ದಳ್ಳುರಿ

ದಳ್ಳುರಿ

ಬರಹ
ಅನಂತಕೃಷ್ಣನು ರೆಬೆಕಾರ ಬದುಕಿನಲ್ಲಿ ಸಂತಸ ತರಬೇಕೆಂಬ ಪ್ರಯತ್ನದಲ್ಲಿದ್ದಾಗಲೇ ಹೊತ್ತಿಕೊಂಡ ದಳ್ಳುರಿ ಎಂಥದ್ದು?

****

ಊರಿನಿಂದ ಹಣ ಬಂದಿದೆಯೇ ಎಂದು ವಿಚಾರಿಸಲು ಸತತವಾಗಿ ಐದನೇಯ ದಿನ ಬ್ಯಾಂಕಿಗೆ ಬಂದಿದ್ದೆ. ಇಂದೂ ಸಹ ಹಣ ಬಂದಿಲ್ಲವೆಂದು ತಿಳಿಯಿತು. ನಾನು ಹಿಂತಿರುಗಿ ಹೊರಡುವಾಗ ಉಳಿತಾಯವಿಭಾಗದಲ್ಲಿದ್ದ ಉದ್ಯೋಗಿ, ನನ್ನನ್ನು ಬಹಳ ದಿನಗಳಿಂದ ಗಮನಿಸಿದ್ದವರು,

"ಅನಂತಕೃಷ್ಣ, ಹಣ ತೆಗೆದುಕೊಳ್ಳಬೇಕಿತ್ತೇನು?" ಎಂದು ಕೇಳಿದರು.

"ಹೌದು ಮೇಡಮ್, ಆದರೆ ಊರಿನಿಂದ ಹಣ ಬಂದಿಲ್ಲ."

"ತುರ್ತಾಗಿ ಹಣದ ಅವಶ್ಯಕತೆ ಇತ್ತೇನು?"

"ಹಾಗೇನಿಲ್ಲ, ಮೇಡಮ್"

"ನಿಮ್ಮನ್ನು ಸತತವಾಗಿ ನಾಲ್ಕೈದು ದಿನಗಳಿಂದಲೂ ಇಲ್ಲಿ ನೋಡುತ್ತಿದ್ದೇನೆ. ನೀವು ಎಂ ಎಸ್ಸಿ ತಾನೇ ಓದುತ್ತಿರುವುದು? ಓದುವಾಗ ಇಂಥದ್ದೆಲ್ಲ ಇದ್ದದ್ದೇ. ಸುಮ್ಮನೆ ಸಂಕೋಚ ಪಟ್ಟುಕೊಂಡು ತೊಂದರೆ ಮಾಡಿಕೊಳ್ಳಬೇಡಿ. ನಿಮಗೆ ಬೇಕಾಗಿರುವ ಹಣವನ್ನು ನಾನು ಕೊಡುತ್ತೇನೆ. ನಂತರ ನೀವು ಹಿಂತಿರುಗಿಸಿ. ನಿಮ್ಮನ್ನು ನೋಡಿದಾಗಲೆಲ್ಲ ಮನೆ ಬಿಟ್ಟು ಓಡಿ ಹೋದ ನನ್ನ ತಮ್ಮನ ನೆನಪು ಬರುತ್ತದೆ."

ಅವರ ವಿಶ್ವಾಸಕ್ಕೆ ನಾನು ಮಣಿದೆ.

* * * *

ನನಗಿಂತಲೂ ಹತ್ತು ವರ್ಷ ಹಿರಿಯರಾದ ರೆಬೆಕ, ಈ ರೀತಿಯ ಪರಿಚಯದಿಂದಾಗಿ ಆತ್ಮೀಯರಾದರು. ಅಂದಿನಿಂದ ನನಗೆ ಓದು ಮುಗಿಯುವವರೆಗೂ ಎಂದಿಗೂ ಹಣದ ಅಡಚಣೆ ಬರಲೇ ಇಲ್ಲ. ನನ್ನನ್ನು ನೋಡಿದಾಗಲೆಲ್ಲ ರೆಬೆಕ, ತಪ್ಪದೆ ತಮ್ಮ ತಮ್ಮನನ್ನು ನೆನಪಿಸಿಕೊಳ್ಳುತ್ತಿದ್ದರು. ಇಷ್ಟಾದರೂ‌ ಸಹ ನಮ್ಮ ಆತ್ಮೀಯತೆ ವೈಯಕ್ತಿಕ ವಿಷಯಗಳವೆರೆಗೂ ಹೋಗದೆ ತನ್ನದೇ ಆದ ಚೌಕಟ್ಟಿನೊಳಗೆ ಮಾತ್ರ ಸೀಮಿತವಾಗಿತ್ತು.

* * * *

ಒಂದು ದಿನ ರಾತ್ರಿ ಬೈಕಿನಲ್ಲಿ ಹಾಸ್ಟೆಲಿಗೆ ನಾನು ಹಿಂತಿರುಗುವಾಗ, ಸಿಟಿ ಬಸ್ ನಿಲ್ದಾಣವೊಂದರಲ್ಲಿ ರೆಬೆಕ ನಿಂತಿದ್ದನ್ನು ಕಂಡು ಅವರ ಪಕ್ಕದಲ್ಲಿ ಬೈಕನ್ನು ನಿಲ್ಲಿಸಿ,

"ಏನು ಮೇಡಮ್, ಇಲ್ಲಿ?" ಎಂದೆ.

"ನನ್ನ ಸಹೋದ್ಯೋಗಿಯೊಬ್ಬರ ಮನೆಗೆ ಹೋಗಿದ್ದೆ. ಅಲ್ಲಿಂದ ಬಂದು ಬಹಳ ಹೊತ್ತಾಯಿತಾದರೂ, ಬಸ್ಸಾಗಲೀ ರಿಕ್ಷಾವಾಗಲೀ ಸಿಕ್ಕೇ ಇಲ್ಲ. ನಿಂತೂ ನಿಂತೂ ಕಾಲೆಲ್ಲಾ ನೋಯುತ್ತಿವೆ."

"ನಿಮ್ಮನ್ನು ಮನೆಗೆ ತಲುಪಿಸುತ್ತೇನೆ. ಆದರೆ..."

"ಆದರೆ?"

"ನಿಮ್ಮಿಂದ ತುಂಬಾ ಉಪಕಾರವನ್ನು ಪಡೆದುಕೊಂಡು ಈ ಮಾತು ಹೇಳಲು ನನಗೆ ನಾಚಿಕೆಯಾಗುತ್ತಿದೆ. ಬೈಕ್ ನನ್ನದಲ್ಲ. ನನ್ನ ಬಳಿ ಬೈಕ್ ಎಲ್ಲಿ ಬರಬೇಕು. ಬೈಕ್ ರಿಸರ್ವಿನಲ್ಲಿದೆ. ಪೆಟ್ರೋಲ್ ಎಷ್ಟಿದೆ ಎಂದು ನನಗೆ ತಿಳಿದಿಲ್ಲ. ಆದ್ದರಿಂದ ನಿಮ್ಮ ಮನೆಗೆ ಹೋಗಿ ಬರಲು ಅಗತ್ಯವಾದ ಪೆಟ್ರೋಲ್ ತುಂಬಿಸಿ."

"ಅದರಲ್ಲೇನು ನಾಚಿಕೆ? ನಿಮ್ಮ ಪರಿಸ್ಥಿತಿಯ ಬಗ್ಗೆ ನೀವೇಕೆ ಕೀಳಿರಿಮೆ ಬೆಳೆಸಿಕೊಳ್ಳಬೇಕು? ನನ್ನನ್ನು ಮನೆಗೆ ತಲುಪಿಸಲು ಅಗತ್ಯವಾದ ವೆಚ್ಚವನ್ನು ನಾನು ಭರಿಸಬೇಕಾದದ್ದು ನನ್ನ ಕರ್ತವ್ಯವಲ್ಲವೆ?"

* * * *

ಶ್ರೀಧರಶರ್ಮ - ರೆಬೆಕ.

ರೆಬೆಕರ ಮನೆಯ ನಾಮಫಲಕ ನೋಡಿದೆ.

ಅಂದರೆ ರೆಬೆಕಾರದ್ದು ಅಂತರ್ಜಾತೀಯ ವಿವಾಹವೆ? ಇರಬಹುದು.

ಏಕೆಂದರೆ ರೆಬೆಕ ನನಗೆ ಪರಿಚಯವಿರುವುದು ಬ್ಯಾಂಕ್ ಉದ್ಯೋಗಿಯಾಗಿ ಹಾಗೂ ನನ್ನ ಹಿತೈಷಿಯಾಗಿ ಮಾತ್ರ. ಅವರು ವಿವಾಹಿತರೋ, ಅವಿವಾಹಿತರೋ ಎನ್ನುವುದೂ ಸಹ ಇದುವರೆಗೂ ನನಗೆ ತಿಳಿದಿರಲಿಲ್ಲ.

ನನ್ನನ್ನು ರೆಎಕ, ಶ್ರೀಧರರಿಗೆ ಪರಿಚಯಿಸಿದಾಗ ನನ್ನ ನಮಸ್ಕಾರಕ್ಕೆ ಶ್ರೀಧರರಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ! ನಾನು ಅವರ ಮನೆಗೆ ಹೋದದ್ದು ಶ್ರೀಧರರಿಗೆ ಸಹ್ಯವಾಗಲಿಲ್ಲವೆಂದು ಅವರ ಮುಖಭಾವ ಹಾಗೂ ನಡವಳಿಕೆಯಿಂದ ನನಗೆ ಚೆನ್ನಾಗಿ ಅರಿವಾಯಿತು. ನಾನು ತಕ್ಷಣ ಹೊರಟೆ.

"ಇಲ್ಲಿಯೇ ಊಟ ಮಾಡಿಕೊಂಡು ಹೋಗಿ" ರೆಬೆಕ ಪ್ರಾಮಾಣಿಕವಾದ ಆಮಂತ್ರಣವನ್ನು ನೀಡಿದರು.

"ನೀನು ಕರೆತಂದವರಿಗೆಲ್ಲಾ ಊಟ ಹಾಕಲು ಇದೇನು ಧರ್ಮಶಾಲೆಯಲ್ಲ" ಶ್ರೀಧರದಿಂದ ಬಾಣದಂತೆ ಪ್ರತಿಕ್ರಿಯೆ ಬಂದಿತು.

ನಾನು ಖಂಡಿತ ಇಂತಹ ವರ್ತನೆಯನ್ನು ನಿರೀಕ್ಷಿಸಿರಲಿಲ್ಲ.

ರೆಬೆಕ ನಿಂತಲ್ಲಿಯೇ ಚಡಪಡಿಸಿದರು.

ಏನೇನೋ ಕಾರಣ ಹೇಳಿ ನಾನು ಹಿಂತಿರುಗಿದೆ.

'ರೆಬೆಕ ನಿಜವಾಗಿಯೂ ಸುಖವಾಗಿದ್ದಾರೆಯೆ?' ನನಗೆ ಅನುಮಾನ ಬರಲಾರಂಭಿಸಿತು.

ರೆಬೆಕ ಎಷ್ಟು ಸಂತುಷ್ಟರಂತೆ ಕಾಣುತ್ತಾರೆ! ಆದರೆ ಅವರ ಪತಿ, ಅವರ ಮಾತು, ನಡವಳಿಕೆಗಳನ್ನೆಲ್ಲಾ ನೋಡಿದರೆ, ತಮ್ಮ ಜೀವನ ಸಂಗಾತಿಯನ್ನು ಆರಿಸಿಕೊಳ್ಳುವುದರಲ್ಲಿ ಅರಿಯದೆ ರೆಬೆಕ ತಪ್ಪು ಮಾಡಿರಬಹುದೆಂದು ನನಗೆ ಅನ್ನಿಸತೊಡಗಿತು.

ಜೀವನವೇ ಹಾಗಲ್ಲವೆ? ಅಂತರಂಗದಲ್ಲಿ ಅಪಾರವಾದ ನೋವನ್ನಿಟ್ಟುಕೊಂಡೂ ಬಹ್ರಂಗ ಜಗತ್ತಿಗೆ ತುಂಬಾ ಸಂತೃಪ್ತರಂತೆ ಸೋಗು ಹಾಕುತ್ತೇವೆ! ನಾನೂ ಇದರಿಂದ ಹೊರತಲ್ಲವಷ್ಟೇ, ಅಂದು ಬ್ಯಾಂಕಿನಲ್ಲಿ ರೆಬೆಕ ನನಗೆ ಹಣ ಕೊಡಲು ಮುಂದಾದಾಗ ನನಗೆ ಹಣದ ತುರ್ತು ಅಗತ್ಯವಿಲ್ಲವೆಂದೆ, ಆದರೆ ವಾಸ್ತವ ಮಾತ್ರ ಬೇರೆಯೇ ಇತ್ತು. ಅಂದು ನನಗೆ ಹಣ ದೊರೆಯದಿದ್ದರೆ, ಹಾಸ್ಟೆಲ್ಲಿನ ಮೆಸು ನಿಂತಿದ್ದರಿಂದ ನಾನು ಉಪವಾಸವಿರಬೇಕಾಗಿತ್ತು.

ನಿದ್ದೆಯೆನ್ನುವುದು ಮರೀಚಿಕೆಯಾಗತೊಡಗಿತು.

* * *

ರೆಬೆಕಾರನ್ನು ನಾನು ನಂತರ ನೋಡಲೇ ಇಲ್ಲ. ನಾನು ಒಂದೆರಡು ಬಾರಿ ಬ್ಯಾಂಕಿಗೆ ಹೋದಾಗ ಅವರು ರಜದ ಮೇಲಿದ್ದರು. ನನ್ನ ಪರೀಕ್ಷೆಗಳು ಮುಗಿದು ಫಲಿತಾಂಶ ದೊರೆತು, ನಾನು ಹಾಸ್ಟೆಲ್ಲನ್ನು ಬಿಟ್ಟು ಊರಿಗೆ ಹಿಂತಿರುಗುವಾಗ ರೆಬೆಕಾರನ್ನು ನೋಡಲು ಬ್ಯಾಂಕಿಗೆ ಹೋದೆ. ರೆಬೆಕಾರಿಗೆ ಅನಾರೋಗ್ಯದ ಕಾರಣ ಬಹಳ ದಿನಗಳ ರಜೆಯ ಮೇಲಿದ್ದಾರೆಂದು ತಿಳಿಯಿತು. ಒಂದು ಕ್ಷಣ ಅವರ ಮನೆಗೆ ಹೋಗಿ ನೋಡಿಕೊಂಡು ಬರೋಣವೆಂದುಕೊಂಡೆನಾದರೂ ಮರುಕ್ಷಣವೇ ನನ್ನ ನಿರ್ಧಾರವನ್ನು ಬದಲಾಯಿಸಿದೆ.

ನಾನು ರೆಬೆಕಾರ ಮನೆಗೆ ಹೋಗಿ, ಅದು ಶ್ರೀಧರರಿಗೆ ಸರಿಹೋಗದಎ, ಅವರಿಬ್ಬರ ನಡುವೆ ಮನಸ್ತಾಪ ಉಂಟಾದರೆ, ನಾನೇ ಅವರ ನೆಮ್ಮದಿಯನ್ನು ಕಲಕಿದಂತಾಗುತ್ತದಲ್ಲವೆ?

ನನ್ನ ನಿರ್ಧಾರ ನನಗೆ ಸರಿ ಎನಿಸಿತು.

* * *

ಎಂ. ಎಸ್ಸಿ. ಮುಗಿದ ನಂತರ ಎರಡು ವರ್ಷ ಎಲ್ಲೆಲ್ಲೋ ಏನೇನೋ ಕೆಲಸ ಮಾಡಿದೆ. ನಂತರ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ರಸಾಯನ ತಜ್ಞನ ಉದ್ಯೋಗ ದೊರೆತು ನನ್ನ ಜೀವನದಲ್ಲಿದ್ದ ಅನಿಶ್ಚಿತತೆ ಕಳೆಯಿತು.

ನನ್ನ ತಾಯಿ ಹಾಗೂ ಸೋದರ ಮಾವಂದಿರು ನನ್ನನ್ನು ಮದುವೆಯ ಮಾರುಕಟ್ಟೆಯಲ್ಲಿ ಕುರಿಯಂತೆ, ನನ್ನ ಪ್ರತಿಭಟನೆಯ ನಡುವೆಯೂ ಮಾರಾಟ ಮಾಡಿದರು. ನನ್ನ ಸುತ್ತಮುತ್ತ ನಡೆಯುತ್ತಿದ್ದ ಧಾರ್ಮಿಕ ಹಾಗೂ ಸಾಮಾಜಿಕ ಅನಾಚಾರಗಳು ನನ್ನಲ್ಲಿ ಕ್ರೋಧವನ್ನುಂಟುಮಾಡಿ, ತನ್ಮೂಲಕ ನನ್ನನ್ನು ವಿಚಾರವಾದಿಯನ್ನಾಗಿ ಮಾರ್ಪಡಿಸಿದವೆಂದು ಬಲವಾಗಿ ನಂಬಿಕೊಂಡಿದ್ದೆ. ಆದರೆ ನನ್ನ ಅರಿವಿನ ಮಿತಿಯಲ್ಲೂ ಮತ್ತೆ ಕೊಲೆತು ನಾರುತ್ತಿರುವ ಸಂಸ್ಕೃತಿಯ ದಾರಿಯನ್ನೇ ನಾನು ಹಿಡಿದಿದ್ದೆ!

ನಾನು ನಿಜವಾಗಿಯೂ ವ್ಯವಸ್ಥೆಯ ಎದುರು ಅಸಹಾಯಕನಾಗಿದ್ದನೆ?

ಅಥವಾ ನನ್ನ ಅರಿವಿನ ನನ್ನ ವೈಚಾರಿಕತೆ ಬರಿಯ ಭ್ರಮೆಯೆ?

ಮೊದಲನೆಯದೇ ಸರಿ ಎಂದು ಒಪ್ಪಿಕೊಳ್ಳಲು ನನಗೆ ಧೈರ್ಯ ಬರಲಿಲ್ಲ.

ನಾನು ನನ್ನ ತಂದೆಯ ಮುಖವನ್ನೇ ಕಂಡಿಲ್ಲ. ತಾಯಿ ಹುಟ್ಟಿಬೆಳೆದ ಮನೆಯಲ್ಲಿ ಅವರಿಗೆ ಪ್ರತಿಯೊಂದಕ್ಕೂ ತತ್ವಾರವಾಗಿದ್ದಾಗ, ಮತ್ತೆರಡು ಹೊಟ್ಟೆಯ ಹೊರೆಯನ್ನು ಅವರು ಹೊರುವುದಾದರೂ ಹೇಗೆ? ಅಂದು ತಾಯಿಯಲ್ಲಿ ಛಲವಿತ್ತು, ಆತ್ಮಸ್ತೈರ್ಯವಿತ್ತು. ತೌರುಮನೆಯಿಂದ ಬಂದು ನನ್ನ ತಂದೆಯ ಊರಿನಲ್ಲಿ, ನನ್ನ ತಂದೆಯ ಹಿರಿಯರಿಂದ ಬಂದಿದ್ದ ಸೂರಿನಲ್ಲಿ ನೆಲೆ ನಿಂತರು. ನನ್ನ ತಾತನೂ ತಮ್ಮ ಮಗಳ ರಕ್ಷೆಗಾಗಿ ನಮ್ಮ ಮನೆಯಲ್ಲೇ ಉಳಿದಿದ್ದರಿಂದ ಅವರ ಸಹಕಾರದಿಂದ ನನ್ನ ತಾಯಿ ಸಣ್ಣ ಹೋಟೆಲೊಂದನ್ನು ಪ್ರಾರಂಭಿಸಿದರು. ಆ ವೃತ್ತಿ ತಕ್ಕಮಟ್ಟಿಗೆ ತಾಯಿಯ ಕೈಹಿಡಿಯಿತು. ಅಂತೂ ಇಂತೂ ನಮ್ಮ ಜೀವನ ಆರಕ್ಕೇರದೆ ಮೂರಕ್ಕಿಳಿಯದೆ ಸಾಗಿತು.

ಬದುಕಿನ ಎಲ್ಲ ರೀತಿಯ ಬವಣೆಗಳನ್ನು ಸ್ವತಃ ಅನುಭವಿಸಿ ಅರಿತಿರುವ ನನ್ನ ತಾಯಿಯೂ ಸಹ ನನ್ನ ಮದುವೆಯ ವಿಷಯದಲ್ಲಿ ನಡೆದುಕೊಂಡ ರೀತಿ, ಪ್ರತಿಯೊಬ್ಬರಿಗೂ ಜೀವನ ಪಾಠ ಕಲಿಸೇ ಕಲಿಸುತ್ತದೆ. ಹೆಚ್ಚು ಸೂಕ್ತವಾಗಿ, ಪ್ರತಿಯೊಬ್ಬರೂ ತಮ್ಮ ಜೀವನದಿಂದ ಪಾಠ ಕಲಿತೇ ಕಲಿಯುತ್ತಾರೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿಯೂ ಯಾವಾಗಲೂ ಸತ್ಯವೆ ಎನ್ನುವ ಅನುಮಾನ ಬರಲಾರಂಭಿಸಿತು.

ಜೀವನದಲ್ಲಿ ಮೊದಲ ಬಾರಿಗೆ ನನ್ನ ತಾಯಿಯ ಮೇಲೆ, ಅದಕ್ಕಿಂತಲೂ ಹೆಚ್ಚಾಗಿ ನನ್ನ ವೈಚಾರಿಕತೆಯನ್ನೆಲ್ಲಾ ಗಾಳಿಗೆ ತೂರಿದ ನನ್ನ ಮೇಲೂ, ನನಗೆ ತಿರಸ್ಕಾರ ಮೂಡಲಾರಂಭಿಸಿತು.

ನನ್ನ ಮಡದಿಯಾಗಿ ಬಂದ ಶಾಲಿನಿ ನನ್ನ ಮನೆಯನ್ನು ಮಾತ್ರವಲ್ಲದೆ ನನ್ನ ಜೇಬನ್ನೂ ಸಹ ತುಂಬಿದಳು.

* * *

ತಾಯಿಯವರಿಗೆ ವೈದ್ಯರು ಬರೆದುಕೊಟ್ಟ ಮಾತ್ರೆಯನ್ನು ತೆಗೆದುಕೊಂಡು ನನ್ನ ಬೈಕಿನ ಸ್ಟಾಂಡನ್ನು ತೆಗೆಯುವಷ್ಟರಲ್ಲಿ,
"ಅನಂತಕೃಷ್ಣ"
ನನ್ನ ಹೃದಯ ಆನಂದದಿಂದ ಸ್ಫುರಿಸಿತು.

ಧ್ವನಿಯನ್ನು ಕೇಳಿ ಎಂಟು ವರ್ಷಗಳಾಗಿದ್ದರೂ ಅದು ರೆಬೆಕಾರದ್ದು ಎಂದು ಗುರುತಿಸುವುದಕ್ಕೆ ನನಗೆ ಯಾವ ಕಷ್ಟವೂ ಕಾಣಲಿಲ್ಲ.

ರೆಬೆಕ ನನ್ನ ತಲೆಯನ್ನು ಸವರಿದಾಗಲಮ್ತೂ ನಾನು ಆನಂದದ ಅಲೆಯಲ್ಲಿ ಕೊಚ್ಚಿಹೋದೆ.

ಆದರೆ ನನ್ನ ಸಂತಸ ಕೇವಲ ಕ್ಷಣಿಕದ್ದಾಯಿತು.

ರೆಬೆಕಾರ ಕಳಾಹೀನ ಮುಖ, ಕೃಶವಾದ ಶರೀರ, ಸೊರಗಿದ ಕಣ್ಣುಗಳು...

ನಾನು ನೋಡುತ್ತಿರುವುದು ನಿಜವಾಗಿಯೂ ರೆಬೆಕಾರನ್ನೆ?

"ಅನಂತಕೃಷ್ಣ, ಬನ್ನಿ ನನ್ನ ಮನೆಗೆ ಹೋಗೋಣ."

"ನಿಮ್ಮ ಮನೆಗೆ ಬರುವುದಕ್ಕೆ ನನಗೆ ಯಾವ ಅಭ್ಯಂತರವೂ ಇಲ್ಲ. ಆದರೆ ನನ್ನ ಆಗಮನದಿಂದ ನಿಮ್ಮ್ ಮನೆಯ ವಾತಾವರಣ ಕೆಡಬಾರದಲ್ಲವೆ?"

"ಇಂದು ಹಿಂದಿನ ಪರಿಸ್ಥಿತಿ ಇಲ್ಲ, ತುಂಬಾ ಬದಲಾಗಿದೆ. ನಿಮ್ಮೊಡನೆ ಮಾತನಾಡುವುದು ಬಹಳಷ್ಟಿದೆ, ಬನ್ನಿ."

* * *

ರೆಬೆಕ ಮನೆಯಲ್ಲಿ ಒಂದೇ ಸಮನೆ ಕಣ್ಣೀರು ಸುರಿಸಿದರು. ಅವರಾಗಿಯೇ ಸಮಾಧಾನಗೊಳ್ಳುವವರೆಗೂ ನಾನು ಏನೂ ಮಾತನಾಡಲಿಲ್ಲ.

"ನನ್ನ ತಾಯಿ ನಿಧನರಾದಾಗ ನನಗೆ ಹದಿನೈದು ವರ್ಷ, ನನ್ನ ತಂದೆ, ಮಕ್ಕಳಿಗೆ ಮತ್ತೊಬ್ಬ ತಾಯಿಯನ್ನು ತರುತ್ತೇನೆಂದು ಸಮರ್ಥಿಸಿಕೊಳ್ಳುತ್ತಾ ಎರಡನೆ ಮದುವೆ ಮಾಡಿಕೊಂಡರು. ಮಲತಾಯಿ ಬಂದ ಬಹುತೇಕ ಮನೆಗಳಲ್ಲಿ ನಡೆಯುವುದೇ ನಮ್ಮ ಮನೆಯಲ್ಲೂ ನಡೆಯಿತು. ತಂದೆ, ತಾಯಿಯನ್ನು ಯಾವಾಗಲೂ ಗೋಳು ಹೊಯ್ದುಕೊಳ್ಳುತ್ತಿದ್ದವರು ಆಶ್ಚರ್ಯಕರವಾಗಿ ತಮ್ಮ ಎರಡನೇ ಹೆಂಡತಿಯ ಗುಲಾಮರಾಗಿ ಬಿಟ್ಟರು. ನನ್ನ ತಂದೆಯ ಎರಡನೆ ಹೆಂಡತಿಯ ಕಿರುಕುಳ ತಾಳಲಾರದೆ ನನ್ನ ತಮ್ಮ ಮನೆ ಬಿಟ್ಟು ಓಡಿಹೋದ. ನನ್ನ ಬಗ್ಗೆ ಯಾವಾಗಲೂ ಸಂದೇಹ ಪಡುತ್ತಿದ್ದ ಅವಳಿಂದ ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ನನಗೆ ಚೆನ್ನಾಗಿ ಮನವರಿಕೆಯಾಗಿ. ನಾನು ಉದ್ಯೋಗಕ್ಕಾಗಿ ತೀವ್ರವಾಗಿ ಪ್ರಯತ್ನ ಪಡಲಾರಂಭಿಸಿದೆ. ನನ್ನ ಶ್ರಮದಿಂದ ನಾನು ಬಿ ಎಸ್ ಸಿ ಓದುತ್ತಿರುವಾಗಲೇ ನನಗೆ ಬ್ಯಾಂಕಿನಲ್ಲಿ ಉದ್ಯೋಗ ದೊರೆಯಿತು. ನಾನು ಮನೆಯಿಂದ ಕಾಲ್ತೆಗೆದು ಸ್ವತಂತ್ರವಾಗಿ ಬದುಕಲಾರಂಭಿಸಿದೆ.

ನನ್ನ ತಂದೆಯವರಿಗಾಗಿ ಸ್ವಲ್ಪ ಹನ ಕಳಿಸುತ್ತಿದ್ದೆ. ನನ್ನ ತಂದೆ ನಿಧನರಾದರು. ಅಂದಿನಿಂದ ನಾನು ಪೂರ್ಣವಾಗಿ ಜೀವನದಲ್ಲಿ ಒಂಟಿಯಾದೆ. ನಾಲ್ಕು ವರ್ಷಗಳ ಕಾಲ ಇದೇ ರೀತಿ ಜೀವನವನ್ನು ಕಳೆದೆ. ನಂತರ ನನ್ನ ಬಾಳಿನಲ್ಲಿ ಪ್ರವೇಶಿಸಿದ್ದು ಶ್ರೀಧರ, ಅವರು ತಮ್ಮ ಮನೆಯವರೆಲ್ಲರ ವಿರೋಧವನ್ನು ಲೆಕ್ಕಿಸದೆ ನನ್ನನ್ನು ಮದುವೆಯಾದರು. ನನ್ನ ಜೀವನ ಅರ್ಥಪೂರ್ಣ ತಿರುವು ಪಡೆಯಿತೆಂದುಕೊಂಡೆ.

ಆದರೆ ಮದುವೆಯ ಮೊದಲಿನ ಹಾಗೂ ನಂತರದ ಶ್ರೀಧರ ತೀರಾ ಬೇರೆಯಾಗಿದ್ದುದರೆಂಬ ವಾಸ್ತವ ನನಗೆ ಮನವರಿಕೆಯಾಯಿತು. ಶ್ರೀಧರರಿಗೆ ಬೇಕಾಗಿದ್ದದ್ದು ಮುಖ್ಯವಾಗಿ ನನ್ನ ದೇಹ, ನಾನಲ್ಲ. ದೈಹಿಕ ಆಕರ್ಷಣೆಯ ತೀವ್ರತೆ ಕಡಿಮೆಯಾದಂತೆ ಶ್ರೀಧರರಿಗೆ ಶೀಲದ ಬಗ್ಗೆ ಸಂದೇಹ ಬರಲಾರಂಭಿಸಿತು. ಅದೇ ಸಮಯದಲ್ಲಿ ನೀವು ನನ್ನನ್ನು ಬೈಕಿನಲ್ಲಿ ಮನೆಗೆ ತಲುಪಿಸಿದ್ದು. ನೀವು ಮನೆಗೆ ಬಂದ ದಿನದಿಂದ ಪ್ರತಿದಿನವೂ ನಮ್ಮಿಬ್ಬರಿಗೆ ಸಂಬಂಧವಿದೆಯೆಂದು ಅತಿ ಕೆಟ್ಟದಾಗಿ ನಡೆದುಕೊಳ್ಳಲು ಪ್ರಾರಂಭಿಸಿದರು. ಅದರೊಂದಿಗೆ ಬೇರೆ ಜಾತಿಯವಳಾದ ನನ್ನನ್ನು ಮದುವೆಯಾದದ್ದಕ್ಕಗಿ ಅವರಲ್ಲಿ ಪಾಪಪ್ರಜ್ಞೆ ಬೆಳೆಯಲಾರಂಭಿಸಿತು. ಅದೇ ವೇಳೆಯಲ್ಲಿ ಶ್ರೀಧರರ ತಾಯಿ-ತಂದೆಯವರು, ಮೊದಲು ದೂರವಾಗಿದ್ದವರು, ನನ್ನೊಡನೆ ಅದೇ ದೂರವನ್ನು ಕಾಯ್ದುಕೊಂಡರು, ತಮ್ಮ ಮಗನಿಗೆ ಹತ್ತಿರವಾದರು. ನಮ್ಮಿಬ್ಬರ ಮಧ್ಯೆ ದೊಡ್ಡದೊಂದು ಕಂದಕ ನಿರ್ಮಾಣವಾಗಿತ್ತು.

ಬದುಕು ಹೀಗೆಯೇ ನೀರಸವಾಗಿ ಸಾಗುತ್ತಿದ್ದಾಗ, ನನಗೆ ಬೇರೊಂದು ಊರಿಗೆ ವರ್ಗವಾಯಿತು, ಕೆಲದಿನಗಳ ಮಟ್ಟಿಗಾದರೂ ಶ್ರೀಧರರಿಗೆ ನಾನು ದೂರವಿದ್ದರೆ, ಅವರ ಮನೋನೆಲೆ ಬದಲಾಗಬಹುದೆಂಬ ನಿರೀಕ್ಷೆಯೊಂದಿಗೆ ನಾನು ವರ್ಗವಾದ ಊರಿಗೆ ಹೊರಟುಹೋದೆ.

ಆದರೆ ನನ್ನ ನಿರೀಕ್ಷೆ ಸುಳ್ಳಾಯಿತು. ಶ್ರೀಧರ ಬದಲಾಗುವ ಬದಲು, ತಮ್ಮ ಜಾತಿಯ ಕನ್ಯೆಯೊಬ್ಬಳನ್ನು ಮದುವೆಯಾದರು! ಶ್ರೀಧರರಿಗೆ ನಾನು ಕಾನೂನಿನ ಮೂಲಕ ಸಾಕಷ್ಟು ತೊಂದರೆ ಕೊಡಬಹುದಿತ್ತು. ಆದರೆ ನನಗೆ ಅದೊಂದೂ ಬೇಡವಾಗಿತ್ತು. ಏಕೆಂದರೆ ಯಾವ ಕಾನೂನೇ ಆಗಲಿ ನಮ್ಮಿಬ್ಬರನ್ನು ಮತ್ತೆ ಒಂದುಗೂಡಿಸಬಹುದು. ಆದರೆ ನಮ್ಮ ಮನಸ್ಸುಗಳನ್ನಲ್ಲವಲ್ಲ. ಆದ್ದರಿಂದ ನಾನು ಸ್ವತಃ ಬಯಸಿ ವಿಚ್ಛೇದನ ಪದೆದುಕೊಂಡು ಇಲ್ಲಿಗೆ ವರ್ಗ ಮಾಡಿಸಿಕೊಂಡು, ಮೂರು ವರ್ಷಗಳಿಂದಲೂ ಒಂಟಿತನವೆನ್ನುವ ಕ್ರೂರ ಶತ್ರುವಿನೊಂದಿಗೆ ಸದಾಕಾಲ ಹೋರಾಡುತ್ತಾ ಬದುಕಿದ್ದೇನೆ!

ರೆಬೆಕಾರ ಕಥೆಯಿಂದ ನಾನು ತಲ್ಲಣಿಸತೊಡಗಿದೆ.

* * * *

ದಿನಕಳೆದಂತೆ ರೆಬೆಕಾರ ಜೀವನದಲ್ಲಿ ಸ್ವಲ್ಪವಾದರೂ ಹುರುಪು ತುಂಬುವಲ್ಲಿ ನಾನು ಸಫಲನಾದೆ. ಈ ದಿಶೆಯಲ್ಲಿ ನನ್ನ ತಾಯಿ ಹಾಗೂ ಶಾಲಿನಿ ಸಹ ನಿರ್ವಂಚನೆಯಿಂದ ಪ್ರಯತ್ನಪಟ್ಟರು. ರೆಬೆಕಾರ ಬಾಡಿದ ಮುಖದಲ್ಲಿ ಆಗಾಗ್ಗೆ ಚಿಮ್ಮುವ ನಗೆಯ ಅಲೆ, ಅವರ ಮನೋವೇದನೆಯನ್ನು ಕಡಿಮೆ ಮಾಡುತ್ತಿದೆ ಎನ್ನುವ ಅರಿವು ನನ್ನಲ್ಲಿ ಮೂಡಲಾರಂಭಿಸಿ ಧನ್ಯತೆಯ ಸಂತೃಪ್ತಿ ಬರಲಾರಂಭಿಸಿತು.

ಆದರೆ ನನ್ನ ಉದ್ದೇಶ ಇಷ್ಟು ಮಾತ್ರವಾಗಿರಲಿಲ್ಲ.

ಶ್ರೀದರ ಜೀವನದ ಪ್ರತಿಯೊಂದು ಮಜಲನ್ನೂ ಆನಂದದಿಂದ ಸವಿಯುತ್ತಿರುವಾಗ, ರೆಬೆಕಾ ಮಾತ್ರ ವಂಚಿತರಾಗಿ ಉಳಿಯಬೇಕೆ?

ರೆಬೆಕಾ ಮತ್ತೆ ಮದುವೆಯಾಗಬೇಕು.

ರೆಬೆಕಾರ ಹಿನ್ನೆಲೆಯೆಲ್ಲಾ ಅರಿತುಕೊಂಡು ರೆಬೆಕಾರನ್ನು ಮದುವೆಯಾಗ ಬಯಸುವಂತಹ ವಿಶಾಲ ಹೃದಯದವರನ್ನು ಹುಡುಕಲು ನಾನು ಪ್ರಯತ್ನ ಪಡಬೇಕು. ಅಂತೆಯೆ ರೆಬೆಕಾರನ್ನು ಸಹ ಒಪ್ಪಿಸಬೇಕು. ಈ ನನ್ನ ಯೋಜನೆಯಲ್ಲಿ ಯಾವ ತೊಂದರೆ ಬಂದರೂ ಸಹ ನಾನು ಹಿಂಜರಿಯಬಾರದು.

ಹಾಗಾದರೆ ಮಾತ್ರ ನನ್ನ ಧನ್ಯತೆಯ ಸಂತೃಪ್ತಿ ನಿರಂತರವಾಗುತ್ತದೆ. ಅದಕ್ಕಿಂತಲೂ ಹೆಚ್ಚಿನದಾಗಿ ರೆಬೆಕಾರ ಜೀವನ ಹಸನವಾಗುತ್ತದೆ.

* * * *

ಎಂದಿನಂತೆ ರೆಬೆಕಾರ ಮನೆಗೆ ನಾನು ಹೋದಾಗ ಸಂಜೆಯಾಗಿತ್ತು. ಬಹಳ ಹೊತ್ತು ಅದೂ ಉದೂ ಮಾತನಾಡಿದ ನಂತರ,

"ಅನಂತಕೃಷ್ಣ, ನಿಮ್ಮಿಂದ ನನಗೊಂದು ಸಹಾಯವಾಗಬೇಕು, ಮಾಡುತ್ತೀರೇನು?" ರೆಬೆಕ ಕೇಳಿದರು.

"ಹೇಳಿ ಮೇಡಂ..."

"ನೀವು ಇನ್ನುಮುಂದೆ ನನ್ನ ಮನೆಗೆ ಬರಬಾರದು... " ರೆಬೆಕಾರ ಧ್ವನಿಯಲ್ಲಿ ನಡುಕವಿತ್ತು.

ರೆಬೆಕ ಹೇಳಿದ್ದು ಅರ್ಥ ಮಾಡಿಕೊಳ್ಳಲು ನನಗೆ ಹಲವಾರು ನಿಮಿಷಗಳೇ ಹಿಡಿದವು.

ಎಲ್ಲಿಯೋ ಏನೋ ಪ್ರಮಾದ ನಡೆದಿದೆ. ಇಲ್ಲದಿದ್ದರೆ ಇಂದು ತಮ್ಮ ಏಕೈಕ ಹಿತೈಷಿ ನಾನು ಎಂದು ದೃಢವಾಗಿ ನಂಬಿರುವ ರೆಬೆಕ ಈ ಮಾತು ಹೇಳುತ್ತಿದ್ದರೆ? ವಿಷಯವನ್ನು ಬಹು ತಾಳ್ಮೆಯಿಂದ ನಿಧಾನವಾಗಿ ಪರಿಶೀಲಿಸಬೇಕು. ದುಡುಕುವುದರಲ್ಲಿ ಅರ್ಥವಿಲ್ಲ.

"ಸರಿ ಮೇಡಂ, ನಿಮ್ಮ ಇಷ್ಟದಂತೆಯೇ ಆಗಲಿ. ಅಂದ ಹಾಗೆ ನಿಮ್ಮ ಮನೆಯ ಕೀ ನನ್ನಲ್ಲೊಂದು ಇದೆಯಲ್ಲವೆ, ಅದನ್ನು..."

"ಅದು ನಿಮ್ಮ ಬಳಿಯೇ ಇರಲಿ ಅನಂತಕೃಷ್ಣ. ನಾನು ನಿಮ್ಮ ಮನೆಗೆ ಬಂದಾಗ ತೆಗೆದುಕೊಳ್ಳುತ್ತೇನೆ."

"ಮೇಡಂ, ನನ್ನಿಂದ ನಿಮಗೆ ಯಾವುದೇ ರೀತಿಯ ಸಹಾಯ ಬೇಕಾದಲ್ಲಿ..." ನನಗೆ ಮುಂದೆ ಮಾತನಾಡಲಾಗಲಿಲ್ಲ. ಏನೋ ಹೇಳಿಕೊಳ್ಳಲಾಗದ ಉದ್ವೇಗ.

ನಾನು ಎದ್ದು ಹೊರಬಂದೆ.

ರೆಬೆಕಾರ ಕಣ್ಣಿನಿಂದ ಇಳಿದ ನೀರ ಹನಿಗಳು ನನಗೆ ಕಾಣಬಾರದೆಂಬ ಅವರ ಪ್ರಯತ್ನಕ್ಕೆ ಸಫಲತೆ ಸಿಗಲಿಲ್ಲ.

ಭಾರವಾದ ಹೃದಯದಿಂದ ಮನೆಗೆ ಹಿಂತಿರುಗಿದೆ.

* * *

ರೆಬೆಕಾರ ವಿಚಿತ್ರ ವರ್ತನೆಯ ಕಾರಣ ಮನೆಯಲ್ಲಿ ತಾಯಿಯಿಂದ ತಿಳಿಯಿತು. ಈಚೆಗೆ ಶಾಲಿನಿ, ನನ್ನ ಹಾಗೂ ರೆಬೆಕಾರ ಸ್ನೇಹವನ್ನು ಸಂದೇಹದಿಂದ ನೋಡಲಾರಂಭಿಸಿದ್ದಳಂತೆ. ಇಂದು ಮದ್ಯಾಹ್ನ ರೆಬೆಕ ರಜೆ ತೆಗೆದುಕೊಂಡು, ಏನನ್ನೋ ತರಲು ಹೋದರಂತೆ. ಆಗ ಶಾಲಿನಿ ರೆಬೆಕಾರನ್ನು, ಅವಳ ಅನುಮಾನ ದೃಷ್ಟಿಯನ್ನು ಎತ್ತಿ ಹೀನಮಾನ ನಿಂದಿಸಿ ಬೇಗನೇ ಮನೆಗೆ ಬಂದಳಂತೆ.

ತಾಯಿಗೆ, ನಿಮ್ಮ ಮಗ ಅವಲ ಸಂಗವನ್ನು ಬಿಟ್ಟರೆ ಮಾತ್ರ ನಾನು ನಿಮ್ಮ ಸೊಸೆಯಾಗಿ ಉಳಿಯುತ್ತೇನೆ ಎಂದು ಹೇಳಿ, ನನ್ನ ತಾಯಿ ಎಷ್ಟೇ ತಡೆದರೂ ನಿಲ್ಲದೆ ತವರೂರಿಗೆ ಹೊರಟುಹೋದಳಂತೆ!

ಮದುವೆಯಲ್ಲಿ ನನ್ನನ್ನು ನಾನು ಮಾರಿಕೊಂಡಿದ್ದರೂ ಸಹ, ತುಂಬಾ ಸಹಕಾರಿಯಾದ ಪತ್ನಿ ದೊರೆತಳೆಂದು ನಾನು ಯಾವಾಗಲೂ ಸಂತಸ ಪಡುತ್ತಿದ್ದೆ. ರೆಬೆಕಾರನ್ನು ಕುರಿತು ಅವಳೂ ಸಹ ಅಪಾರವಾದ ವಿಶ್ವಾಸವನ್ನು ಹೊಂದಿದ್ದಳು. ಅವರ ಸೋತ ಜೀವನದಲ್ಲಿ ಹುರುಪು ತುಂಬಲು ನಾನು ಪಟ್ಟ ಪ್ರಯತ್ನದಲ್ಲಿಯೂ ಶಾಲಿನಿ ಪಾತ್ರ ತುಂಬಾ ಪ್ರಮುಖವಾಗಿದೆ. ಆದರೆ ಕೂಡಲೇ ಇಂತಹ ಅನುಮಾನ ಇವಳಿಗೇಕೆ ಬಂತು? ವಿಷಯವನ್ನು ಅವಳಾಗಲಿ, ತಾಯಿಯವರಾಗಲಿ ಮುಂಚೆಯೆ ನನ್ನ ಮಳಿ ತಿಳಿಸಿದ್ದರೆ ಇಷ್ಟೊಂದು ರಗಳೆಯಾಗುತ್ತಿರಲೇ ಇರಲಿಲ್ಲವಲ್ಲ! ಶಾಲಿನಿ ವಿವೇಕಸ್ತೆಯಾದರೂ ಅವಿವೇಕಿಯಂತೆ ವರ್ತಿಸಿಬಿಟ್ಟಳಲ್ಲ!

ಅರ್ಥಪೂರ್ಣ ಬದುಕಿಗಾಗಿ ಅರಳಬೇಕಾಗಿದ್ದ ವೈಚಾರಿಕ ಪ್ರಜ್ಞೆಯೊಂದು ಅರಳದೆಯೇ ಬಾಡುತ್ತಿತ್ತು. ರೆಬೆಕಾರ ತಂದೆಯ ಕರ್ತವ್ಯಲೋಪದಿಂದ, ಮಲತಾಯಿಯ ಅಸೂಯೆಯಿಂದ, ಶ್ರೀಧರರ ಲಂಪಟತನದಿಂದ ಶ್ರೀಧರರ ತಾಯಿ-ತಂದೆಯರ ಜಾತಿ-ಧರ್ಮಗಳ ದುರಭಿಮಾನದಿಂದ ನನ್ನ ತಾಯಿಯ ಹಣದ ವ್ಯಾಮೋಹದಿಂದ ಕೊನೆಗೆ ಶಾಲಿನಿಯ ಅವಿವೇಕದಿಂದಲೂ ಸಹ ನನಗೆ ಎಲ್ಲರ ಬಗ್ಗೆಯೂ ಅಸಹ್ಯ ಬರಲಾರಂಭಿಸಿತು.

* * *

ಮಾನಸಿಕ ಒತ್ತಡಗಳಿಂದ ಬಳಲಿದ್ದರಿಂದಲೂ ರಾತ್ರಿ ಸರಿಯಾಗಿ ನಿದ್ದೆ ಮಾಡದೇ ಇದ್ದುದರಿಂದಲೂ ಕೆಲಸ ಮಾಡಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಉಂಟಾಗಿತ್ತು. ಹಾಗೂ ಹೀಗೂ ಮಧ್ಯಾಹ್ನದವರೆಗೂ ಕುಳಿತುಕೊಂಡೆ. ರೆಬೆಕಾರ ಮೇಲೆ ಅವರ ಸುತ್ತಮುತ್ತಲಿನ ಜನ ನಡೆಸಿದ, ನಡೆಸುತ್ತಿರುವ ದೌರ್ಜನ್ಯ ನನ್ನ ಒಳಗನ್ನು ಒಂದೇ ಸಮನೆ ಕೊರೆಯುತ್ತಿತ್ತು. ನನಗೆ ಕೂರಲು ಸಾಧ್ಯವೇ ಇಲ್ಲದಂತಾಯಿತು. ರೆಬೆಕಾರನ್ನು ಈ ಕ್ಷಣವೇ ಕಂಡು ಶಾಲಿನಿ ಮಾಡಿದ ತಪ್ಪಿಗಾಗಿ ಕ್ಷಮೆ ಯಾಚಿಸಿ ಅವರ ಮನಸ್ಸನ್ನು ಬದಲಾಯಿಸಬೇಕು ಎಂದು ನಿರ್ಧರಿಸಿ ಬ್ಯಾಂಕಿಗೆ ಫೋನ್ ಮಾಡಿದೆ.

ರೆಬೆಕ ಬಂದಿಲ್ಲವೆಂದು ತಿಳಿಯಿತು.

ರೆಬೆಕಾರ ಮನೆಗೆ ಹೋದೆ.

ಕರೆಗಂಟೆಗೆ ಪ್ರತಿಕ್ರಿಯೆ ಒಳಗಿನಿಂದ ಬರಲಿಲ್ಲ. ರೆಬೆಕ ಎಲ್ಲಾದರೂ ಹೊರ ಹೋಗಿರಬಹುದು, ಸ್ವಲ್ಪ ಹೊತ್ತು ಕೂತು ಕಾದರೆ ಅವರು ಹಿಂತಿರುಗಿ ಬರಬಹುದೆಂದು ನನ್ನ ಬಳಿ ಇದ್ದ ಮನೆಯ ಕೀಯಿಂದ ಬೀಗ ತೆಗೆದು ಒಳಹೋದೆ.

ರೆಬೆಕಾರ ಹ್ಯಾಂಡ್ ಬ್ಯಾಗ್ ಸೋಫಾದ ಮೇಲೆಯೇ ಇತ್ತು.

ರೆಬೆಕ ಧರಿಸುತ್ತಿದ್ದ ಎಲ್ಲಾ ಪಾದರಕ್ಷೆಗಳೂ ಅಲ್ಲಿಯೇ ಇದ್ದವು.

ಹಾಗಾದರೆ?

ನನ್ನ ಮೈ ನಡುಗಿತು.

ರೆಬೆಕ ಮಲಗುವ ಕೋಣೆಯ ಬಾಗಿಲನ್ನಿ ತಳ್ಳಿದೆ.

ಪ್ರತಿರೋಧ ಇಲ್ಲದೆಯೇ ತೆರೆದುಕೊಂಡಿತು.

ಮಂಚದ ಮೇಲೆ ರೆಬೆಕ ನಿಶ್ಚಲರಾಗಿ ಮಲಗಿದ್ದರು.

ಬೆಡ್ ಲ್ಯಾಂಪಿನ ಹತ್ತಿರ ಪತ್ರವೊಂದಿತ್ತು.

ಆ ಪತ್ರದ ಅವಶ್ಯಕತೆ ನನಗಿರಲಿಲ್ಲ.

ಶೂನ್ಯ ದೃಷ್ಟಿಯಿಂದ ರೆಬೆಕಾರನ್ನೇ ನೋಡುತ್ತಾ ನಾನು ಅತ್ತೆ, ಬಹುವಾಗಿ ಅತ್ತೆ, ಜೀವನದಲ್ಲಿ ಸರ್ವಸ್ವವನ್ನೂ ಕಳೆದುಕೊಂಡವರಂತೆ ಅತ್ತೆ, ಮಾನವೀಯ ಮೌಲ್ಯಗಳು, ಬದುಕಿನ ಅರ್ಥ, ಹೆಣ್ಣು - ಗಂಡಿನ ನಡುವೆ ಇರುವ ವಿಷಯೇತರ ಸಂಬಂಧ, ರೆಬೆಕಾರ ಆತ್ಮಹತ್ಯೆಯ ಮೂಲಕ, ಕರ್ತವ್ಯಲೋಪ, ಅಸೂಯೆ, ಅನಾಗರಿಕತೆ, ಅಪನಂಬಿಕೆ, ಅಪ್ರಬುದ್ಧ ಚಿಂತನೆ, ಜಾತಿ-ಧರ್ಮಗಲ ಅವೈಚಾರಿಕ ಕರಾಳ ಸಂಕೋಲೆಗಳ ದಳ್ಳುರಿಯಲ್ಲಿ ಬೇಯುತ್ತಿರುವುದನ್ನು ಕಂಡು ಅಪಾರವಾಗಿ ಅತ್ತೆ.

- ಟಿ ಎಸ್ ಗುರುರಾಜ
'ಕಾಶ್ಯಪ', ಎನ್ ಹೆಚ್ ೪,
ಹಿರಿಯೂರು, ಚಿತ್ರದುರ್ಗ

* * *

ಪ್ರಸ್ತುತ ಸಣ್ಣ ಕಥೆ 'ದಳ್ಳುರಿ' ೩.೩.೨೦೦೨ರ 'ಕರ್ಮವೀರ' ವಾರಪತ್ರಿಕೆಯ 'ವಾರದ ಕಥೆ'ಯಾಗಿ ಪ್ರಕಟವಾಗಿದೆ.