ಜವಹರಲಾಲ್ ನೆಹರು ವಿಶ್ವವಿದ್ಯಾಲಯ - ವಿವಾದಗಳ ಹುತ್ತ

ಜವಹರಲಾಲ್ ನೆಹರು ವಿಶ್ವವಿದ್ಯಾಲಯ - ವಿವಾದಗಳ ಹುತ್ತ

     'ಜಂಗ್ ರಹೇಗಿ ಜಂಗ್ ರಹೇಗಿ, ಭಾರತ್ ಕಿ ಬರ್ಬಾದಿ ತಕ್'. 'ಜಂಗ್ ರಹೇಗಿ ಜಂಗ್ ರಹೇಗಿ ಕಾಶ್ಮೀರ್ ಕಿ ಆಜಾದಿ ತಕ್', 'ಪಾಕಿಸ್ತಾನ್ ಜಿಂದಾಬಾದ್', 'ಗೋ ಬ್ಯಾಕ್ ಇಂಡಿಯಾ', 'ಭಾರತ್ ತೇರೇ ತುಕಡೇ ತುಕಡೇ ಕರ್ ದೇಂಗೆ', 'ಅಫ್ಜಲ್ ಹಮೆ ಶರ್ಮಿಂದಾ ಹೈ, ತೇರೇ ಕಾತಿಲ್ ಜಿಂದಾ ಹೈ' -  ಇವು ಪಾಕಿಸ್ತಾನದಲ್ಲಿ ಮೊಳಗಿದ ಘೋಷಣೆಗಳಲ್ಲ. ಭಾರತದ ರಾಜಧಾನಿ ದೆಹಲಿಯಲ್ಲಿರುವ ಭಾರತದ ಪ್ರಥಮ ಪ್ರಧಾನಮಂತ್ರಿ ಜವಹರಲಾಲ್ ನೆಹರು ಹೆಸರು ಹೊತ್ತಿರುವ ವಿಶ್ವವಿದ್ಯಾಲಯದಲ್ಲಿನ ವಿದ್ಯಾರ್ಥಿಗಳೆನಿಸಿಕೊಂಡ ಕೆಲವರು ಇತ್ತೀಚೆಗೆ ಮೊಳಗಿಸಿದ ಘೋಷಣೆಗಳು. ಸಂದರ್ಭ, ಸಾಂಸ್ಕೃತಿಕ ಸಂಜೆಯ ಮುಸುಕಿನಲ್ಲಿ ಡಿ.ಎಸ್.ಯು. ಹೆಸರಿನ ವಿದ್ಯಾರ್ಥಿ ಸಂಘಟನೆಯ ಹಳೆಯ ವಿದ್ಯಾರ್ಥಿಗಳು (ಈ ಸಂಘಟನೆ ಆಂತರಿಕ ಕಚ್ಚಾಟದಿಂದ ವಿಭಜನೆಗೊಂಡು ಜೆ.ಎನ್.ಯು.ಎಸ್.ಯು.ನೊಂದಿಗೆ ವಿಲೀನವಾಗಿದೆ)  'ಎ ಕಂಟ್ರಿ ವಿಥೌಟ್ ಪೋಸ್ಟ್ ಆಫೀಸ್' ಎಂಬ ಹೆಸರು ಕೊಟ್ಟು 9.02.2016ರಂದು ಆಯೋಜಿಸಿದ್ದ ಕಾರ್ಯಕ್ರಮ. ಭಾರತದ ಸ್ವಾತಂತ್ರ್ಯದ ಅಸ್ತಿತ್ವದ ಪ್ರತೀಕವಾದ ಲೋಕಸಭೆಯ ಮೇಲಿನ ದಾಳಿಯ ರೂವಾರಿ ಅಫ್ಜಲ್ ಬೇಗ್ ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಮಕ್ಬೂಲ್ ಬಟ್‌ರವರನ್ನು ಉಚ್ಛನ್ಯಾಯಾಲಯದ ಆದೇಶದಂತೆ ಗಲ್ಲಿಗೇರಿಸಿದ್ದ ಕ್ರಮವನ್ನು ಖಂಡಿಸಲಾಗುವುದು ಮತ್ತು ಅವರು ಸತ್ತ ಮೂರನೆಯ ವರ್ಷದ ಸ್ಮರಣೆ ಮಾಡಲಾಗುವುದೆಂದು ಪ್ರಚುರಪಡಿಸಲಾಗಿತ್ತು. ಕಮ್ಯುನಿಸ್ಟ್ ಪಕ್ಷದಲ್ಲಿ ಬೇರು ಇರುವ ಜೆ.ಎನ್.ಯು.ಎಸ್.ಯು. ಸಂಘಟನೆ ಇದಕ್ಕೆ ಬೆಂಬಲ ಕೊಟ್ಟಿತ್ತು. ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಆಡಳಿತ ಅನುಮತಿ ಕೊಟ್ಟಿರಲಿಲ್ಲವೆನ್ನಲಾಗಿದೆ. ನಂತರದ ಬೆಳವಣಿಗೆಗಳು ಎಲ್ಲರಿಗೂ ತಿಳಿದೇ ಇದೆ. ದೇಶದ್ರೋಹದ ಆಪಾದನೆಯ ಮೇಲೆ ವಿದ್ಯಾರ್ಥಿ ನಾಯಕ ಕನ್ನಯ್ಯಕುಮಾರ್ ಬಂಧನವಾಯಿತು. ಕಾರ್ಯಕ್ರಮ ಆಯೋಜಿಸಿದ್ದ ಉಮರ್ ಖಲೀದ್ ಮತ್ತು ಇತರ ಹತ್ತು ಸಹಚರರು ಕಣ್ಮರೆಯಾದರು. ಕನ್ನಯ್ಯಕುಮಾರನ ಬಂಧನವನ್ನು ವಿರೋಧಿಸಿ ಮತ್ತು ಸಮರ್ಥಿಸಿ ದೇಶದ ಹಲವೆಡೆ ಪ್ರತಿಭಟನೆಗಳು ನಡೆದವು. ಬಂಧನವನ್ನು ವಿರೋಧಿಸುವವರ ಪ್ರಮುಖ ಆರೋಪವೆಂದರೆ 'ಸರ್ಕಾರದಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ'!

     1969ರಲ್ಲಿ ಪ್ರಾರಂಭವಾದ ಈ ವಿಶ್ವವಿದ್ಯಾಲಯದಲ್ಲಿ ಈಗ 650 ಬೋಧಕ ಸಿಬ್ಬಂದಿ, 1300 ಬೋಧಕೇತರ ಸಿಬ್ಬಂದಿ ಮತ್ತು 8500 ವಿದ್ಯಾರ್ಥಿಗಳಿದ್ದಾರೆ. ವಿವಿಧ ವಿಷಯಗಳಲ್ಲಿ ಅಧ್ಯಯನ ಮಾಡಲು ವಿವಿಧ ಕೇಂದ್ರಗಳು, ಶಾಲೆಗಳಿವೆ. ವಿಶ್ವವಿದ್ಯಾಲಯದ ಘಟನೆ, ಸಂವಿಧಾನ ರಚನೆ, ನೇಮಕಾತಿ, ಇತ್ಯಾದಿ ವಿಷಯಗಳನ್ನು ನಿರ್ಧರಿಸಿದವರು ಕಮ್ಯುನಿಸ್ಟ್ ವಿಚಾರಧಾರೆಯ ಧುರೀಣರು. ಶ್ರೀ ಪ್ರಕಾಶ್ ಕಾರಟ್ ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ನೆಹರುರವರು ಪ್ರಜಾಪ್ರಭುತ್ವದ ಹೆಸರಿನಲ್ಲಿ ಕಮ್ಯುನಿಸ್ಟರಿಗೆ ನೆಲೆ ಒದಗಿಸಿದರು. ಅವರು ನಂತರದಲ್ಲಿ ಪ್ರಜಾಪ್ರಭುತ್ವವನ್ನೇ ಅಣಕಿಸಿದರು, ಆದದ್ದು ಇಷ್ಟೆ. ಹೀಗಾಗಿ ಅಲ್ಲಿ ಎಡವಿಚಾರಧಾರೆಗೆ ಹೆಚ್ಚಿನ ಪ್ರಾಧಾನ್ಯತೆ, ಮಾನ್ಯತೆ ಸಿಕ್ಕಿದೆ. ಎಡವಿಚಾರಧಾರೆಗೆ ಸೇರಿದ ವಿದ್ಯಾರ್ಥಿಗಳೇ ಅಲ್ಲಿ ಮೇಲುಗೈ ಪಡೆದಿದ್ದಾರೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯಲ್ಲೂ ಅವರುಗಳ ಸಂಖ್ಯೆ ಹೆಚ್ಚಿದೆ. ಎಡವಿಚಾರಧಾರೆ ವಿರೋಧಿಸುವವರನ್ನು ಅಲ್ಲಿ ಮೂಲೆಗುಂಪು ಮಾಡಲಾಗುತ್ತಿದೆಯೆಂಬ ಆರೋಪಗಳಿವೆ. ಭಾರತದ ಇತಿಹಾಸವನ್ನು ತಿರುಚುವಲ್ಲಿ ಅಲ್ಲಿನ ವಿದ್ವಾಂಸರುಗಳು, ಸಂಶೋಧಕರುಗಳು ಕೈ ಆಡಿಸಿದ್ದಾರೆ. ಎಡವೋ, ಬಲವೋ, ಮಧ್ಯವೋ ಯಾವುದೋ ಒಂದು ವಿಚಾರಕ್ಕೆ ಜೋತು ಬೀಳದೆ ವಾಸ್ತವತೆಗೆ ಮಾನ್ಯತೆ, ಎಲ್ಲಾ ವಿಚಾರಗಳ ಪ್ರತಿಪಾದನೆ, ಮಂಡನೆಗೆ ಮುಕ್ತ ಅವಕಾಶ ಸಿಕ್ಕರೆ ಅದನ್ನು ಆದರ್ಶಸ್ಥಿತಿಯೆನ್ನಬಹುದು. ವಿಶ್ವವಿದ್ಯಾಲಯಗಳ, ಶೈಕ್ಷಣಿಕ ಸಂಸ್ಥೆಗಳ ಮೌಲ್ಯಮಾಪನ ಮಾಡುವ ನ್ಯಾಶನಲ್ ಅಸೆಸ್‌ಮೆಂಟ್ ಅಂಡ್ ಅಕ್ರೆಡಿಟೇಶನ್ ಕೌನ್ಸಿಲ್(ನ್ಯಾಕ್) ಈ ವಿಶ್ವವಿದ್ಯಾಲಯಕ್ಕೆ 2012ರಲ್ಲಿ (ಶ್ರೀ ಮನಮೋಹನಸಿಂಗ್ ಪ್ರಧಾನಿಯಾಗಿದ್ದಾಗ, ಶ್ರೀಮತಿ ಸೋನಿಯಾಗಾಂಧಿಯವರ ರಿಮೋಟ್ ಆಡಳಿತವಿದ್ದಾಗ) 4ಕ್ಕೆ 3.9 ಅಂಕ ನೀಡಿತ್ತು. ವಿಶೇಷವೆಂದರೆ ಇಷ್ಟೊಂದು ಅಂಕವನ್ನು ಭಾರತದ ಇನ್ನು ಯಾವುದೇ ವಿಶ್ವವಿದ್ಯಾಲಯಕ್ಕೆ ಕೊಡಲಾಗಿಲ್ಲ! ಇನ್ನೊಂದು ವಿಷಯ ಇಲ್ಲಿ ಪ್ರಸ್ತಾಪಿಸಲೇಬೇಕು. ಇಲ್ಲಿ ಪ್ರತಿ ವಿದ್ಯಾರ್ಥಿಗೆ ರೂ. 3.00 ಲಕ್ಷ ರೂ. ಗಳನ್ನು ಸಬ್ಸಿಡಿ ರೂಪದಲ್ಲಿ ಸರ್ಕಾರ ಭರಿಸುತ್ತಿದೆ. ಒಟ್ಟು ಸುಮಾರು 255 ಕೋಟಿ ರೂ.ಗಳು ಈ ರೂಪದಲ್ಲಿ ವಿನಿಯೋಗವಾಗುತ್ತಿದೆ. ಒಬ್ಬ ವಿದ್ಯಾರ್ಥಿಯ ಬೋಧನಾ ಶುಲ್ಕ ರೂ.217, ವೈದ್ಯಕೀಯ ಶುಲ್ಕ ರೂ.9, ಕ್ರೀಡಾಶುಲ್ಕ ರೂ.16, ಲೈಬ್ರರಿ ಶುಲ್ಕ ರೂ.16, ತಿಂಗಳ ಹಾಸ್ಟೆಲ್ ಶುಲ್ಕ ರೂ.20 ಮಾತ್ರ! ಇಷ್ಟೊಂದು ಸವಲತ್ತುಗಳನ್ನು ಪಡೆಯುವ ವಿದ್ಯಾರ್ಥಿಗಳು ಒಳ್ಳೆಯ ವಿದ್ಯಾರ್ಥಿಗಳಾಗಿ ಹೊರಹೊಮ್ಮಿದರೆ ಸಾರ್ಥಕವಾಗುತ್ತಿತ್ತು. ಬದಲಾಗಿ ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವವರಿಗೆ ಇವರುಗಳು ದಾಳಗಳಾಗಿರುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಇದು ಇತ್ತೀಚಿನ ಬೆಳವಣಿಗೆಯಲ್ಲ, ವಿದ್ಯಾಲಯದ ಹುಟ್ಟಿನಿಂದಲೇ ಬಂದ ಜಾಡ್ಯವಾಗಿದೆ.

     ನೆಹರೂ ವಿಶ್ವವಿದ್ಯಾಲಯ ಹಲವಾರು ವಿವಾದಗಳನ್ನು ಬೆನ್ನಿಗೆ ಅಂಟಿಸಿಕೊಂಡೇ ಬಂದಿದೆ. 1999ರ ಕಾರ್ಗಿಲ್ ಯುದ್ಧದಲ್ಲಿ ಭಾರತ ಪಾಕಿಸ್ತಾನವನ್ನು ಮಣಿಸಿದ್ದುದು ಈಗ ಇತಿಹಾಸ. ಸುಮಾರು 3 ತಿಂಗಳುಗಳ ಕಾಲ ನಡೆದ ಸಂಘರ್ಷದಲ್ಲಿ ಭಾರತದ 527 ಯೋಧರು ಹುತಾತ್ಮರಾಗಿ 1363 ಯೋಧರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಭಾರತ-ಪಾಕಿಸ್ತಾನದ ಸಂಬಂಧಗಳು ಹಳಸಿದ್ದವು. ಇನ್ನೂ ಯುದ್ಧದ ನೆನಪುಗಳು ಮಾಸದಿರುವಾಗಲೇ ಏಪ್ರಿಲ್, 2000ದಲ್ಲಿ ನೆಹರೂ ವಿಶ್ವವಿದ್ಯಾಲಯದವರು ಇಬ್ಬರು ಪಾಕಿಸ್ತಾನದ ಕವಿಗಳನ್ನು, ಅಹಮದ್ ಫರಾಜ್ ಮತ್ತು ಫಾಮಿದಾ ರಿಯಾಜ್, ಆಹ್ವಾನಿಸಿ ಕಾರ್ಯಕ್ರಮ ಏರ್ಪಡಿಸಿದ್ದರು. ಇಬ್ಬರು ಸೇನಾಧಿಕಾರಿಗಳೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾರತವಿರೋಧಿ ಕಲಾಪಗಳಿದ್ದುದನ್ನು ಗಮನಿಸಿದ ಸೇನಾಧಿಕಾರಿಗಳು ಭಾರತವಿರೋಧಿ ಅಂಶಗಳ ಬಗ್ಗೆ ಪ್ರತಿಭಟಿಸಿದರು. ಪ್ರತಿಭಟಿಸಿದ್ದಕ್ಕಾಗಿ ಅವರುಗಳ ಮೇಲೆ ಹಲ್ಲೆ ನಡೆಯಿತು. ಒಬ್ಬರು ಸೇನಾಧಿಕಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದರಿಂದಾಗಿ ಅವರು ಅಲ್ಲಿಂದ ಪಾರಾಗಿ ಬಂದರು. ಇಲ್ಲದಿದ್ದರೆ ಅನುಚಿತ ಘಟನೆ ಸಂಭವಿಸಿಬಿಡುತ್ತಿತ್ತು.

     ಇನ್ನೊಂದು ಘಟನೆ ನೋಡೋಣ. 6.4.2010ರಂದು ಛತ್ತೀಸಘಡ ರಾಜ್ಯದ ದಾಂತೆವಾಡ ಜಿಲ್ಲೆಯ ಚಿಂತಲ್ನಾರ್ ಗ್ರಾಮದ ಬಳಿ ಸುಮಾರು 300 ಜನ ಮಾವೋವಾದಿಗಳ ತಂಡ ಸಿ.ಆರ್.ಪಿ.ಎಫ್. ಜವಾನರು ಹೋಗುತ್ತಿದ್ದ ವಾಹನಗಳನ್ನು ನೆಲಬಾಂಬುಗಳ ಮೂಲಕ ಉಡಾಯಿಸಿಬಿಟ್ಟಿದ್ದರು. ಘರ್ಷಣೆಯಲ್ಲಿ 76 ಪೋಲಿಸರು ಮತ್ತು 8 ಮಾವೋವಾದಿಗಳು ಹತರಾಗಿದ್ದರು. ಮಾವೋವಾದಿಗಳ ಸಶಸ್ತ್ರಹೋರಾಟಕ್ಕೆ ನಾಂದಿಯಾಗಿದ್ದು ಪ.ಬಂಗಾಳದ ನಕ್ಸಲ್ ಬಾರಿ ಗ್ರಾಮದಲ್ಲಾದುದರಿಂದ ಇವರನ್ನು ನಕ್ಸಲರು ಅಂತಲೂ ಕರೆಯುತ್ತಾರೆ. ಆಗ ಇದೇ ಡಿ.ಎಸ್.ಯು. ಸಂಘಟನೆ 'ಜೆ.ಎನ್.ಯು. ಫೋರಮ್ ಅಗೆನೆಸ್ಟ್ ವಾರ್ ಆನ್ ಪೀಪಲ್' ಹೆಸರಿನಲ್ಲಿ ಒಂದು ಸಭೆ ಏರ್ಪಡಿಸಿ ಸಿ.ಆರ್.ಪಿ.ಎಫ್. ಜವಾನರ ಹತ್ಯೆಯನ್ನು ಸಿಹಿ ಹಂಚಿ ಸಂಭ್ರಮಿಸಿದ್ದರು. ಆಗ ಅವರುಗಳು ಕೂಗಿದ್ದ ಘೋಷಣೆಗಳು - 'ಇಂಡಿಯ ಮುರ್ದಾಬಾದ್', 'ಮಾವೋವಾದ್ ಜಿಂದಾಬಾದ್'! ಎಬಿವಿಪಿ ಮತ್ತು ಎನ್.ಎಸ್.ಯು.ಐ. ಸಂಘಟನೆಗಳು ಇದನ್ನು ಪ್ರತಿಭಟಿಸಿದ್ದವು. ದೇಶದ ರಕ್ಷಣಾ ವ್ಯವಸ್ಥೆಯನ್ನು ಹದಗೆಡಿಸಿ ಅರಾಜಕತೆ ಉಂಟುಮಾಡುವವರನ್ನು ಸಮಾನತೆ ಬಯಸುವವರು ಎನ್ನಬಹುದೇ? ವಿದ್ಯಾರ್ಥಿಗಳನ್ನು ಇವರ ಹಸ್ತಕರನ್ನಾಗಿ ಪ್ರಚೋದಿಸುವುದು ವಿಶ್ವವಿದ್ಯಾಲಯದ ವ್ಯವಸ್ಥೆಯ ಭಾಗವೇ ಎಂಬುದು ಚರ್ಚೆಯ ವಿಷಯವಾಗಬೇಕು.

     ನೆಹರು ವಿಶ್ವವಿದ್ಯಾಲಯದಲ್ಲಿ ಈಚೆಗೆ ನಡೆದ ಘಟನೆಯಲ್ಲಿ ಕೇಳಿಬಂದ ದೇಶದ್ರೋಹಿ ಘೋಷಣೆಗಳು, ನಂತರದ ಬೆಳವಣಿಗೆಗಳು, ಪರ-ವಿರೋಧ ಚಳುವಳಿಗಳ ಕುರಿತು ನಡೆದ ಸಂವಾದವೊಂದರಲ್ಲಿ ಮೇಲಿನ ಸಂಗತಿಗಳನ್ನು ಹಂಚಿಕೊಂಡು, ಇಂತಹ ಸಮಸ್ಯೆಗೆ ಪರಿಹಾರವಾಗಿ ಏನು ಮಾಡಬಹುದು ಎಂದು ಪ್ರಶ್ನಿಸಿದಾಗ ಶ್ರೋತೃಗಳು ಹೇಳಿದ್ದು: ನೆಹರು ವಿಶ್ವವಿದ್ಯಾಲಯವನ್ನು ಮುಚ್ಚಬೇಕು, ಅಲ್ಲಿರುವ ಎಲ್ಲಾ ಸಿಬ್ಬಂದಿಯನ್ನು ವರ್ಗಾಯಿಸಬೇಕು, ಬದಲಾಯಿಸಬೇಕು, ಸಬ್ಸಿಡಿ ರದ್ದು ಮಾಡಬೇಕು, ದೇಶದ್ರೋಹದ ಚಟುವಟಿಕೆಗಳು ಕಂಡುಬಂದಾಗ ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಬೇಕು, ಇತ್ಯಾದಿ. ಆದರೆ, ಇವು ಸಮಸ್ಯೆಗೆ ಪರಿಹಾರವಾಗಲಾರದು. ಬದಲಾಗಿ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಲು ವಿರೋಧಿ ಶಕ್ತಿಗಳಿಗೆ ನೆರವಾಗುತ್ತವೆ. ನೆಗಡಿ ಬಂತೆಂದು ಮೂಗನ್ನೇ ಕತ್ತರಿಸಿದರೆ ಆದೀತೆ? ಎಡ, ಬಲ, ಮಧ್ಯಮ, ಇತ್ಯಾದಿ ವಿಚಾರಗಳನ್ನು ಬದಿಗೊತ್ತಿ ಎಲ್ಲಾ ವಿಚಾರಗಳಿಗೂ ಆದ್ಯತೆ ನೀಡುವ ವ್ಯವಸ್ಥೆ ಬರುವಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳು ಯಾವ ಉದ್ದೇಶಕ್ಕಾಗಿ ಅಲ್ಲಿಗೆ ಬರುತ್ತಾರೋ ಆ ಉದ್ದೇಶಕ್ಕಾಗಿ ಗಮನ ನೀಡುವ ವಾತಾವರಣ ಮೂಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ದೇಶದ ಹಿತಕ್ಕೆ ವಿರುದ್ಧವಾದ ಚಟುವಟಿಕೆಗಳಿಗೆ ಆಸ್ಪದವಿರಲೇಬಾರದು. ಹೀಗಾಗಬೇಕೆಂದರೆ ನೈಜ ಕಾಳಜಿಯುಳ್ಳ ಎಲ್ಲರೂ ಈಗಿನ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ರಾಜಕೀಯ ಮತ್ತು ಸ್ವಹಿತಾಸಕ್ತಿಗಳು ನುಸುಳಲೇಬಾರದು.

-ಕ.ವೆಂ.ನಾಗರಾಜ್.    

Comments

Submitted by nageshamysore Wed, 02/24/2016 - 19:41

ಕವಿಗಳೇ ಅದೆಂತೆ ಇರಲಿ - ಪಾರ್ಲಿಮೆಂಟು ಅಧಿವೇಶನಕ್ಕೆ ಕೆಲವು ದಿನ ಮೊದಲೆ, ಹೀಗೆ ಯಾವುದಾದರು ವಿವಾದ ಹುಟ್ಟಿಕೊಳ್ಳುವುದು ಮಾತ್ರ ಪೂರ್ತಿ ಕಾಕತಾಳೀಯ, ಅದರಲ್ಲಿ ಇನ್ನಾವ ಶಕ್ತಿಯ ಕೈವಾಡವೂ ಇಲ್ಲ - ಎಂದು ಗುಬ್ಬಣ್ಣ ಆಣೆ, ಪ್ರಮಾಣ ಮಾಡಿ ಹೇಳುತ್ತಿದ್ದಾನೆ ! :-)

Submitted by ರಾಮಕುಮಾರ್ Thu, 02/25/2016 - 11:06

ಸರ್, ಈ ದೇಶಭಕ್ತಿ ಅನ್ನೋದೆ ವಿಚಿತ್ರವಾದುದು...
1999ರಲ್ಲಿ ಕಾರ್ಗಿಲ್ ಯುದ್ಧ ನಡಿತಲ್ಲಾ… ಅವತ್ತಿಂದಾ ಗಮನಿಸ್ತಾನೇ ಇದ್ದೀವಿ.
ಒಬ್ಬೇ ಒಬ್ಬ ಹುತಾತ್ಮ ಯೋಧನ ಶವದ ಪೆಟ್ಟಿಗೆಯೂ ನಮ್ಮ ದೇಶಭಕ್ತರ ಮನೆಗಳಿಗೆ, ಅಗ್ರಹಾರದ ಬೀದಿಗಳಿಗೆ, ಮಹಾನ್ ದೇಶಭಕ್ತರಾದ ಕೇಶವಕೃಪಾದ ಬಂಧು-ಬಳಗದವರ ಮನೆಗಳಿಗೆ ಇದುವರೆಗೂ ಬರಲೇ ಇಲ್ಲ.

Submitted by kavinagaraj Fri, 02/26/2016 - 12:36

In reply to by ರಾಮಕುಮಾರ್

ರಾಮಕುಮಾರರೇ, ಇಂದು ನಡೆಯತ್ತಿರುವ ವಾದ-ವಿವಾದಗಳು ದಾರಿ ತಪ್ಪುತ್ತಿರುವುದೇ ಇಂತಹ ವಿತಂಡವಾದಗಳಿಂದ! ಯಾರು ದೇಶಭಕ್ತರು, ಯಾರು ಅಲ್ಲ ಎಂಬ ಗಣತಿ ಯಾರಾದರೂ ಮಾಡಿದ್ದಾರೆಯೇ? ಹುತಾತ್ಮ ಯೋಧರ ಜಾತಿ/ಯಾರ ಬೆಂಬಲಿಗರು ಎಂಬುದನ್ನು ನೋಡಿ ಗೌರವಿಸಬೇಕೇ? ಚರ್ಚೆ ದಾರಿ ತಪ್ಪುವುದರಿಂದ ಇದನ್ನು ಮುಂದವರೆಸುವುದಿಲ್ಲ. ಲೇಖನದಲ್ಲಿ ವಿವಿಯಲ್ಲಿ ನಡೆದ ಘಟನಾವಳಿಗಳ ಬಗ್ಗೆ ಚರ್ಚಿಸಿದೆ. ಈ ಕುರಿತು ಪ್ರತಿಕ್ರಿಯಿಸಲು ವಿನಂತಿ. ನೀವು ಹೇಳಬಯಸುವ ವಿಷಯಕ್ಕೆ ಸಂಬಂಧಿಸಿ ನಿಮ್ಮದೇ ಪ್ರತ್ಯೇಕ ವಾದ ಮಂಡಿಸಿ. ಅಲ್ಲಿ ಚರ್ಚಿಸಬಹುದು.

Submitted by ರಾಮಕುಮಾರ್ Fri, 02/26/2016 - 16:11

In reply to by kavinagaraj

ಕವಿ ನಾಗರಾಜರವರೆ, ನಿಮಗೆ ನನ್ನ ಮಾತು ವಿತಂಡವಾದವೆನಿಸಿದರೆ ಅಭ್ಯಂತರವಿಲ್ಲ. ನನ್ನ ನಿಲುವನ್ನು ವಿಷದಪಡಿಸುತ್ತೇನೆ. ಇಂದು ಜಾಲತಾಣದಲ್ಲಿ, ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿರುವ ದೇಶಾಭಿಮಾನದ ಪ್ರದರ್ಶನಾತಿರೇಕ ಪೊಳ್ಳು ಎಂದೇ ನನ್ನ ಎಣಿಕೆ. ನಿಮ್ಮ ಲೇಖನದ ವಾದದ ಒಟ್ಟು premise JNU ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವುದು ನಿಮ್ಮ ನಂಬುಗೆಯ ದೇಶಪ್ರೇಮ ಕಲ್ಪನೆಯಂತಿಲ್ಲದ್ದಿದ್ದರಿಂದ ಉಂಟಾಗುವ ಕಸಿವಿಸಿವಿಂದ ಪ್ರೇರಿತವಾದಂತಿರುವುದರಿಂದ ದೇಶಪ್ರೇಮದ ಮಾತೆತ್ತಿದೆ. ಹುತಾತ್ಮ ಯೋಧರ ಹಿನ್ನೆಲೆಯ ಪ್ರಸ್ತಾಪ ನಿಮ್ಮ moral high ground ಗಾಳಿ ಬಲೂನನ್ನ ಚುಚ್ಚಲಷ್ಟೆ :-)
ಒಂದು ಸಮಾಜದ maturity ಅದು ತನ್ನ critical insidersನ್ನು ಹೇಗೆ ನಡೆಯಿಸಿಕೊಳ್ಳುತ್ತದೆ ಅನ್ನುವುದರ ಮೇಲೆ ಅವಲಂಭಿಸಿರುತ್ತದೆ. ಅಮೇರಿಕೆಯ ಪ್ರೊ. ನೋಮ್ ಚೋಮ್ಸಕಿಯ ಮೇಲೆ ಇನ್ನೂ sedition case ಜಡಿದಿಲ್ಲ!

Submitted by kavinagaraj Fri, 02/26/2016 - 16:25

In reply to by ರಾಮಕುಮಾರ್

ರಾಮಕುಮಾರರೇ. ಇಂತಹ ವಿಷಯಗಳಲ್ಲಿ ಚರ್ಚೆ ಬಂದಾಕ್ಷಣ ಆರೆಸ್ಸೆಸ್, ಕಮ್ಯುನಿಸ್ಟ್, ಮುಸ್ಲಿಮ್, ಧರ್ಮ, ಇತ್ಯಾದಿಗಳನ್ನು ಬಿಟ್ಟು ಚಿಂತಿಸುವುದು ಆದರ್ಶದ ಸ್ಥಿತಿಯಾಗುತ್ತದೆ. ಯಾರಾದರೂ ಇಂತಹ ವಿಷಯದಲ್ಲಿ ಅಭಿಪ್ರಾಯಿಸಿದರೆ ಅವರು 'ಇಂತಹವರು' ಎಂದು ಬ್ರಾಂಡ್ ಮಾಡಿ 'ಬಲೂನು' ಚುಚ್ಚುವ ಕೆಲಸ ಸಾಮಾನ್ಯವಾಗಿ ಕಂಡುಬರುತ್ತಿದೆ. ನನ್ನ ಲೇಖನದ ಅಂತಿಮ ಆಶಯವೂ ಅದೇ ಆಗಿದೆ. ಎಲ್ಲಾ 'ವಿಚಾರ'ಗಳಿಗೂ ಸಮಾನ ಮತ್ತು ಮುಕ್ತ ಅವಕಾಶವಿರಬೇಕು. ಎಲ್ಲದಕ್ಕೂ ಒಂದು ಎಲ್ಲೆ ಇರಬೇಕು, ದೇಶದ ಹಿತ ಮುಖ್ಯವಾಗಬೇಕು ಅಷ್ಟೆ. ನನ್ನ ನಂಬುಗೆಯ ದೇಶಪ್ರೇಮ, ನಿಮ್ಮ ನಂಬುಗೆಯ ದೇಶಪ್ರೇಮ, ಇತ್ಯಾದಿಗಳಲ್ಲಿ ಅರ್ಥ ಕಡಿಮೆ. ದೇಶದ ಸಮಗ್ರತೆಗೆ, ಅಭಿವೃದ್ದಿಗೆ ಯಾವುದು ಸಹಕಾರಿಯೋ ಅದು ದೇಶಪ್ರೇಮ, ವ್ಯತಿರಿಕ್ತವಾದುದು ದ್ರೋಹ ಎಂಬುದನ್ನು ತಾವು ಒಪ್ಪಬಹುದು. ಒಪ್ಪದಿದ್ದರೆ ಒಪ್ಪಲೇಬೇಕೆಂದು ನನ್ನ ಹಟವಿಲ್ಲ.

Submitted by keshavmysore Thu, 02/25/2016 - 17:15

ಕವಿಗಳೇ,
ನೀವು ಕೊನೆಯ ಪ್ಯಾರಾದಲ್ಲಿ ಹೇಳಿರುವುದು ನೂರಕ್ಕೆ ನೂರು ಸರಿ - ಪರ-ವಿರೋಧ ಚಳುವಳಿಗಳ ಕುರಿತು ನಡೆದ ಸಂವಾದವೊಂದರಲ್ಲಿ ಶ್ರೋತೃಗಳು ಹೇಳಿದ್ದು - ಬರೇ ಭಾವನಾತ್ಮಕ ಪ್ರತಿಕ್ರಿಯೆಗಳು; ಹಾಗಾಗಿ ಅವುಗಳಿಂದ ಅಥವಾ ಅಂತಹ ಧೋರಣೆಯುಳ್ಳ ಜನಗಳಿಂದ / ಪಕ್ಷಗಳಿಂದ ಈ ರೀತಿಯ ಸಮಸ್ಯೆಗಳಿಗೆ ಪರಿಹಾರ ಎದುರುನೋಡುವುದು ಮೂರ್ಖತನವೇ ಸರಿ!
ಉದಾಹರಣೆಗೆ ಜಮ್ಮು-ಕಾಶ್ಮೀರದ ಪಿ.ಡಿ.ಪಿ. ಪಕ್ಷದ ಅಧಿಕೃತ ಧೋರಣೆ - " ಅಫ್ಜಲ್ ಗುರು ಉಗ್ರವಾದಿ / ಭಯೋತ್ಪಾದಕ ಅಲ್ಲ; ಅವನನ್ನು ಗಲ್ಲಿಗೇರಿಸಿದ್ದು ನ್ಯಾಯಾಂಗ ವ್ಯವಸ್ಥೆಯ ದುರಂತ" (He was not a terrorist and his hanging was a gross miscarriage of justice). ಇಂತಹ ಪಕ್ಷದೊಂದಿಗೆ ಕೈಜೋಡಿಸಿದ ಭಾ.ಜ.ಪ. ಅಲ್ಲಿ ಸರಕಾರ ನಡೆಸಿದೆ; ಮತ್ತು ಮುಫ್ತಿ ಸಯ್ಯದ್ ರ ನಿಧನದ ನಂತರ ಮತ್ತೆ ಸರಕಾರ ರಚಿಸಲು ಮೆಹಬೂಬಾ ಸಯ್ಯದ್ ರೊಂದಿಗೆ ಮಾತುಕತೆ ನಡೆಸಿದೆ.
ಈಗ ಹೇಳಿ - ಭಾ.ಜ.ಪ.ದ ಸಹಭಾಗಿ ಸರಕಾರದ ಪಕ್ಷ "ಅಫ್ಜಲ್ ಗುರು ಉಗ್ರವಾದಿ / ಭಯೋತ್ಪಾದಕ ಅಲ್ಲ; ಅವನನ್ನು ಗಲ್ಲಿಗೇರಿಸಿದ್ದು ನ್ಯಾಯಾಂಗ ವ್ಯವಸ್ಥೆಯ ದುರಂತ" ಎಂದರೆ ತಪ್ಪಲ್ಲ ಆದರೆ ಜೆ.ಎನ್.ಯು ವಿದ್ಯಾರ್ಥಿಯೊಬ್ಬ (ವಿದ್ಯಾರ್ಥಿಯೋ / ಹೊರಗಿನವನೋ) ಹಾಗೆ ಕೂಗಿದರೆ ಅದು ದೇಶದ್ರೋಹವೆಂಬ ಬೊಬ್ಬೆ! ಇದು ಆಷಾಢಭೂತಿತನದ ಪರಮಾವಧಿಯಲ್ಲವೇ?
ಹಾಗೆಂದ ಮಾತ್ರಕ್ಕೆ ಇತರ ವಿರೋಧ ಪಕ್ಷಗಳ ನಿಲುವೇನೂ ಉದಾತ್ತವಾದದ್ದಲ್ಲ!
ಮನೆಗೆ ಬೆಂಕಿಹತ್ತಿ ಉರಿಯುವಾಗ ಎಲ್ಲರೂ ತಂತಮ್ಮ ಬೇಳೆ ಬೇಯಿಸಿಕೊಳ್ಳುವುದು ತಪ್ಪು. ಆದರೆ ಮನೆಗೆ ತಾವೇ ಬೆಂಕಿ ಹಚ್ಚಿ ಅದರಲ್ಲಿ ಬೇಳೆ ಬೇಯಿಸಿಕೊಳ್ಳುವ ಈ ರಾಜಕೀಯ ಪಕ್ಷಗಳ ನಾಟಕ - ಅಕ್ಷಮ್ಯ ಅಪರಾಧ! ಉರಿದು ಬೂದಿಯಾಗುವುದು ಮನೆಯಷ್ಟೆ.
- ಕೇಶವ ಮೈಸೂರು

Submitted by keshavmysore Fri, 02/26/2016 - 01:29

ಕವಿಗಳೇ,
ನಿಮ್ಮ ಮೇಲಿನ ಲೇಖನದಲ್ಲಿ ಪ್ರಸ್ತಾಪಿಸಿದ ಘಟನೆಯ ಬಗ್ಗೆ ಒಂದು ಪ್ರತಿಕ್ರಿಯೆ:
⦁ ಜೆ.ಎನ್.ಯು ನಲ್ಲಿ ೨೦೦೦ ಏಪ್ರಿಲ್ ೨೯ರ ರಾತ್ರಿ ಕವಿಗೋಷ್ಟಿಯೊಂದನ್ನು ಆಯೋಜಿಸಲಾಗಿತ್ತು.
⦁ ಅದರಲ್ಲಿ ಆಮಂತ್ರಿತರಾಗಿದ್ದವರ ಪೈಕಿ ಇಬ್ಬರು ಪಾಕಿಸ್ತಾನದ ಕವಿಗಳು ಅಹಮದ್ ಫರಾಜ್ ಮತ್ತು ಫಾಮಿದಾ ರಿಯಾಜ್ ಭಾಗವಹಿಸಿದ್ದರು.
⦁ ಕವಯಿತ್ರಿ ಫಾಮಿದಾ ರಿಯಾಜ್ ಪಾಕಿಸ್ತಾನದ ಮಿಲಿಟರಿ ಶಾಸನವನ್ನು ಪ್ರತಿಭಟಿಸಿ ಜೈಲಿಗೆ ಹೋಗಿ ಬಂದವರು.
⦁ ಕಾರ್ಗಿಲ್ ಯುದ್ಧದ ನಂತರ ಭಾರತದಲ್ಲಿ ಹೆಚ್ಚಿದ್ದ ಪಾಕಿಸ್ತಾನದ ಬಗೆಗಿನ ದ್ವೇಷದ ಭಾವನೆಯ ಹಿನ್ನೆಲೆಯಲ್ಲಿ ಅವರು ಬರೆದ ಪದ್ಯವದು.
⦁ ಆ ಪದ್ಯದ ಭಾವಾರ್ಥ ಹೀಗಿದೆ: ನೀವೂ ನಮ್ಮಂತೆಯೇ ಆದಿರಲ್ಲ! ನಾವೀಗಾಗಲೇ ನರಕದಂತಹ ಸ್ಥಿತಿಯಲ್ಲಿದ್ದೇವೆ; ಧರ್ಮವೆಂಬ ದಳ್ಳುರಿಯಲ್ಲಿ ಸಿಕ್ಕಿ ಉಸಿರುಗಟ್ಟುವಂತಾಗಿದೆ. ದೇಶದಲ್ಲಿ ಕೋಮುವಾದದ ಭೂತ ತಾಂಡವವಾಡುತ್ತಿದೆ; ಶಿಕ್ಷಣ-ವಿದ್ಯಾಭ್ಯಾಸ ಅಧೋಗತಿಗಿಳಿದಿದೆ. ನಮ್ಮ ದೇಶದ ಸ್ಥಿತಿಯನ್ನು ನೋಡಿಯೂ ನೀವು ಬುದ್ಧಿ ಕಲಿಯಲಿಲ್ಲವೇ? ನಾವೆಂದೂ ೨ ದೇಶದವರಾಗಿರಲಿಲ್ಲ. ನೀವೂ ಸಹ ನಮ್ಮಂತೆಯೇ ಆದಿರಲ್ಲ!
⦁ ಹೆಚ್ಚಿನ ವಿವರಣೆಗೆ ಮತ್ತು ಸಂಪೂರ್ಣ ಪದ್ಯದ ಸಾಲುಗಳಿಗೆ ಈ ಕೆಳಗಿನ ಕೊಂಡಿಗಳನ್ನು ಚಿಟುಕಿಸಬಹುದು.
http://www.scoopwhoop.com/inothernews/pakistani-poet-warned-india/
http://indianmuslims.in/tum-bilkul-hum-jaisey-nikley-fahmida-riaz/
⦁ ಇದು ಕೋಮುವಾದದಿಂದ ಪ್ರಚೋದಿತವಾದ ರಾಷ್ಟ್ರೀಯತೆಯ ಪರಿಕಲ್ಪನೆಯ ಅಪಾಯಕಾರಿ ಪರಿಣಾಮದ ಬಗ್ಗೆ ಮನುಷ್ಯ-ನಿರ್ಮಿತ ದೇಶ-ಸರಹದ್ದುಗಳೆಂಬ ಸಂಕಲೆಗಳನ್ನು ಕೊಡವಿ ನಿಂತ ಕವಿಮನದ ಕಳಕಳಿಯ ಕೂಗು. ಇದರಲ್ಲಿ ನನಗಂತೂ ಯಾವ ಭಾರತ-ವಿರೋಧಿ ಭಾವನೆಯೂ ಕಾಣಲಿಲ್ಲ.
⦁ ಇನ್ನು ಅಲ್ಲಿಗೆ ಅನಾಹ್ವಾನಿತರಾಗಿ ಬಂದಿದ್ದ ಆ ಇಬ್ಬರು ಭಾರತೀಯ ಸೇನೆಯ ಅಧಿಕಾರಿಗಳ ಉಚಿತಾನುಚಿತ ವರ್ತನೆಯ ಬಗ್ಗೆ, ಸಿವಿಲ್ ಸಮಾರಂಭದಲ್ಲಿ ತಮ್ಮ ಶಸ್ತ್ರಗಳೊಂದಿಗೆ ಭಾಗವಹಿಸಿದ್ದರ ಉಚಿತತೆಯ ಬಗ್ಗೆ ಎಂದಿನಂತೆ ಪರ-ವಿರೋಧದ ವರದಿಗಳು ಹೇರಳವಾಗಿ ಲಭ್ಯವಿದೆ.
ಮುಖ್ಯವಾಗಿ ಇಲ್ಲಿ ಹೇಳಬಯಸುವುದೇನೆಂದರೆ, ರಾಷ್ಟ್ರೀಯತೆ ಮತ್ತು ದೇಶಭಕ್ತಿ ಇವೆರಡೂ ಬೇರೆ ಬೇರೆ. ರಾಷ್ಟ್ರೀಯತೆ ಒಂದು ಉದಾತ್ತವಾದ ವಿಚಾರಧಾರೆ. ಅದು, ಧರ್ಮದ, ಸಂಸ್ಕೃತಿ, ನಿರಪೇಕ್ಷತಾವಾದ, ಸಮಾಜವಾದ ಮೊದಲಾದ ವಾಸ್ತವದ ಅರ್ಥಗಳನ್ನೂ ಮೀರಿದ ಭಾವನೆ. ಎಲ್ಲಿ ದೇಶದ ಜನಮಾನಸವು ಆ ಪ್ರಬುದ್ಧತೆಯನ್ನು ತಲುಪಿರುವುದಿಲ್ಲವೋ ಅಲ್ಲಿ ಯಾವುದೇ ಬಗೆಯ ರಾಷ್ಟ್ರೀಯತಾವಾದದ ಪಸರಿಸುವಿಕೆಯೂ ಅಪಾಯಕಾರಿಯಾದದ್ದೇ! ನಾವೀಗ ಗೋಹತ್ಯೆ ನಿಷೇದದ ವಿಷಯದಲ್ಲಿ, ಹೈದರಾಬಾದ್ - ಜೆ.ಎನ್. ವಿಶ್ವವಿದ್ಯಾಲಯಗಳಲ್ಲಿ ನಡೆದ ಘಟನೆಗಳಲ್ಲಿ ನೋಡುತ್ತಿರುವುದೂ ಅಂತಹ ಪರಿಣಾಮಗಳನ್ನೇ ಎಂದು ನನ್ನ ಭಾವನೆ.
- ಕೇಶವ ಮೈಸೂರು

Submitted by keshavmysore Fri, 02/26/2016 - 01:33

ಮೇಲಿನ ಪ್ರತಿಕ್ರಿಯೆಯ ಮುಂದುವರೆದ ಭಾಗ:
ಮುಖ್ಯವಾಗಿ ಇಲ್ಲಿ ಹೇಳಬಯಸುವುದೇನೆಂದರೆ, ರಾಷ್ಟ್ರೀಯತೆ ಮತ್ತು ದೇಶಭಕ್ತಿ ಇವೆರಡೂ ಬೇರೆ ಬೇರೆ. ರಾಷ್ಟ್ರೀಯತೆ ಒಂದು ಉದಾತ್ತವಾದ ವಿಚಾರಧಾರೆ. ಅದು, ಧರ್ಮದ, ಸಂಸ್ಕೃತಿ, ನಿರಪೇಕ್ಷತಾವಾದ, ಸಮಾಜವಾದ ಮೊದಲಾದ ವಾಸ್ತವದ ಅರ್ಥಗಳನ್ನೂ ಮೀರಿದ ಭಾವನೆ. ಎಲ್ಲಿ ದೇಶದ ಜನಮಾನಸವು ಆ ಪ್ರಬುದ್ಧತೆಯನ್ನು ತಲುಪಿರುವುದಿಲ್ಲವೋ ಅಲ್ಲಿ ಯಾವುದೇ ಬಗೆಯ ರಾಷ್ಟ್ರೀಯತಾವಾದದ ಪಸರಿಸುವಿಕೆಯೂ ಅಪಾಯಕಾರಿಯಾದದ್ದೇ! ನಾವೀಗ ಗೋಹತ್ಯೆ ನಿಷೇದದ ವಿಷಯದಲ್ಲಿ, ಹೈದರಾಬಾದ್ - ಜೆ.ಎನ್. ವಿಶ್ವವಿದ್ಯಾಲಯಗಳಲ್ಲಿ ನಡೆದ ಘಟನೆಗಳಲ್ಲಿ ನೋಡುತ್ತಿರುವುದೂ ಅಂತಹ ಪರಿಣಾಮಗಳನ್ನೇ ಎಂದು ನನ್ನ ಭಾವನೆ.
- ಕೇಶವ ಮೈಸೂರು

ಧನ್ಯವಾದ, ಕೇಶವರೇ. ಈ ದೇಶದಲ್ಲಿ ಪ್ರತಿಯೊಂದನ್ನೂ ರಾಜಕೀಯದ ದೃಷ್ಟಿಕೋನ, ಅಧಿಕಾರದ ಆಸೆಯಲ್ಲೇ ನೋಡಲಾಗುತ್ತಿದರುವುದು ದುರಂತ. ವಿರೋಧಿಗಳಾದರೂ ಅವರು ಹೇಳುವುದರಲ್ಲಿ ಸತ್ಯವಿದ್ದರೆ ಒಪ್ಪುವ, ಸತ್ಯ ಸಂಗತಿಗಳನ್ನೂ ತಿರುಚದೆ ಇರುವ ಪರಿಸ್ಥಿತಿ ಸದ್ಯದಲ್ಲಿ ಬರಲಾರದು. ಕೆಲವು ಮಾಧ್ಯಮಗಳೂ ಸಂಗತಿಗಳನ್ನು ತಿರುಚಿ ಪ್ರಸಂಗವನ್ನು ಹದಗೆಡಿಸುತ್ತಿವೆ.