ಧ್ಯಾನಕ್ಕೆ ಕೂತ ನದಿ
ಧ್ಯಾನಕ್ಕೆ ಕೂತ ನದಿ’ ಕೃತಿಯು ‘ಈ ಹೊತ್ತಿಗೆ’ ಕಥಾ ಪ್ರಶಸ್ತಿ ವಿಜೇತ ಕೃತಿಯಾಗಿದೆ. ಒಟ್ಟಾಗಿ ೧೦ ಕತೆಗಳನ್ನು ಒಳಗೊಂಡ ಈ ಕೃತಿಯು ಕತೆಗಳ ಮೂಲಕ ಹಲವಾರು ವಿಚಾರಗಳು ಪ್ರಸ್ತುತಪಡಿಸುತ್ತದೆ. ಇಲ್ಲಿನ ‘ಧ್ಯಾನಕ್ಕೆ ಕೂತ ನದಿ’ ಶೀರ್ಷಿಕೆಯ ಕತೆಯು ಭಿನ್ನವಾಗಿದ್ದು, ವಸ್ತು ವೈವಿಧ್ಯ, ಜಾಳಾಗದೇ ಇರುವ ನಿರೂಪಣೆ, ಭಾಷೆಯ ಬಳಕೆಯಲ್ಲಿ ತೋರಿದ ಕಾಳಜಿ, ಹೇಳಲು ಬಯಸಿದ ತಂತ್ರಗಳ ಜೊತೆಗೆ ಪ್ರಜ್ಞಾಪೂರ್ವಕವಾಗಿ ಸೇರಿಸಿರದ ಹಾಗೆ ಕಾಣುವ ರೂಪಕಗಳ ಸೃಷ್ಟಿ ವಿಶೇಷ ಗಮನ ಸೆಳೆಯುತ್ತದೆ. ಮನರಂಜನೆಯ ಜೊತೆಗೆ ಬುದ್ದಿಗೂ ಕೆಲಸ ಕೊಟ್ಟು, ಭಾವನಾತ್ಮಕ ಹಾಗೂ ಕಲಾತ್ಮಕ ಅಂಶಗಳ ಮೂಲಕ ಗಮನ ಸೆಳೆದು ಉಳಿದೆಲ್ಲ ಕತೆಗಳಿಂತ ಭಿನ್ನವಾಗಿ ನಿಲುತ್ತದೆ. ಸದಾಶಿವ್ ಸೊರಟೂರು ಅವರು ಬರೆದ ಇಲ್ಲಿನ ಕತೆಗಳು ಹೀಗಿವೆ - ಹರಿದ ಕುಪ್ಪಸದ ಬೆಳಕು, ಧ್ಯಾನಕ್ಕೆ ಕೂತ ನದಿ, ಮರಣಕೆ ತೊಡಿಸಿದ ಅಂಗಿ, ಸಂಕನ ಪೂಜೆ, ಅರ್ಧ ನೇಯ್ದಿಟ್ಟ ಸ್ವೆಟರ್, ಹತ್ತಿರವಿದ್ದೂ ದೂರನಿಂತು, ಹಲಗೆಯ ಸದ್ದು, ಪಲ್ ಪಲ್ ದಿಲ್ ಕೆ. ಪಾಸ್, ದೇವರ ಮುಖದ ಕಲೆ, ಚೆಕ್ ಔಟ್.
ಕತೆಗಾರ ಸದಾಶಿವ್ ಸೊರಟೂರು ಅವರು ಕೃತಿಗೆ ಬರೆದ ತಮ್ಮ ಮಾತಿನಲ್ಲಿ ಹೇಳುವುದು ಹೀಗೆ - “ನಾ ಬರೆದ ಕವಿತೆಗಳ ಬಗ್ಗೆಯಾಗಲಿ, ಕಥೆಗಳ ಬಗ್ಗೆಯಾಗಲಿ ನಾನೆಂದೂ ಮಾತಾಡುವುದಿಲ್ಲ. ಇದೊಂಥರ 'ಅಹಂ' ಅಂತಲ್ಲ. ಅಸಲಿಗೆ ನನಗೆ ಅವುಗಳ ಬಗ್ಗೆ ಮಾತಾಡಲು ಬರುವುದಿಲ್ಲ. ಏಕೆ ಬರೆದೆ? ಹೇಗೆ ಬರೆದೆ? ನಿಜಕ್ಕೂ ಗೊತ್ತಿಲ್ಲ. ಪಡೆದುಕೊಂಡೆನೊ, ಕಳೆದುಕೊಂಡೆನೊ ಅದೂ ಕೂಡ ಗೊತ್ತಿಲ್ಲ. ನನ್ನ ಕಥೆಯೊಳಗಿನ ಪಾತ್ರಗಳೇ ಎದುರು ಬಂದರೆ ತಪ್ಪಿಸಿಕೊಂಡು ಓಡಾಡಬೇಕು. ಅನಿಸುತ್ತದೆ. ಆ ಪಾತ್ರಗಳು ಇದೇಕೆ ಹೀಗೆ ಬರೆದೆ ಅಂತ ಕೇಳಿದರೆ ಅದಕ್ಕೂ ನನ್ನ ಬಳಿ ಉತ್ತರವಿಲ್ಲ. ಕಥೆ ಬರೆಯದಿದ್ದರೆ ಏನಾಗುತ್ತಿತ್ತು? ಕಥೆ ಬರೆದ ಮೇಲೆ ಏನು ಸಿಕ್ಕಿತು? ಅದೂ ಗೊತ್ತಿಲ್ಲ. ನಾನು ನನ್ನ ಹೊರ ಜಗತ್ತು ಕಂಡುಕೊಳ್ಳಲು ಕಥೆಯೊಳಗೆ ನುಗ್ಗುತ್ತೇನಾ? ಕಥೆಗಳನ್ನು ಒಂದು ನೆಪವಾಗಿ ಬಳಸುತ್ತೇನಾ? ಗೊತ್ತಿಲ್ಲ. ಕೆಲವರು ಹಾಗೆ ಅಂದಿದ್ದಾರೆ. ನೀವು ನಮ್ಮ ಎದುರಿಗಿಂತ ಹೆಚ್ಚಾಗಿ ನಿಮ್ಮ ಕಥೆಗಳಲ್ಲಿ ಹೆಚ್ಚು ಸ್ಪಷ್ಟವಾಗಿ ಸಿಗುತ್ತೀರಿ ಅನ್ನುತ್ತಾರೆ ಕೆಲವರು. ಅದು ಹೌದೋ ಅಲ್ಲವೋ ನನಗೂ ಗೊತ್ತಿಲ್ಲ. ಅದು ನಿಜವೇ ಆಗಿದ್ದರೆ ಬನ್ನಿ ಕಥೆಯೊಳಗೆ ಭೇಟಿಯಾಗೋಣ, ನಾವು ನೀವು ಅಲ್ಲೇ ಕಥೆಯೊಳಗೆ ಕೂತು ಮಾತಾಡೋಣ, ಕಾಫಿ ಕುಡಿಯೋಣ..
ಇಲ್ಲಿರುವ ಕಥೆಗಳೆಲ್ಲವೂ ಕಳೆದ ವರ್ಷ ಬರೆದಂತವು. ಕೆಲವು ಸ್ಪರ್ಧೆಯಲ್ಲಿ ಗೆದ್ದವು, ಕೆಲವು ಮೆಚ್ಚುಗೆ ಪಡೆದವು. ಕೆಲವು ಪ್ರಕಟಗೊಂಡವು ಮತ್ತು ಆ ಕಥೆಗಳ ಒಂದು ಕಟ್ಟಿಗೆ ಈಗ '೨೦೨೪ರ ಈ ಹೊತ್ತಿಗೆ ಕಥಾ ಪುರಸ್ಕಾರ' ಬಂದಿದೆ. ಹೀಗೆ ಅಜ್ಞಾತವಾಗಿರುವ ಒಳ್ಳೆಯ ಕಥೆಗಳನ್ನು ಹುಡುಕಿ ಅದಕ್ಕೊಂದು ಪ್ರಶಸ್ತಿ `ರೂಪದಲ್ಲಿ ಗೌರವ ಮತ್ತು ಇನ್ನಷ್ಟು ಬರೆಯಲು ಕುಮ್ಮಕ್ಕು ನೀಡುವ 'ಈ ಹೊತ್ತಿಗೆ' ಮತ್ತು ಅದರ ಮುಖ್ಯಸ್ಥರಾದ ಜಯಲಕ್ಷ್ಮಿ ಪಾಟೀಲ್ ಅವರ ಈ ಕೆಲಸ ದೊಡ್ಡದು ಅವರಿಗೆ ಧನ್ಯವಾದ. ತೀರ್ಪುಗಾರರಾಗಿದ್ದ ದೇವು ಪತ್ತಾರ್ ಅವರು ಕಥೆಗಳನ್ನು ಮೆಚ್ಚಿಕೊಂಡು ಆಯ್ಕೆ ಮಾಡಿದ್ದಾರೆ, ಅಲ್ಲದೇ ಈ ಕಥೆಗಳೇ ಏಕೆ ಆಯ್ಕೆ ಆದವು ಎಂಬುದನ್ನು ಬರೆದಿದ್ದಾರೆ. ನಾನೂ, ನನ್ನ ಕಥೆಯೊಳಗಿನ ಪಾತ್ರಗಳೂ ಅವರನ್ನು ನೆನೆಯುತ್ತೇವೆ.
'ಬಹುರೂಪಿ'ಯ ಜಿ.ಎನ್. ಮೋಹನ್ ಸರ್ ಅವರು ನನ್ನೆಲ್ಲಾ ಒಳ್ಳೆಯ ಕಾರ್ಯಕ್ಕೆ ಸದಾ ಕಣ್ಣೆಳಕು. ಈಗ ಅವರ ಕಾಳಜಿಯಲ್ಲಿ 'ಬಹುರೂಪಿ'ಯಿಂದ ಈ ಪುಸ್ತಕ ಹೊರ ಬರುತ್ತಿದೆ. ಇದು ನನಗೆ ಅತೀವ ಖುಷಿ. ಇದು 'ಬಹುರೂಪಿ'ಯಿಂದ ಬರುತ್ತಿರುವ ನನ್ನ ಮೂರನೇ ಪುಸ್ತಕ. ಉಳಿದಂತೆ ನನ್ನ ಕಥೆ, ಕವನಗಳನ್ನು ಓದಿ ತಿದ್ದುವ, ಮಾರ್ಗದರ್ಶನ ಮಾಡುವ, ಬರೆಯಲು ಪ್ರೋತ್ಸಾಹಿಸುವ ನನ್ನ ಗೆಳೆಯ-ಗೆಳತಿಯರ ಸಂಖ್ಯೆ ದೊಡ್ಡದಿದೆ. ಅವರ ಬಗ್ಗೆ ಬರೆಯುತ್ತಾ ಹೋದರೆ ಅದೇ ಒಂದು ಕಥೆಯಾಗಿಬಿಡುತ್ತದೆ. ಅವರೆಲ್ಲರನ್ನೂ ನಾನಿಲ್ಲಿ ನೆನೆಯುತ್ತೇನೆ.” ಸುಮಾರು ೧೬೦ ಪುಟಗಳ ಈ ಕಥಾ ಸಂಕಲನವನ್ನು ಬಹಳ ಸೊಗಸಾಗಿ ಆನಂದಿಸುತ್ತಾ ಓದಬಹುದಾಗಿದೆ.