ಚಿತೆಗೆ ಒಂದು "ಪಫ್"

ಚಿತೆಗೆ ಒಂದು "ಪಫ್"

ಬರಹ

ಸಿಗರೇಟಿನ ಒಂದು ತುದಿಗೆ ಬೆಂಕಿ ಹಚ್ಚಿ ಗಾಳಿಯಲ್ಲಿ ಹೊಗೆ ಹೊರಬಿಟ್ಟಾಗ ತನ್ನ ಜೀವಕ್ಕೆ ತಾನೇ ಬೆಂಕಿ ಹಚ್ಚಿಕೊಂಡಿದ್ದೇನೆ ಎಂಬುದನ್ನು ಯಾವುದೇ ವ್ಯಕ್ತಿಯು ಯೋಚಿಸುವುದಿಲ್ಲ. "ಧಂ" ಎಳೆದರೆ ಮನಸ್ಸು ನಿರಾಳವಾಗುತ್ತದೆ, ಸಂತೋಷವಾದಾಗ ಅಥವಾ ಚಿಂತೆಯಾದಾಗ ತುಟಿಗಳ ನಡುವೆ ಹೊಗೆಬತ್ತಿ ಇಟ್ಟುಕೊಳ್ಳುವ ಅಭ್ಯಾಸ ಇಟ್ಟುಕೊಂಡವರು ಹಲವಾರು. ಧೂಮಪಾನ ವ್ಯಸನಿಗಳಿಗೆ ಯಾವುದೇ ಲಿಂಗ, ಪ್ರಾಯ ಭೇಧವಿಲ್ಲ. ಎಳೆ ಮಕ್ಕಳು ಕೂಡಾ ಈ ಚಟಕ್ಕೆ ಬೇಗನೆ ದಾಸ್ಯರಾಗುವುದನ್ನು ನಮ್ಮ ಕಣ್ಣ ಮುಂದೆಯೇ ಕಾಣಬಹುದು. ಧೂಮಪಾನ ನಿಷೇಧ ಅದರ ಪರಿಣಾಮಗಳ ಬಗ್ಗೆ ಎಷ್ಟೇ ವಿವರಣೆ ನೀಡಿದರೂ ಧೂಮಪಾನಿಗಳಿಗಂತೂ "ಧಂ" ಎಳೆಯದೆ ನಿದ್ದೆ ಹತ್ತುವುದಿಲ್ಲ. ಸಿಗರೇಟ್ ಪ್ಯಾಕೆಟಿನ ಮೇಲೆ 'ಧೂಮಪಾನ ಆರೋಗ್ಯಕ್ಕೆ ಹಾನಿಕರ' ಎಂಬುದಾಗಿ ಬರೆದಿದ್ದರೂ, ಅದನ್ನು ಓದಿಕೊಂಡೇ ಸಿಗರೇಟು ಸೇದುತ್ತಾರೆ. ಇವುಗಳಿಂದಾಗಿ ಮಾನಸಿಕ ಉಲ್ಲಾಸ ಸಿಗುತ್ತದೆ ಎಂಬ ಪೊಳ್ಳು ವಾದ ಮಂಡಿಸುವವರಿಗೆ ಶಾರೀರಿಕವಾಗಿ ತಾವು "ಲಾಸ್" ಆಗುತ್ತಿರುವ ವಿಷಯ ತಿಳಿದಿರುವುದಿಲ್ಲ.

ಸಿಗರೇಟು ಅಥವಾ ಬೀಡಿ ಸೇವನೆ ಒಂದು ಕೆಟ್ಟ ಚಟ. ಅಂತಹ ಚಟದಿಂದ ಮುಕ್ತಿ ಪಡೆಯಬೇಕು ಎಂದಾದರೆ ಮನಸ್ಸು ಗಟ್ಟಿಯಾಗಿರಬೇಕು.ಯಾವುದೇ ವ್ಯಕ್ತಿಗೆ ಇಂತಹ ಚಟವನ್ನು ಒಂದೇ ನಿಮಿಷದಲ್ಲಿ ಬಿಟ್ಟು ಬಿಡಲು ಅಸಾಧ್ಯ. ಆದರೆ ಪ್ರಯತ್ನ ಮಾಡಿದಲ್ಲಿ ಅಗತ್ಯ. ಪ್ರತಿ ದಿನದಲ್ಲಿ 10 ಪ್ಯಾಕೆಟ್ ಸಿಗರೇಟು ಸೇದುವ ವ್ಯಕ್ತಿ ಬಾಹ್ಯವಾಗಿ ಯಾವುದೇ ರೋಗಕ್ಕೊಳಪಡದವನಂತೆ ಕಂಡು ಬಂದರೂ ಆಂತರಿಕವಾಗಿ ಅವನ ಶ್ವಾಸಕೋಶಗಳು ಶಕ್ತಿ ಕಳೆದು ಕೊಂಡಿರುತ್ತವೆ. ಧೂಮಪಾನದಿಂದಾಗಿ ಕ್ಯಾನ್ಸರ್, ಶ್ವಾಸಕೋಶವನ್ನು ಬಾಧಿಸುವ ರೋಗಗಳು, ಕೆಮ್ಮು, ಅಧಿಕ ರಕ್ತದೊತ್ತಡ ಮೊದಲಾದ ರೋಗಗಳು ಬರುತ್ತವೆ ಎಂದು ತಿಳಿದಿದ್ದರೂ ಸಿಗರೇಟ್‌ಗೆ ವಿದಾಯ ಹೇಳುವ ಜನರು ಕಡಿಮೆ. ಪ್ರತ್ಯಕ್ಷ ಧೂಮಪಾನ ಒಂದೆಡೆಯಾದರೆ,ಅದರ ಫಲ ಅನುಭವಿಸಬೇಕಾಗಿ ಬರುವ ಪರೋಕ್ಷ ಧೂಮಪಾನಿಗಳ ಸಂಕಟ ಹೇಳತೀರದು. ಪರೋಕ್ಷ ಧೂಮಪಾನವು ಅತೀ ಹಾನಿಕರ ಎಂಬುದು ಸಾಬೀತು ಪಡಿಸಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನಕ್ಕೆ ನಿಷೇಧ ಹೇರಲಾಗಿದೆ. ಆದರೆ ಅಲ್ಲಿಯೂ ಕಾನೂನು ಪಾಲಕರ ಕಣ್ತಪ್ಪಿಸಿ ಹೊಗೆ ಬಿಡುವ ವ್ಯಕ್ತಿಗಳಿಂದ ಮುಕ್ತಿ ಪಡೆಯಲು ಅನುಭವಿಸಬೇಕಾದ ಕಷ್ಟ ಅಷ್ಟಿಷ್ಟಲ್ಲ.

ಯುವ ಜನಾಂಗವಂತೂ ಸುಖಾನುಭವಕ್ಕಾಗಿ ಹೊಗೆಬತ್ತಿಯ ದಾಸ್ಯರಾಗಿ ಬಿಡುತ್ತಾರೆ. ಇದರಲ್ಲಿ ಮಾಧ್ಯಮಗಳ ಪಾತ್ರವೇ ಹಿರಿದು. ಮಾಧ್ಯಮಗಳ ಪ್ರಭಾವದಿಂದಾಗಿಯೇ ಬಹುತೇಕ ಮಂದಿಯೂ ಮೊದಲ "ಪಫ್"ನ ಅನುಭವ ಪಡೆಯಲು ಉತ್ಸುಕರಾಗಿರುತ್ತಾರೆ. ಜಾಹೀರಾತುಗಳಂತೂ ಯುವ ಜನರನ್ನೇ ಕೇಂದ್ರವಾಗಿಟ್ಟುಕೊಂಡು ಪ್ರಚಾರಗಿಟ್ಟಿಸುತ್ತಿವೆ. ಇಂತಹ ಪ್ರೇರಣೆಗೆ ಒಳಗಾದ ಯುವಕರು ಸಾಧಾರಣ ಮಧ್ಯವಯಸ್ಸಿಗೆ ತಲುಪುವಾಗಲೇ ಮರಣವನ್ನಪ್ಪುತ್ತಾರೆ. ಸಮೀಕ್ಷೆಗಳ ಪ್ರಕಾರ ಮರಣಹೊಂದುವ ಸ್ತ್ರೀ-ಪುರುಷ ಮಧ್ಯವಯಸ್ಕರಲ್ಲಿ ಸಾವಿಗೆ ಕಾರಣ ಧೂಮಪಾನವೇ ಎಂದು ಹೇಳಲಾಗುತ್ತದೆ. ಅಭಿವೃದ್ದಿಶೀಲ ರಾಷ್ಟ್ರಗಳಲ್ಲಂತೂ ಧೂಮಪಾನದ ಕರಾಳಹಸ್ತವು ಬಹಳಷ್ಟು ವ್ಯಾಪಿಸಿಕೊಂಡಿದೆ. ಇತರ ಜನರ ವಯಸ್ಸಿಗೆ ಹೋಲಿಸಿದರೆ ಧೂಮಪಾನಿಗಳ ಜೀವಿತಾವಧಿಯು 15 ವರ್ಷಗಳಷ್ಟು ಕಡಿಮೆಯಾಗಿರುತ್ತದೆ. ಪ್ರತಿ ವರ್ಷವೂ 5000 ಸಾವಿರದಷ್ಟು ಮಂದಿಯ ಸಾವಿಗೆ ಧೂಮಪಾನ ಕಾರಣವಾಗುತ್ತಿದೆ ಎಂದು ಸಮೀಕ್ಷೆಗಳಿಂದ ತಿಳಿದು ಬಂದ ವಿಚಾರ. ಭಾರತದಲ್ಲಿಯೂ ಧೂಮಪಾನ ಜನ್ಯ ರೋಗಗಳು ಹೆಚ್ಚುತ್ತಾ ಬರುತ್ತಿದ್ದು, ಇದರಿಂದಾಗಿ ಮರಣ ಹೊಂದುವ ಜನರ ಪ್ರಾಯವು 30-60 ವರ್ಷದ ನಡುವೆ ಎಂಬುದಾಗಿ ಪ್ರಸ್ತುತ ಸಮೀಕ್ಷೆ ವರದಿ ಸಲ್ಲಿಸಿದೆ . ಈ ಸಮೀಕ್ಷೆಗಳ ಪ್ರಕಾರ 2010ನೇ ಇಸವಿಗೆ ತಲುಪುವಾಗ 10 ಲಕ್ಷ ಮಂದಿ ಧೂಮಪಾನದಿಂದ ಸಾವನ್ನಪ್ಪಲಿದ್ದಾರೆ. ಸಿಗರೇಟಿನಂತೆಯೇ ಬೀಡಿ ಸೇವಿಸುವವರಲ್ಲಿ ಪುರುಷರ ಆಯಸ್ಸು 6 ವರ್ಷ ಕಡಿತಕೊಂಡರೆ ಸ್ತ್ರೀಯರಲ್ಲಿ ಇದು 8 ವರ್ಷಗಳಾಗಿವೆ. ಪುರುಷರ 5 ಮರಣದಲ್ಲಿ ಒಂದು ಮರಣಕ್ಕೆ ಕಾರಣ ಹೊಗೆಬತ್ತಿಯಾದರೆ, ಮಹಿಳೆಯರಲ್ಲಿ 20 ರಲ್ಲಿ ಓರ್ವ ಮಹಿಳೆಯ ಮರಣ ಹೊಗೆಬತ್ತಿ ಸೇವನೆಯಿಂದಾಗಿದೆ.

ಅದೇ ವೇಳೆ ಭಾರತದಲ್ಲಿ ಧೂಮಪಾನದ ದಾಸ್ಯಕ್ಕೊಳಗಾದ ಮಹಿಳೆಯರ ಸಂಖ್ಯೆಯೂ ವರ್ಧಿಸುತ್ತಾ ಬರುತ್ತಿದೆ. WHO ನಡೆಸಿದ ಸಮೀಕ್ಷೆಯ ಪ್ರಕಾರ 15-49 ವಯಸ್ಸಿನ ನಡುವೆಯಿರುವ ಧೂಮಪಾನಿ ಹೆಂಗಸರ ಸಂಖ್ಯೆ 31% ಆಗಿದೆ. ಇದರಲ್ಲಿ 25% ಭಾರತೀಯ ನಾರಿಯರು ಪ್ರತಿದಿನಕ್ಕೆ 10 ಕ್ಕಿಂತ ಅಧಿಕ ಸಿಗರೇಟ್‌ ಸೇದುತ್ತಾರೆ. ಹಾಗೆಯೇ 62% ಮಹಿಳೆಯರು ಇದರಿಂದಾಗಿ ಸಾವನ್ನಪ್ಪುತ್ತಾರೆ. 20 ಮಹಿಳೆಯರಲ್ಲಿ ಒಬ್ಬರು ಮರಣವನ್ನಪ್ಪಲು ಕಾರಣ ಸಿಗರೇಟ್ ಆಗಿದ್ದು ಇವರ ವಯಸ್ಸು 30-69ರ ನಡುವೆ ಇರುತ್ತದೆ. ದೆಹಲಿ ಮತ್ತು ಚೆನ್ನೈ ಮೊದಲಾದ ಮೆಟ್ರೋ ನಗರಗಳಲ್ಲಿ 20% ರಷ್ಟು ಹುಡುಗಿಯರು 6ನೇ ತರಗತಿಯಲ್ಲಿಯೇ ಧೂಮಪಾನದ ರುಚಿಯನ್ನರಿಯುತ್ತಾರೆ ಎಂಬುದಾಗಿ AIIMS ಸಮೀಕ್ಷೆಯು ಬಹಿರಂಗಪಡಿಸಿದೆ. ನಗರದ ಮಹಿಳೆಯರು ಸಿಗರೇಟು ಹಚ್ಚಿಕೊಳ್ಳುವಾಗ ಗ್ರಾಮೀಣ ಮಹಿಳೆಯರು ಬೀಡಿ ಹಚ್ಚಿಕೊಳ್ಳುತ್ತಿದ್ದಾರೆ. ಅದರಂತೆಯೇ ಕ್ಷಯ, ಶ್ವಾಸಕೋಶ ಮತ್ತು ಹೃದಯರೋಗಗಳು, ಕ್ಯಾನ್ಸರ್‌ ರೋಗದಿಂದ ಬಳಲುವ ಬಹುತೇಕ ಮಂದಿಯ ರೋಗಕ್ಕೆ ಕಾರಣವಾಗಿರುವುದು ಧೂಮಪಾನ ಎಂಬುದನ್ನು ಆರೋಗ್ಯ ಇಲಾಖೆ ಖಚಿತಪಡಿಸಿದೆ. ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ನಡೆಸಿದ ಸಮೀಕ್ಷೆ ಪ್ರಕಾರ ಪ್ರತಿ ವರ್ಷ ಭಾರತದಲ್ಲಿ ಒಂದು ಮಿಲಿಯದಷ್ಟು ಜನರು ಧೂಮಪಾನದಿಂದ ಸಾಯುತ್ತಾರೆ, ಇವುಗಳಲ್ಲಿ ಅರ್ಧದಷ್ಟು ಮಂದಿ ಬಡವರು ಮತ್ತು ಅವಿದ್ಯಾವಂತರಾಗಿದ್ದಾರೆ. ಧೂಮಪಾನದ ಪರಿಣಾಮಗಳ ಬಗ್ಗೆ ಜನರಿಗೆ ಸಾಕಷ್ಟು ಮಾಹಿತಿ ಇಲ್ಲದಿರುವುದೇ ಇದಕ್ಕೆ ಕಾರಣ. ಇದು ಒಂದೆಡೆಯಾದರೆ, ಹೃದಯಾಘಾತ ಅಥವಾ ಇನ್ನಾವುದೇ ರೋಗ ಲಕ್ಷಣಗಳು ಕಂಡು ಬಂದರೆ ಮಾತ್ರ ಅರ್ಧದಷ್ಟು ಧೂಮಪಾನಿಗಳು ಪ್ರಸ್ತುತ ಚಟಕ್ಕೆ ವಿದಾಯ ಹೇಳುತ್ತಾರೆ. ಧೂಮಪಾನಿಗಳು ತಮ್ಮ ಆರೋಗ್ಯವನ್ನು ತಾವೇ ಕೆಡಿಸಿಕೊಳ್ಳುತ್ತಿದ್ದರೂ, ಪ್ರತ್ಯಕ್ಷ ಧೂಮಪಾನಕ್ಕಿಂತ ಅತೀ ಭಯಾನಕವಾಗಿರುವುದೇ ಪರೋಕ್ಷ ಧೂಮಪಾನ. ಪ್ರತ್ಯಕ್ಷ ಧೂಮಪಾನಿಗಳ ರೋಗಗಳು ಒಂದೆಡೆಯಾದರೆ ಪರೋಕ್ಷ ಧೂಮಪಾನದಿಂದಾಗಿ ಇತರರ ರೋಗ ಪ್ರತಿರೋಧಕ ಶಕ್ತಿಯೂ ಕಡಿಮೆಯಾಗುತ್ತಾ ಬರುತ್ತಿದೆ ಎಂಬ ವಿಷಯ ಬಹಳಷ್ಟು ಮಂದಿಗೂ ತಿಳಿದಿರುವುದಿಲ್ಲ!

ಧೂಮಪಾನದ ನಿಷೇಧದ ಬಗ್ಗೆ ಭಾರತ ಸರಕಾರವು ಹಲವಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ, ಸಿನಿಮಾ ಮಾಧ್ಯಮಗಳು ಪ್ರಭಾವದಿಂದಾಗಿ ಇದ್ಯಾವುದೂ ಜನರತ್ತ ತಲುಪುತ್ತಿಲ್ಲ ಎಂಬುದಾಗಿ ಆರೋಗ್ಯ ಸಚಿವರು ಇತ್ತೀಚೆಗೆ ಪ್ರಸ್ತಾವನೆ ನೀಡಿದ್ದರು. ಪ್ರಸಕ್ತ ಸಿನೆಮಾ ಹೀರೋಗಳನ್ನು ಅನುಸರಿಸುವ ಯುವಜನಾಂಗದ ಮನಸ್ಸು ಬದಲಾಯಿಸಲು ನಾಯಕ ನಟರು ಮುಂದೆ ಬರಬೇಕೆಂದು ಅವರು ಬಿನ್ನವಿಸಿಕೊಂಡಿದ್ದಾರೆ. ಪ್ರಸಿದ್ಧ ನಾಯಕ ನಟರಾದ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ರಜನೀಕಾಂತ್ ಮೊದಲಾದವರಲ್ಲಿ ವಿನಂತಿಸಿದ ಅನ್ಬುಮಣಿ ರಾಮದಾಸ್‌ರಿಗೆ ಸದ್ಯಕ್ಕೆ ಮನ್ನಣೆ ನೀಡಿದವರು ರಜನೀಕಾಂತ್ ಮಾತ್ರ! ಸಿನಿಮಾಗಳ ಬಗ್ಗೆ ವಿಶ್ಲೇಷಣೆ ನಡೆಸಿದರೆ 87% ಹಿಂದಿ ಸಿನೆಮಾಗಳಲ್ಲಿ ಆನ್‌ಸ್ಕ್ರೀನ್ ಸಿಗರೇಟು ಸೇವನೆ, 26% ಹೀರೋಯಿನ್‌ಗಳು ಧೂಮಪಾನ ಸೇವಿಸುತ್ತಾರೆ ಎಂಬುದಾಗಿ ತಿಳಿದು ಬಂದಿದೆ. ಸಿನಿಮಾಗಳಲ್ಲಿ ಧೂಮಪಾನ ನಿಷೇಧವನ್ನು ಮಾಡಿದ ಮಾತ್ರಕ್ಕೆ "ಧೂಮಪಾನ ನಿಷೇಧ" ಯೋಜನೆಯು ಪರಿಪೂರ್ಣವಾಗುವುದೇ? ಎಂಬುದು ಚಿಂತಿಸಬೇಕಾದ ಸಂಗತಿ. ಅಂದ ಹಾಗೆ, ಹಳ್ಳಿಯಾಗಲೀ ನಗರವಾಗಲಿ ಧೂಮಪಾನದ ಪರಿಣಾಮದ ಬಗ್ಗೆ ಸಾಕಷ್ಟು ತಿಳುವಳಿಕೆ ನೀಡಿ ಜನರನ್ನು ಎಚ್ಚರಿಸ ಬೇಕು ಇಲ್ಲವೇ ಹೊಗೆಬತ್ತಿಯ ಬೆಲೆಯನ್ನು ಏರಿಸಿ ಬಡವರ ಕೈಗೆ ಬೇಗನೆ ನಿಲುಕದಂತೆ ಮಾಡಿ ಹೊಗೆ ಬತ್ತಿಯಿಂದಾಗಿ ಚಿತೆಗೇರುವ ಜನತೆಯನ್ನು ರಕ್ಷಿಸಬೇಕು!!