ತಾಯಿಯ ಮಡಿಲು
ಅಮ್ಮನ ಮಡಿಲಿದು
ಬಿಮ್ಮನೆ ಹೊಳೆವುದು
ಸುಮ್ಮನೆ ಸಹಿಸುವ ಕಷ್ಟವನು
ಕಮ್ಮನೆ ಸೂಸುವ
ನಮ್ಮೆಯ ಬಾಳಿನ
ಹಮ್ಮಿಕೆಯಿಲ್ಲದ ಸುಮನಸಿಯು||
ಕಡಲಿನ ವೆಗ್ಗಳ
ಮಡಿಲಲಿ ತುಂಬಿದೆ
ಕಡವರ ಮನವದು ಸಲಹುವುದು
ಒಡಲಲಿ ಕರುಣೆಯು
ಕಡುಗಲಿಯಾಗಿಯೆ
ಕಡುಹುನು ತೋರುವ ಧೀರತೆಯು||
ಕಷ್ಟವ ನುಂಗುತ
ನಷ್ಟವ ಪಡುತಲಿ
ತುಷ್ಟಿಯ ಭಾವದ ತಾಳಿಕೆಯು
ಇಷ್ಟದ ಸಂಗಮ
ಮುಷ್ಠಿಯ ತೋರಿಸಿ
ದುಷ್ಟರ ಶಿಕ್ಷಿಸಿ ನಡೆಯುವಳು||
ಜ್ಞಾನದ ದೇಗುಲ
ಬಾನಿನ ನೇಸರ
ಮಾನಿನಿ ಮಾತೆಯು ಹೊಳೆಯುವಳು
ಕಾನನ ಕತ್ತಲು
ಗಾನದಿ ತೊಲಗಿಸಿ
ಯಾನವ ಮಾಡುತ ಸಾಗುವಳು||
ಬಾಳಿನ ಚಂದಿರ
ಮೇಳದ ಬಂಧುರ
ತಾಳದಿ ಮುಂದೆಯೆ ನಲಿಯುವಳು
ಆಳುವ ಮನವದು
ತಾಳುವ ಮಗುವಿಗೆ
ಹೇಳುತ ಬುದ್ಧಿಯ ಬೆಳೆಸುವಳು||
ಸಹನೆಯ ಮೂರ್ತಿಯು
ಕಹಿಯನು ಮರೆಯತ
ಕುಹಕವ ಸಹಿಸದ ಹೆಮ್ಮರವು
ಕಹಳೆಯನೂದುತ
ಗಹನದ ಕಾರ್ಯದಿ
ಚಹಡವೆ ಸೋಗದ ಚಾಮರವು||
ಅನುಪಮ ಮೇರುವು
ಮನಸಿಜದಾತೆಯು
ನೆನಪಿನ ಬುತ್ತಿಗೆ ಕಾರಣಳು
ಇನಿವಿಲ್ ನುಡಿಯದು
ಜನಪನ ರಾಣಿಯು
ತನಿಗಿಡಿ ಬೆಳಕಿನ ತಾರಕೆಯು||
ಮಕ್ಕಳ ಮಾತೆಯು
ನಕ್ಕುತ ನಲಿವಳು
ಚಕ್ಕನೆ ಬೆರೆಯುವ ಸುಪ್ರೇಮಿ
ಹಕ್ಕಿಯ ಹಾಡುವ
ಚುಕ್ಕಿಯ ಮೆರಗದು
ಪಕ್ಕನೆ ಬಂಧವ ಬೆಸೆಯುವಳು||
ತಾಯಿಯ ನುಡಿಯದು
ಬಾಯಲಿ ಬರುತಿರಿ
ಕಾಯುವ ದೇವನು ನೋಡುವನು
ತಾಯಿಯ ಬೇರಿದು
ಸಾಯುವ ತನಕವು
ಹಾಯುತ ಬರುವರು ಜೊತೆಯಲ್ಲೆ||
ಕರುಣೆಯ ತೇರಿದು
ಮೆರೆಯುವ ಮೊದಲು
ಧರೆಯಲಿ ಮಿಂಚುವ ಸದ್ಗುಣಿಯು
ವರೆದೆಯು ಮಾತೆಯು
ಕರವನು ಮುಗಿಯುತ
ಧರೆಯಲಿ ಶೋಭಿತ ಸುಜ್ಞಾನಿ||
-ಅಭಿಜ್ಞಾ ಪಿ ಎಮ್ ಗೌಡ