ದಿಬ್ಬದಿಂದ ಹತ್ತಿರ ಆಗಸಕ್ಕೆ
“ದಿಬ್ಬದಿಂದ ಹತ್ತಿರ ಆಗಸ”ಕ್ಕೆ ಎನ್ನುವುದು ಕರ್ಕಿ ಕೃಷ್ಣಮೂರ್ತಿ ಅವರ ಕಥಾ ಸಂಕಲನ. ಸುಮಾರು ೧೫೦ ಪುಟಗಳ ಈ ಸಂಕಲನದ ಒಂದು ಕಥೆ ‘ದಿ ಗ್ರೇಟ್ ವಾಲ್ ಆಫ್ ಚೈನಾ’ ಇದರ ಆಯ್ದ ಭಾಗ ಇಲ್ಲಿದೆ…
“ಜೊಂಪು ಜೊಂಪಾಗಿ ಬೆಳೆದಿದ್ದ ಗಿಡಗಂಟಿಗಳನ್ನು ಕೈಯ್ಯಿಂದ ಅತ್ತಿತ್ತ ತಳ್ಳುತ್ತ ಮಣ್ಣಿನ ಸಣ್ಣ ಗುಡ್ಡವೊಂದನ್ನು ಏರಿ ಉಧ್ಗರಿಸಿದ ಸ್ಯಾಂಡಿ.
ಅವನ ಹಿಂದೆಯೇ ಎದುರುಸಿರು ಬಿಡುತ್ತ ಬಂದು, ದಿಬ್ಬದ ತುದಿಯಲ್ಲಿ ಸೊಂಟದ ಮೇಲೆ ಕೈಯ್ಯಿಟ್ಟು ನಿಂತ ಸದಾಶಿವ. ಸುತ್ತಲೂ ಕಣ್ಣಾಡಿಸಿದ. ಅಂಥಾ ದಟ್ಟ ಕಾಡಲ್ಲದಿದ್ದರೂ, ಮರ ಗಿಡಗಳಿಂದ ತುಂಬಿದ ಪ್ರದೇಶದಲ್ಲಿ ತಾನು ನಿಂತಿರುವುದಂತೂ ಸ್ಪಷ್ಟವಿತ್ತು. 'ಗ್ರೇಟ್ ವಾಲ್' ಅಂತಾ ಕರೆಯಬಹುದಾದ ಯಾವುದೂ ಅಲ್ಲಿ ಗೋಚರಿಸಲಿಲ್ಲ. ಹಸಿರು ಗಿಡಗಳ ನಡುವೆ ಮಣ್ಣು ಕಲ್ಲುಗಳಿಂದ ತುಂಬಿದ, ಸಣ್ಣ ದೊಡ್ಡ ದಿಬ್ಬಗಳು ಅಲ್ಲಲ್ಲಿ ಕಾಣುತ್ತಿದ್ದವು. ಅದೇ ಸಾಲಿನ ಅನತಿ ದೂರದಲ್ಲಿ ಕಲ್ಲಿನಿಂದ ನಿರ್ಮಿತವಾದ ವೀಕ್ಷಣಾ ಗೋಪುರದಂತ ಆಕೃತಿ, ಅದೂ ಶಿಥಿಲಾವಸ್ಥೆಯಲ್ಲಿತ್ತು. ಉಳಿದಲ್ಲೆಲ್ಲ ಬರೀ ಹಸಿರೇ.
ಸದಾಶಿವನ ಮುಖದಲ್ಲಿಯ ಗೊಂದಲವನ್ನು ಗಮನಿಸಿದ ಸ್ಯಾಂಡಿ,
"ನೀನು ಅವಕ್ಕಾಗ್ತೀಯಾ ಅಂತಾ ಗೊತ್ತಿತ್ತು. ಆಗ್ಲಿ ಅಂತಾನೇ ಇಲ್ಲಿಗೆ ಕರೆದುಕೊಂಡು ಬಂದೆ" ಅಂದ.
"ಓಹ್...ನೋ! ಡು ಯು ಮೀನ್, ದಿಸ್ ಈಸ್..." ಸದಾಶಿವ ಮಾತು ಮುಗಿಸುವ ಮೊದಲೇ ನಡುವೆ ಬಾಯಿ ಹಾಕುತ್ತಾ;
"ಮತ್ತೇನು? ನೀನು ಚಿತ್ರದಲ್ಲೋ, ವಿಡಿಯೋದಲ್ಲೋ ನೋಡಿದ ಹಾಗೇ ಇರುತ್ತದೆ ಅಂದುಕೊಂಡಿದ್ದೆಯೇನು?" ಕೇಳಿದ ಸ್ಯಾಂಡಿ. ಸಣ್ಣ ವ್ಯಂಗ್ಯವಿತ್ತು ಅವನ ದನಿಯಲ್ಲಿ.
"ಕಮಾನ್....ಆರ್ ಯು ಸೀರಿಯಸ್? ಇದೇನಾ ಚೈನಾ ವಾಲು? ತಮಾಷೆ ಮಾಡುತ್ತಿಲ್ಲ ತಾನೇ?"
"ಅಫ್ಕೋರ್ಸ್ ತಮಾಷೆ ಮಾಡುತ್ತಿಲ್ಲ. ಇದೂ ಕೂಡಾ ಚೈನಾ ವಾಲೇ. ದ ಸೇಮ್, ಗ್ರೇಟ್ ವಾಲ್ ಆಫ್ ಚೈನಾ. ಬಿಲೀವ್ ಮಿ. ಆ ಗೋಡೆಯ ಮೇಲೇ ನಾವು ನಿಂತಿರುವುದು”
ಗ್ರೇಟ್ ವಾಲ್ ತೋರಿಸುತ್ತೇನೆಂದು ಕರೆದುಕೊಂಡು ಬಂದು ಇದ್ಯಾವುದೋ ಕಲ್ಲು ಮಣ್ಣುಗಳ ದಿಬ್ಬ ಹತ್ತಿಸಿ, 'ಇದೇ ಆ ಗೋಡೆ' ಎನ್ನುತ್ತಿರುವ ಸ್ಯಾಂಡಿಯ ವರ್ತನೆಗೆ ಭಾರೀ ಕಿರಿಕಿರಿಯಾಯಿತು ಸದಾಶಿವನಿಗೆ. 'ಇದೆಂಥ ತಲೆಹರಟೆ? ಇವನೇನು ನನ್ನನ್ನು ಮರ್ಖನನ್ನಾಗಿಸುವ ಪ್ರಯತ್ನದಲ್ಲಿದ್ದಾನೋ....ಅಥವಾ ಇವನ ಉದ್ದೇಶ ಬೇರೆಯೇ ಆಗಿದೆಯೋ? ಈ ಚೈನೀಸ್ ಬೋಳಿಮಕ್ಕಳನ್ನು ನಂಬುವ ಹಾಗಿಲ್ಲ, ಮೋಸ ಮಾಡಲು ಕಾಯ್ತರ್ತಾರೆ...' ಎಂಬ ಸಣ್ಣ ಆತಂಕವೂ ಆಯಿತು.”
ಕೃಷ್ಣಮೂರ್ತಿಯವರ ಪ್ರತಿಯೊಂದು ಕಥೆಯೂ ಕುತೂಹಲವನ್ನು ಕೆರಳಿಸುತ್ತಾ ಹೋಗುತ್ತದೆ. ಅವರು ತಮ್ಮ ಕಥಾ ಸಂಕಲನಕ್ಕೆ ಬರೆದ “ನಾಲ್ಕು ಮಾತು" ಇಲ್ಲಿದೆ.
“ತನಗೆ ಬೇಕಿರುವುದೇನೆಂಬ ಸ್ಪಷ್ಟ ಅರಿವಿಲ್ಲದೇ ಅದಕ್ಕಾಗಿ ಅರಸುವುದು ಆಧುನಿಕ ಮನುಷ್ಯನ ಲಕ್ಷಣವಾಗಿದೆ. ಸತ್ಯಶೋಧನೆಯ ಹಾದಿಯಲ್ಲಿ ನಮ್ಮ ಪೂರ್ವಿಕರು ಕಂಡುಕೊಂಡಿದ್ದ "ನೇತಿ, ನೇತಿ" ಎನ್ನುವ ತತ್ವ ಪ್ರಯೋಗವನ್ನು; ನಾವಿಂದು, "ಇದಲ್ಲ, ಇದೂ ಅಲ್ಲ" ಅನ್ನುತ್ತ ನಮ್ಮ ಸುಖದ ಅನ್ವೇಷಣೆಗೆ ಅಳವಡಿಸಿಕೊಂಡಿದ್ದೇವೆ. ಇರದಿರು ವುದೇನೆಂದು ಗೊತ್ತಿಲ್ಲದೇ ತುಡಿಯುವ ಈ ಸ್ಥಿತಿ ವಿಭಿನ್ನ ಹಾಗೂ ತೀಕ್ಷ್ಣ. ಸಾಲದೆಂಬಂತೆ ಜಾಗತೀಕರಣ, ನಗರವಾಸ, ಕಾರ್ಪೋರೇಟ್ ವ್ಯವಸ್ಥೆ ಇತ್ಯಾದಿಗಳು ಆ ತುಡಿತದ ಕಾವಿಗೆ ಉರುವಲಾಗಿವೆ ಇಂದು. ಸಪ್ತಸಾಗರದಾಚೆಯ ದೇಶವೂ ನಮ್ಮ ನೆರೆಮನೆಯಷ್ಟೇ ಹತ್ತಿರವೆನಿಸಬಹುದಾದ ಕಾಲಘಟ್ಟದಲ್ಲೂ, ಈ ವಿದೇಶದ ಆಕರ್ಷಣೆ ನಮ್ಮಲ್ಲಿನ್ನೂ ಮಾಸಿಲ್ಲ. ಇದೂ ಆ ಅರಸುವಿಕೆಯ ಒಂದು ಭಾಗವೇ ಆಗಿರಬಹುದು. ಅಂಥಹುದೇ ಹುಡುಕಾಟದ, ವಿದೇಶೀ ನೆಲದ ಕಥೆಗಳೇ ಹೆಚ್ಚಿರುವ ಈ ಸಂಗ್ರಹಕ್ಕೆ `ದಿಬ್ಬದಿಂದ ಹತ್ತಿರ ಆಗಸಕ್ಕೆ' ಎನ್ನುವ ಹೆಸರು ಸೂಕ್ತ ಎನಿಸಿತು ನನಗೆ.
ಈ ಸಾಲು ಎತ್ತುವ ಪ್ರಶ್ನೆಗಳು ಹಲವು. ದಿಬ್ಬದಿಂದ ಆಗಸ ಹತ್ತಿರವೇ? ದಿಬ್ಬದ ಮೇಲಿರುವವನು ಹಾಗೆಂದುಕೊಂಡು ಖುಷಿಪಡಬಹುದು, ಕೆಳಗಿರುವವನು ಅವನನ್ನು ನೋಡಿ ಅಸೂಯೆಯನ್ನೂ ಪಡಬಹುದು. ಬೃಹತ್ ಶಿಖರದ ಮೇಲೇರಿ ನೋಡಿದರೆ, ಪ್ರತಿ ದಿಬ್ಬವೂ ಇರುವೆಗೂಡಿನಂತೆ ಗೋಚರಿಸುತ್ತದೆ. ಆಕಾಶದಿಂದ ನೋಡಿದಾಗ ಅದೇ ಬೃಹತ್ ಶಿಖರ ಮಕ್ಕಳಾಟದ ಮರಳಗುಡ್ಡೆಯಂತೆ ಕಾಣುತ್ತದೆ. ಎಷ್ಟೇ ಎತ್ತರದ ದಿಬ್ಬವೇರಿದರೂ, ಆಕಾಶಕ್ಕೆ ಎಷ್ಟು ತಾನೇ ಹತ್ತಿರವಾದೇವು? ಹಾಗಂತ ನೆಲಕ್ಕೂ ದಿಬ್ಬಕ್ಕೂ ವ್ಯತ್ಯಾಸವೇ ಇಲ್ಲವೇ? ಇದೆಯೆಂದಾದರೆ ಆ ವ್ಯತ್ಯಾಸ ನಿಜಕ್ಕೂ ಗಣ್ಯವೇ? ಅದೆಲ್ಲ ಇರಲಿ, ನಾವು ಮುಟ್ಟಲು ಹೊರಟಿರುವ ಈ ಆಕಾಶವೆನ್ನುವುದು ಅಸಲಿಗೆ ಅಸ್ತಿತ್ವದಲ್ಲಿದೆಯೇ?”