದಲ್ಲಿ ಸಣ್ಣದು ಹಾಗೂ 

ದೊಡ್ಡದು ಎರಡೂ ಇದ್ದುವು. ಗೌರಿಯ ವಿಗ್ರಹವೂ ಇತ್ತು. ಆ ಮೂರ್ತಿಗಳನ್ನು ಆ ಫ್ಲಾಟ್ ಫಾರಂ ನಲ್ಲಿದ್ದವರಿಬ್ಬರು ನೀರಿಗೆ ದೂಡಿ ಹಾಕುತ್ತಿದ್ದರು. ಕೆಲವನ್ನು ನೀರಿಗೆ ಬಿಸಾಕುತ್ತಿದ್ದರು. ಹಲವಾರು ವಿಗ್ರಹಗಳು ನೀರಿನಲ್ಲಿ ಮುಳುಗಡೆಯಾಗದೇ ತೇಲಾಡುತ್ತಿದ್ದವು. ಬಹುಷಃ ಆ ಮೂರ್ತಿಗಳು ಪಿಒಪಿ ಅಥವಾ ಅದೇ ಬಗೆಯ ನೀರಿನಲ್ಲಿ ಮುಳುಗದ ಹಗುರ ವಸ್ತುಗಳಿಂದ ನಿರ್ಮಾಣ ಮಾಡಿದ್ದಿರಬಹುದು. ಇದನ್ನು ಗಮನಿಸಿದಾಗ ನನಗೆ ಮುಂಬೈನ ಸಮುದ್ರ ತಟದಲ್ಲಿ ಗಣೇಶ ಹಬ್ಬದ ಬಳಿಕ ಕಂಡು ಬರುವ ರಾಶಿ ರಾಶಿ ಗಣೇಶನ ವಿಗ್ರಹಗಳ ನೆನಪಾಯಿತು.

ಭಯ ಭಕ್ತಿಯಿಂದ ಕೆಲವು ದಿನಗಳ ತನಕ ಪೂಜಿಸಲ್ಪಟ್ಟ ಗಣೇಶನನ್ನು ನಾವು ಇನ್ನಷ್ಟು ಗೌರವದಿಂದ ಕಳಿಸಿಕೊಡಬೇಕಾಗಿತ್ತು ಎಂದು ಈ ದೃಶ್ಯಗಳನ್ನು ನೋಡುವಾಗ ನನಗೆ ಅನಿಸಿತು. ಪಿಒಪಿಯಂತಹ ವಸ್ತುವಿನಿಂದ ಮಾಡಿದ ಗಣೇಶನನ್ನು ಮಾರಾಟ ಮಾಡುವುದು ಮತ್ತು ಪೂಜೆಗೆ ಬಳಕೆ ಮಾಡುವುದು ನಿಷೇಧವಿದೆ. ಪರಿಸರಕ್ಕೆ ಮಾರಕವಾಗುವಂತಹ ಈ ವಸ್ತುಗಳನ್ನು ಬಳಕೆ ಮಾಡುವುದಾದರೂ ಏಕೆ? ಉತ್ತಮ ಜೇಡಿ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿ ನೀರಿನಲ್ಲಿ ಕರಗುತ್ತದೆ, ಜೊತೆಗೆ ಪರಿಸರಕ್ಕೂ ಯಾವುದೇ ಹಾನಿಯಾಗುವುದಿಲ್ಲ. ಗಣೇಶ ಮೂರ್ತಿಗಳ ಶೃಂಗಾರಕ್ಕೆ ಬಳಸಿದ ಬಣ್ಣಗಳು ಹಾನಿಕಾರಕ ಅಂಶಗಳನ್ನು ಹೊಂದಿರುತ್ತವೆ. ಬಣ್ಣದಲ್ಲಿರುವ ಹಾನಿಕಾರಕ ರಾಸಾಯನಿಕಗಳು ನೀರನ್ನು ಸೇರಿ, ಅಲ್ಲಿಂದ ನಮ್ಮ ಅಥವಾ ಪ್ರಾಣಿಗಳ ದೇಹವನ್ನು ಸೇರಿ ಆರೋಗ್ಯಕಾರಿ ಸಮಸ್ಯೆಗಳನ್ನು ತಂದೊಡ್ಡುತ್ತವೆ.

ಮಂಗಳೂರಿನಲ್ಲಿ ಸುಮಾರು ೭-೮ ದಶಕಗಳಿಂದ ಮೂರ್ತಿಗಳನ್ನು ತಯಾರಿಸುತ್ತಿರುವ ಮಣ್ಣಗುಡ್ಡೆಯ ದಿವಂಗತ ಮೋಹನ್ ರಾವ್ ಅವರ ಮಕ್ಕಳು ಈಗಲೂ ಉತ್ತಮ ಪರಿಸರದ ಗದ್ದೆಯ ಜೇಡಿ ಮಣ್ಣನ್ನು ಮೂರ್ತಿ ತಯಾರಿಕೆಗೆ ಬಳಸುತ್ತಾರೆ. ಅದನ್ನು ಸಿಂಗರಿಸಲು ನೈಸರ್ಗಿಕ ಬಣ್ಣಗಳನ್ನೇ ಬಳಸುತ್ತಾರೆ. ಈ ಮೂರ್ತಿಗಳೂ ವಿಸರ್ಜನೆಗೊಂಡ ಕೆಲವೇ ದಿನಗಳಲ್ಲಿ ಮಣ್ಣನ್ನು ಸೇರಿ ಬಿಡುತ್ತದೆ. ಇದರಿಂದಾಗಿ ನೀರಿಗಾಗಲಿ, ಪರಿಸರಕ್ಕಾಗಲೀ ಯಾವುದಕ್ಕೂ ತೊಂದರೆ ಆಗುವುದಿಲ್ಲ. ಈ ಕಾರಣದಿಂದಲೇ ಇವರು ಹಲವಾರು ದಶಕಗಳಿಂದ ನಿರಂತರವಾಗಿ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಆದರೆ ಬಹಳಷ್ಟು ಮೂರ್ತಿ ತಯಾರಕರು ಹಣದ ಆಸೆಗೆ ಕಳಪೆ ದರ್ಜೆಯ ಸಾಮಾಗ್ರಿಗಳನ್ನು ಬಳಸಿ (ಪಿಒಪಿಯಂತಹ) ಮೂರ್ತಿಗಳನ್ನು ತಯಾರಿಸುತ್ತಾರೆ. ಅದಕ್ಕೆ ರಾಸಾಯನಿಕ ಮಿಶ್ರಿತ ಬಣ್ಣಗಳಿಂದ ಸಿಂಗಾರ ಮಾಡುತ್ತಾರೆ. ಹೀಗೆ ಮಾಡುವುದರಿಂದ ನಾವು ಕುಡಿಯುವ ನೀರು, ಬದುಕುವ ಪರಿಸರ ಹಾಳಾಗುತ್ತದೆ.

ಗಣೇಶನ ವಿಗ್ರಹ ತಂದು ಭಯ ಭಕ್ತಿಯಿಂದ ಪೂಜಿಸುವಾಗ ಇರುವ ಶೃದ್ಧೆ ಆ ಮೂರ್ತಿಯನ್ನು ವಿಸರ್ಜನೆ ಮಾಡುವಾಗ ಕಾಣೆಯಾಗಿ ಬಿಡುತ್ತದೆ. ಅದನ್ನು ನಿನ್ನೆಯ ದಿನ ದೂರದರ್ಶನದಲ್ಲಿ ನಾನು ಗಮನಿಸಿದೆ. ಸರಕು ಸಾಮಾಗ್ರಿಗಳನ್ನು ಇಳಿಸುವ ರೀತಿಯಲ್ಲಿ ಗಣೇಶ ವಿಗ್ರಹಗಳನ್ನು ನೀರಿಗೆ ತಳ್ಳಿ ಬಿಡಲಾಗುತ್ತಿತ್ತು. ಮನೆಯಲ್ಲೇ ಪೂಜಿಸಿದ ಪುಟ್ಟ ಮೂರ್ತಿಗಳನ್ನು ಅವರವರ ಮನೆಯಲ್ಲೇ ಇರುವ ಟಾಂಕಿಗಳಲ್ಲಿ ಮುಳುಗಿಸಬಹುದು. ಕೆಲವೇ ದಿನಗಳಲ್ಲಿ ಮಣ್ಣು ಕರಗಿ ಬಿಡುತ್ತದೆ. ಆ ಮಣ್ಣನ್ನು ಮರದ ಅಥವಾ ಗಿಡದ ಕೆಳಗೆ ಸುರಿದರೆ ಉತ್ತಮ ಬೆಳವಣಿಗೆಯ ಫಲಿತಾಂಶ ದೊರಕುತ್ತದೆ. 

ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ನಗರ ಪಾಲಿಕೆಯು ಮೊಬೈಲ್ ನೀರಿನ ಟಾಂಕಿಗಳನ್ನು ಅಲ್ಲಲ್ಲಿ ಅಳವಡಿಕೆ ಮಾಡಿರುತ್ತಾರೆ. ಅವುಗಳನ್ನು ಬಳಸಿಕೊಳ್ಳಬಹುದು. ನಿಮ್ಮ ಮನೆಯಲ್ಲೇ ಇರುವ ಬಾವಿಗೆ ಮೂರ್ತಿಗಳನ್ನು ವಿಸರ್ಜನೆ ಮಾಡಬಹುದು. ಇಲ್ಲಿ ನಿಮ್ಮ ಎಚ್ಚರ ಇರಬೇಕಾದದ್ದು ಮೂರ್ತಿಯು ಮಣ್ಣಿನದ್ದಾಗಿರಬೇಕು ಹಾಗೂ ಬಣ್ಣಗಳು ನೈಸರ್ಗಿಕವಾಗಿರಬೇಕು ಅಷ್ಟೇ. 

ನಾವು ದೇವರೆಂದು ಪೂಜಿಸುವ ಗಣೇಶನ ವಿಗ್ರಹದ ವಿಲೇವಾರಿ ಅತ್ಯಂತ ಸಮರ್ಪಕವಾಗಿ ಆಗಬೇಕಾಗಿದೆ. ಆ ಜವಾಬ್ದಾರಿಯನ್ನು ಆಯಾ ಸಂಘಟನೆ, ಸಮಿತಿ ಅಥವಾ ವೈಯಕ್ತಿಕವಾಗಿ ಮೂರ್ತಿಯನ್ನು ವಿಸರ್ಜನೆ ಮಾಡುವವರು ಹೊರಬೇಕಾಗಿದೆ. ಮುಂದಿನ ವರ್ಷಗಳಲ್ಲಾದರೂ ಗಣೇಶ ಮೂರ್ತಿಗಳು ಮಣ್ಣಿನದ್ದಾಗಿರಲಿ, ಪರಿಸರಕ್ಕೆ ಪೂರಕವಾಗಿರಲಿ ಎಂದು ಹಾರೈಸುವ. 

ಸಾಂಕೇತಿಕ ಚಿತ್ರ ಕೃಪೆ: ಅಂತರ್ಜಾಲ ತಾಣ