ಚದುರಂಗ
ರಂಗು ರಂಗಿನ ಓಕುಳಿಯಿಲ್ಲ,
ರಣರಂಗದ ಗದ್ದಲವಿಲ್ಲ.
ಕಪ್ಪು ಬಿಳುಪಿನ ಬಟ್ಟೆಯ ಮೇಲೆ
ಸದ್ದಿಲ್ಲದೆ ನಡೆದಿದೆ ಜೀವನದಾಟ.
ಎಂಟರೊಳಗೊಬ್ಬ ಭಂಟನಿಗೆ
ಮಂತ್ರಿಯಾಗುವ ಮಹದಾಸೆ.
ಒಂದೇ ಹೆಜ್ಜೆಗೆ ಕಟ್ಟುಬಿದ್ದವನಿಗೆ
ಇದು ಈಡೇರುವ ಕನಸೆ?
ಹಿಂದಿರುಗಿ ನಡೆವವನಲ್ಲ, ವೈರಿ
ಎದುರಾದಾಗ ಸಮಯಕ್ಕೆ ಕಾಯುವವ.
ಅಡ್ಡದಾರಿಯಲ್ಲಿ ಕೊಂದು
ಕನಸಿನ ರಹದಾರಿ ಹಿಡಿಯುವವ.
ಸಹ ಕಾಯಿಗಳಿಗೆ ತಮ್ಮವೇ ಕನಸುಗಳ
ಹಣ್ಣು ಮಾಡುವ ಬಯಕೆ.
ಕಾಯಿಯ ಆಸೆಗಳ ಪರಿವೆಯೇ
ಇಲ್ಲ ಮೇಲಿರುವ ಮಸ್ತಕಕೆ.
ಕಡೆಯ ಹೆಜ್ಜೆಯಲ್ಲಿ ಕನಸಿನ ಬಾಗಿಲು ತೆರೆಯದೆ
ವೈರಿ ಅರಸನ ಸೆರೆ ಹಿಡಿದ,
ಒಡೆಯನಾಟದ ಯೋಜನೆಗಳಲ್ಲಿ ಸರ್ವರಿಗೊಂದೊಂದು
ಪಾತ್ರವೆಂಬುದ ತಿಳಿದ.
ಈಡೇರದ ಕನಸ ಹೊತ್ತು ಸುಖಾಂತ್ಯವಾಡಿದ.
ಆಟ ಮುಗಿವ ಹೊತ್ತಿಗರಿವಾಯ್ತು,
ರಾಜ, ಮಂತ್ರಿ, ಭಂಟರೆಲ್ಲರೂ ಹೊರಡುವುದು
ಒಂದೇ ಪೆಟ್ಟಿಗೆಗೆ, ಒಂದೇ ಪೆಟ್ಟಿಗೆಗೆ.
Comments
ಉ: ಚದುರಂಗ
ಕವನ ಬಹಳ ಅರ್ಥವತ್ತಾಗಿದೆ ಹನುಮೇಶ್ ಅವರೇ. 'ಅಂತಿಮ ನಮನ'ಕ್ಕೆ ಹತ್ತಿರವಾದ ಅಂತಿಮ ಚರಣ ತುಂಬಾ ಹಿಡಿಸಿತು.
In reply to ಉ: ಚದುರಂಗ by santhosha shastry
ಉ: ಚದುರಂಗ
ಶಾಸ್ತ್ರಿ ಅವರಿಗೆ ನಮಸ್ಕಾರ. ಚದುರಂಗಕ್ಕೂ ಜೀವನಕ್ಕೂ ಹೋಲಿಕೆ ಮಾಡುವ ಪ್ರಯತ್ನ, ಅವರವರ ಕನಸುಗಳನ್ನು ಬದಿಗಿಟ್ಟು ಸಮಾಜದ ಗೆಲುವಿಗಾಗಿ ಆಡುವವರ ಕಥೆ. ಮೆಚ್ಚಿದ್ದಕ್ಕೆ ಧನ್ಯವಾದಗಳು.