ಧರ್ಮಾಂಧತೆಯ ಬಗ್ಗೆ

ಧರ್ಮಾಂಧತೆಯ ಬಗ್ಗೆ

ಬರಹ

ಈ ಲೇಖನವನ್ನು ಒಂದು ವಾರ ಮುಂಚೆಯೇ ಬರೆದು ನನ್ನ ಬ್ಲಾಗ್ಸ್ಪಾಟ್ ಬ್ಲಾಗಿನಲ್ಲಿ ಹಾಕಿಕೊಂಡಿದ್ದೆ. ಆ ಹೊತ್ತಿನಲ್ಲಿ ಸಂಪದ ವಾದವಿವಾದಗಳಿಂದ ತುಂಬಿ ಹೋಗಿತ್ತು. ಅದಕ್ಕೆ ಮತ್ತೊಂದು ವಾದವೇಕೆ ಅಂತ ಸುಮ್ಮನಿದ್ದೆ. ಆದರೆ, ನಿನ್ನೆ ವಿಜಯಕರ್ನಾಟಕದಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದ ಮತ್ತೊಂದು ಲೇಖನ (ಮಾಳವಿಕ ಲಿಖಿತ) ಪ್ರಕಟಗೊಂಡದ್ದು ಓದಿ ಕಿರಿಕಿರಿಯಾಯಿತು. ಅದಕ್ಕೆ ಸಂಪದದಲ್ಲಿ ಈ ವಿಚಾರವಾಗಿ ಚರ್ಚ ಸಧ್ಯಕ್ಕೆ ನಡೆಯದೇ ಇರುವುದನ್ನು ಕಂಡು ಇಲ್ಲಿ ಹಾಕುತ್ತಿದ್ದೇನೆ.

ಇತ್ತೀಚೆಗೆ ವಿಜಯಕರ್ನಾಟಕದಲ್ಲಿ, ಹಿಂದೆ ಮುಸ್ಲಿಮರು ಮಾಡಿದ್ದ ಕೃತ್ಯಗಳ ಚರ್ಚೆ, ಆ ಕೋಮಿನ ವಿಚಾರಧಾರೆಯ ಬಗ್ಗೆಯ ಮೌಲಿಕ ನಿರ್ಧಾರಗಳನ್ನು ಮೊದಲೇ ತೆಗೆದುಕೊಂಡು ಬರೆದಿರುವಂತಹ ಹಲವು ಲೇಖನಗಳು ಮೇಲಿಂದ ಮೇಲೆ ಬರುತ್ತಿರುವಂತೆ ತೋರುತ್ತದೆ, ಅಥವ ಅವುಗಳು ಬಂದಾಗ ಜನರು ಇಷ್ಟಪಟ್ಟು ಓದುವುದೇ ಕಾರಣವೇನೋ, ಹಲವು ಜನರ ಬಾಯಿಯಲ್ಲಿ ಈ‌ ವಿಷಯ ಕೇಳಬರುತ್ತಲೇ ಇದೆ. ದು:ಖಕರ ಸಂಗತಿಯೆಂದರೆ, ಹತ್ತಿರವಾಗಿರುವ ಹಲವು ಜನರು ಈ‌ ವಾದಕ್ಕೆ ಮಾರು ಹೋಗಿ, ನೈಸ್ ವನ್ ಅಂತಾನೋ, ಸರಿಯಾಗಿಯೇ ಹೇಳ್ತಾನೆ ಅಂತಾನೋ ಹೊಗಳಿ ಗರ್ವದಿಂದ ತಮ್ಮ ನಿಲುವನ್ನೇ ಬದಲಿಸಿಕೊಳ್ಳುತ್ತಿರುವುದು, ಅದಕ್ಕಿಂತಲೂ ಹೆಚ್ಚಾಗಿ ಇತರರಿಗೂ‌ ಬಲವಂತವಾಗಿ ಈ‌ ಲೇಖನಗಳನ್ನು ಉಣಿಸುತ್ತಿರುವುದು.

ನನ್ನ ಯೋಚನೆಗಳು ಚರಿತ್ರೆಯ ಸತ್ಯಾಸತ್ಯತೆಗಳ ವಿಷಯಕ್ಕೆ ಸಂಬಂಧಪಟ್ಟದ್ದಲ್ಲ, ಅದರ interpretation ಬಗ್ಗೆ. ಚರಿತ್ರೆಯಲ್ಲಿ ಹಿಂದೂ-ಮುಸ್ಲಿಂ ಸಂಬಂಧಗಳ ಬಗ್ಗೆ ಇವರು ಹೇಳುವ ಮಾತಿಗೆ ನನ್ನಲ್ಲಿ ಸಹಮತವೂ ಇದೆ. ಆದರೆ, ವಾದದ ಹುರುಪಿನಲ್ಲಿ ಮರೆತದ್ದೋ ಅಥವ ಬೇಕೆಂದೇ ಬಿಟ್ಟಿದ್ದೋ, ಹಲವು ವಿಚಾರಗಳು ಮಂಡನೆಗೆ ಬಂದಿಲ್ಲವೆಂದು ನನ್ನ ಅನಿಸಿಕೆ. ಮುಸ್ಲಿಮರ ಶೋಷಣೆ ಎಷ್ಟು ನಿಜವೋ, ಭಾರತದಿಂದ ಎದ್ದು ಬಂದ ಇತರ ಹಲವು ಮತಗಳು, ವರ್ಗಗಳು ಶೋಷಣೆ (ಅಂದಿನ ಕಾಲಕ್ಕೆ ತಕ್ಕಂತೆ ಇತರ ಗುಂಪುಗಳ ಮೇಲೆ) ನಡೆಸಿರುವುದು ಅಷ್ಟೇ‌ ಸತ್ಯ. ಮುಸ್ಲಿಮರು ಭಾರತದ ಮೇಲೆ ದಂಡೆತ್ತಿ ಬಂದು ತಮ್ಮ ಧರ್ಮವನ್ನು ಇಲ್ಲಿ ಸ್ಥಾಪಿಸುವುದು ಹೇರಿಕೆಯಾದರೆ, ಭಾರತೀಯ ಮೂಲದ ಅಶೋಕನ ಭೌದ್ಧ ಮತದ ರಾಜಕಾರಣವೂ ಹೇರಿಕೆಯೆ. ಥೈಲಾಂಡ್, ಕಾಂಬೋಡಿಯ, ಮಲಯ ಇನ್ನಿತರ ರಾಷ್ಟ್ರಗಳಲ್ಲಿ ಹಿಂದೂ ಮತಸ್ಥಾಪನೆಯೂ‌ ಹೇರಿಕೆಯೆ. ಕಾಲದಿಂದ ಕಾಲಕ್ಕೆ, ಜೈನ, ಶೈವ, ವೈಷ್ಣವ ಮತಗಳ ದೌರ್ಜನ್ಯ, ಅಷ್ಟೇ‌ ಯಾಕೆ, ಚರಿತ್ರೆಯಲ್ಲಿ ಯಾವುದೇ‌ ದೇಶ ಪ್ರದೇಶವನ್ನು ನೋಡಿದರೂ ನಡೆದು ಬಂದಿರುವುದು ಇದೇ. ಮಾಡುವ ವಿಧಾನ ಬೇರೆ ಬೇರೆ, ಆದರೆ ಎಲ್ಲವು ದೌರ್ಜನ್ಯವೇ.

ಮುಸ್ಲಿಮರು ಮಾಡಿರುವ ಪ್ರತಿಯೊಂದು ಕುಕೃತ್ಯಕ್ಕೂ, ಅದಕ್ಕೆ ಸಮಾ-ಸಮ ಬ್ರಾಹ್ಮಣ, ಕ್ಷತ್ರಿಯ, ಒಕ್ಕಲಿಗ ಲಿಂಗಾಯತ, ಕ್ರಿಶ್ಚಿಯನ್ ಇತ್ಯಾದಿ ಜನರು ಪ್ರತಿನಿತ್ಯ ಒಬ್ಬರ ಮೇಲೊಬ್ಬರು ಮಾಡುವ ಕುಕೃತ್ಯಗಳ ಪಟ್ಟಿಯನ್ನು ಕೊಡ್ತಾನೇ‌ ಬರಬಹುದು. ಎಲ್ಲಾ ಜನರ ಚಟಗಳು, ವಿಕೃತಗಳು ಒಂದೇ‌ ತರ ಸ್ವಾಮಿ. ಚರಿತ್ರೆಯ ತುಂಬಾ ಈ‌ತರಹದ ವಿಷಯಗಳು ಇವೆ ಅಲ್ಲವೆ. ಇದು ಸರಿಯೋ ತಪ್ಪೋ, ತಪ್ಪೇ ಆದರೆ ಶಿಕ್ಷೆಯೇನು, ಪಶ್ಚಾತಾಪವೇನು ಇದು ಬೇರೆಯೇ‌ ವಿಷಯ. ಒಟ್ಟಿನಲ್ಲಿ ನೋಡುವುದಾದರೆ, ನನಗೆ ಇಲ್ಲೆಲ್ಲ ಕಾಣುವುದು ಒಂದೇ ಚಿತ್ರ:‌ ಸಬಲರು ನಿರ್ಬಲರನ್ನು, ಧ್ವನಿರಹಿತರನ್ನು ಶೋಷಿಸುತ್ತಿರುವುದು.

ಇಂದಿನ ವಿಷಯಕ್ಕೆ ಬರೋಣ. ರಾಮಜನ್ಮ ಭೂಮಿಯನ್ನು ಬಿಟ್ಟು ರಾಮನ ದೇವಾಲಯವನ್ನು ಎತ್ತಂಗಡಿ ಮಾಡಿ ಬೇರೆಕಡೆ ಕಟ್ಟುವುದು ಉಚಿತವಲ್ಲವಾದರೆ, ಮಾಸ್ತಿಕಟ್ಟೆಯಲ್ಲಿರುವ ನಮ್ಮ ಕುಲದೈವ, ನರಸಿಂಹಸ್ವಾಮಿಯ ದೇವಸ್ಥಾನವನ್ನು ಮುಳುಗಡೆ ಮಾಡಿರುವುದೂ‌ ಘೋರ ಅಪರಾಧ. ಪ್ರತಿಯೊಂದು ಅಣೇಕಟ್ಟು ಕಟ್ಟಬೇಕಾದರೂ ಲೆಕ್ಕವಿಲ್ಲದಷ್ಟು ದೇವಸ್ಥಾನಗಳು, ದೇವರಗುಡ್ಡಗಳು ಮುಳುಗಡೆಯಾಗಿ ಹೋಗುವುದೂ‌ ಅಕ್ಷಮ್ಯ. ಇವೆಲ್ಲ 'ಅಭಿವೃದ್ಧಿ ಕಾರ್ಯಗಳು' ನಡೆಯಬೇಕಾದರೆ ನಮ್ಮನ್ನೇನು ಕೇಳಿ, ಒಪ್ಪಿಗೆ ತೆಗೆದುಕೊಂಡು ಮುಂದೆ ಹೋಗ್ತಾರ, ಅಥವಾ ಹಾಗೇ ಕೇಳಿಕೊಂಡೇ‌ ಕೆಲಸ ಮುಂದೆ ಹೋಗಬೇಕಾ? ಒಂದು ಅಣೇಕಟ್ಟಿನ ಬಾಳ್ವೆ ೧೦೦ - ೨೦೦ ವರ್ಷಗಳಿದ್ದರೆ ನಿಮ್ಮ ಜಾಗಗಳನ್ನು ನಿಮಗೆ ವಾಪಸ್ ಕೊಡ್ತೀವಿ ಅಂತ ಎಲ್ಲಾದರು ಬರೆದು ಕೊಟ್ಟಿದ್ದಾರ? ಧರ್ಮವನ್ನೂ, 'ಅಭಿವೃದ್ಧಿ ಕಾರ್ಯಗಳನ್ನು' ಹೋಲಿಸಬೇಡ ಅನ್ನುತ್ತೀರಿ. ಯಾಕೆ ಬೇಡ? ಪ್ರ‌ಗತಿ ಅಭಿವೃದ್ಧಿಗಳೇ ಇಂದಿನ ಧರ್ಮವಲ್ಲವೇ? ಅದರಿಂದ ನಮ್ಮ ಸಂಸ್ಕೃತಿಯೂ ಗೊತ್ತಾಗದಂತೆ ಬದಲಾಗುತ್ತಿಲ್ಲವೇ, ನಮ್ಮನ್ನು ಕೇಳಿಯೇ ಈ ಬದಲಾವಣೆಯೇ.. ಇದರಲ್ಲಿ ಬಲವಂತವಾದ ಹೇರಿಕೆಯಿಲ್ಲವೇ? ದಬ್ಬಾಳಿಕೆಯಿಲ್ಲವೇ?

ಈ‌ ವಾದವನ್ನು ಒಪ್ಪುವುದು ಕೆಲವರಿಗೆ ಕಷ್ಟವಾಗುತ್ತದೆ. ಏಕೆಂದೆರೆ, ದೇಶದ ಅಭಿವೃದ್ಧಿಯಾಗಬೇಕು, ಅಣೇಕಟ್ಟು ಕಟ್ಟಿಯೇ‌ ಅದು ಸಾಧ್ಯ ಅಂತ ನಂಬಿಕೆ ಇರತ್ತಲ್ಲ (ಧರ್ಮಸಂಸ್ಥಾಪನೆಯಾಗಬೇಕಾದದ್ದು ಇತರರನ್ನು ತುಳಿದೇ ಎಂಬಂತೆ), ಹಾಗಾಗಿ ಕೆಲವರಿಗೆ ಕಷ್ಟವಾದರೂ ಬಿಟ್ಟುಕೊಡಬೇಕಾದದ್ದು, ತ್ಯಾಗ ಮಾಡಬೇಕಾದದ್ದು (ದೇಶದ ಉನ್ನತಿಯ ಹೆಸರಿನಲ್ಲಿ) ಧರ್ಮ ಅನ್ನುವುದು ಸೂಕ್ತ ಅವರಿಗೆ. ಒಟ್ಟಿನಲ್ಲಿ ನಮಗೆ ಸರಿದೂಗುವ ಯೋಚನೆಗಳೇ‌ಸರಿ, ಬಾಕಿಯೆಲ್ಲವೂ‌ ತಪ್ಪೇ, ಬದಲಾಯಿಸಬೇಕಾದದ್ದೇ. ಹಿಂದೆ, ರಾಜ ಒಪ್ಪಿದ್ದೇ ಬಹುಮತ. ಅವನು ಹೇಳಿದ್ದೇ‌ ಸರಿ, ಅವ ಮಾಡಿದ್ದೇನೂ ಅಂದಿನ ಕಾಲಕ್ಕೆ ಲ ದುಷ್ಕೃತ್ಯಗಳೇ ಅಲ್ಲ. ಹಾಗೆಯೇ, ಹನುಮಂತ, ಅಂತಾ ಚೆನ್ನಾಗಿರುವ ಅಶೋಕವನಕ್ಕೆ ಬೆಂಕಿ ಹಚ್ಚಿ ನಾಶಮಾಡುವುದೂ ಸರಿ, ರಾಮ ವಾಲಿಯನ್ನು ಮೋಸದಿಂದ ಕೊಲ್ಲುವುದೂ ಸರಿ, ಕೆರೆ ಕಟ್ಟುವುದಕ್ಕೆ ಹೆಣ್ಣನ್ನು ಬಲಿಕೊಡುವುದೂ ಸರಿ, ಜಾನಪದ ದೇವರುಗಳನ್ನು ವೈದಿಕ ದೇವರುಗಳನ್ನಾಗಿ ಪರಿವರ್ತಿಸಿ ಬ್ರಾಹ್ಮಣರು ಅದನ್ನು ಪೂಜಿಸುವುದೂ ಸರಿ, ಮೊಹಮ್ಮದ್ ಹೇಳಿದ್ದನ್ನೆಲ್ಲಾ ಚಾಚೂತಪ್ಪದೆ ನಿರ್ವಹಿಸುವುದೂ‌, ಬೇರೆ ಎಲ್ಲರನ್ನು ಕಾಫಿರ್ ಎಂದು ಕರೆಯುವುದೂ ಸರಿ.

ಸಬಲರಿಂದ ದುರ್ಬಲರ ಶೋಷಣೆಯು ಆಗುತ್ತಲೇ ಇದೆ. ಭಾರತದಲ್ಲಿ ಅದು ಜಾತಿ/ವರ್ಗಗಳಲ್ಲಿ ಹಂಚಿಹೋಗಿದೆ. ಇತ್ತೀಚೆಗೆ ಇದರಲ್ಲಿ ಬಹಳ ಪ್ರಗತಿಯನ್ನು ನಾವು ಸಾಧಿಸಿದ್ದೇವೆ ನಿಜ. ಆದರೆ, ಈ ಪ್ರಗತಿ ಹೇಗಾಯಿತು ಎಂದು ಯೋಚಿಸಿ. ಬ್ರಿಟಿಷರು ಭಾರತೀರನ್ನು ಕಂಡು, ಥೂ‌ ಬಡ್ಡೇತವ, ಹಿಂಗೆಲ್ಲ ನಿಮ್ಮ ಜನರನ್ನೇ‌, ನಿಮ್ಮ ಹೆಣ್ಣು ಮಕ್ಳನ್ನೇ ಗೋಳುಹೊಯ್ಕಬೇಡಿ ಅಂತ ಹೇಳಿದಾಗ ನಾವೇನು ಅವರ ಮಾತುಗಳನ್ನ ಕೇಳಿದ್ವ?‌ ಕೆಂಗಣ್ಣಿನಿಂದ ಇವನ್ಯಾವೂರ ಬಿಳಿಜಿರಲೆ ಅಂತ ದುರುಗುಟ್ಟಿ ನೋಡಿರಲಿಲ್ಲವಾ? ಇವೆಲ್ಲ ಅಪರಾಧ ಅಂತ ಹೇಳಿ ಕಾನೂನನ್ನು ಬಲವಂತವಾಗಿ 'ಹೇರಿ'ದರೂ ಕದ್ದು ಮುಚ್ಚಿ ಎಲ್ಲವನ್ನೂ ನಡೆಸಿಕೊಂಡು ಬರಲಿಲ್ವ.. ಬದಲಾವಣೆಯಾದದ್ದು ಯಾವಾಗ?‌ ನಮ್ಮ ಮನಸ್ಸಿಗೆ ತಾನಾಗಿಯೇ ಅರಿವಾದಾಗ, ಹೌದು ಗುರು, ಈ‌ ಪದ್ಧತಿಗಳಲ್ಲಿ ಇಷ್ಟೋಂದು ಶೋಷಣೆ ಇದೆ, ಇದನ್ನು ಬಿಟ್ಟು ನಮ್ಮ ಸಮಾಜವನ್ನು ಸರಿಮಾಡಿಕೊಳ್ಳೋಣ ಅಂತ ಅನ್ನಿಸಿದಾಗಲೇ.. ಈ‌ ಬದಲಾವಣೆಯೇ ನಿಧಾನಕ್ಕೆ ಇಲ್ಲಿಯವರೆಗೂ‌ ನಡೆದುಕೊಂಡು ಬಂದಿದೆ.

ಸಾಮಾಜಿಕ ಪಿಡುಗುಗಳು, ಹಿಂದಿನಿಂದಲೂ‌ ಬಂದಿರುವ ನಂಬಿಕೆಗಳು ಧೋರಣೆಗಳು ಸುಲಭವಾಗಿ ಬದಲಾಗುವಂಥಾದ್ದಲ್ಲ. ಅವುಗಳನ್ನು ಇತರ ಸಮಾಜಗಳು ಚರ್ಚಿಸಿ, ನಮ್ಮ ತಪ್ಪನ್ನು ಗುರುತಿಸಿ ಇತ್ತಿ ಹಿಡಿದು ತೋರಿಸಿದರೆ ಬದಲಾವಣೆ ಬರುವುದಿಲ್ಲ, ಬದಲಿಗೆ ಸಿಟ್ಟು ಬರುತ್ತದೆ. ಅಸಹನೆ ಹೆಚ್ಚುತ್ತದೆ. ಒಂದು ಸಮಾಜಕ್ಕೆ, ತನ್ನ ಪರಿಸ್ಥಿತಿ, ತನ್ನ ನಡುವಳಿಕೆ, ಬೆಳವಣಿಗೆ ಇವುಗಳ ಬಗ್ಗೆ ತಾನಾಗಿಯೇ ಕಾಳಜಿ ಬರಬೇಕು. ತನ್ನಷ್ಟಕ್ಕೆ ತಾನೆ ತನ್ನನ್ನೇ‌ ಪರಿಶೀಲಿಸಿಕೊಳ್ಳುವ ಅಗತ್ಯ ಅದಕ್ಕೆ ಕಾಣಬೇಕು. ಆಗ ಅದರಲ್ಲಿ ಸುಧಾರಣೆ ಸಾಧ್ಯ. ಅಲ್ಲಿಯವರೆಗೆ?‌ ಹೀಗೆ ಮೂಲಭೂತವಾದ, ಭಯೋತ್ಪಾದನೆ ಇವೆಲ್ಲವನ್ನೂ ಸಹಿಸಿಕೊಳ್ಳುತ್ತಿರುವುದೇ ಎಂದರೆ, ದುರಾದೃಷ್ಟವಶಾತ್, ನನ್ನ ಉತ್ತರ ಹೌದು. ನಮ್ಮ, ಅವರ ಒಳಿತಿಗಾಗಿಯೇ ನಾವುಗಳು ಸುಮ್ಮನಿರುವುದೇ ಸೂಕ್ತ. ಬೇರಾವುದೇ ಮಾನವೀಯ ಮಾರ್ಗ ನನಗೆ ತೋಚುತ್ತಿಲ್ಲ. ಇದೇ ನಮ್ಮ ಕಾಲದ ವಿಪರ್ಯಾಸ ಅನ್ನಿಸುತ್ತಿದೆ.

ಸಾವಿರಾರು ವರ್ಷಗಳಿಂದ ಬಂದಿದ್ದ ಪದ್ಧತಿಗಳನ್ನು ಈಗಷ್ಟೇ ಬಿಟ್ಟು ನಾವು ಹೊರಬರುತ್ತಿದ್ದೇವೆ. ಇತರರೂ‌ ಈಗಲೇ, ಈ ಕ್ಷಣಕ್ಕೇ‌ ಹಾಗೆಯೇ ಯೋಚಿಸಿ ಬದಲಾಯಿಸಿಕೊಳ್ಳಲಿ ಎನ್ನುವ ವಾದ ಅಮೇರಿಕಾದ ದೊಡ್ಡಣ್ಣನ ಧೋರಣೆಯಂತೆಯೇ ದರ್ಪದ್ದಾಗುತ್ತದೆ. ಬಲದಿಂದ ಬದಲಾಯಿಸಲು ಹೊರಟಾರೆ ಅವರಂತೆಯೇ ನಾವು ಆಗುತ್ತೇವೆ. ಅದೇ ಸರಿ ಅನ್ನುವುದಾದರೆ ಸರಿ, ನಿಮ್ಮಿಷ್ಟ.