ನನಗೊಲಿದ ಪ್ರಶಸ್ತಿ

ನನಗೊಲಿದ ಪ್ರಶಸ್ತಿ

                   ಇದು 1991-92 ರ ನಡುವೆ ನಡೆದ ಘಟನೆ , ನಾನು ಆಗ 5ನೆ ತರಗತಿಯಲ್ಲಿ ಓದುತ್ತಿದ್ದೆ.  ನಮ್ಮ ಊರಿನಲ್ಲಿ ಯಾವುದೊ ಒಂದು ವಿಶೇಷ ಸಂದರ್ಭದಲ್ಲಿ ‘ತರುಣ ಕಲಾ ವೃಂದ’ದವರು ಪ್ರಬಂಧ ಮತ್ತು ಭಾಷಣದ ಸ್ಪರ್ಧೆಯನ್ನು ಶಾಲಾಮಕ್ಕಳಿಗೆ ಏರ್ಪಡಿಸಿದ್ದರು.   ಊರಿನ ಎಲ್ಲ ಶಾಲೆಗಳಿಗೆ ಭೇಟಿಯಾಗಿ ಭಾಷಣದ ವಸ್ತು ವಿಷಯವನ್ನು ಕೊಟ್ಟಿದ್ದರು.  ನನ್ನ ಅಕ್ಕನಿಗೆ ಹೀಗೆ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯುತ್ತಿದ್ದಳು.  ಹಾಗೆ ಅವಳು ಈ ಭಾಷಣ ಸ್ಪರ್ದೆಗೆ ಕೂಡ   ಮೂರ್ನಾಲ್ಕು  ದಿನದಿಂದ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದಳು.   ಒಂದು ಬಿಳಿ ಹಾಳೆಯಲ್ಲಿ  ಸ್ಪುಟ ವಾಗಿ ಭಾಷಣವನ್ನು  ಬರೆದು ಓದಿ ಮನನ ಮಾಡಿಕೊಳ್ಳುತ್ತಿದ್ದಳು  ಆದರೆ ನನಗೆ ಮಾತ್ರ ಅಂತಹ  ಸ್ಫರ್ಧೆಗಳಿಗೆ ಹೋಗುವುದು ಬಲು ದೂರದ ಮತ್ತು  ನನಗೆ ಜನರ ಮುಂದೆ ಸ್ಟೇಜ್ ಮೇಲೆ ಹೋಗಿ ನಿಂತುಕೊಳ್ಳವುದು ಅಂದ್ರೆ ಕಾಲಿಗೆ ನಡುಕ ಹತ್ತುವುದಕ್ಕೆ ಶುರುವಾಗುತ್ತಿತ್ತು.
                 ಭಾಷಣದ ದಿನಾಂಕ ಹತ್ತಿರ ಬಂದಿತ್ತು. ನನಗೆ ಇದಕ್ಕೂ ಏನು ಸಂಬಂಧ ಇರದೆ ಇದ್ದುದರಿಂದ ನಾನು ನಿಶ್ಚಿಂತೆಯಿಂದ ಹಾಯಾಗಿದ್ದೆ.  ಭಾಷಣ ಆಯೋಜಿಸಿದ್ದದು ತರುಣ ಕಲಾ ವೃಂದದ ಒಂದು ಸಣ್ಣ ಕೊಠಡಿಯಲ್ಲಿ.  ನನ್ನ ಅಕ್ಕ ಅವಳ ಜೊತೆ ಸುಮ್ಮನೆ  ಬರುವಂತೆ ಒತ್ತಾಯಿಸಿದಳು.  ಆದರೆ ಭಾನುವಾರ  ಆಗಿದ್ದರಿಂದ ನಾನು ಕ್ರಿಕೆಟ್ ಆಡಲಿಕ್ಕೆ ಹೋಗುತ್ತೇನೆ ಎಂದು ಹಠ ಹಿಡಿದೆ ಆದರೆ ಅಮ್ಮ ಬಿಡಬೇಕಲ್ಲ  ಅಕ್ಕನ ಜೊತೆ ಹೋಗಿಬರುವಂತೆ ಗದರಿದ್ಲು.  ಇನ್ನೂ ಹೋಗಲೇ ಬೇಕಾಯ್ತು ಅವಳಿಗೆ ಬೆಂಗಾವಲಾಗಿ.
             ಇಂಥ ಸ್ಪರ್ಧೆಗಳಿಗೆ ಕೇವಲ ವೀಕ್ಷಕನಾಗಿ ಕೂಡ ಹೋಗಲು ಹೆದರಿಕೆ ನಂಗೆ . ಆದರೂ ಗಟ್ಟಿ ಮನಸ್ಸು ಮಾಡಿ ಹೊರಟೆ  ಅಕ್ಕನ ಜೊತೆ.   ನಾವು ಸ್ಥಳಕ್ಕೆ ತಲುಪಿದಾಗ ಸಭೆ ಇನ್ನು ಆರಂಭ ಆಗಿರಲಿಲ್ಲ.  ಕೊಠಡಿಯಲ್ಲಿ ಸುಮಾರು 12 ರಿಂದ 15 ಜನರು ಇದ್ದರು.   ಅಲ್ಲಿ ನಮಗೆ ಅಂದರೆ ವಿದ್ಯಾರ್ಥಿಗಳಿಗೆ ಕೂರಲು ಬೆಂಚಿನ ವ್ಯವಸ್ಥೆ ಇರಲಿಲ್ಲ. ನೆಲದ ಮೇಲೆ ಅಸೀನರಾದೆವು.  ಅಲ್ಲಿ ಆಗಲೇ ಒಬ್ಬ ಬೇರೆ ಶಾಲೆಯ ವಿದ್ಯಾರ್ಥಿಯು ಮೊದಲೇ ಸ್ಪರ್ದಿ ಯಾಗಿ ಬಂದಿದ್ದ .  
               ಸ್ವಲ್ಪ ಸಮಯದಲ್ಲೇ ನನ್ನ ಶಾಲಾ ಸಹಪಾಠಿ ಸ್ನೇಹಿತನೊಬ್ಬ  ಬಂದ . ಅಲ್ಲಿಗೆ ಒಟ್ಟು ಸ್ಪರ್ದಿಗಳ ಸಂಖ್ಯೆ 3 ಕ್ಕೆ ಏರಿತು.  ಗಮನವಿಡಿ  ನಾನು ವೀಕ್ಷಿಸಲು ಬಂದಿದ್ದು ಹೊರತು ಸ್ಪರ್ದಿಸಲು ಅಲ್ಲ. ಆದರೆ ನಾವು ನಾಲ್ಕು ಜನ ಒಟ್ಟಿಗೆ ನೆಲದ ಮೇಲೆ ಕೂತಿದ್ವಿ. ನನ್ನ ಸ್ನೇಹಿತ ಅಲ್ಲಿಗೆ ಬಂದಿದ್ದು ನನಗೆ ಸಹ್ಯ ಅನಿಸಲಿಲ್ಲ.  ಕಾರಣ ಅವನು ತುಂಬಾ ವಾಚಳಿ . ಅವ್ನು ಎಲ್ಲಿಯಾದರೂ ನನ್ನನ್ನು ಸಂಕಷ್ಟ ಕ್ಕೆ ಈಡು ಮಾಡುತ್ತಾನೋ  ಎಂಬ ಸಣ್ಣ ಗುಮಾನಿ ಇತ್ತು ಅವನ ಮೇಲೆ.  ಅದು ಗೊತ್ತಾಗಲಿಕೆ ಹೆಚ್ಚಿಗೆ ಸಮಯ ಹಿಡಿಯಲಿಲ್ಲ. ಏಕೆಂದರೆ ಇಂತಹ ಕೆಲಸಗಳಲ್ಲಿ ಅವನದು ಎತ್ತಿದ ಕೈ.
                ಭಾಷಣಕ್ಕೆ ಹೆಸರು ನೋಂದಾಯಿಸುವಿಕೆ ಕೂಡ ಸ್ಥಳದಲ್ಲೇ ಆಗಿರಬೇಕಾಗಿದ್ದಿತು.  ಆದರೆ ಸ್ಪರ್ದಿಗಳ ಸಂಖ್ಯೆ ಕಡಿಮೆ ಇದ್ದುರಿಂದಲೋ ಏನೋ ಅವರು ಹೆಸರನ್ನು  ಆ ಕೂಡಲೇ ನೋಂದಣಿ ಮಾಡಲಿಲ್ಲ.   ಅದು ಆಮೇಲೆ ನನಗೆ ವರವಾಗಿಬಿಟ್ಟಿತು ಅದು ಹೇಗೆಂದು ಹೇಳುತ್ತೇನೆ ಮುಂದೆ ಓದಿ. ಸಮಾರಂಭಕ್ಕೆ ಅತಿಥಿಗಳ ಅಗಮನ ಆಯಿತು. ಸ್ವಾಗತಕಾರರು ಅತಿಥಿಗಳನ್ನು ಸ್ವಾಗತಿಸಿದರು ಗಜಮುಖನ ಪ್ರಾರ್ಥನೆಯೊಂದಿಗೆ.  ಮುಂದೆ ಸಂಘಟಕರು ಒಬ್ಬೊಬ್ಬರಾಗಿ ಬಂದು ಭಾಷಣ ಪ್ರಸ್ತುತ ಪಡಿಸುವಂತೆ ವಿದ್ಯಾರ್ಥಿಗಳನ್ನು ಕೋರಿದರು. ಸ್ನೇಹಿತ ಗಿರೀಶ  ಮೊದಲು ಹೋಗಿ ನಿರ್ಭಿಡೆಯಿಂದ ವಸ್ತು ವಿಷಯ ಮನ ಮುಟ್ಟುವ ಹಾಗೆ ಮಾತನಾಡಿ ಎಲ್ಲರನ್ನು ಚಕಿತಗೊಳಿಸಿದ.  ಅವನ ನಂತರ ನನ್ನ ಅಕ್ಕನಿಗೆ ಭಾಷಣಕ್ಕೆ ಕರೆದರು ಅವಳು  ಹೋಗಿ ಭಾಷಣ ಪ್ರಸ್ತುತ ಪಡಿಸಿದಳು. ತಾನು ಬರೆದುಕೊಂಡು ತಂದಿದ್ದ ಭಾಷಣದ ಪ್ರತಿಯನ್ನು ಒಂಚೂರು ನೋಡದೆ ಅವಳು ಹೇಳಿದ್ದು ನನಗೆ ಆಶ್ಚರ್ಯ ತಂದಿತು.   ಅದೇ ಸಮಯದಲ್ಲಿ ಸಂಘಟಕರಲ್ಲೊಬ್ಬರು  ಬಣ್ಣದ ಪೇಪರ್ನಲ್ಲಿ ಸುತ್ತಿಸಿದ್ದ ಒಟ್ಟು ನಾಲ್ಕು ಬಹುಮಾನಗಳನ್ನು ಬಾಗಿಲಿಂದ ಒಳತಂದರು.ನಂತರ ಅತಿಥಿಗಳ ಮುಂಬಾಗದಲ್ಲಿ ಇದ್ದ ಟೇಬಲ್ ಮೇಲೆ   ಬಹುಮಾನಗಳನ್ನು ಒಂದರ ಮೇಲೆ ಒಂದರಂತೆ ಜೋಡಿಸಿಟಿದ್ದರು. ಅದು ವಿವಿಧ ಅಳತೆಗಳ ಒಟ್ಟು  4 ಸ್ಟೀಲ್ ಹರಿವಾಣವಾಗಿತ್ತು.
             ಇದು ಕಣ್ಣಿಗೆ ಕಾಣುತ್ತಲೇ ನಾನು ನಿಜವಾದ ಸಂದಿಗ್ದ ಪರಿಸ್ಥಿತಿ ಗೆ ಸಿಕ್ಕಿಬಿದ್ದೆ.  ಆಯೋಜಕರು ಎಲ್ಲಿಯಾದರೂ  ತಪ್ಪು ಊಹೆ ಮಾಡಿ ನನ್ನನ್ನು ಸೇರಿಸಿ ಒಟ್ಟು ನಾಲ್ಕು ಜನ ಸ್ಪರ್ದಿಗಳೆಂದು . ಇದರಿಂದ ನನ್ನ ಮನದಲ್ಲಿ ಆಲೋಚನೆ ಮೂಡುತ್ತ ಹೆದರಿಕೆ ತಳಮಳ  ಸಣ್ಣಗೆ ಶುರುವಾಯಿತು.   ಅಕಸ್ಮಾತ್ ಎಲ್ಲಿಯಾದರೂ ಕೊನೆಯ ಸ್ಪರ್ದಿಯನ್ನು ಭಾಷಣ ಮಾಡುವಂತೆ ವಿನಂತಿಸಿದರೆ ನಾನು ಹೇಗೆ ತಾನೇ ನಿರಾಕರಿಸಲಿ.   ಈಗಿನ ರಾಜಕೀಯ ಪ್ರಜ್ಞೆ ಆಗಲೇ ಇದ್ದಿದ್ದರೆ ಬಹುಶ ಒಂದು ಕೈ ನೋಡಿಯೇ ಬಿಡುತ್ತಿದೆ. 
    ಆದರೂ ಅವರು ಯಾವದೇ ಕ್ಷಣಕ್ಕೂ ನನ್ನ ಕರಿಯಬಾರದೆಂದು  ದೇವರನ್ನು ಪರಿ ಪರಿಯಾಗಿ ಪ್ರಾರ್ಥಿಸಿದೆ.  ಬಹುಶ ಯಾವುದೇ ಪೂರ್ವ ತಯಾರಿ ಇಲ್ಲದೇ ಇದ್ದುದರಿಂದ ಹೀಗೆ ನಿರಾಕಾರಣ ಮಾಡುತ್ತಿರುವೆ ಎಂದು ನೀವು ಬಾವಿಸುವುದಾದರೆ ಅದು ತಪ್ಪು. ಪೂರ್ವ ತಯಾರಿ ಇರಲಿ ಇಲ್ಲದಿರಲಿ  ಸ್ಟೇಜ್  ಹತ್ತುವುದು ಎಂದರೆ ನಂಗೆ ಸಂಕೋಚ ಮತ್ತೂ ಹೆದರಿಕೆ.  ನಾನು ಸ್ಟೇಜ್ ಹತ್ತುವುದರೊಳಗೆ ಸಂಕೋಚ ಮತ್ತು ಹೆದರಿಕೆ ಎರಡು ನನ್ನತಲೆ ಮೇಲೆ ಹತ್ತಿ ಕುಳಿತಿರುತ್ತಿತ್ತು. ಆದ್ದರಿಂದ ಯಾವುದೇ ಕಾರಣಕ್ಕೂ ಕುಳಿತ ಸ್ಥಳದಿಂದ ಕದಲಬಾರದು ಎಂದು ದೃಢನಿಶ್ಚಯ ಮಾಡಿ ಕುಳಿತುಬಿಟ್ಟೆ.
              ಮನಸಲ್ಲಿ ಮಾತ್ರ ಮಂಡಿಗೆ ತಿನ್ನುತ್ತಿದ್ದೆ.  ಅಲ್ಲಿ ಜೋಡಿಸಿಟ್ಟಿರುವ ಬಹುಮಾನಗಳನ್ನು ನೋಡಿ   ಇನ್ಯಾವ ಹೊಸ  ಸ್ಪರ್ದಿ ಬಾರದೆ ಇದ್ದಲ್ಲಿ ಆ ಬಹುಮಾನಕ್ಕೆ ನಾನೇ ಹಕ್ಕುದಾರ ಎಂದು ಸಾರಿ ಸಾರಿ ಹೇಳುತ್ತಿತ್ತು.  ಆದರೂ ನನ್ನ ನಿಲುವಿನಲ್ಲಿ ಏನು ಬದಲಾವಣೆ ಮಾಡುವಂತೆ ಇರಲಿಲ್ಲ.  ಮೂರನೇ ಸ್ಪರ್ದಿಗೆ ಭಾಷಣ ಮಾಡಲು ಕರೆದರು .   ಆತ ಹೋಗುತ್ತಿದ್ದಂತೆ ಅಲ್ಲಿ ತನಕ  ಸ್ಥಿಮಿತದಲ್ಲಿ ಇದ್ದ ಹೊಯ್ದಾಟ ಇನ್ನು ಜಾಸ್ತಿ ಆಯ್ತು. ಎದೆಬಡಿತ ಜಾಸ್ತಿಯಾಗತೊಡಗಿತು. 
               ಆಗಲೇ ಭಾಷಣ ಮುಗಿಸಿ ಪ್ರಥಮ ಸ್ಥಾನ ಗೆದ್ದೆನೆಂದು ಬಿಗುತ್ತಿದ್ದ ಸ್ನೇಹಿತ ನನ್ನ ಎಡ  ಪಕ್ಕದಲ್ಲೂ  ಬಂದು ಕುಳಿತ.   ಬಲಕ್ಕೆ ನನ್ನ ಅಕ್ಕ ಎರಡನೇ ಸ್ಥಾನ ಖಾಯಂ ಅಂಥ ಯೋಚನೆ ಮಾಡಿ ಅತೀವ ಆತ್ಮ ವಿಶ್ವಾಸದಿಂದ ಕುಳಿತಿದ್ದಳು.  ನನ್ನ ಸ್ನೇಹಿತನಿಗೆ ತಲೆಯಲ್ಲೊಂದು ಕೆಟ್ಟ ವಿಚಾರ ಹೊಳೆಯಿತು. ಅದೇನೆಂದರೆ ನಾಲ್ಕನೇ ಬಹುಮಾನ ಇಟ್ಟಿದ್ದು ನೋಡಿ ನೀನು ಹೋಗಿ ಭಾಷಣ ಮಾಡು ಎಂದು ಕಿವಿಯಲ್ಲಿ ಉಸುರಿದ .  ಅಲ್ಲ ನಿಜವಾಗಿಯೂ ನಾನು ಸ್ಪರ್ದಿನೆ ಅಲ್ಲ ಆದಾಗ್ಯೂ ಭಾಷಣದ ವಸ್ತು ವಿಷ್ಯ ಏನು ಅಂಥನೆ ಗೊತ್ತಿರಲಿಲ್ಲ,  ಅಂತಹುದರಲ್ಲಿ ನಾನು ಮೊದಲೇ ಕೈ ಕಾಲಲಿ ನಡುಕ ಶುರುವಾಗಿದೆ ಇವನು ಬೇರೆ ನನ್ನ ಹರಕೆಯ ಕುರಿ ಮಾಡುತ್ತಿದ್ದನ್ನಲ್ಲ ಅಂತ ಭಯಗೊಂಡೆ.  ಅವನು ಮತ್ತು  ಅಕ್ಕ ಇಬ್ಬರು ನನ್ನ ಇನ್ನಿಲ್ಲದ ಹಾಗೆ ಹುರುದುಂಬಿಸಿದರು .  ಇನ್ನ್ಯಾರು ಹೊಸ ಸ್ಪರ್ದಿ  ಬರುವುದಿಲ್ಲ ಹೇಳಿ  ನಿಂಗೆ ನಾಲ್ಕನೇ ಸ್ಥಾನ ಖಾತ್ರಿ ಎಂದು ಹೇಳಿದರು.  ಅರೆ ಇರುವ ನಾಲ್ಕು ಜನದಲ್ಲೂ ನಾನು ಸ್ಪರ್ದಿಸಿದರೆ ಕೊನೆ ಬಹುಮಾನ ನನಗೆ ಕೊಡದೆ ಇನ್ಯಾರಿಗೆ ಕೊಡುತ್ತಾರೆ. ಆದರೆ ಅವರು ಪದೇ ಪದೇ ಅವರು  ಕೊನೆಯ ಸ್ಥಾನ  ಅಂದಿದ್ದು ನನಗೆ ಬಹಳ ಇರಿಸುಮುರಿಸಾಗುತ್ತಿತ್ತು. 
                   ನಿಜಕ್ಕೂ ಹೇಳುತ್ತನೆ ಒಳಗಿನ ಆಸೆ ಏನು ಬೇಕಾದರೂ ಇದ್ರು ನಂಗೆ ಆತ್ಮವಿಶ್ವಾಸ ಮಾತ್ರ ಇರಲಿಲ್ಲ ಅಲ್ಲ ಅಲ್ಲ ಸರಿಯಾಗಿ ಶ್ವಾಸನೆ ಸರಿಯಾಗಿ ತೆಗೆದುಕೊಳ್ಳೋದಿಕ್ಕೆ ಆಗುತ್ತಿರಲಿಲ್ಲ. ಇತ್ತ ಸಂಘಟಕರು ಕೂಡ ನಾಲ್ಕನೇ ಸ್ಪರ್ದಿಯ ಭಾಷಣಕ್ಕೆ ಎದುರು ನೋಡುತ್ತಿದ್ದದ್ದು  ನನ್ನ ಕಣ್ಣಿಗೆ ಸ್ಪಷ್ಟವಾಗಿ ಗೊತ್ತಾಯ್ತು.   ಈಗ ನನ್ನ ಮುಂದಿನ ಕಾರ್ಯ ಸೂಚಿ ಬದಲಾಯಿತು.ಇಲ್ಲಿಂದ ಹೇಗೆ ತಪ್ಪಿಸಿಕೊಳ್ಳೋದು ಎಂದು .  ಇರುವುದು ಒಂದು ದ್ವಾರ ಅದು ಅತಿಥಿಗಳು ಕುಳಿತಲ್ಲೇ ಇದ್ದುದು ನಾನಾಗಿ ಸುಮ್ಮನೆ ಎದ್ದು  ಹೋಗಿ ಬಾಗಿಲಿನಿಂದ  ಹೊರಟರೆ ಎಲ್ಲಿ ಸಭಾ ಮರ್ಯಾದೆಗೆ ಭಂಗವಾಗುತ್ತದೆಯೋ ಎಂದು ಎಣಿಸಿದೆ. ಅಕಸ್ಮಾತ್ ನಾನು ಆ ಕೆಲಸ ಮಾಡಿದ್ದರು ಕೂಡ ಅಲ್ಲಿ ಅವ್ರು ನನ್ನನ್ನು ಹಿಡಿದು ವಾಪಸ್ ಕರೆತರುವುದು ಕಷ್ಟದ ಕೆಲಸವಾಗಿರಲಿಲ್ಲ. ಅಲ್ಲಿಂದ ತಪ್ಪಸಿಕೊಳ್ಳಲು  ಎಲ್ಲ ಮಾರ್ಗಗಳು ಮುಚ್ಚಿದ್ದರಿಂದ  ಈ ಇಬ್ಬರ ದೆಸೆಯಿಂದ ಅನ್ಯಾಯವಾಗಿ ಈ ಸುಳಿಯಲ್ಲಿ ಸಿಕ್ಕಿಬಿದ್ದೆ.

ಬಹುಶಃ ಇವತ್ತಿನ ಬುದ್ದಿ ಇದ್ದಿದ್ದರೆ ತಲೆ ಸುತ್ತು ಬಂದು ಬಿದ್ದಿದ್ದ ಹಾಗೆ ನಾಟಕ ಮಾಡುತ್ತಿದ್ದೆ. ಈ ಇಬ್ಬರು ಸೇರಿ ನನ್ನ ಹೆಗಲ ಮೇಲೆ ಹೊರಲಾರದ ಜವಾಬ್ದಾರಿ ಇಟ್ದರು.  ನನ್ನ ಮುಖ ಭಯದಿಂದ ಕೆಂಪಿಟ್ಟಿತ್ತು ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿತ್ತು.   ಈಗ ನಾನು ಕಣಕ್ಕೆ ಇಳಿಯ ಬೇಕೊ ಬೇಡವೋ ಎಂದು  ಈ ಕೂಡಲೇ ನಿರ್ದಾರ ತೆಗೆದು ಕೊಳ್ಳಬೇಕಿತ್ತು  ಮತ್ತು ಇಲ್ಲಿ ನಾನು ಸ್ಪರ್ದಿಯಾಗಿ ಬಂದಿಲ್ಲ ಎಂದು ಘೋಷಣೆ ಮಾಡಬೇಕಿತ್ತು. ಆದ್ರೆ ಅಂಥ ಯತ್ನ ಮಾಡಿದಲ್ಲಿ ಪುಕ್ಕಟೆ ಯಾಗಿ ಸಿಗುವ ಬಹುಮಾನ ಕೈ ತಪ್ಪಿ ಹೋಗುತ್ತಿತ್ತು.  ಮತ್ತು ಜೀವಮಾನದ ಮೊದಲ ಬಹುಮಾನ ಅದಾಗಿತ್ತು.

              ಈಕಡೆ  ನನ್ನ ಸ್ನೇಹಿತ ಮತ್ತು ಅಕ್ಕನ ಒತ್ತಾಯ, ಆ ಕಡೆ ಮೂರನೇ ಸ್ಪರ್ದಿಯ ಭಾಷಣ ಮುಗಿದು ಸಂಘಟಕರ ದೃಷ್ಟಿ ನನ್ನ ಮೇಲೆ ಬಿದ್ದಿದೆ ನನ್ನ ಹೃದಯ ಬಡಿತ ಜೋರಾಯಿತು ಇಷ್ಟೆಲ್ಲಾ ಗೊಂದಲಗಳ ಮದ್ಯದಲ್ಲಿ ಸಂಘಟಕರು ನನ್ನ ಕರೆದೆಬಿಟ್ಟರು .  ಆಗ ಏನು ಮಾಡಬೇಕಂದು ತೋಚದೆ ಅಕ್ಕ ನನ್ನ ಕೈಗೆ ಇಟ್ಟ ಭಾಷಣದ  ಪ್ರತಿಯೊಂದಿಗೆ ಗೆಳೆಯನ ಹಾರೈಕೆಯೊಂದಿಗೆ ಭಾರವಾದ ಹೆಜ್ಜೆಯೊಂದಿಗೆ ಅಂತೂ ನಾಲ್ಕನೇ ಸ್ಪರ್ದಿಯಾಗಿ ಕಣಕ್ಕೆ ಇಳಿದೆ. ಇದೊಂದು ಕ್ರಿಕೆಟ್ ಪಂದ್ಯ ಆಗಿದ್ದರೆ ಹೇಗೋ ಬ್ಯಾಟ್ ಬಿಸಿ ಬರಬಹುದಿತು. ಶೂನ್ಯ ಸುತ್ತಿದರು ಕೂಡ ಸಕಾರಣ ನೀಡಿ ತಪ್ಪಿಸಿಕೊಳ್ಳಬಹುದಿತ್ತು. 

 

             ಆದರೆ ಇದು ಜೀವನದ ಆಟದ ಭಾಗವಾಗಿತ್ತು. ಸಭೆ ನಿಶ್ಯಬ್ದ ವಾಯಿತು.  ಸಭೆಯ ಗಂಭೀರತೆ ಅರಿತು ನಿಧಾನಕ್ಕೇ ಒಂದೊಂದೆ ಹೆಜ್ಜೆಯನ್ನು ಕಿತ್ತಿಡುತ್ತಾ ಭಾಷಣಕ್ಕೆ ನಿಂತೆ , ಅಕ್ಕ ಕೊಟ್ಟು ಕಳಿಸಿದ ಭಾಷಣದ ಪ್ರತಿ ಹಿಡಿದು ಓದಲು ಪ್ರಾರಂಭಿಸಿದೆ. ಒಂದು ಕ್ಷಣ ಇಡೀ ಸಭೆ ಅವಕ್ಕಾಗಿರಬೇಕು. ಆದರೆ ನನ್ನ ಗಮನವೆಲ್ಲ ಅಕ್ಕ ಮತ್ತು ನನ್ನ ಸ್ನೇಹಿತನ ಮೇಲೆ ಇತ್ತು  ಅವರ ಪ್ರತಿಕ್ರಿಯೆ ಏನೆಂದು.   ಭಾಷಣ ಮಾಡಲು ಎಬ್ಬಿಸಿದ್ದೆ ಅವರಿಗೆ ಒಂದು ಸಾಹಸವಾಗಿತ್ತು ಅದೇ ಅವ್ರಿಗೆ ಒಲಿದ ಪ್ರಶಸ್ತಿ ಎಂದು ಇಬ್ಬರೂ ಬಿಗುತ್ತಿದ್ದಾರೆ

. ಒಂದೇ ಉಸಿರಿನಲ್ಲಿ ಭಾಷಣದ ಪ್ರತಿಯನ್ನು ಓದಿ ನನ್ನ ಸ್ಥಳಕ್ಕೆ ಬಂದು ಕುಳಿತು ಬಿಟ್ಟೆ. ಕುಳಿತಲ್ಲಿಯೇ ಬೆನ್ನ ಹಿಂದೆ ನನ್ನ  ಸ್ನೇಹಿತ ಶಭಾಷ್ ಎಂದು ಬೆನ್ನು ತಟ್ಟಿದ.   ಇಂತಹ ಪರಿಸ್ಥಿತಿ ಅವರು ನನಗೆ ತಂದಿಟ್ಟಿದ್ದಕ್ಕೆ ಮತ್ತು ತಮಾಷೆ ನೋಡಿದ್ದಕ್ಕೆ ನಂಗೆ ಅವರಿಬ್ಬರ ಮೇಲೆ ಕೋಪ ಹೋಗಿರಲಿಲ್ಲ.   ಆದರೆ ಈ ಘಟನೆ ಈ ಲೇಖನಕ್ಕೆ ವಸ್ತುವಿಷಯವಾಗಿದ್ದಕ್ಕೆ ಖುಶಿ ಇದೆ. ಮನಸ್ಸಿನಲ್ಲಿ ಇನ್ಯಾವ ಹೊಸ ಸ್ಪರ್ದಿ ಬರದೆ ಆ ಕೊನೆಯ ಬಹುಮಾನಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದಕ್ಕೆ ಹೃದಯ  ಮೆಲ್ಲನೆ ಥಾಂಕ್ಸ್ ಹೇಳುತ್ತಿತ್ತು. 

 

              ಅತಿಥಿಗಳ ಭಾಷಣ ಶುರುವಾಯಿತು ಭಾಷಣದ ಮದ್ಯದಲ್ಲಿ ಅತಿಥಿಯೋರ್ವರು ಒಬ್ಬ ವಿದ್ಯಾರ್ಥಿ  ಸ್ಪರ್ಧೆಯಲ್ಲಿ ಭಾಷಣದ ಪ್ರತಿ ಓದಿದ್ದಕ್ಕೆ ಬೇಸರಿಸಿಕೊಂಡ್ರು ಅದು ಸಕಾರಣವಾಗಿತ್ತು .  ಅವ್ರಿಗೆ ನಿಜವಾಗಿಯೂ ನನ್ನ ಹೊಯ್ದಾಟ ತಳಮಳ ಗೊತ್ತಿದ್ದರೆ ಈ ಪ್ರತಿಕ್ರಿಯೆ ಬರದೆ ಬಹುಶ ನನ್ನ ಸಾಹಸಕ್ಕೆ ಭೇಷ್ ಎನ್ನುತ್ತಿದ್ದರೋ ಏನೋ .  ಕೊನೆಗೆ ಫಲಿತಾಂಶ ಪ್ರಕಟವಾಯಿತು.   ಮೊದಲ ಸ್ಥಾನ ನನ್ನ ಸ್ನೇಹಿತನಿಗೆ ಎರಡನೇ ಸ್ಥಾನ ಅಕ್ಕನಿಗೆ , ತೃತೀಯ ಸ್ಥಾನ ಬೇರೆ ಶಾಲೆಯ ವಿದ್ಯಾರ್ಥಿ ಗೆ ಹಾಗೂ ಸಮಾಧಾನಕರ ಬಹುಮಾನ ನನಗೆ ದೊರಕಿತು.ಅತ್ಯಂತ ಸಮಾಧಾನದಲ್ಲಿ ಹೋಗಿ  ಬಹುಮಾನ ಸ್ವೀಕರಿಸಿದೆ.   ಕೈಯ್ಯಲ್ಲಿ ಬಹುಮಾನ ಹಿಡಿದ ಮೇಲೆ  ನನ್ನ ಮೇಲೆ ವಿಶ್ವಾಸ ನೂರ್ಮಡಿ ಆಯಿತು.  ಮನೆಗೆ ಬಂದ ಮೇಲೆ ನನ್ನ ಕೈ ಯಲ್ಲಿ ಬಹುಮಾನ ಇದ್ದಿದ್ದು ನೋಡಿ  ಮನೆಯವರೆಲ್ಲ ಆಶ್ಚರ್ಯ ಗೊಂಡರು. ನನ್ನ ಈ ಅನಿರೀಕ್ಷಿತ ಸಾಧನೆಗೆ ಭೇಷ್  ಅಂದರು ಇಷ್ಟಾದ ನಂತರ ಕೊನೆಗೆ ನನಗೆ ಕಾಡಿದ ಪ್ರಶ್ನೆ ಎಂದರೆ ನಿಜಕ್ಕೂ ಆ ಬಹುಮಾನಕ್ಕೆ ನಾನು ಅರ್ಹನೆ  ಎಂದು.