ದೇವರು - ಧರ್ಮ - ದೇಶ ಭಕ್ತಿ - ಹೊಟ್ಟೆ ಪಾಡಿನ ನಡುವೆ.....

ದೇವರು - ಧರ್ಮ - ದೇಶ ಭಕ್ತಿ - ಹೊಟ್ಟೆ ಪಾಡಿನ ನಡುವೆ.....

ಯಾವ ದೇಶಭಕ್ತಿಯು ನನ್ನನ್ನೆಂದೂ ಅಷ್ಟಾಗಿ ಕಾಡಲಿಲ್ಲ, ಕಾರಣ ದೇಶ ಉಳಿಸಲು ಕೋಟ್ಯಾಂತರ ಜನರಿದ್ದಾರೆ. ಯಾವ ದೇವರೂ ನನ್ನನ್ನು ಕಾಡಲಿಲ್ಲ, ಅವರನ್ನು ಉಳಿಸಲು ಇಡೀ ಜಗತ್ತಿನ ಅನೇಕ ಭಕ್ತರಿದ್ದಾರೆ. ಯಾವ ಧರ್ಮವೂ ನನ್ನನ್ನು ಕಾಡಲಿಲ್ಲ, ಅದನ್ನು ಉಳಿಸಲು ಸಾಕಷ್ಟು ಹಿಂಬಾಲಕರಿದ್ದಾರೆ . ಯಾವ ಗ್ರಂಥಗಳೂ ನನ್ನನ್ನು ಕಾಡಲಿಲ್ಲ, ಅದನ್ನು ಓದಿ ಪ್ರವಚಿಸಲು ಬಹಳಷ್ಟು ಜ್ಞಾನಿಗಳಿದ್ದಾರೆ. ಯಾವ ಭಾಷೆಯೂ ನನ್ನನ್ನು ಅಷ್ಟಾಗಿ ಕಾಡಲಿಲ್ಲ, ಅದನ್ನು ಉಳಿಸಲು ಮಾತನಾಡುವ ಜನರಿದ್ದಾರೆ. ಯಾವ ನಟನೂ, ಯಾವ ರಾಜಕಾರಣಿಯು, ಯಾವ ಉದ್ಯಮಿಯೂ,ಯಾವ ಸಾಹಿತಿಯೂ ನನ್ನನ್ನು ಕಾಡಲಿಲ್ಲ, ಅವರಿಗೆ  ಅಭಿಮಾನಿಗಳಿದ್ದಾರೆ. ಆದರೆ...

ರಸ್ತೆಯಲ್ಲಿ ನಡೆದು ಹೋಗುವಾಗ 6 ವರ್ಷದ ಹರಿದ ಲಂಗದ ಪುಟ್ಟ ಬಾಲಕಿ, ಗೊಣ್ಣೆ ಸುರಿಸುವ 2 ವರ್ಷದ ಮಗುವನ್ನು ಎತ್ತಿಕೊಂಡು ನನ್ನ ಬಳಿ ಭಿಕ್ಷೆ ಬೇಡುವ ದೃಶ್ಯ ಸದಾ ಕಾಡುತ್ತದೆ. ರಾತ್ರಿ ಹೋಟೆಲ್ ನಲ್ಲಿ ಊಟ ಮಾಡುವಾಗ 11 ಗಂಟೆಯಾದರೂ ನಾವು, ತಿಂದ ಎಂಜಲು ತಟ್ಟೆ ಎತ್ತಲು ನಿದ್ದೆಗಣ್ಣಿನಲ್ಲಿ ದೈನೇಸಿಯಾಗಿ ನೋಡುತ್ತಾ, ನಿಂತಿರುವ 11 ವರ್ಷದ ಬಾಲಕ ಸದಾ ಕಾಡುತ್ತಾನೆ. ಟ್ರಾಪಿಕ್ ನಲ್ಲಿ ಸಿಗ್ನಲ್ ಗಾಗಿ ಕಾಯುತ್ತಿರುವಾಗ 5 ವರ್ಷದ ಎಳೆ ಕಂದ, ಮೈಮುರಿಯುವಂತೆ ಸರ್ಕಸ್ ಮಾಡುತ್ತಾ ಬಂದು ನನ್ನನ್ನು  ಹಣ ಕೇಳುವ ದೃಶ್ಯ ಸದಾ ಕಾಡುತ್ತದೆ. ಬಸ್ ನಿಲ್ದಾಣದಲ್ಲಿ ನಿಂತಿರುವಾಗ 15 ವರ್ಷದ ಯುವಕ ಚಿಂದಿ ಆಯುತ್ತಾ, ಲಿಪ್ ಸ್ಟಿಕ್, ಪೆನ್ಸಿಲ್, ಗಮ್ ತಿನ್ನುತ್ತಾ, ಮತ್ತೇರಿಸಿಕೊಳ್ಳುವ ದೃಶ್ಯ ಸದಾ ಕಾಡುತ್ತದೆ. ಹೌದು, ಕೆಲವರು ಹೇಳಬಹುದು

ಮಲಿನ ಮನಸ್ಥಿತಿಯವರಿಗೆ ಇಂತಹ ದೃಶ್ಯಗಳೇ ಕಾಣುತ್ತದೆ ಎಂದು. ಹೌದು ಕಲ್ಲನ್ನು ದೇವರೆಂದು, ಜಾತಿಯನ್ನು ಶ್ರೇಷ್ಠವೆಂದು ಭ್ರಮಿಸುವ ಜನ, ಭಿಕ್ಷುಕನನ್ನು ರಮ್ಯವಾಗಿ, ಅಸಹ್ಯವನ್ನು ಅಮೃತವೆಂದು ಕಲ್ಪಿಸಿಕೊಳ್ಳಬಲ್ಲರು. ಭ್ರಮೆಗಳನ್ನು ಸೃಷ್ಟಿಸುತ್ತಾ ವಾಸ್ತವವನ್ನು ಮರೆಮಾಚಬಲ್ಲರು. ಕನಿಷ್ಠ ತಿಳಿದವರಾದರು, ಅಂತಃಕರಣ ಉಳಿಸಿಕೊಂಡಿರುವವರಾದರು,

ಸಮಾಜದ ಈ ಕಟ್ಟ ಕಡೆಯ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ. ಈ ಪರಿಸ್ಥಿತಿಯಲ್ಲಿ  ಇದನ್ನು ಮಾನವೀಯತೆ ಇರುವ ನಾಗರಿಕ ಸಮಾಜ ಎನ್ನಲು ಸಾಧ್ಯವಿಲ್ಲ. ಈ ಪ್ರಶ್ನೆಗಳಿಗೆ ಆತ್ಮಸಾಕ್ಷಿಯ ಉತ್ತರ ಬೇಕಿದೆ.

ಹೊಟ್ಟೆ ತುಂಬಿದವರಿಗೆ

" ಮೇರಾ ಭಾರತ್ ಮಹಾನ್ "

ಹಸಿದ ಹೊಟ್ಟೆಯವರಿಗೆ  ?

ಸಾಮಾಜಿಕವಾಗಿ ಮೇಲಿನ ಸ್ಥಾನದಲ್ಲಿರುವವರಿಗೆ

" ನಮ್ಮ ಸಂಸ್ಕೃತಿ ಮಹಾನ್ "

ಮುಟ್ಟಿಸಿಕೊಳ್ಳದವರಿಗೆ ?

ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರಿಗೆ

" A county of luxury "

ಬಡತನದಲ್ಲಿರುವವರಿಗೆ  ?

ಧರ್ಮಾಧಿಕಾರಿಗಳಿಗೆ 

" ಇದು ಪವಿತ್ರ ಭೂಮಿ "

ಜಾಗೃತ ಮನಸ್ಥಿತಿಯವರಿಗೆ ?

ಬಹುರಾಷ್ಟ್ರೀಯ ಕಂಪೆನಿಗಳಿಗೆ 

" ಬಹು ದೊಡ್ಡ ಮಾರುಕಟ್ಟೆ "

ಅನ್ನ ಬೆಳೆವ ರೈತರಿಗೆ  ?

ರಾಜಕಾರಣಿಗಳಿಗೆ

" ಪ್ರಜಾಪ್ರಭುತ್ವದ ದೇಗುಲ"

ಮತದಾರರಿಗೆ  ?

ಬಲಿಷ್ಠರಿಗೆ 

" ನ್ಯಾಯಾಂಗವೇ ಸುಪ್ರೀಂ "

ದುರ್ಬಲರಿಗೆ  ?

ಪ್ರಬಲ ಮಹಿಳೆಯರಿಗೆ 

" ಅನಿರ್ಬಂಧಿತ ಸ್ವಾತಂತ್ರ್ಯ "

ಅಸಹಾಯಕ ಮಹಿಳೆಗೆ  ?

ಸುಖವಾಗಿರುವವರ ಅಭಿಪ್ರಾಯಕ್ಕೂ, ಕಷ್ಟದಲ್ಲಿರುವವರ ಅಭಿಪ್ರಾಯಕ್ಕೂ‌ ಸಾಕಷ್ಟು ವ್ಯತ್ಯಾಸವಿದೆ. ಅದನ್ನು ಅರ್ಥಮಾಡಿಕೊಂಡಾಗ ಮಾತ್ರ ದೇಶದ ಪ್ರಗತಿ ಸಾಧ್ಯ. ನಮ್ಮ ಮನಸ್ಸುಗಳಲ್ಲಿರುವ ಸ್ವಾರ್ಥ ನಮ್ಮ ಯೋಚನೆಗಳಿಗೂ‌ ಹಬ್ಬಿದರೆ ಕಣ್ಣು ಮಂಜಾಗುತ್ತದೆ, ಕಿವಿ ಮಂದವಾಗುತ್ತದೆ, ಮಾತು ಪೇಲವವಾಗುತ್ತದೆ, ಬುದ್ದಿ ತಾಳ್ಮೆ ಕಳೆದುಕೊಳ್ಳುತ್ತದೆ. ವಿಶಾಲ ಮನಸ್ಸಿನಿಂದ ಯೋಚಿಸುವುದನ್ನು ರೂಪಿಸಿಕೊಳ್ಳಬೇಕಿದೆ...

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ