ದೇಶದ ರೈಲು ನಿಲ್ದಾಣಗಳಿಗೆ ಕಾಯಕಲ್ಪದ ಸ್ಪರ್ಶ

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ೭೫ ವರ್ಷಗಳು ಪೂರ್ಣಗೊಂಡ ಹಿನ್ನಲೆಯಲ್ಲಿ ಕಳೆದ ವರ್ಷ ಕೇಂದ್ರ ಸರಕಾರ ಘೋಷಿಸಿದ್ದ ‘ಅಮೃತ ಭಾರತ ರೈಲು ನಿಲ್ದಾಣ ಯೋಜನೆ'ಯಡಿ ಮೊದಲ ಹಂತದಲ್ಲಿ ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ರವಿವಾರ (ಆಗಸ್ಟ್ ೬) ವರ್ಚುವಲ್ ಆಗಿ ಶಿಲಾನ್ಯಾಸ ನೆರವೇರಿಸಿದ್ದಾರೆ. ಈ ಮೂಲಕ ದೇಶದ ರೈಲು ನಿಲ್ದಾಣಗಳಿಗೆ ಕಾಯಕಲ್ಪ ನೀಡುವ ಕೇಂದ್ರ ಸರಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗೆ ಚಾಲನೆ ಲಭಿಸಿದೆ.
ಅಮೃತ ಭಾರತ ರೈಲು ನಿಲ್ದಾಣ ಯೋಜನೆಯಡಿ ಮೊದಲ ಹಂತದಲ್ಲಿ ದೇಶದಲ್ಲಿನ ೨೭ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಒಟ್ಟು ೫೦೮ ರೈಲು ನಿಲ್ದಾಣಗಳನ್ನು ೨೪,೪೭೦ ಕೋಟಿ ರೂ, ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ಈ ರೈಲು ನಿಲ್ದಾಣಗಳ ಪುನರಾಭಿವೃದ್ಧಿ ವೇಳೆ ಸ್ಥಳೀಯ ಸಂಸ್ಕೃತಿ, ಪರಂಪರೆ, ವಾಸ್ತುಶಿಲ್ಪಗಳಿಗೆ ಆದ್ಯತೆ ನೀಡುವುದರ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಮೂಲ ಸೌಕರ್ಯಗಳ ಒದಗಣೆಗೆ ವಿಶೇಷ ಆದ್ಯತೆ ನೀಡಲು ನಿರ್ಧರಿಸಲಾಗಿದೆ.
ದೇಶದ ಸಂಚಾರ ವ್ಯವಸ್ಥೆಯ ಜೀವನಾಡಿಯಾಗಿರುವ ರೈಲು ಸಂಪರ್ಕ ಜಾಲವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖವಾಗಿರುವ ಕೇಂದ್ರ ಸರಕಾರ ಈಗ ಓಬಿರಾಯನ ಕಾಲದ ರೈಲು ನಿಲ್ದಾಣಗಳಿಗೆ ಆಧುನಿಕ ಸ್ಪರ್ಶ ನೀಡಲು ಮುಂದಾಗಿದೆ.
ವಿಶ್ವದರ್ಜೆಗೆ ಅನುಗುಣವಾಗಿ ಈ ರೈಲು ನಿಲ್ದಾಣಗಳನ್ನು ದೂರದೃಷ್ಟಿಯೊಂದಿಗೆ ಅಭಿವೃದ್ಧಿ ಪಡಿಸಲು ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ. ಮುಂದಿನ ಹಲವಾರು ವರ್ಷಗಳನ್ನು ಗಮನದಲ್ಲಿರಿಸಿಕೊಂಡು ಕಾಮಗಾರಿಯ ನೀಲನಕಾಶೆಯನ್ನು ರೂಪಿಸಲಾಗಿದೆ. ಉಚಿತ ವೈ-ಫೈ ಸೌಲಭ್ಯ, ಪಾದಚಾರಿಗಳಿಗಾಗಿ ಪ್ರತ್ಯೇಕ ವ್ಯವಸ್ಥೆ, ರೈಲು ನಿಲ್ದಾಣಗಳಲ್ಲಿ ವಿಶಾಲ ಸ್ಥಳಾವಕಾಶ, ನಿಲ್ದಾಣಗಳನ್ನು ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿ, ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಪ್ರಯಾಣಿಕರಿಗೆ ಅಗತ್ಯ. ಮೂಲ ಸೌಕರ್ಯ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಈ ನಿಲ್ದಾಣಗಳು ಒಳಗೊಂಡಿರಲಿವೆ.
ದೇಶದ ಕೆಲವೊಂದು ಮಹಾನಗರಗಳಲ್ಲಿನ ರೈಲು ನಿಲ್ದಾಣಗಳ ಸಹಿತ ಬಹುತೇಕ ರೈಲು ನಿಲ್ದಾಣಗಳು ತೀರಾ ಹಳೆಯದಾಗಿವೆ. ಈ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕನಿಷ್ಟ ಮೂಲಸೌಕರ್ಯಗಳು ಕೂಡ ಲಭಿಸುತ್ತಿಲ್ಲ. ದೇಶದ ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಬೇಕೆಂಬ ಬೇಡಿಕೆ ಐದಾರು ದಶಕಗಳಿಂದೀಚೆಗೆ ಕೇಳಿ ಬಂದಿತ್ತಾದರೂ ಸರಕಾರದಿಂದ ಅದಕ್ಕೆ ಸೂಕ್ತ ಸ್ಪಂದನೆ ಲಭಿಸಿರಲಿಲ್ಲ. ಕಳೆದೆರಡು ದಶಕಗಳಿಂದೀಚೆಗೆ ದೇಶದ ಕೆಲವು ನಗರಗಳ ರೈಲು ನಿಲ್ದಾಣಗಳು ಅಭಿವೃದ್ಧಿಯನ್ನು ಕಂಡಿದ್ದನ್ನು ಹೊರತುಪಡಿಸಿದಂತೆ ಉಳಿದೆಲ್ಲಾ ನಿಲ್ದಾಣಗಳ ಸ್ಥಿತಿ ಶೋಚನೀಯವಾಗಿತ್ತು. ಈ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಅಮೃತ ಭಾರತ ರೈಲು ನಿಲ್ದಾಣ ಯೋಜನೆಯಡಿ ದೇಶದಾದ್ಯಂತದ ೧,೩೦೯ ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ನಿರ್ಧಾರವನ್ನು ಕೈಗೊಂಡಿತ್ತು. ಅದರಂತೆ ಇದೀಗ ಯೋಜನೆಯ ಮೊದಲ ಹಂತವಾಗಿ ಕಾಮಗಾರಿಗೆ ಪ್ರಧಾನಿ ಶಿಲಾನ್ಯಾಸ ನೆರವೇರಿಸಿದ್ದು ಜನರ ದಶಕಗಳ ಬೇಡಿಕೆ ಕೊನೆಗೂ ಈಡೇರುವ ಲಕ್ಷಣಗಳು ಗೋಚರಿಸಿವೆ.
ಕೇಂದ್ರ ಸರಕಾರ ಮತ್ತು ರೈಲ್ವೇ ಇಲಾಖೆಯ ಉದ್ದೇಶಿತ ಯೋಜನೆಯಂತೆ ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗಳು ನಡೆದದ್ದೇ ಆದಲ್ಲಿ ಈ ಯೋಜನೆ, ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ದೇಶದ ರೈಲ್ವೇ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭಗೊಳ್ಳಲಿರುವುದು ನಿಶ್ಚಿತ.
ಕೃಪೆ :ಉದಯವಾಣಿ, ಸಂಪಾದಕೀಯ, ದಿ: ೦೭-೦೮-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ