ನಗುವುದು ಅಷ್ಟು ಕಷ್ಟವೇ?

ನಗುವುದು ಅಷ್ಟು ಕಷ್ಟವೇ?

ಬರಹ

‘ನಗುವುದು
ಅಷ್ಟು ಕಷ್ಟವೇ?’ ಎಂಬ ಪ್ರಶ್ನಗೆ ಉತ್ತರಿಸುವ ಮೊದಲು ಬೆಂಗಳೂರಿನ ಅಷ್ಟೂ ಲಾಫಿಂಗ್
ಕ್ಲಬ್ಬುಗಳ ಪ್ರತಿದಿನ ಬೆಳಗಿನ ಸರ್ಕಸ್ಸುಗಳನ್ನು, ಟಿವಿ ಚಾನಲ್‌ಗಳಲ್ಲಿನ ಪ್ರೈಂ ಟೈಮ್
ಕಾಮಿಡಿ ಕಿಲಾಡಿಗಳ ಎಲ್ಲಾ ಸಾಹಸಗಳನ್ನು ಒಮ್ಮೆ ಅವಲೋಕಿಸಬೇಕು. ಹೌದು! ನಗುವುದು
ನಿಜಕ್ಕೂ ಕಷ್ಟ ಇಲ್ಲವಾದರೆ ಮನುಷ್ಯ ಅದಕ್ಕಾಗಿ ಇಷ್ಟೋಂದು ಖರ್ಚು ಮಾಡುತ್ತಿದ್ದನೇ?

ನಮ್ಮ ಬದುಕಿನ ಗತಿಯನ್ನ ಹೇಗೆ ಮಾರ್ಪಾಟುಗೊಳಿಸಿಕೊಂಡಿದ್ದೇವೆ ಎಂಬುದನ್ನು
ಗಮನಿಸಿದರೆ ನಮಗೆ ನಗುವುದಕ್ಕೆ ಏಕೆ ಸಾಧ್ಯವಾಗುತ್ತಿಲ್ಲ ಎಂಬುದರ ಅರಿವಾಗುತ್ತದೆ.
ಮೂರು ನಾಲ್ಕು ಮಂದಿ ಕಲೆಯಬೇಕು, ಒಬ್ಬರ ಕಾಲನ್ನೊಬ್ಬರು ಎಳೆಯುವ ಕೆಲಸದಲ್ಲಿ
ತೊಡಗಿಕೊಳ್ಳಬೇಕು, ಆಗ ಯಾವ ಪ್ರಯಾಸವೂ ಇಲ್ಲದೆಯೇ ಹಾಸ್ಯವು ಹುಟ್ಟಿಕೊಳ್ಳುತ್ತದೆ.
ನಕ್ಕು ಹಗುರಾಗುತ್ತೇವೆ. ಸರಿ, ಆದರೆ ನಾಲ್ಕು ಮಂದಿ ಕಲೆಯುವುದೇ ನಮಗೆ ಬಹುದೊಡ್ಡ
ಸಾಧನೆಯಾಗಿ ಕಾಣುತ್ತಿದೆಯಲ್ಲ!

ಅದನ್ನು ಪಕ್ಕಕ್ಕಿಡಿ, ನಗುವುದು ನಿಜಕ್ಕೂ ಎಷ್ಟು ಕಷ್ಟ ಎಂಬುದಕ್ಕೆ ಒಂದು
ಪ್ರಸಂಗವನ್ನು ಗಮನಿಸಿ. ನೀವು ಟೀಚರ್ ಎಂದುಕೊಳ್ಳಿ ತರಗತಿಯನ್ನು ಪ್ರವೇಶಿಸಿದಾಕ್ಷಣ
ಕಪ್ಪು ಹಲಗೆಯ ಮೇಲೆ ಅಕರಾಳ ರೂಪದ ಕಾರ್ಟೂನ್ ಬರೆದು ಅದರ ಕೆಳಗೆ ಯಾರೋ ಕಿಡಿಗೇಡಿ
ಹುಡುಗರು ನಿಮ್ಮ ಹೆಸರು ಬರೆದಿರುತ್ತಾರೆ, ಬೈಕಿನಲ್ಲಿ ರಭಸವಾಗಿ ನುಗ್ಗುತ್ತಿರುತ್ತೀರಿ
ಸ್ವಲ್ಪ ಮಂದ ಬುದ್ಧಿಯವ ಹುಡುಗ ನಿಮ್ಮ ಬೈಕಿಗೆ ಅಡ್ಡ ಬಂದು ಬಿಡುತ್ತಾನೆ- ಹೇಳಿ ಈಗ
ನಿಮ್ಮ ಕೈಲಿ ನಕ್ಕು ಬಿಡಲು ಸಾಧ್ಯವೇ? ಕ್ರಿಕೆಟಿನಲ್ಲಿ ಭಾರತ ಫೈನಲ್ ಓವರಿನಲ್ಲಿ ಎರಡು
ವಿಕೆಟ್ ಕಳೆದುಕೊಂಡು  ಸೋತುಬಿಡುತ್ತದೆ, ಮಗ ಪಿಯುಸಿಯಲ್ಲಿ ಫೇಲಾಗಿ ಮನೆಗೆ
ಬರುತ್ತಾನೆ, ಪಕ್ಕದ ಮನೆಯಾತ ವಿನಾಕಾರಣದ ಕ್ಯಾತೆ ತೆಗೆದು ನಿಂತಿರುತ್ತಾನೆ- ಪ್ರಮಾಣ
ಮಾಡಿ ಹೇಳಿ ನಿಮಗೆ ಈ ಸಂದರ್ಭಗಳಲ್ಲಿ ನಕ್ಕು ಹಗುರಾಗುವುದಕ್ಕೆ ಸಾಧ್ಯವಾ?ಅದಕ್ಕೇ
ಮೊದಲಲ್ಲೇ ಕೇಳಿದ್ದು, ನಗುವುದು ಅಷ್ಟು ಸುಲಭವೇ ಎಂದು!

ಘನವಾದ ವ್ಯಕ್ತಿತ್ವವಿರುವವರಿಗೆ ಮಾತ್ರ ಎಂಥಾ ಸಂದರ್ಭದಲ್ಲಾದರೂ ನಗುವಿನ ಅಲೆಯನ್ನು
ಮೈಮೇಲೆಳೆದುಕೊಂಡು ಅದರ ಮೇಲೆ ಅನಾಯಾಸವಾಗಿ ತೇಲಿ ಮುಂದೆ ಸಾಗಲು ಸಾಧ್ಯ. ಹಾಸ್ಯ
ಹುಟ್ಟುವುದು ಅಂಥ ಘನವಾದ ವ್ಯಕ್ತಿತ್ವದ ಸಂಗದಲ್ಲಿ ಮಾತ್ರ. ವಿರಾಮದಲ್ಲಿನ ಪೋಲಿ
ಹಾಸ್ಯ, ಅಪಹಾಸ್ಯಗಳೂ ಇವೆ. ಆದರೆ ಹಾಸ್ಯ ಮನೋವೃತ್ತಿಯ ನಿಜವಾದ ಸತ್ವ ಪರೀಕ್ಷೆ
ನಡೆಯುವುದು ಸಂಕಟದ, ಆಘಾತದ ಸಂದರ್ಭಗಳಲ್ಲೇ. ಅಂಥ ಪ್ರಸಂಗಗಳಿಗೆ ನಮ್ಮ ದಿನನಿತ್ಯದ
ಬದುಕಿನಲ್ಲಿ ಯಾವ ಕೊರತೆಯೂ ಇರುವುದಿಲ್ಲ!

ನೀವೇನಂತೀರಿ?