ಚುನಾವಣಾ ಫಲಿತಾಂಶ !

ಚುನಾವಣಾ ಫಲಿತಾಂಶ !

ಸಂಪದಕ್ಕ ಸಂಪದಕ್ಕ 
ಉಸಿರ್ಯಾಕಿಂಗೆ ಬಿಗಿದಿತ್ತಕ್ಕ
ಎಲ್ಲಾರ ಹಂಗೆ ನಿಂಗೂ ಜೋಶಾ
ಏನಾಯ್ತು ಅಂತ ಫಲಿತಾಂಶ?

ಅಯ್ತಲ್ಲಕ್ಕ ಲೆಕ್ಕಾಚಾರ 
ಆಗಲ್ಲ ಟೋಪಿ ವ್ಯವಹಾರ 
ಮಾಡೋಂಗಿಲ್ಲ ಕುದುರೆ ವ್ಯಾಪಾರ
ಅವ್ರ ಕಾಲ್ಮೆಲವ್ರೆ ಸರದಾರ!

ಕೊಟ್ಟು ಕೊಳ್ಳೊ ಲೆಕ್ಕಾ ಇಲ್ಲ 
ಮುಲಾಜಿಗ್ ಬೀಳೋ ದುಃಖ ಇಲ್ಲ
ಬ್ರೀಫ್ಕೇಸ್ ರೊಕ್ಕ ಬೇಕಾಗಿಲ್ಲ 
ರೆಸಾರ್ಟು ಸುದ್ದಿ ಕೇಳಬೇಕಿಲ್ಲ!

ನಮ್ಬುಟ್ಟವ್ರೆ ಎಕ್ಕಾಮುಕ್ಕಾ 
ಕೊಟ್ಬುಟ್ಟವ್ರೆ ಅಧಿಕಾರ ಚೊಕ್ಕ
ಮಣ್ಣಾಗ್ದಂಗೆ ಅವರಾಸೆ ದೋಸೆ  
ಉಳ್ಸ್ಕೊಳ್ರಣ್ಣ ಈ ಸಲವಾದ್ರೂ ಭಾಷೆ!

ಕಚ್ಚಾಡ್ಕೊಳ್ದೆ ಸಿಗ್ಗಿಲ್ದಂಗೆ 
ನಾಯಿ ನರಿಗಳ್ಗೆಗ್ಗಿಲ್ದಂಗೆ 
ಡಿಸ್ಟಿಂಕ್ಷನ್ನಲ್ಲಿ ಓಟ್ ಹಾಕ್ದೊರ್ಗೆ 
ಫಸ್ಟ್ ಕ್ಲಾಸ್ಲಾದ್ರು ಪಾಸ್ ಮಾಡುಸ್ರಣ್ಣ! 

- ನಾಗೇಶ ಮೈಸೂರು, ಸಿಂಗಾಪುರದಿಂದ 

Comments

Submitted by H.A.Patil. Wed, 05/08/2013 - 20:05

ನಾಗೇಶ ಮೈಸೂರು ರವರಿಗೆ ವಂದನೆಗಳು ತಮ್ಮ ಕವನ ' ಚುನಾವಣಾ ಫಲಿತಾಂಶ !' ಓದಿದೆ, ಇದೊಂದು ಸಕಾಲಿಕ ಮತ್ತು ವರ್ತಮಾನದ ಸ್ಥಿತಿ ಬಿಂಬಿಸುವ ಅರ್ಥಪೂರ್ಣ ಕವನ. ಕವನದ ಅಂತ್ಯಪ್ರಾಸ ಚೆನ್ನಾಗಿದೆ. ಧನ್ಯವಾದಗಳು.
Submitted by nageshamysore Thu, 05/09/2013 - 03:08

In reply to by H.A.Patil.

ಹಿರಿಯರಾದ ಪಾಟೀಲರಿಗೆ, ತಮಗೆ ಕವನ ಮೆಚ್ಚಿಗೆಯಾದದ್ದಕ್ಕೆ ನಿಜಕ್ಕೂ ತುಂಬಾ ಸಂತೋಷ. ತುಂಬಾ ಧನ್ಯವಾದಗಳು ಹಾಗೂ ವಂದನೆಗಳು. - ನಾಗೇಶ ಮೈಸೂರು, ಸಿಂಗಾಪುರದಿಂದ
Submitted by makara Wed, 05/08/2013 - 22:49

ಕರ್ನಾಟಕದ‌ ಮತದಾರ‌ ಪ್ರಬುದ್ಫ ಮತದಾರನೆ0ದು ಹಲವು ವರ್ಷಗಳ‌ ನ0ತರ‌ ಮತ್ತೆ ನಿರೂಪಿಸಿದ್ದಾನೆ. ಕೇ0ದ್ರ ಚುನಾವಣೆಯಲ್ಲೂ ಇದೇ ರೀತಿ ಕಡಿಮೆ ಹಾನಿಕಾರಕ‌ ವ್ಯಕ್ತಿಗಳಿಗೆ ಮತ‌ ಹಾಕಿ ತನ್ನ‌ ಪ್ರಬುದ್ಧತೆ ಮೆರೆಯಲಿ. ಸಮಯೋಚಿತ‌ ಕವನಕ್ಕೆ ಅಭಿನ0ದನೆಗಳು, ನಾಗೇಶ್ ಅವರೇ.
Submitted by venkatb83 Wed, 05/08/2013 - 23:04

In reply to by makara

ಶ್ರೀಧರ್ ಜೀ ನಿಮ್ಮ ಅಮೂಲ್ಯ ಮತ ಕರುನಾಡಲ್ಲಿ ಬೀಳದೆ ಹೋಯ್ತು ...!! ಲೋಕಸಭೆಯ ಚುನಾವಣೆಗೆ ಮತ ಹಾಕುವಾಗ ಖಂಡಿತ ಇದೆ ಪುನಾರಾವರ್ತನೆ ಆದರೆ ಒಳ್ಳೇದು ... ನಾಗೇಶ್ ಅವರೇ ಸಮಯ ಸಾಂದರ್ಭಿಕ ಸಕಾಲಿಕ ವಾಸ್ತವಿಕ ಬರಹ . ಏಕ ಪಕ್ಷ ಅಧಿಕಾರಕ್ಕೆ ಬಂದಿದ್ದು ಖುಷಿ ಆಗಿದೆ , ಹಾಗೆಯೇ ಕಾಂಗ್ರೆಸ್ಸಿಗರು ಗಣಿ ಕಳ್ಳ ಹಣ ವಾಪಾಸ್ ತರುವೆವು ಅಪರಾಧಿಗಳನ್ನು ಶಿಕ್ಷಿಸುವೆವು ಎಂದದ್ದು ಅವರಿಗೆ ನೆನಪಿರಲಿದೆ ಎಂದು ಭಾವಿಸುವೆ .. ಶುಭವಾಗಲಿ \|
Submitted by nageshamysore Thu, 05/09/2013 - 03:26

In reply to by venkatb83

ನಮಸ್ಕಾರ ವೆಂಕಟ್ ರವರಿಗೆ, ನೀವಂದಂತೆ ಎಷ್ಟರ ಮಟ್ಟಿಗೆ ಮಾತುಳಿಸಿಕೊಳ್ತಾರೊ ಕಾದು ನೋಡೊಣ...ಮೊದಲಿಗೆ ನಾಯಕರನ್ನು ಆರಿಸೋದ್ರಲ್ಲಿ ಎಷ್ಟು ಜಾಣ್ಮೆ ತೋರುತ್ತಾರೆ, ಎಷ್ಟು ಒಳ ಜಗಳ ಕಚ್ಚಾಟವಿರದೆ ಆಯ್ಕೆಯ ಪ್ರಕ್ರಿಯೆ ನಡೆಸ್ತಾರೊ ನೋಡೋಣ! - ನಾಗೇಶ ಮೈಸೂರು, ಸಿಂಗಾಪುರದಿಂದ
Submitted by nageshamysore Thu, 05/09/2013 - 03:17

In reply to by makara

ನಮಸ್ಕಾರ ಶ್ರೀಧರರವರಿಗೆ, ಮೆಚ್ಚಿಗೆಗೆ ತುಂಬಾ ಧನ್ಯವಾದಗಳು ಹಾಗೂ ವಂದನೆಗಳು. ನಮ್ಮ ಮತದಾರನೇನೊ ಪ್ರಬುದ್ದತೆ ತೋರಿಸಿಬಿಟ್ಟು ಸ್ಥಿರ ಸರ್ಕಾರಕ್ಕೆ 'ಹುಕುಂ' ಕೊಟ್ಟ. ಆದರೆ ಕೇಂದ್ರದಲ್ಲಿ (ಕರ್ನಾಟಕಕ್ಕೆ ಸದಾ ಆಗುವಂತೆ) ಬೇರೆ ಪಕ್ಷ ಅಧಿಕಾರಕ್ಕೆ ಬಂದು ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುವ ಸ್ಥಿತಿ ಬರದಿದ್ದರೆ ಸಾಕು. ಅಲ್ಲೂ ಯಾರೆ ಬಂದರೂ, ಇದ್ದವರಲ್ಲೆ ಉತ್ತಮರು ಆಯ್ಕೆಯಾದರೆ, ಚಿಲ್ಲರೆ ರಾಜಕೀಯ ಬಿಟ್ಟು ಪ್ರಬುದ್ಧತೆಯಿಂದ ಆಡಳಿತ ನಡೆಸುತ್ತಾ, ಕನಿಷ್ಟ ದೇಶದ ಪ್ರಗತಿಯತ್ತ ತುಸುವಾದರೂ ಗಮನ ಹರಿಸಿಯಾರೆಂಬ ಆಶಯ! - ನಾಗೇಶ ಮೈಸೂರು, ಸಿಂಗಾಪುರದಿಂದ
Submitted by Vasant Kulkarni Thu, 05/09/2013 - 10:16

ನಾಗೇಶ್ ಅವರೆ, ತುಂಬಾ ಸುಂದರವಾಗಿ ವಾಸ್ತವವನ್ನು ಕುರಿತು ಬರೆದಾದ ಕವನ ಇದು. ನೀವು ಹೇಳಿದಂತೆ ಮತದಾರರ ಆಶೋತ್ತರಗಳನ್ನು ಪೂರೈಸುವತ್ತ ಹೊಸ ಸರಕಾರದ ಗಮನ ಸಾಗಲಿ ಎಂಬುದು ಎಲ್ಲರ ಆಶಯ. ಇಲ್ಲದಿದ್ದರೆ ಮತ್ತೆ ಅದೇ ಗತಿ, ಅಧೋಗತಿ!
Submitted by nageshamysore Thu, 05/09/2013 - 14:00

In reply to by Vasant Kulkarni

ನಮಸ್ಕಾರ ವಸಂತರವರೆ, ನಿಮ್ಮ ಮಾತು ನಿಜ - ಮತದಾರ ಹಳೆಯದೆಲ್ಲ ಮರೆತು ಮತ್ತೊಂದು ಅವಕಾಶ ಕೊಟ್ಟಿದ್ದಾನೆ. ಒಂದು ರಾಷ್ಟ್ರೀಯ ಪಕ್ಷದ ಬಾವುಟ ಹಿಡಿದ ಮಂದಿ ಈ ಬಾರಿಯು ಕೈಕೊಟ್ಟರೆ ನೀವಂದಂತೆ ಅಧೋಗತಿಯೆ! - ನಾಗೇಶ ಮೈಸೂರು, ಸಿಂಗಾಪುರದಿಂದ