ಛಾಯಾಪತ್ರಕರ್ತ ಕೆ.ಜಿ.ಸೋಮಶೇಖರ್ ನಮ್ಮ ನಡುವಿನ ಅದ್ಭುತ ಪ್ರತಿಭೆ

ಛಾಯಾಪತ್ರಕರ್ತ ಕೆ.ಜಿ.ಸೋಮಶೇಖರ್ ನಮ್ಮ ನಡುವಿನ ಅದ್ಭುತ ಪ್ರತಿಭೆ

ಬರಹ

ಕನ್ನಡಕ್ಕೆ ಒಟ್ಟು ೭ ಜ್ನಾನಪೀಠಗಳು. ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ, ಗೋಕಾಕ, ಯು.ಆರ್.ಅನಂತಮೂರ್ತಿ ಹಾಗು ಕಾರ್ನಾಡ್. ಈ ಎಲ್ಲ ಮಹನೀಯರ ಅನೇಕ ವಿಶಿಷ್ಠ ಭಾವ-ಭಂಗಿಗಳ ಛಾಯಾಚಿತ್ರ ನೋಡಬೇಕೆ? ನೀವು ಕೆ.ಜಿ.ಸೋಮಶೇಖರ್ ಮನೆಗೆ ಬರಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಧಾರವಾಡವನ್ನು ಸಾಂಸ್ಕೃತಿಕ ರಾಜಧಾನಿಯನ್ನಾಗಿಸಿ ಚಿರಸ್ಥಾಯಿ ಅಮರತ್ವವವನ್ನು ಕರುಣಿಸಿದ ಸರಸ್ವತಿಯ ಆರಾಧಕರಾದ ಡಾ.ಮಲ್ಲಿಕಾರ್ಜುನ್ ಮನ್ಸೂರ್, ಡಾ.ಬಸವರಾಜ್ ರಾಜಗುರು, ಪಂ.ಭೀಮಸೇನ್ ಜೋಶಿ, ಡಾ.ಗಂಗೂಬಾಯಿ ಹಾನಗಲ್, ರಾಷ್ಟ್ರದ ರತ್ನಗಳಾದ ಮದರ್ ಥೆರೆಸ್ಸಾ, ಉಸ್ತಾದ್ ಬಿಸ್ಮಿಲ್ಲಾ ಖಾನ್, ಗಾನ ಕೋಗಿಲೆ ಲತಾ ಮಂಗೇಶ್ಕರ್, ಎಂ.ಎಸ್.ಸುಬ್ಬುಲಕ್ಷ್ಮಿ, ಚಲನಚಿತ್ರ ರಂಗದ ಸತ್ಯಜೀತ್ ರೇ, ಮೃಣಾಲ್ ಸೇನ್, ಹೋಮಿ ಜೆ.ಭಾಭಾ, ಜೆ.ಆರ್.ಡಿ.ಟಾಟಾ ಮುಂತಾದವರು ಸೋಮಶೇಖರ್ ಮನೆಯಲ್ಲಿ ಇಂದಿಗೂ ಜೋಪಾನವಾಗಿದ್ದಾರೆ.

ಕವಿವರ್ಯ ರವೀಂದ್ರನಾಥ್ ಠಾಕೂರ್, ಮಹಾತ್ಮಾ ಗಾಂಧಿ, ಜಾನ್ ಏಫ್. ಕೆನಡಿ, ಜವಾಹರಲಾಲ್ ನೆಹರೂ, ಬಿ.ಡಿ.ಜತ್ತಿ, ಡ್ಯೂಕ್ ಆಫ್ ಎಡಿನಬರ್ಗ್, ಎಲಿಜಬೆತ್, ಸಿನೇಮಾ ನಟರಾದ ಗುರುದತ್, ದಿಲೀಪ್ ಕುಮಾರ್, ವೈಜಯಂತಿ ಮಾಲಾ, ರಾಜ್ ಕಪೂರ್, ನರ್ಗೀಸ್, ವಹೀದಾ ರೆಹೆಮಾನ್ ಹಾಗು ಹಾಲಿವುಡ್ ನಟ ಟೋನಿ ರಾಂಡಲ್ ಇವರೆಲ್ಲರ ಮಿನಿಯೇಚರ್ ಭಾವಚಿತ್ರ ಬಿಡಿಸಿದ ಕೀರ್ತಿ ಸಹ ಸೋಮಶೇಖರ್ ಅವರಿಗಿದೆ.

ನಾಡಿನ ಸುಮಾರು ೪೦೦ ಸಾಹಿತಿ, ಕಲಾವಿದ, ಸಂಗೀತಗಾರರ ಧ್ವನಿ ಮುದ್ರಿಕೆಯ ಅಪರೂಪದ ಸಂಗ್ರಹ ಸಹ ಹೊಂದಿರುವ ಕೆ.ಜಿ.ಸೋಮಶೇಖರ್, ಯಕ್ಷಗಾನವನ್ನು ಸಮಗ್ರವಾಗಿ ಪರಿಚಯಿಸಬಲ್ಲ ಖ್ಯಾತನಾಮರಾದ ಡಾ.ಶಿವರಾಮ ಕಾರಂತ, ಕೆರೆಮನೆ ಶಂಭು ಹೆಗಡೆ ಮುಂತಾದವರ ಭಾವ-ಭಂಗಿಗಳ ಛಾಯಾಚಿತ್ರಗಳನ್ನು ಬಳಸಿಕೊಂಡರೆ ಸಂಪುಟವನ್ನೇ ಬರೆಯಬಹುದು! ಆದರೆ ‘ಅಪೇಕ್ಷೆ ಇಟ್ಟುಕೊಳ್ಳದೇ ಕೆಲಸ ಮಾಡುವುದು ತಪ್ಪು’ ಎಂದು ೨೧ನೇ ಶತಮಾನ ಘಂಟಾಘೋಷವಾಗಿ ಸಾರಿದೆ. ಮತಿತಾರ್ಥ ಇಷ್ಟೇ..ಅಪೇಕ್ಷೆ ಇಟ್ಟುಕೊಂಡು ಕೆಲಸ ಮಾಡಿದರೆ ಮುಪ್ಪಿನಲ್ಲಿ ಉಪೇಕ್ಷೆಗೆ ಒಳಗಾಗುವುದು ತಪ್ಪುತ್ತದೆ. ಜಗತ್ತಿನಲ್ಲಿ ಓಡುವ ಕುದುರೆಗೆ ಕಿಮ್ಮತ್ತು ಹೆಚ್ಚು ಎಂಬುದು! ಈ ಕಹಿ ಅನುಭವ ಸೋಮಶೇಖರ್ ಅವರನ್ನು ತೀರ ಹಣ್ಣು ಮಾಡಿದೆ.

ಒಂದು ವಿಶ್ವವಿದ್ಯಾಲಯ ಅಥವಾ ನಾಡಿನ ಸರಕಾರ ಅಥವಾ ಒಂದು ಇಲಾಖೆ ಅಥವಾ ಒಂದು ಸಂಸ್ಥೆ; ಒಟ್ಟಾರೆ ಹೇಳುವುದಾದರೆ ಓರ್ವ ವ್ಯಕ್ತಿಯ ಶಕ್ತಿಗೆ ಮಿಕ್ಕಿದ ಕೆಲಸವನ್ನು ನಾಡು ಕಂಡ ಅದ್ಭುತ ಛಾಯಾಗ್ರಾಹಕ ಕೆ.ಜಿ.ಸೋಮಶೇಖರ್ ಅವರು ಮಾಡಿದ್ದಾರೆ. ಹಾಗಾದರೆ ಮಾಡಬೇಕಾದವರು ಏನು ಮಾಡುತ್ತಿದ್ದಾರೆ? ಸೋಮಶೇಖರ್ ಉತ್ತರಿಸುವುದಿಲ್ಲ. ‘ನನ್ನ ಕೆಲಸ ನನಗೆ ತೃಪ್ತಿ ನೀಡಿದೆ’ ಅಷ್ಟೆ ಹೇಳಬಲ್ಲೆ ಎನ್ನುತ್ತಾರೆ.

ಇಲ್ಲಿಯ ವರೆಗೆ ಸೋಮಶೇಖರ್ ಆಯೋಜಿಸಿರುವ ತಮ್ಮ ಛಾಯಾಚಿತ್ರ ಪ್ರದರ್ಶನಗಳಿಗೆ ಪಾಶ್ಚಿಮಾತ್ಯ ದೇಶದ ಸಾಂಸ್ಕೃತಿಕ ಸಂಸ್ಥೆಗಳು ಹಣಕಾಸಿನ ಸಹಾಯ ಒದಗಿಸಿ ಪ್ರಾಯೋಜಿಸಿವೆ. ಜೀವನಪೂರ್ತಿ ಕನ್ನಡದ ತೇರೆಳೆದ ಅವರ ಕಲೆಯ ತೇರನ್ನು ಪಾಶ್ಚಿಮಾತ್ಯರು ಎಳೆದಿದ್ದಾರೆ. ಇಲ್ಲಿಯ ತನಕ ಅಪ್ಪಿ-ತಪ್ಪಿಯೂ ಕನ್ನಡದ ಒಂದು ಸಂಘ-ಸಂಸ್ಥೆಯೂ, ಕೊನೆ ಪಕ್ಷ ನಮ್ಮ ಸರಕಾರಗಳು ಅವರ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸುವ ಮನಸ್ಸು ಮಾಡಿಲ್ಲ.

ಕೆ.ಜಿ.ಸೋಮಶೇಖರ್ ಅವರ ಖಜಾನೆಯಲ್ಲಿರುವ ಅದ್ಭುತಗಳನ್ನು ಜನರಿಗೆ ಪರಿಚಯಿಸುವ ಕೆಲಸ ಮಾಡಿದ ಪಾಶ್ಚಾತ್ಯ ಸಂಸ್ಥೆಗಳಲ್ಲಿ ಮೊದಲನೇಯವರು ಬೆಂಗಳೂರಿನ ಮ್ಯಾಕ್ಸ್ ಮುಲ್ಲರ್ ಭವನದವರು. ‘ಕರ್ನಾಟಕದ ಸೃಜನಶೀಲ ಪ್ರತಿಭೆಗಳು’ ಹೆಸರಿನಲ್ಲಿ ೧೯೭೨ರಲ್ಲಿ ಮ್ಯಾಕ್ಸ್ ಮುಲ್ಲರ್ ಭವನದವರು ರಾಜಧಾನಿ ಬೆಂಗಳೂರು ಸೇರಿದಂತೆ ಮೈಸೂರು, ಉಡುಪಿ ಹಾಗು ಮಣಿಪಾಲ್ ಗಳಲ್ಲಿ ಛಾಯಾಚಿತ್ರ ಪ್ರದರ್ಶನ ಆಯೋಜಿಸಿದ್ದರು. ಆದರೂ ಕನ್ನಡಿಗರು ತಮ್ಮ ಕಣ್ಣು ತೆರೆಯಲಿಲ್ಲ. ೧೯೭೩ರಲ್ಲಿ ನ್ಯೂಜೆರ್ಸಿಯಲ್ಲಿ ಇಂಡೊ-ಅಮೇರಿಕನ್ ಕಲ್ಚರಲ್ ಸೊಸಾಯಿಟಿ ಆಯೋಜಿಸಿದ್ದ ಪ್ರದರ್ಶನದಲ್ಲಿ ಕೆ.ಜಿ.ಎಸ್. ತಮ್ಮ ಮಿನಿಯೇಚರ್, ಗಂಧದ ಹಾಗು ಛಾಯಾಚಿತ್ರಗಳ ಪೊರ್ಟೇಟ್ ಪ್ರದರ್ಶಿಸಿದ್ದಾರೆ.

೧೯೭೪ರಲ್ಲಿ ಬೆಂಗಳೂರಿನ ಮ್ಯಾಕ್ಸ್ ಮುಲ್ಲರ್ ಭವನದವರು ಹಮ್ಮಿಕೊಂಡಿದ್ದ ‘ಹೊಯ್ಸಳ ದೇವಾಲಯಗಳ ಶಿಲ್ಪಕಲೆ ನಿರೂಪಣೆ’ ಪ್ರದರ್ಶಿನಿಯಲ್ಲಿ ಕೆ.ಜಿ.ಸೋಮಶೇಖರ್ ಅಪರೂಪದ ಶಿಲ್ಪ ಕಲೆ ಹಾಗು ವಾಸ್ತುಶಿಲ್ಪದ ಕುರಿತು ಛಾಯಾಚಿತ್ರ ಪ್ರದರ್ಶಿಸಿದ್ದಾರೆ. ಔದಾರ್ಯದಿಂದ ಸ್ವತ: ಮ್ಯಾಕ್ಸ್ ಮುಲ್ಲರ್ ಭವನದವರು ಭಾರತದ ವಿವಿಧೆಡೆಯಲ್ಲಿ ತಾವು ಹೊಂದಿರುವ ಭವನಗಳಲ್ಲಿ ಹಾಗು ಮ್ಯೂನಿಚ್ ನಲ್ಲಿ ಈ ಛಾಯಾಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ೧೯೭೫ರಲ್ಲಿ ಬೆಂಗಳೂರಿನಲ್ಲಿ ಅಲಾಯನ್ಸ್ ಫ್ರಾನ್ಸಾಯಸ್ ಸಂಸ್ಥೆ ‘ಫೇಸಸ್’ ಹೆಸರಿನಲ್ಲಿ ಕೆ.ಜಿ.ಸೋಮಶೇಖರ್ ಕ್ಲಿಕ್ಕಿಸಿದ ಛಾಯಾಚಿತ್ರಗಳ ಭವ್ಯ ಪ್ರದರ್ಶನ ಆಯೋಜಿಸಿತ್ತು.

೧೯೭೬ ರಲ್ಲಿ ಮುಂಬೈನಿಂದ ಪ್ರಕಟಗೊಳ್ಳುತ್ತಿದ್ದ ಇಲಸ್ಟ್ರೇಟೆಡ್ ವೀಕ್ಲ್ಯ್ ಆಫ್ ಇಂಡಿಯಾ ಪತ್ರಿಕೆ ಮುಂಬೈನಲ್ಲಿ ‘ಮಹಾರಾಷ್ಟ್ರಾ’ಸ್ ಮೆನ್ ಆಫ್ ಆರ್ಟ್ಸ್ ಆಂಡ್ ಲೆಟರ್ಸ್’ ಪ್ರದರ್ಶನ ಆಯೋಜಿಸಿ ಸೋಮಶೇಖರ್ ಕ್ಲಿಕ್ಕಿಸಿದ ಛಾಯಾಚಿತ್ರಗಳ ಪ್ರದರ್ಶನ ನಡೆಸಿಕೊಟ್ಟಿತು. ಅಂದಿನ ಮಹಾರಾಷ್ಟ್ರ ಸರಕಾರ ೨೦೦ ಜನ ಗಣ್ಯರ ಭಾವಚಿತ್ರಗಳನ್ನು ಏಕಕಾಲಕ್ಕೆ ಹಣಕೊಟ್ಟು ಖರೀದಿಸಿ ಈ ಕಲಾವಿದನಿಗೆ ಉಸಿರಾಡಲು ಅನುವು ಮಾಡಿಕೊಟ್ಟಿತು. ೧೯೭೭ರಲ್ಲಿ ಮುಂಬೈನ ಮ್ಯಾಕ್ಸ್ ಮುಲ್ಲರ್ ಭವನದವರು ಮತ್ತೊಮ್ಮೆ ಕೆ.ಜಿ.ಎಸ್. ಛಾಯಾಚಿತ್ರಗಳ ಪ್ರದರ್ಶನ ಆಯೋಜಿಸಿ ‘ಪೊರ್ಟೇಟ್’ ಹೆಸರಿನಲ್ಲಿ ತನ್ನ ಗೌರವ ಸಲ್ಲಿಸಿತು.

೧೯೮೧ರಲ್ಲಿ ನಾಡಿನ ಖ್ಯಾತ ಪತ್ರಕರ್ತ ಖುಷ್ವಂತ್ ಸಿಂಗ್ ಹಾಗು ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆ ಸಂಯುಕ್ತವಾಗಿ ದೆಹಲಿಯಲ್ಲಿ ‘ಪೋರ್ಟೇಟ್’ ಹೆಸರಿನಲ್ಲಿ ಪ್ರದರ್ಶನ ಆಯೋಜಿಸಿತ್ತು. ೧೯೮೯ರಲಿ ಹುಬ್ಬಳ್ಳಿಯ ಪ್ರಿಯದರ್ಶಿನಿ ಸಂಸ್ಥೆ ‘ಕರ್ನಾಟಕದ ಬರಹಗಾರರು ಹಾಗು ಕಲಾವಿದರು’ ಹೆಸರಿನಲ್ಲಿ ಪ್ರದರ್ಶನ ಆಯೋಜಿಸಿತ್ತು. ಇದೇ ಪ್ರದರ್ಶನ ಬೆಂಗಳೂರಿನ ವೆಂಕಟಪ್ಪ ಗ್ಯಾಲರಿಯಲ್ಲಿ ೧೯೯೨ರಲ್ಲಿ ಮತ್ತೊಮ್ಮೆ ಜರುಗಿತು. ೧೯೯೩ರಲ್ಲಿ ನ್ಯಾಶನಲ್ ಸೆಂಟರ್ ಫಾರ್ ಪರಫಾರ್ಮಿಂಗ್ ಆರ್ಟ್ಸ (ಎನ್ ಸಿ ಪಿ ಎ) ಆಂಡ್ ಸೆಂಟರ್ ಫಾರ್ ಫೋಟೊಗ್ರಫಿ ಆಸ್ ಆನ್ ಆರ್ಟ್ ಫಾರ್ಮ್ ಮುಂಬೈಯಲ್ಲಿ ‘ಪ್ರತಿಮಾ’ ಹೆಸರಿನಲ್ಲಿ ಸೋಮಶೇಖರ್ ಅವರ ಎಲ್ಲ ಛಾಯಾಚಿತ್ರಗಳ ಪ್ರದರ್ಶನ ಆಯೋಜಿಸಿ ತನ್ನ ಗೌರವ ಸಲ್ಲಿಸಿತು.

೨೦೦೫ರಲ್ಲಿ ಗುಲಬರ್ಗಾದ ಐಡಿಯಲ್ ಫೈನ್ ಆರ್ಟ್ ಕಾಲೇಜ್ ‘ಲೆಜೆಂಡ್ಸ್’ ಹೆಸರಿನಲ್ಲಿ ಛಾಯಾಚಿತ್ರಗಳ ಪ್ರದರ್ಶನ ಆಯೋಜಿಸಿತ್ತು. ಈ ಎಲ್ಲ ಪ್ರದರ್ಶನಗಳಿಗೆ ಕಿರೀಟಪ್ರಾಯವಾಗಿ ಚಿಕ್ಯಾಗೋ ಯುನಿವರ್ಸಿಟಿ ಪ್ರೆಸ್ ಕೆ.ಜಿ.ಸೋಮಶೇಖರ್ ಅವರಿಗೆ ರಾಯಧನ (ರಾಯಲ್ಟಿ) ನೀಡಿ ನೋಬೆಲ್ ಪಾರಿತೋಷಕ ವಿಜೇತ ವಿಜ್ನಾನಿ ಕನ್ನಡದ ಸುಬ್ರಮಣ್ಯಂ ಚಂದ್ರಶೇಖರ್ ಅವರ ಭಾವಚಿತ್ರವನ್ನು ಆತ್ಮ ವೃತ್ತಾಂತ ‘ಚಂದ್ರ’ ಕ್ಕೆ ಬಳಸಿಕೊಳ್ಳಲು ೧೯೯೦ರಲ್ಲಿ ಪಡೆದುಕೊಂಡಿತು. ಜೊತೆಗೆ ಲಂಡನ್ ಮೂಲದ ಫೇಬರ್ ಆಂಡ್ ಫೇಬರ್ ಲಿಮಿಟೆಡ್ ಪ್ರಕಾಶನ ಕಂಪೆನಿ ಇನ್ನೋರ್ವ ನೋಬೆಲ್ ಪಾರಿತೋಷಕ ಪಡೆದ ವಿಜ್ನಾನಿ ವಿಲಿಯಂ ಗೋಲ್ಡಿಂಗ್ ಅವರ ಭಾವಚಿತ್ರ ಪ್ರಕಟಿಸಲು ಒಪ್ಪಿಗೆ ಕೋರಿ ಕೆ.ಜಿ.ಸೋಮಶೇಖರ್ ಅವರಿಗೆ ಪತ್ರ ಬರೆದು, ರಾಯಧನ ನೀಡಿ ಪಡೆದುಕೊಂಡಿದೆ.

ನಾಡು ಕಂಡ ಭಾವನಾಪೂರ್ಣ ಅದ್ಭುತ ಛಾಯಾಗ್ರಾಹಕನ ಚಾಕಚಕ್ಯತೆ ಮೆಚ್ಚಿ ಕರ್ನಾಟಕ ಪತ್ರಿಕಾ ಅಕ್ಯಾಡೆಮಿ ೧೯೯೮ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ. ೨೦೦೦ ದಲ್ಲಿ ಕರ್ನಾಟಕ ಲಲಿತ ಕಲಾ ಅಕ್ಯಾಡೆಮಿ ಸಹ ತನ್ನ ಪ್ರಶಸ್ತಿ ನೀಡಿ ಕೆ.ಜಿ.ಎಸ್ ಅವರನ್ನು ತುಂಬು ಅಭಿಮಾನದಿಂದ ಗೌರವಿಸಿದೆ. ನನ್ನ ಅಪೇಕ್ಷೆ ಇಷ್ಟೆ. ನಮ್ಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸೋಮಶೇಖರ್ ಅವರು ಕ್ಲಿಕ್ಕಿಸಿದ ನಮ್ಮ ನಾಡಿನ ೧೫೦ಕ್ಕೂ ಹೆಚ್ಚು ಸಾಂಸ್ಕೃತಿಕ ರಾಯಭಾರಿಗಳ ವಿಶಿಷ್ಠ ಭಾವ-ಭಂಗಿಗಳ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿ ಸರಕಾರ ಅಥವಾ ಸಾಹಿತ್ಯ ಪರಿಷತ್ ಅಥವಾ ಸಹೃದಯಿ ಅಭಿಮಾನಿಗಳು ಈ ಛಾಯಾಚಿತ್ರಗಳನ್ನು ಕೊಂಡುಕೊಳ್ಳಲು ಮನಸ್ಸು ಮಾಡಿದರೆ ಕನ್ನಡ ತಾಯಿಯ ತೇರೆಳೆದ ಈ ಕಲಾವಿದನ ಪ್ರಯತ್ನ ಸಾರ್ಥಕವಾಗುವುದಿಲ್ಲವೇ?

ಕೆ.ಜಿ.ಸೋಮಶೇಖರ್ ಅವರ ಸಂದರ್ಶನದ ಆಯ್ದ ತುಣುಕುಗಳು ಸಂಪದಿಗರಿಗಾಗಿ:

*"ನಾನು ಮಾತ್ರ ಕಪ್ಪು-ಬಿಳುಪು ಛಾಯಾಚಿತ್ರಗಳನ್ನು ಮಾತ್ರ ತೆಗೆಯುತ್ತೇನೆ. ಫೋಟೊ ಕ್ಲಿಕ್ಕಿಸುವಾಗ ಅಂಬ್ರೆಲ್ಲಾ, ಫ್ಲ್ಯಾಷ್, ಇತ್ಯಾದಿ ಪರಿಕರಗಳ ಬಳಕೆ ನಿಷಿದ್ಧ. ಸಾಮಾನ್ಯವಾದ ಬೆಳಕಿನಲ್ಲಿ ಸಹಜವಾದ ಭಾವ-ಭಂಗಿಯಲ್ಲಿ, ಮಾತು ಕತೆಯಲ್ಲಿ ನಿರತರಾಗಿದ್ದಾಗಲೇ ಕ್ಲಿಕ್ಕಿಸಿಬಿಡುವುದು. ಸಹಜತೆಗೆ ನನ್ನಲ್ಲಿ ಪ್ರಾಧಾನ್ಯತೆ."

*"ಸೃಷ್ಟಿಶೀಲ, ಕ್ರಿಯಾಶೀಲ ಜನರ ಮುಖಭಾವಗಳೇ ನನಗೆ ಪ್ರಧಾನ. ವ್ಯಕ್ತಿಯ ಅಂತರ್ಗತ ಸ್ವಭಾವಕ್ಕೆ ಮುಖ ಹೇಗೆ ಕನ್ನಡಿ ಹಿಡಿಯುತ್ತದೆ ಎನ್ನುವುದನ್ನು ಗುರುತಿಸುವುದೇ ನನ್ನ ಭಾವಚಿತ್ರಗಳ ಮುಖ್ಯ ಉದ್ದೇಶ."

*"ಪ್ರತಿಯೊಬ್ಬ ಸಾಹಿತಿ, ಕಲಾವಿದರ ಭಾವಚಿತ್ರಗಳನ್ನು ಕ್ಲಿಕ್ಕಿಸಲು ಸ್ವತ: ಅವರ ಮನೆ ಬಾಗಿಲಿಗೇ ಹೋಗಿದ್ದೇನೆ. ಭಾವಚಿತ್ರ ತೆಗೆಯುವ ಸಲುವಾಗಿ ವ್ಯಕ್ತಿಗಳನ್ನು ಸಿದ್ಧಗೊಳಿಸಿ ಕ್ಯಾಮೆರಾ ಕ್ಲಿಕ್ಕಿಸುವ ಹವ್ಯಾಸ ನನ್ನದಲ್ಲ. ಫೋಟೊ ತೆಗೆಯುವ ಸಲುವಾಗಿ ಆಯ್ಕೆ ಮಾಡಿಕೊಂಡ ಲೇಖಕರು-ಕಲಾವಿದರು ಸರಳವಾಗಿ, ಸ್ವಚ್ಛಂದವಾಗಿ ಮೈಮರೆತು ಮಾತನಾಡುವಾಗ ಅವರ ಅಪೂರ್ವ ಭಾವ-ಭಂಗಿಗಳನ್ನು ಸೆರೆ ಹಿಡಿಯುವುದೇ ನನ್ನ ಉದ್ದೇಶ. ಅಷ್ಟೇ ಅಲ್ಲ. ಚಿತ್ರ ತೆಗೆಯುವಾಗ ಕ್ಯಾಮರಾವನ್ನು ನಾನು ಫೋಕಸ್ ಮಾಡುವುದು ನಾನು ಆಯ್ಕೆ ಮಾಡಿಕೊಂಡಿರುವ ವ್ಯಕ್ತಿಯ ಕಣ್ಣುಗಳ ಮೇಲೆ. ಕಣ್ಣುಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಸಮಗ್ರವಾಗಿ ಬಿಂಬಿಸುತ್ತವೆ."

*"ಕ್ಯಾಮೆರಾ ಏನು ಮಾಡೀತು? ಅದೊಂದು ನಿರ್ಜೀವ ಯಂತ್ರವಷ್ಟೆ! ಮನುಷ್ಯನ ಕಣ್ಣಿನಷ್ಟೇ ಕೆಲಸ ಮಾಡಿದರೂ- ಕಣ್ಣಿನ ಚತುರತೆ, ಚಾಕಚಕ್ಯತೆ ಅದಕ್ಕೆ ಬಾರದು. ಹಾಗಾಗಿ ಕ್ಯಾಮೆರಾ ಹಿಂದಿರುವ ಕಣ್ಣು ಮುಖ್ಯ"

*"ಈ ಆಗಿ ಹೋದ ಕೆಲಸ ನನ್ನಿಂದಾಗಿದೆ ಎನ್ನುವುದು ತಪ್ಪು. ಮಹನೀಯ ಜಿ.ವೆಂಕಟಾಚಲಂ ನನ್ನ ಬದುಕಿನಲ್ಲಿ ಬಾರದೇ ಹೋಗಿದ್ದರೆ ಬಹುಶ: ಈ ಕೆಲಸ ನನ್ನಿಂದಾಗುತ್ತಿರಲಿಲ್ಲವೇನೋ? ಅದೊಂದು ಯೋಗಾಯೋಗ. ನಾನು ಕಷ್ಟಪಟ್ಟಿದ್ದು ನಿಜ. ಆದರೆ ಅದನ್ನು ಸಾಬೀತುಮಾಡುವ ಮನಸ್ಸು ನನಗಿಲ್ಲ".

*"ನಮ್ಮ ಕನ್ನಡಿಗರು ಕೊಂಡು ಕೊಳ್ಳುವುದು ಬೇಡ. ಬಂದು ನೋಡಿದರೆ ಸಾಕು. ನನಗೆ ತೃಪ್ತಿ ಇದೆ. ಜನ ಸೋಮಶೇಖರ್ ಬಗ್ಗೆ ಬಹಳ ಮಾತನಾಡುತ್ತಾರೆ. ಆತ ಏನಾದರೂ ತೆಗೆದಿದ್ದಾನೆ ನೋಡೋಣ ಎಂಬ ಚಿಕಿತ್ಸಕ ಬುದ್ಧಿಯೂ ನಮ್ಮ ಜನಕ್ಕಿಲ್ಲ. ಕೊನೆಯ ಪಕ್ಷ ನನ್ನನ್ನಾದರೂ ಒರೆಗೆ ಹಚ್ಚಬಹುದಲ್ಲ!"

ಸತತ ೪ ದಿನಗಳು ತಾಳ್ಮೆ ಇಟ್ಟುಕೊಂಡು ಕೆ.ಜಿ.ಎಸ್.ಕ್ಲಿಕ್ಕಿಸಿರುವ ಫೋಟೊ ನೋಡುತ್ತೇನೆ ಎಂದರೂ, ನಮ್ಮ ತಾಳ್ಮೆ ತೀರೀತು ವಿನ: ಸೋಮಶೇಖರ್ ಸರ್ ಅಲ್ಬಂ ತೀರುವುದಿಲ್ಲ. ನೋಡುತ್ತಲೇ ದಿನಗಳು ರಾತ್ರಿಯಾಗಿ, ರಾತ್ರಿಗಳು ಹಗಲಾಗಿ ಉರುಳಿ ಬಿಡಬಹುದು. ಹಾಗಿದೆ ಅವುಗಳ ಪ್ರಭಾವಳಿ!