ಜೀವ ಸಮುದ್ರ

ಜೀವ ಸಮುದ್ರ

ಬರಹ

ಹೇಶ ಮುಂಬೈಗೆ ಬಂದವನು ಜುಹೂ ಬೀಚಿಗೆ ಹೋಗಿ ಅಲ್ಲೆ ಕುಳಿತನೆಂದರೆ ಬಹಳ ಹೊತ್ತಿನವರೆಗೆ ಮೇಲೇಳುವುದೇ ಇಲ್ಲ. ದಡಕ್ಕೆ ಅಪ್ಪಳಿಸುವ ನೀಲ ಸಮುದ್ರದ ಅಲೆಗಳನ್ನು ನಿಟ್ಟಿಸುತ್ತಿರುತ್ತಾನೆ. ಹಾಗೇ ದೂರ ದಿಗಂತದತ್ತ ಕಣ್ಣಂಚಿನವರೆಗೂ ಎಟುಕದಂತೆ ಗೋಚರಿಸುವ ಕ್ಷಿತಿಜದಾಚೆಗೆ ಜೀವಿತದ ಏನೆಲ್ಲ ನಿಗೂಢ ರಹಸ್ಯಗಳನ್ನು ಬೇಧಿಸುವ ತವಕವೋ,  ಅದೇನು ಜನ ಜೀವನದ ಚಿಂತನಯೋ ಏನೋಂದು ಹೇಳಲಾಗುವುದೇ ಇಲ್ಲ.
ಆದರೇನು ! ಆ ಸಮುದ್ರದ ಗಂಭೀರ ಅಲೆಗಳು, ಒಮ್ಮೆ ಜೀವನದ ಕಷ್ಟಕೋಟಲೆಗಳನ್ನು ಏಳುಬೀಳುಗಳಲ್ಲಿ ಪ್ರತಿನಿಧಿಸುವಂತೆ ಕಂಡರೂ, ಮತ್ತೊಮ್ಮೆ ತನ್ನೋಳಗೆ ಸೆಳೆದುಕೊಳ್ಳುವ ಒಲವಿನ ಮಹಾಪೂರದಂತೆ ಜೀವಸೆಲೆಯುಕ್ಕಿಸುವಾಗ ಮನದಾಳದಿಂದ ಹೊಮ್ಮಿದ ನಗೆ ತುಟಿಯಲ್ಲಿ ಮುಗುಳಾಗಿ ತೊನೆಯುತ್ತದೆಯಲ್ಲ... ಆಗ ಅವನು ಅವನಾಗಿ ಇಹ ಲೋಕದಲ್ಲಿ ಇರುವುದೇ ಇಲ್ಲವಲ್ಲ.... ಅದಕ್ಕೆ ಮುಂಬೈಗೆ ಬಂದನೆಂದರೆ, ಅದೆಂಥದೋ ಚುಂಬಕ ಶಕ್ತಿಗೆ ಒಳಗಾದವನಂತೆ ಈ ಕಡಲ ಕಿನಾರೆಗೆ ಬಂದೇ ತೀರುತ್ತಾನೆ. ಈ ಸಮುದ್ರದ ದೃಶ್ಯವನ್ನು ಅನೇಕ ಬಾರಿ ತನ್ನ ಕಲೆಯ ಕೈ ಚಳಕದಲ್ಲಿ ಸೆರೆ ಹಿಡಿದಿದ್ದಾನೆ. ಅಲ್ಲಿಗೂ ಎಷ್ಟೇ ಸವಿದರೂ ಸವಿಯದ ದೃಶ್ಯಾವಳಿಯಲ್ಲೂ ಮೀಯುತ್ತಾ ಕುಳಿತೇ ಹೊತ್ತು ಕಳೆಯುತ್ತಾನೆ... ಭೇಲ್ ಪುರಿ, ಐಸ್ ಕ್ರೀಮ್  ಗಳನ್ನು ತಿನ್ನುತ್ತಾ ನಲಿದು ನಡೆಯುತ್ತಲಿರುವ ಸುಂದರ ಜೋಡಿಗಳತ್ತ ದೃಷ್ಟಿ ಹರಿಸುತ್ತಾ, ಅಲ್ಲೆ ಚೆಂಡು ಬೆಲೂನುಗಳೋಂದಿಗೆ ಕುಣಿವ  ಪುಟ್ಟ ಮಕ್ಕಳ ಆಟದಲ್ಲೀ ಕಣ್ಣನ್ನು ಕೀಲಿಸುತ್ತಾನೆ. ಮತ್ತೆ ಮತ್ತೆ ಬೇಡವೆಂದರೂ ವಿಶಾಲ ಸಮುದ್ರದ ರುದ್ರ ಗಂಭೀರ ಮೌನದಲ್ಲಿ ಲೀನನಾಗಿ  ಬಿಡುತ್ತಾನೆ. ಸೂರ್ಯಾಸ್ತಮಾನದವರೆಗೂ ಅವನಿಗೆ ಅಲ್ಲಿಂದ ಕದಲಲು ಮನಸ್ಸಾಗುವುದೆಂತು ! ಹಾಗೆ ನಸುಗತ್ತಲೆ ಕವಿಯುವವರೆಗೂ ಮುಂಬೈ ಮಹಾನಗರಕ್ಕೆ ಬೆನ್ನು ಹಾಕಿ ಕುಳಿತವನಿಗೆ ತನ್ನ ಹಿಂದೊಂದು ಜನನಿಬಿಡ  ಮಹಾ ಜೀವಸಮುದ್ರವೇ ಆಗಿರುವ ಮುಂಬೈನ ನಿಷ್ಥೂರ ಬದುಕಿನ ಚಿತ್ರಣವೆಲ್ಲವೂ ತನ್ನ ಕುಂಚ ಹಾಗೂ ಕ್ಯಾಮೆರಾಗಳಿಗೆಟುಕಿಯೇ ಇಲ್ಲವೆಂಬ ಕಟುಸತ್ಯವೂ ಹೊಳೆಯದೇ ಇರುವುದಿಲ್ಲ.....
-ರೈಟರ್ ಶಿವರಾಂ.

(“ಕರ್ಮವೀರ” ವಾರ ಪತ್ರಿಕೆಯಲ್ಲಿ ಪ್ರಕಟಿತ)

ಇದರ ಅನುಕ್ರಮ ಸಂಚಿಕೆಗಳಿಗೆ ಇಲ್ಲಿ ಕ್ಲಿಕ್ ಮಾಡಿ [http://youthtimes.blogspot.com|ಜೀವ ಸಮುದ್ರ ]