ತರ್ಕಸಂಗತ -ದೈವಸಂಮತ
ಕಣ್ವಪುರದಿಂದನತಿ ದೂರದಿ ಮೂಡಣದಲಿದೆ ಕಾನವು
ಹರಿಹರರು ಧೂಮಾವತಿಯು ನೆಲಸಿರುವ ಸುಂದರ ತಾಣವು [೧]
ಹಸುರು ಚೆಲ್ಲಿದ ಬಯಲ ಕೋಡಿದು ಕಂಗು ಕೊಬೆಗಳ ಮಧ್ಯದಿ
ಎಸೆವ ಕಬೆಕೋಡಿನೋಳಿರುವುದೀ ಊರ ದೈವದ ಸನ್ನಿಧಿ [೨]
ಆಂಗ್ಲರಾಳ್ವಿಕೆ ದೇಶದಲ್ಲಿರೆ ಲೋಕಮತವಿಲ್ಲಿದ್ದಿತು
ಹತ್ತು ಜನರೇ ಮಾನ್ಯರೆನ್ನುವ ನಂಬಿಕೆಯ ಸೊಡರುರಿಯಿತು [೩]
ಜನರಿಗಾಗಿಯೇ ದೈವ-ದೇವರು,ಜನರ ಹಿತವೇ ಮುಖ್ಯವು
ಜನರೆ ಪ್ರಭುಗಳು,ಜನರೆ ಮಾನ್ಯರು,ಇದಕೆ ಸಂಶಯವಿಲ್ಲವು [೪]
ಪ್ರತಿವರುಷವೂ ದೇವಕಾರ್ಯವು ,ಹೊಸತು ಪಾಯಸದೌತಣ
ಭೂತ ನೃತ್ಯದ ಕಟ್ಟು-ಕಟ್ಟಳೆ,ಭಕ್ತಿ ಭಾವದ ರಿಂಗಣ [೫]
ನಂಬಿರೆನ್ನನು,ಬರಿದೆ ಕಾಣಿಕೆ ಸಲಿಸಿ ಹೋದರೆ ಸಾಲದು
ಸಲಹುವೆನು ನಿಮ್ಮೆಲ್ಲರನುದಿನವೆನುತ ದೈವವು ನುಡಿವುದು [೬]
ಸರದಿಯಾಳ್ವಿಕೆ ನಡೆಸಿ ಬರುವರು ಸತತ ಹವ್ಯಕ ವಿಪ್ರರು
ಒಂದುಗೂಡುತ ಚಂದಗಾಣಿಪರಿಲ್ಲಿಯೂರ ಸಮಸ್ತರು [೭]
ಸಹಜವೀ ಜನರೊಳಗೆ ಭಿನ್ನತೆ ವಿರಸ ಭಾವದ ಮೊಳಕೆಯು
ಲೋಕಸತ್ತೆಯ ಪೀಠವೀ ಮಠ ,ನಡೆಯುವುದು ಪಂಚಾಯ್ತಿಯು [೮]
ಯಾವ ವಿಷಯದ ವ್ಯಾಜ್ಯವಿದ್ದರು ಹತ್ತು ಮಂದಿಯ ತೀರ್ಪಿಗೆ
ತಲೆಯ ತೂಗುತ ದೈವ ಕೊಡುವುದು ತನ್ನ ಬೆಂಬಲದೊಪ್ಪಿಗೆ [೯]
ಹರಿಯು ಬೇರೆಯೆ?ಹರನು ಬೇರೆಯೆ ? ನ್ಯಾಯ ಬೇರೆಯೆ?ದೈವಕೆ
ತರ್ಕಸಂಗತ ಮಾತು ಸಂಮತವಿರಲು ಭಯವಿನ್ನೇತಕೆ? [೧೦]
ಶುದ್ಧ ಮನಸಿನೋಳೆಲ್ಲರೊಂದಾಗುತ್ತ ಕಾಣಿಕೆಯರ್ಪಿಸಿ
ಎಲ್ಲ ವಿರಸವ ಮರೆತು ಬಾಳುವ ಕಾನ ದೇವರ ಪೂಜಿಸಿ [೧೧]
[ಅಡಿ ಟಿಪ್ಪಣಿ-ಕಾನ=ಕಾಸರಗೋಡು ತಾಲೂಕು ಕುಂಬಳೆಯ ಬಳಿ ಇರುವ ಹಳ್ಳಿ.ಇಲ್ಲಿ ಶಂಕರ ನಾರಾಯಣ ಮಠ ಮತ್ತು ಧೂಮಾವತಿ ದೈವದ ಸನ್ನಿಧಿಯಿದೆ.ವರ್ಷವೂ ದೇವಕಾರ್ಯ ,ದೈವದ ನೃತ್ಯ ಅಂದರೆ ಕೋಲ ನಡೆಯುತ್ತದೆ.ನಾಡಿನ ವಿವಿಧ ಊರುಗಳ ಆಚರಣೆಗಳ ಕುರಿತು ಆಸಕ್ತಿಯಿರುವ ಸಂಪದಿಗರಿಗೋಸ್ಕರ ಇಲ್ಲಿ ಹಾಕುತ್ತಿದ್ದೇನೆ.]