ಟೆಲಿವಿಷನ್ ಎಂಬ ಮಹಾ ರಾಜಕೀಯ ಸಾಧನ

ಟೆಲಿವಿಷನ್ ಎಂಬ ಮಹಾ ರಾಜಕೀಯ ಸಾಧನ

ಬರಹ

ಟೆಲಿವಿಷನ್ ಎಂಬ ಮಹಾ ರಾಜಕೀಯ ಸಾಧನ

ದೂರದರ್ಶನ ಭಾರತಕ್ಕೆ ಬಂದು ಅರ್ಧ ಶತಮಾನವಾಗುತ್ತಲಿದ್ದರೂ, ಅದೊಂದು ಜನಪ್ರಿಯ ಮಾಧ್ಯಮವಾಗಿ ಬೆಳೆಯತೊಡಗಿದ್ದು ಹದಿನೈದು ವರ್ಷಗಳಿಂದೀಚೆಗಷ್ಟೇ. ಜಗತ್ತು ಇದ್ದಕ್ಕಿದ್ದಂತೆ ಎಲ್ಲ ಗಡಿ ರೇಖೆಗಳನ್ನೂ ಧಿಕ್ಕರಿಸಲು ನಿರ್ಧರಿಸಿದಂತೆ ತೋರುತ್ತಿರುವ ಪ್ರಸ್ತುತ ಜಾಗತೀಕರಣ ಘಟ್ಟದ ಅಂತಾರಾಷ್ಟ್ರೀಯ ಒಪ್ಪಂದಗಳು ಜಾರಿಯಾಗತೊಡಗಿದ ನಂತರ. ರಾಷ್ಟ್ರೀಯ ಟಿ.ವಿ. ಎನಿಸಿರುವ ದೂರದರ್ಶನ ನಿಧಾನವಾಗಿ ಬಣ್ಣಕ್ಕೆ ತಿರುಗಿ, ೧೯೮೫ರಿಂದ ೧೯೯೫ರವರೆಗೆ ಒಂದು ದಶಕದ ಕಾಲ ತನ್ನ ಸೋಪ್ ಅಪೇರಾಗಳು ಮತ್ತು ರಾಮಾಯಣ-ಮಹಾ ಭಾರತ-ಚಾಣಕ್ಯ ಇತ್ಯಾದಿ ಮಹಾ ಧಾರಾವಾಹಿಗಳ ಮೂಲಕ ಸರಿ ಸುಮಾರು ಎಲ್ಲ ಮಧ್ಯಮ ವರ್ಗಗಳ ಮನೆಗೆ ಒಂದು ಸಾಂಸ್ಕೃತಿಕ ಸಾಧನವೆಂಬಂತೆ ಟಿ.ವಿ. ಸೆಟ್ಟುಗಳಿಗೆ ಪ್ರವೇಶ ದೊರಕಿಸಿಕೊಟ್ಟಿತು. ತದನಂತರ ಬಂದ ಉಪಗ್ರಹ ಟಿ.ವಿ., ಕಳೆದ ಹತ್ತು ವರ್ಷಗಳಲ್ಲಿ ಭಾರತೀಯ ಬದುಕಿನ ಲಂಗರುಗಳನ್ನೇ ಬದಲಿಸಬಲ್ಲಷ್ಟು ಪ್ರಭಾವಶಾಲಿಯಾಗಿ ಬೆಳೆದಿದೆ. ಹಿಂದೊಮ್ಮೆ ತಿರುಗಿ ನೋಡಿದಾಗ ಈ ಎಲ್ಲ ಬೆಳವಣಿಗೆಗಳು ವ್ಯವಸ್ಥಿತ ಯೋಜನೆಯೊಂದರ ಪ್ರಕಾರವೇ ನಡೆದುವೇನೋ ಎಂದು ಆಶ್ಚರ್ಯಪಡುವಷ್ಟು ಅನುಕ್ರಮಣಿಕೆಯಲ್ಲಿವೆ!

ಟಿ.ವಿ. ಭಾರತಕ್ಕೆ ಬಂದದ್ದು ಮೂಲತಃ ಒಂದು ಶೈಕ್ಷಣಿಕ ಸಾಧನವಾಗಿ. ನಿರ್ದಿಷ್ಟವಾಗಿ ಗ್ರಾಮಾಂತರ ಅಭಿವೃದ್ಧಿಯ ಸಾಧನವಾಗಿ. ದೂರದರ್ಶನಕ್ಕೆ ಇತ್ತೀಚಿನವರೆಗೆ-ಅದು ವಾಣಿಜ್ಯೀಕರಣಕ್ಕೆ ಒಳಗಾಗುವವರೆಗೆ-ಹಣ ಒದಗಿಸುತ್ತಿದ್ದುದು ಗ್ರಾಮಾಂತರ ಅಭಿವೃದ್ಧಿ ಖಾತೆಯೇ ಎಂದು ಕೇಳಿದ್ದೇನೆ. ಭಾರತದ ನವೋದಯ ಸಂದರ್ಭದ ಬಹು ದೊಡ್ಡ ಸಮೂಹ ಸಾಧನವಾಗಿ ಬೆಳೆದ ರೇಡಿಯೋದ ತಮ್ಮನಂತೆ ಹುಟ್ಟಿದ ದೂರದರ್ಶನ, ದೇಶ ಕಟ್ಟುವ ಉಮೇದಿನಲ್ಲಿದ್ದ ಸ್ವಾತಂತ್ರ್ಯೋತ್ತರ ಭಾರತದ ಎಲ್ಲ ಸಮೂಹ ಸಾಧನಗಳಂತೆ(ಖಾಸಗಿ ಸ್ವಾಮ್ಯದ ಪತ್ರಿಕೆಗಳೂ ಸೇರಿದಂತೆ) ಮಾಹಿತಿ, ಮನರಂಜನೆ ಹಾಗೂ ಶಿಕ್ಷಣಗಳನ್ನು ತನ್ನ ಗುರಿಗಳೆಂದು ಘೋಷಿಸಿಕೊಂಡು ತನ್ನ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುತ್ತಿತ್ತು. ಆದರೆ, ೧೯೭೭ರಲ್ಲಿ ನಡೆದ ಜಯಪ್ರಕಾಶ್ ನಾರಾಯಣರ ನೇತೃತ್ವದ ಸ್ವಾತಂತ್ರ್ಯೋತ್ತರ ಭಾರತದ ಮೊದಲ ಪೂರ್ಣ ಪ್ರಮಾಣದ ರಾಜಕೀಯ ಸ್ಥಿತ್ಯಂತರ, ಅನೇಕ ಏಳು ಬೀಳುಗಳು ಹಾಗೂ ರೂಪಾಂತರಗಳ ನಂತರ ರಾಷ್ಟ್ರದ ಚಿನ್ನದ ಕಾಪು ದಾಸ್ತಾನನ್ನೆಲ್ಲ ವಿಶ್ವಬ್ಯಾಂಕಿನಲ್ಲಿ ಅಡ ಇಡಬೇಕಾದ ಪರಿಸ್ಥಿತಿ ಉಂಟಾದ ಚಂದ್ರಶೇಖರ್ ಪ್ರಧಾನ ಮಂತ್ರಿತ್ವದ ಪ್ರಯೋಗದೊಂದಿಗೆ ಅಂತಿಮವಾಗಿ ಅವಸಾನಗೊಂಡಿತಲ್ಲ, ಆಗ ಭಾರತದ ನವೋದಯದ ಆದರ್ಶಗಳನ್ನು ಕುರಿತ ಅಪನಂಬಿಕೆ ಆರಂಭವಾಯಿತು. ಪರ್ಯಾಯ ಆದರ್ಶ-ನಂಬಿಕೆಗಳ ಹುಡುಕಾಟದಲ್ಲಿ ತೊಡಗಿದ ಆ ಸಂದಿಗ್ಧ ಕಾಲದಲ್ಲಿ, ರಾಷ್ಟ್ರ ತನ್ನ ರಾಜಕೀಯ ಒತ್ತಡಗಳಿಂದ ಹೊರ ದಾರಿ ಕಂಡುಕೊಂಡದ್ದು, ದೂರದರ್ಶನದ ’ಪೌರಾಣಿಕ’ ಧಾರಾವಾಹಿಗಳ ಮೂಲಕ!

ಅರ್ಥಾತ್, ಸ್ವತಂತ್ರ ಭಾರತದ ’ಸೆಕ್ಯುಲರ್’ ರಾಜಕಾರಣ ಉಂಟು ಮಾಡಿದ ಒತ್ತಡಗಳು ಆ ಹೊತ್ತಿಗೆ ಎಷ್ಟು ಸಂಕೀರ್ಣ ಹಾಗೂ ಶಕ್ತಿಯುತವಾಗಿದ್ದುವೆಂದರೆ, ಅದು ಪೋಷಿಸಿ ಬೆಳೆಸಿದ್ದ ರೇಡಿಯೋದಂತಹ ಸರಳ ಮಾಧ್ಯಮದ ಮೂಲಕ ಅವು ವ್ಯಕ್ತವಾಗಲಾರದೇ ಹೋದವು. ಹಾಗಾಗಿ, ಇನ್ನೂ ಹೊಸ ಮಾಧ್ಯಮವಾಗಿ ರಾಷ್ಟ್ರಕ್ಕೆ ಅಷ್ಟು ಪರಿಚಯವಾಗದಿದ್ದ ದೂರದರ್ಶನದ ಗುರಿ ಮತ್ತು ಮಾರ್ಗಗಳನ್ನೇ ಅವು ಬದಲಿಸಿಬೇಕಾಯಿತು! ಇಷ್ಟು ವರ್ಷ ಸೆಕ್ಯುಲರ್ ರಾಜಕಾರಣದ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಪಕ್ಷದ ನರಸಿಂಹ ರಾಯರ ಪ್ರಧಾನ ಮಂತ್ರಿತ್ವದ ಕಾಲದಲ್ಲೇ ಈ ದೂರದರ್ಶನ ತನ್ನ ಭೌತಿಕ ವ್ಯಾಪ್ತಿಯನ್ನು ಅಪಾರವಾಗಿ ಬೆಳೆಸಿಕೊಂಡಿತಲ್ಲದೆ, ಸೆಕ್ಯುಲರ್ ರಾಜಕಾರಣದ ಅಸ್ತಿವಾರಗಳೇ ಅಲ್ಲಾಡಿಹೋಗುವಂತಹ ರಾಜಕೀಯ ವಾತಾವರಣವನ್ನು ಸೃಷ್ಟಿಸುವಂತಹ ಆಧುನಿಕ ರಾಜಕೀಯ ಸಾಧನವಾಗಿಯೂ ಪರಿವರ್ತಿತವಾಯಿತು. ಈ ಬೆಳವಣಿಗೆಯನ್ನು, ಸ್ಥೂಲವಾಗಿ ನೋಡಿದಾಗ ರಾಷ್ಟ್ರದ ಅವೈದಿಕ ರಾಜಕಾರಣದ ಹವ್ಯಾಸಿ ಪ್ರಯೋಗದಂತೆ ತೋರುತ್ತಿದ್ದ ಕಾಂಗ್ರೆಸ್, ತನ್ನ ರಾಜಕೀಯ ತಾರ್ಕಿಕ ಅಂತ್ಯವನ್ನು ಕಂಡುಕೊಂಡ ಕಥೆಯನ್ನಾಗಿಯೂ ಗ್ರಹಿಸಬಹುದಾಗಿದೆ. ಅದೇನೇ ಇರಲಿ, ದೂರದರ್ಶನ ಭಾರತದ ರಾಷ್ಟ್ರೀಯ ರಾಜಕಾರಣದ ಒಂದು ಪ್ರಬಲ ಅಂಗವಾಗಿ ಬೆಳೆಯಲಾರಂಭಿಸಿದ ಹೊತ್ತಿನಲ್ಲೇ, ಕಾಕತಾಳೀಯವೆಂಬಂತೆ ಉಪಗ್ರಹ ಟಿ.ವಿ., ಶೀತಲ ಸಮರೋತ್ತರ(ಸೋವಿಯತ್ ಒಕ್ಕೂಟದ ಪತನಾನಂತರದ) ಏಕ ಧೃವ ಜಗತ್ತಿನ (ಅಂತಾರಾಷ್ಟ್ರೀಯ)ರಾಜಕಾರಣದ ಒಂದು ಪ್ರಬಲ ಅಂಗವಾಗಿ ಭಾರತದಲ್ಲಿ ಅವತರಿಸಿತು.

ಇದರಿಂದಾಗಿ ಸರಳವಾಗಿ ಓದುತ್ತ, ಕೇಳುತ್ತ ವಿಕಾಸಗೊಳುತ್ತಿದ್ದ ಸಮಾಜ, ಇದ್ದಕ್ಕಿದ್ದಂತೆ ಎಲ್ಲವನ್ನು ’ಬಣ್ಣ’ದಲ್ಲಿ ನೋಡುತ್ತ ಬೆಳೆಯುವ ಸಮಾಜವಾಗಿ ಪರಿವರ್ತಿತವಾಯಿತು. ಇದರಿಂದಾಗಿ ವೈಯುಕ್ತಿಕ ಹಾಗೂ ಸಾಮಾಜಿಕ ವಿಕಾಸದ ಕೆಲವು ಆಂತರಿಕ ನೆಲೆಗಳೇ-ಕಲ್ಪನೆ, ಪ್ರಶ್ನೆ, ಧ್ಯಾನಶೀಲತೆ, ಪರ್ಯಾಯ ದೃಷ್ಟಿ-ಕಾಣೆಯಾದವು. ಪತ್ರಿಕೆ ಮತ್ತು ರೇಡಿಯೋ, ಪಶ್ಚಿಮದ ಸಂದರ್ಭದಲ್ಲಿ ಪುನರುಜ್ಜೀವನ ಯುಗದ ಮತ್ತು ನಮ್ಮ ಸಂದರ್ಭದಲ್ಲಿ ನವೋದಯ ಯುಗದ ಮಾಧ್ಯಮ ಪ್ರತೀಕಗಳಾಗಿ, ಆ ಯುಗಗಳ ಆಶಯಗಳಿಗನುಗುಣವಾಗಿ ರೂಪುಗೊಂಡಿದ್ದವು. ಭಾರತದಲ್ಲಿ ಪತ್ರಿಕೆಗಳು ಮತ್ತು ರೇಡಿಯೋ ಸಮಾನತೆ, ಸಾಮೂಹಿಕತೆ ಹಾಗೂ ಸರಳತೆಗಳ ನೆಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಅಂದರೆ, ಜನಸಾಮಾನ್ಯರೂ ಯಾವುದೇ ಜಾತಿ-ವರ್ಗಗಳ ಭೇದವಿಲ್ಲದೆ ಸಮಾನವಾಗಿ ತಮ್ಮ ಪ್ರತಿಬಿಂಬಗಳನ್ನು ಇವುಗಳಲ್ಲಿ ಕಂಡುಕೊಳ್ಳುವ ಸಾಧ್ಯತೆಗಳು ತೆರೆದಿದ್ದವು. ಆದರೆ ಹೊಸಯುಗದ ಟಿ.ವಿ., ತನ್ನ ಹುಟ್ಟಿನಲ್ಲೇ ಮತ್ತು ತನ್ನ ಸ್ವರೂಪದಲ್ಲೇ ಇವೆಲ್ಲವುಗಳನ್ನು ಧಿಕ್ಕರಿಸುತ್ತಲೇ-ಆ ಹೊತ್ತಿಗೆ ಇದಕ್ಕೆ ಪೂರಕವಾದ ರಾಜಕೀಯ ವಾತಾವರಣವೂ ಸೃಷ್ಟಿಯಾಗಿತ್ತು-ಬೆಳೆಯಿತು. ಇದರಿಂದಾಗಿ ಇಂದು ಅದೊಂದು ಏಕಪಕ್ಷೀಯವಾದ, ಖಾಸಗಿ ಹಿತಾಸಕ್ತಿಗಳ, ಅದನ್ನು ನಡೆಸುವವರ ಮತ್ತು ನೋಡುವವರ ಮಧ್ಯೆ ಅಂರ್ತಪ್ರಕ್ರಿಯೆ ಸಾಧ್ಯವೇ ಇಲ್ಲದಂತಹ ಮಾಧ್ಯಮವಾಗಿ ಬೆಳೆದು ನಿಂತಿದೆ. ಅದು ಸರ್ಕಾರದ ಪರೋಕ್ಷ ಅಧೀನದಲ್ಲಿದೆ ಎಂಬ ಕಾರಣಕ್ಕಾಗಿ ಜನತೆಯ ಭಾಗವಹಿಸುವಿಕೆಯ ಸಾಧ್ಯತೆಯಾದರೂ ಇರುವ ದೂರದರ್ಶನ, ಇಂದು ಜಾಗತಿಕ ಟಿ.ವಿ. ಸಾಮ್ರಾಜ್ಯದಲ್ಲಿ ಹೆಚ್ಚೂ ಕಡಿಮೆ ಕಳೆದೇ ಹೋಗಿರುವುದು; ಸ್ವತಃ ಈ ಮಾಧ್ಯಮವೇ ಆಂತರಿಕವಾಗಿ ಯಾವುದೇ ಮಟ್ಟದ ಹಾಗೂ ತೆರನ ಸ್ಥಳೀಯತೆಯ ಮೇಲೆ ಉಳಿಯಲಾಗದ ಮಾಧ್ಯಮವೆಂಬುದನ್ನು ಸಾಬೀತು ಪಡಿಸಿದೆ. ಎಷ್ಟಾದರೂ ಇದು ಜಾಗತಿಕ ಉಪಗ್ರಹ ಸಂಪರ್ಕ ಬೇಡುವ ಮಾಧ್ಯಮವಲ್ಲವೇ?

ಹೀಗೆ ಟಿ.ವಿ. ಇಂದು ಜಾಗತಿಕ ರಾಜಕಾರಣ ಮತ್ತು ಜಾಗತಿಕ ತಂತ್ರಜ್ಞಾನ ಜೋಡಿಯ ಶಿಶುವಾಗಿ, ಜಾಗತಿಕ ಮಾದರಿ ಹಾಗೂ ರೂಪಕಗಳನ್ನು ಸೃಷ್ಟಿಸಿಕೊಂಡಷ್ಟೇ ಬದುಕಬಲ್ಲ ಮಾಧ್ಯಮವಾಗಿದೆ. ಇಂದಿನ ಏಕ ಧೃವ ಜಗತ್ತಿನ ಈ ಮಾದರಿ, ರೂಪಕಗಳಾದರೂ ಹೇಗಿದ್ದಾವು? ಅವು ಎಂತಹ ಘನ ತಾಂತ್ರಿಕತೆ ಅಥವಾ ಕಲಾ ಕೌಶಲ್ಯಗಳನ್ನು ಮೆರೆದರೂ, ಅಂತತಃ ಜಾಗತೀಕರಣದ ಜಾಹೀರಾತುಗಳು ಮಾತ್ರ ಆಗಿರಬಲ್ಲವು. ಹಾಗಾಗಿಯೇ ಇಂದು ಟಿ.ವಿ.ಗಳಲ್ಲಿ ಕಾರ್ಯಕ್ರಮ ಹಾಗೂ ಜಾಹೀರಾತುಗಳು ಅಭಿನ್ನವೆಂಬಂತೆ, ಔಚಿತ್ಯ ಪ್ರಜ್ಞೆಯೆಂಬುದೇ ಇಲ್ಲದಂತೆ ಮಿಶ್ರಗೊಳ್ಳುತ್ತ, ಒಂದು ಮಾಧ್ಯಮ ಮಾಯಾ-ಪ್ರತಿ-ಪ್ರಪಂಚವೇ ಸೃಷ್ಟಿಯಾಗಿದೆ. ಈ ಪ್ರತಿ ಪ್ರಪಂಚವೇ ಮೂಲ ಪ್ರಪಂಚದ ತರ್ಕವನ್ನು ನಿರ್ಧರಿಸುವಷ್ಟರ ಮಟ್ಟಿಗೆ! ಇಷ್ಟು ಹೇಳಿದ ಮೇಲೆ ಟಿ.ವಿ.ಯಿಂದ ಸಮಾಜಕ್ಕಾಗುತ್ತಿರುವ ನಷ್ಟಗಳನ್ನು ಪ್ರತ್ಯೇಕವಾಗಿ ದೃಷ್ಟಾಂತ ಅಥವಾ ವಿವರಗಳ ಮೂಲಕ ಹೇಳುವ ಅಗತ್ಯವಿದೆಯೇ? ಆದರೂ, ಪ್ರಪಂಚದೊಳಗಿದ್ದ ಮನೆಯೊಳಕ್ಕೆ-ಭಾರತದ ಮಟ್ಟಿಗೆ ದಿಢೀರನೆ-ಪ್ರಪಂಚವನ್ನೇ ತಂದಿಡುವ ಮೂಲಕ ಟಿ.ವಿ. ಸೃಷ್ಟಿಸಿರುವ ತಾಂತ್ರಿಕ ಬೆರಗಿಗೆ ಮರುಳಾಗಿ ನಾವು ಅದರ ಲಾಭಗಳು ಆತ್ಯಂತಿಕವಾಗಿ ನಷ್ಟಗಳೂ ಆಗುತ್ತಿರುವ ವಿಪರ್ಯಾಸವನ್ನು ಗುರುತಿಸದೇ ಹೋಗುವ ಸಾಧ್ಯತೆ ಇರುವುದರಿಂದ, ಕೆಲವಾದರೂ ’ವಾಸ್ತವಿಕ’ ವಿವರಗಳನ್ನು ಇಲ್ಲಿ ನೀಡುವುದು ಉಚಿತವೆನ್ನಿಸುತ್ತದೆ..

ಹಾಗೆ ನೋಡಿದರೆ, ಲಾಭಗಳು ಅನೇಕವಿರುವುದರಿಂದಲೇ ಟಿ.ವಿ. ಕೈಗಾರಿಕೆ ಇಂದು ಸಮೃದ್ಧವಾಗಿ ಬೆಳೆಯುತ್ತಿರುವುದು. ಕನ್ನಡಕ್ಕೇ ಮೂರು ಸುದ್ದಿ ವಾಹಿನಿಗಳೂ ಸೇರಿದಂತೆ, ಹತ್ತು ಟಿ.ವಿ. ವಾಹಿನಿಗಳಿವೆ. ಒಟ್ಟಾರೆ ಇಂದು ಭಾರತದ ಒಂದು ಸಾಮಾನ್ಯ ಪಟ್ಟಣದಲ್ಲಿಯೂ ಸುಮಾರು ನೂರು ವಾಹಿನಿಗಳು ೨೪ ತಾಸುಗಳೂ ಲಭ್ಯವಿವೆ ಎಂದರೆ, ಲಾಭಗಳು ನೋಡುವವರಿಗಷ್ಟೇ ಅಲ್ಲದೆ, ಅವನ್ನು ನಡೆಸುತ್ತಿರುವವರಿಗೂ ಇದೆ ಎಂದೇ ಅರ್ಥ. ಆದರೆ ಈ ಲಾಭಗಳು ಸೃಷ್ಟಿಸುತ್ತಿರುವ ಮನೆ ಮತ್ತು ಸಮಾಜ ಎಂತಹವು ಎಂಬುದರ ಆಧಾರದ ಮೇಲೇ ಈ ಲಾಭಗಳ ಮೌಲ್ಯೀಕರಣವನ್ನು ಮಾಡಬೇಕಾಗುತ್ತದೆ. ಅಂದರೆ, ೨೪ ತಾಸುಗಳ ಮನರಂಜನೆ ಅಥವಾ ಮಾಹಿತಿಯನ್ನು ಪಡೆಯುವ ಅಗತ್ಯ ಹಾಗೂ ತಡೆದುಕೊಳ್ಳುವ ಶಕ್ತಿ(ಅಥವಾ ಅರ್ಹತೆ?) ನಮ್ಮ ಮನೆಗಳು ಹಾಗೂ ಸಮಾಜಕ್ಕಿದೆಯೇ ಎಂಬುದು ಇಲ್ಲಿ ಬಹು ಮುಖ್ಯ ಪ್ರಶ್ನೆಯಾಗುತ್ತದೆ. ಇದನ್ನು ಒಂದು ಸಣ್ಣ ಉದಾಹರಣೆಯ ಮೂಲಕವೇ ವಿವರಿಸುವುದಾದರೆ, ಸಣ್ಣ ಮಕ್ಕಳಿಗೆ ತುಂಡು ಬಟ್ಟೆ ಉಡಿಸಿ ವಕ್ರವಾಗಿ ಕುಣಿಸಿ ಅಥವಾ ಅವರ ಬಾಯಲ್ಲಿ ಉತ್ಕಟ ಪ್ರಣಯ ಗೀತೆಗಳನ್ನು ಹಾಡಿಸಿ; ಪ್ರತಿಭಾ ಸ್ಪರ್ಧೆ, ಪ್ರೋತ್ಸಾಹಗಳ ಹೆಸರಲ್ಲಿ ಒಂಚೂರೂ ಎಗ್ಗಿಲ್ಲದೆ, ಸಹಜವಾಗಿ ಆನಂದಿಸುವ ಮಾನಸಿಕತೆಯನ್ನು ನಮ್ಮ ತಂದೆ ತಾಯಂದಿರಲ್ಲಿ ಈ ವಾಹಿನಿಗಳು ಉಂಟು ಮಾಡಿವೆ. ಈ ಸಂಗತಿಯ ಹಿಂದಿನ ಸೂಕ್ಷ್ಮ ನೈತಿಕ ಪ್ರಶ್ನೆಯು ಇವುಗಳ ಲಾಭದ ಇನ್ನೊಂದು ಮುಖವನ್ನೂ ಸೂಚಿಸುತ್ತಿದೆ ಎಂಬುದನ್ನೂ ಗಮನಿಸಿಯೇ, ನಾವು ಇಂದಿನ ಈ ಮಾಧ್ಯಮದ ಒಟ್ಟಾರೆ ಮೌಲ್ಯೀಕರಣವನ್ನು ಮಾಡಬೇಕಾಗುತ್ತದೆ.

ಮೊದಲು, ವಾಹಿನಿಗಳ ಈ ತೆರೆನ ಸಮೃದ್ಧಿ, ಅವು ಹುಟ್ಟಿಸಿರುವ ಸ್ಪರ್ಧಾತ್ಮಕತೆಯಿಂದಾಗಿಯೇ ಅವುಗಳ ಮಾಧ್ಯಮ ಗುಣಮಟ್ಟವನ್ನು ಹೇಗೆ ಸರಾಸರಿಗೊಳಿಸಿದೆ ಹಾಗೂ ಅವುಗಳ ವೃತ್ತಿಪರತೆ ಮತ್ತು ದೃಷ್ಟಿ ಕೇಂದ್ರಗಳನ್ನು ಎಷ್ಟರ ಮಟ್ಟಿಗೆ ವಿಚಲಿತಗೊಳಿಸಿದೆ ಎಂಬುದನ್ನೂ ನಾವು ಗಮನಿಸಬೇಕು. ಈಗ ಒಮ್ಮೆಗೇ ತೆರೆಯ ಮೇಲೆ ಮುಖ್ಯ ಚಿತ್ರ, ಅದಕ್ಕೆ ಸಂಬಂಧಪಟ್ಟ ಧ್ವನಿ, ಪರಿಣಾಮ ಸಂಗೀತ, ಎರಡೂ-ಒಮ್ಮೊಮ್ಮೆ ಮೂರೂ-ಕೆಳ ಮೂಲೆಗಳಲ್ಲಿ(ನಾಲ್ಕನೆಯದರಲ್ಲಿ ವಾಹಿನಿಯ ಲಾಂಛನವಿರುತ್ತದಲ್ಲ!) ಸಣ್ಣ ಚಿತ್ರ ಸಹಿತ ಜಾಹೀರಾತು(ಅದೂ ಚಲನೆಯಲಿದ್ದು ಕಣ್ಣನ್ನೂ, ಮನಸ್ಸನ್ನೂ ಕುಕ್ಕುತ್ತಿರುತ್ತದೆ!) ಮತ್ತು/ಅಥವಾ ದೈನಿಕ ಮಾಹಿತಿ, ಕೆಳಗೆ ಅಕ್ಷರ ರೂಪದ ಜಾಹೀರಾತುಗಳು, ಅದರ ಕೆಳಗೆ ದಿನದ ಇತರ ವಾರ್ತೆಯ ಮುಖ್ಯಾಂಶಗಳು-ಇಷ್ಟನ್ನೂ ಕೊಡುವ ವಾಹಿನಿಗಳು ನೋಡುಗನನ್ನು ಏನೆಂದು ಭಾವಿಸಿವೆ, ಅವನಿಂದ ಎಂತಹ ಪ್ರತಿಸ್ಪಂದನವನ್ನು ನಿರೀಕ್ಷಿಸುತ್ತವೆ ಮತ್ತು ಅವು ತಮ್ಮ ಮಾಧ್ಯಮ ಉದ್ದೇಶಗಳ ಬಗ್ಗೆ ಎಷ್ಟು ಪ್ರಾಮಾಣಿಕವಾಗಿವೆ ಅಥವಾ ಗಂಭೀರವಾಗಿವೆ ಎಂಬುದನ್ನೂ ನಾವು ಯೋಚಿಸಬೇಕು. ನಮ್ಮ ಸುದ್ದಿ ವಾಹಿನಿಗಳಲ್ಲಿ ’ಚುಂಚನ ಕಟ್ಟೆಯಲ್ಲಿ ರಥೋತ್ಸವ ಆರಂಭವಾಗಿದೆ’ ಎಂಬುದೂ ’ಸುದ್ದಿ ಸ್ಫೋಟ’ವಾಗುವುದೆಂದರೆ, ಅವು ಸುದ್ದಿಯನ್ನು ಯಾವ ಮಟ್ಟಕ್ಕೆ ಇಳಿಸಿರಬೇಕು, ಯೋಚಿಸಿ! ಮಾಹಿತಿ ನೀಡಬೇಕಾದ ಸುದ್ದಿ, ಜನಪ್ರಿಯತೆಯ ವಾಣಿಜ್ಯಕ್ಕೆ ಸಿಕ್ಕಿ ಮನರಂಜನೆಯ ’ಸ್ಟೋರಿ’ಯಾಗಿರುವುದರ ದುರಂತವಿದು. ಹಾಗಾಗಿಯೇ ಮೊನ್ನೆ ಕನ್ನಡದ ವಾಹಿನಿಯೊಂದು, ಸುದ್ದಿಗೆ ಹೊಸ ರೂಪ ಕೊಡಬಲ್ಲ ಹಾಗೂ ಅದನ್ನು ’ವಾಹ್’ ಎನ್ನುವ ರೀತಿಯಲ್ಲಿ ಪ್ರಸ್ತುತ ಪಡಿಸಬಲ್ಲ ಸುದ್ದಿಗಾರರ ತಲಾಷ್‌ನಲ್ಲಿರುವುದಾಗಿ ಜಾಹೀರಾತು ನೀಡುತ್ತಾ, ತನ್ನ ವೃತ್ತಿಪರತೆಯನ್ನು ಪುರ್ನನಿರೂಪಿಸಿಕೊಳ್ಳುತ್ತಿದ್ದುದು ಕುತೂಹಲ ಹುಟ್ಟಿಸುವಂತಿತ್ತು!

ಇನ್ನು, ವಿಜ್ಞಾನ ಮತ್ತು ಕ್ರೀಡಾ ವಾಹಿನಿಗಳು ಉಪಯುಕ್ತವಾಗಿ ಕಾಣುತ್ತಿದ್ದರೂ, ಅವುಗಳ ಹಣಕಾಸು ಮತು ಅವುಗಳ ಕಾರ್ಯಕ್ರಮ ಪ್ರಸ್ತುತೀಕರಣದ ವ್ಯಾಕರಣ ಹಾಗೂ ವಾಕ್ಯರಚನೆಗಳು, ಸುದ್ದಿ ಮತ್ತು ಮನರಂಜನೆ(ಇವು ಇಂದು ಬೇರೆ ಬೇರೆಯೇ?)ಯ ಜಾಗತಿಕ ಟ.ವಿ. ಸಾಮ್ರಾಜ್ಯ ರೂಢಿಸಿ ಕೊಟ್ಟಿರುವ ವ್ಯಾಕರಣ ಹಾಗೂ ವಾಕ್ಯರಚನೆಗಳನ್ನೇ ಅವಲಂಬಿಸಿ, ಅನುಸರಿಸುತ್ತಿವೆ. ಆದುದರಿಂದ, ಈ ಉಪಯುಕ್ತತೆಯೂ ದೀರ್ಘಕಾಲಿಕ ದೃಷ್ಟಿಯಿಂದ-ಆಧುನಿಕ ನಾಗರೀಕತೆ ತನ್ನ ಅಂತಿಮ ಗುರಿ ಎಂದು ಹೇಳಿಕೊಂಡ ವ್ಯಕ್ತಿ ಸ್ವಾಯತ್ತತೆಯ ದೃಷ್ಟಿಯಿಂದ-ಅನುಮಾನಾಸ್ಪದವೇ.

ಇಂತಹ ಸಂದಿಗ್ಧ ಪರಿಸ್ಥಿಯಲ್ಲಿ, ಟಿ.ವಿ.ಯನ್ನು, ಅಂತರ್ಜಾಲ(ಇಂಟರ್‌ನೆಟ್)ದ ವಿಸ್ತರಣೆಯ ಮೂಲಕ ಪ್ರಜಾಸತ್ತಾತ್ಮಕವಾಗಿ ಪಳಗಿಸಲು ಸಾಧ್ಯ ಎಂದು ಪಾಶ್ಚಾತ್ಯ ಸಮೂಹ ಮಾಧ್ಯಮ ತಜ್ಞರು ಇತ್ತೀಚೆಗೆ ಹೇಳತೊಡಗಿದ್ದಾರೆ. ಅವರ ಪ್ರಕಾರ ಅಂತರ್ಜಾಲಕ್ಕೆ ವೈಯುಕ್ತಿಕ ಹಾಗೂ ಸಾಮೂಹಿಕ ಪ್ರಯತ್ನಗಳೆರಡರ ನೆಲೆಯಲ್ಲ್ಕೂ ಸುಲಭ ಪ್ರವೇಶ ಸಾಧ್ಯವಿದೆ. ಹಾಗಾಗಿ, ಇಂತಹ ಪ್ರವೇಶಗಳ ಮೂಲಕ ಸಾಮಾನ್ಯ ಜನತೆ ಕೂಡಾ ಭಾಗವಹಿಸಬಲ್ಲ ವೆಬ್ ಸೈಟ್‌ಗಳು ಸ್ಥಾಪನೆಯಾಗಿ, ಟಿ.ವಿ.ಯ ಕಾರ್ಪೊರೇಟ್‌ಶಾಹಿ ರಾಜಕಾರಣ ದುರ್ಬಲಗೊಳ್ಳುತ್ತದೆ ಎಂಬುದು ಇವರ ನಿರೀಕ್ಷೆ. ಆದರೆ ಭಾರತದಂತಹ ಅಭಿವೃದ್ಧಿಶೀಲ ಹಾಗೂ ಕಂಪ್ಯೂಟರ್ ಅನಕ್ಷರಸ್ಥ ದೇಶದಲ್ಲಿ ಅಂತರ್ಜಾಲದ ವ್ಯಾಪ್ತಿ ಹಾಗೂ ಬಳಕೆ ನಿಕಟ ಭವಿಷ್ಯದಲ್ಲಂತೂ ಟಿ.ವಿ.ಜಾಲದ ಎದುರು ನಗಣ್ಯವಾಗಿಯೇ ಉಳಿಯಲಿದೆ. ಮುಂದಿನ ದಿನಗಳಲ್ಲಿ ಅಂತರ್ಜಾಲದ ವ್ಯಾಪ್ತಿ ಮತ್ತು ಬಳಕೆ ಗಣನೀಯವಾಗಿ ಹೆಚ್ಚುವುದೆಂದು ಭಾವಿಸೋಣ. ಆದರೂ, ಭಾರತೀಯ ಭಾಷೆಗಳಲ್ಲಿ ಅಭಿವ್ಯಕ್ತಿ ಸುಲಭ ಸಾಧ್ಯವಿರುವ ಸಾಫ್ಟ್‌ವೇರ್ ಆವಿಷ್ಕಾರವಾಗಿ ಜನಪ್ರಿಯವಾಗುವವರೆಗೂ (ಇದಾಗದಂತೆ ತಡೆದಿರುವುದೇ ಟಿ.ವಿ.ಸಾಮ್ರಾಜ್ಯಶಾಹಿಯ ಹಿಂದಿರುವ ಹಿತಾಸಕ್ತಿಯೇ ಆಗಿರುವಾಗ, ಇದು ಸಾಧ್ಯವೇ ಎಂಬ ಪ್ರಶ್ನೆಯೂ ಇದೆ!), ಅಂತರ್ಜಾಲ ಕೂಡಾ ಭಾರತದ ಮಟ್ಟಿಗೆ ಪ್ರಜಾಸತ್ತಾತ್ಮಕ ಅಂರ್ತಪ್ರಕ್ರಿಯೆ ಸಾಧ್ಯವಾಗುವಂತಹ ಸಮೂಹ ಮಾಧ್ಯಮವೆನಿಸಿಕೊಳ್ಳಲಾರದು.

ಹಾಗಾದರೆ, ಟಿ.ವಿ.ಸಾಮ್ರಾಜ್ಯಶಾಹಿಯಿಂದ ನಮಗೆ ಬಿಡುಗಡೆಯೇ ಇಲ್ಲವೆ? ಜಾಗತಿಕ ರಾಜಕಾರಣದೊಂದಿಗೆ ನಾವು ಜೋಡಿಸಿಕೊಂಡಿರುವ ರೀತಿ ನೀತಿಗಳನ್ನು ಬದಲಿಸಿಕೊಂಡರೆ ಮಾತ್ರ ಟ.ವಿ., ವಿಕೇಂದ್ರೀಕೃತ ರಾಜಕಾರಣದ ಭಾಗವಾಗಿ ಪ್ರಜಾಸತ್ತಾತ್ಮಕ ಸಮೂಹ ಮಾಧ್ಯಮವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ. ಇಂತಹ ವಿಕೇಂದ್ರೀಕತ ರಾಜಕಾರಣ ಮಾತ್ರ ಟಿ.ವಿ.ಯ ಸದ್ಯದ ಜಾಗತಿಕ ಮಾದರಿಗಳನ್ನು ವಿಸರ್ಜಿಸಿ, ಅದು ಪ್ರಾದೇಶಿಕ ಮಾದರಿಗಳನ್ನು ಆವಿಷ್ಕರಿಸಿಕೊಳ್ಳುವಂತೆ ಒತ್ತಾಯಿಸಬಲ್ಲುದು. ಆಗ ಮಾತ್ರ ಸಾಮುದಾಯಿಕ ಬಳಕೆಯ ತಂತ್ರಜ್ಞಾನ ಹಾಗೂ ಬಂಡವಾಳ ಸಾಧ್ಯತೆಯುಳ್ಳ ಟಿ.ವಿ.ಯ ಕಾರ್ಯ ಮಾದರಿಗಳು ಗೋಚರವಾಗಬಲ್ಲವೇನೋ! ಹಾಗಾಗಿ ನಾವು ಮುಂದಿನ ದಿನಗಳಲ್ಲಿ ಎಂತಹ ರಾಜಕಾರಣವನ್ನು ಮಾಡಲು ಮುಂದಾಗುತ್ತೇವೆ ಎಂಬುದರ ಮೇಲೆ ನಮ್ಮ ಮತ್ತು ಟಿ.ವಿ. ನಡುವಣ ಸಂಬಂಧ ನಿರ್ಧರಿತವಾಗುತ್ತದೆ ಎಂದು ಸದ್ಯಕ್ಕೆ ಹೇಳಬಹುದಾಗಿದೆ.