ಜಯಂತ್ ಕಾಯ್ಕಿಣಿ ಕಣ್ಣಲ್ಲಿ ತೇಜಸ್ವಿ - ಭಾಗ ೨

ಜಯಂತ್ ಕಾಯ್ಕಿಣಿ ಕಣ್ಣಲ್ಲಿ ತೇಜಸ್ವಿ - ಭಾಗ ೨

ಬರಹ

ಇನ್ನು ತೇಜಸ್ವಿಯವರ ಹ್ಯೂಮರ್ ಇದೆಯಲ್ಲಾ ಅದು ಭಾಳಾ ಕಷ್ಟವಾದ ಹ್ಯೂಮರ್. ಕರ್ವಾಲೋದಲ್ಲಿ ಅವರ ನಾಯಿ ಕಿವಿ ಬಗ್ಗೆ ಪ್ರಸ್ತಾಪ ಬರುತ್ತೆ. “ಅದು ಗರಂ ಮಸಾಲಾ ವಾಸನೆಗೆ ತನ್ನ ಸ್ವಾಭಿಮಾನವನ್ನೆಲ್ಲಾ ಕಳೆದುಕೊಂಡು ಬಾಲ ಮುದುರುಸಿಕೊಂಡು ಕಿವಿಗಳನ್ನ ಜೋಲಿಸಿಕೊಂಡು ಓಡಾಡ್ತಾ ಇತ್ತು” ಅಂತ, ಇದನ್ನ ವಿಶ್ಯುಯಲೈಸ್ ಮಾಡೋದು ಭಾಳಾ ಕಷ್ಟ. ಹೋದ ವರ್ಷ ಏನಾಯ್ತು, ಅವರ ಕೃಷ್ಣೇಗೌಡನ ಆನೆ ಕಥೆಯನ್ನ ಸಿನಿಮಾ ಮಾಡ್ಬೇಕು ಅಂತ ನಮ್ಮ ಗಾಂಧಿ ನಗರದ ನಿರ್ಮಾಪಕರಿಗೆ ಭಾಳಾ ಆವೇಶ ಬಂದು ಬಿಡ್ತು. ಅವರು ನನಗೆ ಸ್ಕ್ರಿಪ್ಟ್ ಬರೀಬೇಕು ಹಾಗೆ-ಹೀಗೆ ಅಂತ ಫೋನ್ ಮಾಡಿದ್ರು. ನಾನು ತಕ್ಷಣ ತೇಜಸ್ವಿಯವರಿಗೆ ‘ಸಾರ್ ಸ್ವಲ್ಪ ಡೇಂಜರು ಈಗ, ಕೃಷ್ಣೇಗೌಡರ ಆನೆ ಮೇಲೆ ಗಾಂಧಿನಗರದವರ ಕಣ್ಣು ಬಿದ್ದಿದೆ, ಆನೆ ಮೇಲೆ ಮಲ್ಲಿಕಾ ಶೆರಾವತ್ತನ್ನ ಕೂರಿಸಿ ಹಾಡೂ-ಗೀಡೂ ಬಂದ್ರೂ ಬರಬಹುದು ನೀವು ಸ್ವಲ್ಪ ಕೇರ್ ಫುಲ್ಲಾಗಿರಿ’ ಅಂದೆ, ಅದಕ್ಕವರು ‘ಹೌದು ಮಾರಾಯ ನಿಜ ನೀನು ಹೇಳೋದು ಅಂದ್ರು.’

ಆ ಸಂದರ್ಭದಲ್ಲಿ ನಾನು ಅವರಿಗೆ ಹೇಳ್ದೆ “ ಸಾರ್ ನಿಮ್ಮ ಹ್ಯೂಮರ್ ಭಾಳಾ ವಿಶಿಷ್ಟವಾದದ್ದು, ಉದಾಹರಣೆಗೆ ‘ಮಂದಣ್ಣ ಒಂದೇ ರಾತ್ರೀಲಿ ಕಿರೀಟ ಬಿದ್ದು ಹೋದ ರಾಜನಂತೆ ನಡೆದು ಹೋದನು’ ಅಂತ ಇರುತ್ತೆ ಇದನ್ನ ವಿಶುಯಲೈಸ್ ಮಾಡೋಕೆ ಏನ್ಮಾಡ್ತೀರಿ? ಅದು ಲಿಟರರಿ ಹ್ಯೂಮರ್ರು. ಕಾನೂರು ಹೆಗ್ಗಡಿತೀಲಿ ಬರೋ ಹ್ಯೂಮರ್ ಸಹ ಇದೇ ತರವಾದದ್ದು. ಅದು ಪಾಪ ಪಾಂಡು, ಸಿಲ್ಲಿ ಲಲ್ಲೀಲಿ ಬರೋ ಹ್ಯೂಮರ್ ತರದ್ದಲ್ಲ, ನೀವು ಅಂತವರ ಕೈಗೆ ಕೊಟ್ರೆ ಕಷ್ಟ’ ಅಂತ. ಅದು ತೇಜಸ್ವಿಯವರಿಗೂ ಗೊತ್ತಿತ್ತು ಅನ್ಸುತ್ತೆ
“ಹೌದಪ್ಪ ಅದು ಅವರಿಗೂ ಗೊತ್ತಾಗಿ ಬಿಟ್ ಬಿಡ್ತಾರೆ ಬಿಡು ಕಾಳಜಿ ಮಾಡ್ಬೇಡ’ ಅಂದ್ರು, ಹಾಗೇ ಆಯ್ತು, ಕೃಷ್ಣೇಗೌಡನ ಆನೇನೂ ಬಚಾವಾಯ್ತು, ಮಲ್ಲಿಕಾ ಶರಾವತ್ತೂ ಬಾಚಾವಾದ್ಲು.

ತೇಜಸ್ವಿಯವರಿಗೆ ಸಿನಿಮಾ ಮಾಧ್ಯಮದಲ್ಲಿ ವ್ಯಾಮೋಹ ಇರ್ಲಿಲ್ಲ. ಬದಲಿಗೆ ಅವರಿಗೆ ಚಿತ್ರಗಳಲ್ಲಿ ಆಸಕ್ತಿ, he was interested in more images, ಒಂದೊಂದು ಹಕ್ಕಿ ಬಗ್ಗೆ ಮೂರು-ಮೂರು ವಾರ ಕಾದು ಚಿತ್ರ ತೆಗೆಯೋವಷ್ಟು ಚಿತ್ರ ವ್ಯಾಮೋಹಿ ಅವರು. ಬಿಂಬಗಳ ವ್ಯಾಮೋಹಿ, ಪ್ರತಿಮೆಗಳ ವ್ಯಾಮೋಹಿ. ಅವರಿಗೆ ಚಲಿಸುವ ಚಿತ್ರಗಳಲ್ಲಿ- ಮೂವಿಂಗ್ ಇಮೇಜ್‌ಗಳಲ್ಲಿ ಯಾಕೆ ಆಸಕ್ತಿ ಇರ್ಲಿಲ್ಲ? ಕೇಳ್ದೆ, ಅದಕ್ಕವರು ಸರಳವಾಗಿ ಉತ್ತರ ಕೊಟ್ರು “ಈ ಜನಗಳನ್ನ ಕಟ್ಕೊಂಡು ಕೆಲಸ ಮಾಡೋದು ಭಾಳಾ ಕಷ್ಟ ಮಾರಾಯ”. ಅವರಿಗೆ ಈ ಮ್ಯಾನ್ ಮ್ಯಾನೇಜ್‌ಮೆಂಟ್ ಮತ್ತು ಮನಿ ಮ್ಯಾನೇಜ್‌ಮೆಂಟ್ ಬಹಳ ಕಷ್ಟದ ಕೆಲಸ, ಇರುಸು-ಮುರುಸಿನ ಕೆಲಸ. “ ನಾವು ಹೇಳಿದ್ದು ಅವರು ಅರ್ಥ ಮಾಡ್ಕೋಬೇಕು, ಅದನ್ನ ಅವರು ಎಕ್ಸಿಕ್ಯೂಟ್ ಮಾಡ್ಬೇಕು, ಇದೆಲ್ಲಾ ಅಗೋದಲ್ಲ ಹೋಗೋದಲ್ಲ ಎಷ್ಟಾದರೂ ನನ್ನ ಕ್ಯಾಮಾರಾ ನಾನು, ನನ್ನ ಪುಸ್ತಕ ನಾನು” ಅಂತ ಇದ್ದ ಮನುಷ್ಯ ಅವರು.

ಆದ್ರೆ ತೇಜಸ್ವಿಯವರ ಮಾನವೀಯ ಅಂತಃಕರಣ ಎಂಥಾದ್ದು ಅಂತ ಅವರನ್ನ ಬಲ್ಲವರಿಗೆಲ್ಲಾ ಗೊತ್ತು. ನನ್ನ ವೈಯಕ್ತಿಕ ಉದಾಹರಣೆ ಹೇಳೋದಾದ್ರೆ. ಬೆಂಗಳೂರಲ್ಲಿ ಒಂದು ಪುಸ್ತಕ ಬಿಡುಗಡೆ ಸಮಾರಂಭ- ಈ ಬೆಂಗಳೂರಲ್ಲಿ ಪ್ರತಿ ಶುಕ್ರವಾರ ಸಿನಿಮಾಗಳು ಬಿಡುಗಡೆ ಆಗ್ತವೆ, ಪ್ರತಿ ಭಾನುವಾರ ಪುಸ್ತಕಗಳು ಬಿಡುಗಡೆ ಆಗ್ತವೆ, ಅದು ನಿರಂತರವಾದ ಪಾಪಕಾರ್ಯ. ಹಾಗೇ ಒಂದು ಸಂಡೇ ನನ್ನ ಪುಸ್ತಕ ಬಿಡುಗಡೆ ಆಗಬೇಕಾದರೆ ಹಾಲ್ ನ ಕೊನೆಯ ಬೆಂಚುಗಳಲ್ಲಿ ಜನರ ಗಡಿ-ಬಿಡಿ ಶುರುವಾಯ್ತು, ನೋಡಿದ್ರೆ ತೇಜಸ್ವಿಯವರು ಮತ್ತು ಅವರ ಹೆಂಡ್ತಿ ಲಾಸ್ಟ್ ರೋನಲ್ಲಿ ಕೂತು ಬಿಟ್ಟಿದ್ದಾರೆ. ನನಗೆ ಈ ಪೌರಾಣಿಕ ನಾಟಕಗಳಲ್ಲಿ ದೇವರು ಪ್ರತ್ಯಕ್ಷ ಆಗೋದು ನೋಡಿದ್ದೀನಿ,. ಆದರೆ ನಮ್ಮ ಸಾಮಾಜಿಕ ನಾಟಕಗಳಲ್ಲಿ ಖುದ್ದಾಗಿ ನಮ್ಮ ಆರಾಧ್ಯ ದೈವ ಪ್ರತ್ಯಕ್ಷ ಆಗಿದ್ದು ನನಗೆ ನಂಬೋಕೆ ಆಗ್ಲಿಲ್ಲ.

ಆಗ ಅವರು ಟ್ರೀಟ್‌ಮೆಂಟಿಗಾಗಿ ಬೆಂಗಳೂರಲ್ಲಿದ್ರು, ‘ನಗರದಲ್ಲಿ ಇಂದು’ ಕಾಲಂನಲ್ಲಿ ನನ್ನ ಪುಸ್ತಕ ಬಿಡುಗಡೆ ಇರೋದು ನೋಡಿ ಬಂದಿದ್ರು, ನೀವೆಲ್ಲ ಇಲ್ಲಿ ಸಿಕ್ತೀರಿ ಅಂತ ಗೊತ್ತಿತ್ತು, ಯುವಕರನ್ನೆಲ್ಲಾ ನೋಡ್ಬೇಕು ಅಂತ ಆಸೆ, ನಿಮ್ಮನ್ನೆಲ್ಲಾ ನೋಡಿದ್ರೆ ಹುಮ್ಮಸ್ಸು ಬರುತ್ತೆ ಅಂತ ಹೇಳಿದ್ರು. ಇದು ನಾನು ಕಂಡಂತ ಹೊಸ ಚೈತನ್ಯ, ಉಡಾಫೆ ಹಾಗೆ-ಹೀಗೆ ಅಂತ ಇರ್ಲಿಲ್ಲ ಅವರಿಗೆ. ಯಾರು ಅವರನ್ನ ಹುಡುಕಿಕೊಂಡು ಮೂಡಿಗೆರೆಗೆ ಹೋಗ್ತಾ ಇದ್ರೋ ಅವರನ್ನ ಬಹಳ ಪ್ರೀತಿಯಿಂದ ನೋಡ್ಕೋಳ್ತಾ ಇದ್ರು.

ತೇಜಸ್ವಿಯವರ ಸಾಹಿತ್ಯದ ಬಗ್ಗೆ ಹೇಳೋದಾದ್ರೆ, ಅವರ ಸಾಹಿತ್ಯದ ದೊಡ್ಡ ಗುಣ, ವಿಶೇಷ ಗುಣ ಅಂದ್ರೆ ಅದು ಅಸಾಹಿತ್ಯಕವಾಗಿರೋದು. ನಮ್ಮಲ್ಲಿ ದೊಡ್ಡ ಪಿಡುಗು ಏನಿದೆ ಅಂತದ್ರೆ. ಇಂತಿಂಥಾ ವಸ್ತುಗಳೇ ಸಾಹಿತ್ಯ ಆಗ್ಬೇಕು ಅಂತ ಕೆಲವರು ಅಂದ್ಕೊಂಡಿರ್ತಾರೆ, ಅದಲ್ಲ, ನಿಜವಾಗಿ ಸಾಹಿತ್ಯಕ್ಕೆ ಪ್ರೇರಣೆ ಆಗೋದು, ಸಾಹಿತ್ಯಕ್ಕೆ ಅಂತಃಸತ್ವ ಕೊಡೋದು ಅಸಾಹಿತ್ಯಕ ವಸ್ತುಗಳೇ. ಒಬ್ಬ ಮಂದಣ್ಣ ಇರಬಹುದು, ಒಬ್ಬ ತುಕ್ಕೋಜಿ ಇರಬಹುದು, ಇಂತಹ ಪಾತ್ರಗಳು ಒಂದು ಸೈಕಲ್ ಶಾಪ್‌ನಿಂದ, ಊರಿನ ಗೂಡಂಗಡಿಯಿಂದ, ಬಸ್ ಸ್ಟಾಂಡ್ ನಿಂದ ರಕ್ತ ಮಾಂಸಗಳೊಂದಿಗೆ ನಮ್ಮ ಸಾಹಿತ್ಯ ಕ್ಷೇತ್ರಕ್ಕೆ ನಡಕೊಂಡು ಬಂದಿದ್ದು ತೇಜಸ್ವಿಯವರ ಕೃತಿಗಳಲ್ಲಿ.

ಕರ್ವಾಲೋದಂತಹ ಕೃತಿ ಮತ್ಯಾವ ಭಾಷೆಯಲ್ಲೂ ಇಲ್ಲ. ಅ ಕೃತಿಯ ಕಂಪನಗಳು ಆ ರೀತಿ ಇವೆ. ಆ ಕೃತಿಯ ಕೊನೆಯಲ್ಲಿ ಹಾರುವ ಓತಿಗಾಗಿ ಇಡೀ ಕಾದಂಬರಿ ಹೋಗುತ್ತೆ, ಇನ್ನೇನು ಸಿಕ್ತು-ಸಿಕ್ತು ಅನ್ನೋವಾಗ ಆ ಓತಿಕ್ಯಾತ ಹಾರಿ ಹೋಗ್ಬಿಡುತ್ತೆ, ಕಾದಂಬರಿಯ ಕ್ಲೈಮಾಕ್ಸ್ ಪಾಯಿಂಟ್ ಎಲ್ಲಿ ಅಂತಂದ್ರೆ, ಆ ಕರ್ವಾಲೋ ಸೈಂಟಿಸ್ಟ್ ಹೇಳ್ತಾನೆ “ಆಯ್ತು ಮುಂದಿನ ವರ್ಷ ಬರೋಣ” ಅಂತ. ಅಂದ್ರೆ ಇಡೀ ಕಾದಂಬರಿ ಯಾವುದನ್ನ ಹುಡುಕಿಕೊಂಡು ಹೊರಟಿತ್ತು ಆ ಅಗೋಚರವಾದ, ಅಮೂರ್ತವಾದ, ಅಲೌಕಿಕವಾದ ಒಂದು ಕ್ಷಣ ಅದನ್ನ ಹಿಡಿಯೋ ಹೊತ್ತಿನಲ್ಲಿ, ಅದು ಹಾರಿ ಹೋಯ್ತು. ಹಾಗೆ ಹೋದದ್ದರ ಬಗ್ಗೆ ನೋವು, ನಿರಾಸೆ, ಹಳಹಳಿಕೆ ಏನೂ ಇಲ್ಲದೇನೆ, ಮತ್ತೆ ಮುಂದಿನ ವರ್ಷ ಹುಡುಕೋಣ ಅಂತ ಕರ್ವಾಲೋ ಹೇಳ್ತಾರಲ್ಲ ಅದು ಆದ್ಯಾತ್ಮಿಕವಾದಂತ ಪಾಯಿಂಟ್ ಮತ್ತು ಆ ಪಾಯಿಂಟ್‌ನ ಹಿಂದೆ ಇಡೀ ಕಾದಂಬರಿಯ ಓದು ಇದೆ.

ಹೀಗಾಗಿ ನಾವು ನಮ್ಮದೇ ಸಲಕರಣೆಗಳಲ್ಲಿ ಇದು ಎಷ್ಟು ಸಾಮಾಜಿಕ, ಇದು ಎಷ್ಟು ಆಧ್ಯಾತ್ಮಿಕ, ಎಷ್ಟು ಲೌಕಿಕ, ಎಷ್ಟು ಅಲೌಕಿಕ ಅನ್ನುವುದರಲ್ಲಿ ಅದೆಲ್ಲವನೂ ಮುರಿಯುವಂತಹ, ಇದು ‘ಇದು’ ಎಂದು ಹೇಳುವಷ್ಟರಲ್ಲಿ ಎಲ್ಲವನ್ನೂ ಮೀರುವಂತಹ ಒಂದು ದೊಡ್ಡ ಕ್ಯಾನ್ವಾಸು ತೇಜಸ್ವಿಯವರದಾಗಿತ್ತು. ಅವರ ನಕಾಶೆ ಸಣ್ಣದಾಗಿರಲಿಲ್ಲ. ಅವರ ನಕಾಶೆ ಕೇವಲ ಮೂಡಿಗೆರೆ, ಚಿಕ್ಕಮಗಳೂರು, ಕರ್ನಾಟಕ ಅಥವಾ ಭಾರತ ದೇಶದ ನಕಾಶೆ ಅವರ ಸಾಹಿತ್ಯದ ಆವರಣಕ್ಕಿರಲಿಲ್ಲ. ಅದು ಸ್ಥಾವರವನ್ನು ಮೀರಿದುದಾಗಿತ್ತು. ಅತ್ಯಂತ ವ್ಯಾಪಕವಾಗಿತ್ತು. ಅವರದು ಒಂದು ಅಧ್ಯಾತ್ಮಿಕ ತುಡಿತ. ಅದನ್ನ ಹೇಳಿದರೆ ತುಂಬಾ ಸಣ್ಣದು ಅನಿಸುತ್ತೆ. ತೇಜಸ್ವಿಯವರ ಪ್ರತಿಯೊಂದು ಶಬ್ದಗಳ ಹಿಂದೆ, ಪ್ರತಿಯೊಂದು ಚಿತ್ರಗಳ ಹಿಂದೆ ಅದು ಕೆಲಸ ಮಾಡಿದೆ. ಯಾಕಂದ್ರೆ ಅವರು ಮಾತಡೊವಾಗೆಲ್ಲಾ ಎನಿಗ್ಮಾಟಿಕ್ ಅನ್ನೋ ಶಬ್ದ ಯೂಸ್ ಮಾಡ್ತಿದ್ರು. ‘ಹೀಗ್ಮಾಡ್ಬಿಡಪ್ಪ ಎನಿಗ್ಮ್ಯಾಟಿಕ್ ಆಗಿರುತ್ತೆ’ ಅನ್ನೋರು. ಈ ಎನಿಗ್ಮಾ ಅನ್ನೋದು ಒಂದು ಅಮೂರ್ತವಾದದ್ದು, ಒಂದು ಪ್ರಭೆ ಥರ ಇರುವಂತದ್ದು.

ಅವರ ‘ನಿಗೂಢ ಮನುಷ್ಯರು’ ಅನ್ನೋ ಕತೆಯಲ್ಲಿ ಒಂದು ಹೆಣ್ಣು ಪಾತ್ರ ಬರುತ್ತೆ. ಇಡೀ ಕತೆಯಲ್ಲಿ ಅದು ಮಾತೇ ಆಡೊದಿಲ್ಲ, ಬಡಿಸ್ತಾಳೆ ಹೋಕ್ತಾಳೆ. ಬರ್ತಾಳೆ ಹೋಗ್ತಾಳೆ, ಆದ್ರೆ ಆ ಮೌನವೇ ಬಹಳ ಕರ್ಕಶವಾಗಿ ನಮ್ಮ ಕಿವಿಗೆ ಬೀಳೋ ಥರ ಅನಿಸುತ್ತೆ. ಆ ಕತೆ ಓದಿ ೩೦ ವರ್ಷ ಆಗಿದೆ, ನನಗೆ ಆ ಕತೆಯಲ್ಲಿ ಯಾವ ಸದ್ದುಗಳೂ ನೆನಪಿಲ್ಲ. ಕತೆಯಲ್ಲಿ ಏನೇನೋ ಸದ್ದು ಆಗುತ್ತೆ, ಭೂಕಂಪದ ಸದ್ದು, ಕಲ್ಲುಗಳು ಬೀಳೋ ಸದ್ದು ಇತ್ಯಾದಿ. ಆದರೆ ಇವತ್ತೂ ನನಗೆ ಕಾಡೋದು ಆ ಹೆಣ್ಣು ಪಾತ್ರದ ಮೌನ. ಮಾತಾಡದ ಮೌನ ಅದು. ಅಂದ್ರೆ ಅದು ಮಾತಾಡ್ಬೇಕು ಆಡ್ತಿಲ್ಲ. ಮಾತಾಡ್ದೇ ಇರೋರು ಮಾತಾಡ್ದೇ ಇದ್ದಾಗ ಅದು ನಮಗೆ ಕಾಡೊದಿಲ್ಲ, ಆದ್ರೆ ಮಾತಾಡ ಬೇಕಾದವರು ಮಾತಾಡ್ದೇ ಇದ್ದಾಗ ಅಲ್ಲೊಂದು ಮೌನ ಇರುತ್ತೆ, ಆ ಮೌನ ನಮ್ಮನ್ನ ಕಾಡುತ್ತೆ.

ಇಂತಹ ತೇಜಸ್ವಿಯನ್ನ ನಾವು ನಮ್ಮ ಸಾಹಿತ್ಯಿಕ, ಸಾಮಾಜಿಕ, ರಾಜಕೀಯ ಪರಿಭಾಷೆಯ ಚೌಕಟ್ಟಿನಲ್ಲಿ ಹಾಕಿ ವಿಶ್ಲೇಷಣೆ ಮಾಡೋದಕ್ಕಿಂತ, ಒಟ್ಟಂದದಲ್ಲಿ, ಬದುಕಿನ ಕುರಿತಾದ ಒಂದು ವ್ಯಾಪಕವಾದ ನೋಟವನ್ನ ವಿಸ್ತರಿಸಿಕೊಳ್ಳೋದಿಕ್ಕೆ ಸಹಾಯಕವಾಗಿ ಅವರನ್ನ ಓದಬೇಕು. ಹೊಸ ತಲೆಮಾರಿನ ಹುಡುಗರಿಗೆ ಬೇಕಾದಂತ ಸಾಹಿತ್ಯವನ್ನೇ ತೇಜಸ್ವಿ ಕೊಟ್ಟಿರೋದು, ಯಾವ ಭಯಂಕರವಾದಂತ, ಕ್ಲಿಷ್ಟವಾದಂತ ಸಾಹಿತ್ಯವನ್ನ ಅವರು ರಚನೆ ಮಾಡಿಲ್ಲ. ತುಂಬಾ ಮಾನವೀಯವಾದಂತಹ ಮತ್ತು ಇವಾಲ್ವಿಂಗ್ ಕ್ವಾಲಿಟಿ ಇರುವಂತಹ - see ಒಂದು ಸಾಹಿತ್ಯ ಹೇಗಿರುತ್ತೆ ಅಂದ್ರೆ ಅದು ತನ್ನ ಪಾಡಿಗೆ ಒಂದು ಇವಾಲ್ವಿಂಗ್ ಪ್ರೊಸೆಸ್‌ನಲ್ಲಿರುತ್ತೆ, ಲೇಖಕನ ಇವಾಲ್ವಿಂಗ್ ಪ್ರೊಸೆಸ್ಸೂ ಒಂದಿರುತ್ತೆ, ಓದುಗನ ಇವಾಲ್ವಿಂಗ್ ಪ್ರೊಸೆಸ್ಸೂ ಒಂದಿರುತ್ತೆ. ಈ ಎರಡರ ಮ್ಯಾಚಿಂಗ್‌ನಲ್ಲಿ ಒಂದು ಸಾಹಿತ್ಯದ ಅನುಭವ ಸೃಷ್ಟಿಯಾಗುತ್ತೆ. ಆ ದೃಷ್ಟಿಯಿಂದ ನೋಡಿದರೆ ಒಂದು ಎವರ್ ಇನ್ವಾಲ್ವಿಂಗ್- ಯಾವಾಗಲೂ ವಿಕಾಸ ಶೀಲವಾದಂತಹ ಸಾಹಿತ್ಯವನ್ನ ತೇಜಸ್ವಿಯವರು ನಮಗೆ ಕೊಟ್ಟು ಹೋಗಿದಾರೆ.

ಆ ಸಾಹಿತ್ಯವನ್ನ, ಆರ್ಟ್ಸು-ಸೈನ್ಸು, ನಗರ-ಪಟ್ಟಣ ಈ ಎಲ್ಲ ರೀತಿಯ ಬೇಧಗಳನ್ನ ಮೀರುವಂತಹ ಒಂದು ವ್ಯಾಪಕವಾದ ನೋಟವನ್ನ ಬೆಳೆಸಿಕೊಳ್ಳೋದಿಕ್ಕೆ ಸಹಾಯಕಾರಿಯಾಗಿ ನಾವು ಬಳಸಿಕೊಳ್ಳಬೇಕು ಮತ್ತು ಹೊಸ ತಲೆಮಾರಿನಲ್ಲಿ ಅದನ್ನ ಬಿತ್ತಬೇಕು.

ಹಾಗೇ ತೇಜಸ್ವಿಯವರ ಕೃತಿಗಳನ್ನ ಎಲ್ಲ ಶಾಲೆಗಳ ಎಲ್ಲ ಮಕ್ಕಳೂ ಓದುವಂತಾಗಲಿ. ಈ ರೀತಿಯಲ್ಲಿರುವ ಜಂಗಮ ಸ್ಮಾರಕಗಳಿಗೆ ನಾವು ಹೋಗಬೇಕಾಗಿರೋದು ಭಾಳಾ ಮುಖ್ಯ. ಹೀಗಾಗದಿದ್ದರೆ ಏನಾಗುತ್ತೆ? ತೀರಿಕೊಂಡ ವ್ಯಕ್ತಿಗಳ ಬಗ್ಗೆ ಕೆಲವು ವಾರ ಅಥವಾ ಕೆಲವು ತಿಂಗಳ ಕಾಲ ಎಲ್ಲಾ ಪತ್ರಿಕೆಗಳಲ್ಲೂ ಎಲ್ಲಾ ವಿಶೇಷಣಗಳ ಮೂಲಕ, ಎಲ್ಲಾ ಉತ್ಪ್ರೇಕ್ಷೆಗಳ ಮೂಲಕ , ತೀರಿಕೊಂಡ ವ್ಯಕ್ತಿಗೇ ಮುಜುಗರವಾಗುವಷ್ಟು ವಿಶೇಷಣಗಳನ್ನ ಹಾಕಿ ನಮ್ಮ ಕೆಲಸ ಆಯ್ತು ಅಂತ ಕೈತೊಳೆದುಕೊಂಡು ಬಿಡ್ತೇವೆ. ತೇಜಸ್ವಿಗೆ ಇದು ಇಷ್ಟವಾಗದ ವಿಷಯ. ಲಂಕೇಶರು ತೀರಿಕೊಂಡಾಗಲೂ ಅವರು ಅಂತ್ಯ ಸಂಸ್ಕಾರಕ್ಕೆ ಹೋಗಲಿಲ್ಲ, ಇದನ್ನ ಜನ ಬೇರೆ-ಬೇರೆ ರೀತಿಯಲ್ಲಿ ಮಾತಾಡಿಕೊಂಡ್ರು. ಅವರವರಿಗೆ ಆಗ್ತಿರಲಿಲ್ಲ ಅದೂ-ಇದೂ ಅಂತ. ಅದು ತೇಜಸ್ವಿಯವರ ವಿಧಾನ. ಅವರು ತಾವಿದ್ದಲ್ಲಿಂದಲೇ ಲಂಕೇಶರನ್ನ ಮನಸ್ಸಿನಲ್ಲಿ ಬೀಳ್ಕೊಟ್ಟರು ಅಷ್ಟೇ. ನಿಜಕ್ಕೂ ನಮಗೆ ಬೇಕಾಗಿರೋದು ತೀರಿಕೊಂಡ ವ್ಯಕ್ತಿಗಳನ್ನ ಹೊಸ ತಲೆಮಾರಿನ ಮನಸ್ಸಿನಲ್ಲಿ ಅಲೆಗಳನ್ನಾಗಿ ಪರಿವರ್ತನೆ ಮಾಡುವ ಕೆಲಸ.

ಶ್ರದ್ಧಾಂಜಲಿ ಅಂದ್ರೆ ಕೆಲಸ ಮುಗೀತು ಅಂತ ಅರ್ಥ, ಒಂದು ಹಾರ ಹಾಕಿ ಮನೆಗೋಗೋದಲ್ಲ, ಆ ಹಾರ ತೆಗೀಬೇಕು ನಾವು. ಹಾಗೆ ತೆಗೆದಾಗ್ಲೇ ಆ ಫೋಟೊ ನಮಗೆ ಹತ್ತಿರವಾಗೋದು. ರಾಜ್‌ಕುಮಾರ್ ಅವರ ಮನೇಲಿ ರಾಜ್‌ಕುಮಾರ್ ಮತ್ತು ವರದಪ್ಪನವರು ಜೊತೆಯಾಗಿರುವ ಅದ್ಭುತವಾದ ಫೋಟೋ ಒಂದಿದೆ. ಆದ್ರೆ ಅದಕ್ಕೆ ಒಂದು ದಪ್ಪವಾದ, ಹೆಬ್ಬಾವಿನಂತಹ ಹಾರ ಹಾಕಿಬಿಟ್ಟಿದ್ರು, ನಾನು ಅವರ ಮಕ್ಕಳಿಗೆ ಆ ಹಾರ ತೆಗೆದುಬಿಡಿ ಅಂತ ಹೇಳ್ದೆ. ತೆಗೆದ್ರು. ಆಮೇಲೆ ಅವರಿಗೇ ಅನಿಸ್ತು, ರಾಘವೇಂದ್ರ ರಾಜ್‌ಕುಮಾರ್ ಅವರು “ಅರೆ ಹೌದಲ್ಲ ನೀವು ಹೇಳಿದ್ದು ಸರಿ ಹಾರ ತೆಗೆದ ಮೇಲೆ ಅವರು ಇಲ್ಲೇ ಇದ್ದಾರೆ ಅನ್ನಿಸ್ತಿದೆ”. ಅಂದ್ರು. ನಾನು ಹೇಳ್ದೆ “they are there, they are still there, they would be still there”. ತೇಜಸ್ವಿಯವರಿಗೂ ಅನ್ವಯಿಸುವ ಮಾತಿದು.

(ತುಮಕೂರಿನ ಗೆಳೆಯರು ಏರ್ಪಡಿಸಿದ್ದ ತೇಜಸ್ವಿ ನೆನಪು ಕಾರ್ಯಕ್ರಮದಲ್ಲಿ
ಜಯಂತ್ ಕಾಯ್ಕಿಣಿಯವರು ಆಡಿದ ಮಾತುಗಳು.)
ಬರಹ ರೂಪ- ಮಲ್ಲಿಕಾರ್ಜುನ ಹೊಸಪಾಳ್ಯ