ಗೆಳೆಯ !

ಗೆಳೆಯ !

ಆತ ಮುರುಕು ಮನೆಯ ವರಾಂಡದಲ್ಲಿ ಚಿಂತಿತನಾಗಿ ಕುಳಿತಿದ್ದ . ಅಮ್ಮನಿಗೆ ಮದ್ದು ತರುವ ಬಗ್ಗೆ ಆಲೋಚಿಸುತ್ತಿದ್ದ. ಅವನಿಗೆ ಸ್ವಲ್ಪ ಹಣದ ಅವಶ್ಯಕತೆ ಇತ್ತು. ಮನೆಯ ಪಕ್ಕದ ಟೆಲಿಫೋನ್ ಬೂತ್ ನಿಂದ ಗೆಳೆಯನಿಗೆ ಫೋನ್ ಮಾಡಿದ.

"ಅಮ್ಮನ ಮದ್ದಿಗಾಗಿ ಸ್ವಲ್ಪ ಹಣದ ಅವಶ್ಯಕತೆಯಿತ್ತು. ಸಾಲ ಕೊಡ್ತೀಯಾ ? ಎಂದು ಕೇಳಿದ. ಗೆಳೆಯಾ ನೀನು ಒಂದೆರಡು ಗಂಟೆ ಬಿಟ್ಟು ಫೋನ್ ಮಾಡೆಂದ. ಈತ ಮತ್ತೆ ಫೋನ್ ಮಾಡಿದಾಗ ಫೋನ್ ಸ್ವಿಚ್ ಆಫ್ ಬರುತ್ತಿತ್ತು.  ಇವನಿಗೆ ಬೇಸರವಾಯಿತು.

"ಇಲ್ಲದಿದ್ದರೆ ಇಲ್ಲ ಅನ್ನಬಹುದಿತ್ತು. ಆಸೆ ಹುಟ್ಟಿಸುವುದಾದರೂ ಯಾಕೆ ! " ಎಂದು ಮನದಲ್ಲೇ ಕೋಪಗೊಂಡ. ಬಳಿಕ ಪೇಟೆ ಕಡೆ ನಡೆದು ಯಾರಾದರೂ ಸಿಕ್ಕಿಯಾರಾ ಎಂಬ ಆಸೆಯಿಂದ ಪಾದ ಬೆಳೆಸಿದ. ಒಂದೆರಡು ಬಾರಿ ಗೆಳೆಯನಿಗೂ ಫೋನ್ ಮಾಡಿದ. ಮತ್ತೆ ಅದೇ ಸ್ವಿಚ್ ಆಫ್ ಎಂದು ಹೇಳುತ್ತಿತ್ತು. ಸಂಜೆ ತನಕ ಸುತ್ತಾಡಿ ಏನೂ ಪ್ರಯೋಜನವಾಗದೆ ಮನೆಕಡೆ ಖಿನ್ನನಾಗಿ ಮರಳಿದ. ಮನೆಗೆ ಬಂದು ಅಮ್ಮನ ಕೋಣೆಗೆ ದೌಡಾಯಿಸಿದ.

ಅಮ್ಮ ನಕ್ಕರು. ಅಮ್ಮನ ಟೇಬಲಲ್ಲಿ ಸಾಕಷ್ಟು ಮದ್ದು, ಗುಳಿಗೆ, ಕಷಾಯಗಳಲ್ಲದೆ ಒಂದಿಷ್ಟು ಹಣ್ಣು-ಹಂಪಲು ಕಾಣಸಿಕ್ಕಿತು. 

ಪಕ್ಕದಲ್ಲಿದ್ದ ತಂಗಿಯಲ್ಲಿ ಕೇಳಿದ: "ಇದೆಲ್ಲಾ ಯಾರು ತಂದದ್ದು ? "

ಆಗ ತಂಗಿ: "ನಿಮ್ಮ ಗೆಳೆಯ ತಂದುಕೊಟ್ಟದ್ದು" ಎಂದು ಹೇಳಿದಳು. ಇವನ ಕಣ್ಣಲ್ಲಿ ನೀರು ಬಂತು. ಕೂಡಲೇ ಗೆಳೆಯನ ಮನೆ ಕಡೆ ಹೊರಟ. 

ಗೆಳೆಯನ ಮನೆಗೆ ಹೋಗಿ "ನಿನಗೆಷ್ಟು ಬಾರಿ ಫೋನ್ ಮಾಡಿದೆ..? ಆದರೆ ನೀನು ನಿನ್ನ ಫೋನ್ ಅನ್ನು ಸ್ವಿಚ್ ಆಫ್ ಮಾಡಿದ್ದೆ " ಎಂದು ನಿಷ್ಠುರದಿಂದ ಹೇಳಿದ. 

ಅದಕ್ಕೆ ಗೆಳೆಯ "ನೀನು ನನ್ನನ್ನು ಕೇಳಿದಾಗ ನನ್ನ ಬಳಿ ಅಷ್ಟೊಂದು ಹಣ ಇರಲಿಲ್ಲ.. ಆದರೆ, ಇಂತಹ ಸಂದರ್ಭದಲ್ಲಿ ಹಣ ತುಂಬಾನೇ ಮುಖ್ಯ ಅಲ್ಲವಾ..? ಅದಕ್ಕಾಗಿ ನನ್ನ ಫೋನನ್ನು ಮಾರಿಬಿಟ್ಟೆ" ಎಂದು ಹೇಳಿದ. ಅವನ ಕಣ್ಣಲ್ಲೂ ನೀರು ಜಿನುಗಿತು...

-ಅರುಣ್ ಡಿ'ಸೋಜಾ, ಮಂಗಳೂರು (ವಾಟ್ಸಾಪ್ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ