ದೇವರೊಡನೆ ಸಂದರ್ಶನ - 6
"ಏನ್ರೀ ಇದು? ಎಂದೂ ಇಲ್ಲದ್ದು ಇವತ್ತು ಎಲ್ಲಾ ಅಚ್ಚುಕಟ್ಟಾಗಿ ಹೊದಿಕೆ ಮಡಿಸಿಟ್ಟಿದ್ದೀರಿ. ಟವೆಲ್ಲನ್ನು ಎಲ್ಲೋ ಬಿಸಾಕುತ್ತಿದ್ದವರು ನೀಟಾಗಿ ಇಟ್ಟಿದ್ದೀರಿ. ದೇವರು ಒಳ್ಳೇ ಬುದ್ಧಿ ಕೊಟ್ಟಿದ್ದಾನೆ. ಹೀಗೆಯೇ ಮನೆಕೆಲಸಕ್ಕೂ ಸಹಾಯ ಮಾಡೋ ಬುದ್ಧೀನೂ ಬರಲಿ" - ಪತ್ನಿಯ ಮಾತಿಗೆ ನಗುತ್ತಾ ಗಣೇಶರು, "ಧ್ಯಾನ ಕಣೇ, ಧ್ಯಾನ. ಮಾಡೋ ಕೆಲಸಾನ ನೀಟಾಗಿ ಗಮನವಿಟ್ಟು ಮಾಡಿದರೆ ಅದೇ ಧ್ಯಾನ. ಒಳ್ಳೆಯ ಬಿಸಿ ಬಿಸಿ ಚಾ ತೆಗೆದುಕೊಂಡು ಬಾ. ಧ್ಯಾನ ಮಾಡುತ್ತಾ ಕುಡಿಯುತ್ತೇನೆ. ವಾಕಿಂಗಿಗೂ ಹೋಗಬೇಕಲ್ಲಾ?" ಎಂದು ಉತ್ತರಿಸಿದರು. "ಎಷ್ಟು ದಿವಸಾನೋ ಇಂತಹ ಬುದ್ಧಿ, ನಾನೂ ನೋಡ್ತೀನಿ" ಅನ್ನುತ್ತಾ ಅವರ ಪತ್ನಿ ಅಡುಗೆ ಮನೆಗೆ ಹೋದರು.
ರತ್ನಗಿರಿ ಬೋರೆ ಕಡೆಗೆ ಯಾಂತ್ರಿಕವಾಗಿ ಹೋಗುತ್ತಿದ್ದಾಗ ಗಣೇಶರ ಪಕ್ಕದಲ್ಲೇ ಬುರ್ರನೆ ಬಂದು ನಿಂತ ಬೈಕಿನವ, "ರೀ, ಸ್ವಾಮಿ, ನೋಡಿಕೊಂಡು ಸೈಡಿನಲ್ಲಿ ಹೋಗಿ. ನೀವು ಕೈಕಾಲು ಮುರಿದುಕೊಳ್ಳೋದಲ್ಲದೆ ನಾವೂ ಮುರಿದುಕೊಳ್ಳುವಂತೆ ಮಾಡುತ್ತೀರಿ. ಬೆಳಬೆಳಗ್ಗೇನೇ ಹೀಗಾದ್ರೆ ಹೆಂಗ್ರೀ?" ಎಂದವನೇ ಗಣೇಶರು ಉತ್ತರಿಸುವ ಮುನ್ನವೇ ಮತ್ತೆ ಬುರ್ರನೆ ಹೊರಟುಹೋದ. ಬೆಚ್ಚಿಬಿದ್ದು ಎಚ್ಚೆತ್ತ ಗಣೇಶರು, "ಹೌದಲ್ಲಾ, ನಡೆಯುವಾಗ ನನ್ನ ಗಮನ ರಸ್ತೆ ಮೇಲೆ ಇರಬೇಕಿತ್ತು. ನನ್ನದೇ ತಪ್ಪು" ಎಂದುಕೊಂಡು ಫುಟ್ ಪಾತಿನ ಮೇಲೆ ನಡೆಯುತ್ತಾ ಬೋರೆ ತಲುಪಿ ಕಲ್ಲು ಮಂಟಪದ ಬೆಂಚಿನ ಮೇಲೆ ಕುಳಿತು ಸುಧಾರಿಸಿಕೊಳ್ಳತೊಡಗಿದರು.
ಗಣೇಶ: ದೇವರೇ, ನಿನ್ನ ಸಹವಾಸ ಸಾಕಾಯಿತು. ನೀನು ಸಿಗದೇ ಇದ್ದಿದ್ದರೇ ಚೆನ್ನಾಗಿತ್ತು. ಆಗಲೇ ಆರಾಮವಾಗಿದ್ದೆ. ಈಗ ತಲೆಗೆ ಹುಳ ಬಿಟ್ಟುಕೊಂಡು ಒದ್ದಾಡುವಂತಾಗಿದೆ. ಬರೀ ಡೌಟುಗಳೇ ತಲೆ ತಿನ್ನುತ್ತಿವೆ. ಎಲ್ರೂ 'ಏನೋ ಗಣೇಶ, ಹುಷಾರಿಲ್ಲವಾ?' ಅಂತ ಕೇಳೋಕೆ ಶುರು ಮಾಡಿಬಿಟ್ಟಿದ್ದಾರೆ. ನನಗೂ ಈ ಸಂದರ್ಶನ ನಿಲ್ಲಿಸಿಬಿಟ್ಟು ಮೊದಲಿನಂತೆ ಇದ್ದುಬಿಡಲೇ ಅನ್ನಿಸುತ್ತಿದೆ. ಏನು ಪ್ರಶ್ನೆ ಕೇಳಬೇಕು ಅಂತಾ ಯೋಚನೆ ಮಾಡುತ್ತಾ ಬರುತ್ತಿದ್ದಾಗ ಬೈಕಿಗೆ ಸಿಕ್ಕಿ ನಿನ್ನ ಹತ್ತಿರವೇ ನೇರವಾಗಿ ಬರುವಂತಾಗಿಬಿಟ್ಟಿತ್ತು..
ದೇವರು: ಗಣೇಶಾ, ಯೋಚನೆ ಮಾಡಬೇಡ. ನನ್ನ ಅಭಯಹಸ್ತ ಇರುವವರೆಗೂ ನೀನು ಕ್ಷೇಮವಾಗಿರುವೆ. ನೀನು ಡೌಟೇಶ ಆದರೇನೇ ರೈಟೇಶ ಆಗೋದು. ತಿಳಿದುಕೊಳ್ಳಬೇಕು ಅನ್ನೋ ಮನಸ್ಸು ನಿನಗೆ ಬಂದಿರೋದರಿಂದಲೇ ಹೀಗಾಗುತ್ತಿದೆ. ನಿನಗೆ ಎರಡು ಅವಕಾಶ ಕೊಡುತ್ತೇನೆ. ಒಂದು, ಇಲ್ಲಿಗೇ ನಿಲ್ಲಿಸಿಬಿಟ್ಟು ಎಲ್ಲವನ್ನೂ ಮರೆತು ಮೊದಲು ಹೇಗಿದ್ದೆಯೋ ಹಾಗೆಯೇ ಇರುವಂತೆ ಅವಕಾಶ ಮಾಡಿಕೊಡುತ್ತೇನೆ. ಇನ್ನೊಂದು, ಮುಂದುವರೆಸುವ ಇಚ್ಛೆ ಇದ್ದರೆ ಮುಂದುವರೆಸಿ ಮನಸ್ಸಿನಲ್ಲಿರುವುದನ್ನು ಕೇಳುತ್ತಾ ಹೋಗು. ಏನು ಮಾಡಬೇಕು ಅನ್ನುವುದು ನಿನಗೇ ಬಿಟ್ಟಿದ್ದು.
ಗಣೇಶ: ಇದ್ದಕ್ಕಿದ್ದಂತೆ ನಿಲ್ಲಿಸಲೂ ಮನಸ್ಸಾಗುತ್ತಿಲ್ಲ. ಹೇಗೂ ನೀರಿಗೆ ಬಿದ್ದಾಗಿದೆ. ಈಜುತ್ತಾ ಎಷ್ಟು ಸಾಧ್ಯವೋ ಅಷ್ಟು ಈಜುತ್ತೇನೆ. ಸಾಕು ಅನ್ನಿಸಿದಾಗ ನಿಲ್ಲಿಸಿಬಿಡುತ್ತೇನೆ. ಹೇಗೂ ನೀನು ಸಹಾಯಕ್ಕೆ ಇದ್ದೀಯಲ್ಲಾ! ಈ ಧ್ಯಾನದ ಬಗ್ಗೆಯೇ ತಲೆ ಕೆಡಿಸಿಕೊಂಡಿದ್ದೆ. ಇದಕ್ಕೂ ದೊಡ್ಡದು ಯಾವುದು?
ದೇವರು: ನಿನ್ನ ನಿರ್ಧಾರ ಸರಿಯಾಗಿದೆ. ತಿಳಿಯುವ ಮತ್ತು ತಿಳಿದಿದ್ದನ್ನು ಇತರರಿಗೆ ಹೇಳುವ ಪ್ರಯತ್ನ ಒಳ್ಳೆಯದು. ಈ ಧ್ಯಾನಕ್ಕಿಂತಲೂ ಮೇಲಿನದು 'ಶಕ್ತಿ' ಆಗಿದೆ. ದೈಹಿಕ ಮತ್ತು ಮಾನಸಿಕ ಶಕ್ತಿಗಳ ಸಮನ್ವಯ ಎಲ್ಲಕ್ಕಿಂತಲೂ ದೊಡ್ಡದಾಗಿದೆ.
ಗಣೇಶ: ಶಕ್ತಿ ಹೇಗೆ ದೊಡ್ಡದು?
ದೇವರು: ಒಬ್ಬ ರೋಗಿಷ್ಟ, ಬಲಹೀನ ವ್ಯಕ್ತಿ ಎಷ್ಟೇ ಬುದ್ಧಿವಂತ, ವಿದ್ಯಾವಂತ ಆಗಿದ್ದರೂ ತನ್ನ ಇಷ್ಟಾನಿಷ್ಟಗಳನ್ನು ಪೂರ್ಣಗೊಳಿಸಿಕೊಳ್ಳುವುದಕ್ಕೆ ಅವನ ಶಕ್ತಿಹೀನತೆ ಅಡ್ಡಿ ಬರುತ್ತದೆ. ತಮ್ಮ ಚಿಂತನೆಗಳನ್ನು ಅವರು ಕಾರ್ಯರೂಪಕ್ಕೆ ತರಲಾರರು. ಅದೇ ರೀತಿ ಒಬ್ಬ ಆರೋಗ್ಯವಂತ, ಧೃಡಕಾಯ ವ್ಯಕ್ತಿ ಸಹ ಮನೋಬಲ ಇಲ್ಲದಿದ್ದರೆ ಏನನ್ನೂ ಸಾಧಿಸಲಾರ.
ಗಣೇಶ: ಬಲಕ್ಕೇ ಬೆಲೆ ಅನ್ನುವುದಕ್ಕೆ ನಮ್ಮೂರಿನಲ್ಲೇ ಉದಾಹರಣೆಯಿದೆ. ನಮ್ಮೂರಿನ ಪುಡಾರಿ ಓದಿರೋದು ಬರೀ ಏಳನೇ ಕ್ಲಾಸು ಅಷ್ಟೆ. ಆದರೆ ಅವನಿಗೆ ಜಾತಿಬಲ ಇದೆ, ತೋಳ್ಬಲ ಇದೆ, ಜನಬಲ ಇದೆ, ಅಧಿಕಾರದ ಬಲ ಇದೆ. ಅವನ ಮಾತು, ನಡೆ-ನುಡಿ ಯಾರಿಗೆ ಇಷ್ಟವಾಗುತ್ತೋ, ಬಿಡುತ್ತೋ ಆದರೆ ಯಾರೂ ಅವನ ವಿರುದ್ಧ ಮಾತನಾಡುವುದೇ ಇಲ್ಲ. ರೌಡಿ ಸಹವಾಸ ನಮಗೇಕೆ ಅಂತ ಸುಮ್ಮನಿರುತ್ತಾರೆ. ದೊಡ್ಡ ದೊಡ್ಡ ಅಧಿಕಾರಿಗಳೂ ಅವನ ಮುಂದೆ ತಗ್ಗಿ ಬಗ್ಗಿ ನಡೆಯುತ್ತಾರೆ.
ದೇವರು: ಕೇವಲ ಪಾಂಡಿತ್ಯ, ವಿದ್ಯೆ, ಜ್ಞಾನ ಇರುವ ನೂರು ಜನರನ್ನು ಬಲವಿರುವ, ಪಾಂಡಿತ್ಯ ಮತ್ತು ಶಕ್ತಿ ಎರಡೂ ಇರುವ ಒಬ್ಬ ವ್ಯಕ್ತಿ ಸೋಲಿಸಬಲ್ಲ.
ಗಣೇಶ: ನಿನ್ನ ಬಗ್ಗೆಯೇ ಒಂದು ಸುಭಾಷಿತ ಇದೆ: ಶ್ರೀಧರ್ ಹೇಳಿದ್ದುದನ್ನು ಬರೆದುಕೊಂಡು ಬಂದಿದ್ದೇನೆ. ನನಗೆ ಈ ಸಂಸ್ಕೃತ, ಗಿಂಸ್ಕೃತ ಅಂದರೆ ಅಲರ್ಜಿ. ಆದರೆ ಅದರಲ್ಲಿನ ವಿಷಯ ಚೆನ್ನಾಗಿತ್ತು. "ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವಚ ನೈವಚ; ಅಜಾಪುತ್ರಂ ಬಲಿಂ ದಧ್ಯಾತ್ ದೇವೋ ದುರ್ಬಲಘಾತಕಃ"! ಕುದುರೆಯನ್ನಾಗಲೀ, ಆನೆಯನ್ನಾಗಲೀ ಬಲಿ ಕೊಡಲ್ಲ. ಹುಲಿಯನ್ನಂತೂ ಕೊಡುವುದೇ ಇಲ್ಲ. ಆದರೆ ಬಡಪಾಯಿ ಮೇಕೆಯನ್ನು ಬಲಿಕೊಡುತ್ತಾರೆ. ದೇವರೂ ದುರ್ಬಲನನ್ನು ಘಾತಿಸುತ್ತಾನಂತೆ! ಏನು ಹೇಳ್ತೀಯಾ ದೇವರೇ?
ದೇವರು: ಇದು ನಿಸರ್ಗ ನಿಯಮವಾಗಿದೆ. ಬಲಶಾಲಿಯ ತಂಟೆಗೆ ಯಾರೂ ಹೋಗುವುದಿಲ್ಲ. ಪ್ರಪಂಚದಲ್ಲಿನ ನಿಮ್ಮ ಎಲ್ಲಾ ದುಃಖಗಳ, ಅಸಂತೋಷಗಳ ಮೂಲ ಕಾರಣ ದುರ್ಬಲತೆಯಾಗಿದೆ. ಅಸಹಾಯಕರಾಗುವುದು, ಸುಳ್ಳು ಹೇಳುವುದು, ಕೊಲೆಗಾರರಾಗುವುದು, ಇನ್ನಿತರ ಅಪರಾಧಗಳನ್ನು ಮಾಡುವುದು, ಇತ್ಯಾದಿಗಳ ಮೂಲ ಕಾರಣವೆಂದರೆ ದುರ್ಬಲರಾಗಿರುವುದು. ದುರ್ಬಲರಾಗಿರುವ ಭಯ ಕೀಳರಿಮೆಗೆ, ಪಾಪ ಮಾಡುವುದಕ್ಕೆ ನಿಶ್ಚಿತ ಮೂಲಕಾರಣವಾಗಿದೆ. ದುರ್ಬಲಗೊಳಿಸುವಂತಹದು ಏನೂ ಇಲ್ಲವೆಂದರೆ, ಅಲ್ಲಿ ಸಾವಿಲ್ಲ, ದುಃಖವಿಲ್ಲ.
ಗಣೇಶ: ನಿಜ ದೇವರೇ. ನಮ್ಮ ದೇಶ ಶತಮಾನಗಳ ಕಾಲ ಗುಲಾಮಗಿರಿಗೆ ಒಳಗಾಗಿತ್ತು ಎಂದರೆ -ನಮ್ಮಲ್ಲಿ ಜನಬಲ ಮತ್ತು ದೈಹಿಕ ಬಲ ಇದ್ದರೂ ಸಹ- ಅದಕ್ಕೆ ಕಾರಣ ನಮ್ಮವರ ಮಾನಸಿಕ ದೌರ್ಬಲ್ಯವೇ ಹೊರತು ಮತ್ತೇನೂ ಅಲ್ಲ. ದೈಹಿಕ ಬಲ, ಮಾನಸಿಕ ಬಲ ಎರಡೂ ಇದ್ದರೆ ಮಾತ್ರ ಏಳಿಗೆ ಸಾಧ್ಯವೆಂಬುದನ್ನು ಒಪ್ಪಲೇಬೇಕು. ಈ ಶಕ್ತಿಗಿಂತಲೂ ದೊಡ್ಡದು ಯಾವುದು ಎಂಬುದನ್ನು ನಾಳೆ ತಿಳಿದುಕೊಳ್ಳುತ್ತೇನೆ ದೇವರೇ. ಹೋಗಿಬರಲಾ?
ದೇವರು: ನಿನ್ನಿಷ್ಟ. ಶುಭವಾಗಲಿ.
-ಕ.ವೆಂ.ನಾಗರಾಜ್.
Comments
ಉ: ದೇವರೊಡನೆ ಸಂದರ್ಶನ - 6
ಕವಿಗಳೆ ನಮಸ್ಕಾರ.. ಧ್ಯಾನಕ್ಕಿಂತ ಶಕ್ತಿ ದೊಡ್ಡದು ಎಂದರಿಯುತ್ತಲೆ 'ಡೌಟೇಶ'ನಿಂದ 'ರೈಟೇಶ'ರಾಗುವತ್ತ ನಡೆದ ಎಷ್ಟೊ ಓದುಗ 'ಗಣೇಶ'ರ ನಡಿಗೆ, ಅವರ ಮನೋಭಾವದಲ್ಲಾಗುತ್ತಿರುವ ಸ್ಥಿತ್ಯಂತರವನ್ನು ಚೆನ್ನಾಗಿ ಹಿಡಿದಿಟ್ಟಿದೆ... ನಡೆಯಲಿ ಶಕ್ತಿಯ ಮುಂದಿನ ಹೆಜ್ಜೆಯತ್ತ ಪಯಣ..
In reply to ಉ: ದೇವರೊಡನೆ ಸಂದರ್ಶನ - 6 by nageshamysore
ಉ: ದೇವರೊಡನೆ ಸಂದರ್ಶನ - 6
ಧನ್ಯವಾದ, ನಾಗೇಶರೇ. ಶಕ್ತಿಯಿದ್ದರಲ್ಲವೇ ಧ್ಯಾನ ಮಾಡಲು ಸಾಧ್ಯ? ಹಾಗಾಗಿ ಶಕ್ತಿಯೇ ಮೇಲು ಅನ್ನಬಹುದಾಗಿದೆ. ನಾನೂ ಮುಂದಿನ ಹೆಜ್ಜೆಯೊಂದಿಗೆ ಜೊತೆಗೂಡುವೆ.
ಉ: ದೇವರೊಡನೆ ಸಂದರ್ಶನ - 6
ಕವಿ ನಾಗರಾಜ ಸರ್ ಅವರಿಗೆ ನಮಸ್ಕಾರಗಳು. ಧ್ಯಾನಕ್ಕಿಂತ ಶಕ್ತಿ ಮೇಲು ಎಂದು ಹೇಳುತ್ತಾ ಶಕ್ತಿಯ ಕಡೆಗೆ ಹೆಜ್ಜೆ ಹಾಕಿದಿರಿ.ಮುಂದಿನ ಹೆಜ್ಜೆ ಯಾವದು ಎಂದು ಕೂತಹಲ ಮುಡಿಸಿದೆ ಸರ್.
In reply to ಉ: ದೇವರೊಡನೆ ಸಂದರ್ಶನ - 6 by Nagaraj Bhadra
ಉ: ದೇವರೊಡನೆ ಸಂದರ್ಶನ - 6
ವಂದನೆಗಳು, ನಾಗರಾಜ ಭದ್ರರವರೇ. ಹೆಜ್ಜೆಯಿಡಲು ಜೊತೆಗಾರರಿರುವಾಗ ಮುಂದುವೆಯೋಣ.
ಉ: ದೇವರೊಡನೆ ಸಂದರ್ಶನ - 6
>>ಒಳ್ಳೆಯ ಬಿಸಿ ಬಿಸಿ ಚಾ ತೆಗೆದುಕೊಂಡು ಬಾ. ಧ್ಯಾನ ಮಾಡುತ್ತಾ ಕುಡಿಯುತ್ತೇನೆ.
-ಕವಿನಾಗರಾಜರೆ, ನನ್ನ ಬೆಳಗಿನ ಧ್ಯಾನ ಸುರುವಾಗುವುದೇ ಬಿಸಿ ಬಿಸಿ ಚಹಾದೊಂದಿಗೆ.. ಚಹಾದ ಸವಿಯೊಂದಿಗೆ ಬೆಳಗಾದರೆ ದಿನವೆಲ್ಲಾ ಸವಿ ಸವಿಯಾಗಿರುವುದು. ನೀವು ದೇವರ ಧ್ಯಾನದಲ್ಲಿ ಹೇಗೆ ತಲ್ಲೀನರಾಗಿರುವಿರೋ ಹಾಗೇ ನಾನು ಚಹಾ ಧ್ಯಾನದೊಂದಿಗೇ ದಿನದಾರಂಭ ಮಾಡುವುದು. ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರೂ ಟಾಂ ಟಾಂ ಮಾಡಿದರೂ ಈ ಗ್ರೀನ್ ಟೀ/ಹರ್ಬಲ್ ಟೀಗಳೆಲ್ಲಾ ನನ್ನ ಧ್ಯಾನಕ್ಕೆ ಒಗ್ಗುವುದಿಲ್ಲ..
ಹಾಗೇ ಕವಿನಾಗರಾಜರೆ ಈ ದೇವರು ಸಹ.. ನಾನು ಹೇಳಬೇಕಾದುದು ಒಂದು...ಆತ ನನ್ನಿಂದ ಹೇಳಿಸುವುದೇ ಬೇರೊಂದು.... ಈ ಶಕ್ತಿ ವಿಷಯ ಬಂದಾಗ ನಾನಲ್ಲಿ ಹೇಳಬೇಕೆಂದಿದ್ದದ್ದು- "ಇದೇ.. ದೇವರೆ ನೀನು ಮಾಡಿದ ದೊಡ್ಡ ತಪ್ಪು. ಸುಂದರ ಲೋಕ ಸೃಷ್ಟಿಸಿ ಶಕ್ತಿವಂತರ ಕೈಗೆ ಕೊಟ್ಟುಬಿಟ್ಟಿ.ಶಕ್ತಿವಂತರು ಇನ್ನೊಬ್ಬ ಶಕ್ತಿವಂತನೊಂದಿಗೆ ಹೋರಾಡುವುದು ಬಿಟ್ಟು ದುರ್ಬಲರ ಮೇಲೇ ತನ್ನ ಶಕ್ತಿ ಪ್ರದರ್ಶನ ಮಾಡುತ್ತಾರೆ. ನಿನ್ನ ಈ ತಪ್ಪಿನಿಂದಾಗಿ ತೊಂದರೆಯಾಗಿರುವುದಕ್ಕೆಲೆಕ್ಕವಿಲ್ಲದಷ್ಟು ಉದಾಹರಣೆ ಕೊಡಬಲ್ಲೆ.ಪುನಃ ನೀನು ಅದಕ್ಕೊಂದು ಬೇರೆ ವಾದ ಮುಂದಿಡುವೆ. ಅದು ಬೇಡ. ಆದರೆ ನೀನು ಮಾಡಿದ ತಪ್ಪನ್ನು ನಾವು ಭಾರತೀಯರು ಸರಿಪಡಿಸಿದ್ದೇವೆ! "ಸಂವಿಧಾನ"ದ ಮೂಲಕ. ಇಲ್ಲಿ ಎಲ್ಲರೂ ಸಮಾನರು(ನಿನ್ನ ದೃಷ್ಟಿಯಲ್ಲಿ ಮಾತ್ರ ನಾವೆಲ್ಲಾ ಸಮಾನರು) ....ಇರಲಿ ಇನ್ನೊಮ್ಮೆ ವಿಚಾರಿಸಿಕೊಳ್ಳುವೆ.
ಕವಿನಾಗರಾಜರೆ ಸಂದರ್ಶನ ಆಸಕ್ತಿದಾಯಕವಾಗಿದೆ..
In reply to ಉ: ದೇವರೊಡನೆ ಸಂದರ್ಶನ - 6 by ಗಣೇಶ
ಉ: ದೇವರೊಡನೆ ಸಂದರ್ಶನ - 6
:) ನಿಜ, ಗಣೇಶರೇ. ನೀವಂದಂತೆ ದುರ್ಬಲರನ್ನು ಶೋಷಿಸುವ ವಿಚಾರದಲ್ಲಿ ದೇವರು ಮತ್ತೊಂದು ವಾದ ಮುಂದಿಟ್ಟರೂ ಆಶ್ಚರ್ಯವಿಲ್ಲ. 'ಇಡೀ ಜಗತ್ತನ್ನೇ ನಿನಗಾಗಿ ಕೊಟ್ಟಿದ್ದೇನೆ. ಅದನ್ನು ಉಪಯೋಗಿಸಿಕೋ, ಬೇಕಾದ ಶಕ್ತಿ ಗಳಿಸಿಕೋ, ನಿನಗೆ ಅಡ್ಡಿ ಎನಾದರೂ ಇದ್ದರೆ ಅದು ನೀನೇ, ನಿನ್ನಿಂದಲೇ' ಎಂದು ಹೇಳಿಯಾನು!!
ದೇವರ ತಪ್ಪನ್ನೂ ಸರಿಪಡಿಸಿರುವ ಭಾರತೀಯರು ದೊಡ್ಡವರು, ಹೆಮ್ಮೆಪಡೋಣ. ಈ ವಿಚಾರದಲ್ಲಿ ಕಾಲ ನಿಜವಾದ ನ್ಯಾಯಾಧೀಶನಾಗಿ ನಿರ್ಧರಿಸುತ್ತದೆ.
ದೇವರನ್ನು ಸರಿಯಾಗಿ ವಿಚಾರಿಸಿ, ವಿಷಯ ತಿಳಿಸಿ. ಮುಂದುವರೆಯೋಣ. ಧನ್ಯವಾದಗಳು.