ಝೆನ್ ಕಥೆ: ೨೮ ಮೌನ

ಝೆನ್ ಕಥೆ: ೨೮ ಮೌನ

ಬರಹ

ಝೆನ್ ಇನ್ನೂ ಜಪಾನಿನಲ್ಲಿ ಪರಿಚಯಗೊಳ್ಳುವ ಮುನ್ನ ತೆಂಡೈ ಪಂಥದ ನಾಲ್ವರು ವಿದ್ಯಾರ್ಥಿಗಳು ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದರು. ಅವರು ನಾಲ್ಕು ಜನರೂ ಆತ್ಮೀಯ ಸ್ನೇಹಿತರು. ಏಳು ದಿನಗಳ ಕಾಲ ಮೌನವನ್ನು ಪಾಲಿಸಬೇಕೆಂದು ನಿರ್ಧರಿಸಿದರು.
ಮೊದಲ ದಿನ ಎಲ್ಲರೂ ಮೌನವಾಗಿದ್ದರು. ಮೌನ ವ್ರತ ಸುಸೂತ್ರವಾಗಿ ಸಾಗಿತು. ಸಂಜೆಯಾಯಿತು. ಕತ್ತಲು ಇಳಿಯಿತು. ದೀಪದಲ್ಲಿ ಎಣ್ಣೆ ತೀರುತ್ತ ಬಂದಿತು. ಮೊದಲನೆಯಾತನಿಗೆ ಸುಮ್ಮನಿರಲು ಆಗಲೇ ಇಲ್ಲ. ಸೇವಕನನ್ನು ಕುರಿತು “ದೀಪಕ್ಕೆ ಸ್ವಲ್ಪ ಎಣ್ಣೆ ಹಾಕು” ಎಂದ.
ಅವನು ಮಾತನಾಡಿದ್ದು ಕೇಳಿ ಎರಡನೆಯವನಿಗೆ ಆಶ್ಚರ್ಯವಾಯಿತು. “ನಾವು ಏನೂ ಮಾತಾಡಬಾರದು, ಗೊತ್ತಿಲ್ಲವೇ?” ಎಂದ.
“ನೀವಿಬ್ಬರೂ ಮೂರ್ಖರು. ಯಾಕೆ ಮಾತಾಡಿದಿರಿ?” ಎಂದ ಮೂರನೆಯವನು.
“ಸದ್ಯ, ನಾನು ಮಾತ್ರ ಏನೂ ಮಾತನಾಡಲಿಲ್ಲವಪ್ಪ!” ಎಂದು ಉದ್ಗರಿಸಿದ ನಾಲ್ಕನೆಯವನು.
[ವ್ರತಪಾಲನೆ ಕೇವಲ ಕಾಟಾಚಾರವಾದರೆ ಇನ್ನೇನಾದೀತು! ಮಿಕ್ಕವರ ವ್ರತಭಂಗ ತಿಳಿಯುವಷ್ಟು ಸುಲಭವಾಗಿ ನಾವೇ ಮಾಡುವ ಉಲ್ಲಂಘನೆಗಳು ತಿಳಿಯುವುದಿಲ್ಲ, ಅಲ್ಲವೇ?]