ಗೆಳೆಯನ ಪೊಸಿಷನ್

ಗೆಳೆಯನ ಪೊಸಿಷನ್

ಬರಹ

ನಮಸ್ಕಾರ,
ಮದುವೆ ಜೀವನದ ಅತಿ ಮುಖ್ಯ ಘಟ್ಟ ಅಂತಾರೆ ಅಲ್ಲಿ ನಮ್ಮವರೆಲ್ಲರೂ ಇರಬೇಕು,ನನ್ನ ಶಾಲೆಯ ಸ್ನೇಹಿತರು, ಕಾಲೇಜು ಸ್ನೇಹಿತರು,ಆಫೀಸ್ ಮಂದಿ, ಮನೆಯವರು, ನನ್ನೆಲ್ಲ ಗುರುತಿನವರು ಬರಬೇಕು, ಇರಬೇಕು, ಎಂಬ ಆಸೆ ಎಲ್ಲರಿಗೂ ಸಹಜವಾದುದೇ. ಅಂಥ ಸ್ನೇಹಿತನೊಬ್ಬನ ಮದುವೆ ಮೊನ್ನೆ ತಾನೆ ಜರುಗಿದೆ[ಲೇಖನ ಶುರು ಮಾಡಿದಾಗ ಮೊನ್ನೆ ಮೊನ್ನೆ ಈಗ್ಗೆ ತಿಂಗಳಾಯಿತು.... :-)]. ವಾರದ ನಡುವೆ, ಬುಧವಾರ, ದೂರದ ಗದಗಿನಲ್ಲಿ ನೆಡೆಯುವ ಮದುವೆಗೆ ಹೋಗುವುದು ಅಸಾಧ್ಯ ಎನ್ನುವುದು ನನಗೇ ಅಲ್ಲದೆ ಅವನಿಗೂ ಮನವರಿಕೆಯಾಗಿತ್ತು, ತಿಪಟೂರಿನಲ್ಲಿ "ಗಂಡು ಮಾಡುವ" ಶಾಸ್ತ್ರ ಅದಕ್ಕಾದರೂ ಹೋಗೋಣ ಎಂದುಕೊಂಡೆ ಅದೂ ಕೂಡ ಕೆಲಸದ ಒತ್ತಡದ ನಡುವೆ ಬಣ್ಣಗೆಟ್ಟಿತು. ಸರಿ ಇನ್ನು "ವಧು ಗೃಹ ಪ್ರವೇಶ"ಕ್ಕೆ ಹೋಗಲೇ ಬೇಕೆನಿಸಿ ಅವನಿಗೂ ತಿಳಿಸಿದೆ ಆ ಕಾಯ೯ಕ್ರಮ ಕೂಡ ಸೋಮವಾರವೇ ಇದ್ದು ಆಫೀಸಿನ ಕೆಲಸಗಳನ್ನು ಬೇಗನೆ ಮುಗಿಸಿ ಅಲ್ಲಿಗೆ ಹೋಗುವುದೆಂದು ತೀಮಾ೯ನ ಮಾಡಿದೆ.

ಹಳೆಯ ಸ್ನೇಹಿತ ಹಳೆಯ ನೆನಪುಗಳನ್ನು ಕೆದಕಿದ್ದ, ನೆನಪುಗಳು ಹಳೆಯದಾಗುವುದಿಲ್ಲ "ಸವಿ ಸವಿ ನೆನಪು ಸಾವಿರ ನೆನಪು......" ಕಲ್ಪತರುವಿನ ಮಡಿಲು, ಹೊಸ ಹೊಸ ಪರಿಚಯಗಳು, ಹೊಸ ಹೊಸ ಯೋಚನೆಗಳು, ದೈತ್ಯರಾಗಿ ಕಂಡ ಸೀನಿಯರ್ ಗಳು, ಮಸ್ತ್ ಮಸ್ತ್ ಕಂಡ ನಮ್ಮ ಡಿಪಾಟ್೯ಮೆಂಟ್ ನ ಸೀನಿಯರ್ ಹುಡುಗಿ "ಸಚಿನ್" ಕೂಡ ನನ್ನ ಹಾಗೇ ಎನ್ನುವ ಯೋಚನೆಗಳು,ಮೊದಲ ಕನ್ನಡ ರಾಜ್ಯೋತ್ಸವ, ಆ ದಿನಗಳ ನನ್ನ ಕವನಗಳು,
ಓ ಚಿತ್ತಾರದ ಬೆಡಗಿಯರೆ
ಮನ ಕಲಕುವ ತರುಣಿಯರೆ
ಸಂಜೆಯ ಈ ಎಳೆ ಬಿಸಿಲಲಿ
ಕಣ್ಮನ ತಣಿಸುವ ತರುಣಿಯರೆ.
ನಿಮ್ಮತ್ತ ಕಣ್ಣು ಹಾಯಿಸಿರುವ
ತರುಣರಿಗೆ ಹೇಳಿರಿ
ಕಣ್ ಕುಕ್ಕುವ ನಿಮ್ಮಂದದಲಿ
ಕನ್ನಡತಿಯ ಕಾಣಲು ಹೇಳಿರಿ
ಕನ್ನಡಾಂಬೆಯ ಕಾಣಲು ಹೇಳಿರಿ........

ಎನ್ನುವ ಎಂಟು ಸಾಲುಗಳು ನನ್ನ ಮನಃಪಟಲದಲ್ಲಿ ಚಿರಸ್ಥಾಯಿಯಾಗಿ ನಿಂತಿವೆ, ಅಕ್ಟೋಬರ್ ನಲ್ಲಿ ಕಾಲೇಜು ಶುರು ಆಗಿ ನವೆಂಬರ್ ನಲ್ಲಿ ಈ ಕವನ ಓದಿದ್ದರ ಫಲವಾಗಿ ನಾನು ಸೀನಿಯರ್ ಆಗುವವರೆಗು ಸಿಕ್ಕ ಸಿಕ್ಕ ಸೀನಿಯರ್ ಮಹಾಶಯರಿಗೆಲ್ಲಾ ಈ ೮ ಸಾಲುಗಳನ್ನು ಒಪ್ಪಿಸಿದ್ದೇನೆ...೧೦ ವಷ೯ಗಳುರುಳಿವೆ.....ಇನ್ನೂ ನೆನೆಪು ಹಸಿರು ಹಸಿರು....ಆ ಕವನಗಳನ್ನು ಆನಂದಿಸಿ ಪ್ರೋತ್ಸಾಹಿಸಿದವರಲ್ಲಿ ಇವನೂ ಒಬ್ಬ, ಕಾವ್ಯ ಕನ್ನಿಕೆಯ ಮಡಿಲಲ್ಲಿ ಪ್ರೀತಿಯ ಹುಡುಕಾಟದಲ್ಲಿ ಕವಿತೆಗಳ ನಡುವಲ್ಲಿ ನಾ ಕಳೆದು ಹೋಗಿದ್ದಾಗ ತಾನಾಯಿತು ತನ್ನ ಪುಸ್ತಕಗಳಾಯಿತು ಎಂಬತ್ತಿದ್ದವನು. ಓದು ಮಗಿದು ಬೆಂಗಳೂರೆಂಬ ಮಾಯಾಂಗನೆ ಕೈಬೀಸಿ ಕರೆದು ನಾ ಅವಳ ಮಡಿಲಲ್ಲಿ ಕಳೆದು ಹೋದಾಗಲೇ ಮತ್ತವನು ಸಿಕ್ಕಿದ್ದು, ಮೊನ್ನೆ ಮೊನ್ನೆ ನನ್ನ ಮದುವೆಗೆ ಚೆನ್ನೈನಿಂದ ಬಂದು ಹರಸಿ ಹೋಗಿದ್ದ ಅಷ್ಟೊಂದು ನೆನಪು ಕಾಡಲು ಅವನ ಮನೆ ಇರುವುದು ತಿಪಟೂರಿನಲ್ಲೇ ಆಗಿದ್ದು ಇನ್ನೂ ಸ್ವಲ್ಪ ಸ್ಪೆಷಲ್.

ಸೋಮವಾರದ ಹೊತ್ತಿಗೆ ಕೆಲಸವಿಲ್ಲದಂತೆ ಎಲ್ಲವನ್ನೂ ಮುಗಿಸಿ ಇಟ್ಟುಕೊಂಡಿದ್ದೆ, ಕೆಲಸ ಮುಗಿಸಿದರೆ, ಮತ್ತೆ ಕೆಲಸ ಬರದಿದ್ದರೆ ಎಲ್ಲಿ ಕೆಲಸದಿಂದ ತೆಗೆದು ಹಾಕುವರೋ ಎನ್ನುವ ಭೀತಿಯಲ್ಲಿರುವ ನನ್ನ ಅಮೆರಿಕೆಯ ಸಹೋದ್ಯೋಗಿಗಳು ನನ್ನ ಕೆಲಸವನ್ನು ನೋಡಿ ಇದು ಹಾಗೆ ಇದು ಹೀಗೆ ಎಂದು ರಾಗ ತೆಗೆಯಲು ಸಾಧಾರಣವಾಗಿ ೨-೩ ದಿನಗಳನ್ನಾದರೂ ತೆಗೆದುಕೊಳ್ಳುತ್ತಿದ್ದಾರೆ,ಹಾಗಾಗಿ ಶುಕ್ರವಾರದಂದು ಮುಗಿಸಿದ ನನ್ನ ಕೆಲಸಗಳಿಗೆ ಮುಕ್ತಿ ದೊರಕುವುದು ಮಂಗಳವಾರದ ನಂತರವೇ, ಎಲ್ಲವೂ ಸುಸೂತ್ರವಾಗಿ ನಾನಂದು ಕೊಡಂತೆ ಎಂದುಕೊಂಡು ಸೋಮವಾರ ಬೇಗನೆ ಆಫೀಸ್‍ಗೆ ಬಂದೆ "ಛೇ!" ಅವರಿಗೆ ಅದ್ಯಾವ ಸಿಡಿಲು ಬಡಿಯಿತೋ ಏನೋ ನನ್ನ ಕೆಲಸಗಳು ಶುಕ್ರವಾರವೇ ರಿವಿವ್ಯೂ ಮಾಡಿ ಸೋಮವಾರ ಸಂಜೆ ಹೊತ್ತಿಗೆ ಮೀಟಿಂಗ್ ಇಟ್ಟು ಬಿಟ್ಟಿದ್ದಾರೆ! ಕೆಂಪು ಕೋ***!?!?!?!.... ಎನು ಮಾಡುವುದು? "ತಾನೊಂದು ಬಗೆದರೆ ದೈವವೊಂದು ಬಗೆಯಿತು", ಹಾಳಾಗಿ ಹೋಗಲಿ ಇವನಿಗಾದರೂ ಹೇಳೋಣ ಎಂದುಕೊಂಡರೆ ಏನೆಂದು ಹೇಳುವುದು ಎಂದು ತೋಚದೆ ಸುಮ್ಮನಾದೆ "ಛೇ ಎಂಥ ಕೆಲಸ ಆಗಿ ಹೋಯ್ತು ಎಂದು ೨ ಬಾರಿ ಹೆಚ್ಚಿಗೆ ಚಹಾ ಕುಡಿದು ಇಟ್ಟಿರುವ ಮೀಟಿಂಗ್‍ಗೆ ತಯಾರಾಗುತ್ತಿದ್ದೆ.ಮನಸ್ಸು ಇನ್ನೂ ಕೂಡ ಹೋಗಿ ಬಿಡಲೇ? ಎಂದು ಯೋಚಿಸುತ್ತಿತ್ತು ಆದರೂ ಕತ೯ವ್ಯಕ್ಕೆ ಕಟ್ಟು ಬಿದ್ದು ಉಳಿದುಕೊಂಡೆ.
ಸಂಜೆ ೭ ಗಂಟೆಗೆ ಮೀಟಿಂಗ್ ಇತ್ತು ಸರಿಯಾಗಿ ೬:೩೦ ಕ್ಕೆ ನನಗೆ ಒಂದು ಇ-ಅಂಚೆ ಬಂದಿತು "ಕಾರಣಾಂತರಗಳಿಂದ ಮೀಟಿಂಗ್‍ನ್ನು ಮುಂದೂಡಲಾಗಿದೆ!" ಅಕಟಕಟಾ......ರಾಜ್‍ಕುಮಾರ್‍ರವರ "ಇದೇ ಮಾತನ್ನ ಬೇರೆ ಯರಾದ್ರೂ ಆಡಿದ್ರೆ ಅವರ ನಾಲಿಗೆ ಸೀಳಿ ರಣಚಂಡಿಗೆ ಔತಣ ನೀಡ್ತಾ ಇದ್ದೆ" ಜ್ಙಾಪಕಕ್ಕೆ ಬಂತು, ಆದರೆ..... ಅಲ್ಲಿ ಕೂಡ ಬೇರೆ ಯಾರದ್ರೂ ಆಗಿದ್ರೆ ಇಲ್ಲಿ ಕೂಡ ಮ್ಯಾನೇಜರ್ ಬಿಟ್ಟು ಬೇರೆ ಯಾರದ್ರೂ ಆಗಿದ್ರೆ ಹಾಗಾಗಿ ಸುಮ್ಮನಾದೆ :-(.
"ಲೋ ಶಿವು" ಹೀಗೆ ಆಯ್ತು ಕಣೋ ಅನ್ನೋಕೆ ಇವನು ಇನ್ನೂ ಭೂಮಿಗೆ ಇಳಿದಂತಿಲ್ಲ, ಫೋನ್ ಮಾಡಿದಾಗಲೆಲ್ಲ "ಐ ಯಾಮ್ ನಾಟ್ ಇನ್ ಎ ಪೊಸಿಷನ್ ಟು ಟಾಕ್" ಅಂತಾನೆ...ತೀರಾ ನನಗೂ ಮದುವೆ ಆಗಿದೆ ಆದ್ರೆ ಮದುವೆ ಆಗಿ ತಿಂಗಳಾದರೂ ಪೊಸಿಷನ್ ನೆಟ್ಟಗಾಗಿಲ್ಲ ಅಂದ್ರೆ ಹೇಗೆ? ಮತ್ತೆ ಫೋನ್ ಮಾಡಿದ್ದೆ ಅವನಂದ "ನರೇನ್, ಐ ಯಾಮ್ ನಾಟ್ ಇನ್ ಎ ಪೊಸಿಷನ್ ಟು ಟಾಕ್" ಮತ್ತೆ ಫೋನ್ ಮತ್ತದೇ ಉತ್ತರ ಬೆಳಿಗ್ಗೆ, ಸಂಜೆ, ರಜಾ ದಿನದ ಬಿಡುವಿನಲ್ಲಿ ಎಲ್ಲ ಸರಿಯೂ ನನಗೆ ದೊರಕಿದ ಉತ್ತರ
"ನರೇನ್, ಐ ಯಾಮ್ ನಾಟ್ ಇನ್ ಎ ಪೊಸಿಷನ್ ಟು ಟಾಕ್"
ಸರಿ ಕಣೋ "ಆಲ್ ದ ಬೆಸ್ಟ್.......!!!!"