ತಾಜಮಹಲನ್ನೇ ಮಾರಿದ ಮೋಸಗಾರ “ನಟವರಲಾಲ್”

ತಾಜಮಹಲನ್ನೇ ಮಾರಿದ ಮೋಸಗಾರ “ನಟವರಲಾಲ್”

ಆತನ ಹೆಸರು ಮಿಥಿಲೇಶ್ ಕುಮಾರ್ ಶ್ರೀವಾಸ್ತವ. ಆದರೆ ಆತ “ನಟವರಲಾಲ್" ಎಂದೇ ಕುಪ್ರಸಿದ್ದ. ಹತ್ತು ಸಲ ಬಂಧಿಸಿ, ಜೈಲಿನಲ್ಲಿ ಇಟ್ಟಿದ್ದರೂ ಹತ್ತು ಸಲ ಜೈಲಿನಿಂದ ತಪ್ಪಿಸಿಕೊಂಡ ಕುಖ್ಯಾತಿ ಆತನದು.

ಯಾವುದೇ ಸೆರೆಮನೆಯಲ್ಲಿ ತನ್ನನ್ನು ಬಂಧನದಲ್ಲಿ ಇಟ್ಟುಕೊಳ್ಳಲಾಗದು, ಯಾಕೆಂದರೆ ಅಲ್ಲೊಬ್ಬ ಅಪ್ರಾಮಾಣಿಕ ಪೊಲೀಸ್ ಇದ್ದೇ ಇರುತ್ತಾನೆ; ಹಾಗಾಗಿ ತಾನು ಎಂತಿದ್ದರೂ ಜೈಲಿನಿಂದ ತಪ್ಪಿಸಿಕೊಳ್ಳುತ್ತೇನೆ ಎಂದಾತ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ. ಆತನ ಬೆಚ್ಚಿಬೀಳಿಸುವ ವಂಚನೆಯ ಪ್ರಕರಣಗಳೇ “ನಟವರಲಾಲ್", “ರಾಜಾ ನಟವರಲಾಲ್” ಮತ್ತು "ಬಂಟಿ ಔರ್ ಬಬ್ಲಿ” ಎಂಬ ಹೆಸರುವಾಸಿ ಚಲನಚಿತ್ರಗಳಿಗೆ ಪ್ರೇರಣೆ.

ಬಿಹಾರದ ಸಿವಾನ್ ಜಿಲ್ಲೆಯ ಬಾಂಗ್ರಾ ಗ್ರಾಮದಲ್ಲಿ 1913ರಲ್ಲಿ ಹುಟ್ಟಿದ ಮಿಥಿಲೇಶನ ಬಾಲ್ಯದ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಒಂದು ಮಾಹಿತಿಯ ಅನುಸಾರ ಅವನು ಶ್ರೀಮಂತ ಜಮೀನುದಾರ ಕುಟುಂಬದವನು. ಪಾಟ್ನಾದ ಶಾಲೆಯಲ್ಲಿ ಕಲಿಯುತ್ತಿದ್ದಾಗ  ಅವನು ಬುದ್ಧಿವಂತ ವಿದ್ಯಾರ್ಥಿಯಾಗಿದ್ದ; ಆದರೆ ಗಣಿತದಲ್ಲಿ ಚತುರನಾಗಿರಲಿಲ್ಲ. ಒಂದು ಕತೆಯ ಪ್ರಕಾರ, ತನ್ನ ತಂದೆ ಭೀಕರವಾಗಿ ಹೊಡೆದ ಕಾರಣ ಅವನು ಮನೆ ತೊರೆದು ಓಡಿಹೋದ.  

ಅನಂತರ, ಯಾರ ಸಹಾಯವೂ ಇಲ್ಲದೆ ಅದು ಹೇಗೋ ಕೊಲ್ಕತಾ ವಿಶ್ವವಿದ್ಯಾಲಯದ ಬಿ.ಕಾಮ್. ಕೋರ್ಸಿಗೆ ಸೇರಿಕೊಂಡ ಮಿಥಿಲೇಶ್. ಮುಂದೆ ಒಬ್ಬ ವ್ಯಾಪಾರಿಯ ಮಕ್ಕಳಿಗೆ ಮನೆಪಾಠ ಕಲಿಸಲು ಶುರು ಮಾಡಿದ. ತದನಂತರ, ಆ ಮಕ್ಕಳು ಕಲಿಯುತ್ತಿದ್ದ ಶಾಲೆಯ ಮುಖ್ಯೋಪಾಧ್ಯಾಯನಾದ! ಆ ವ್ಯಾಪಾರಿ ಮತ್ತು ಮಿಥಿಲೇಶ್ ಸ್ನೇಹಿತರಾಗಿ, ಒಂದು ವ್ಯವಹಾರದ ಸಲುವಾಗಿ ಒಪ್ಪಂದ ಮಾಡಿಕೊಂಡರು. ಬಳಿಕ ಆ ವ್ಯಾಪಾರಿಯಿಂದ ರೂ.4.5 ಲಕ್ಷ ಕದ್ದು ಸಿಕ್ಕಿಬಿದ್ದ ಪ್ರಕರಣದಲ್ಲಿ ಮೊದಲ ಸಲ ಮಿಥಿಲೇಶನ ಬಂಧನವಾಯಿತು.

ಮುಂದಿನ ಕೆಲವು ವರುಷಗಳಲ್ಲಿ ಭಾರತದ ಹಲವೆಡೆಗಳಲ್ಲಿ ಅನೇಕ ವ್ಯಾಪಾರಿಗಳಿಗೆ ಮಿಥಿಲೇಶ್ ಮೋಸ ಮಾಡಿದ. ಅಧಿಕೃತ ದಾಖಲೆಗಳ ಫೋರ್ಜರಿ ಮಾಡುವುದರಲ್ಲಿ ಅವನು ಪಳಗಿದ. ಡಾ. ರಾಜೇಂದ್ರ ಪ್ರಸಾದ್, ಧೀರೂಬಾಯಿ ಅಂಬಾನಿ ಇಂತಹ ಸುಪ್ರಸಿದ್ಧ ವ್ಯಕ್ತಿಗಳ ಸಹಿಗಳನ್ನೂ ಅವನು ನಕಲು ಮಾಡಿದ! 1950ರ ಹೊತ್ತಿಗೆ ಪಾಟ್ನಾ, ಮೀರತ್, ಅಲ್ಲಹಾಬಾದ್, ಮುಂಬೈ, ಆಂಧ್ರಪ್ರದೇಶ ಇತ್ಯಾದಿ ಸ್ಥಳಗಳಲ್ಲಿ ಅವನು ವಂಚನೆಯಿಂದ ಹಣ ಸುಲಿದಿದ್ದ ಮತ್ತು ಬಂಧನಕ್ಕೆ ಒಳಗಾಗದೆ ತಪ್ಪಿಸಿಕೊಂಡಿದ್ದ. ಅವನಿಗೆ ಕುಖ್ಯಾತಿ ಗಳಿಸಿಕೊಟ್ಟದ್ದು ತಾಜಮಹಲನ್ನು ಮೂರು ಸಲ, ಕೆಂಪುಕೋಟೆಯನ್ನು ಎರಡು ಸಲ ಮತ್ತು ರಾಷ್ಟ್ರಪತಿ ಭವನವನ್ನು ಒಂದು ಸಲ ಮಾರಾಟ ಮಾಡಿದ ಪ್ರಕರಣಗಳು! ಬೆಪ್ಪುತಕ್ಕಡಿ ವಿದೇಶೀಯರಿಗೆ 545 ಸಂಸದರ ಸಹಿತ ಭಾರತದ ಸಂಸತ್ತನ್ನೂ ಅವನು ಮಾರಾಟ ಮಾಡಿದ್ದ ಎಂದರೆ ಅವನ ಚಾಲಾಕಿತನವನ್ನು ನೀವು ಅಂದಾಜಿಸಬಹುದು.  

ಅವನ ವಿರುದ್ಧ ಭಾರತದ ವಿವಿಧ ರಾಜ್ಯಗಳಲ್ಲಿ ದಾಖಲಾಗಿದ್ದ ಮೊಕದ್ದಮೆಗಳ ಸಂಖ್ಯೆ 100ಕ್ಕಿಂತ ಅಧಿಕ. ಅವನಿಗೆ ಕೋರ್ಟುಗಳು ವಿಧಿಸಿದ್ದ ಸೆರೆಮನೆವಾಸದ ಶಿಕ್ಷೆಯ ಒಟ್ಟು ಅವಧಿ 113 ವರುಷಗಳು. ಆದರೆ ಅವನು ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದು ಕೇವಲ 20 ವರುಷಗಳು! ಅವನು ಕೊನೆಯ ಸಲ ಬಂಧನದಿಂದ ತಪ್ಪಿಸಿಕೊಂಡದ್ದು 84ನೇ ವಯಸ್ಸಿನಲ್ಲಿ - ಕಾನ್ಪುರದಿಂದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ಗೆ ಚಿಕಿತ್ಸೆಗಾಗಿ ಅವನನ್ನು ಪೊಲೀಸರು ಕರೆದೊಯ್ಯುತ್ತಿದ್ದಾಗ. ಮಿಥಿಲೇಶನ ಮರಣವೂ ನಿಗೂಢ. ಅವನ ಮೃತದೇಹವನ್ನು ತಾನು ಹೂತದ್ದು 1996ರಲ್ಲಿ ಎಂದು ಅವನ ಸೋದರ ಹೇಳುತ್ತಾನೆ. ಆದರ ಅವನ ವಕೀಲರು ಅವನು 2009ರ ವರೆಗೆ ಬದುಕಿದ್ದ ಎಂದು ಹೇಳುತ್ತಾರೆ.

“ನಟವರಲಾಲ"ನ ಬದುಕಿನ ಹಲವು ಸಂಗತಿಗಳಲ್ಲಿ ಸತ್ಯವನ್ನು ಸುಳ್ಳಿನಿಂದ ಬೇರ್ಪಡಿಸುವುದು ಕಷ್ಟಸಾಧ್ಯ. ಅವನ ಸಂಪರ್ಕಕ್ಕೆ ಬಂದ ವ್ಯಕ್ತಿಗಳು ಅವನು ಬುದ್ಧಿವಂತ ಹಾಗೂ ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ಎನ್ನುತ್ತಾರೆ. ಇವಿಲ್ಲದೆ ಅವನು ಅಷ್ಟು ಜನರಿಗೆ ಟೊಪ್ಪಿ ಹಾಕಲು ಸಾಧ್ಯವಿರಲಿಲ್ಲ. ಅವನು ಹುಟ್ಟಿದೂರಿನಲ್ಲಿ ಅವನ ಬಗ್ಗೆ ದಂತಕತೆಗಳಿವೆ. ಆತ ವಂಚನೆಯಿಂದ ಗಳಿಸಿದ ಹಣವನ್ನು ಹಳ್ಳಿಗರಿಗೆ ಹಂಚುತ್ತಿದ್ದ ಎಂಬ ಕತೆಗಳೂ ಇವೆ. ಅವನು ಆ ಹಣವನ್ನು ಏನು ಮಾಡುತ್ತಿದ್ದ? ಅವನ ಕೊನೆಗಾಲದಲ್ಲಿ ಎಲ್ಲಿ ವಾಸವಿದ್ದ? ಅವನೊಂದಿಗೆ ಜೊತೆಗಾರರು ಇದ್ದರೇ? ಇಂತಹ ಪ್ರಶ್ನೆಗಳಿಗೆ ಇಂದಿಗೂ ಉತ್ತರಗಳು ಲಭ್ಯವಿಲ್ಲ.

ಅಂತೂ ಮಿಥಿಲೇಶ್ ಕುಮಾರ್ ಶ್ರೀವಾಸ್ತವನ ಪ್ರಕರಣಗಳು "ಮೋಸ ಹೋಗುವವರು ಇರುವ ವರೆಗೆ ಮೋಸ ಮಾಡುವವರೂ ಇರುತ್ತಾರೆ” ಎಂಬ ಹಳೆಯ ಅನುಭವದ ಮಾತನ್ನು ಮಗದೊಮ್ಮೆ ಸಾಬೀತು ಪಡಿಸುತ್ತವೆ. ಜೊತೆಗೆ, ನಮ್ಮ ದೇಶದ "ಕಾನೂನು ವ್ಯವಸ್ಥೆ”ಯ ದೋಷಗಳನ್ನು ಎತ್ತಿ ತೋರಿಸುತ್ತವೆ. ಇಂದಿಗೂ ದಿನದಿನವೂ ಸಾವಿರಾರು ಜನರು ಮೋಸಗಾರರ ಜಾಲದಲ್ಲಿ ಬೀಳಲು ಈ ದೋಷಗಳೂ ಕಾರಣ, ಅಲ್ಲವೇ? ಇಂತಹ ಪರಿಸ್ಥಿತಿಯಲ್ಲಿ, ಮೋಸಗಾರರ ಜಾಲಕ್ಕೆ ಬಲಿಯಾಗದಿರಬೇಕಾದರೆ, ನಿರಂತರ ಎಚ್ಚರದಿಂದ ಬದುಕಲು ಕಲಿಯಬೇಕು ಮತ್ತು ದುರಾಸೆ ತೊರೆಯಬೇಕು, ಅಲ್ಲವೇ?

ಫೋಟೋ 1: ಪೊಲೀಸರ ಬಂಧನದಲ್ಲಿ ನಟವರಲಾಲ್ …. ಕೃಪೆ: ಸ್ಕ್ರೋಲ್-ಡ್ರೋಲ್
ಫೋಟೋ 2: ಜೈಲಿನಲ್ಲಿ ನಟವರಲಾಲ್ …. ಕೃಪೆ: ಮೆನ್ಸ್ ಎಕ್ಸ್ ಪಿ