ಗೆಳೆತನ

ಗೆಳೆತನ

ಯಾವುದೇ ರಕ್ತಸಂಬಂಧಗಳಿಲ್ಲದೆ, ಯಾವುದೇ ಸ್ವಾರ್ಥವಿಲ್ಲದೆ, ಯಾವುದರ ನಿರೀಕ್ಷೆಗಳಿಲ್ಲದೆ, ಎಂತಹ ಪರಿಸ್ಥಿತಿಯಲ್ಲೂ ಸಹ ಕೈ ಬಿಡದೆ, ಕಷ್ಟಗಳಿಗೆ ಬೆನ್ನೆಲುಬಾಗಿ, ನೋವಿನಲ್ಲಿ ಸಮಾಧಾನ ಹೇಳಿ, ಎಲ್ಲ ಸಮಯದಲ್ಲೂ ನಾನಿದ್ದೇನೆ ಎಂದು ಧೈರ್ಯ ಕೊಡುವ ಒಂದು ಸಂಬಂಧವಿದ್ದರೆ ಅದು ಸ್ನೇಹ ಮಾತ್ರ. ಆದರೆ ಅದರ ಆಯ್ಕೆ ಮಾತ್ರ ನಮಗೆ ಬಿಟ್ಟದ್ದು. ಏಕೆಂದರೆ ಸಹವಾಸ ಹೇಗಿರಬೇಕಂದರೆ ನಾವು ಒಳ್ಳೆಯ ದಾರಿಯ ಕಡೆಗೆ ಸಾಗುವಂತಿರಬೇಕು, ಹಾಳಾಗುವಂತಲ್ಲ,, ಇಲ್ಲದಿದ್ದರೆ "ಸಹವಾಸ ದೋಷ" ಎಂಬ ಪಟ್ಟಿ ಇಬ್ಬರಿಗೂ ಬರುತ್ತದೆ.

ನನ್ನ ತರಗತಿಯಲ್ಲಿ ಹಲವು ವಿಧದ ಮಕ್ಕಳಿದ್ದಾರೆ. ಹೆಚ್ಚು ಮಾತನಾಡುವವರು, ತರಲೆ ಮಾಡುವವರು, ಕೀಟಲೆ ಮಾಡುವವರು, ಅಳುವುದು, ಚಾಡಿ ಹೇಳುವುದು ಹೀಗೆ. ಮಕ್ಕಳು ಎಂದ ಮೇಲೆ ಇದು ಸಹಜ. ಅದರಲ್ಲೂ ಚಿಕ್ಕ ಮಕ್ಕಳಲ್ಲಿ ಇದು ಅತೀ ಹೆಚ್ಚು.. ಹೀಗಿರುವಾಗ ಒಬ್ಬ ಇದ್ದಾನೆ, ಅವನು ಮಾತೇ ಆಡುವುದಿಲ್ಲ. ಅವನ ಸ್ವಭಾವವೇ ಹಾಗೆ. ಅವರ ಪೋಷಕರು ತಿಳಿಸಿದಂತೆ, ಮನೆಗೆ ಹೋಗಿ ಎಲ್ಲರ ಅಣಕ ಮಾಡುತ್ತಾನಂತೆ ಆದರೆ ತರಗತಿಯಲ್ಲಿ ಬಾಯೇ ಬಿಡುವುದಿಲ್ಲ. ಅವನಿಗೆ ಸಿಹಿ ತಿಂಡಿ ಕೊಡುವ ಆಸೆ ತೋರಿಸಿದೆ, ಗಿಫ್ಟ್ ಕೊಡುತ್ತೇನೆ ಮಾತಾಡು ಎಂದೆಲ್ಲ ಆಸೆ ತೋರಿಸಿದೆ. ಅವನನ್ನೇ ವಿಶೇಷವಾಗಿ ಕರೆದು ಮಾತನಾಡಿಸಿದೆ. ಕಚಗುಳಿ ಕೊಟ್ಟೆ, ಏನು ಪ್ರಯೋಜನವಾಗಲಿಲ್ಲ. ಏನು ಮಾಡಿದರೂ ಬಾಯೇ ಬಿಡಲು ತಯಾರಿಲ್ಲ. ಮತ್ತೆ ನಾನು ಯೋಚಿಸಿದೆ ಇನ್ನು ಒತ್ತಾಯ ಬೇಡ, ಅವನಿಷ್ಟದಂತೆ ಇರಲಿ ಎಂದು. 

ಹೀಗೆ ಶಾಲಾ ದಿನದ ನೃತ್ಯದ ತಯಾರಿಯಲ್ಲಿರುವಾಗ ಅವನನ್ನು ಒಬ್ಬರಿಗೆ ಜೋಡಿ ಮಾಡ್ಬೇಕಲ್ಲವೆ? ಆಗ ಚಂದ ಕುಣಿಯುವ ಮಕ್ಕಳ ಜೋಡಿ ನಿಲ್ಲಿಸಿದಾಗ ಎಲ್ಲರೂ, ಮಾತಾಜಿ ಅವನು ನಮಗೆ ಬೇಡ, ಅವನು ಡಾನ್ಸ್ ಮಾಡೋದಿಲ್ಲ, ಇನ್ನು ಮಕ್ಕಳೇ ಎಲ್ಲ... ಹಾಗೆ ಯೋಚಿಸುತ್ತ ಕುಳಿತಾಗ, ಇನ್ನೊಬ್ಬ ಬಂದ, ಅವನು ಸ್ವಲ್ಪ ಅದೇ ಸ್ವಭಾವದವನು ಮಾತು ಕಡಿಮೆ, ಕ್ರಿಯೆಗೆ ಪ್ರತಿಕ್ರಿಯೆ ಸ್ವಲ್ಪ ನಿಧಾನ. ಅವನು ಬಂದು ಹೇಳಿದ, "ಮಾತಾಜಿ ಅವನನ್ನು ನನ್ನ ಜೋಡಿ ಮಾಡಿ, ನಾನು ಅವನು ಫ್ರೆಂಡ್ಸ್, ನಾನು ಅವನನ್ನು ಡಾನ್ಸ್ ಮಾಡಿಸುತ್ತೇನೆ" ಎಂದ. ಆಗ ಒಮ್ಮೆ  ಆಶ್ಚರ್ಯವಾಯಿತು.. "ಎಷ್ಟು ಪ್ರಯತ್ನ ಪಟ್ಟರು ಜಗ್ಗದವನು ನಿನ್ನ ಫ್ರಂಡ್ ಹೇಗೆ ಆದ ಮಾರಾಯ? ಎಂದು ಕೇಳಿದೆ. ಆಗ ಅವನು ಹೇಳಿದ "ಇಲ್ಲ ಮಾತಾಜಿ ಅವನು ನನ್ನ ಜೊತೆ ಒಳ್ಳೆ ಫ್ರೆಂಡ್ ಆಗಿದ್ದಾನೆ. ನನಗೆ ಜೋಡಿ ಮಾಡಿ ಪ್ಲೀಸ್" ಎಂದ. ಸರಿ ಎಂದು ಅವನಿಗೆ ಜೋಡಿ ಮಾಡಿ ನಿಲ್ಲಿಸಿ, ದಿನವೂ ಅವರನ್ನು ವೀಕ್ಷಣೆ ಮಾಡುತ್ತಿದ್ದೆ. ಅವರಿಬ್ಬರು ತುಂಬಾ ಆತ್ಮೀಯರಾಗಿದ್ದರು, ಮಾತೇ ಆಡದ ಹುಡುಗ ಮೊದಲು ಯಾವ ಚಟುವಟಿಕೆಯು ಇರಲಿಲ್ಲ. ಆದರೆ ಅವನನ್ನು ಗೆಳೆಯನನ್ನಾಗಿ ಮಾಡಿಕೊಂಡ ಹುಡುಗನಿಂದ ಅವನು ತುಂಬಾ ಬದಲಾಗಿದ್ದ. ಅವನು ಅವನನ್ನು ಬಲವಂತವಾಗಿ ಹಿಡಿದು ನೃತ್ಯ ಮಾಡಿಸುತ್ತಿದ್ದ. ಅವನ ಕಿವಿಯಲ್ಲಿ ಏನೇನೋ ಹೇಳುವುದು, ಮನಸ್ಸು ಬಿಚ್ಚಿ ನಗುವುದು, ಅವನು ವಾಶ್ ರೂಮ್ ಹೋಗುವಾಗ ಇವನೇ ಅವನನ್ನು ಮುತುವರ್ಜಿಯಿಂದ ಕರೆದುಕೊಂಡು ಹೋಗುವುದು. ಊಟಕ್ಕೆ ಹೋಗುವಾಗ ಅವನ ನೀರಿನ ಬಾಟಲಿ ಇವನೇ ತೆಗೆದುಕೊಂಡು ಹೋಗುವುದು, ಹೀಗೆ... ಅವರ ಆ ಗೆಳೆತನ ನನಗೆ ಅಚ್ಚರಿ ಮೂಡಿಸಿಡಿದಲ್ಲದೆ ಸಂತೋಷವು ಆಯಿತು. ನಂತರ  ಮಾತು ಆಡದವನ ಗೆಳೆತನ ಮಾಡಿದವನನ್ನು ಪ್ರತ್ಯೇಕವಾಗಿ ಕರೆದು ಕೇಳಿದೆ.. 'ಪುಟ್ಟ ಅವನು ಯಾರ ಬಳಿಯೂ ಮಾತೇ ಆಡುವುದಿಲ್ಲ, ಹಾಗಿರುವಾಗ ನೀವು ಅವನನ್ನು ಹೇಗೆ ಸ್ನೇಹ ಮಾಡಿಕೊಂಡೆ? ಅವನ ಬಳಿ ಏನು ಮಾತನಾಡುತ್ತೀ, ಅಷ್ಟೊಂದು ನಗುತ್ತಿರುತ್ತೀ, ಎಂತ ಮಾತನಾಡುವಿರಿ? ನಿನ್ನ ಜೊತೆ ಅವನು ಮಾತನಾಡುತ್ತಾನೆಯೇ?" ಎಂದು ಕೇಳಿದಾಗ ಅವನ ಉತ್ತರ ತುಂಬಾ ಅದ್ಭುತವಾಗಿತ್ತು...

ಅವನು ಹೇಳಿದ "ಮಾತಾಜಿ ಅವನು ನನ್ನ ಜೊತೆ ಮಾತೇ ಆಡುವುದಿಲ್ಲ, ಸುಮ್ಮನೆ ನಗುತ್ತಾನೆ" ಎಂದ ಆಗ ನಾ ಕೇಳಿದೆ "ಮತ್ತೆ ಬೇರೆ ಎಲ್ಲರನ್ನು ಬಿಟ್ಟು ನೀನು ಅವನನ್ನೇ ಏಕೆ ಗೆಳೆಯನಾಗಿ ಆರಿಸಿಕೊಂಡೆ? ಎಂದಾಗ ಅವನು ಹೇಳಿದ, "ಮಾತಾಜಿ ಬೇರೆಯವರೆಲ್ಲ ತುಂಬಾ ಮಾತನಾಡುತ್ತಾರೆ, ನಾನು ಏನು ಹೇಳಿದರೂ ಕೇಳುವುದಿಲ್ಲ, ನನ್ನ ಸಲಹೆ ಒಪ್ಪುವುದೇ ಇಲ್ಲ, ನಾನು ಯಾವ ಆಟಕ್ಕೆ ಕರೆದರೂ ಬರುವುದಿಲ್ಲ, ನನಗೆ ಆರ್ಡರ್ ಮಾಡುತ್ತಾರೆ, ಆದರೆ ಇವನು ನಾನು ಹೇಳಿದ್ದನ್ನ ಚಾಚು ತಪ್ಪದೆ ಕೇಳುತ್ತಾನೆ, ನಾ ಹೇಳಿದ್ದೆಲ್ಲವಕ್ಕೂ ನಗುತ್ತಾ ಒಪ್ಪುತ್ತಾನೆ, ನಾನು ಹೇಳಿದ ಆಟವನ್ನೇ ಆಡುತ್ತಾನೆ, ಹಾಗೆ ಅವನನ್ನು ಬೇರೆ ಯಾರೂ ಮಾತನಾಡಿಸುವುದಿಲ್ಲ ಅದಕ್ಕೆ ನಾನು ಅವನನ್ನು ಫ್ರೆಂಡ್ ಮಾಡಿಕೊಂಡೆ, ನನಗೆ ಅವನೆಂದರೆ ಇಷ್ಟ" ಎಂದು ಹೇಳಿದ. ಅವನ ಗೆಳೆತನದ ಆಯ್ಕೆಗೆ ಅವನು ಕೊಟ್ಟ ಸಮರ್ಥನೆ ಮಾತ್ರ ಅದ್ಭುತವಾದದ್ದು. ತುಂಬಾ ಅರ್ಥಪೂರ್ಣವಾದದ್ದು... ಮಕ್ಕಳ ಮಾತು ನಮಗೆ ತಮಾಷೆ ಎನಿಸಿದರು, ಆ ಮಗು ಹೇಳಿದ ವಿಷಯದಲ್ಲಿ ಎಂತಹ ದೊಡ್ಡ ನೀತಿ ಇದೆ.. ಯಾವುದನ್ನೇ ಆಗಲಿ ನಾವು ಅತಿಯಾಗಿ ಬಯಸಿ ಅದರ ಹಿಂದೆ ಹೋಗಿ ನಿರಾಸೆ ಪಡುವ ಬದಲು... ನಮಗೆ ಸಿಗುವುದರಲ್ಲಿ ಸಮಾಧಾನ ಪಡಬೇಕು. ಅದನ್ನು ಉಳಿಸಿಕೊಳ್ಳಬೇಕು.. ಸ್ನೇಹವು ಹಾಗೆ.. ನಮ್ಮನ್ನು ಅರ್ಥಮಾಡಿಕೊಂಡು, ನಮ್ಮ ಭಾವನೆಗಳಿಗೆ ಬೆಲೆ ಕೊಡುವವರು, ಅರ್ಥ ಮಾಡಿಕೊಳ್ಳುವವರಾಗಿರಬೇಕು. ಎನ್ನುವುದಂತೂ ಸತ್ಯ.. ಮಕ್ಕಳ ಎಲ್ಲ ವಿಷಯಗಳಲ್ಲೂ ನಾವು ಕಲಿಯಬೇಕಾದ ಒಳ್ಳೆಯ ನೀತಿಗಳಿರುತ್ತವೆ... ಕಲಿಯುವ ಹಂಬಲ ನಮಗಿರಬೇಕಷ್ಟೆ. 

-ರಮ್ಯಾ ಆರ್ ಭಟ್, ಕುಂದಾಪುರ

ಚಿತ್ರ ಕೃಪೆ: ಇಂಟರ್ನೆಟ್ ತಾಣ