ದೇವದಾಸಿ

ದೇವದಾಸಿ

ಕವನ

 ದೇವದಾಸಿ 
-----------------


ಗೆಜ್ಜೆ ಕಟ್ಟಿ ಬಂದಳವಳು ಕಾಲಿಗೆ 
ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತ 
ವೈಯ್ಯಾರದಿ ,ಜನಗಣವದು ಶಿಳ್ಳೆ 
ಚಪ್ಪಾಳೆಯಲಿ ಮುಳುಗಿ 
ತೇಲಿದರವಳ ನೃತ್ಯದ ನಶೆಯಲಿ


ನರ್ತನದಂತದಲಿ ನೋಡುತಿವೆ
ಅವಳ ಹೊಳೆವ ಕಾಡಿಗೆ ಕಣ್ಣುಗಳು 
ಮುಖದಲಿ ಮಂದಹಾಸದ ಮಿನುಗು 
ಅದ ನೋಡಿ ತಮ್ಮ ಖುಷಿಯ ಜೋಳಿಗೆ
ತುಂಬಿಸಿಕೊಳ್ಳುತಿರುವ ಮಹಾಜನರು 


ಹೋದರೆಲ್ಲ ತಂತಮ್ಮ ಮನೆಗೆ 
ಗೆಜ್ಜೆ ಕಳಚಿದಳಿವಳು, ಒರೆಸಿದಳು ಕಾಡಿಗೆಯ 
ಕಾಣುತಿವೆ ನಗುವ ಹಿಂದಿನ ಕರಾಳ ಭಾವಗಳು 
ಜೋಡಿ ಕಂಗಳಲಿ, ಹೊರಗೆ ಬರಲಾಗದೆ
ಒದ್ದಾಡುತಿರುವ ಕನಸಿನ ಛಾಯೆಗಳು 


ಆಗಿನ್ನೂ ಪ್ರಪಂಚವನರಿಯದ ವಯಸು 
ಕೇರಿಯಲಿ ಆಡುತಿಹಳಿವಳು ಚೆಲುವಲಿ ಆಟ 
ತನ್ನ ಗೆಳತಿಯರೊಡೆ, ಕಣ್ಣಲ್ಲಿ ಹುದುಗಿದ ಮುಗ್ಧತೆ 
ಬಂದರು ನಾಯಕರ ಪಟ್ಟಿ ಕಟ್ಟಿ ತಿರುಗುವವರು
ತಳ್ಳಿದರಿವಳನು ಮಾಯಾ ಕೂಪಕೆ 


ಬರುವರೀಗ ಕೆಲವರು ನೃತ್ಯದ ಸವಿ ಸವಿಯಲು 
ಮತ್ಹಲವರು ತಂಪುಗೊಳಿಸಲು ಕಾಮದ ಕಣ್ಣನು 
ಕೆಲವರು ಚೇಷ್ಟೆಗೆ, ಸಮಯ ಕಳೆಯಲು 
ಕಾಯುತಿಹರು ಕಾಮತೃಷೆಯ ನೀಗಿಸಿಕೊಳ್ಳಲು 


ಕುಣಿಯುತಿಹಳಿವಳು ಬದುಕಿನ ನಾಟಕದಲಿ 
ಎಸೆದಿಹಳು ಮನಸನು ಕಾಮನ ಕೇರಿಯಲಿ 
ಅನುಭವಿಸುತಿಹರು ಜನ ಚಿತ್ರ ವಿಚಿತ್ರ ಖುಷಿಯ,
ಇವಳ ಮಾನಸ  ಸಮಾಧಿಯ ಮೇಲೆ 
ಹೆಣ್ಣಲ್ಲವೇ ಇವಳು, ಸಂಸಾರದ ಕಣ್ಣಲ್ಲವೇ?