ದಂಗಲ್ - ಚಿತ್ರ ವಿಮರ್ಶೆ

ದಂಗಲ್ - ಚಿತ್ರ ವಿಮರ್ಶೆ

ದಂಗಲ್ ಒಂದು ನೈಜ ಕಥೆಯನ್ನಾಧರಿಸಿದ ಚಿತ್ರ. ಮಹವೀರ್ ಸಿಂಗ್ ಫೋಗಟ್, ಗೀತ ಫೋಗಟ್, ಬಬಿತ ಫೋಗಟ್ - ಇವರ ಜೀವನಾಧಾರಿತ ಚಿತ್ರ. ಮೂಲತಃ ಇದು ಹಿಂದಿ ಭಾಷೆಯ ಚಿತ್ರ. ನಿತೀಶ್ ತಿವಾರಿ ಅವರು ಚಿತ್ರದ ನಿರ್ದೇಶಕರು. ಚಿತ್ರದ ಆಕರ್ಷಣೆ ಆಮಿರ್ ಖಾನ್ ಆಗಿರುತ್ತಾರೆ. ಕುಸ್ತಿ (wrestling) ಚಿತ್ರದ ಕಥಾವಸ್ತು. ಒಂದು ಪ್ರೇರಣಾದಾಯಕ ಚಿತ್ರ ದಂಗಲ್.
 
ತಂದೆಯ ಕನಸನ್ನು ನನಸು ಮಾಡುವ ಮಕ್ಕಳು, ತಂದೆಯ ಆಸೆಯನ್ನು ಪೂರೈಸುವ ಕುಡಿಗಳನ್ನು ನಾವು ಚಿತ್ರದಲ್ಲಿ ಕಾಣಬಹುದಾಗಿದೆ. ಸಾಧನೆಗೆ ಒಂದು ಗುರಿ ಮುಖ್ಯ, ಗುರಿಯೆಡೆಗೆ ಸಾಗಲು ಗುರು ಮುಖ್ಯ ಎಂದು ಇಲ್ಲಿ ತೋರಿಸಿ ಕೊಟ್ಟಿದ್ದಾರೆ. ಹಿಂದೆ ಗುರು, ಮುಂದೆ ಗುರಿ ನಮ್ಮನ್ನು ಸಾಧಕರನ್ನಾಗಿಸುವುದು ಖಚಿತ ಎಂದು ಚಿತ್ರದಲ್ಲಿ ತೋರಿಸಿದ್ದಾರೆ. ತಂದೆಯ ಪ್ರೀತಿ, ಗುರುವಿನ ಕಠೋರ ಶಿಸ್ತು, ತಾಯಿಯ ವಾತ್ಸಲ್ಯ, ಮಕ್ಕಳ ಮನಸ್ಸು, ಇತರರ ಮುನಿಸು ಎಲ್ಲವನ್ನು ನಾವು ಚಿತ್ರದಲ್ಲಿ ಕಾಣಬಹುದು. ಪರಿಶ್ರಮಕ್ಕೆ ಎಂದಿಗೂ ಫಲ ಖಚಿತ, ಪರಿಶ್ರಮದಿಂದ ನಾವು ಗೆಲ್ಲುವುದು ನಿಶ್ಚಿತ ಎಂದು ದೃಢೀಕರಿಸಿದೆ. ನಾವು ಏನು ಮಾಡಿದರೂ ಸಮಾಜ ಅದನ್ನು ಮಾತನಾಡುತ್ತದೆ, ಸಮಾಜಕ್ಕೆ ಹೆದರದೆ, ಸಮಾಜದ ಠೀಕೆಗಳಿಗೆ ಕಿವಿಗೊಡದೆ ಮುನ್ನುಗ್ಗಬೇಕು ಎಂದು ಸ್ಪಷ್ಟವಾಗಿ ನಾವಿಲ್ಲಿ ತಿಳಿಯಬಹುದಾಗಿದೆ.
 
ತಂದೆ ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ ಎಂಬುದನ್ನು ಸತ್ಯವಾಗಿಸಿದ್ದಾರೆ. ಕ್ರೀಡಾ ಜಗತ್ತಿನ ಕಷ್ಟ ನಷ್ಟಗಳು, ಅಲ್ಲಿರುವ ರಾಜಕೀಯ, ನಮ್ಮ ಅಧಿಕಾರಿಗಳ ಬೇಜವಾಬ್ದಾರೀತನವನ್ನು ಚಿತ್ರ ವರ್ಣಿಸುತ್ತದೆ. ಗೆದ್ದಾಗ ಆಗುವ ಖುಷಿ, ಸೋತಾಗ ಆವರಿಸುವ ದುಃಖವನ್ನು ಸೂಕ್ಷ್ಮವಾಗಿ ಚಿತ್ರಿಸಿದೆ. ಪ್ರತಿ ಗೆಲುವಿಗೂ ಒಂದು ರೀತಿ-ನೀತಿ-ಶಿಸ್ತು-ಶ್ರದ್ಧೆ ಅತ್ಯಮೂಲ್ಯವೆಂದು ನಿರೂಪಿಸಿದ್ದಾರೆ. ಮರಳಿ ಯತ್ನವ ಮಾಡು ನುಡಿಗಟ್ಟಿನ ಸಾಕ್ಷಾತ್ಕಾರ ರೂಪ ಇದಾಗಿದೆ. ಹೆಣ್ಣು ಗಂಡಿಗಿಂತ ಯಾವುದರಲ್ಲು ಕಡಿಮೆ ಇಲ್ಲ, ನಾವೆಲ್ಲರು ಸರಿ ಸಮಾನರು ಎಂಬುದನ್ನು ಚಿತ್ರದುದ್ದಕ್ಕೂ ನಾವು ಕಾಣಬಹುದು. ಆಮಿರ್ ಖಾನ್ ಅವರ ವಿಷಯಕ್ಕೆ ಬಂದರೆ, ಅವರ ಪರಿಶ್ರಮವನ್ನು ನಾವಿಲ್ಲಿ ಕಾಣಬಹದಾಗಿದೆ. ನಿಗಧಿತ ಸಮಯಕ್ಕಿಂತ ತಡವಾಗಿ ಚಿತ್ರ ಬಿಡುಗಡೆಯಾದರೂ, ಅವರ ಪರಿಶ್ರಮಕ್ಕೆ ನಾವು ತಲೆದೂಗಲೇ ಬೇಕು. ಎಲ್ಲಾ ನಟರೂ ಸಹ ಬೆರಗಾಗಿಸುವ ಪ್ರಯತ್ನವನ್ನು ಪ್ರದರ್ಶಿಸಿರುತ್ತಾರೆ.
 
ಇನ್ನು ನಮ್ಮಲ್ಲಿ ಕೆಲವು ಪ್ರಶ್ನೆಗಳು ಮೂಡುವುದುಂಟು, ಆ ಪುಟ್ಟ ಮಕ್ಕಳಿಗೆ ಅವರ ಆಸೆಯನ್ನು ಬದಿಗಿಟ್ಟು ತಂದೆಯ ಕನಸನ್ನು ಪೂರೈಸುವಂತಾಯಿತಲ್ಲ ಎಂದು, ಆದರೆ ಅವರ ಸಾಧನೆ ಅದಕ್ಕೆ ಉತ್ತರ ನೀಡಿದೆ. ಇಲ್ಲಿ ಅದು ಸಫಲವಾಗಿದ್ದಿರಬಹುದು ಆದರೆ ತಂದೆಯ ಕನಸಿಗೆ ಮಕ್ಕಳ ಆಸೆಯನ್ನು ಬದಿಗೊತ್ತುವುದು ಅದೆಷ್ಟು ಸರಿ ಎಂದು ಹಲವರಿಗೆ ಅನಿಸುತ್ತದೆ. ಇನ್ನೊಂದು ವಿಷಯವೆಂದರೆ, ಚಿತ್ರವನ್ನು ಗೀತ ಫೋಗಟ್ ಅವರ ಸುತ್ತ ಹೆಣೆದಿದೆ. ಬಬಿತ ಫೋಗಟ್ ಅವರ ಯಶಸ್ಸನ್ನು ವರ್ಣಿಸುವಲ್ಲಿ ಚಿತ್ರ ಹೆಚ್ಚುಪಾಲು ವಿಫಲವಾಗಿದೆ.
 
ಪ್ರೇರಣೆ ನೀಡುವಲ್ಲಿ ಚಿತ್ರ ಯಶಸ್ವಿಯಾಗಿದೆ. ನಮ್ಮ ಮನಸ್ಸು ಹುಮ್ಮಸ್ಸನ್ನು ಹೆಚ್ಚಿಸುವಲ್ಲಿ ಚಿತ್ರ ಮೇಲ್ಗೈ ಹೊಂದಿದೆ. ಫೋಗಟ್ ಅವರ ಜೇವನವೇ ಪ್ರೇರಣಾದಾಯಕ, ಅವರ ಪ್ರಯತ್ನ ನಮಗೆ ಮಾದರಿ. ಚಿತ್ರ ನೋಡಿ ನಾವು ತುಂಬಿದ ಪ್ರೇರಣೆಯೊಂದಿಗೆ ಹೊರ ಬರುವುದು ಖಚಿತ. ಕುಟುಂಬ ಸಮೇತರಾಗಿ ನೋಡಬಹುದಾದ ಚಿತ್ರ ಎಂದರೆ ತಪ್ಪಾಗಲಾರದು. ಇದನ್ನೆಲ್ಲ ಮೇಳೈಸಿ ಹೇಳಬೇಕೆಂದರೆ, ದಂಗಲ್ ಒಂದು ಅದ್ಭುತ ಚಿತ್ರವಾಗಿ ಹೊರಹೊಮ್ಮಿದೆ.