ಜಗನ್ಮಾತೆಗೆ ನಮನ
ತಾಯೆ,ಲೋಕದ ತಾಯೆ,ಶಾಂಭವಿ
ಮಾಯೆ,ನಿರ್ಜರಪೂಜಿತೆ
ಕಾಯೆ,ಕರುಣದಿ ನನ್ನ ಕವಿತಾ-
ಪಾಯಸವ ಸ್ವೀಕರಿಸುತೆ [೧]
ಮುಕ್ತಿದಾಯಕಿ ಶಕ್ತಿರೂಪಿಣಿ
ರಕ್ತಬೀಜವಿನಾಶಿನಿ
ರಕ್ತವಸ್ತ್ರಾವಲಿಸುಶೋಭಿತೆ
ಭಕ್ತಹೃದಯನಿವಾಸಿನಿ [೨]
ಸೃಷ್ಟಿಪಾಲನ ನಾಶಕಾರಿಣಿ
ಅಷ್ಟಭುಜಪರಮೇಶ್ವರಿ
ದುಷ್ಟಶಿಕ್ಷಕಿ ಕಷ್ಟನಾಶಕಿ
ಶಿಷ್ಟರಕ್ಷಣ ತತ್ಪರೆ [೩]
ನಿರ್ಗುಣಾತ್ಮಕಿ ನಿರ್ವಿಕಾರಕಿ
ಅರ್ಗಲಾಸ್ತವ ಸಂಸ್ತುತೇ
ಭರ್ಗನರಸಿ ಕಪಾಲಿ ಸುಲಲಿತೆ
ದುರ್ಗೆ,ಮತ್ಕುಲದೇವತೆ [೪]
ಅಂಬುರುಹದಲನೇತ್ರೆ,ವೈಷ್ಣವಿ
ಶುಂಭಮಹಿಷನಿಷೂದಿನಿ
ಶಂಭುಹರಿಕಮಲಾಸನಾರ್ಚಿತೆ
ಅಂಬೆ,ಕೇಸರಿವಾಹಿನಿ [೫]
ನೀನೆ ಜಗದಧಿದೇವಿ ಧಾರಿಣಿ
ನೀನೆ ಶಾರದೆ ಲಕ್ಷ್ಮಿಯು
ನೀನೆ ಹಿಮಗಿರಿಜಾತೆ,ಚಿನ್ಮಯಿ
ನೀನೆ ಭಾರತಮಾತೆಯು [೬]
ಯಾವ ಬಗೆಯಲಿ ನಿನ್ನ ತಿಳಿಯಲಿ
ಯಾವ ವಾಕ್ಯದಿ ಹೊಗಳಲಿ
ದೇವದುರ್ಲಭೆ ನಿನ್ನನೀ ಪರಿ
ಸೇವಿಸುವೆನೀ ದಿನದಲಿ [೭]
ಮಾತೆ,ನಿನಗಿದೊ ನಮಿಪೆ ನಿನ್ನಯ
ಜಾತರೆಮ್ಮನು ಸಂತತ
ಪ್ರೀತಿಯಿಂ ಕಾಪಾಡು ಸದಮಲ
ನೀತಿ ಮಾರ್ಗದಿ ನಡೆಸುತ [೮]
[ಕಾಸರಗೋಡು ತಾಲೂಕು ಕುಡಾಲು ಬಾಡೂರು ಎಂಬ ಜೋಡು ಗ್ರಾಮಗಳ ಮುಖ್ಯ ಆರಾಧನಾಲಯ ಕಂಬಾರು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಬ್ರಹ್ಮಕಲಶೋತ್ಸವ ೧೯೮೬ರಲ್ಲಿ ಜರಗಿತ್ತು.ಆ ಸಂದರ್ಭದಲ್ಲಿ ನಾನು ಬರೆದ ಈ ಕೃತಿ ಅಲ್ಲಿನ ಸ್ಮರಣ ಸಂಚಿಕೆ 'ಶ್ರೀ ಮಾತಾ'ದಲ್ಲಿ ಅಚ್ಚಾಗಿತ್ತು. ನವರಾತ್ರಿಯ ಶುಭಾವಸರದಲ್ಲಿ ಇದನ್ನು ಸಂಪದದ ಓದುಗರಿಗೆ ಶುಭಾಶಯ ಸಹಿತ ಅರ್ಪಿಸುತ್ತಿದ್ದೇನೆ.]
Comments
ಉ: ಜಗನ್ಮಾತೆಗೆ ನಮನ