ದ್ವೀಪದೆಡೆಗೆ’

ದ್ವೀಪದೆಡೆಗೆ’

ಬರಹ

ಜೀವನದ ನೌಕೆಯದು ಸಾಗುತಿದೆ ಸಾಗರದಿ
ಬೀಳುತೇಳುತ ಬರುವ ಅಲೆಗೆ ಎದುರಾಗಿ
ಅಲೆಯ ಗಾತ್ರಕೆ ತಕ್ಕ ಏರಿಳಿತವನು ಕಂಡು
ಸಾಗುತಿದೆ ಕಾಣದಾ ದ್ವೀಪದೆಡೆಗೆ

ಆಕಾಶವನೆ ನಂಬಿ ಸಾಗಿಹುದು ಈ ಯಾನ
ದಾರಿ ತೋರುತಲಿಹರು ಧ್ರುವ ಸೂರ್ಯಚಂದ್ರ
ಎತ್ತ ನೋಡಿದರತ್ತ ನೀರು ನೀರೇ ಎಲ್ಲ
ಕಾಣಿಸದು ಭರವಸೆಯ ದ್ವೀಪದಾ ಬೆಳಕು

ಎನಿತು ಕಂಬನಿ ಬೆವರು ಬೆರೆತಿಹುದು ಸಾಗರದಿ
ಇನಿತು ಉಪ್ಪಾಗಿಹುದು ಕಡಲ ನೀರು
ಅವನ ಕರುಣೆಯ ಮನದಿ ಬೇಡುತಲಿ ಸಂತತ
ಹುಟ್ಟುಹಾಕಲು ಬೇಕು ಧ್ಯಾನದೆಚ್ಚರದಿ.

ಪಯಣದಾ ವೇಳೆ ಕಿರುದ್ವೀಪಗಳ ಮಡಿಲಿನಲಿ
ವಿಶ್ರಾಂತಿ ಪಡೆದು ದಣಿವಾರಿಸಲು ಬೇಕು.
ಕಿರುನಿದ್ದೆಯಲಿ ಕಂಡ ಕನಸುಗಳ ಧ್ಯಾನಿಸುತ
ಮುಂದಿನಾ ಯಾನಕ್ಕೆ ಸಿದ್ಧಗೊಳಬೇಕು.

ದ್ವೀಪ ಮುಟ್ಟಿಹರ ಕಥೆ ಕೇಳಿಹೆವು ನಾವಿಂದು
ಕಾಣೆವೋ ನಾವವರು ನಡೆದ ದಾರಿ
ನೀರಿನಲಿ ಮೂಡಿದರು ಮರೆಯಹುದು ಮರುಕ್ಷಣದೆ
ನಮ್ಮ ದಾರಿಯ ನಾವೇ ಹುಡುಕಬೇಕು.

ಯಾವ ಕಾಲಕೆ ದ್ವೀಪ ಮುಟ್ಟೀತೋ ಈ ನೌಕೆ
ಪಡುವಣದಿ ರವಿ ಮುಳುಗೊ ಕಾಲಬಂದಿಹುದು
ಚಿರನಿದ್ರೆ ಬರುವ ಮುನ್ನವೆ ಕಂಡು ದ್ವೀಪವನು
ಧನ್ಯನಾಗಲೆ ಬೇಕು ಈ ಜನುಮದಿ.