ಗಣರಾಜ್ಯೋತ್ಸವ ಮತ್ತು ಗ್ರಹಣ

ಗಣರಾಜ್ಯೋತ್ಸವ ಮತ್ತು ಗ್ರಹಣ

ಬರಹ

ಮತ್ತೆ ಜನವರಿ ೨೬ ಬಂದಿದೆ. ಗಣರಾಜ್ಯೋತ್ಸವ ಆಚರಿಸಿದ್ದೇವೆ - ತೀರ ಯಾಂತ್ರಿಕವಾಗಿ. ಯಾಂತ್ರಿಕತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಸಿನಿಕತೆಯೂ ಹೆಚ್ಹುವಂತೆ.
ಬಾಲ್ಯದ ದಿನಗಳು ನೆನಪಾಗುತ್ತಿವೆ. ನಾನು ಓದಿದ್ದು ಸರಕಾರೀ ಹಳ್ಳಿ ಶಾಲೆಯಲ್ಲಿ. ಗಣರಾಜ್ಯೋತ್ಸವ, ಸ್ವಾಂತತ್ರ್ಯೋತ್ಸವ ದಿನಗಳಲ್ಲಿ ನಮ್ಮ ಮೆರವಣಿಗೆ ಹೊರಡುತ್ತಿತ್ತು. ಮುಂದೆ ನಮ್ಮ ಗುರುಗಳಾದ ಕಾರಂತ ಮಾಸ್ತರರು, ಹಿಂದೆ ದೊಗಳೆ ಚಡ್ಡಿಯನ್ನು ಏರಿಸಿಕೊಂಡ, ಲಂಗದಾವಣಿಯ ಚಿಣ್ಣರ ದಂಡು. ಶಾಲೆಯ ಅಂಗಳದಿಂದ ನೇರ ಹಾರಿದರೆ ಬೀಳುತ್ತದೆ ಹೆದ್ದಾರಿ. "ಬೋಲೋ ಭಾರತ್ ಮಾತಾಕೀ..." ಮಾಸ್ತರರದ್ದು ಊರು ನಡುಗುವಂತೆ ಘೋಷಿಸಿದಾಗ ನಾವೆಲ್ಲ ದನಿ ಸೇರಿಸುತ್ತಿದ್ದೆವು. ಓಹ್, ಅದೆಂಥ ಉತ್ಸಾಹ. ಬಾವುಟ ಹಿಡಿದ ನಮ್ಮ ಮೆರವಣಿಗೆ ಸಾಗುತ್ತಿರುವಂತೆ ಕೆಲವು ಊರ ಹಿರಿಯರು, ಪಡ್ಡೆ ಹುಡುಗರು ಸೇರಿಕೊಳ್ಳುತ್ತಿದ್ದರು. ಇಡೀ ಜಗತ್ತೇ ನಮ್ಮನ್ನು ನೋಡುತ್ತಿದೆಯೋ ಎಂಬ ಭಾವ. ಶಾಲೆಯಲ್ಲಿ ಸಾಮಾನ್ಯವಾಗಿ ಇರುತ್ತಿತ್ತು ಭಾಷಣ. ಬಂದವರು ಏನು ಹೇಳಿದ್ದರು ಅಂದು ಎಂದು ಇಂದು ನೆನಪಾಗದಿದ್ದರೂ, ಅವರು ಏನು ಹೇಳಿರಬಹುದಂದು ಊಹಿಸಲು ಕಷ್ಟವಾಗದು. ನಮ್ಮ ಹಿರಿಯರು ಎಷ್ಟು ಕಷ್ಟ ಪಟ್ಟಿದ್ದಾರೆ, ಯಾರೆಲ್ಲ ಜೈಲು ಸೇರಿದ್ದಾರೆ, ಹೇಗೆ ನಮಗೊದಗಿತು ಸ್ವಾತಂತ್ರ್ಯ .. ಇತ್ಯಾದಿ .. ಇತ್ಯಾದಿ. ಮತ್ತೆ ಇರುತ್ತಿತ್ತು ಸಿಹಿ. ಊರಿನ ಕೆಲವು ಹಿರಿಯರು ನೀಡುತ್ತಿದ್ದ ಆ ತಿಂಡಿಗೆ ನಾವು ಕಾತರದಿಂದ ಕಾಯುತ್ತಿದ್ದೆವು.

ಇಂದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಈಗಷ್ಟೇ ಬಂದಾಗ ನೆನಪಾಯಿತು ಇದೆಲ್ಲವೂ. ಕೆಲವೇ ಮಂದಿ ಸೇರಿದ ಇಂದಿನ ಕಾರ್ಯಕ್ರಮ ಒಂದೈದು ನಿಮಿಷಗಳಲ್ಲಿ ರಾಷ್ಟ್ರದ್ವಜ ಏರಿಸಿ, "ಝಂಡಾ ಊಂಚ ರಹೇಹಮಾರಾ" ಎಂದು ಹಾಡಿ, ಪ್ರಾಂಶುಪಾಲರು ಚುಟುಕಾಗಿ ಶುಭಾಶಯ ಹೇಳುವುದರೊಂದಿಗೆ ಕಾರ್ಯಕ್ರಮ ಮುಗಿದು ಹೊರಟೆವು ನಾವೆಲ್ಲ - ಧಾವಂತದಿಂದ ಎನೋ ಅಗಾಧ ಕೆಲಸ ಇರುವಂತೆ. ರಾಷ್ಟ್ರಗೀತೆ ಹೇಳಿದೆವೇನೋ ನಿಜ, ಆದರೆ ಅಲ್ಲಿರಲಿಲ್ಲ ಉತ್ಸಾಹ. ತೀರ ಯಾಂತ್ರಿಕವಾಗಿತ್ತು. ಎಷ್ಟೊಂದು ಹೃದಯದಾಳದಿಂದ ಬರಬೇಕಾಗಿತ್ತಲ್ಲ ಆ ಗೀತೆ. ಆದರೆ ಹಾಗಾಗಲಿಲ್ಲ.

ಯಾವುದೋ ಒಂದು ಶಾಲೆಯಲ್ಲಿ ಗಣರಾಜ್ಯೋತ್ಸವದ ಆಚರಣೆಗಳು ನಾಳೆ ನಡೆಯಲಿದೆಯಂತೆ. ಕಾರಣ ಸೂರ್ಯಗ್ರಹಣ. ಇಂದು ಗ್ರಹಣದ ಪ್ರಯುಕ್ತ ಮಕ್ಕಳ ಮನೋರಂಜನೆಯ ಕಾರ್ಯಕ್ರಮಗಳನ್ನು ನಿಲ್ಲಿಸಿದ್ದಾರೆ. ಆ ಶಾಲೆಯ ಮಕ್ಕಳೆಲ್ಲ ಇಂದು ತಮ್ಮ ತಮ್ಮ ಮನೆಗಳಲ್ಲಿ ತಮಗಿಷ್ಟವಾದಂತೆ ಗಣರಾಜ್ಯೋತ್ಸವ ಆಚರಿಸಲಿದ್ದಾರೆ. ಅದೂ ಸರಿಯೇ. ಮುಕ್ತ ಸ್ವಾತಂತ್ರ್ಯ. ಆದರೆ ಗಮನಿಸಬೇಕಾದದ್ದು ಪ್ರಜ್ಞೆಯ ಅರಿವಿನ ಕೇಂದ್ರದಲ್ಲಿಯೇ ಪ್ರಜ್ಞೆಗೆ ಬಡಿದ ಗ್ರಹಣದ ಬಗ್ಗೆ. ಅಂದರೆ ಗಣರಾಜ್ಯೋತ್ಸವ, ಸ್ವಾತಂತ್ರೋತ್ಸವದ ಬಗ್ಗೆ ಎಳೆಯರಿಗೆ ಹೇಳುವ ಅಗತ್ಯವಿಲ್ಲವೇ?
ಎ.ಪಿ.ರಾಧಾಕೃಷ್ಣ