ದಿವಂಗತ ವೆಂಕಟಪ್ಪನು ಮಾಡುವ ವಿಜ್ಞಾಪನೆಗಳು!
ನಾನು ಕೆಲಸ ಮಾಡುತ್ತಿದ್ದ ಹಿಂದಿನ ಕಂಪೆನಿಯಲ್ಲಿ ವೆಂಕಟೇಶ್ ನನ್ನ ಸಹೋದ್ಯೋಗಿ. ಎಲ್ಲರ ಜೊತೆ ತಮಾಷೆಯಾಗಿ ಮಾತಾಡಿಕೊಂಡು , ಲವಲವಿಕೆಯಿಂದ ಓಡಾಡಿಕೊಂಡು ಚನ್ನಾಗಿಯೇ ಇದ್ದರು. ಹೀಗಿರುವಾಗ ಇದ್ದಕ್ಕಿದ್ದಹಾಗೆ ಒಂದು ದಿನ ಸಡನ್ನಾಗಿ ಅವರ ಮದುವೆ ಗೊತ್ತಾಯಿತು! ನಮ್ಮ ಕಾಲದಲ್ಲಿ, ಈಗಿನ ಹಾಗೆ, ಹುಡುಗಿಯನ್ನ ಪ್ರೀತಿಸಿದ ಐದೇ ನಿಮಿಷದಲ್ಲಿ ಮದುವೆ ಪತ್ರಿಕೆ ಮುದ್ರಿಸಿ ಕೊಡುವ ಡಿಟಿಪಿ ಫೆಸಿಲಿಟಿ ಇರಲಿಲ್ಲ.
ಕೈಯಲ್ಲಿ ಮೊಳೆ ಜೋಡಿಸಿದ ಪುರಾತನ ಲಗ್ನಪತ್ರಿಕೆ ಮಾದರಿಯೊಂದು ಸನಾತನ ಕಾಲದಿಂದಲೂ ಪ್ರಿಂಟಿಂಗ್ ಪ್ರೆಸ್ ನಲ್ಲಿ ಸಿದ್ಧವಾಗಿರುತ್ತಿತ್ತು. ಅದರಲ್ಲಿಯೇ ಹೆಸರು ಇನ್ನಿತರ ಸಣ್ಣಪುಟ್ಟ ಮಾರ್ಪಾಡು ಮಾಡಿ ಮುಗಿಸುತ್ತಿದ್ದುದು ಕ್ರಿಸ್ತಪೂರ್ವದಿಂದಲೂ ನಡೆದುಕೊಂಡು ಬಂದ ಪದ್ಧತಿ. ಗಂಡು ಮಕ್ಕಳಿಗೆ ಅಜ್ಜನ ಹೆಸರನ್ನೂ, ಹೆಣ್ಣು ಮಕ್ಕಳಿಗೆ ಅಜ್ಜಿಯ ಹೆಸರನ್ನೂ ಕಂಪಲ್ಸರಿಯಾಗಿ ಇಡುತ್ತಿದ್ದ ಆ ದಿನಗಳಲ್ಲಿ , ಅಜ್ಜನ ಲಗ್ನಪತ್ರಿಕೆಯನ್ನು ಯಥಾವತ್ ಮೊಮ್ಮಗನ ಮದುವೆಗೆ ಉಪಯೋಗಿಸುವ ಸಾಧ್ಯತೆಯೂ ಇಲ್ಲದಿರಲಿಲ್ಲ!
ಒಂದು ದಿನ ವೆಂಕಟೇಶ್ ಆಫೀಸಿನಲ್ಲೇ ಕೂತು ಮದುವೆ ಪತ್ರಿಕೆ ಒಕ್ಕಣೆ ಶುರು ಮಾಡಿದರು. ಅವರ ತಂದೆ, ವೆಂಕಟಪ್ಪ, ತೀರಿಕೊಂಡು ಎರಡು ವರ್ಷದ ಮೇಲಾಗಿತ್ತು. ತಂದೆಯ ಮೇಲೆ ಅಪಾರ ಪ್ರೀತಿ ಇಟ್ಟಿದ್ದ ವೆಂಕಟೇಶ್ ಅವರ ಹೆಸರಿನಲ್ಲಿಯೇ ಪತ್ರಿಕೆ ಇರಬೇಕೆಂದು ಹಟ ಹಿಡಿದರು. ಯಾರು ಏನೇ ಸಮಜಾಯಿಸಿ ಕೊಟ್ತರೂ ಒಪ್ಪುವುದಕ್ಕೆ ಅವರು ಸಿದ್ಧರಿರಲಿಲ್ಲ. ಕಡೆಗೂ "ದಿವಂಗತ ವೆಂಕಟಪ್ಪನು ಮಾಡುವ ವಿಜ್ಞಾಪನೆಗಳು" ಎಂದೇ ಮುದ್ರಿಸಿದ ಲಗ್ನ ಪತ್ರಿಕೆ ಹಂಚಿಕೆಯಾಯಿತು!
ವೆಂಕಟೇಶ್ ಅವರ, ತಂದೆಯ ಮೇಲಿನ ಪ್ರೀತಿ ಮೆಚ್ಚುವಂಥದ್ದು. ಆದರೆ ಭಾಷಾ ಪ್ರಯೋಗ ಸರಿಯೇ ?
ಇತ್ತೀಚಿಗೆ ’ಕನ್ನಡಪ್ರಭ’ ಶುಕ್ರವಾರದ ಸಿನಿಮಾ ಜಾಹಿರಾತಿನಲ್ಲಿ "ಡಾ. ರಾಜ್ ಕುಮಾರ್ ಅರ್ಪಿಸುವ" ಅನ್ನುವ ಪ್ರಯೋಗ ನೋಡಿದೆ.
Comments
ಉ: ದಿವಂಗತ ವೆಂಕಟಪ್ಪನು ಮಾಡುವ ವಿಜ್ಞಾಪನೆಗಳು!
ಉ: ದಿವಂಗತ ವೆಂಕಟಪ್ಪನು ಮಾಡುವ ವಿಜ್ಞಾಪನೆಗಳು!
In reply to ಉ: ದಿವಂಗತ ವೆಂಕಟಪ್ಪನು ಮಾಡುವ ವಿಜ್ಞಾಪನೆಗಳು! by kpbolumbu
ಉ: ದಿವಂಗತ ವೆಂಕಟಪ್ಪನು ಮಾಡುವ ವಿಜ್ಞಾಪನೆಗಳು!