ಜೇ..ಡ ಕೊಲ್ಲಬೇಡ..

ಜೇ..ಡ ಕೊಲ್ಲಬೇಡ..

ಬರಹ

ಸೌಂದರ್ಯ ಒಂದೊಂದೇ ಮೆಟ್ಟಿಲು ಹತ್ತಿ ಆ ಮುಚ್ಚಿದ ಕೋಣೆಯ ಬಳಿ ಹೋಗುವಳು.


 ಬೀಗ ತೆಗೆದಳು... ಬಾಗಿಲು ತೆರೆಯುವಳು... ಭಯಬೀಳಬೇಡಿ. ಕಣ್ಣು ತೆರೆಯಿರಿ. ನಾಗವಲ್ಲಿಯಲ್ಲ.. ಆ ರೂಮಲ್ಲಿದ್ದ ಜೇಡರಬಲೆ,ಜೇಡದ ಬಗ್ಗೆ ಬರೀತೀನಿ ಅಷ್ಟೇ.


ಈ ಜೇಡಗಳು,ಆ ಮುಚ್ಚಿದ ಕತ್ತಲೆ ಕೋಣೆಯಲ್ಲಿ ವರ್ಷಾನುಗಟ್ಟಲೆ ಬಲೆ ಕಟ್ಟಿಕೊಂಡು ಯಾಕಿರುತ್ತದೆ? ಅಲ್ಲಿ ಅದಕ್ಕೆ ಆಹಾರ ಸಿಗುತ್ತದೆಯೇ? ಸಿಗದಿದ್ದಾಗ ಏನು ಮಾಡುತ್ತವೆ ಎಂದು ಜೇಡದ ಬಗ್ಗೆ ತಿಳಿಯಲು ಇನ್ನೊಂದು ಬಲೆ-‘www’ಗೆ ಹೊಕ್ಕೆ. ೩೫೦ ಮಿಲಿಯನ್ ವರ್ಷಗಳ ಇತಿಹಾಸವಿರುವ ಜೇಡ ತಾನೇ ಮೊದಲು world wide - web ಹೆಣೆದದ್ದು.ಅಂಟಾರ್ಟಿಕಾ ಬಿಟ್ಟರೆ ಉಳಿದೆಲ್ಲಾ ಖಂಡಗಳಲ್ಲೂ ವ್ಯಾಪಿಸಿದೆ.


ಜೇಡ ಪ್ಯಾರಾಚೂಟ್‌ನ್ನು ಹಾರಿಸಿದ್ದು ಗೊತ್ತಾ? ಜೇಡರಮರಿ ತನ್ನ ದಾರದಿಂದ ಬಲೆ ನೇಯ್ದು ಗಾಳಿ ಬೀಸುವುದಕ್ಕೆ ಕಾದು, ನಂತರ ಬೀಸಿದ ದಿಕ್ಕಿಗೆ ಕಿಲೋಮೀಟರ್‌ಗಟ್ಟಲೆ ಹಾರುತ್ತಿದ್ದವು. ಸಮುದ್ರವನ್ನೂ ದಾಟುತ್ತಿದ್ದವು. ೩೭,೫೦೦ಕ್ಕೂ ಮಿಕ್ಕಿ ವಿವಿಧ ತರಹದ ಜೇಡಗಳನ್ನು ಗುರುತಿಸಿದ್ದಾರೆ. ಜೇಡಗಳು ತಮ್ಮ ಹಿಂಬದಿಯಲ್ಲಿ, ೨ರಿಂದ ೬ರಷ್ಟಿರುವ ‘spinnerets’ ದ್ರವಿಸುವ ದಾರದಿಂದ ಬಲೆಯನ್ನು ನೇಯುತ್ತದೆ. ತನ್ನ ಕಾಲಡಿಯಲ್ಲಿ ವಿಶೇಷ ಎಣ್ಣೆ ಇರುವುದರಿಂದ ಬಲೆಯಲ್ಲಿ ತಾನೇ ಸಿಕ್ಕಿ ಬೀಳುವುದಿಲ್ಲ. ಹೆಣ್ಣು ಗಂಡುಗಳ ಮಿಲನಕ್ರಿಯೆ ತಾಸುಗಟ್ಟಲೆ ನಡೆಯಬಹುದು. ಇದರಿಂದಾಗಿ ಹೆಣ್ಣಿಗೆ ಹಸಿವು ಜಾಸ್ತಿಯಾಗಿ, ಮಿಲನದ ಸಮಯದಲ್ಲೇ ಅಥವಾ ನಂತರ ಗಂಡನ್ನು ತಿನ್ನುವುದು. ಇದನ್ನು ತಪ್ಪಿಸಿಕೊಳ್ಳಲು ಕೆಲಗಂಡು ಜೇಡಗಳು ಹೆಣ್ಣಿಗೆ ಮಿಲನಕ್ಕೆ ಮೊದಲೇ ನೊಣ ಇತ್ಯಾದಿ ಕೀಟಗಳನ್ನು ಲಂಚವಾಗಿ ನೀಡುವುದು. ಈಗ ಹೇಳಿ, ಲಂಚ ಕೊಡುವುದು ತಪ್ಪಾ? ಜೇಡಗಳು ತನ್ನ ತೂಕದಷ್ಟೇ ತೂಕದ ಜೀವಂತ ಬಲಿಯನ್ನು ತನ್ನ ಬಲೆಯಲ್ಲಿ ಸೆರೆಹಿಡಿದು ತಿನ್ನಬಲ್ಲುದು. ಏನೂ ಸಿಗದಿದ್ದರೆ ತಿಂಗಳಾನುಗಟ್ಟಲೆ ಉಪವಾಸನೂ ಇರಬಲ್ಲವು!


ವಿಷಕಾರಿ ಜೇಡಗಳಿದ್ದರೂ ಮಾನವನಿಗೆ ತಾನಾಗಿಯೇ ತೊಂದರೆ ಕೊಟ್ಟಿಲ್ಲ. ಸ್ವಚ್ಛ,ಸುಂದರ ಮನೆ ಎಂದರೆ ಎಲ್ಲೂ ಜೇಡರ ಬಲೆ ಇರಬಾರದು-ಹಿಂದಿನಿಂದ ಬಂದ ರೂಢಿ. ಗೋಡೆಯಲ್ಲಿ ನೇತಾಡುತ್ತಿರುವ ಬಲೆಯನ್ನು ಬೇಕಿದ್ದರೆ ತೆಗೆಯಿರಿ. ಆದರೆ ಪಾಪ, ಕಸಬರಿಕೆಯಲ್ಲಿ ಅದನ್ನು ಹೊಡೆದು ಕೊಲ್ಲಬೇಡಿ. ಎಲ್ಲೋ ಒಂದು ಕಡೆ ಪುನಃ ಬಲೆ ನೇಯಲಿ ಬಿಡಿ. ಯಾರಿಗೊತ್ತು? ಮುಂದೆ ಜೇಡರ ಬಲೆಯೂ ನಮ್ಮ ಉಪಯೋಗಕ್ಕೆ ಬರಬಹುದು.ಸಮಾನ ತೂಕದ ನೆಲೆಯಲ್ಲಿ ನೋಡಿದಾಗ ಜೇಡರಬಲೆಯು ಸ್ಟೀಲ್‌ಗಿಂತ ದುಪ್ಪಟ್ಟು ಗಟ್ಟಿ ಎಂದು ಸಾಬೀತಾಗಿದೆ.ಜತೆಗೆ ಇಲಾಸ್ಟಿಕ್ ಗುಣವೂ ಇದೆ. ಇಷ್ಟನ್ನೂ ನೀವು ಓದಿದ್ದೀರೆಂದರೆ, ನಿಮಗೆ ನಿಜಕ್ಕೂ ಜೇಡದ ಬಗ್ಗೆ ತಿಳಕೊಳ್ಳಲು ಆಸಕ್ತಿಯಿದೆ. ವಿಕಿಪೀಡಿಯಾದಲ್ಲಿ ಇನ್ನಷ್ಟೂ ಮಾಹಿತಿಯಿದೆ.ಓದಿ. ೨೦೦೬ರಲ್ಲೇ ‘ಭಲೇ ಭಲೇ ಜೇಡರಬಲೆ’ ಎಂಬ ಲೇಖನವನ್ನು ನಮ್ಮ ಸಂಪದಿಗರೇ ಆದ ಶ್ರೀವತ್ಸ ಜೋಷಿಯವರು ಸೊಗಸಾಗಿ ಚಿತ್ರಸಮೇತ ದಟ್ಸ್ ಕನ್ನಡದಲ್ಲಿ ಬರೆದಿದ್ದಾರೆ ನೋಡಿ- http://thatskannada.oneindia.in/column/vichitranna/031006spiderweb.html