ಗಾಂಧಿಯ ಮೊದಲ ಹಾಗು ಕಡೆಯ ಭೇಟಿ (ಓಷೋ ರಜನೀಶ್ ಚಿಂತನೆಗಳು)
He is a Tory by birth as well as by faith.
- Dr. B.R. Ambedkar
ಒಮ್ಮೆ ಗಾಂಧೀ ಪ್ರಯಾಣಿಸುತ್ತಿದ್ದ ರೈಲು ನಮ್ಮ ಊರಿನ ನಿಲ್ದಾಣವನ್ನೂ ಹಾದುಹೋಗಲಿದೆ ಹಾಗೆಯೇ ನಿಲ್ದಾಣದಲ್ಲಿ ಕೆಲಹೊತ್ತು ನಿಲ್ಲಲಿದೆ ಎಂಬ ಸುದ್ದಿ ಬಂದಿತು. ಆಗ ನಾನಿನ್ನೂ ಹತ್ತು ವರ್ಷದ ಹುಡುಗ. ಆಗ ಬೇಸಗೆ; ಅದರಲ್ಲೂ ಮಧ್ಯ ಭಾರತದ ಬಿಸಿಲು ಅಸಾಧ್ಯವಾದುದು. ನನ್ನ ಅಜ್ಜಿ ನನಗಾಗಿ ಬಿಳಿ ಬಣ್ಣದ ತೆಳುವಾದ ಕುರ್ತಾ ಹಾಗು ಪಂಚೆಗಳನ್ನು ಸಿದ್ಧಗೊಳಿಸಿ, ನನ್ನ ಜೇಬಿನಲ್ಲಿ ಮೂರು ರೂಪಾಯಿಗಳ ಬೆಳ್ಳಿನಾಣ್ಯಗಳನ್ನು ಇರಿಸಿ ಗಾಂಧಿಯನ್ನು ನೋಡಿಕೊಂಡು ಬರಲು ಕಳಿಸಿದ್ದಳು. ಆ ಕಾಲಕ್ಕೆ ೩ ರೂಪಾಯಿಯಲ್ಲಿ ಒಂದು ವಾರ ಜೀವನ ನಡೆಸಬಹುದಾಗಿತ್ತು. ರೈಲ್ವೇ ನಿಲ್ದಾಣದಲ್ಲಿ ತುಂಬ ಜನ ಗಾಂಧಿಯನ್ನು ನೋಡಲು ನೆರೆದಿದ್ದರು. ಪುಟ್ಟ ಹುಡುಗ ಗಾಂಧೀಜಿಯನ್ನು ನೋಡಲು ಬಹುದೂರದಿಂದ ಒಬ್ಬನೇ ಬಂದಿದ್ದಾನೆ ಎಂದು ಅವರು ತಾವು ತಂದಿದ್ದ ತಿಂಡಿ ಊಟಗಳನ್ನೆ ನನಗೂ ಕೊಡುತ್ತಿದ್ದರು. ಹಾಗಾಗಿ ಅಜ್ಜಿ ಕೊಟ್ಟಿದ್ದ ಮೂರು ರೂಪಾಯಿಗಳು ಜೇಬಿನಲ್ಲಿ ಹಾಗೇ ಉಳಿದುಕೊಂಡವು.
ಯಥಾಪ್ರಕಾರ ರೈಲು ಹದಿಮೂರು ಗಂಟೆಗಳ ಕಾಲ ತಡವಾಗಿ ಬಂದಿತು. ಅವರು ಸದಾ ೩ನೇ ದರ್ಜೆಯ ಬೋಗಿಯಲ್ಲೇ ಪ್ರಯಾಣಿಸುತ್ತಿದ್ದರು. ಆದರೆ ಗಾಂಧೀಜಿಯ ’ಮೂರನೆಯ ದರ್ಜೆ’ ಎಂಥದು ಎಂದು ನೀವು ಯಾರೂ ಕಲ್ಪಿಸಿಕೊಳ್ಳಲಾರಿರಿ. ಅದು ಮೊದಲ ತರಗತಿಯ ಬೋಗಿಗಿಂತ ಉತ್ತಮವಾದುದು. ಅರವತ್ತು ಜನ ಹಿಡಿಸುವ ಬೋಗಿಯಲ್ಲಿ ಬರೀ ಗಾಂಧೀ, ಅವರ ಪತ್ನಿ ಹಾಗು ಅವರ ಕಾರ್ಯದರ್ಶಿ ಈ ಮೂವರು ಮಾತ್ರ ಪ್ರಯಾಣಿಸುತ್ತಿದ್ದರು. ಗಾಂಧೀಜಿ ಪ್ರಯಾಣಿಸುವರೆಂದೊಡನೆ ಇಡೀ ಬೋಗಿಯನ್ನು ಕಾದಿರಿಸಲಾಗುತ್ತಿತ್ತು. ಗಾಂಧೀ ತತ್ವವನ್ನು ಉಳಿಸಲು ಆ ಬೋಗಿಗೆ ಹೆಸರಿಗೆ ಮಾತ್ರ ’ಮೂರನೆಯ ದರ್ಜೆ’ ಎಂಬ ಫಲಕ ಇರುತ್ತಿತ್ತು. ಗಾಂಧಿಯನ್ನು ನೋಡಲು ಕಾಯುತ್ತಿದ್ದ ಎಲ್ಲರೂ ಹೊರಟು ಹೋಗಿದ್ದರು. ನನ್ನ ಹಟ ಎಂಥದೆಂದು ನೀವೆಲ್ಲ ಬಲ್ಲಿರಿ. ಇಡೀ ರೈಲ್ವೇ ಪ್ಲಾಟ್ ಫಾರಂನಲ್ಲಿ ನಾನು ಹಾಗು ಸ್ಟೇಷನ್ ಮಾಸ್ಟರ್ ಇಬ್ಬರೇ ಉಳಿದಿದ್ದುದು. ರೈಲು ಪ್ಲಾಟ್ ಫಾರಂಗೆ ಬಂದು ನಿಂತ ಕೂಡಲೆ ಆ ಸ್ಟೇಷನ್ ಮಾಸ್ಟರ್ ಗಾಂಧಿಯನ್ನು ನನಗೆ ಪರಿಚಯ ಮಾಡಿಸಿದರು. “ಬಾಪು, ಇವನು ಸಾಮಾನ್ಯ ಹುಡುಗ ಎಂದು ಭಾವಿಸಬೇಡಿ. ಹದಿಮೂರು ಗಂಟೆಗಳಿಂದ ಒಂದೇ ಕಡೆ ಕುಳಿತು ನಿಮಗಾಗಿ ಕಾಯುತ್ತಿದ್ದಾನೆ. ಎಲ್ಲರೂ ಹೊರಟು ಹೋದರೂ ಇವನು ಮಾತ್ರ ಕದಲಿಲ್ಲ. ಇಲ್ಲೇ ಕುಳಿತು ದಿನಗಟ್ಟಲೆ ಕಾಯಲು ಕೂಡ ಸಿದ್ಧನಾಗಿದ್ದ” ಎಂದ. ಆಗ ಗಾಂಧೀ - ಆಗಲೇ ಅವರಿಗೆ ತುಂಬ ವಯಸ್ಸಾಗಿತ್ತು - ನನ್ನನ್ನು ಪ್ರೀತಿಯಿಂದ ಹತ್ತಿರ ಕರೆದರು. ಆದರೆ ಅವರ ಕಣ್ಣುಗಳು ನನ್ನ ಕಡೆ ನೋಡದೆ ನನ್ನ ಜೇಬಿನಲ್ಲಿದ್ದ ನಾಣ್ಯಗಳ ಕಡೆಗೆ ನೆಟ್ಟಿದ್ದವು. ಆ ಕ್ಷಣವೇ ನನ್ನ ಮನಸ್ಸಿನಲ್ಲಿದ್ದ ಗಾಂಧೀಜಿಯ ಚಿತ್ರ ಸಂಪೂರ್ಣವಾಗಿ ಅಳಿಸಿಹೋಯಿತು.
“ಜೇಬಿನಲ್ಲಿ ಏನಿದೆ?” ಎಂದು ಕೇಳಿದರು. “ಮೂರು ರೂಪಾಯಿಗಳು” ಎಂದೆ, ತಮ್ಮ ಬಳಿ ಸದಾ ಇಟ್ಟುಕೊಂಡಿರುತ್ತಿದ್ದ ಹುಂಡಿಯನ್ನು ನನ್ನ ಮುಂದೆ ಹಿಡಿದು “ಅವನ್ನು ಇಲ್ಲಿ ದಾನ ಮಾಡು” ಎಂದರು. ನನಗೆ ಸದ್ಯ ಹಣವನ್ನು ಖರ್ಚುಮಾಡಿರಲಿಲ್ಲವಲ್ಲ ಎಂದು ಸಮಾಧಾನವಾಯಿತಾದರೂ “ಈ ಹಣವನ್ನು ಏಕೆ ಕೇಳುತ್ತಿರುವಿರಿ” ಎಂದು ಕೇಳದೆ ಇರಲಿಲ್ಲ. ಅವರು “ಬಡವರಿಗೋಸ್ಕರ” ಎಂದು ಹೇಳಿದರು “ಹಾಗಿದ್ದರೆ ಸರಿ” ಎಂದು ಹೇಳಿ ನಾನು ನನ್ನ ಬಳಿ ಇದ್ದ ಎಲ್ಲ ನಾಣ್ಯಗಳನ್ನೂ ಹಾಕಿದೆ. ಅವರು ನನ್ನ ಇತ್ಯೋಪರಿಗಳನ್ನು ವಿಚಾರಿಸಿದರು. ಹೊರಡುವ ಮುನ್ನ ನಾನು ಕೂಡಲೆ ಮುಂದೆ ಹೋಗಿ ಅವರ ಸಮೀಪದಲ್ಲಿದ್ದ ಆ ಹುಂಡಿಯನ್ನು ತೆಗೆದುಕೊಂಡೆ. ಆಗ ಗಾಂಧೀಜಿ ಗಾಬರಿಯಿಂದ “ಅಯ್ಯೋ, ಅದು ಬಡವರ ಹಣ” ಎಂದರು. “ಅದು ನನಗೆ ಗೊತ್ತು, ಆದರೆ ನಮ್ಮ ಹಳ್ಳಿಯಲ್ಲೂ ತುಂಬ ಜನ ಬಡವರಿದ್ದಾರೆ. ಹಾಗಾಗಿ ಇದರ ಬೀಗದ ಕೈಯನ್ನೂ ಕೊಡಿ. ಇಲ್ಲವಾದರೆ ಇದನ್ನು ಒಡೆಯಲು ಮತ್ತೆ ಕಳ್ಳನನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ” ಎಂದೆ. “ಇದು ನಿಜಕ್ಕೂ ವಿಚಿತ್ರ” ಎನ್ನುತ್ತ ಗಾಂಧಿ ತಮ್ಮ ಕಾರ್ಯದರ್ಶಿಯತ್ತ ನೋಡಿದರು. ಅವನಿಗೂ ಏನು ಹೇಳಬೇಕೆಂದು ತೋಚಲಿಲ್ಲ. ಆಮೇಲೆ ಕಸ್ತೂರಿ ಬಾ ಅವರ ಕಡೆಗೆ ನೋಡಿದರು “ನಿನಗೆ ಸರಿಯಾದವನೇ ಸಿಕ್ಕಿದ್ದಾನೆ. ಇಷ್ಟು ದಿನ ನೀನು ಎಲ್ಲರಿಗೂ ಮಂಕುಬೂದಿ ಎರಚುತ್ತಿದ್ದೆ, ಈಗ ಇವನು ನಿನ್ನ ಹುಂಡಿಯನ್ನೇ ಎಗರಿಸಿದ್ದಾನೆ” ಎಂದು ಹೇಳಿ ಆಮೇಲೆ ನನ್ನತ್ತ ನೋಡಿ “ಒಳ್ಳೆಯದು ಮಗು ಅದನ್ನು ನೀನೇ ತೆಗೆದುಕೊಂಡು ಹೋಗು. ನನಗೂ ಇಪ್ಪತ್ತನಾಲ್ಕು ಗಂಟೆಗಳ ಕಾಲ ಇವರ ಮಗ್ಗುಲಲ್ಲೇ ಹೆಂಡತಿಗಿಂತ ಹೆಚ್ಚಾಗಿ ಕುಳಿತುಕೊಳ್ಳುವ ಈ ಹುಂಡಿಯನ್ನು ನೋಡಿ ನೋಡಿ ಸಾಕಾಗಿದೆ” ಎಂದರು. ಆಗ ಗಾಂಧಿಯ ಮುಖವನ್ನು ನೋಡಿದ ನನಗೆ ಈತನೇ ನಿಜವಾದ ಬಡವನಂತೆ ಕಾಣಿಸುತ್ತಾನೆ ಎನ್ನಿಸಿ “ಇಲ್ಲ, ಇದನ್ನು ನೀವೇ ಇಟ್ಟುಕೊಳ್ಳಿ” ಎಂದು ಹಿಂದಿರುಗಿಸಿದೆ. ಆಗ ಗಾಂಧೀ ತಮ್ಮ ಬಳಿ ಇದ್ದ ಒಂದು ಕಿತ್ತಳೆ ಹಣ್ಣನ್ನು ಕೊಡಲು ಬಂದರು. ಆದರೆ ನಾನು ತೆಗೆದುಕೊಳ್ಳಲಿಲ್ಲ. ಒಂದು ಕಿತ್ತಳೆ ಹಣ್ಣಿಗೆ ಮೂರು ಬೆಳ್ಳಿ ನಾಣ್ಯಗಳು ತುಂಬಾ ದುಬಾರಿ ಎನಿಸಿ ರೈಲಿನಿಂದ ಕೆಳಗಿಳಿದೆ.
“ಇವರ ಕಾರ್ಯದರ್ಶಿಗೆ ಒಂದಿಷ್ಟೂ ಸಮಯಪ್ರಜ್ಞೆ ಇಲ್ಲ, ಇವರ ಹೆಂಡತಿಗೂ ಇವರ ಮುಖ ನೋಡಿ ಒಂದಿಷ್ಟೂ ಕರುಣೆ ಹುಟ್ಟಿದಂತೆ ಕಾಣಿಸುತ್ತಿಲ್ಲ ಹಾಗಾಗಿ ನನ್ನ ಕಣ್ಣಿಗೆ ಈತನೇ ನಿಜವಾದ ಬಡವನಂತೆ ಕಾಣಿಸುತ್ತಾನೆ. ಒಬ್ಬ ನಿಜವಾದ ಮಹಾತ್ಮನನ್ನು ನೋಡಲೆಂದು ಇಷ್ಟು ದೂರ ಬಂದೆ. ಆದರೆ ಇಲ್ಲಿ ಒಬ್ಬ ನಿಜವಾದ ಬನಿಯಾನ ದರ್ಶನವಾಯಿತು” ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತ ಅಲ್ಲೇ ನಿಂತಿದ್ದೆ. ರೈಲು ಹೊರಟರೂ ಗಾಂಧೀ ಕಿಟಕಿಯಿಂದ ಇಣುಕಿ ನನ್ನನ್ನೇ ನೋಡುತ್ತಿದ್ದರು. ಆ ವಯಸ್ಸಿನಲ್ಲಿ ನನಗೆ ಗಾಂಧೀ ಒಬ್ಬ ಶುದ್ಧ ವ್ಯಾಪಾರಿಯ ಹಾಗೆ ಕಂಡರು. ಅಂದಿನಿಂದ ಅವರ ಯಾವ ವಿಚಾರಗಳನ್ನೂ ಒಪ್ಪಲು ನನಗೆ ಸಾಧ್ಯವೇ ಆಗಿಲ್ಲ. ಆ ಪ್ರಸಂಗ ನನ್ನಲ್ಲಿ ಎಂತಹ ಕಹಿ ಅನುಭವವನ್ನು ಉಳಿಸಿತೆಂದರೆ, ಅಂದಿನಿಂದ ಗಾಂಧಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದಂತೆಲ್ಲ ಆ ಮೊದಲ ಅನುಭವ ನನ್ನಲ್ಲಿ ಹುಟ್ಟಿಸಿದ ಭಾವನೆ ಇನ್ನೂ ದೃಢವಾಗುತ್ತಲೇ ಹೋಯಿತು. ಆಳದಲ್ಲಿ ಗಾಂಧಿಯ ಕುರಿತ ನನ್ನ ಎಲ್ಲ ವಿಚಾರಗಳನ್ನೂ ಆ ಘಟನೆ ಸದಾ ನಿಯಂತ್ರಿಸುತ್ತಿತ್ತು.
ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ನಮ್ಮ ಮನೆ ಎಲ್ಲ ಪಿತೂರಿಗಳ ಕೇಂದ್ರವಾಗಿತ್ತು. ಕೆಲವು ಭೂಗತ ಕ್ರಾಂತಿಕಾರಿಗಳು ನಮ್ಮ ಮನೆಯಲ್ಲೇ ವಾರಗಟ್ಟಲೆ ಇಳಿದುಕೊಳ್ಳುತ್ತಿದ್ದರು. ಪ್ರಸಿದ್ಧ ಕ್ರಾಂತಿಕಾರಿ, ಸಮಾಜವಾದೀ ಪಕ್ಷದ ಹಿರಿಯ ನಾಯಕ ಭವಾನೀ ಪ್ರಸಾದ್ ತಿವಾರಿ ತಲೆ ಮರೆಸಿಕೊಳ್ಳಬೇಕಾದಾಗಲೆಲ್ಲ ನಡುರಾತ್ರಿಯಲ್ಲಿ ನಮ್ಮ ಮನೆಗೆ ಬಂದುಬಿಡುತ್ತಿದ್ದ. ನನ್ನ ಇಬ್ಬರು ಚಿಕ್ಕಪ್ಪಂದಿರು ಜೈಲಿಗೆ ಹೋಗಿ ಬಂದಿದ್ದು ಪ್ರತಿವಾರ ಪೊಲೀಸ್ ಠಾಣೆಗೆ ಹೋಗಿ ಸಹಿ ಹಾಕಿ ಬರುತ್ತಿದ್ದರು. ಪೊಲೀಸರ ಅನುಮತಿ ಇಲ್ಲದೆ ಊರು ಬಿಟ್ಟು ಹೊರಗೆ ಹೋಗುವಂತಿರಲಿಲ್ಲ. ನಮ್ಮ ಎಲ್ಲ ಸಂಕಟಗಳಿಗೂ ಬ್ರಿಟಿಷರೆ ನೇರ ಹೊಣೆ ಎಂದು ದೃಢವಾಗಿ ನಂಬಿಕೊಂಡು, ಸ್ವಾತಂತ್ರ್ಯದೊಡನೆ ಸ್ವರ್ಗವೇ ನಮಗೆ ಸಿಕ್ಕು ಬಿಡುತ್ತದೆ ಎನ್ನುವಂತೆ ವರ್ತಿಸುತ್ತಿದ್ದ ಇವರನ್ನೆಲ್ಲ ನೋಡಿ ನನಗೆ ನಗು ಬರುತ್ತಿತ್ತು. “ಬ್ರಿಟಿಷರು ತೊಲಗುವುದಕ್ಕೂ ಬಡತನ ನಿವಾರಣೆಗೂ ಎತ್ತಣಿಂದೆತ್ತ ಸಂಬಂಧ, ಅವರು ಬರುವ ಮುನ್ನ ನಮ್ಮದೇಶವೇನು ಬಡತನದಲ್ಲಿ ಇರಲಿಲ್ಲವೇ?” ಎಂದು ಕೇಳುತ್ತಿದ್ದೆ. “ಹಾಗೊಂದು ವೇಳೆ ಬಡತನವನ್ನು ನಿವಾರಿಸುವುದಾದರೆ ಹೇಗೆ ನಿವಾರಿಸುವಿರಿ. ಇಲ್ಲಿ ಬ್ರಿಟಿಷರ ಆಡಳಿತಕ್ಕೆ ಸಂಬಂಧವೇ ಇಲ್ಲದ ಸಾವಿರಾರು ಸಮಸ್ಯೆಗಳಿವೆಯಲ್ಲ, ಅವನ್ನೆಲ್ಲ ಹೇಗೆ ಪರಿಹರಿಸುವಿರಿ? ಹೆಂಡತಿಯ ಕಿರುಕುಳ ಅನುಭವಿಸುತ್ತಿರುವ ಗಂಡನ ಸಮಸ್ಯೆಗೆ ಪರಿಹಾರವೇನು? ಬ್ರಿಟಿಷರು ಹೋದರೂ ಹೆಂಡತಿ ಇದ್ದೇ ಇರುವಳಲ್ಲ!” ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದೆ. ನನ್ನ ಪ್ರಶ್ನೆಗಳಿಂದ ಅವರಿಗೆಲ್ಲ ಎಷ್ಟು ಮುಜುಗರವಾಗುತ್ತಿತ್ತೆಂದರೆ “ನಿನ್ನ ಪ್ರಶ್ನೆಗಳನ್ನು ಎದುರಿಸುವುದಕ್ಕಿಂತ, ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡು ರಾಜಕೀಯ ಖೈದಿಗಳಾಗಿ ಜೈಲುವಾಸ ಅನುಭವಿಸುವುದು ಎಷ್ಟೋ ಮೇಲು, ನೆಮ್ಮದಿಯಾಗಿ ಆದರೂ ಇರಬಹುದು” ಎನ್ನುತ್ತಿದ್ದರು. ಏಕೆಂದರೆ ರಾಜಕೀಯ ಖೈದಿಗಳಿಗೆ ಓದಲು ಪುಸ್ತಕಗಳನ್ನು ಕೊಡುತ್ತಾರೆ, ಕಠಿಣ ಶ್ರಮದ ಕೆಲಸ ಕೊಡುವುದಿಲ್ಲ. ೨೦ನೇ ಶತಮಾನದ ಎಲ್ಲ ಆತ್ಮಕಥೆಗಳೂ ಜೈಲುಗಳಲ್ಲೇ ರಚಿತವಾದುದು. ಕೆಲವೊಮ್ಮೆ ಅಂತಹ ಖೈದಿಗಳನ್ನು ಅರಮನೆಗಳಲ್ಲೂ ಇರಿಸುವುದುಂಟು. ಗಾಂಧೀ ಪೂನಾದ ಆಗಾಖಾನ್ ಅರಮನೆಯಲ್ಲಿ ಜೈಲುವಾಸ ಅನುಭವಿಸಿದ್ದರು, ಅದೂ ತಮ್ಮ ಹೆಂಡತಿಯೊಡನೆ! ಕಸ್ತೂರ್ ಬಾ ಸತ್ತದ್ದೂ ಆಗಾಖಾನ್ ಅರಮನೆಯಲ್ಲೇ, ಅವರ ಸಮಾಧಿಯೂ ಅಲ್ಲೇ ನಿರ್ಮಾಣವಾಗಿದೆ. ಆಗ ನಾನು ತಿವಾರಿಗೆ “ಈ ಪ್ರಶ್ನೆಗಳನ್ನು ನಾನಲ್ಲದಿದ್ದರೆ ನಾಳೆ ಸ್ವಾತಂತ್ರ್ಯ ಬಂದ ಮೇಲೆ ನಿಮ್ಮ ಪ್ರಜೆಗಳೇ ಕೇಳುತ್ತಾರೆ, ಅವರಿಗೆ ಏನು ಉತ್ತರ ಹೇಳುವಿರಿ” ಎನ್ನುತ್ತಿದ್ದೆ ಆಗ “ಮೊದಲು ಸ್ವಾತಂತ್ರ್ಯ ಬರಲಿ, ನಿನ್ನ ಪ್ರಶ್ನೆಗಳಿಗೆ ತಾನಾಗಿಯೇ ಸಮಾಧಾನ ಸಿಗುತ್ತದೆ” ಎಂದು ಹೇಳುತ್ತಿದ್ದ.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಾನು ಬ್ರಿಟಿಷರ ಪರವಾಗಿಯೇ ಇದ್ದೆ ಎಂದರೆ ನೀವು ನಂಬಲಾರಿರಿ. ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಶಾಲೆ, ಕಾಲೇಜು, ವಿಶ್ವವಿದ್ಯಾಲಯ, ರೈಲ್ವೇ, ರಸ್ತೆ, ಕಾರುಗಳು, ವಿಮಾನಗಳು ಇವೆಲ್ಲ ಭಾರತಕ್ಕೆ ಪಾದಾರ್ಪಣೆ ಮಾಡಿದ್ದೇ ಬ್ರಿಟಿಷರ ಆಡಳಿತಾವಧಿಯಲ್ಲಿ. ಚಿಕ್ಕವನಿದ್ದಾಗ ಬ್ರಿಟಿಷರ ಆಕ್ರಮಣ ನಡೆಯದೆ ಹೋಗಿದ್ದರೆ ನಮ್ಮದೇಶ ಈಗಲೂ ಇಥಿಯೋಪಿಯಾದ ತರಹವೇ ಇರುತ್ತಿತ್ತು ಎಂದು ವಾದಿಸುತ್ತಿದ್ದೆ. ಬ್ರಿಟಿಷರು ಬರುವ ಮುನ್ನ ಗಂಡನನ್ನು ಕಳೆದುಕೊಂಡ ಹೆಣ್ಣುಮಕ್ಕಳನ್ನು ಚಿತೆಗೆ ಹಾಕಿ ಸುಡುತ್ತಿದ್ದರು. ಆದರೆ ಹೆಂಡತಿಯನ್ನು ಕಳೆದುಕೊಂಡವನನ್ನು,..! ಧರ್ಮದ ಹೆಸರಿನಲ್ಲಿ ಹೀಗೆ ಗಂಡಸರು ಬದುಕಿನ ವಿಷಯದಲ್ಲಿ ಮಾತ್ರವಲ್ಲ ಸಾವಿನ ವಿಷಯದಲ್ಲೂ ಹೆಣ್ಣಿನ ಮೇಲಿನ ದಬ್ಬಾಳಿಕೆಯನ್ನು ಮುಂದುವರೆಸಿದ್ದರು. ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದ ಇಂಥ ಆಚರಣೆಯ ಮೇಲೆ ಕಾನೂನಾತ್ಮಕ ನಿಷೇಧ ಹೇರಿದ ಬ್ರಿಟಿಷರಿಗೆ ನಾವು ಆಭಾರಿಗಳಾಗಿರಬೇಡವೇ, ಇಂಥ ನೆಲವನ್ನು ಆಧ್ಯಾತ್ಮಿಕ ದೇಶ ಎನ್ನಬೇಕೇ? “ಇದು ಧರ್ಮಭೂಮಿ, ಹಿಂದೆಲ್ಲ ಇಲ್ಲಿ ಮನೆಗಳಿಗೆ ಬೀಗಗಳನ್ನೇ ಹಾಕುತ್ತಿರಲಿಲ್ಲ” ಎಂದೆಲ್ಲ ಹೇಳುತ್ತಾರೆ. ನಿಜವೇನೆಂದರೆ ಇವರ ಮನೆಗಳಲ್ಲಿ ಒಡವೆಗಳೇ ಇರಲಿಲ್ಲ, ಅಲ್ಲದೆ ಆಗ ಇವರಿಗೆ ಬೀಗ ತಯಾರಿಸುವ ತಂತ್ರಜ್ಞಾನವೂ ತಿಳಿದಿರಲಿಲ್ಲ. ಇದು ಮಹಾ ಸೋಮಾರಿ ಹಾಗು ದರಿದ್ರ ದೇಶ. ಈ ಜನ ಹಸಿದ ಹೊಟ್ಟೆಯಲ್ಲಿ ಮಲಗುವರೇ ವಿನಃ, ದುಡಿದು ಶ್ರೀಮಂತರಾಗುವ ಮನಸ್ಸು ಮಾಡುವವರಲ್ಲ. ಬ್ರಿಟಿಷರು ಬರುವ ಮುನ್ನ ಇಲ್ಲಿ ಒಬ್ಬೊಬ್ಬನೂ ಹತ್ತಿಪ್ಪತ್ತು ಮಕ್ಕಳನ್ನು ಹುಟ್ಟಿಸುತ್ತಿದ್ದ. ಹತ್ತರಲ್ಲಿ ಒಂದು ಮಗು ಉಳಿಯುತ್ತಿತ್ತು. ಬ್ರಿಟಿಷರೊಂದಿಗೆ ಇಲ್ಲಿ ವೈದ್ಯಕೀಯ ವಿಜ್ಞಾನ, ಆಧುನಿಕತೆಗಳು ಕಾಲಿಟ್ಟ ಮೇಲೆ ಹತ್ತರಲ್ಲಿ ಒಂದು ಮಗು ಮಾತ್ರ ಸಾಯುತ್ತಿತ್ತು. ಆ ಒಂದು ಮಗು ಕೂಡ ಇವರ ಮೌಢ್ಯದಿಂದಲೇ ಸಾಯುತ್ತಿದ್ದುದು. ಗಾಂಧಿಯಂತಹವರು ಲಸಿಕೆಗಳನ್ನು, ಆಧುನಿಕ ಔಷಧಿಗಳನ್ನು ವಿರೋಧಿಸುತ್ತಿದ್ದರು. ಬ್ರಿಟಿಷರ ಮೂಲಕ ಈ ನೆಲವನ್ನು ಪ್ರವೇಶಿಸಿದ ಎಲ್ಲವನ್ನೂ, ಚರಕದ ಅನಂತರ ಆವಿಷ್ಕರಿಸಲಾದ ಪ್ರತಿಯೊಂದನ್ನೂ ವಿರೋಧಿಸುತ್ತಿದ್ದರು. ಬೈಬಲ್ಲಿನ ಮಾತುಗಳಲ್ಲಿ ಹೇಳುವುದಾದರೆ ಪರಮಪಿತನು ಆರನೆಯ ದಿನ ಚರಕ ಕಂಡುಹಿಡಿದು ಸುಮ್ಮನಾದ. ಆಮೇಲೆ ಕಂಡುಹಿಡಿದ ಪ್ರತಿಯೊಂದೂ ಸೈತಾನನ ಅನ್ವೇಷಣೆಯೇ. ನಮ್ಮ ಹಳ್ಳಿಗಳಲ್ಲಿ ತಂಬಾಕು ಸೇದುವ ಜನ ಎರಡು ಬೆಣಚುಕಲ್ಲುಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದುದನ್ನು ನಾನೇ ಕಣ್ಣಾರೆ ನೋಡಿದ್ದೇನೆ. ಕಲ್ಲನ್ನು ಉಜ್ಜಿ ಹತ್ತಿ ಇಟ್ಟು ಬೆಂಕಿ ತಯಾರಿಸಿಕೊಂಡು ಸೇದುತ್ತಿದ್ದರು. ಈಗಲೂ ಅಲ್ಲಿ ಅಂತಹ ಜನ ಇರಬಹುದು. ನಾನು ನನ್ನ ಹಳ್ಳಿಗೆ ಕಾಲಿಟ್ಟು ತುಂಬ ವರ್ಷಗಳಾದವು.
೧೯೪೭ರಲ್ಲಿ ಸ್ವಾತಂತ್ರ್ಯ ಲಭಿಸಿತು. ನಮ್ಮ ಇಡೀ ಕುಟುಂಬ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿತ್ತು. ನಾನು ಜೈಲುವಾಸ ಅನುಭವಿಸದಿದ್ದರೂ ಹೋರಾಟದ ಬಿಸಿ ನನಗೂ ತಾಗದೇ ಇರಲಿಲ್ಲ. ನಮ್ಮ ಮನೆಯ ಗಂಡಸರನ್ನೆಲ್ಲ ಜೈಲುಗಳಲ್ಲಿ ತುಂಬಿಸಿದ್ದರಿಂದ ದುಡಿಯುವ ಗಂಡಸರಿಲ್ಲದೇ ಮನೆಯ ಹೆಂಗಸರು, ಮಕ್ಕಳ ಹೊಟ್ಟೆಪಾಡಿಗೂ ಗತಿ ಇಲ್ಲದಂತಾಗಿತ್ತು. ಹಿಂದೆ ಬ್ರಿಟಿಷರಿಗೆ ಭಾರತ ಒಂದು ಸಂಪತ್ತಿನ ಗಣಿಯಾಗಿತ್ತು, ಆದರೆ ತರುವಾಯ ಅವರಿಗೆ ಭಾರತ ಒಂದು ಹೊರೆಯಾಗಿ ಪರಿಣಮಿಸಿತು. ಹೀರಬೇಕಾದುದನ್ನೆಲ್ಲ ಅವರು ಹೀರಿ ಆಗಿತ್ತು. ಇಲ್ಲಿ ಅವರಿಗೆ ಇನ್ನೇನು ಕೆಲಸ? ಆಮೇಲೆ ಅವರಿಗೂ ಇಲ್ಲಿಂದ ತೊಲಗಿದರೆ ಸಾಕು ಎನಿಸತೊಡಗಿತ್ತು. ಹಾಗೆ ನೋಡಿದರೆ ಕ್ವಿಟ್ ಇಂಡಿಯಾ ಚಳವಳಿ ೧೯೪೨ರಲ್ಲೇ ತೀವ್ರವಾಗಿ ಪ್ರಾರಂಭವಾಗಿತ್ತು. ಆ ಚಳವಳಿಯನ್ನು ಅವರು ಕೇವಲ ಒಂಬತ್ತು ದಿನಗಳಲ್ಲಿ ಹತ್ತಿಕ್ಕಿದ್ದರು. ಇದಾದ ಐದು ವರ್ಷಗಳ ನಂತರ ಅಂದರೆ ೧೯೪೭ರಲ್ಲಿ ಅವರು ತಾವಾಗಿಯೇ ಭಾರತವನ್ನು ಸ್ವತಂತ್ರಗೊಳಿದರು. ಏನಿದರ ಅರ್ಥ? ’ಇದು ನಿಮ್ಮ ಹೋರಾಟಕ್ಕೆ ಸಂದ ಜಯವೇ? ಐದುವರ್ಷಗಳ ಹಿಂದಿನ ನಿಮ್ಮ ಚಳವಳಿಗೂ, ಇಂದಿನ ಸ್ವಾತಂತ್ರ್ಯ ಪ್ರಾಪ್ತಿಗೂ ನನಗೆ ಯಾವ ತಾರ್ಕಿಕ ಸಂಬಂಧವೂ ಕಾಣಿಸುತ್ತಿಲ್ಲ’ ಎಂದು ಅಪ್ಪನನ್ನು ಕೇಳುತ್ತಿದ್ದೆ. ಅಂದಿನ ಬ್ರಿಟನ್ ಪ್ರಧಾನಿ ರಿಚರ್ಡ್ ಆಟ್ಲೀ ಇಲ್ಲಿನ ವೈಸ್‌ರಾಯ್‌ಗೆ “ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅಲ್ಲಿಂದ ಬಂದುಬಿಡು. ೧೯೪೮ರ ಹೊತ್ತಿಗೆ ಯಾವ ಕಾರಣಕ್ಕೂ ನಾವು ಅಲ್ಲಿ ಇರಕೂಡದು” ಎಂದು ಸಂದೇಶ ಕಳುಹಿಸಿದ್ದನಂತೆ.
ದೇಶ ವಿಭಜನೆಯು ಸ್ವಾತಂತ್ರ್ಯದೊಂದಿಗೆ ನಮಗೆ ಬಂದ ಮೊದಲ ಬಳುವಳಿ. ಸಾವಿರದ ನಾಲ್ಕು ನೂರು ವರ್ಷಗಳಿಂದ ಸಮಸ್ಯೆಯೇ ಇಲ್ಲದೆ ಒಂದಾಗಿ ಬದುಕುತ್ತಿದ್ದ ಮುಸ್ಲಿಮರಿಗೆ ಆಮೇಲೆ ಇದ್ದಕ್ಕಿದ್ದಂತೆ ತಾವು ಪ್ರತ್ಯೇಕರಾಗಬೇಕು ಎನಿಸಿಬಿಟ್ಟಿತು. ನಾನು ಚಿಕ್ಕವನಿದ್ದಾಗ ಎಷ್ಟೋ ಮುಸ್ಲಿಂ ಆಚರಣೆಗಳಲ್ಲಿ ಭಾಗವಹಿಸಿದ್ದೆ, ಅವರೂ ನಮ್ಮ ಮದುವೆ ಸಮಾರಂಭಗಳಿಗೆ ಬಂದು ನೆರವಾಗುತ್ತಿದ್ದರು. ಎಲ್ಲರೂ ಬ್ರಿಟಿಷರ ವಿರುದ್ಧ ಹೋರಾಡಬೇಕಾದ ಸಂದರ್ಭ ಇದ್ದುದರಿಂದ ಆಗ ಪರಸ್ಪರ ಕಿತ್ತಾಡುವ ಪ್ರಮೇಯವೇ ಇರಲಿಲ್ಲ. ಆದರೆ ಆಮೇಲೆ ಮುಸ್ಲಿಮರು “ಸ್ವಾತಂತ್ರ್ಯ ಸಿಗದಿದ್ದರೂ ಚಿಂತೆಯಿಲ್ಲ, ಹಿಂದೂಗಳೊಂದಿಗೆ ಒಂದಾಗಿ ಬಾಳೆವು” ಎಂಬ ಕಠೋರ ತೀರ್ಮಾನಕ್ಕೆ ಬರಲು ಕಾರಣವಾದರೂ ಏನು?
ಇಲ್ಲಿ ನನಗೆ ಬ್ರಿಟಿಷರ ಎರಡು ತಪ್ಪುಗಳು ಕಾಣಿಸುತ್ತವೆ. ಮೊದಲನೆಯದಾಗಿ ಅವರು ಈ ದೇಶಕ್ಕೆ ಬಂದು ಆಡಳಿತ ಮಾಡಬಾರದಿತ್ತು. ಆಡಳಿತ ನಡೆಸಿದ ಮೇಲೆ ಹೊಣೆಗೇಡಿಗಳ ಹಾಗೆ ಇದ್ದಕ್ಕಿದ್ದಂತೆ ಇಲ್ಲಿಂದ ಪಲಾಯನ ಮಾಡಬಾರದಿತ್ತು. ಹಿಂದೂ ಮುಸ್ಲಿಮರು ಪರಸ್ಪರ ಕಾದಾಡದ ಹಾಗೆ ವಾತಾವರಣವನ್ನು ನಿರ್ಮಿಸಿಕೊಟ್ಟು ಬಳಿಕ ಇಲ್ಲಿಂದ ಕಾಲ್ತೆಗೆಯ ಬೇಕಾಗಿತ್ತು. ಅದು ಅವರಿಗೆ ಸಾಧ್ಯವೂ ಇತ್ತು, ಮಾತ್ರವಲ್ಲ, ಅವರ ಕರ್ತವ್ಯವೂ ಆಗಿತ್ತು. ಕೊನೆಕೊನೆಗೆ ಬ್ರಿಟಿಷರು ತುಂಬ ಬೇಕಾಬಿಟ್ಟಿಯಾಗಿ ನಡೆದುಕೊಂಡರು. ಭಾರತದ ಸ್ವಾತಂತ್ರ್ಯವನ್ನು ನಿರ್ಧರಿಸಲೆಂದೇ ಮೌಂಟ್ ಬ್ಯಾಟನ್‌ನನ್ನು ಅಲ್ಲಿಂದ ಇಲ್ಲಿಗೆ ಕಳುಹಿಸಿದ್ದರು. ಅವನೇನು ಮುತ್ಸದ್ದಿಯೇ? ರಾಜಕೀಯದ ಬಗ್ಗೆ ಏನೇನೂ ಗೊತ್ತಿಲ್ಲದ ಅವನು ಜೀವಮಾನವಿಡೀ ಉಡಾಫೆ ಮಾಡಿಕೊಂಡಿದ್ದವನು. ಅವನು ಇನ್ನೆಲ್ಲಿ ತಮ್ಮ ಹೆಂಡತಿಯರ ಮೇಲೆ ಕಣ್ಣಿಡುತ್ತಾನೋ ಎಂದು ಹೆದರಿ ಅಲ್ಲಿನ ರಾಜಕಾರಣಿಗಳು ಅವನನ್ನು ಇಲ್ಲಿಗೆ ಕಳುಹಿಸಿದ್ದು. ಮೊದಲು ಅವನು ಬರ್ಮಾದಲ್ಲಿದ್ದ, ಆಮೇಲೆ ಅಲ್ಲಿಂದ ಅವನಿಗೆ ವೈಸ್‌ರಾಯ್‌ನಂತಹ ದೊಡ್ಡ ಜವಾಬ್ದಾರಿಯನ್ನು ವಹಿಸಿ ಭಾರತಕ್ಕೆ ಕಳುಹಿಸಲಾಯಿತು. ಆಗ ನಾನು “ಇದು ದೇಶವನ್ನು ಸ್ವತಂತ್ರಗೊಳಿಸುವ ಸಮಯವಲ್ಲ, ದುಡುಕಬೇಡಿ” ಎಂದು ಮೌಂಟ್ ಬ್ಯಾಟನ್‌ಗೆ ಪತ್ರವನ್ನು ಬರೆದಿದ್ದೆ.
ಮುಂದೆ ೧೯೪೮ರ ಜನವರಿಯಂದು ಮಹಾತ್ಮಾ ಗಾಂಧೀಜಿ ಹತ್ಯೆಯಾದರು. ಆಗ ನನಗೆ ೧೮ರ ವಯಸ್ಸು. ಅವರನ್ನು ಗುಂಡಿಟ್ಟು ಕೊಂದ ದಿನ ಕಣ್ಣೀರಿಡುತ್ತ ಕುಳಿತಿದ್ದ ನನ್ನನ್ನು ಕಂಡು ನನ್ನ ತಂದೆ “ನೀನು ಗಾಂಧಿಗಾಗಿ ಅಳುವುದೇ?” ಎಂದು ಅಚ್ಚರಿ ಪಟ್ಟರು. ಆಗ ನಾನು “ಅಪ್ಪ, ಕಣ್ಣೀರಿಡುವುದು ಮಾತ್ರವಲ್ಲ, ಅವರ ಅಂತ್ಯ ಸಂಸ್ಕಾರದಲ್ಲೂ ಭಾಗವಹಿಸಬೇಕು. ಈಗ ಮಾತನಾಡುತ್ತ ಕೂರಲು ಸಮಯವಲ್ಲ, ರೈಲು ಟಿಕೀಟಿಗೆ ಹಣ ಕೊಡು. ಇನ್ನೇನು ದೆಹಲಿಯ ರೈಲು ಹೊರಡಲಿದೆ” ಎಂದು ಕೇಳಿದೆ. “ನನಗೆ ನಂಬಿಕೆ ಬರುತ್ತಿಲ್ಲ, ನಿನಗೇನಾದರೂ ತಲೆ ಕೆಟ್ಟಿದೆಯೇ?” ಎಂದು ಕೇಳಿದರು. “ಅದಕ್ಕೆಲ್ಲ ಈಗ ಪುರುಸೊತ್ತಿಲ್ಲ. ಅಲ್ಲಿಂದ ಬಂದ ಮೇಲೆ ಉತ್ತರಿಸುತ್ತೇನೆ. ಈಗ ಹಣ ಕೊಡು” ಎಂದೆ. ನೀವು ನಂಬಲಾರಿರಿ ನಾನು ದೆಹಲಿಯ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ನನ್ನ ಅಧ್ಯಾತ್ಮ ಗುರು, ಸಂಗಡಿಗ ಮಾಸ್ತೋ ನನಗಾಗಿ ಕಾಯುತ್ತಿದ್ದ. “ನೀನು ಗಾಂಧಿಯನ್ನು ಎಷ್ಟೇ ವಿರೋಧಿಸಿ ಮಾತನಾಡಿದರೂ, ಮನಸ್ಸಿನ ಯಾವುದೋ ಮೂಲೆಯಲ್ಲಿ ಅವನ ಬಗ್ಗೆ ಗೌರವವಿದೆ ಎಂದು ನನಗೆ ಗೊತ್ತಿತ್ತು. ಅದಕ್ಕೇ ನಿಮ್ಮ ಊರಿನ ರೈಲು ನಿಲ್ಲುವ ಈ ಪ್ಲಾಟ್‌ಫಾರಂನಲ್ಲಿ ಕಾಯುತ್ತಿದ್ದೆ” ಎಂದ. “ಮಾಸ್ತೋ ನೀನು ಇಷ್ಟು ದಿನ ಗಾಂಧಿಯ ವಿಚಾರಗಳ ಬಗ್ಗೆ ನನ್ನೊಂದಿಗೆ ಚರ್ಚಿಸುತ್ತಿದ್ದೆ, ಹಾಗಾಗಿ ನಾನೂ ವಿರೋಧಿಸುತ್ತಿದ್ದೆ. ವಿಚಾರಗಳನ್ನು ಬದಿಗಿರಿಸಿ ಆ ವ್ಯಕ್ತಿಯ ಬಗ್ಗೆ ನನ್ನ ಭಾವನೆಗಳೇನು ಎಂದು ನೀನು ಕೇಳಿದ್ದರೆ ಆಗಲೇ ಅದನ್ನು ನಿನ್ನೊಡನೆ ಹೇಳಿಕೊಳ್ಳುತ್ತಿದ್ದೆ” ಎಂದು ಹೇಳಿದೆ.
ಬದುಕಿನ ಕುರಿತ ಗಾಂಧೀಜಿಯ ಪ್ರತಿಯೊಂದು ವಿಚಾರವನ್ನೂ ನಾನು ಉಗ್ರವಾಗಿ ವಿರೋಧಿಸುತ್ತಿದ್ದೆನಾದರೂ ಹಲವು ಕಾರಣಗಳಿಗಾಗಿ ನಾನು ಅವರನ್ನು ಮೆಚ್ಚಿದ್ದೆ. ಎಲ್ಲಕ್ಕಿಂತ ಮೊದಲಿಗೆ ಅವರ ಸತ್ಯನಿಷ್ಠೆ. ಯಾವ ವಿಷಮ ಸನ್ನಿವೇಶದಲ್ಲೂ ಅವರು ಸುಳ್ಳು ಹೇಳಲಿಲ್ಲ. ತಾವು ನಂಬಿದ ಸತ್ಯಕ್ಕೆ ಬದ್ಧರಾಗಿದ್ದರು. ಅವರು ಯಾವುದನ್ನು ಸತ್ಯ ಎಂದು ಭಾವಿಸಿದ್ದರೋ, ನನ್ನ ಪಾಲಿಗೆ ಅದು ಮೂರು ಕಾಸಿನ ಬೆಲೆಯದೂ ಅಲ್ಲ. ಆ ಮಾತು ಬೇರೆ, ಅದು ನನ್ನ ಸಮಸ್ಯೆಯೇ ವಿನಃ ಅವರದ್ದಲ್ಲ. ಆದರೆ ಅವರು ಸತ್ಯನಿಷ್ಠರಲ್ಲ ಎಂದು ಮಾತ್ರ ನಾನೆಂದಿಗೂ ಹೇಳಲಾರೆ. ಎರಡನೆಯದಾಗಿ ಅವರ ಶುಚಿತ್ವ. ಸಂತರು ಲೌಕಿಕ ಶುಚಿತ್ವಕ್ಕೆ ಬೆಲೆ ಕೊಡುವುದಿಲ್ಲ ಎಂದು ಹೇಳುತ್ತಾರೆ. ಅಂಥವರ ನಡುವೆ ಇವರು ಒಳಗೂ ಹೊರಗೂ ತುಂಬ ಶುಚಿಯಾಗಿ ಬದುಕಿದ್ದರು. ಮೂರನೆಯದಾಗಿ, ಅವರು ಎಲ್ಲ ಧರ್ಮಗಳನ್ನೂ ಸಮಾನವಾಗಿ ಗೌರವಿಸುತ್ತಿದ್ದರು. ಕೆಲವು ತಪ್ಪು ಕಾರಣಗಳಿಗಾಗಿ ಗೌರವಿಸುತ್ತಿದ್ದರು ಎಂಬುದು ನಿಜ. ಆ ಸಮನ್ವಯದ ಮಾತುಗಳಲ್ಲಿ ಇಡೀ ದೇಶ ಒಡೆದು ಚೂರಾಗಬಾರದು ಎಂಬ ಶುದ್ಧ ರಾಜಕೀಯ ಲೆಕ್ಕಾಚಾರವಿತ್ತು. ಆದ್ದರಿಂದಲೇ ಗಾಂಧಿಯ ರಾಜಕೀಯ ಪಕ್ಷಕ್ಕೆ ಇಡೀ ದೇಶವನ್ನು ಆಳಲು ಸಾಧ್ಯವಾದದ್ದು. ಅವರ ಪ್ರಾರ್ಥನಾ ಸಭೆಗಳಲ್ಲಿ ಗೀತೆ, ಬೈಬಲ್, ಕುರಾನ್, ಹೀಗೆ ಎಲ್ಲ ಧರ್ಮಗ್ರಂಥಗಳ ಆಯ್ದ ಭಾಗಗಳನ್ನು ಪಠಿಸಲಾಗುತ್ತಿತ್ತು. ಆ ಆಯ್ದ ಭಾಗಗಳನ್ನು ಒಮ್ಮೆ ಪರಿಶೀಲಿಸಿದಾಗ ನನಗೆ ಗಾಂಧಿಯ ಚಾಣಾಕ್ಷತನವನ್ನು ಕಂಡು ನಿಜಕ್ಕೂ ಆಶ್ಚರ್ಯವಾಯಿತು. ಎಲ್ಲ ಧರ್ಮಗ್ರಂಥಗಳಿಂದಲೂ ಗೀತೆಯ ವಿಚಾರಗಳಿಗೆ ಸಮ್ಮತಿಸುವ ಭಾಗಗಳನ್ನು ಮಾತ್ರ ಎಚ್ಚರಿಕೆಯಿಂದ ಆರಿಸಿಕೊಳ್ಳಲಾಗಿದ್ದು ಗೀತೆಯೊಂದಿಗೆ ಘರ್ಷಣೆಗಿಳಿಯಬಲ್ಲ ವಿಚಾರಗಳನ್ನು ವ್ಯವಸ್ಥಿತವಾಗಿ ಕೈಬಿಡಲಾಗಿತ್ತು. ಪ್ರಾರ್ಥನಾ ಸಭೆಗಳಲ್ಲಿ ಇತರ ಧರ್ಮಗ್ರಂಥಗಳನ್ನೂ ಅನುವಾದಿತ ರೂಪದಲ್ಲಿ ಪಠಿಸಲಾಗುತ್ತಿತ್ತೇ ವಿನಃ ಮೂಲಪಠ್ಯವನ್ನು ಅಲ್ಲಿ ಪರಿಗಣಿಸಿರಲಿಲ್ಲ. ಬೇರೆಯವರ ಭಾವನೆಗಳಿಗೆ ಏಕೆ ಸುಮ್ಮನೆ ಹಾನಿ ಮಾಡಬೇಕು, ಅವರ ಧರ್ಮದಲ್ಲೂ ಸತ್ಯ ಇದ್ದರೂ ಇದ್ದೀತು ಎಂಬ ಲೆಕ್ಕಾಚಾರದಿಂದ ಆತ ಬೇರೆ ಧರ್ಮಗಳನ್ನು ಗೌರವಿಸುತ್ತಿದ್ದುದು. ಆದರೆ ಗೌರವಿಸುತ್ತಿದ್ದುದಂತೂ ಸುಳ್ಳಲ್ಲ. ಇನ್ನು ನಾಲ್ಕನೆಯದಾಗಿ ಅವರ ಸರಳತೆ. ತನ್ನ ಬರವಣಿಗೆಯನ್ನು ಹೆಚ್ಚು ಹೆಚ್ಚು ಸರಳೀಕರಿಸಲು ಗಾಂಧಿಯಷ್ಟು ಶ್ರಮ ವಹಿಸಿದ ಬೇರೊಬ್ಬ ಲೇಖಕನನ್ನು ನಾನು ಕಂಡಿಲ್ಲ. ಒಂದು ವಾಕ್ಯವನ್ನು ಸೂಚ್ಯವಾಗಿಸಲು, ಸರಳವಾಗಿಸಲು ಗಂಟೆ ಗಟ್ಟಲೆ ಕೂತು ಕಷ್ಟಪಡುತ್ತಿದ್ದರು. ತಾನು ನಂಬಿದ ಹಾಗೆ ಬದುಕಲು ಸಂಪೂರ್ಣವಾಗಿ ಪ್ರಯತ್ನಿಸಿದರು. ಅದನ್ನು ನಾನು ಮೆಚ್ಚುತ್ತೇನೆ. ಆದರೆ ತನ್ನ ನಂಬಿಕೆಗಳು ನಿಜವಾಗಿಯೂ ಕ್ಷುಲ್ಲಕ ನಂಬಿಕೆಗಳು ಎಂದು ಆತನಿಗೆ ತಿಳಿದಿರಲಿಲ್ಲ. ಕೊನೆಗೆ ಅಂತಹ ಒಂದು ನಂಬಿಕೆಯೇ ಅವರ ಪ್ರಾಣವನ್ನೂ ಬಲಿತೆಗೆದುಕೊಂಡಿತು.
ಗಾಂಧಿಯ ಸಾವಿನಿಂದ ಭಾರತ ತನ್ನ ಚಾರಿತ್ರ್ಯವಧೆಯನ್ನೂ ಮಾಡಿಕೊಂಡಿತು. ಈ ಹಿಂದೆ ಗಾಂಧಿಯಂತಹ ಯಾವ ವ್ಯಕ್ತಿಯೂ ಭಾರತದಲ್ಲಿ ಹೀಗೆ ಹತ್ಯೆಯಾಗಿರಲಿಲ್ಲ. ಇದರರ್ಥ ಈ ದೇಶ ಶಾಂತಿಪ್ರಿಯ ದೇಶ ಎಂದಲ್ಲ. ಆದರೆ ಗಾಂಧಿಯಂತಹವರೂ ಕೊಲೆಗೆ ಯೋಗ್ಯರು ಎಂದು ಈ ದೇಶ ಈ ಹಿಂದೆ ಭಾವಿಸಿರಲಿಲ್ಲ. ನಾನು ಕಣ್ಣೀರಿಟ್ಟುದು ಗಾಂಧೀ ಸತ್ತರು ಎಂದಲ್ಲ, ಎಲ್ಲರೂ ಒಂದು ದಿನ ಸಾಯಲೇ ಬೇಕಲ್ಲವೇ? ಆಸ್ಪತ್ರೆಯ ಮಂಚದ ಮೇಲೆ ಸಾಯುವುದಕ್ಕಿಂತ ಆತ ಗುಂಡಿಗೆ ಬಲಿಯಾದದ್ದೇ ಸರಿ. ಇದರರ್ಥ ನಾನು ನಾಥೋರಾಂ ಗೋಡ್ಸೆಯನ್ನು ಬೆಂಬಲಿಸುತ್ತಿದ್ದೇನೆ ಎಂದಲ್ಲ. ನಿಸ್ಸಂಶಯವಾಗಿ ಅವನು ಒಬ್ಬ ಕೊಲೆಗಡುಕ ಅವನ ವಿಷಯದಲ್ಲಿ ನಾನು “ಭಗವಂತ ಅವನನ್ನು ಕ್ಷಮಿಸು. ತಾನು ಏನು ಮಾಡುತ್ತಿದ್ದೇನೆ ಎಂಬುದು ಅವನಿಗೆ ತಿಳಿಯುತ್ತಿಲ್ಲ” ಎಂದು ಯೇಸುವಿನಂತೆ ಪ್ರಾರ್ಥನೆ ಮಾಡಲಾರೆ. ತಾನೇನು ಮಾಡುತ್ತಿದ್ದೇನೆ ಎಂದು ಅವನಿಗೆ ಚೆನ್ನಾಗಿಯೇ ತಿಳಿದಿತ್ತು. ಹಾಗಾಗಿ ಅವನು ಶಿಕ್ಷಾರ್ಹ.
ನಾನು ಮತ್ತೆ ಊರಿಗೆ ಹಿಂದಿರುಗಿದ ಮೇಲೆ ಇದನ್ನೆಲ್ಲ ನನ್ನ ಅಪ್ಪನೊಂದಿಗೆ ಮಾತನಾಡಿದೆ. ಏಕೆಂದರೆ ನನ್ನ-ಗಾಂಧಿಯ ಸಂಬಂಧ ಅಷ್ಟು ಸರಳವಲ್ಲ. ಅಪ್ಪನಿಗೆ ಇದನ್ನೆಲ್ಲ ಅರ್ಥ ಮಾಡಿಸಲು ತುಂಬ ವ್ಯವಧಾನ ಬೇಕಾಯಿತು. ಇದು ಬರೀ ಗಾಂಧೀಜಿಯವರ ವಿಷಯದಲ್ಲಿ ಮಾತ್ರವಲ್ಲ. ಎಲ್ಲ ಸಂಬಂಧಗಳ ವಿಷಯದಲ್ಲೂ ನಾನು ಹೀಗೆಯೇ. ಯಾವ ಸಂಬಂಧ ಏರ್ಪಟ್ಟರೂ ಮರುಗಳಿಗೆಯೇ ನಾನು ಆ ಸಂಬಂಧಕ್ಕೆ ಅನ್ಯನಾಗಿಬಿಡುತ್ತೇನೆ. ಯಾರಲ್ಲಿ ಏನನ್ನೇ ಮೆಚ್ಚಿದರೂ ಮರುಗಳಿಗೆಯೇ ನನಗೆ ಹಿಡಿಸದ ವಿಷಯಗಳೂ ನನಗೆ ಗೋಚರವಾಗಿ ಬಿಡುವುವು. ಒಬ್ಬನನ್ನು ಎರಡು ಭಾಗಗಳಾಗಿ ಬೇರ್ಪಡಿಸಿ ಬಳಿಕ ಅವನ ಒಂದು ಭಾಗವನ್ನು ಸ್ವೀಕರಿಸುವುದು ಎಂದಿಗೂ ನನ್ನ ಜಾಯಮಾನವಲ್ಲ. ಆದ್ದರಿಂದಲೇ ನನ್ನ ವಿಚಾರಗಳು ಗಾಂಧೀವಿರೋಧೀ ಚಿಂತನೆಗಳೆಂದು ಕರೆಸಿಕೊಂಡಿತು, ನಾನು ಕೂಡ ಅವರ ವಿಚಾರಗಳನ್ನು ತೀವ್ರವಾಗಿ ಟೀಕಿಸುತ್ತ ಬಂದೆ. ಅವನ ವಿಚಾರಗಳಲ್ಲಿ ಸತ್ವವಿಲ್ಲ ಎಂಬ ಕಾರಣದಿಂದಲ್ಲ. ಅವರ ವಿಚಾರಗಳು ಹಲವು ತಲೆಮಾರುಗಳನ್ನು ಶಾಶ್ವತವಾಗಿ ಮುಳುಗಿಸಿಬಿಡುವ ಸತ್ವವನ್ನು ಹೊಂದಿದ್ದವು. ಒಂದು ವೇಳೆ (ಈ ಒಂದುವೇಳೆ ಎಂಬ ಮಾತು ತುಂಬ ಮುಖ್ಯ) ಸುಖ ಸಮೃದ್ಧಿ, ಸುಭಿಕ್ಷತೆ, ವಿಜ್ಞಾನ, ತಂತ್ರಜ್ಞಾನ ಇವುಗಳನ್ನು ಸ್ವಾಗತಿಸಿದ್ದರೆ ನಾನು ಅವರನ್ನು ಒಪ್ಪುತ್ತಿದ್ದೆ. ನಾನು ಯಾವುದನ್ನೆಲ್ಲ ಎತ್ತಿ ಹಿಡಿಯುವೆನೋ ಹೆಚ್ಚು ಕಡಿಮೆ ಅವೆಲ್ಲವನ್ನೂ ಗಾಂಧಿ ವಿರೋಧಿಸುತ್ತಿದ್ದರು. ನಾನು ’ಈಗಾಗಲೇ ಜನಸಂಖ್ಯೆ ಹೆಚ್ಚಿದೆ, ಕಾಮಸುಖಕ್ಕಾಗಿ ಬೇಕಾದರೆ ಸಂಭೋಗದಲ್ಲಿ ತೊಡಗಿ. ಆದರೆ ಮಕ್ಕಳು ಮಾತ್ರ ಬೇಡ’ ಎಂದರೆ ಅವರು ’ಸಂಭೋಗದಲ್ಲಿ ಸುಖ ಪಡಬಾರದು, ಮಕ್ಕಳನ್ನು ಹುಟ್ಟಿಸಲು ಮಾತ್ರ ಸಂಭೋಗಿಸಬೇಕು’ ಎಂದು ಕರೆ ನೀಡುತ್ತಿದ್ದರು. ನಾನು ಬಡತನದ ವಿರೋಧಿ ಆದರೆ ಆತನಿಗೆ ಅದೇ ಧರ್ಮ. ನಾನು ಬುಡಕಟ್ಟು ಜೀವನ ಪದ್ಧತಿಯ ವಿರೋಧಿ, ಆದರೆ ಅವರು ಭಾರತವನ್ನು ಆ ದಿಕ್ಕಿನಲ್ಲೇ ನಡೆಸಲು ಹೊರಟಿದ್ದರು. ಆದರೂ ವಿಭೂತಿಯ ಒಂದಂಶವಿದ್ದರೂ ಅದು ನನ್ನ ಕಣ್ತಪ್ಪಿಸಿ ಹೋಗಲಾರದು. ಅದನ್ನು ನಾನು ಮೆಚ್ಚದೇ ಬಿಡುವವನಲ್ಲ. ಆತ ಮಹಾ ಸಂವೇದನಾಶೀಲ. ಒಂದು ಇಡೀ ಜನಾಂಗದ ನಾಡಿಮಿಡಿತವನ್ನು ಹಿಡಿಯಬಲ್ಲ ಸೂಕ್ಷ್ಮತೆ ಅವರಿಗಿತ್ತು. ಹತ್ತು ವರ್ಷದವನಿದ್ದಾಗ ನಾನು ಅವರನ್ನು ಭೇಟಿ ಮಾಡಿದ್ದು. ಈಗ ಮತ್ತೆ ನೋಡಬೇಕು ಎನಿಸುತ್ತಿದೆ. ಅಂದು ನನ್ನಿಂದ ಅವರಿಗೆ ಬರೀ ಮೂರು ಬೆಳ್ಳಿ ನಾಣ್ಯಗಳ ಸಂಪಾದನೆ ಆಗಿತ್ತು. ಈಗ ನಾನು ನಿಜವಾದ ಸಂಪತ್ತನ್ನು ಅವರಿಗೆ ನೀಡಬಲ್ಲೆ ಬಲ್ಲೆ. ಆದರೆ ಅವರೇ ಇಲ್ಲ, ಇನ್ನು ಹಾಗೆ ನೀಡುವ ಅವಕಾಶವೂ ಮುಂದೆ ಕಾಣಿಸುತ್ತಿಲ್ಲ.
Comments
ಉ: ಗಾಂಧಿಯ ಮೊದಲ ಹಾಗು ಕಡೆಯ ಭೇಟಿ (ಓಷೋ ರಜನೀಶ್ ಚಿಂತನೆಗಳು)
In reply to ಉ: ಗಾಂಧಿಯ ಮೊದಲ ಹಾಗು ಕಡೆಯ ಭೇಟಿ (ಓಷೋ ರಜನೀಶ್ ಚಿಂತನೆಗಳು) by dayanandac
ಉ: ಗಾಂಧಿಯ ಮೊದಲ ಹಾಗು ಕಡೆಯ ಭೇಟಿ (ಓಷೋ ರಜನೀಶ್ ಚಿಂತನೆಗಳು)
In reply to ಉ: ಗಾಂಧಿಯ ಮೊದಲ ಹಾಗು ಕಡೆಯ ಭೇಟಿ (ಓಷೋ ರಜನೀಶ್ ಚಿಂತನೆಗಳು) by vasudeva.tn
ಉ: ಗಾಂಧಿಯ ಮೊದಲ ಹಾಗು ಕಡೆಯ ಭೇಟಿ (ಓಷೋ ರಜನೀಶ್ ಚಿಂತನೆಗಳು)