ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ದಿನ - ಗುರು ಪೂರ್ಣಿಮಾ

ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ದಿನ - ಗುರು ಪೂರ್ಣಿಮಾ

ಗುರುಬ್ರಹ್ಮ ಗುರುವಿಷ್ಣು ಗುರು ದೇವೋ ಮಹೇಶ್ವರ/

ಗುರು‌ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮ://

ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸದ ಹುಣ್ಣಿಮೆ ದಿವಸ ಹಿಂದೂಗಳು ಸಾಂಪ್ರದಾಯಿಕವಾಗಿ ತಮಗೆ ವಿದ್ಯೆ ಕಲಿಸಿದ ಗುರುಗಳಿಗೆ,ತಮ್ಮ ಗುರುಪೀಠದ ಆಚಾರ್ಯರಿಗೆ ಪೂಜೆ,ಗೌರವ,ಕೃತಜ್ಞತೆ ಸಲ್ಲಿಸುವ ದಿನವೇ ‘ಗುರು ಪೂರ್ಣಿಮೆ’. ಹಿಂದೂಗಳಿಗೆ ಮತ್ತು ಬೌದ್ಧರಿಗೆ ತುಂಬಾ ಪವಿತ್ರವಾದ ದಿನ. ಈ ದಿನ ಗುರುಗಳ ಬೋಧನೆ, ಮಾರ್ಗದರ್ಶನ ಎಂದಿಗಿಂತ ಸಾವಿರ ಪಟ್ಟು ಹೆಚ್ಚಾಗಿರುತ್ತದೆ  ಮತ್ತು ಪ್ರಭಾವಶಾಲಿಯಾಗಿರುತ್ತದೆ ಎನ್ನುತ್ತಾರೆ ಬಲ್ಲವರು.

‘ಗು; ಮತ್ತು ‘ರು’ ಎಂಬುದು ಮೂಲಪದಗಳಾಗಿವೆ. ಸಂಸ್ಕೃತದಲ್ಲಿ ‘ಗು’ ಎಂದರೆ ಅಜ್ಞಾನ ಅಥವಾ ಅಂಧಕಾರ. ‘ರು’ ಎಂದರೆ ಕಳೆಯುವ ಅಥವಾ ದೂರ ಮಾಡುವ ಎಂಬರ್ಥದಲ್ಲಿ ಹೇಳುತ್ತಾರೆ. ಗುರು ನಮ್ಮ ಜೀವನದ ಅವಿಭಾಜ್ಯ ಅಂಗ.

“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಸುಮ್ಮನೆ ದಾಸವರೇಣ್ಯರು ಹೇಳಿಲ್ಲ,ಅರಿತೇ ಹೇಳಿರುವರು. ಗುರು ಓರ್ವ ಹಿತೈಷಿ, ಮತ್ತೊಬ್ಬನ (ಶಿಷ್ಯರ) ಏಳ್ಗೆಗೆ ಸಹಕರಿಸುವವರು, ತಮ್ಮ ಶಿಷ್ಯರಿಗೆ ಬೋಧನೆ ಮಾಡುವವರು, ನೈತಿಕತೆಯ ಬೀಜವನ್ನು ಬಿತ್ತಿ, ಮೊಳಕೆಯೊಡೆಸಿ ಬೇಕಾದ ನೀರು ಗೊಬ್ಬರ ಹಾಕಿ ಪೋಷಿಸುವವರು. ಶಿಷ್ಯರ ಮನವನ್ನು, ಕೌಟುಂಬಿಕ ಹಿನ್ನಲೆಯನ್ನು ಅರಿತು ವ್ಯವಹರಿಸುವವರೇ ನಿಜವಾದ ಗುರು ಅನ್ನಿಸಿಕೊಳ್ಳಲು ಯೋಗ್ಯತಾವಂತರು. ಅಂಥ ಗುರುವಿಗೆ ಶಿಷ್ಯರು ಪೂಜೆ ಮಾಡಿ ಕಾಣಿಕೆ ಸಮರ್ಪಿಸುವ ದಿನ.ವಿದ್ವಾಂಸರನ್ನು ಸ್ಮರಿಸುವ ದಿನ.

ಮಳೆಗಾಲದಲ್ಲಿ ನಾಲ್ಕು ತಿಂಗಳು ಚಾತುರ್ಮಾಸದಲ್ಲಿ ಬರುವ ಗುರು ಪೂರ್ಣಿಮೆ ಅತ್ಯಂತ ವಿಶೇಷ. ಮಠಾಧಿಪತಿಗಳು, ಸನ್ಯಾಸಿಗಳು, ಧರ್ಮಾಧ್ಯಕ್ಷರುಗಳು ಒಂದೇ ಸ್ಥಳದಲ್ಲಿದ್ದು, ಭಕ್ತಾದಿಗಳಿಗೆ ಪ್ರವಚನ ನೀಡುತ್ತಾರೆ. ಆಧ್ಯಾತ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳ ಸಂಭ್ರಮ. ಇದುವೇ 'ಗುರು ಶಿಷ್ಯ ಪರಂಪರೆ'. ಆಶ್ರಮಗಳಲ್ಲಿ,ಗುರು ಮಠಗಳಲ್ಲಿ 'ಗುರು ಪಾದುಕಾ ಪೂಜೆ' ನಡೆಸಿ, ಶಿಷ್ಯರು ತಮ್ಮನ್ನು ತಾವೇ ಗುರುವಿಗೆ ಸಮರ್ಪಣೆ ಮಾಡಿಕೊಳ್ಳುವ ದಿನ. ಹಿಂದೂ ಧರ್ಮದಲ್ಲಿ ಆಚಾರ-ವಿಚಾರ, ಸಂಸ್ಕೃತಿ, ಸಂಪ್ರದಾಯ,ಪೂಜೆ, ಗುರು ಹಿರಿಯರನ್ನು ಗೌರವಿಸುವುದು ಇವುಗಳಿಗೆಲ್ಲ ವಿಶೇಷ ಅರ್ಥವಿದೆ.

ವ್ಯಾಸಾಯ ವಿಷ್ಣು ರೂಪಾಯ ವ್ಯಾಸ ರೂಪಾಯ ವಿಷ್ಣವೇ/

ನಮೋ ವೈ ಬ್ರಹ್ಮ ನಿಧಯೇ ವಾಸಿಷ್ಠಾಯ ನಮೋ ನಮ://

ಈ ದಿನ ೨೧೬ ಪುಟಗಳ ಶ್ಲೋಕ ಗುರುಗೀತಾಗಾಯನವನ್ನು,ಮಂತ್ರ ಪಠಣವನ್ನು ಶಿಷ್ಯ ವೃಂದದವರು ಸಾಮೂಹಿಕವಾಗಿ ಹೇಳುತ್ತಾರೆ. ಇದೇ ದಿನ ಮಹಾಭಾರತ ಕರ್ತೃ ಭಗವಾನ್ ವೇದವ್ಯಾಸರು ಪರಾಶರ ಮುನಿ ಮತ್ತು ಮೀನುಗಾರ ವಂಶದ ಸತ್ಯವತಿಯವರಿಗೆ ಜನಿಸಿ ಬಂದ ವಿಶೇಷ ದಿವಸ. ಪರಾಶರರು ಋಷಿಗಳು. ನಾಲ್ಕು ವೇದಗಳನ್ನು ಸಂಗ್ರಹಿಸಿ ,ವಿಭಾಗಿಸಿ ವೈದಿಕ ಅಧ್ಯಯನಕ್ಕೆ ನಾಂದಿ ಹಾಡಿದ ವೇದವ್ಯಾಸರ ಜನ್ಮ ದಿವಸ. ಹಾಗಾಗಿ ವ್ಯಾಸಪೂರ್ಣಿಮೆ ಎಂದೂ ಆಚರಿಸುವರು. ಬೌದ್ಧ ಮತದತ್ತ ನಾವು ಕಣ್ಣಾಡಿಸಿದರೆ, ಭಗವಾನ್ ಬುದ್ಧನಿಗೆ ಮೊದಲ ಧರ್ಮೋಪದೇಶ ಆದ ದಿನ.ಉತ್ತರ ಪ್ರದೇಶದ ಸಾರನಾಥದಲ್ಲಿ ಮೊದಲ ಉಪದೇಶದ ಕುರುಹುಗಳು ಈಗಲೂ ಇವೆ.ಅದು ಗುರು ಪೌರ್ಣಿಮೆ ದಿನವೇ ಆಯಿತು.

ಯೋಗ ಸಂಪ್ರದಾಯದಲ್ಲಿ ಭಗವಾನ್ ಪರಶಿವನು ಸಪ್ತ ಋಷಿಗಳಿಗೆ ಯೋಗ ವಿದ್ಯೆ ಧಾರೆ ಎರೆದು ಪ್ರಥಮ ಗುರು ಎನಿಸಿದ ದಿನ. ಗುರುವಿನ ಬೋಧನೆ ಮತ್ತು ನಮ್ಮ ಸಾಧನೆ ಸಮ್ಮಿಳಿತವಾದಾಗ ಮಾತ್ರ ನಾವು ಪರಿಪೂರ್ಣರೆನಿಸಲು ಸಾಧ್ಯ.ಇಲ್ಲವಾದರೆ ‘ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಸರ್ವಜ್ಞ’ ಆಗಬಹುದು. ‘ಖಾಲಿ ಕೊಡಗಳಾಗದೆ ತುಂಬಿದ ಕೊಡ’ ಗಳಾದಾಗ ಬೋಧಿಸಿದ ಗುರುವಿಗೂ ತೃಪ್ತಿ. ಹೊತ್ತು ಹೆತ್ತ ತಾಯಿ,ಸಾಕಿದ ತಂದೆ,ವಿದ್ಯೆ ಕಲಿಸಿ ತಿದ್ದಿ ತೀಡಿದ ಗುರು,ಹೊತ್ತ ಭೂಮಿತಾಯಿ ಇವರ ಋಣವನ್ನೆಲ್ಲ ತೀರಿಸಲು ಸಾಧ್ಯವಿಲ್ಲವಂತೆ. ’ಕೃತಜ್ಞತೆ ಮತ್ತು ಗೌರವ’ ಸಲ್ಲಿಸಬಹುದಲ್ಲವೇ?

ಹಿಂದೂ ಪರಂಪರೆಯ ಶ್ರೇಷ್ಠರೆನಿಸಿದ ಭಗವಾನ್ ವೇದವ್ಯಾಸರ ಜನ್ಮದಿನ ಸಹ. ಹಿಂದೂ ಪರಂಪರೆಯಲ್ಲಿ ಗುರುವಿಗೆ ಮಹತ್ತರ ಮತ್ತು ಮಹತ್ವದ ಸ್ಥಾನವಿದೆ. ಶ್ರೀ ರಾಮಕೃಷ್ಣ ಪರಮಹಂಸರು ‘ನಿಜವಾದ ಜ್ಞಾನದ ಬೆಳಕಿನಿಂದ ಪ್ರಕಾಶಿತನಾದವನೇ ಉತ್ತಮ ಗುರು, ಶಿಕ್ಷಕ’ ಎಂದರು. ನಮ್ಮ ಬದುಕಿನ ಪಲ್ಲಟಕ್ಕೆ, ಜೀವನ ಶಿಕ್ಷಣಕ್ಕೆ, ದಾರಿಗೆ, ಬೆಳಕಾದ ಗುರುವೃಂದದವರನ್ನು ನೆನೆಯುತ್ತಾ, ನಮ್ಮ ಸೇವೆಯ ಮೂಲಕ ಅವರಿಗೆ ಕೃತಜ್ಞತೆಗಳನ್ನು ಸಮರ್ಪಿಸುವ ಈ ‘ಗುರು ಪೌರ್ಣಿಮಾ’ ದಿನವನ್ನು ಆಚರಿಸುವ ಮೂಲಕ ಕೃತಾರ್ಥರಾಗೋಣ. ಗುರುವೇ ನಮಃ

-ರತ್ನಾ ಕೆ ಭಟ್, ತಲಂಜೇರಿ, ಪುತ್ತೂರು

ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು